ಕಿಂಡಲ್.. ಕಿಂಡಲ್..

M S Sriram

ಎಂ ಎಸ್ ಶ್ರೀರಾಮ್ 

ಪ್ರೀತಿಯ Jogi

ಈ ದಿನ Jogi ನೀವು ಕನ್ನಡಲ್ಲಿ ಕಿಂಡಲ್ ಪುಸ್ತಕ ಸಿಗಬೇಕು ಅನ್ನುವ ಚರ್ಚೆಯನ್ನು ಮುಂದಿಟ್ಟಿದ್ದೀರಿ. ಇಲ್ಲಿ ನಿಮ್ಮ ವಾದವನ್ನು ನಾವು ಗಂಭೀರವಾಗಿ ಗಮನಿಸಿ ಚರ್ಚೆಗೆ ಒಡ್ಢಬೇಕು.

ಬೇಳೂರು ಸುದರ್ಶನ ಮತ್ತು ಗೆಳೆಯರು ಪ್ರಾರಂಭಿಸಿರುವ ಅಹವಾಲಿಗೆ ನಾನೂ ಸಹಿ ಹಾಕಿದ್ದೇನೆ. ಆದರೆ ಆ ಚರ್ಚೆ ಕಿಂಡಲ್ ಬಗ್ಗೆ ಅಲ್ಲ ಎನ್ನುವುದನ್ನು ಗಮನಿಸೋಣ. ಕಿಂಡಲ್ ಆ ಚರ್ಚೆಗೆ ಪ್ರಚೋದನೆ ನೀಡಿದೆಯಾದರೂ, ಈ ಅಹವಾಲು ಮತ್ತು ಬೇಡಿಕೆ ಆಧುನಿಕ ತಂತ್ರಜ್ಞಾನ ಹೊತ್ತ ಯಂತ್ರಗಳಲ್ಲಿ ಅಳವಡಿಸುವ ತಂತ್ರಾಂಶ ಕನ್ನಡ ಮತ್ತು ಭಾರತೀಯ ಭಾಷಾಪರವಾಗಿ ಕೂಡಾ ಇರಬೇಕು ಎನ್ನುವುದೇ ಆಗಿದೆ.

amazon_kindle_iconಅಮೆಜಾನ್ ಆಗಲೀ, ಕಿಂಡಲ್ ಆಗಲೀ ವ್ಯಾಪಾರೀ ಸಂಸ್ಥೆಗಳು. ಅವುಗಳ ಜೊತೆಗೆ ವ್ಯಾಪಾರೀ ರೀತಿಯಿಂದಲೇ ನಡೆದುಕೊಳ್ಳಬೇಕು. ಇದಕ್ಕೂ ಕನ್ನಡ ಪ್ರೀತಿಗೂ ತಾಳೆಹಾಕುವುದು ಸರಿಯಾದ ಮಾರ್ಗವಲ್ಲ. ನಾವು ಪ್ರಶ್ನಿಸಿಕೊಳ್ಳಬೇಕಾದ್ದು ಈ ಗಣಕ ತಂತ್ರದ ಲೋಕದಲ್ಲಿ ಕನ್ನಡಕ್ಕೆ ಸ್ಥಾನ ಬೇಕೇ ಎನ್ನುವುದನ್ನಷ್ಟೇ.

ಲಾಭಬಡುಕ ವ್ಯಾಪಾರಿಯನ್ನು ನಾವು ಒಳಗೆ ಬಿಟ್ಟುಕೊಳ್ಳಬಾರದು ಎಂದು ನೀವು ಹೇಳುತ್ತೀರಿ. ಆದರೆ ಜಾಗತೀಕರಣವಾಗಿರುವ ಈ ಜಗತ್ತಿನಲ್ಲಿ ನಾವು ಎಷ್ಟು ದಿನ ಹುತ್ತ ಕಟ್ಟಿ ಕೂರಲು ಸಾಧ್ಯ? ಕಣ್ಮುಚ್ಚಿ ಆ ವಾಸ್ತವವು ಇಲ್ಲ ಎನ್ನುವುದಕ್ಕಿಂತ ಕಣ್ಬಿಟ್ಟು ಅದನ್ನು ದಿಟ್ಟಿಸಿನೋಡುವುದು ಒಳಿತಲ್ಲವೇ? ಗಾಂಧೀಬಜಾರಿನ ವಾಣಿವಿಲಾಸ ರಸ್ತೆಯಲ್ಲಿ ಕೆ.ಎಫ್.ಸಿ ಒಂದು ದೊಡ್ಡ ಅಂಗಡಿ ಬಂತು. ಮೂಲೆಯಲ್ಲಿ ಮೆಕ್ ಡೊನಾಲ್ಡ್ ಬಂತು. ಆದರೆ ನಿಮ್ಮ ಪ್ರೀತಿಯ ದೋಸೆಯಂಗಡಿ ಎಸ್.ಎಲ್.ವಿ.ಯ ವ್ಯಾಪಾರದಲ್ಲಿ ಯಾವ ತೊಂದರೆಯೂ ಆಗಿಲ್ಲ. ಕಿಂಡಲ್ ನಿಂದ ಕನ್ನಡ ಓದಿಗೆ ಅಪಾಯವಿಲ್ಲ. ಹಾಗೇ ಯಾರೂ – ಕಂಬತ್ತಳ್ಳಿ, ಅಕ್ಷತಾ, ಪಲ್ಲವ – ಯಾರೂ ಮಾರುಕಟ್ಟೆಯಿಂದ ಮುಕ್ತರೂ ಅಲ್ಲ. ಕನ್ನಡ ಪ್ರೀತಿಯೇ ಮುಖ್ಯವಾದರೆ ತಿರಮಲೇಶರ ಕವಿತೆಗಳಿಗೆ ಪ್ರಕಾಶಕರು ಸಿಗುವುದು ಕಷ್ಟವಾಗುತ್ತಿರಲಿಲ್ಲ. ತಿರುಮಲೇಶರ ಬಳಿ 15 ಪುಸ್ತಕಗಳ ಕರಡು ಸಿದ್ದವಿದೆ. ಕನ್ನಡ ಪ್ರೀತಿಯಿದ್ದವರು ಪ್ರಕಟಿಸಲಿ. ಅರ್ಥಾತ್ ತಿರುಮಲೇಶರ ಕೆಲವು ಬರಹಗಳಿಗೆ ಮಾರುಕಟ್ಟೆ ಪ್ರತಿಸ್ಪಂದಿಸುವುದಿಲ್ಲ ಅದು ಮಾರುಕಟ್ಟೆಯ ಧರ್ಮ. ಅದಕ್ಕೂ ಕಿಂಡಲ್ ಗೂ ಸಂಬಂಧವೇ ಇಲ್ಲ.

ಇನ್ನು ನಿಮ್ಮ ಹತ್ತು ತಕರಾರುಗಳು-

1. ಕಿಂಡಲ್ ನಲ್ಲಿ ಕನ್ನಡ ಪುಸ್ತಕ ಮಾರುವುದು ಕನ್ನಡ ಪ್ರೇಮವಲ್ಲ. ನಿಜ. ಆದರೆ ಕಿಂಡಲ್ ಅಥವಾ ಈ ಥರದ ಮಾಧ್ಯಮಗಳನ್ನು ಬಹಿಷ್ಕರಿಸುವುದರಿಂದ ಕನ್ನಡವನ್ನು ಕಾಪಾಡಿದಂತೆ ಆಗುವುದೂ ಇಲ್ಲ.

2. ಕಿಂಡಲ್ ಕನ್ನಡವನ್ನು ಪುರಸ್ಕರಿಸಿದ ಮಾತ್ರಕ್ಕೆ ಕನ್ನಡಕ್ಕೆ ಗೌರವವೇನೂ ಸಿಗೋಲ್ಲ. ಇದು ಖಂಡಿತವಾಗಿಯೂ ಒಪ್ಪಬೇಕಾದ ವಿಷಯ. ಇದು ಕನ್ನಡದ ಗೌರವದ ವಿಷಯವಲ್ಲವೇ ಅಲ್ಲ. ಇದು ಕನ್ನಡಕ್ಕೆ ಸಿಗಬೇಕಾದ ಮತ್ತೊಂದು ಪರಿಕರ. ಬೇಕಿದ್ದರೆ ಉಪಯೋಗಿಸಲು ಆಯ್ಕೆಯ ಹಕ್ಕನ್ನು ಕೊಡುವ ಪರಿಕರ.

3. ಇ-ಬುಕ್ ಅಂದರೆ ಕಿಂಡಲ್ ಅಲ್ಲ. ಬೇಳೂರರ ಒತ್ತಾಯ ಎಲ್ಲವೂ ನಮಗೆ ಮುಕ್ತವಾಗಿರಬೇಕು ಎನ್ನುವುದಷ್ಟೇ

4. ಅಮೆಝಾನ್ ಕೇವಲ ಮಾರಾಟದಲ್ಲಿ ಮುಂದಿರುವವರ ಪುಸ್ತಕಗಳನ್ನೇ ತೆಗೆದುಕೊಳ್ಳುತ್ತದೆನ್ನುವುದು ಸರಿಯಾದ ಮಾತಲ್ಲ. ಆದರೆ ಅಮೆಜಾನ್ ಯಾರಿಗೂ ವಿಶೇಷ ಪ್ರೀತಿ-ಸವಲತ್ತುಗಳನ್ನು ತೋರಿಸದಿರುವ ವ್ಯಾಪಾರಿ ಸಂಸ್ಥೆ. ಕಿಂಡಲ್ ಉಪಯೋಗಿಸುವ ತಂತ್ರಜ್ಞಾನದಿಂದಾಗಿ ಅಪ್ರಕಟಿತ ಪುಸ್ತಕಗಳೂ ಅಲ್ಲಿ ಬೆಳಕು ಕಾಣುವ ಸಾಧ್ಯತೆಯಿದೆ. ಯಾಕೆಂದರೆ ಅಲ್ಲಿರುವ ತಂತ್ರಜ್ಞಾನ – ಈಗಾಗಲೇ ಬರೆದಿರುವುದನ್ನು ತಂತ್ರಾಂಶದ ಮೂಲಕ ಇ-ಬುಕ್ ಆಗಿ ಪರಿವರ್ತಿಸುವದೇ ಆಗಿದೆ. ಹೀಗಾಗಿ ಮುದ್ರಣಕ್ಕಾಗುವ ಖರ್ಚಿಲ್ಲ. ಈ ವ್ಯಾಪಾರಿ ನಿಯಮದಿಂದಾಗಿ ಕಿಂಡಲ್ ಯಾವುದೇ ಪುಸ್ತಕವನ್ನು (ಅದನ್ನು ಇ-ಬುಕ್ ಆಗಿಸುವ ತಂತ್ರಾಂಶವಿದ್ದಲ್ಲಿ) ಪ್ರಕಟಿಸಬಹುದು. ತಿರಮಲೇಶರ ಅಪ್ರಕಟಿದ ಹಸ್ತಪ್ರತಿಗಳು – ಈ ತಂತ್ರಾಂಶವಿದ್ದಲ್ಲಿ – ಇ-ಬುಕ್ ಆಗಿ ಕಾಣಿಸುವ ಸಾಧ್ಯತೆ ಸಪ್ನಾದ ಕಪಾಟಿನಲ್ಲಿ ಕಾಣಿಸುವ ಸಾಧ್ಯತೆಗಿಂತ ಹೆಚ್ಚಿದೆ.
cover akshaya kavya5. ಅಮೆಜಾನ್ ಮಾಲೀಕನಿಗೆ ಕನ್ನಡ ಗೊತ್ತಿಲ್ಲ. ನಿತಿನ್ ಷಾಗೆ ಎಷ್ಟು ಚೆನ್ನಾಗಿ ಕನ್ನಡ ಬರುತ್ತೋ ಗೊತ್ತಿಲ್ಲ. ವ್ಯಾಪಾರಿಗಳಿಗೆ ಪುಸ್ತಕದ ಮೌಲ್ಯ ತಿಳಿಯಬೇಕಿಲ್ಲ. ಕಿಮ್ಮತ್ತು ತಿಳಿದಿರುವುದೇ ವ್ಯಾಪಾರೀ ಧರ್ಮ. ಇಲ್ಲದಿದ್ದರೆ ಎಲ್ಲರೂ ಕವಿತೆಯ ಪುಸ್ತಕಗಳನ್ನು ಪ್ರಕಟಿಸುವವರಾಗಿರುತ್ತಿದ್ದರು. ಮೌಲ್ಯ ತಿಳಿಯದ ವ್ಯಾಪಾರಿಗಳನ್ನು ತಡೆಯುವುದರಿಂದ ಮೌಲ್ಯ ತಿಳಿದವರು ಪುಸ್ತಕ ಪ್ರಕಟಿಸುತ್ತಾರೆಂಬ ಖಾತ್ರಿಯಿಲ್ಲ.
6. ಕಿಂಡಲ್ ಗೆ ಸವಾಲಾಗಿ ಅನೇಕ ಇ-ಬುಕ್ ತಯಾರಕರು ಬರಬೇಕು. ಅಹರ್ನಿಶಿಗೂ – ಪಲ್ಲವ ಪ್ರಕಾಶನಕ್ಕೂ ಅವರ ಇ-ಬುಕ್ ಪ್ರಕಟಿಸುವ ಮಾರ್ಗಗಳಿರಬೇಕು. ಇದು ಮುಕ್ತ ತಂತ್ರಜ್ಞಾನದಿಂದ ಆಗುತ್ತದೆ. ಆದ್ದರಿಂದ ಹಕ್ಕೊತ್ತಾಯ ಕಿಂಡಲ್ ಗಾಗಿ ಅಲ್ಲ, ಮುಕ್ತ ತಂತ್ರಜ್ಞಾನಕ್ಕೆ ಎಂಬುದನ್ನು ನೀವು ಮನಗಾಣಬೇಕು.

7. ಪ್ರೀಮಿಯರ್ ಮುಚ್ಚಿದೆ, ಜೋಗಿ. ಶಾನಭಾಗ್ ತಮ್ಮ ವ್ಯಾಪಾರ ಮುಂದುವರೆಸಲು ತಯಾರಿರಲಿಲ್ಲ, ಹೀಗಾಗಿ ಮುಚ್ಚಿದೆ. ಫ್ಲಿಪ್ ಕಾರ್ಟ್ ಗೆ ಪ್ರೀಮಿಯರ್ ಮುಚ್ಚಿಸಿದ ಗೌರವ ನೀಡಬೇಡಿ. ಫ್ಲಿಪ್ ಕಾರ್ಟ್ ಫ್ಲಾಪ್ ಕಾರ್ಟ್ ಆಗಬಹುದಾದ ಲಕ್ಷಣಗಳು ಕಾಣುತ್ತಿವೆ. ಯಾವುದೂ ಶಾಶ್ವತವಲ್ಲ. ಆದರೆ ಅದೇ ಪ್ರಾಂತದಲ್ಲಿ ಕೃಷ್ಣೇಗೌಡರು ದೊಡ್ಡ ಪುಸ್ತಕದಂಗಡಿಯನ್ನು ತೆರೆದು – ಕನ್ನಡ ಪುಸ್ತಕಗಳನ್ನು ಮಾರುತ್ತಿದ್ದಾರೆ. ನೆನಪು ಮಾಡಿಕೊಳ್ಳಿ.

8. ಕಿಂಡಲ್ ನಲ್ಲಿ ಪ್ರಕಟಿಸುವುದು ಹೆಮ್ಮೆಯ ವಿಷಯವೇನೂ ಅಲ್ಲ. ಕನ್ನಡ ಪ್ರೀತಿಯೂ ಅಲ್ಲ. ನಿಜ. ನಮಗೆ ಬೇಕಿದ್ದರೆ ಪ್ರಕಟಿಸಬೇಕು ಇಲ್ಲವಾದರೆ ಇಲ್ಲ… ನನ್ನ ಪ್ರೀತಿಯ ಬರಹಗಾರ ಮಿಲನ್ ಕುಂದೇರಾನ ಒಂದೂ ಪುಸ್ತಕ ಕಿಂಡಲ್ ನಲ್ಲಿ ಸಿಗೋದಿಲ್ಲ. ಅದು ಅವನ ನಿಲುವು. ಆ ನಿಲುವಿನ ಬಗ್ಗೆ ನನಗೆ ಅವನ ಮೇಲೆ ಗೌರವವಿದೆ. ಪುಸ್ತಕವನ್ನು ಆ ಮಾಧ್ಯಮದಲ್ಲಿ ಓದಲೇ ಬಾರದು ಎಂದು ಯಾರಾದರೂ ನಿಲುವು ತೆಗೆದುಕೊಂಡರೆ ಆ ನಿಲುವನ್ನು ನಾನು ಗೌರವಿಸುತ್ತೇನೆ. ಹಾಗೆ ನಿಮ್ಮ ನಿಲುವಿದ್ದರೆ ನನ್ನ ತಕರಾರಿಲ್ಲ.

no to kindle9. ಕನ್ನಡದಲ್ಲಿ ಗೌರವದಿಂದ ಸಂಭಾವನೆ ಕೊಡುವ ಪರಿಪಾಠವನ್ನು ನಾನು ಗಮನಿಸಿದ್ದೇನೆ. ಕಂಬತ್ತಳ್ಳಿ, ನಿತಿನ್ ಎಲ್ಲರೂ ಪುಸ್ತಕವ್ಯಾಪಾರದ ಸಾಮಾನ್ಯ ಪರಿಪಾಠಕ್ಕೆ ವಿರುದ್ಧವಾಗಿ ಪುಸ್ತಕ ಪ್ರಕಟಿಸಿದ ಕೂಡಲೇ ಸಂಭಾವನೆ ನೀಡುತ್ತಾರೆ. ಇಪ್ಪತ್ತೈದು ಪ್ರತಿಗಳನ್ನೂ ನೀಡುತ್ತಾರೆ. ಆದರೆ ಅಂತರ ರಾಷ್ಟ್ರೀಯ – ಮತ್ತು ಇತರ ಭಾಷೆಗಳ ಪರಿಪಾಠ ಪುಸ್ತಕ ಮಾರಾಟವಾದ ಮೊಬಲಗಿನ ಒಂದು ಭಾಗ (ಶೇಕಡ 5 ರಿಂದ 15) ಮತ್ತು ಐದು ಪ್ರತಿಗಳನ್ನು ಕೊಡುವುದೇ ಆಗಿದೆ. (ಇಂಗ್ಲೀಷಿನಲ್ಲಿ ನಾಲ್ಕು ತಾಂತ್ರಿಕ ಪುಸ್ತಕಗಳನ್ನು ಪ್ರಕಟಿಸಿರುವ ಅನುಭವದಿಂದ ಹೇಳುತ್ತಿದ್ದೇನೆ). ಈ ಪರಿಪಾಠದ ಆಯ್ಕೆ ನಮ್ಮದು. ಅದು ಒಳ್ಳೆಯದು. ಅಮೆಜಾನ್ ನಮ್ಮ ಪರಿಪಾಠವನ್ನು ಪಾಲಿಸುವುದಿಲ್ಲ. ಅದು ನಿಜ. ಆದರೆ ನನ್ನ ಇಂಗ್ಲೀಷ್ ಪ್ರಕಾಶಕರು ಯಾರೂ ಭಿಕ್ಷೆ ಹಾಕಿದಂತೆ ನನ್ನತ್ತ ಸಂಭಾವನೆಯನ್ನು ಬಿಸಾಕಿಲ್ಲ

10. ಜೋಗಿ ನೀವು ಅಮೆಜಾನಿಗೆ ಪುಸ್ತಕ ಕೊಡುವುದಿಲ್ಲ ಎನ್ನುತ್ತೀರಿ. ಅದು ಸರಿಯೇ. ಅದಕ್ಕೆ ಕಾರಣ ಅಮೆಜಾನಿಗೆ ಪುಸ್ತಕದ ಬಗ್ಗೆ ಯಾವ ಪರಿಜ್ಞಾನವೂ ಇಲ್ಲ ಎನ್ನುವುದೇ ನೀವು ನೀಡುವ ಕಾರಣ. ಒಪ್ಪಬೇಕಾದ್ದೇ. ಪ್ರಕಾಶಕನಿಗೂ – ಲೇಖಕನಿಗೂ ಒಂದು ರೀತಿಯ ಬಂಧವ್ಯ ಇರುತ್ತದೆ. ಆ ಬಂಧವ್ಯವನ್ನ ಉಳಿಸಿಕೊಳ್ಳುವುದು ಮುಖ್ಯ.

Jogi ಈ ಚರ್ಚೆ ಕಿಂಡಲ್ ಬಗ್ಗೆಯಲ್ಲ. ಇದು ಪ್ರಕಟಣಾ ತಂತ್ರಾಂಶದ ಭವಿಷ್ಯದ ಬಗೆಗಿನದ್ದು. ನೀವು ಆ ದೃಷ್ಟಿಯಿಂದ ನೋಡಿದಾಗ, ಕಿಂಡಲ್ ಕೂಡಾ ಒಂದು ನಶ್ವರ ಸಂಸ್ಥೆ ಎಂದು ನೋಡಿದಾಗ, ನಿಮ್ಮ ವಾದ ತುಸುವಾದರೂ ಬದಲಾಗಬಹುದು.

ಪ್ರೀತಿಯಿರಲಿ

ಶ್ರೀರಾಮ್

‍ಲೇಖಕರು Admin

August 13, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್  ಕಿ  ಬಾರ್  ಡೆಮೊಕ್ರಟಿಕ್  ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This