ಕಾಸು ಕುಡಿಕೆ: ಸಿಂಪಲ್ ಐಡಿಯಾ ಕೊಟ್ಟಳು ಸತೀಮಣಿ

ಕಾಕು ೧೨

-ಜಯದೇವ ಪ್ರಸಾದ ಮೊಳೆಯಾರ
ಸೋದರಳಿಯನಿಗೆ ಕರ ರಿಯಾಯಿತಿಯ ಉಪದೇಶ
The hardest thing in the world to understand is the income tax- Albert Einstein.
ಜಗತ್ತಿನಲ್ಲಿ ಅತ್ಯಂತ ಕಷ್ಟಕರವಾದ ವಿಷಯವೆಂದರೆ ಆದಾಯ ಕರವನ್ನು ಅರ್ಥಮಾಡಿಕೊಳ್ಳುವುದು- ಆಲ್ಬರ್ಟ್ ಐನ್ಸ್‌ಸ್ಟೈನ್


ಟೋಪಿ ವಿದ್ಯೆಯ ಮೂರು ಮೂರು ಎಪಿಸೋಡುಗಳು ಬಂದು ಹೋದರೂ ಗುರುಗುಂಟಿರಾಯರ ‘ಪೆಪ್ಪರ್ ಬ್ರಾಂಡ್’ ಟೀಕೆ ಟಿಪ್ಪಣಿಗಳು ಬರಲೇ ಇಲ್ಲ. ಅವರು ಸ್ವಲ್ಪ ಹಾಗೆಯೇ. ಅವರಿಗೆ ಶೇರಿನ ತಲೆ ಕಂಡರೆ ಆಗುವುದಿಲ್ಲ. “ಸಾಕು ಮಾರಾಯ್ರೆ, ನಿಮ್ಮ ಸುಡುಗಾಡು ಶೇರಿನ ಗುಣಗಾನ. ಏನಾದ್ರು ಉಪಯೋಗದ್ದು ಇದ್ರೆ ಬರೀರಿ” ಅಂತೆಲ್ಲ ಟೀಕೆ ಮಾಡ್ತಾನೇ ಇರ್ತಾರೆ. ಅವರಿಗೆ ಎನಿದ್ರೂ ಪರ್ಫೆಕ್ಟ್ ಇನ್‌ಕಮ್ ಐಟಂಗಳೇ. ಎಫ್ ಡಿ, ಬಾಂಡು, ಪಿ.ಪಿ.ಎಫ್, ಆರ್.ಡಿ ಇತ್ಯಾದಿ ಪೂರ್ವ ನಿಗದಿತ, ಅಪಾಯವಿಲ್ಲದ ಹೂಡಿಕೆಗಳಲ್ಲೇ ಅವರಿಗೆ ನೆಮ್ಮದಿ. ಅಲ್ಲದೆ ‘ಕಾಕು’ವಿನಲ್ಲಿ ಶೇರು ಗೀರು ಎಂದೆಲ್ಲಾ ಗೂಳಿ, ಕರಡಿ, ಹದ್ದು, ಕತ್ತೆ ನಾಯಿ ಹಂದಿ ಇತ್ಯಾದಿ ಮೃಗಾಲಯದ ಕತೆಗಳು ಬಂದರೆ ಅವರು ಇಷ್ಟಪಡುವುದಿಲ್ಲ. ಏನಾದರೂ ಒಂದು ಕುಟುಕುತ್ತಲೇ ಇರುತ್ತಾರೆ.

ಹಾಗಿರುವಾಗ, ಈ ಬಾರಿ ಇದುವರೆಗೂ ರಾಯರ ಫೋನೂ ಇಲ್ಲ, ಮೆಸೇಜೂ ಇಲ್ಲ. ಯಾಕಿರಬಹುದು ಅಂತ ಲೈಟಾಗಿ ಆತಂಕ ಶುರುವಾಯಿತು. ಕಳೆದ ಬಾರಿ ಅವರು ಫೋನಾಯಿಸಿದಾಗ ಅರೋಗ್ಯವಾಗಿಯೇ ಇದ್ದರು. ‘ಮತ್ತೆ ಇನ್ನು ಏನಾಯಿತಪ್ಪಾ?’ ಎಂಬ ಯೋಚನೆಗೆ ಒಳಗಾದೆ. ‘ನೀವೇ ಯಾಕೆ ಫೋನ್ ಮಾಡಿ ಅವರ ಅರೋಗ್ಯ ವಿಚಾರಿಸಬಾರದು?’ ಎಂಬ ಅಟ್ಟರ್ಲೀ ಸಿಂಪಲ್ ಐಡಿಯಾ ಕೊಟ್ಟಳು ಸತೀಮಣಿ. ಹೌದಲ್ಲ? ನಾನೇ ಯಾಕೆ ಫೋನಾಯಿಸಬಾರದು? (ಯಾವತ್ತೂ, ಇಂತಹ ಸಿಂಪಲ್ ಪ್ರಾಕ್ಟಿಕಲ್ ಐಡಿಯಾಗಳೆಲ್ಲ ನಮಗೆ ಮಿಸ್ ಆಗಿ ನಮ್ಮ ಮಿಸೆಸ್‌ಗಳಿಗೆ ಮಾತ್ರ ಯಾಕೆ ಹೊಳೆಯುತ್ತೆ, ಸಾರ್?)
ಇರಲಿ ಬಿಡಿ. ಫೋನೆತ್ತಿ ರಾಯರಿಗೆ ಡಯಾಲಿಸಿಸ್ ಮಾಡಿದೆ. ಫೋನೆತ್ತಿದ್ದು ಅವರೇ. ಎಂದಿನ ಲವಲವಿಕೆಯಲ್ಲಿದ್ದಂತೆ ಇರಲಿಲ್ಲ. ಉತ್ಸಾಹ ಇಳಿದಿತ್ತು. ಸ್ವರ ಕಂದಿತ್ತು. ಅರೋಗ್ಯವೇನೋ ಚೆನ್ನಾಗೇ ಇತ್ತು. ಆದರೂ ಏನೋ ‘ಮೂಡೌಟ್ ಪಾರ್ಟಿ’ ಥರ ಮಾತನಾಡುತ್ತಿದ್ದರು.
ನಾವು ಒಂದು ತಪ್ಪು ಇನ್ವೆಸ್ಟ್‌ಮೆಂಟ್ ಮಾಡೋದರಿಂದ ಹೆಚ್ಚಿನ ಗಂಡಾಂತರದ ವಿಷಯ ಯಾವುದು ಗೊತ್ತೇ? – ಅದು, ನಮ್ಮನ್ನು ಸಂಪೂರ್ಣವಾಗಿ ನಂಬುವ ಇನ್ನೊಬ್ಬರಿಂದ ಅಂತಹ ತಪ್ಪು ಇನ್ವೆಸ್ಟ್ಮೆಂಟ್ ಮಾಡಿಸೋದು! ರಾಯರಿಗೆ ಬಂದ ಆಪತ್ತೂ ಇದೇನೇ. ತಮ್ಮ ಸೋದರಳಿಯನಿಗೆ ಆತನ ಟಾಕ್ಸ್ ಪ್ಲಾನ್ನಿಂಗ್ ಮಾಡಲು ಎಫ್ .ಡಿ ಯಲ್ಲಿ ದುಡ್ಡು ಹೂಡೆಂಬ ಉಪದೇಶ ಕೊಟ್ಟಿದ್ದರು ಗುರುಗುಂಟಿರಾಯರು. ಕರ ರಿಯಾಯಿತಿಯೂ ಇರುತ್ತದೆ, ಸೇಫ್ಟಿಯೂ ಇರುತ್ತದೆ ಅಂತ. ಮಿಸ್ಟರ್ ಸೋದರಳಿಯ ಹಿಂದು ಮುಂದು ನೋಡದೆ ಅದೇ ವೇದವಾಕ್ಯವೆಂಬಂತೆ ಅದನ್ನು ಶಿರಸಾವಹಿಸಿ ಪಾಲಿಸಿದ ಕೂಡಾ.  ಟಾಕ್ಸ್ ಬೆನಿಫಿಟ್ ಆಸೆಗೆ ಭಕ್ತಿಯಿಂದ ಹೋಗಿ ಐವತ್ತು ಸಾವಿರ ರುಪಾಯಿಗಳನ್ನು ಮೂರು ವರ್ಷಕ್ಕೆ ಬ್ಯಾಂಕಿನಲ್ಲಿ ಎಫ್ .ಡಿ ಮಾಡಿ ಬಂದ! ಆಮೇಲೆ ರಾಯರಿಗೆ ತಿಳಿಯಿತು, ಮೂರು ವರ್ಷದ ಬ್ಯಾಂಕು ಎಫ್ .ಡಿ ಕರ ರಿಯಾಯಿತಿಗೆ ಅರ್ಹವಲ್ಲ ಅಂತ.  ಬಳಿಕ ‘ಈ ಸುನಾಮಿ-ಸುದ್ದಿಯನ್ನು ಅಳಿಯನಿಗೆ ತಿಳಿಸಿವುದೆಂತು?’ ಎಂಬ ಚಿಂತೆಯಲ್ಲಿ ಕೆಲ ದಿನ ನಿದ್ದೆ ಕೆಟ್ಟರು. ಕೊನೆಗೆ ಹೇಗೋ ಹೆಂಡತಿಯ ಮಧ್ಯಸ್ತಿಕೆಯಲ್ಲಿ ಅಳಿಯನಿಗೆ ವಿಷಯ ತಿಳಿಸಿದ್ದಾಯಿತು. ಈಗ ಸೋದರಳಿಯ ಎಫ್ .ಡಿ ಹಿಂಪಡೆದು ಅದನ್ನು ಸರಿಯಾದ ರೀತಿಯಲ್ಲಿ ಹೂಡುವ ಹವಣಿಕೆಯಲ್ಲಿ ಸುತ್ತಾಡುತ್ತಿದ್ದರೆ, ಗುರುಗುಂಟಿಮಾಮ ಮುಖಭಂಗಿತರಾಗಿ, ಅಭಿಮಾನ-ಟುಸ್ಸರಾಗಿ ಹೆಂಡತಿ ಮಕ್ಕಳಿಂದ ಬೈಸಿಕೊಳ್ಳುತ್ತಾ, ತಮಾಷೆಗೊಳಗಾಗುತ್ತಾ ಮಂಡೆಬಿಸಿ ಮಾಡಿಕೊಂಡು ಕುಳಿತಿದ್ದಾರೆ. ಹಾಗೆ, ಇತ್ತೀಚೆಗೆ ರಾಯರು ಸ್ವಲ್ಪ ಡೌನ್!
ಪಾಪ, ಈ ಎಲ್ಲಾ ಗಲಾಟೆಯ ನಡುವೆ ಕಾಸು-ಕುಡಿಕೆಯಲ್ಲಿ ಬರುತ್ತಿದ್ದ ಟೋಪಿ ಚರಿತ್ರೆಯನ್ನು ಟೀಕಿಸಲು ರಾಯರಿಗೆ ಪುರುಸೊತ್ತಾದರೂ ಎಲ್ಲಿರುತ್ತೆ?
“ನಿಮ್ಮ ಸುಡುಗಾಡು ಶೇರುಗಳಲ್ಲಿ ದುಡ್ಡು ಹಾಕಿದರೆ ಅದಕ್ಕೆ ಟಾಕ್ಸ್ ಕನ್ಸೆಶನ್ ಕೊಡಲ್ವಾ?” ಗುರುಗುಂಟಿರಾಯರು ನಿಧಾನವಾಗಿ ತಮ್ಮ form ಗೆ ಬಂದರು.
“ನೇರವಾಗಿ ಅಲ್ಲ, ಮ್ಯೂಚುವಲ್ ಫಂಡಲ್ಲಿ ಹೂಡಿದ್ರೆ ಮಾತ್ರ. . . ಅದೂ ಮೂರು ವರ್ಷಗಳ ಮಟ್ಟಿಗೆ. ೮೦ ಸಿ ಯಲ್ಲಿ ಕನ್ಸೆಶನ್ ಸಿಗತ್ತೆ, ಸಾರ್” ಅಂದೆ.
“ಹಾಗಿದ್ರೆ ಮತ್ತೆ, ಎಫ್ .ಡಿ ಗೆ ಯಾಕೆ ಐದು ವರ್ಷದ ಮಿತಿ?” ಜನ್ರೆಲ್ಲಾ ಸುಡುಗಾಡು ಶೇರುಗಳಲ್ಲಿ ಹಾಕಿ ದುಡ್ಡು ಕಳ್ಕೊಳ್ಲಿ ಅಂತ್ಲಾ? ಅಲ್ದೆ, ಶೇರಿನ ಮೇಲಿನ ಡಿವಿಡೆಂಡಿನ ಮೇಲೆ ಟಾಕ್ಸ್ ಇಲ್ಲ ಅಲ್ವಾ? ಬ್ಯಾಂಕು ಬಡ್ಡಿದರದ ಮೇಲೆ ಟಾಕ್ಸ್ ಇದೆ. ಅದ್ಯಾಕೆ ಹಾಗೆ?” ಈಗ ರಾಯರು ಫುಲ್  form ಗೆ ಬಂದ್ರು.
“ಗೊತ್ತಿಲ್ಲಾ ಸಾರ್, ಅದು ಚಿದಂಬರ ರಹಸ್ಯ. ಅದು ಆತನೊಬ್ಬನಿಗೇ ಗೊತ್ತು” ಅಂತ ಹೇಳಿ ಫಾರ್  ದ ಟೈಮ್ ಬೀಯಿಂಗ್, ಹಾಂಡ್ ವಾಶ್ ಮಾಡ್ಕೊಂಡೆ.
“ಅದಿರ್ಲಿ, ಈ ಬಾರಿ ನಿಮ್ಮ ಕುಡಿಕೆಯಲ್ಲಿ ಆದಾಯ ತೆರಿಗೆ ರಿಯಾಯತಿಯ ಬಗ್ಗೆ ಸ್ವಲ್ಪ ಸ್ಪಷ್ಟವಾದ ಮಾಹಿತಿ ಕೊಡಿ. ತುಂಬಾ ಜನ್ರಿಗೆ ಕನ್ಫ್ಯೂಶನ್ ಇದೆ.” ಅಂತ ಸ್ವಲ್ಪ ಮುಜುಗರದೊಂದಿಗೇ ಕೇಳಿಕೊಂಡರು.
“ಸರಿ ಸಾರ್, ಮಾಡೋಣ, ಹೇಗೂ ಮಾರ್ಚ್ ಬರ್ತಾ ಇದೆ.” ಅಂತ ಫೋನಿಟ್ಟೆ.  ಸಧ್ಯ! ನನ್ನ ಟೋಪಿ-ಲೇಖನಗಳ ಬಗ್ಗೆ ಕಿಡಿ ಕಾರಲಿಲ್ಲವಲ್ಲ, ರಾಯರು.
ಕರವಿನಾಯಿತಿಗೆ ಸೆಕ್ಷನ್ 80 ಸಿ:

ಇಂಕಮ್ ಟಾಕ್ಸ್ ಖಾಯಿದೆಯಲ್ಲಿ ಒಬ್ಬ ವ್ಯಕ್ತಿಯ ಆದಾಯದ ಮೇಲಿನ ತೆರಿಗೆ ಲೆಕ್ಕ ಹಾಕುವ ಮೊದಲೇ ಕೆಲವು ನಿರ್ದಿಷ್ಟ ಸ್ಕೀಂಗಳಲ್ಲಿ ಮಾಡಿದ ಹೂಡಿಕೆಗಳನ್ನು ರೂ ೧ ಲಕ್ಷದ ಮಿತಿಯವರೆಗೆ ಆದಾಯದಿಂದ ನೇರವಾಗಿ ಕಳೆಯಬಹುದಾಗಿದೆ. ಇದನ್ನು ಸೆಕ್ಷನ್ ೮೦ ಸಿ ಅನ್ನುತ್ತಾರೆ. ಸುಮಾರಾಗಿ ಜನವರಿಯಿಂದ ಮಾರ್ಚಿನವರೆಗೆ ವರ್ಷಾಂತ್ಯದ ಸಮಯದಲ್ಲಿ ಈ ಸೆಕ್ಷನ್ನಿಗೆ ಸೀಸನ್ ಸಮಯ. ಎಲ್ಲರಿಗೂ ಕರವಿನಾಯಿತಿಗಾಗಿ ಇನ್ವೆಸ್ಟ್ ಮಾಡುವ ತುರಾತುರಿ. ಈ ೮೦ ಸಿ ಯ  ಐಟಂಗಳು ಯಾವುದೆಂದರೆ,  
೧.       ಜೀವ ವಿಮಾ ಯೋಜನೆಗಳು- ಟರ್ಮ್, ಎಂಡೋಮೆಂಟ್, ಆನ್ಯೂಟಿ, ಡಿಫರ್ಡ್ ಆನ್ಯೂಟಿ ಯುನಿಟ್ ಲಿಂಕ್ಡ್. (ಸ್ವಂತ, ಪತಿ/ಪತ್ನಿ ಅಥವ ಮಕ್ಕಳ ಹೆಸರಿನಲ್ಲಿ)
೨.       ಎಂಪ್ಲೋಯೀಸ್ ಪ್ರಾವಿಡೆಂಟ್ ಫಂಡಿನಲ್ಲಿ ಹಾಗೂ ಸ್ವಂತ, ಪತಿ/ಪತ್ನಿ ಮಕ್ಕಳ ಹೆಸರಿನಲ್ಲಿ ಒಟ್ಟು ವಾರ್ಷಿಕ ರೂ ೭೦,೦೦೦ ವರೆಗೆ ಪಬ್ಲಿಕ್ ಪ್ರಾವಿಡೆಂಡ್ ಫಂಡಿನಲ್ಲಿ ಹೂಡುವ ಮೊತ್ತ.
೩.       ನಿರ್ದಿಷ್ಟ ನಿವೃತ್ತಿ (Superannuation)  ಅಥವ ಪೆನ್ಶನ್ ಯೋಜನೆಗಳು.
೪.       ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ (ELSS) ಕನಿಷ್ಟ ೩ ವರ್ಷಗಳ ಅವಧಿಗೆ.
೫.       ಇಬ್ಬರು ಮಕ್ಕಳ ಟ್ಯೂಶನ್ ಫೀಸ್ (ಟ್ಯೂಶನ್ ಭಾಗ ಮಾತ್ರ)
೬.       ನಿರ್ದಿಷ್ಟ ಪವರ್, ಟೆಲಿಕಾಂ ಇತ್ಯಾದಿ ಇನ್ಫ್ರಾಸ್ಟ್ರಕ್ಚರ್ ಬಾಂಡುಗಳು, ನಬಾರ್ಡ್ ಬಾಂಡುಗಳು.
೭.       ಸ್ವಂತ ವಾಸಕ್ಕಾಗಿ ಪಡೆದ ಗೃಹಸಾಲ ಮರುಪಾವತಿಯ ‘ಅಸಲು ಭಾಗ’, ಮನೆ ಖರೀದಿಯ ರಿಜಿಸ್ಟ್ರೇಶನ್ ಖರ್ಚುವೆಚ್ಚಗಳು. N.H.B ನ ಹೌಸಿಂಣ್ ಲೋನ್ ಅಕೌಂಟ್.
೮.       ಐದು ವರ್ಷಕ್ಕೂ ಮೀರಿದ ಬ್ಯಾಂಕು, ಅಂಚೆ ಕಛೇರಿಗಳ ಫಿಕ್ಸ್ಡ್ ಡೆಪಾಸಿಟ್‌ಗಳು ಹಾಗೂ ಸೀನಿಯರ್ ಸಿಟಿಜನ್ ಸೇವಿಂಗ್ಸ್ ಯೋಜನೆ. ಅಂಚೆ ಇಲಾಖೆಯ ಎನ್.ಎಸ್.ಸಿ ಮತ್ತು ಅದರ ಬಡ್ಡಿಯ ಮರುಹೂಡಿಕೆ, ಎನ್.ಎಸ್.ಎಸ್ ಯೋಜನೆ.
ಇವಿಷ್ಟು ಮುಖ್ಯ ೮೦ ಸಿ ಯೋಜನೆಗಳು. ಇವುಗಳಲ್ಲಿ ಪ್ರತಿಯೊಂದು ಸ್ಕೀಮಿಗೂ ಅದರದ್ದೇ ಆದ ಅವಧಿ, ಪ್ರತಿಫಲ ಹಾಗೂ ಪ್ರತಿಫಲದ ಮೇಲಿನ ತೆರಿಗೆಗಳು ಇವೆ. ಅವೆಲ್ಲವನ್ನೂ ಕೂಲಂಕುಷವಾಗಿ ಅಭ್ಯಾಸ ಮಾಡದೆ ಫೈನ್ ಪ್ರಿಂಟ್ ಓದದೆ ಹೂಡಿಕೆ ಮಾಡಹೋಗಬಾರದು. ಕಾಸು ಕುಡಿಕೆಯಲ್ಲಿ ಸಧ್ಯಕ್ಕಂತೂ ಹೂಡಿಕೆಯ ಬಗ್ಗೆ ಧೋರಣಾತ್ಮಕವಾದ ವಿಶ್ಲೇಷಣೆ ಮಾತ್ರ ನಡೆಯುತ್ತದೆ – ಒಂದೊಂದು ಸ್ಕೀಂಗಳ ಬಗ್ಗೆ, ಅವುಗಳ ಹಿರಿಮೆ-ಕಿರಿಮೆಗಳ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಮುಂದೊಮ್ಮೆ ಆ ಪದ್ದತಿಯನ್ನು ಶುರು ಮಾಡೋಣ. (ಜಿಲೇಬಿ-ಕಾಫಿ ಕೊಟ್ಟವರಿಗೆ ಈಗಲೂ ಆ ಸೌಲಭ್ಯ ಲಭ್ಯವಿದೆ, ಅದು ಬೇರೆ ವಿಷಯ)

ಅಲ್ಲದೆ, ಇತರ ಸೆಕ್ಷನ್‌ಗಳು:

ಆದಾಯ ತೆರಿಗೆಯಲ್ಲಿ ಕರ ವಿನಾಯಿತಿ ಅಂದರೆ ಮೇಲೆ ತಿಳಿಸಿದಂತೆ ಸೆಕ್ಷನ್ ೮೦ ಸಿ ಎಂಬ ಭಾವನೆ ಹಲವಾರು ಜನರ ಮನಸ್ಸಿನಲ್ಲಿ ಇದೆ. ಆದರೆ, ವಾಸ್ತವದಲ್ಲಿ ೮೦ ಸಿ ಅಲ್ಲದೆ ಇನ್ನೂ ಕೆಲವು ತೆರಿಗೆ ವಿನಾಯತಿಯ ಅವಕಾಶಗಳು ಕಾನೂನಿನಲ್ಲಿ ಲಭ್ಯ. ಆದರೆ ಹೆಚ್ಚಿನವರು ಅದರ ಅರಿವಿಲ್ಲ; ಅದನ್ನು ಉಪಯೋಗಿಸುತ್ತಿಲ್ಲ.
೧.       ಸೆಕ್ಶನ್ ೮೦ ಡಿ ಯ ಪ್ರಕಾರ ಸಾರ್ವಜನಿಕರು ಅರೋಗ್ಯ ವಿಮೆ ಮಾಡಿಸಿಕೊಳ್ಳಲು ಸರಕಾರ ಉತ್ತೇಜನ ನೀಡುತ್ತದೆ. ವಾರ್ಷಿಕ ೧೫,೦೦೦ ರೂಪಾಯಿಗಳವರೆಗೆ ಸ್ವಂತ, ಗಂಡ/ಹೆಂಡತಿ, ಮಕ್ಕಳ ಹಾಗೂ ಹೆತ್ತವರ ಆರೋಗ್ಯ ವಿಮೆಗೆ ಕಟ್ಟಿದ ದುಡ್ಡನ್ನು ಆದಾಯದಿಂದ ಸೀದಾ ಕಳೆಯಬಹುದಾಗಿದೆ. ಹಿರಿಯ ನಾಗರಿಕರಿಗೆ ಈ ಮಿತಿ ರೂ ೨೦,೦೦೦. ಅಲ್ಲದೆ ಸೆಕ್ಷನ್ ೮೦ ಡಿಡಿ ಯಲ್ಲಿ ಅಂಗ‌ಊನವಿರುವ ಆಶ್ರಿತರ ಚಿಕಿತ್ಸೆಗಾಗಿ ಅಥವಾ ಅವರ ಆರೋಗ್ಯ ವಿಮೆಗಾಗಿ ರೂ ೧,೦೦,೦೦೦ ವರೆಗೆ ಆದಾಯ ವಿನಾಯಿತಿ ಇದೆ. ಇನ್ನು ೮೦ ಡಿಡಿಬಿ ಯಲ್ಲಿ ಅಂತಹ ಆಶ್ರಿತರ ಮೇಲೆ ಕ್ರಿಟಿಕಲ್ ಖಾಯಿಲೆಯ ಸಂದರ್ಭದಲ್ಲಿ ಮಾಡಿದ ಖರ್ಚಿಗೆ ರೂ ೪೦,೦೦೦ ವರೆಗೆ ( ಹಿರಿಯ ನಾಗರಿಕರಿಗೆ ೬೦,೦೦೦ ರೂ) ವಿನಾಯಿತಿ ಇದೆ.
೨.       ಸೆಕ್ಷನ್ ೮೦ ಇ ಯಲ್ಲಿ ಸ್ವಂತಕ್ಕೆ ಮತ್ತು ಪತಿ/ಪತ್ನಿ, ಮಕ್ಕಳ ಉನ್ನತ ವ್ಯಾಸಂಗಕ್ಕೆ ಮಾಡಿದ ಬ್ಯಾಂಕು ಸಾಲದ ಬಡ್ಡಿ ಮೊತ್ತ ಸಂಪೂರ್ಣವಾಗಿ ೮ ವರ್ಷಗಳವರೆಗೆ ಮಾಫಿ.
೩.       ಸೆಕ್ಷನ್ ೮೦ ಜಿ ದುಡ್ಡನ್ನು ಉತ್ತಮ ಕಾರ್ಯಗಳಿಗೆ ದಾನವಾಗಿ ಕೊಡಲು ಪ್ರೇರೇಪಿಸುತ್ತದೆ. ಕೆಲವು ನಿಧಿಗಳಿಗೆ ದಾನಮೊತ್ತದ ೧೦೦% ವಿನಾಯಿತಿಯೂ, ಕೆಲವಕ್ಕೆ ೫೦% ವಿನಾಯಿತಿಯೂ ಇವೆ. ದಾನ ಕೊಡುವ ಸಂದರ್ಭದಲ್ಲಿ ಇದರ ಬಗ್ಗೆ ತಿಳಿದುಕೊಂಡು ರಶೀದಿ ಪಡೆದು ಇಟ್ಟುಕೊಳ್ಳುವುದು ಒಳಿತು.
೪.       ಸೆಕ್ಶನ್ ೮೦ ಜಿಜಿ ಅನ್ವಯ ಕೆಲವು ನಿರ್ದಿಷ್ಟ ನಗರಗಳಲ್ಲಿರುವ ಎಚ್.ಆರ್.ಎ ಪಡೆಯದ, ಸ್ವಂತ ಮನೆ ಹೊಂದಿರದೆ ಮನೆಬಾಡಿಗೆ ಕೊಡುವವರಿಗೆ ಕೆಲವು ರಿಯಾಯಿತಿಗಳಿವೆ.
೫.       ಸೆಕ್ಶನ್ ೮೦ ಯು ಅನ್ವಯ ಖಾಯಂ ಅಂಗ ಊನತೆಯಿರುವವರು ತಮ್ಮ ಆದಾಯದಲ್ಲಿ ರೂ ೭೫,೦೦೦ ದ ವರೆಗೆ ರಿಯಾಯಿತಿ ಪಡೆದುಕೊಳ್ಳಬಹುದು.
೬.       ಸೆಕ್ಷನ್ ೨೪ ರ ಪ್ರಕಾರ ಬ್ಯಾಂಕುಗಳಿಂದ ಪಡೆದ ಗೃಹ ಸಾಲಕ್ಕೆ ಪಾವತಿಸುವ ಬಡ್ಡಿ ಹಣ ವಾರ್ಷಿಕ ರೂ ೧,೫೦,೦೦೦ ವರೆಗೆ ಸಂಪೂರ್ಣ ಕರ ವಿನಾಯಿತಿಯನ್ನು ಹೊಂದಿರುತ್ತದೆ. ಪತಿ-ಪತ್ನಿಯರಿಬ್ಬರೂ ದುಡಿಯುತ್ತಿದ್ದು ಗೃಹಸಾಲ ಪಡೆದಿದ್ದಲ್ಲಿ ಇಬ್ಬರಿಗೂ ಸೇರಿಸಿ ಒಂದೇ ಸಾಲದ ಮೇಲೆ ೩ ಲಕ್ಷದವರೆಗಿನ ವಿನಾಯಿತಿಯನ್ನು ಪಡೆಯಬಹುದಾಗಿದೆ. ೮೦ ಸಿ ಯಲ್ಲಿನ ಪ್ರಿನ್ಸಿಪಲ್ ಮೇಲಿನ ವಿನಾಯಿತಿಯೊಂದಿಗೆ ನೋಡಿದರೆ ಗೃಹ ಸಾಲವೆಂಬುದು ಒಂದು ಅತ್ಯಾಕರ್ಷಕ ಯೋಜನೆಯಾಗಿದೆ. ಗೃಹಸಾಲದ ಬಗ್ಗೆಯೇ ಇನ್ನೂ ಕೆಲವು ಉಪಯುಕ್ತ ಮಾಹಿತಿಗಳನ್ನೊಳಗೊಂಡಂತೆ ಒಂದು ಪ್ರತ್ಯೇಕ ಲೇಖನವನ್ನು ಮುಂದೊಮ್ಮೆ  ಬರೆಯೋಣ.
(ಇಲ್ಲಿ ಕೊಟ್ಟಿರುವ ವಿಚಾರಗಳು ಸ್ಥೂಲವಾಗಿ ಚರ್ಚೆಗಾಗಿ ಮಾತ್ರ. ಕರವಿನಾಯಿತಿಯ ಬಗ್ಗೆ ವ್ಯಕ್ತಿಗತ ವಿವರಗಳೊಂದಿಗೆ ನುರಿತ ಸಿ.ಎಗಳೊಡನೆ ಚರ್ಚಿಸಿಯೇ ಅಂತಿಮ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದು.)

‍ಲೇಖಕರು avadhi

May 30, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತೆರಿಗೆ ಹೆಂಗೆಲ್ಲಾ ಕದೀತಾರೆ ಗೊತ್ತಾ?

ದುಡ್ಡು ಕೊಟ್ಟ ಮೇಲೆ ’ಬಿಲ್ಲು ಕೇಳಿ ಸ್ವಾಮಿ ’ ಎಂದು ನಾರಾಯಣ ಸ್ವಾಮಿ ಅವರು ಬರೆದ ಲೇಖನದ ಮುಂದಿನ ಭಾಗ ಎನ್ ನಾರಾಯಣಸ್ವಾಮಿ ತೆರಿಗೆ ಕದಿಯುವ...

ಬಿಲ್ಲು ಕೇಳಿ ಸ್ವಾಮಿ

ತೆರಿಗೆ ನಿಮಗೆ ಅರಿವಿಲ್ಲದಂತೆ ಪಾವತಿಸಿರುವಿರಿ ಅರಿವುಂಟೇ ಎನ್  ನಾರಾಯಣಸ್ವಾಮಿ ಹೀಗೆ ತೆರಿಗೆ ಎಂದರೆ ಬೆಚ್ಚಿ ಬೀಳುತ್ತೀರಲ್ಲವೇ?ಏಕೆಂದರೆ...

ಕಾಸು – ಕುಡಿಕೆ ಈಗ ಪುಸ್ತಕವಾಗಿ

ಅವಧಿಯಲ್ಲಿ ಅಂಕಣವಾಗಿ ಬರುತ್ತಿದ್ದ ಕಾಸು ಕುಡಿಕೆ ಈಗ ಪುಸ್ತಕವಾಗಿ! ಮೊಳೆಯಾರರಿಗೆ ಅವಧಿಯ ಅಭಿನಂದನೆಗಳು.. ಬರುತ್ತಿದೆ ಕಾಸು ಕುಡಿಕೆ! -...

2 ಪ್ರತಿಕ್ರಿಯೆಗಳು

  1. pandit M

    Good information. Had tough time reading kannada numbers. couldn’t control my laugh after hearing the plight of the guy who invested in FD for 3 years .. 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: