ಕಾಸು ಕುಡಿಕೆ: ಸೌಖ್ಯಾಳ ಯಕ್ಷಪ್ರಶ್ನೆ ಮತ್ತು ಜಾಹೀರಾತು ದುನಿಯಾ

ಕಾಕು-೨೧ -ಜಯದೇವ ಪ್ರಸಾದ ಮೊಳೆಯಾರ ‘Packaging is more important than the product’ – A popular IIM,A wisecrack. ಸರಕಿನಿಂದ ಜಾಸ್ತಿ ಅದರ ಹೊದಿಕೆ ಮುಖ್ಯ – ಒಂದು ಜನಪ್ರಿಯ IIM, ಅಹಮದಾಬಾದ್ ಚಾಟೋಕ್ತಿ. ಬೆಂಗಳೂರಿನಿಂದ ಸೌಖ್ಯಾ ಎಂಬವರು ಈ ಜಯದೇವ್‌ಸರ್ ‘ಕಾಸು-ಕುಡಿಕೆ’ ಅಂತ ಬೋರ್ಡ್ ಹಾಕ್ಕೊಂಡು ಊರೋರ್ಗೆಲ್ಲಾ ಬುದ್ಧಿ ಹೇಳ್ತಾರಲ್ಲಾ, ಸ್ವತಃ ಅವರಿಗೆ ಬುದ್ಧಿ ಎಷ್ಟಿದೆ ಅಂತ ನೋಡ್ಲೇ ಬೇಕು ಎಂಬ ತುಂಟತನದಿಂದ ಈ ಕೆಳ್ಗಿನ ಪ್ರಶ್ನೆಗಳ್ನ ಈ-ಮೈಲ್ ಮುಖಾಂತರ ಕಳ್ಸಿದ್ರು. ‘ಒಂದು ರೇಸ್ ಇದೆ ಅಂತ ತಿಳ್ಕೊಳ್ಳಿ. ಅದ್ರಲ್ಲಿ ನೀವು ಹುಚ್ಚುನಾಯಿ ಅಟ್ಟಿಸ್ಕೊಂಡು ಬಂದ ಹಂಗೆ ಓಡ್ತೀರಾ, ಅದೇನೋ ಚಿನ್ನಾನೋ, ಬೆಳ್ಳಿನೋ ಪದ್ಕಾ ಗೆಲ್ಲೋಕೆ. ಹಂಗೇ ಓಡೀ ಓಡೀ ಒಬ್ಬೊಬ್ರನ್ನೇ ಹಿಂದಕ್ಕೆ ಹಾಕಿ ರೇಸ್ನಲ್ಲಿ ಮುಂದಕ್ಕೆ ಬರ್ತೀರಾ. ಕೊನೆಗೊಮ್ಮೆ ಏದುಸಿರು ಬಿಡ್ತಾ ಸೆಕೆಂಡ್ ಪ್ಲೇಸ್‌ನಲ್ಲಿ ಇದ್ದೋನನ್ನೂ ಹಿಂದಕ್ಕೆ ಹಾಕಿ ಮುಂದಕ್ಕೆ ಬರ್ತೀರಾ. ಈಗ ಹೇಳಿ ನೀವು ಯಾವ ಪ್ಲೇಸ್‌ನಲ್ಲಿ ಪಂದ್ಯ ಗೆದ್ರಿ? ಕೂಡ್ಲೇ ಹೇಳಿ. ಹೆಚ್ಚು ಯೋಚ್ನೆ ಮಾಡ್ದೆ ಮನಸ್ಸಿಗೆ ಬಂದ ಉತ್ತರವನ್ನು ‘ತಟ್’ ಅಂತ ಹೇಳಿ. . . ಇದ್ಕೇನಾರ ನೀವು ಫಸ್ಟ್ ಪ್ಲೇಸ್ ಅಂತ ಉತ್ರ ಕೊಟ್ರೋ, ನಿಮ್ ಕತೆ ಮುಗ್ದಾಂಗೆ! ಯಾಕೆಂದ್ರೆ, ಸೆಕೆಂಡ್ ಪ್ಲೇಸ್ನೋನನ್ನ ಹಿಂದೆ ಹಾಕಿದ್ರೆ ನೀವು ಆತನ ಸೆಕೆಂಡ್ ಪ್ಲೇಸ್ ತೆಗೋತೀರಾ. ಫಸ್ಟ್ ಬರ್ಬೇಕಂದ್ರೆ ಫಸ್ಟ್ ಇದ್ದೋನ್ನ ಹಿಂದಕ್ಕೆ ಹಾಕ್ಬೇಕು. ಅದ್ಯಾಕೋ ಗೊತ್ತಿಲ್ಲ. ನೂರರಲ್ಲಿ ತೊಂಬತ್ತಕ್ಕೂ ಮೀರಿ ಜನ ಈ ಪ್ರಶ್ನೆಗೆ ‘ಫಸ್ಟ್’ ಅಂತಾನೇ ಉತ್ತರ ಕೊಡ್ತಾರೆ. ‘ಸೆಕೆಂಡ್’ ಅಂತ ಉತ್ತರ ಕೊಡುವವರು ಬಹಳ ವಿರಳ. ತಪ್ಪಾದ ಉತ್ತರ ಕೊಟ್ಟವರು ದಡ್ಡರೇನೂ ಅಲ್ಲ. ಮನುಷ್ಯನ ಮೆದುಳಿನ ಶಿಲ್ಪವೇ ಹಾಗಿದೆ. ಕೆಲವು ವಿಷಯಗಳನ್ನು ಮೆದುಳು ತಪ್ಪಾಗಿಯೇ ಗ್ರಹಿಸುತ್ತವೆ. ಅದಿರ್ಲಿ. ಈಗ ಸೌಖ್ಯಾ ಮೇಡಮ್ಮಿನ ಎರಡನೆಯ ಪ್ರಶ್ನೆ: ಅದೇ ರೇಸ್ನಲ್ಲಿ ಲಾಸ್ಟ್ ಇದ್ದೋನನ್ನ ನೀವು ಹಿಂದಕ್ಕೆ ಹಾಕಿ ಮುಂದೆ ಬಂದ್ರಿ ಅಂತಿಟ್ಕೊಳ್ಳಿ. ಈಗ ನೀವು ಪಂದ್ಯದಲ್ಲಿ ಯಾವ ಪ್ಲೇಸ್? ‘ಲಾಸ್ಟ್‌ನಿಂದ ಸೆಕೆಂಡ್’ ಅಂತ ಉತ್ರ ಕೊಟ್ರೋ ನಿಮ್ ಕತೆ ಗೋವಿಂದ! ಯಾಕೆಂದ್ರೆ, ಲಾಸ್ಟ್ ಇದ್ದೋನನ್ನ ನಿಮ್ಗೆ ಓವರ್ಟೇಕ್ ಮಾಡಿ ಹಿಂದಕ್ಕೆ ಹಾಕೋಕ್ಕೆ ಆಗೋದೇ ಇಲ್ಲ. ಅಲ್ವೇ? ಈ ಉತ್ತರ ಅರ್ಥಾ ಆಗ್ಲಿಕ್ಕೇ ಸುಮಾರು ಮಂಡೆ ಖರ್ಚು ಮಾಡ್ಬೇಕಾಗ್ತದೆ. ಖರ್ಚು ಮಾಡ್ತಾ ಇರಿ, all the best, ಆದ್ರೆ ವಾಸ್ತವ ಏನಂದ್ರೆ ನೂರಕ್ಕೆ ತೊಂಬತ್ತೊಂಬತ್ತು ಮಂದಿಯೂ ಕೂಡಾ ಈ ಪ್ರಶ್ನೆಗೆ ‘ಲಾಸ್ಟಿನಿಂದ ಸೆಕೆಂಡ್’ ಎಂಬ ಉತ್ತರವನ್ನೇ ಕೊಡ್ತಾರೆ. ಇದೂ ಕೂಡಾ ನಮ್ಮ ಮೆದುಳಿನ ಶಿಲ್ಪವನ್ನು ಹೊಂದಿಕೊಂಡಿರುವಂತಹ ಒಂದು ವಿಷಯ. · * * * * * ಇದೇ ರೀತಿ ಸೌಖ್ಯಾ ಮೇಡಮ್ಮು ಇನ್ನೂ ಮೂರು ಪ್ರಶ್ನೆಗಳನ್ನು ಕೇಳಿದ್ದರು. ಅದೆಲ್ಲಾ ಬದಿಗಿರಲಿ. ಆದರೆ, ಈ ವಿಷಯವನ್ನು ನಾನು ಯಾಕೆ ಹೇಳ್ತಾ ಇದ್ದೇನೆ ಅಂದ್ರೆ, ಒಂದು ವಾಸ್ತವ ಸ್ಥಿತಿಗೂ, ಮೆದುಳು ಅದನ್ನು ಗ್ರಹಿಸುವ ರೀತಿಗೂ ಕೆಲವೊಮ್ಮೆ ಭಾರೀ ವ್ಯತ್ಯಾಸವಿರುತ್ತದೆ. ‘ಆಪ್ಟಿಕಲ್ ಇಲ್ಯೂಶನ್’ ರೀತಿಯ ಹಲವಾರು ಚಿತ್ರಗಳನ್ನು ನೀವು ಪತ್ರಿಕೆಗಳಲ್ಲಿ ನೋಡಿರಬಹುದು. ಎಷ್ಟೋ ಶಬ್ದಗಳು ಕೂಡಾ ಕೇಳುವಾಗ ಇನ್ನು ಯಾವುದೋ ಬೇರೆಯೇ ಶಬ್ದಗಳಂತೆ ಕೇಳುತ್ತವೆ. ಅದೇ ರೀತಿಯಲ್ಲಿ ಎಷ್ಟೋ ವಿಷಯಗಳನ್ನು ಅರ್ಥ ಮಾಡಿಕೊಳ್ಳುವಾಗಲೂ ಬೇರೆ ಏನೋ ಒಂದು ರೀತಿಯಲ್ಲಿ ಅಪಾರ್ಥ ಮಾಡಿಕೊಳ್ಳುತ್ತೇವೆ. ಒಂದು ವಿಷಯವನ್ನು ಅಥವ ಹೇಳಿಕೆಯನ್ನು ಬಹಳಷ್ಟು ಜನರು ಒಂದು ನಿರ್ದಿಷ್ಟ ರೀತಿಯಲ್ಲಿ ತಪ್ಪಾಗಿ ಗ್ರಹಿಸುತ್ತಾರೆ ಅಂತ ಪೂರ್ವಭಾವಿಯಾಗಿ ಗೊತ್ತಿದ್ದರೆ ಅಂತಹ ತಪ್ಪುಗ್ರಹಿತ್ವವನ್ನೇ ಬಂಡವಾಳವಾಗಿ ಮಾಡಿಕೊಂಡು ಕೋಟಿಗಟ್ಟಲೆ ಸಂಪಾದಿಸುವ ಒಂದು ದೊಡ್ಡ ಉದ್ಯಮವೇ ಇದೆ. ಅದೇ ಜಾಹೀರಾತು ಉದ್ಯಮ. ಮನುಷ್ಯನ ಮೆದುಳಿನಲ್ಲಿ ಆಗುವಂತಹ ಇಂತಹ ತಪ್ಪು ಗ್ರಹಿಕೆಗಳನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವುದೇ ಇವರ ಮೂಲ ಮಂತ್ರ. ಜಾಹೀರಾತಿನವರು ಮನುಷ್ಯನ ಸೈಕಾಲಿಜಿಯನ್ನು ಅಧ್ಯಯನ ಮಾಡಿದಷ್ಟು ಯಾವುದೇ ಸೈಕಾಲಜಿಸ್ಟ್ ಮಾಡಿರಲಾರ. ಮನುಷ್ಯನ ಗ್ರಹಿಸುವ ಕ್ರಿಯೆ ಯಾವ ರೀತಿ ನಡೆಯುತ್ತದೆ, ಎಲ್ಲೆಲ್ಲಿ ಆತ ಎಡವುತ್ತಾನೆ, ಆತ ನಿರ್ಧಾರ ತೆಗೆದುಕೊಳ್ಳುವ ರೀತಿ ಹೇಗೆ? ಆತನಿಂದ ನಮ್ಮ ಸಾಮಾನು ಖರೀದಿಸಿಕೊಳ್ಳುವುದು ಹೇಗೆ? ಬರೇ ಇದೇ ಯೋಚನೆಯಲ್ಲೇ ಕಾರ್ಯಸಾಧಿಸುವ ಜಾಹೀರಾತುಗಾರರು ಹಲವಾರು ತಂತ್ರಗಳನ್ನು ಬಳಸುತ್ತಾರೆ, ಗ್ರಾಹಕರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು. ಅದರಲ್ಲಿ ಅತಿ ಮುಖ್ಯವಾದದ್ದು ಮನುಷ್ಯನ ಗ್ರಹಿಕೆಯಲ್ಲಿರುವ ತಪ್ಪುಗಳು. ನೀವೆಲ್ಲಾ ಓದಿರಬಹುದು ‘Highest NAV guaranteed in the last 7 years’ ಈ ‘೭ year ich’ ಯಾರಿಗೆ ಯಾವಾಗ ಅದು ಹೇಗೆ ಶುರುವಾಯಿತೋ ಗೊತ್ತಿಲ್ಲ. ಆದ್ರೆ ಮಾರುಕಟ್ಟೆಯಲ್ಲಿ ಈ ರೀತಿಯ ಹಲವಾರು ಸ್ಕೀಂಗಳು ಗರಿಷ್ಟ NAV ಯ ಗ್ಯಾರಂಟಿ ಎಂಬ ಮಂತ್ರ ಪಠಿಸಿ ಕೋಟ್ಯಾಂತರ ರೂಪಾಯಿಗಳನ್ನು ಕೂಡಿ ಹಾಕಿವೆ. ಗರಿಷ್ಟ NAV ಉತ್ತಮವಾಗಿರಬೇಕೆಂದೇನೂ ಇಲ್ಲವಲ್ಲ. ಗರಿಷ್ಟವು ಕಳಪೆಯೂ ಆಗಿರಬಹುದಲ್ಲವೇ? ಇರುವುದರಲ್ಲಿ ಗರಿಷ್ಟ ಅಂದರೆ ಕೇವಲ ೪% ಕೂಡಾ ಅದೀತು ಎಂಬ ಸರಳ ಸತ್ಯ ನಮಗೇಕೆ ಜ್ಞಾನೋದಯವಾಗುವುದಿಲ್ಲ? ಯಾಕೆಂದರೆ ನಮ್ಮ ಮೆದುಳು ‘ಗರಿಷ್ಟ’ ಎಂಬ ಪದವನ್ನು ಮಾತ್ರ ಗ್ರಹಿಸಿ ಅದರ ಸಂದರ್ಭವನ್ನು ಬಿಟ್ಟು ಬಿಡುತ್ತದೆ. ‘ಗರಿಷ್ಟ’ ಪದಕ್ಕೂ ಆ ಸ್ಕೀಂಗೂ ನಂಟು ಹಾಕಿ ಬಿಡುತ್ತದೆ. ಇದು ಮನುಷ್ಯನ ಗ್ರಹಿಕಾಕ್ರಮಕ್ಕೆ ಸಂಬಂಧಪಟ್ಟದ್ದು. ಕಳೆದ ನಾಲ್ಕು ವರ್ಷಗಳಲ್ಲಿ ಒಂದು ಫಂಡು ೪೦% ಪ್ರತಿಫಲ ಕೊಟ್ಟಿದೆ ಎಂದಾಕ್ಷಣ ಅದು ಮುಂದೆ ಕೂಡಾ ಹಾಗೆಯೇ ಕೊಡಬಹುದು ಎನ್ನಲು ಏನು ಆಧಾರವಿದೆ ಎಂದೇನೂ ನೀವು ಕೇಳುವುದಿಲ್ಲ. ‘ಧನ್ಯೋಸ್ಮಿ ಅನ್ನುತ್ತಾರೆ’ ಫಂಡ್ ಪ್ರಾಯೋಜಕರು. ಅವರಿಗೆ ಅದೇ ಬೇಕಾಗಿರುತ್ತದೆ. ನಾಲ್ಕು ವರ್ಷಗಳಿಂದ ನಡೆದುಕೊಂಡು ಬಂದದ್ದು ಮುಂದೆಯೂ ನಡೆದೀತು ಎನ್ನುವುದು ನಮ್ಮ ಪ್ಯಾಟ್ಟರ್ನ್ ಗುರುತಿಸುವ ಚಾಳಿಯಿಂದ ಬರುವಂತಹ ತೊಂದರೆ. ಮಾನವ ಯಾವತ್ತೂ ಎಲ್ಲಾ ವಿಷಯಗಳಲ್ಲೂ ಪ್ಯಾಟ್ಟರ್ನ್ ಗುರುತಿಸಲು ಪ್ರಯತ್ನಿಸುತ್ತಲೇ ಇರುತ್ತಾನೆ. ಈ ಸೈಕಾಲಜಿ ಅರಿತವರು ಈ ರೀತಿ ಚಾರಿತ್ರಿಕ ಸಾಧನೆಗಳ ಕೋಷ್ಟಕ ಕೊಟ್ಟು ಮನುಷ್ಯನ ಗ್ರಹಿಕಾಕ್ರಮದ ಲಾಭ ಪಡೆದು ಕೋಟಿಗಟ್ಟಲೆ ಬಾಚುತ್ತಾರೆ. ಜನ ದುಡ್ಡು ಹೂಡುತ್ತಲೇ ಹೋಗುತ್ತಾರೆ, ಶಾಸನ ವಿಧಿಸಿದ ಎಚ್ಚರಿಕೆ ಅಲ್ಲೇ ಬದಿಯಲ್ಲೇ ಬರೆದಿದ್ದರೂ ಕೂಡ ಅದನ್ನು ಸಾರಾಸಗಟಾಗಿ ತಳ್ಳಿಹಾಕುತ್ತಾರೆ. ಆದ್ದರಿಂದಲೇ ಇದು ಇಂದಿಗೂ ಪ್ರಚಾರದ ಅತ್ಯಂತ ಪರಿಣಾಮಕಾರಿ ತಂತ್ರ. ನೀವು ಯಾವುದಾದರೂ ಕನ್ನಡ ಪಂಡಿತರ ಕಾವ್ಯ ಮೀಮಾಂಸೆ ಕ್ಲಾಸಿನಲ್ಲಿ ಕುಳಿತರೆ (ನಾನು ಕುಳಿತಿಲ್ಲ, ಬಿಡಿ) ಅವರು ಕಾವ್ಯದ ‘ಶಬ್ಧಾರ್ಥ’ ಹಾಗೂ ‘ಧ್ವನ್ಯಾರ್ಥ’ ಅಂತೆಲ್ಲಾ ನಾನ್-ಸ್ಟಾಪ್ ಕೊರೆಯುತ್ತಾರೆ. ಬೆಲ್ಲು ಹೊಡದಾಗ ಬೇರೆ ದಾರಿ ಕಾಣದೆ ನಿಲ್ಲಿಸುತ್ತಾರೆ. ಒಂದು ಶಬ್ದಕ್ಕೆ ನಿಘಂಟಿನ ಪ್ರಕಾರದ ಶಬ್ಧಾರ್ಥ ಅಲ್ಲದೆ ಅದು ಧ್ವನಿಸುವ ಇನ್ನೊಂದು ಬೇರೆಯೇ ಆದ ಧ್ವನ್ಯಾರ್ಥವಿರುತ್ತದೆ ಅಂತೆಲ್ಲಾ ಹೇಳುತ್ತಾರೆ. ಉದಾ: ‘ನನಗೆ ಹಸಿವಾಗುತ್ತದೆ’ ಎಂದರೆ ಹಸಿವಾಗುತ್ತದೆ ಎಂದಷ್ಟೇ ಶಬ್ದಾರ್ಥ. ಆದರೆ ‘ತಿನ್ನಲು ಏನಾದರು ಬೇಕು’ ಅನ್ನುವುದು ಅದರ ಧ್ವನ್ಯಾರ್ಥ. ಮಾಸಿಕ ಆದಾಯದ ‘ಮಂಥ್ಲಿ ಇನ್‌ಕಮ್ ಪ್ಲಾನ್’ ಎಂಬ ನಾಮಾಂಕಿತ ಫಂಡುಗಳು ಪ್ರತಿ ತಿಂಗಳೂ ನಿಮಗೆ ಆದಾಯವನ್ನು ಕೊಡುತ್ತದೆ ಎಂಬ ಧ್ವನ್ಯಾರ್ಥವನ್ನು ಪೂರಕ ವಿಶುವಲ್‌ಗಳ ಜೊತೆಗೆ ನೀಡುತ್ತವೆ. ಆದರೆ, ವಾಸ್ತವದಲ್ಲಿ ಅವಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಆ ವಿಚಾರ ನೀವು ಕೇಳಿಲ್ಲ, ಅವರು ಹೇಳಿಲ್ಲ. ನಿರಂತರವಾಗಿ ಆದಾಯವು ಖಂಡಿತವಾಗಿ ಬರುತ್ತದೆ ಎಂದು ನೀವು ಅಸ್ಸ್ಯೂಮ್ ಮಾಡಿದ್ದೀರಿ. ಅದು ನಿಮ್ಮ ತಪ್ಪು. ನಿಮ್ಮಿಂದ ಅಂತಹ ತಪ್ಪನ್ನು ಮಾಡಿಸಲಾಗುತ್ತದೆ. ನನ್ನದು ‘ಟ್ರಿಪಲ್ ಟಾಕ್ಸ್ ಬೆನಿಫಿಟ್’ ಎಂದು ಒಂದು ಫಂಡು ಚೀರಿ ಹೇಳುತ್ತದೆ. ‘ಆಹಾ, ಮೂರು ಮೂರು ಬಗೆಯ ಬೆನಿಫಿಟ್ಟ್..!!’ ಎಂದು ಬಾಯಿ ತೆರೆದು, ಪರ್ಸ್ ತೆರೆದು ಇದ್ದದ್ದನ್ನೆಲ್ಲ ಸುರಿಯುತ್ತೀರಿ. ಬಳಿಕ ತಿಳಿಯುತ್ತದೆ, ಅಂತಹ ಟ್ರಿಪಲ್ ಬೆನಿಫಿಟ್ ಆ ವರ್ಗದ ಎಲ್ಲಾ ಫಂಡುಗಳಲ್ಲೂ ಸಿಗುತ್ತದೆ, ಆ ಸ್ಕೀಂನಲ್ಲಿ ಮಾತ್ರವೇನಲ್ಲ. ಅಷ್ಟೇ ಅಲ್ಲದೆ, ಅಸಲಿಗೆ ಆ ಸ್ಕೀಮ್‌ನಲ್ಲಿ ರಿಟರ್ನ್ ಕಡಿಮೆಯೇ ಆಗಿರುತ್ತದೆ. ‘ನೋ ಫಂಡ್ ಅಲೋಕೇಶನ್ ಚಾರ್ಜ್’ ಅನ್ನುತ್ತದೆ ಇನ್ನೊಂದು ಜಾಹೀರಾತು. ಆ ಚಾರ್ಜನ್ನು ಇನ್ನೆಲ್ಲೋ ಸೇರಿಸಿ ಬೇರೆ ಹೆಸರಿನಡಿ ಕಸಿದುಕೊಳ್ಳುತ್ತಿಲ್ಲ ತಾನೆ? ೫೦%-೧೦೦% ಡಿವಿಡೆಂಡುಗಳ ಕತೆ ನಾನು ಈ ಮೊದಲೇ ಹೇಳಿದ್ದೇನೆ. ಅವು ಮುಖಬೆಲೆಯ ಮೇಲೆ ಎಂದು ಜಾಹೀರಾತು ಎಲ್ಲೂ ಹೇಳುವುದಿಲ್ಲ. ನಿಮ್ಮ ಇಂದಿನ ಹೂಡಿಕೆಯ ಮೇಲೆ ಅಷ್ಟೊಂದು ಪ್ರತಿಫಲ ಬರುತ್ತದೆ ಎಂಬ ಧ್ಯನ್ಯಾರ್ಥಕ್ಕೆ ಒಳಗಾದರೆ ಅದು ಅವರ ತಪ್ಪಲ್ಲ. ನೆನಪಿರಲಿ, ಕಾವ್ಯದ ಧ್ವನ್ಯಾರ್ಥ ಲೋಕವನ್ನು ಜಾಹೀರಾತು ಪ್ರಪಂಚದವರು ಅರಗಿಸಿಕೊಂಡಷ್ಟು ಯಾವ ಕನ್ನಡ ಪಂಡಿತನೂ ಕಲಿತುಕೊಂಡಿರಲಾರ. ನಾವೂ ನಮ್ಮ ಉಳಿವಿಗಾಗಿ ಇನ್ನು ಮುಂದಾದರೂ ಕಲಿತುಕೊಳ್ಳುವುದೊಳ್ಳೆಯದು. ಹಲವಾರು ವಿಷಯಗಳಲ್ಲಿ ಪುರುಷರಿಗೂ ಮಹಿಳೆಯರಿಗೂ ವ್ಯತ್ಯಾಸ ಇರುತ್ತದೆ. ಸರ್ವೇ ಸಾಮಾನ್ಯವಾಗಿ ಧಿರಿಸು, ಬಟ್ಟೆಬರೆ, ಪಾದರಕ್ಷೆ, ಬ್ಯಾಗು, ಕೊಡೆ, ಇತ್ಯಾದಿ ವಿಷಯಗಳಲ್ಲಿ ಹಾಗೂ ಅವನ್ನು ಅದೇ ರೀತಿಯಲ್ಲಿ ಪ್ರಚಾರ ಕೂಡಾ ಮಾಡಲಾಗುತ್ತದೆ. ಲೇಡೀಸ್ ಡ್ರೆಸ್, ಲೇಡೀಸ್ ಬ್ಯಾಗ್, ಲೇಡೀಸ್ ಅಂಬ್ರೆಲ್ಲಾ. . . , ಇತ್ಯಾದಿ. ಇದು ಈಗ ವಿತ್ತ ಕ್ಷೇತ್ರವನ್ನೂ ಪ್ರವೇಶಿಸಿದೆ. ಮಹಿಳೆಯರಿಗಾಗಿ ಪ್ರತ್ಯೇಕವಾದ ಮ್ಯೂಚುವಲ್ ಫಂಡ್ ಹೂಡಿಕೆ ಇದೆ ಅಂದರೆ ನಂಬುತ್ತೀರಾ? ಆದರೆ ಇದೆ. ಮಹಿಳೆಯರಿಗಾಗಿ ಸ್ಪೆಶಲ್ ಫಂಡ್ ಎಂಬ ಜಾಹೀರಾತಿನೊಂದಿಗೆ ಬರುತ್ತಾ ಕೋಟಿ ಕೋಟಿ ಬಾಚಿ ಹೋಗುತ್ತದೆ. ಎತ್ತಣ ಕೋಗಿಲೆ ಎತ್ತಣ ಮಾಮರವಯ್ಯ? ಲಿಂಗಕ್ಕೂ ಹೂಡಿಕೆಗೂ ಯಾವ ಸಂಬಂಧವಯ್ಯ? ಬಲ್ಲಿದರು ತಿಳಿಯಪಡಿಸಬೇಕೆಂದು ವಿನಂತಿ. ಈ ರೀತಿ ‘ಪುರುಷರಿಗೆ ಸರಿಸಾಟಿಯಾಗಿ ನಿಲ್ಲುವ ಆಧುನಿಕ ದಿಟ್ಟ ಮಹಿಳೆಗೆ’ ಎಂದೆಲ್ಲ ಹೇಳಿ ಅವರ ‘ಈಗೋ’ ಅಥವ ‘ಅಹಂ’ಗೆ ಮಸಾಜ್ ಮಾಡಿದರೆ ಅವರ ಪರ್ಸ್ ತೆರೆಯುತ್ತೆ. ಅದೇ ರೀತಿ ಇದು ನಿಮ್ಮಂತಹ ‘High Networth Individual’ ಅಥವ ಶ್ರೀಮಂತ ಗ್ರಾಹಕರಿಗಾಗಿ ಮಾತ್ರವೇ ಪ್ರತ್ಯೇಕವಾಗಿ ತಯಾರಿಸಿದ ವಿಶೇಷ ಹೂಡಿಕೆ ಎಂದಾಕ್ಷಣ ಪೂರಿಯಂತೆ ಉಬ್ಬದ ಗಂಡಸರಾರು? ನಿಮ್ಮ ಮುದ್ದಿನ ಮಕ್ಕಳಿಗಾಗಿ ಈ ಸ್ಕೀಂ ಎಂದಾಕ್ಷಣ ಹೆತ್ತವರು ಬೇಸಗೆಯಲ್ಲಿ ಹೊರಗಿಟ್ಟ ಐಸ್ಕ್ರೀಮಿನಂತೆ ಕರಗಿ ನೀರಾಗುತ್ತಾರೆ. ವಾಸ್ತವದಲ್ಲಿ, ದುಡ್ಡು ಇದಾವುದನ್ನೂ ಗಮನಿಸುವುದಿಲ್ಲ. ಪುರುಷ, ಮಹಿಳೆ, ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು. . . , ಎಲ್ಲಿಂದ ಬಂದರೂ, ಯಾರಿಗಾಗಿ ಬಂದರೂ, ಯಾಕಾಗಿ ಬಂದರೂ, ದುಡ್ಡು ದುಡ್ಡೇ. (ಅರ್ಥಶಾಸ್ತ್ರದಲ್ಲಿ ಇದನ್ನು Fungibility ಅನ್ನುತ್ತಾರೆ. ಕನ್ನಡದಲ್ಲಿ ಅದಕ್ಕೆ ಏನನ್ನುತ್ತಾರೋ ಗೊತ್ತಿಲ್ಲ. ಗೊತ್ತಿದ್ದವರು ದಯವಿಟ್ಟು ತಿಳಿಸಿ). ದುಡ್ಡು ದುಡ್ಡೇ ಆದ್ದರಿಂದ ಹೂಡಿಕೆ ಒಂದೇ. ಕೋಯೀ ಫರಖ್ ನಹೀ ಪಡ್ತಾ!! ಆದರೂ ಈ ಎಲ್ಲಾ ಭಾವನಾತ್ಮಕ ಪ್ರಚಾರಗಳು ಮಾರುಕಟ್ಟೆಗಿಳಿದು ದುಡ್ಡು ಬಾಚುವುದು ಮಾತ್ರ ಸತ್ಯ. ನಾವು, ನೀವು, ಅವರು, ಎಲ್ಲರೂ ಇಂತಹ ಆಧುನಿಕ ಮೌಢ್ಯಕ್ಕೆ ಮಾರುಹೋಗುವ ಕಟ್ಟೆಯೇ ಇಂದಿನ ಮಾರುಕಟ್ಟೆ!]]>

‍ಲೇಖಕರು avadhi

August 3, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತೆರಿಗೆ ಹೆಂಗೆಲ್ಲಾ ಕದೀತಾರೆ ಗೊತ್ತಾ?

ದುಡ್ಡು ಕೊಟ್ಟ ಮೇಲೆ ’ಬಿಲ್ಲು ಕೇಳಿ ಸ್ವಾಮಿ ’ ಎಂದು ನಾರಾಯಣ ಸ್ವಾಮಿ ಅವರು ಬರೆದ ಲೇಖನದ ಮುಂದಿನ ಭಾಗ ಎನ್ ನಾರಾಯಣಸ್ವಾಮಿ ತೆರಿಗೆ ಕದಿಯುವ...

ಬಿಲ್ಲು ಕೇಳಿ ಸ್ವಾಮಿ

ತೆರಿಗೆ ನಿಮಗೆ ಅರಿವಿಲ್ಲದಂತೆ ಪಾವತಿಸಿರುವಿರಿ ಅರಿವುಂಟೇ ಎನ್  ನಾರಾಯಣಸ್ವಾಮಿ ಹೀಗೆ ತೆರಿಗೆ ಎಂದರೆ ಬೆಚ್ಚಿ ಬೀಳುತ್ತೀರಲ್ಲವೇ?ಏಕೆಂದರೆ...

ಕಾಸು – ಕುಡಿಕೆ ಈಗ ಪುಸ್ತಕವಾಗಿ

ಅವಧಿಯಲ್ಲಿ ಅಂಕಣವಾಗಿ ಬರುತ್ತಿದ್ದ ಕಾಸು ಕುಡಿಕೆ ಈಗ ಪುಸ್ತಕವಾಗಿ! ಮೊಳೆಯಾರರಿಗೆ ಅವಧಿಯ ಅಭಿನಂದನೆಗಳು.. ಬರುತ್ತಿದೆ ಕಾಸು ಕುಡಿಕೆ! -...

3 ಪ್ರತಿಕ್ರಿಯೆಗಳು

 1. prajwal pinto

  Excellent work . Great articles.Would you please write about Students area of investments.

  ಪ್ರತಿಕ್ರಿಯೆ
 2. Mohammad Naseer

  Sir, thank you for your outlook on Kasu Kudike. Please write on all kind of Plastic cards of transaction.
  Thank you.

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ simha s nCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: