ಕಾಸು ಕುಡಿಕೆ: ಬುಲ್ಸ್, ಬೇರ್ಸ್ ಮತ್ತು ವಲ್ಚರ್ಸ್…

ಕಾಸು ಕುಡಿಕೆ- 4

ಜಯದೇವ ಪ್ರಸಾದ ಮೊಳೆಯಾರ


Past performance is not a guarantee of future returns. . . . .Statutory warning!
ಹಿಂದಿನ ಸಾಧನೆ ಭವಿಷ್ಯದ ಪ್ರತಿಫಲದ ಗ್ಯಾರಂಟಿ ಅಲ್ಲ. . . . . . . . . . . . .  ಶಾಸನ ವಿಧಿಸಿದ ಎಚ್ಚರಿಕೆ!

ಶೇರು ಮಾರುಕಟ್ಟೆ ಅಂದರೆ,  ಬುಲ್ಸ್ ಮತ್ತು ಬೇರ್ಸ್ ! ‘ಗೂಳಿಗಳು’ ಮತ್ತು ‘ಕರಡಿಗಳು’. ಇಲ್ಲಿ ಯಾವುದೂ ನಿಶ್ಚಿತವಲ್ಲ. ಇಲ್ಲಿ ಗೂಳಿಗಳ ಹಾಗೂ ಕರಡಿಗಳ ಕಾಳಗ. ಮಧ್ಯದಲ್ಲಿ ನಾವುಗಳು ಹಣಹೂಡಿ ಅದೃಷ್ಟ ಪರೀಕ್ಷೆಮಾಡುತ್ತೇವೆ. ಒಮ್ಮೊಮ್ಮೆ ಗೂಳಿಗಳದ್ದು ಮೇಲುಗೈ ಆದರೆ ಇನ್ನು ಒಮ್ಮೊಮ್ಮೆ ಕರಡಿಗಳದ್ದು. ಒಂದು ರೀತಿಯ ಹಾವು-ಏಣಿ ಆಟದಂತೆ ಶೇರುಗಳು ಮೇಲೆ-ಕೆಳಗೆ ಹೋಗುತ್ತವೆ.
ಅಂದ ಹಾಗೆ, ಏನಿದು ಬುಲ್ಸ್ ಅಂಡ್ ಬೇರ್ಸ್? ಗೂಳಿಗಳು ಮತ್ತು ಕರಡಿಗಳು ಫೈಟ್  ಮಾಡುವುದನ್ನು ಯಾವತ್ತಾದರೂ ನೋಡಿದ್ದೀರಾ? ಇಲ್ಲವೇ? ಪರವಾ ಇಲ್ಲ ಬಿಡಿ. ನಾನೂ ನೋಡಿಲ್ಲ. ಆದರೆ, ಬಲ್ಲಿದರು ಹೇಳುತ್ತಾರೆ, ಗೂಳಿಗಳು ತಮ್ಮ ತಲೆಯನ್ನು ಕೆಳಗಿಂದ ಮೇಲಕ್ಕೆ ಬೀಸುತ್ತಾ ಜಗಳಾಡುತ್ತಾದರೆ ಕರಡಿಗಳು ಮೇಲಿನಿಂದ ಕೆಳಕ್ಕೆ ಬೀಳುತ್ತಾ ಜಗಳ ಕುಟ್ಟುತ್ತವೆ. ಇದು ಅವುಗಳು ಜಗಳಾಡುವ ವೈಖರಿ ಅಥವ ಫೈಟಿಂಗ್  ಸ್ಟೈಲ್.  ಥೇಟ್ ಅದೇ ಥರ ಶೇರು ಮಾರುಕಟ್ಟೆಯಲ್ಲಿ ಕೆಲವರು ಶೇರು ಬೆಲೆಗಳನ್ನು ಅಗ್ರೆಸ್ಸಿವ್ ಆಗಿ ಕೆಳಗಿಂದ ಮೇಲಕ್ಕೆತ್ತುತ್ತಾ  ಹೋಗುತ್ತಾರೆ. ಅವರಿಗೆ ಬುಲ್ಸ್ ಅಥವ ಗೂಳಿಗಳೆಂದು ಕರೆಯುತ್ತಾರೆ. ಇನ್ನು ಕೆಲವರು ಶೇರು ಬೆಲೆಗಳನ್ನು ಕೆಳಕ್ಕೆ ದಬ್ಬುತ್ತಾ ಹೋಗುತ್ತಾರೆ. ಅವರುಗಳು ಬೇರ್ಸ್ ಅಥವ ಕರಡಿಗಳು.  ಮಾರುಕಟ್ಟೆ ಬುಲ್ ಗಳ ಹಿಡಿತದಲ್ಲಿ ಮೇಲೇರುತ್ತಾ ಹೋಗುವಾಗ ಬುಲ್ಲಿಶ್ ಮಾರ್ಕೆಟ್ ಎಂದೂ ಬೇರ್ಸ್ ಗಳ ಹಿಡಿತದಲ್ಲಿ ಕುಸಿಯುತ್ತಾ ಹೋಗುವಾಗ ಬೇರಿಶ್ ಮಾರ್ಕೆಟ್ ಎಂದೂ ಕರೆಯುತ್ತಾರೆ.
ಇವೆರಡರ ದೈನಂದಿನ ಕಾಳಗದ ಫಲ ಶೇರು ಬೆಲೆಯಲ್ಲಿ ಪ್ರತಿಫಲಿಸುತ್ತದೆ. ಬೆಲೆಗಳು ಏರಿಳಿಯುತ್ತದೆ. ಬ್ಯಾಂಕು ಬಡ್ಡಿದರದಲ್ಲಿದ್ದಂತೆ ಇಲ್ಲಿ ಪ್ರತಿಫಲ ಗ್ಯಾರಂಟಿ ಇಲ್ಲ. ಲಾಭವೂ ಆಗಬಹುದು, ನಷ್ಟವೂ ಆಗಬಹುದು. ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಎಂದರೆ, ಜಾಸ್ತಿ ರಿಸ್ಕ್, ಅನಿಶ್ಚಿತ ರಿಟರ್ನ್!
ಅದಿರಲಿ. ಈ ವಲ್ಚರ್ಸ್ ಎಲ್ಲಿಂದ ಬಂದವು? ಅವುಗಳಿಗೂ ಮಾರುಕಟ್ಟೆಗೂ ಏನು ಸಂಬಂಧ? ಅದು ತಿಳಿಯಬೆಕಾದರೆ ಮೊದಲು ಈ ಕತೆ ಕೇಳಿ. . . . . . .
ಅಕ್ಟೋಬರ್ ತಿಂಗಳು. ದೀಪಾವಳಿ ಸಮಯ. ನಿಮಗೊಂದು sms ಬರುತ್ತದೆ, ‘ಆಪ್ತಮಿತ್ರ ಫೈನಾನ್ಶಿಯಲ್  ಸರ್ವಿಸಸ್ ‘ ಎಂಬ ಸಂಸ್ಥೆಯಿಂದ, ‘ಇನ್ಫೋಸಿಸ್ ಮೇಲೆ ಹೋಗುತ್ತದೆ, buy ಮಾಡಿ’ ಅಂತ. ‘ಹಬ್ಬದ ಸಮಯದಲ್ಲಿ ಪ್ರತೀ ವರ್ಷ ಮಾರ್ಕೆಟ್ ಮೇಲೆಯೇ ಹೋಗುತ್ತದೆ. ಅವು ಯಾರಿಗೆ ತಾನೆ ಗೊತ್ತಿಲ್ಲ?’ ಎಂದು ನೀವು ಅದನ್ನು ಅಸಡ್ಡೆ ಮಾಡುತ್ತೀರಿ. ಮುಂದಿನ ವಾರ ಪುನಃ ಆಪ್ತ ಮಿತ್ರನ sms. ‘ಕಳೆದ ಬಾರಿ ಹೇಳಿದಂತೆ ಇನ್ಫೋಸಿಸ್ ಮೇಲೆ ಹೋಗಿದೆ. ಈ ಬಾರಿ ಬಜಾಜ್ ಆಟೋ ಖರೀದಿಸಿ, ಮೇಲೆ ಹೋಗುತ್ತೆ’ ನಿಮಗೆ ಸ್ವಲ್ಪ ಕುತೂಹಲ ಹುಟ್ಟುತ್ತದೆ. ಆದ್ರೂ ಬಜಾಜ್ ಆಟೋ ಕೊಳ್ಳಲು ಹೋಗುವುದಿಲ್ಲ. ಗುರ್ತ-ಅರ್ಥವಿಲ್ಲದ ಜನರ ಸಲಹೆಯನ್ನು ಹೇಗೆ ನಂಬುವುದು? ಮಾರ್ಕೆಟ್ ಕೆಳಗೆ ಹೋದ್ರೆ ಅವರೇನು ನಮ್ಮ ನಷ್ಟ ಭರಿಸುತ್ತಾರೆಯೇ?’
ಮುಂದಿನ ವಾರ ಪುನಃ ಆಪ್ತಮಿತ್ರನ sms. ‘ಬಜಾಜ್ ಆಟೊ ಮೇಲೆ ಹೋಯಿತು. ಈ ಬಾರಿ ಕೊಳ್ಳಿರಿ, ‘ಹಿಂದುಸ್ತಾನ್ ಯುನಿಲೀವರ್. 100% accuracy.’ ನಿಮ್ಮ ಆಸಕ್ತಿ ಗರಿಗೆದರುತ್ತದೆ. ಈವಾಗ ಆಪ್ತ ಮಿತ್ರ ಮತ್ತು ಆತನ ಕಿವಿಮಾತಿಗೆ ಕಿವಿಗೊಡಲು ಆರಂಭಿಸುತ್ತೀರಿ.
ಹೀಗೇ ನಾಲ್ಕೈದು ವಾರಗಳಲ್ಲಿ ನಿಮಗೆ ಆಪ್ತ ಮಿತ್ರನ ಮೇಲೆ ಪ್ರಾಣಕ್ಕಿಂತ ಜಾಸ್ತಿ ಪ್ರೀತಿ ಬೆಳೆಯುತ್ತದೆ. ಆತ ಹೇಳಿದ್ದು ಪ್ರತೀ ಬಾರಿಯೂ ಸರಿಯಾಗುತ್ತದೆ. ಒಮ್ಮೆಯೂ ತಪ್ಪಾಗಲಿಲ್ಲ. ಆಹಾ! ಇದು ಪೂರ್ವ ಜನ್ಮದ ಪುಣ್ಯವೇ ಸರಿ. ಆಪ್ತಮಿತ್ರನಂತಹ expert ಸಿಕ್ಕಿದ್ದು. ಆತನ ಜಾಹೀರಾತಿನ ಪ್ರಕಾರ 5000 ರೂ ಚಂದಾ ಕಟ್ಟಿ Unlimited sms ಸಲಹೆಗಳ ಪ್ಲಾನ್ಗೆ ಸದಸ್ಯರಾಗುತ್ತೀರಿ. ಅಷ್ಟೇ ಅಲ್ಲ. ಶೇರು ಹುಚ್ಚಿರುವ ಬಂಧುಗಳೆಲ್ಲರನ್ನೂ  ‘ನಾನು ಗ್ಯಾರಂಟಿ’ ಅಂತ ಎದೆತಟ್ಟಿ ಹೇಳಿ ಸದಸ್ಯರನ್ನಾಗಲು  ಒತ್ತಾಯಿಸುತ್ತೀರಿ. ಸ್ನೇಹಿತರ ಹೋಮ್ ಮಿನಿಸ್ಟರ್ಗಳನ್ನೂ ನೀವೇ ಕನ್ವಿನ್ಸ್ ಮಾಡಿ ಅವರಿಂದಲೂ 5000 ರೂಪಾಯಿ ಚಂದಾ ಕಟ್ಟಿಸಿಯೇ ಬಿಡುತ್ತೀರಿ.
ಒಂದೆರಡು ವಾರಗಳಲ್ಲಿ ಆಪ್ತಮಿತ್ರನ ಸಲಹೆಗಳು ತಮ್ಮ ಜಾದೂವನ್ನು ಕಳೆದುಕೊಳ್ಳಲು ಆರಂಭಿಸುತ್ತವೆ. ಯಾಕೋ ಏನೋ ಆತನ sms ಸಲಹೆಯ ಮೇರೆಗೆ ಬಾಚಿ ಬಾಚಿ ಹಾಕಿದ ದುಡ್ಡೆಲ್ಲ ಗೋವಿಂದ! ಕೆಲವು ಲಕ್ಷಗಳ ನಷ್ಟ!! ಏನಾಯಿತೆಂದು ಗೊತ್ತಾಗದೆ ಮಂಡೆಬಿಸಿಯಾಗಿ, ‘ಮೈಹುಷಾರಿಲ್ಲ’ ಅಂತ ಸಿಕ್ ಲೀವ್ ಹಾಕುತ್ತೀರಿ. ಒಂದು ವೇಳೆ ಎಲ್ಲಾದರು ‘ಬಾಯಿ ಮುಚ್ಚು, ನಾನು ದುಡ್ಡು ಮಾಡಿ ತೋರಿಸುತ್ತೇನೆ’ ಎಂದು ಹೆಂಡತಿಯನ್ನು ದಬಾಯಿಸಿ ಹಾರಾಡಿದ್ದಿದ್ದರೆ, ಅದರ ‘equal and opposite reaction’ ಅನ್ನು ನೆನೆಸಿಕೊಂಡೇ ಕಂಬಳಿಯೊಳಗಿದ್ದೂ ನಡುಗುವವರಾಗುತ್ತೀರಿ. ನಿಮ್ಮ ಶಿಫಾರಸ್ಗೊಳಗಾಗಿ ಸದಸ್ಯರಾಗಿ ಒಂದೆರಡು ಲಕ್ಷ ಕೈತೊಳೆದುಕೊಂಡ ನಿಮ್ಮ ಮಾಜಿ-ಸ್ನೇಹಿತರು ನಿಮ್ಮನ್ನು ಹುಡುಕುತ್ತಿರುವಷ್ಟರಲ್ಲಿ ನೀವು ‘ಏನೋ ಎದೆ ನೋವು’ ಎಂದು  ಆಸ್ಪತ್ರೆಗಳನ್ನೂ, ಲ್ಯಾಬ್ ಗಳನ್ನೂ ಎಡತಾಕುತ್ತಿರುತ್ತೀರಿ.
ಈ ಕತೆಯಲ್ಲಿ ನಡೆದದ್ದಾದರೂ ಏನು?
ನಡೆದದ್ದು ಇದು: ‘ಆಪ್ತಮಿತ್ರ’ ಎಂಬ ಹೆಸರಿಟ್ಟುಕೊಂಡ ಒಬ್ಬ ಮಹಾಧೂರ್ತ ಸುಲಭ ಮಾರ್ಗದಲ್ಲಿ ದುಡ್ಡು ಮಾಡುವ ಒಂದು ಭಾರೀ ಯೋಜನೆಗೆ ಸ್ಕೆಚ್ ಹಾಕುತ್ತಾನೆ. ಮೊತ್ತ ಮೊದಲು, ಶೇರು ಹುಚ್ಚು ಸಕತ್ತಾಗಿಯೇ ಹಿಡಿದಿರುವ  ಒಂದು 10,000 ಮಂದಿಯ ಮೊಬೈಲ್ ನಂಬರ್ ಗಳನ್ನು ಸಂಗ್ರಹಿಸುತ್ತಾನೆ. ಅದೇನೂ ಕಷ್ಟಕರವಲ್ಲ. ಅದರಲ್ಲಿ 5,000 ಮಂದಿಗೆ, ಇನ್ಫೋಸಿಸ್ ಮೇಲೆ ಹೋಗುತ್ತದೆ ಎಂದೂ, ಇನ್ನೈದು ಸಾವಿರ ಮಂದಿಗೆ ಇನ್ಫೋಸಿಸ್ ಕೆಳಗೆ ಹೋಗುತ್ತದೆ ಎಂದೂ sms ಮಾಡುತ್ತಾನೆ. ಆ ವಾರ ಇನ್ಫೋಸಿಸ್ ಮೇಲೆಯೋ, ಕೆಳಗೋ ಎಲ್ಲಿಯೋ ಒಂದು ಕಡೆ ಖಂಡಿತವಾಗಿಯೂ ಹೋಗುತ್ತೆ. ಎಲ್ಲಿಗೆ ಎಂದು ಖಚಿತವಾಗಿ ನಾರಾಯಣ ಮೂರ್ತಿಯವರಿಗೇ ಗೊತ್ತಿರುವುದಿಲ್ಲ ಎಂಬುದು ಬೇರೆ ವಿಷ್ಯ, ಬಿಡಿ. ಆಮೇಲೆ, ಯಾವ ಗುಂಪಿಗೆ ಕಳಿಸಿದ sms ಸತ್ಯವಾಗಿದೆ ಎಂದು ನೋಡಿಕೊಂಡು, ಆ ಗುಂಪಿನ 2,500 ಜನರಿಗೆ ಬಜಾಜ್ ಆಟೋ ಮೇಲೆ ಹೋಗುತ್ತದೆ ಎಂದೂ ಇನ್ನುಳಿದ 2500 ಜನರಿಗೆ ಬಜಾಜ್ ಆಟೋ ಕೆಳಗೆ ಹೋಗುತ್ತದೆ ಎಂದೂ ಮೆಸೇಜು ಮಾಡುತ್ತಾನೆ. ಇನ್ನು ಒಂದು ವಾರ ಕಳೆದ ಬಳಿಕ, ಸತ್ಯವಾದಂತಹ ಮೆಸೇಜು ಹೋದ 2500 ಜನರಲ್ಲಿ 1250 ಮಂದಿಗೆ ಹಿಂದುಸ್ತಾನ್ ಯುನಿಲೀವರ್ ಮೇಲೆ ಹೋಗುತ್ತೆ ಅಂತಲೂ, ಇನ್ನುಳಿದ 1250 ಮಂದಿಗೆ. . . . . . . . . . . .
ಗೊತ್ತಾಯ್ತಲ್ಲ? ಇನ್ನೂ ಹೆಚ್ಚು ಹೇಳುವ ಅಗತ್ಯವೇ ಇಲ್ಲ!
ಇದು ‘ನಸ್ಸಿಮ್ ನಿಕಲಾಸ್ ತಲೆಬ್’ ಬರೆದ‘Fooled by Randomness’ ಪುಸ್ತಕದಲ್ಲಿ ಬರುವ ಒಂದು ಉದಾಹರಣೆ. ತಲೆಬ್ ಒಬ್ಬ â Hedge Fund (ಹೆಜ್ ಫಂಡ್) ಮ್ಯಾನೇಜರ್ ಆಗಿದ್ದು ಅಮೇರಿಕದ ವಾಲ್ ಸ್ಟ್ರೀಟ್ ಶೇರು ಬಜಾರಿನ ಒಳಹೊರಗನ್ನು ಚೆನ್ನಾಗಿ ಬಲ್ಲವನಾಗಿದ್ದ. ಈವರೆಗೆ 3 ಪುಸ್ತಕಗಳನ್ನು ಬರೆದ ತಲೆಬ್ನ ಸಿದ್ಧಾಂತ ಏನೆಂದರೆ ಜೀವನದಲ್ಲಿ ಯಾವುದಕ್ಕೂ ಒಂದು ಸಿದ್ಧ ವೈಖರಿ ಅಥವ pattern ಎಂಬುದು ಇರುವುದಿಲ್ಲ. ಎಲ್ಲವೂ ತನ್ನಷ್ಟಕ್ಕೇ ಆಕಸ್ಮಿಕವಾಗಿ ಆಗುತ್ತಿರುತ್ತದೆ. ನೀವು ಸಾವಿರಾರು ಬಿಳಿಹಂಸಗಳನ್ನೇ ನೋಡಿದ್ದರೂ ಮುಂದೆ ನೀವು ನೋಡಲಿರುವ ಹಂಸ ಬಿಳಿಯೇ ಆಗಿರಬೇಕೆಂದೇನೂ ಇಲ್ಲ. ಅದು ಕರಿಯೂ ಆಗಿರಬಹುದು. 17 ನೇ ಶತಮಾನದಲ್ಲಿ ಬಿಳಿಹಂಸ ಮಾತ್ರ ನೋಡಿ ಗೊತ್ತಿದ್ದ ಯುರೋಪಿಯನ್ನರು ಆಸ್ಟ್ರೇಲಿಯ ಖಂಡಕ್ಕೆ ಬಂದಾಗ ಕರಿಹಂಸಗಳನ್ನು ಕಂಡು ದಂಗಾಗಿದ್ದರು. ಅದರಿಂದಾಗಿಯೇ ಬ್ಲಾಕ್ ಸ್ವಾನ್ ಥಿಯರಿ (ಕರಿಹಂಸ ಸಿದ್ಧಾಂತ) ಹುಟ್ಟಿಕೊಂಡಿತು. ಅಂದರೆ, ಲಾಗಾಯ್ತಿನಿಂದ ಕಂಡುಬರುವಂತಹ ಒಂದು ಕ್ರಮಬದ್ಧವಾದ  ಕಾರ್ಯವೈಖರಿ, ಇನ್ನು ಮುಂದೆಯೂ ಹಾಗೆಯೇ ನಡೆದುಕೊಂಡು ಹೋಗುತ್ತದೆ ಎಂದು ಹೇಳುವಂತಿಲ್ಲ.
ಒಂದು ಬದಿಯಲ್ಲಿ ಈ ರೀತಿ ಯಾವುದೇ pattern ಇಲ್ಲದೆ, ಇದ್ದಕ್ಕಿದ್ದಂತೆ, ರಾಂಡಮ್ ಆಗಿ ನಡೆಯುವ ವಿಶ್ವ ಇದ್ದರೆ, ಇನ್ನೊಂದೆಡೆ ಎಲ್ಲದರಲ್ಲೂ ಒಂದು pattern ಅನ್ನು ಕಂಡುಕೊಂಡು ಆ ಮೂಲಕ ಮುಂದೆ ಏನಾಗುತ್ತದೆ ಎಂದು ಲೆಕ್ಕ ಹಾಕಲು ಪ್ರಯತ್ನಿಸುವ ಮಾನವನಿದ್ದಾನೆ. ಅಲ್ಲದೆ, ಇವೆರಡರ ನಡುವೆ ಆಪ್ತಮಿತ್ರನಂತಹ ಸಮಯಸಾಧಕ ವಲ್ಚರ್ಸ್ ಇದ್ದಾರೆ. ನಮ್ಮ ಶೇರು ಮಾರುಕಟ್ಟೆ ಎಂಬ Casino ಇದಕ್ಕೆ ಹೊರತೇನೂ ಅಲ್ಲ!
ಅದಕ್ಕೇ ನಾನು ಹೇಳಿದ್ದು – ‘ಬುಲ್ಸ್ ಬೇರ್ಸ್ ಮತ್ತು ವಲ್ಚರ್ಸ್’ ಎಂದು.
Beware, Amen!

‍ಲೇಖಕರು avadhi

March 21, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತೆರಿಗೆ ಹೆಂಗೆಲ್ಲಾ ಕದೀತಾರೆ ಗೊತ್ತಾ?

ದುಡ್ಡು ಕೊಟ್ಟ ಮೇಲೆ ’ಬಿಲ್ಲು ಕೇಳಿ ಸ್ವಾಮಿ ’ ಎಂದು ನಾರಾಯಣ ಸ್ವಾಮಿ ಅವರು ಬರೆದ ಲೇಖನದ ಮುಂದಿನ ಭಾಗ ಎನ್ ನಾರಾಯಣಸ್ವಾಮಿ ತೆರಿಗೆ ಕದಿಯುವ...

ಬಿಲ್ಲು ಕೇಳಿ ಸ್ವಾಮಿ

ತೆರಿಗೆ ನಿಮಗೆ ಅರಿವಿಲ್ಲದಂತೆ ಪಾವತಿಸಿರುವಿರಿ ಅರಿವುಂಟೇ ಎನ್  ನಾರಾಯಣಸ್ವಾಮಿ ಹೀಗೆ ತೆರಿಗೆ ಎಂದರೆ ಬೆಚ್ಚಿ ಬೀಳುತ್ತೀರಲ್ಲವೇ?ಏಕೆಂದರೆ...

ಕಾಸು – ಕುಡಿಕೆ ಈಗ ಪುಸ್ತಕವಾಗಿ

ಅವಧಿಯಲ್ಲಿ ಅಂಕಣವಾಗಿ ಬರುತ್ತಿದ್ದ ಕಾಸು ಕುಡಿಕೆ ಈಗ ಪುಸ್ತಕವಾಗಿ! ಮೊಳೆಯಾರರಿಗೆ ಅವಧಿಯ ಅಭಿನಂದನೆಗಳು.. ಬರುತ್ತಿದೆ ಕಾಸು ಕುಡಿಕೆ! -...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This