ಕಾಸು ಕುಡಿಕೆ: ಶ್ರೀಮಾನ್ ಗುರುಗುಂಟಿರಾಯರೆ…

ಕಾಸು ಕುಡಿಕೆ -18 -ಜಯದೇವ ಪ್ರಸಾದ ಮೊಳೆಯಾರ ‘ಮೂಢನಂಬಿಕೆಯಾಗದಿರಲಿ ಮ್ಯೂಚುವಲ್ ಫಂಡ್’

April: This is one of the peculiarly dangerous months to speculate in stocks. The others are July, January, September, October, May, March, June, December, August, November and February. ~ Mark Twain ಎಪ್ರಿಲ್: ಇದು ಶೇರುಗಳ ಬಗ್ಗೆ ಊಹಾಪೋಹಕ್ಕೆ ಇಳಿಯಲು ಅತಿ ಅಪಾಯಕಾರಿ ತಿಂಗಳುಗಳಲ್ಲಿ ಒಂದು. ಉಳಿದವುಗಳು ಯಾವುದೆಂದರೆ – ಜುಲೈ, ಜನವರಿ, ಸೆಪ್ಟೆಂಬರ್, ಅಕ್ಟೋಬರ್, ಮೇ, ಮಾರ್ಚ್, ಜೂನ್, ಡಿಸೆಂಬರ್, ಆಗಸ್ಟ್, ನವೆಂಬರ್ ಮತ್ತು  feಬ್ರುವರಿ ~ ಮಾರ್ಕ್ ಟ್ವೈನ್.
ಈ ಬಾರಿ ಗುರುಗುಂಟಿರಾಯರು ನನ್ನ ಮೇಲೆ ಬ್ರಹ್ಮಾಸ್ತ್ರವನ್ನೇ ಪ್ರಯೋಗ ಮಾಡಿದ್ದಾರೆ. “ಬಾಂಡ್ ಫಂಡ್ ಇಲ್ದಿದ್ರೆ ಹಾಳಾಗಿ ಹೋಗಲಿ. ಗೂಳಿತ್ತಾಯರ ಹಾಗೂ ಭಲ್ಲೂಕರಾಯರ ಹಾವಳಿಯಿಂದ ತಪ್ಪಿಸಿಕೊಂಡು ಶೇರುಮಾರುಕಟ್ಟೆಯಲ್ಲಿ ಸುಲಭವಾಗಿ, ಸೇಫ್ ಆಗಿ ದುಡ್ಡು ಮಾಡಲು ಮ್ಯೂಚುವಲ್ ಫಂಡ್‌ಗಳಲ್ಲಿ ದುಡ್ಡು ಹೂಡಬಹುದಲ್ಲ? ಅದರ ಬಗ್ಗೆ ನೀವು ಯಾಕೆ ಬರೆಯುವುದೇ ಇಲ್ಲ? ಮಾರುಕಟ್ಟೆಯಲ್ಲಿ ನಡೆಯುವ ವಿದ್ಯಮಾನಗಳನ್ನು ಎಳೆ ಎಳೆಯಾಗಿ ವಿವರಿಸಿ ನಮ್ಮಂತಹ ವೀಕು ಹಾರ್ಟಿಗರನ್ನು ಹೆದರಿಸುವ ಬದಲು ಸುಮ್ನೆ ಯಾವುದಾದರು ಮ್ಯೂಚುವಲ್ ಫಂಡಲ್ಲಿ ಹಣ ಹಾಕ್ಲಿಕ್ಕೆ ಹೇಳ್ಬಾರ್ದಾ? ಮಾರುಕಟ್ಟೆಯ ಎಲ್ಲಾ ಗಂಡಾಂತರಗಳಿಂದಲೂ ಅದರಲ್ಲಿ ಪರಿಣತಿ ಹೊಂದಿದ ಪ್ರೊಫೆಶನಲ್ಸ್ ನಮ್ಮನ್ನು ಪಾರುಮಾಡುವುದಿಲ್ಲವೇ? ಸಿಂಪಲ್. ಈ ಬುಲ್ಲು, ಬೇರು, ನಾರು, ಸಾರು ಅಂತೆಲ್ಲ ಹರಿಕತೆ ಮಾಡುವ ಅವಶ್ಯಕತೆ ಎನಿದೆ?” ಅಂತ ನೇರವಾಗಿ ಮಿಡಲ್ ಸ್ಟಂಪಿಗೇ ಬಾಲ್ ಎಸೆದರು, ಗುರುಗುಂಟಿರಾಯರು. ಈ ಗುರುಗುಂಟಿರಾಯರು ಅವರ ಸೋದರಳಿಯನಿಗೆ ಕೊಟ್ಟಿದ್ದ ಕರ ವಿನಾಯಿತಿಯ ಉಪದೇಶದ ಬಗ್ಗೆ ಎಪಿಸೋಡ್ ೧೨ ರಲ್ಲಿ ಬರೆದದ್ದನ್ನು ಇನ್ನೂ ಮರೆತಿಲ್ಲ ಎಂದು ಕಾಣುತ್ತದೆ. ಸಮಯ ಸಿಕ್ಕಾಗಲೆಲ್ಲಾ ನನ್ನ ಮೇಲೆ ಗುರುಗುಟ್ಟುತ್ತಲೇ ಇರುತ್ತಾರೆ. ಇತ್ತೀಚೆಗಂತೂ ಇವರನ್ನು ಮ್ಯಾನೇಜ್ ಮಾಡುವುದೇ ನನಗೆ ಒಂದು ದೊಡ್ಡ ಸಮಸ್ಯೆಯಾಗಿದೆ. * * * * ಶೇರುಗಳ ಗೂಳಿಯಾಟ ಎಂಥಹವರಿಗೂ ನಶೆಯೇರಿಸುವಂಥದ್ದು. ದಿನದಿಂದ ದಿನಕ್ಕೆ ಶೇರು ಬೆಲೆ ಏರುತ್ತಲೇ ಹೋಗುವಾಗ ಕೈಯಲ್ಲಿದ್ದ ದುಡ್ಡನ್ನು ಹೂಡಿ ‘ಥಟ್’ ಅಂತ ಸ್ವಲ್ಪ ಹಣ ಮಾಡಿ ಹೊರಬರುತ್ತೇನೆ ಎಂದು ಆರಂಭವಾಗುವ ವ್ಯಾಮೋಹ ಸುಲಭದಲ್ಲಿ ಬಿಡುವ ವ್ಯಾಧಿಯಲ್ಲ. ಹೂಡಿದ ಬಳಿಕ ಮಾರ್ಕೆಟ್ ‘ಢಂ’ ಅಂಥ ಸಿಡಿದರೆ ಮಾತ್ರ ಆಕಾಶವೇ ಕಳಚಿ ಬೀಳುತ್ತದೆ. ಇದ್ದದ್ದೆಲ್ಲಾ ಹೊರಟುಹೋಗುತ್ತದೆ. ಜೀವನವೇ ನರಕವಾಗುತ್ತದೆ. “ಅದಕ್ಕೇ ಹೇಳೋದು ದುಡ್ಡನ್ನು ಮ್ಯೂಚುವಲ್  ಫಂಡ್ ನಲ್ಲಿ ಹಾಕಿ ಅಂತ. ನುರಿತ ಅನುಭವಿ ಫಂಡ್  ನಿರ್ವಾಹಕರು ಎಲ್ಲರ ದುಡ್ಡನ್ನು ತಮ್ಮ ಚಾಕಚಕ್ಯತೆಯಿಂದ ಹೂಡಿ ಲಾಭ ಬರುವಂತೆ ನಿರ್ವಹಿಸುತ್ತಾರೆ. ನಮಗೆಲ್ಲಾ ಏನು ಗೊತ್ತು ಶೇರು ಮಾರ್ಕೆಟ್? ಅದರ experts ಇದ್ದಾರಲ್ಲ. ಅವರಿಗೆ ಬಿಟ್ಟರಾಯಿತು” – ಇದು ಮ್ಯೂಚುವಲ್ ಫಂಡ್ ಗಳ ಪರ ಕೇಳಿ ಬರುವ ಅತ್ಯಂತ ಪ್ರಚಲಿತ ವಾದ. ಬಹಳಷ್ಟು ಮಟ್ಟಿಗೆ ಈ ವಾದ ಸರಿಯಾಗಿಯೇ ಇದೆ. ಮ್ಯೂಚುವಲ್ ಫಂಡ್ ಗಳ ಹುಟ್ಟು ಮತ್ತು ಅಸ್ತಿತ್ವ ಈ ತತ್ವದ ಮೇಲೆಯೇ ನಿಂತಿದೆ. ಇದೇ ತತ್ವದ ಮೇಲೆ ಬಹಳಷ್ಟು ಪ್ರಚಾರ ಕೂಡಾ ನಡೆಸಿ ಕೋಟ್ಯಂತರ ರುಪಾಯಿಗಳನ್ನು ಕೂಡಿ ಹಾಕಲಾಗುತ್ತದೆ. ಲಕ್ಷಾಂತರ ಜನರು ಈ ಫಂಡ್ ಗಳ ಮೇಲೆ ಅತೀವ ನಂಬಿಕೆಯಿಟ್ಟು ಶಿಸ್ತಿನಿಂದ ಹಣ ಹೂಡುತ್ತಾರೆ. ಇಂದಿಗೆ ಭಾರತದಲ್ಲಿ ಮ್ಯೂಚುವಲ್ ಫಂಡ್ ಗಳಲ್ಲಿನ ಹೂಡಿಕೆ ೭-೮ ಟ್ರಿಲ್ಲಿಯನ್ ರುಪಾಯಿಗಳು, ಅಂದರೆ ಏಳೆಂಟು ಲಕ್ಷ ಕೋಟಿ! ಮ್ಯೂಚುವಲ್ ಫಂಡ್ ಒಂದು ಉತ್ತಮ ಪರಿಕಲ್ಪನೆ. ಇದು, ಶೇರಿನ ಬಗ್ಗೆ ಏನೇನೂ ಅರಿಯದ ಲಕ್ಷಾಂತರ ಜನರ ಚಿಕ್ಕ ಚಿಕ್ಕ ಮೊತ್ತವನ್ನು ಪರಿಣಿತರು ಒಂದೆಡೆ ಹೂಡಿ ಅವರಿಗಾಗಿ ಉತ್ತಮ ಪ್ರತಿಫಲ ಪಡೆಯುವ ಒಂದು ಉತ್ತಮ ಪ್ರಯತ್ನ. ಆದರೂ ಈ ಮ್ಯೂಚುವಲ್ ಫಂಡ್ ಎಂಬುದು ತನ್ನದೇ ಆದ ಊನಗಳಿಂದ ಹೊರತಾಗಿ ಇಲ್ಲ. ಅದಕ್ಕೆ ಅದರದ್ದೇ ಆದ ಗುಣಲಕ್ಷಣಗಳಿವೆ. ನಮ್ಮ ಸ್ವಂತ ಬುದ್ಧಿಯನ್ನು ಉಪಯೋಗಿಸಿಯೇ ಅದರಲ್ಲಿ ವ್ಯವಹರಿಸಬೇಕು. ಇಂದಿನ ಸಂದರ್ಭದಲ್ಲಿ ಕೆಲವರಂತೂ ಮ್ಯೂಚುವಲ್ ಫಂಡ್  ಅಂದರೆ ಒಂದು ಮ್ಯಾಜಿಕ್. ಅದರಲ್ಲಿ ಕಣ್ಣು ಮುಚ್ಚಿ ದುಡ್ಡು ಹಾಕಿದರೆ ಸರಿ. ಏಜೆಂಟರು ತೋರಿಸಿದಲ್ಲಿ ಸಹಿ ಹಾಕಿ ಚೆಕ್ ಕೊಟ್ಟರೆ ನಮ್ಮ ಕೆಲಸ ಮುಗಿಯಿತು, ಎಂದುಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ, ನಂಬಿಕೆ ಮಿತಿಮೀರಿ ಈ ಮಟ್ಟಕ್ಕೆ ಏರಿದಾಗ ಅದು ಒಂದು ರೀತಿಯ ಮೂಢನಂಬಿಕೆಯಾಗುತ್ತದೆ- ಒಂದು ಆಧುನಿಕ, ಅಪಾಯಕಾರಿ ಮೂಢನಂಬಿಕೆ! ನನ್ನ ತಕರಾರು ಆ ರೀತಿಯ ಮೂಢನಂಬಿಕೆಯ ಬಗ್ಗೆ ಮಾತ್ರ. ಮ್ಯೂಚುವಲ್ ಫಂಡ್‌ನ ಪರಿಕಲ್ಪನೆಯ ಬಗ್ಗೆ ಅಲ್ಲ. ಈಗ ಗುರುಗುಂಟಿರಾಯರಿಗೆ ಉತ್ತರ ಕೊಡಬೇಕಲ್ಲವೇ? Here you go. . . ಶ್ರೀಮಾನ್ ಗುರುಗುಂಟಿರಾಯರೆ, ದಯವಿಟ್ಟು ಕೆಳಗಿನ ಅಂಶಗಳನ್ನು ಗಮನಿಸುವಿರೋ? ಮ್ಯೂಚುವಲ್ ಫಂಡ್ ಗಳಲ್ಲಿ ವರ್ಷಂಪ್ರತಿ ಮೇನೇಜ್‌ಮೆಂಟ್ ಶುಲ್ಕ/ಆಡಳಿತಾತ್ಮಕ ಖರ್ಚು ಎಂದು ನಮ್ಮ ಹೂಡಿಕೆಯಿಂದ ಸುಮಾರು ೨.೦%-೨.೫% ದ ಅಂದಾಜು ಕಡಿತಗೊಳ್ಳುತ್ತದೆ. ಬಹುತೇಕ ಜನರಿಗೆ ಹೀಗೊಂದು ಶುಲ್ಕ ಇದೆ ಎಂಬ ಅರಿವು ಕೂಡಾ ಇಲ್ಲ. ಇದು ಫಂಡ್  ಹೌಸ್‌ನವರ ಸಂಬಳ, ಪ್ರಯಾಣ, ಆಫೀಸ್ ವೆಚ್ಚ ಇತ್ಯಾದಿಗಳಿಗೆ ಮತ್ತು ಅವರ ಲಾಭಾಂಶಕ್ಕೆ. ನಮ್ಮ ಹೂಡಿಕೆ ಕನಿಷ್ಠ ಈ ಖರ್ಚುವೆಚ್ಚಗಳನ್ನು ಮೀರಿ ಬೆಳೆಯುತ್ತದೆ; ಅಂದರೆ ಕನಿಷ್ಠ ೨.೦%-೨.೫% ರಷ್ಟಾದರೂ ಬೆಳೆಯುತ್ತದೆ ಎಂದು ನಾವು ನಂಬುತ್ತೇವೆ. ಈ ರೀತಿ ಫಂಡ್  ಹೌಸ್‌ಗಳು ತಮ್ಮ ನಿರ್ವಹಣೆಯ ನಿಪುಣತೆಯಿಂದ ಮೇಲೆ ಕಾಣಿಸಿದ ಕಡಿತಕ್ಕಿಂತಲೂ ಮೀರಿದ ಪ್ರತಿಫಲ ನೀಡಿದರೆ ಮಾತ್ರ ನಮಗೆ ಮ್ಯೂಚುವಲ್ ಫಂಡ್ ನಿಂದ ಲಾಭ, ಇಲ್ಲದಿದ್ದರೆ ನಷ್ಟ. ಆದರೆ ಅದರ ಪ್ರಮಾಣ ಹೇಗೆ? ಸುಲಭ. ನಾವು ನೇರವಾಗಿ ಸೆನ್ಸೆಕ್ಸ್-೩೦ ಶೇರುಗಳಲ್ಲಿ ಹಣ ಹೂಡಬಹುದು. ಐಟಿ ಶೇರುಗಳಲ್ಲಿ ನೇರವಾಗಿ ಹೂಡಬಹುದು. ಇನ್ಫ್ರಾಸ್ಟ್ರಕ್ಚರ್‌ನಲ್ಲೂ ನೇರವಾಗಿ ಹೂಡಬಹುದು. ಒಂದು ಫಂಡ್ ಯಾವುದರಲ್ಲಿ ಹೂಡುತ್ತದೋ ಅದರಲ್ಲಿ ನೇರವಾಗಿಯೂ ಹೂಡಬಹುದು. ಬದಲಾಗಿ ಒಂದು ಮ್ಯೂಚುವಲ್ ಫಂಡ್ ಮೂಲಕ ಹೋದರೆ ನಮಗೆ ನೇರವಾಗಿ ಬರುವ ಪ್ರತಿಫಲಕ್ಕಿಂತ ಕನಿಷ್ಠ ೨.೦%-೨.೫% ಆದರೂ ವಾರ್ಷಿಕವಾಗಿ ಜಾಸ್ತಿ ಪ್ರತಿಫಲ ಸಿಗಬೇಕು; ಅವರ ಖರ್ಚನ್ನಾದರೂ ಅವರೇ ನಮಗೆ ಗಳಿಸಿಕೊಡಬೇಕಲ್ಲವೇ? ಆದರೆ ಒಂದು ಫಂಡ್ ನವರು ಇದನ್ನು ಸಾಧಿಸಬೇಕಾದರೆ ಸತತವಾಗಿ ಟ್ರೇಡಿಂಗ್ ಮಾಡಿ ಲಾಭ ಗಳಿಸುವುದು ಒಂದೇ ದಾರಿ. ಈ ರೀತಿ ಟ್ರೇಡಿಂಗ್‌ನಲ್ಲಿ ಸರ್ವಕಾಲಿಕವಾಗಿಯೂ ನಷ್ಟವಿಲ್ಲದೆ ಲಾಭಗಳಿಸಲು ಸಾಧ್ಯವೇ? ಎಲ್ಲಾ ಫಂಡ್ ಗಳೂ ಆ ರೀತಿ ಲಾಭ ಗಳಿಸಿ ಕೊಟ್ಟಿವೆಯೇ? ಇದು ಮ್ಯೂಚುವಲ್ ಫಂಡ್ ನಲ್ಲಿ ಹೂಡುವವರು ಮೊತ್ತ ಮೊದಲು ಪರಿಶೀಲಿಸಬೇಕಾದ ಅಂಶ. ಭಾರತೀಯ ಶೇರು ಮಾರುಕಟ್ಟೆಯಲ್ಲಿ ಸುಮಾರು ನಾಲ್ಕೈದು ಸಾವಿರ ಶೇರುಗಳಿವೆ ಮತ್ತು ಸುಮಾರು ಅಷ್ಟೇ ಮ್ಯೂಚುವಲ್ ಫಂಡ್ ಗಳೂ ಇವೆ. ಅವೆಲ್ಲವೂ ಬೇರೆ ಬೇರೆ ಗುಣಮಟ್ಟದ್ದಾಗಿವೆ. ಕೆಲವು ಒಳ್ಳೆಯವು; ಕೆಲವು ಒಳ್ಳೆಯದಿಲ್ಲದವು. ಕೆಲವಂತೂ ಎಕ್‌ದಂ ‘ಡಬ್ಬಾ ಫಂಡು’ಗಳು. ಬಿಡುಗಡೆಯಾಗುವಾಗ ಎಲ್ಲವೂ ಅಬ್ಬರದ ಭಾರೀ ಪ್ರಚಾರದೊಂದಿಗೇ ಬರುತ್ತವೆ. ಆದರೆ ಬಳಿಕ, ಒಂದೊಂದು ಫಂಡ್ ನದ್ದೂ ಒಂದೊಂದು ಮಟ್ಟದ ಸಾಧನೆ. ಶೇರುಗಳಲ್ಲಿ ಹಣ ಹೂಡಲು ಶೇರುಗಳನ್ನು ಅಭ್ಯಾಸ ಮಾಡಬೇಕಾದಂತೆ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಲು ಆ ಫಂಡ್ ಗಳನ್ನು ಸ್ಟಡಿ ಮಾಡಬೇಕಾದಂತಹ ಪರಿಸ್ಥಿತಿ! ಕಣ್ಣು ಮುಚ್ಚಿ ದುಡ್ಡು ಹಾಕುವಂತಿಲ್ಲ. ಶೇರು ಮಾರ್ಕೆಟ್ ಅರಿಯದ ಜನಸಾಮಾನ್ಯನಿಗೆ ಮ್ಯುಚುವಲ್ ಫಂಡ್  ಆತನ ಸಮಸ್ಯೆಯನ್ನು ಯಾವ ರೀತಿಯಲ್ಲಿ ಸರಳೀಕರಿಸಿದಂತಾಯಿತು? ನೀರಿಳಿಯದ ಗಂಟಲಲ್ಲಿ ಕಡಬು ತುರುಕಿದಂತಾಗಲಿಲ್ಲವೆ? ಒಳ್ಳೆಯ ಮ್ಯೂಚುವಲ್ ಫಂಡ್  ಎನ್ನುವುದು ಯಾವುದನ್ನು? ಪ್ರತಿ ತಿಂಗಳೂ ಉತ್ತಮ ಸಾಧನೆಯ ಒಂದು ಹೊಸ ಟಾಪ್-೧೦ ಪಟ್ಟಿ ಹೊರಬರುತ್ತದೆ. ಯಾವುದನ್ನು ನಂಬುವುದು? ಒಂದು ಫಂಡ್ ನ ಸಾಧನೆ, ಬಹುತೇಕ, ಮಾರ್ಕೆಟ್ ಯಾವ ಮಟ್ಟದಲ್ಲಿರುವಾಗ ಅದು ಆರಂಭಗೊಂಡಿತು ಮತ್ತು ಈಗ ಮಾರ್ಕೆಟ್ ಯಾವ ಮಟ್ಟದಲ್ಲಿದೆ ಎನ್ನುವುದನ್ನು ಹೊಂದಿಕೊಂಡಿದೆ. ಹಾಗಾಗಿ ನಾವುಗಳು ಮ್ಯೂಚುವಲ್ ಫಂಡ್  ಕೊಳ್ಳುವಾಗ ಮಾರ್ಕೆಟ್ ಕೆಳ ಮಟ್ಟದಲ್ಲಿ ಇರುವಾಗ ಖರೀದಿಸಬೇಕು. ಇದರ ಬಗ್ಗೆ ಎಚ್ಚರ ಅಗತ್ಯ. ಅರ್ಥಾತ್, ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಶೇರು ಹೂಡಿಕೆಗಿಂತ ಭಿನ್ನವೇನಲ್ಲ. ಸಾಕಷ್ಟು ಅಧ್ಯಯನದ ಅಗತ್ಯವಿದೆ. ಜಾಹೀರಾತಿಗೆ, ಪ್ರಚಾರಕ್ಕೆ, ಏಜೆಂಟರ ಒತ್ತಾಯಕ್ಕೆ ಮರುಳಾಗಿ ಕಣ್ಣು ಮುಚ್ಚಿ ಸಹಿಹಾಕುವ ಬಾಬತ್ತು ಅಲ್ಲ ಇದು. ಮಾರ್ಕೆಟ್ ಏರಿಳಿದಂತೆ ಮ್ಯೂಚುವಲ್ ಫಂಡ್ ಗಳೂ ಅದೇ ಪ್ರಮಾಣದಲ್ಲಿ ಏರಿಳಿಯುತ್ತದೆಯೇ? ಅಥವಾ ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ? ಯಾವುದೇ ತಜ್ಞರ ಹಸ್ತಕೌಶಲ್ಯ ಮಾರ್ಕೆಟ್ ಏರಿಳಿತವನ್ನು ಮೀರಿ ಕೆಲಸ ಮಾಡುತ್ತಿದೆಯೇ? ಇಲ್ಲವೇ? ಇದಕ್ಕಾಗಿ, ತ್ರೈಮಾಸಿಕವಾಗಿ ಪ್ರಕಟಗೊಳ್ಳುವ ಪೋರ್ಟ್‌ ಫೋಲಿಯೊ ಕೂಲಂಕುಷವಾಗಿ ಪರಿಶೀಲಿಸಬೇಕಾದೀತು. ಅದರಲ್ಲಿ ವಿಶೇಷ ವ್ಯತ್ಯಾಸವೇನಾದರೂ ಇದೆಯೇ? ಒಂದು ವೇಳೆ ಪೋರ್ಟ್‌ಫೋಲಿಯೋ ಮ್ಯಾನೇಜ್ ಮಾಡಿದರೂ ಕೂಡಾ ಇಷ್ಟು ಭಾರಿ ಸಂಖ್ಯೆಯಲ್ಲಿರುವ ಎಲ್ಲಾ ಫಂಡ್ ಗಳನ್ನು ನಿರ್ವಹಿಸುತ್ತವೆಯೇ? ಅಥವ ಕೆಲವು ಫಂಡುಗಳಿಗೆ ಮಾತ್ರ ಸೀಮಿತವಾಗಿವೆಯೆ? ಕೆಲವು ಫಂಡ್  ಹೌಸ್‌ಗಳ ಬಳಿ ೪೦೦-೫೦೦ ಫಂಡ್ ಗಳಿರುತ್ತವೆ. ಮಾರುಕಟ್ಟೆ ಅಚಾನಕ್ಕಾಗಿ ಬಿದ್ದಾಗ ಫಂಡ್  ಹೌಸ್‌ನವರು ನಮ್ಮ ಶೇರುಗಳನ್ನು ಮಾರಿ ನಮ್ಮನ್ನು ಭಾರೀ ನಷ್ಟದಿಂದ ತಪ್ಪಿಸುತ್ತಾರೆ ಎಂದು ನಾವು ನಂಬುತ್ತೇವೆ. ಆದರೆ ವಾಸ್ತವದಲ್ಲಿ ಹಾಗೆ ಆಗಲು ಸಾಧ್ಯವೇ ಇಲ್ಲ. ಎಲ್ಲಾ ನಾಲ್ಕೈದು ಸಾವಿರ ಫಂಡ್ ಗಳು ಏಕ ಕಾಲದಲ್ಲಿ ಮಾರಾಟ ಮಾಡಲು ಮುಂದಾದಲ್ಲಿ ಮಾರ್ಕೆಟ್ ನೆಲಕಚ್ಚಿ ಅದುವೇ ಒಂದು ಸುಸೈಡ್ ಹೆಜ್ಜೆಯಾದೀತು. ಪ್ರಳಯವೇ ಉಂಟಾದೀತು. ಮಾರುಕಟ್ಟೆ ಕುಸಿದಾಗ ಅಷ್ಟೇ ಪ್ರಮಾಣದಲ್ಲಿ ಅವುಗಳ ನಿವ್ವಳ ಆಸ್ತಿ ಬೆಲೆ (NAV) ಕೂಡಾ ಕುಸಿಯುವುದನ್ನು ನಾವು ಅನುಭವಿಸಿದ್ದೇವೆ. ಅಂದರೆ, ಯಾವ ತಜ್ಞರ ಯಾವ ಪರಿಣತಿ ಯಾವ ರೀತಿಯಲ್ಲಿ ನಮ್ಮ ಉಪಯೋಗಕ್ಕೆ ಬಂದಿದೆ ಎಂದು ಪರಿಶೀಲಿಸುವುದು ಅಗತ್ಯ. ಮ್ಯೂಚುವಲ್ ಫಂಡ್  ಬಗ್ಗೆ ಹಲವಾರು ಮಿಥ್ ಹಾಗೂ ಮಿಥ್ಯೆಗಳು ಪ್ರಚಲಿತವಾಗಿವೆ. ನಮ್ಮ ಅಜ್ಞಾನಗಳನ್ನೆಲ್ಲಾ ಮೀರಿ ಬರೇ ಕಣ್ಣು ಮುಚ್ಚಿ ದುಡ್ಡು ಹೂಡಿದರೂ ಯಾರೋ ಅಜ್ಞಾತ ತಜ್ಞರ ಪರಿಣಿತಿಯಿಂದ ಗರಿಷ್ಠ ಪ್ರತಿಫಲ ಪಡೆಯಬಹುದು ಎಂಬ ಆಧುನಿಕ ಮೂಢನಂಬಿಕೆಗೆ ಬಲಿಯಾಗದಿರಿ. ಶೇರುಗಳಲ್ಲಿ ಹಣ ಹೂಡುವಾಗ ಎಷ್ಟು ಎಚ್ಚರ ಬೇಕೋ, ಮ್ಯೂಚುವಲ್ ಫಂಡ್ ಜೊತೆ ಸರಸವಾಡುವಾಗಲೂ ಅಷ್ಟೇ ಎಚ್ಚರ ಅಗತ್ಯ !! ಮ್ಯೂಚುವಲ್ ಫಂಡ್ ಬಗ್ಗೆಗಿನ ಇನ್ನೂ ಕೆಲವು ಅಂಶಗಳನ್ನು ಕೂಲಂಕುಷವಾಗಿ ಮುಂದೆ ನೋಡೋಣ. . . . . ವಗ್ಗರಣೆ ಈ ಬಾರಿ ಕೃಷ್ಣಮೂರ್ತಿ ಎಂಬವರು ಒಂದು ಸುದೀರ್ಘ ಪತ್ರ ಬರೆದು ಈವರೆಗೆ ಕಾಕು ಬೆಳೆದು ಬಂದ ದಾರಿಯನ್ನು ಬಹಳ ಅಚ್ಚುಕಟ್ಟಾಗಿ ವಿಮರ್ಶಿಸಿದ್ದಾರೆ. ಇನ್ನು ಮುಂದೆ ಬರೆಯಬಹುದಾದ ವಿಷಯಗಳ ಬಗ್ಗೆ ಸಲಹೆಯನ್ನೂ ನೀಡಿದ್ದಾರೆ. ಅವರ ಪ್ರೋತ್ಸಾಹಕ್ಕೂ, ಔದಾರ್ಯಕ್ಕೂ ಆಭಾರಿ. ಭಲ್ಲೂಕರಾಯರನ್ನು ಮೆಚ್ಚಿ ಹಲವರು ಎಸ್.ಎಮ್.ಎಸ್/ಫೋನ್ ಮಾಡಿದ್ದಾರೆ. ಜೊತೆಗೆ ನಾಗಾನಾಥ್ ಅವರ ‘ಚಿತ್ರೀಕರಣ’ವನ್ನೂ ಹಲವರು ಮೆಚ್ಚಿದ್ದಾರೆ. ಎಪ್ರಿಲ್ ೧ ರಿಂದ ಮೊದಲ್ಗೊಂಡು ಬ್ಯಾಂಕುಗಳ ಎಸ್.ಬಿ ಖಾತೆಯಲ್ಲಿ ಬಡ್ಡಿಯನ್ನು ದೈನಂದಿನ ಬ್ಯಾಲನ್ಸ್ ಮೇಲೆ ನೀಡುತ್ತಾರೆ. ಈವರೆಗೆ ಪ್ರತಿ ತಿಂಗಳ ೧೦ ನೇ ಹಾಗೂ ಕೊನೆಯ ದಿನದ ಒಳಗಿನ ಕನಿಷ್ಟ ಬ್ಯಾಲನ್ಸ್ ಮೇಲೆ ನೀಡಲಾಗುತ್ತಿತ್ತು. ಈ ಹೊಸ ಪದ್ದತಿಯಿಂದ ಎಲ್ಲರಿಗೂ ಲಾಭವಾಗುವುದು ಖಂಡಿತ. ದಯವಿಟ್ಟು ಗಮನಿಸಿ.]]>

‍ಲೇಖಕರು avadhi

July 5, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತೆರಿಗೆ ಹೆಂಗೆಲ್ಲಾ ಕದೀತಾರೆ ಗೊತ್ತಾ?

ದುಡ್ಡು ಕೊಟ್ಟ ಮೇಲೆ ’ಬಿಲ್ಲು ಕೇಳಿ ಸ್ವಾಮಿ ’ ಎಂದು ನಾರಾಯಣ ಸ್ವಾಮಿ ಅವರು ಬರೆದ ಲೇಖನದ ಮುಂದಿನ ಭಾಗ ಎನ್ ನಾರಾಯಣಸ್ವಾಮಿ ತೆರಿಗೆ ಕದಿಯುವ...

ಬಿಲ್ಲು ಕೇಳಿ ಸ್ವಾಮಿ

ತೆರಿಗೆ ನಿಮಗೆ ಅರಿವಿಲ್ಲದಂತೆ ಪಾವತಿಸಿರುವಿರಿ ಅರಿವುಂಟೇ ಎನ್  ನಾರಾಯಣಸ್ವಾಮಿ ಹೀಗೆ ತೆರಿಗೆ ಎಂದರೆ ಬೆಚ್ಚಿ ಬೀಳುತ್ತೀರಲ್ಲವೇ?ಏಕೆಂದರೆ...

ಕಾಸು – ಕುಡಿಕೆ ಈಗ ಪುಸ್ತಕವಾಗಿ

ಅವಧಿಯಲ್ಲಿ ಅಂಕಣವಾಗಿ ಬರುತ್ತಿದ್ದ ಕಾಸು ಕುಡಿಕೆ ಈಗ ಪುಸ್ತಕವಾಗಿ! ಮೊಳೆಯಾರರಿಗೆ ಅವಧಿಯ ಅಭಿನಂದನೆಗಳು.. ಬರುತ್ತಿದೆ ಕಾಸು ಕುಡಿಕೆ! -...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This