ಕಿರಂ ಸರ್, ನಿಮಗೊಂದು ಪತ್ರ…

ಅದು ೨೦೦೦ನೇ ಇಸ್ವಿ. ನಾನಾಗ ಸಹ್ಯಾದ್ರಿ ಕಾಲೇಜಿನಲ್ಲಿ ಎರಡನೇ ಬಿ ಎ ವಿಧ್ಯಾರ್ಥಿನಿ. ಒಂದು ಬೇಸಿಗೆಯ ಮದ್ಯಾಹ್ನ ಕಾಲೇಜಿನಲ್ಲಿ ನಿಮ್ಮ ಭಾಷಣವಿತ್ತು. ಅದಕ್ಕಾಗಿ ಎಂಟನೇ ನಂಬರ್ ಕೋಣೆಯಲ್ಲಿ ಸೇರಲು ಹೇಳಿದ್ದರು. ಇನ್ನೂ ಕಾರ್ಯಕ್ರಮ ಸುರುವಾಗಲು ಅರ್ಧ ಗಂಟೆಯೇ ಇತ್ತಾದ್ದರಿಂದ ಯಥಾ ಪ್ರಕಾರ ಯಾವುದೋ ಪುಸ್ತಕ ಓದುತ್ತ ಆ ಕೋಣೆಯ ಮೆಟ್ಟಿಲ ಮೇಲೆಯೇ ಕುಳಿತು ಕಾಯುತ್ತಿದ್ದೆ. ಕಿ.ರಂ ಬಂದ್ರು, ಕಿ.ರಂ ಬಂದ್ರು ಎನ್ನುತ್ತಾ ಬೇಸಿಗೆಯ ಬಿರು ಬಿಸಿಲಿನಲ್ಲಿ ಕಾಲೆಳೆದುಕೊಂಡು ಬರುತ್ತಿದ್ದ ನಿಮ್ಮನ್ನು ದೂರದಿಂದಲೇ ಗುರುತಿಸಿದ ಮೇಷ್ಟ್ರುಗಳು ನಿಮ್ಮ ಬರುವನ್ನು ಕಂಡು ಕಾರ್ಯಕ್ರಮದ ಕೋಣೆಯೆದಿರು ಸ್ವಾಗತಿಸಲು ನಿಂತರು. ನೀವು ಬಂದವರೇ ನನ್ನ ಮೇಷ್ಟ್ರೊಬ್ಬರನ್ನು ಪ್ರೀತಿಯಿಂದ ಅಪ್ಪಿ ನಗೆ ಬೀರಿದರಿ. ಆಗ ನಿಮ್ಮ ಮುಖ ನನ್ನೆದುರಿಗಿತ್ತು. ನಿಮ್ಮ ನಗೆಯನ್ನು ನಾನು ನೋಡಿದೆ. ಅದೊಂದು ಅನಿರ್ವಚನೀಯ ಅನುಭವ. ನಾನು ಅದುವರೆಗೂ ನಿಮ್ಮನ್ನು ನೋಡಿರಲಿಲ್ಲ. ಆ ಹೊತ್ತಲ್ಲೂ ನಿಮ್ಮನ್ನು ನೋಡಿದೆ ಎನ್ನಲಾರೆ ಆದರೆ ನಿಮ್ಮ ನಗುವನ್ನು ಕಂಡಿದ್ದೆ. ಅ ನಗು ತುಂಬಾ ಕಾಲ ಕಾಡುತ್ತಲೇ ಇತ್ತು ಅದರಿಂದ ತಪ್ಪಿಸಿಕೊಳ್ಳಲು ‘ಕಿ. ರಂ ನಿಮ್ಮ ನಗೆ ಎಂಬ ಪದ್ಯವನ್ನು ಬರೆದದ್ದು. ಆದರೆ ಆ ನಿಮ್ಮ ನಗುವಿನ ಮೋಹಕತೆ ಮತ್ತು ನನ್ನ ಪರವಶತೆ ಎದಿರು ಅದನ್ನು ಹಿಡಿದಿಡಲಾಗದ ಈ ಕಾವ್ಯ ಅದನ್ನು ಹಿಡಿಯಲು ಹೊರಟ ನನ್ನ ಸ್ವಾರ್ಥವನ್ನಷ್ಟೇ ತೋರಿಸುತ್ತದೆ ವಿನಃ ಬೇರೇನಲ್ಲ. ಅದೇ ವರ್ಷ ನಿನಾಸಂ ಶಿಬಿರದಲ್ಲಿ ನಿಮ್ಮ ಭಾಷಣ [ಭಾಷಣವೆ? ರಸಾನುಭವವೆ?]ಕೇಳಿದೆ. ಅಲ್ಲಮನ ಪುರಾಣವೆಂಬುದು… ವಚನವನ್ನು ಅದುವರೆಗಿನ ನನ್ನ ಕನ್ನಡ ಮೇಷ್ಟ್ರುಗಳೆಲ್ಲ ಹೇಗೆ ವಿವರಿಸಿದ್ದರೆಂದರೆ ಪುರಾಣ, ತರ್ಕ, ವಾದ ಇವಕ್ಕೆಲ್ಲ ಏನೂ ಬೆಲೆಯಿಲ್ಲ ಅವೆಲ್ಲ ವ್ಯರ್ಥ. ಆದರೆ ಭಕ್ತಿ ಎಂಬುದು ಬಹಳ ಮಹತ್ವದ್ದು, ಪ್ರತಿಯೊಬ್ಬರೂ ಗುಹೇಶ್ವರ ಲಿಂಗಕ್ಕೆ ಅಥವಾ ತಾವು ನಂಬಿದ ದೇವರಿಗೆ ಭಕ್ತಿ ತೋರಿಸಬೇಕು ಎಂದು ಅಲ್ಲಮ ಹೇಳುತ್ತಿದ್ದಾನೆ ಎಂಬುದಾಗಿ. ನಾನೂ ಅದನ್ನೇ ನಂಬಿಕೊಂಡಿದ್ದೆ. ಆದರೆ ನೀವು ತೋರಿಕೆಯ, ಪ್ರದರ್ಶನದ ಆ ಮೂಲಕ ಲಾಭ ಪಡೆಯುವ ಒಂದು ಮಾರ್ಗವಾಗಿ ಅಲ್ಲಮ ಭಕ್ತಿಯನ್ನು ನೋಡುತ್ತಿದ್ದಾನೆ ಎಂದಾಗ ನನಗೆ ಸೂಕ್ಷ್ಮ ಒಳನೋಟವೊಂದರ ದರ್ಶನವಾಯಿತು. ನಂತರ ನೀವು ಶಿಬಿರದಲ್ಲಿ ಅಕ್ಕನ ಬಗ್ಗೆ, ಪಂಪನ ಬಗ್ಗೆ ಕೊನೆಗೆ ನಿಮ್ಮ ತಂದೆಯ ಗೆಳೆಯರಾಗಿದ್ದ ತಾಮ್ರದ ಕೆಲಸಗಾರರೊಬ್ಬರ ಬಗ್ಗೆ ಹೀಗೆ ಯಾರ ಬಗ್ಗೆ ಮಾತಾಡುವಾಗಲೂ ನಿಮ್ಮ ಅಪಾರವಾದ ಓದು ಹಾಗೂ ಸೂಕ್ಷ್ಮ ಒಳನೋಟಗಳು ನಮ್ಮೆದಿರು ಹೊಸದೊಂದು ಅರಿವಿನ ಲೋಕವನ್ನು ಕಟ್ಟಿಕೊಡುತ್ತಿದ್ದವು. ನಂತರದಲ್ಲಿ ನಾನು ನಿಮ್ಮ ಭಾಷಣ ಶಿವಮೊಗ್ಗೆಯ ಸುತ್ತ ಮುತ್ತ ಎಲ್ಲೆ ಇದ್ದರೂ ತಪ್ಪಿಸದೇ ಹೋಗುತ್ತಿದ್ದೆ. ಮೌಖಿಕ ಮಾರ್ಗದ ಹರಿಕಾರರಾದ ನಿಮ್ಮನ್ನು ಓದುವುದಕ್ಕಂತೂ ಸಾಧ್ಯವಿರಲಿಲ್ಲವಲ್ಲ… ಈ ಹೊತ್ತಲ್ಲಿ ಎಷ್ಟೋ ಬಾರಿ ನಿಮ್ಮ ಬಳಿ ಸಾರಿ ಮತ್ತೆ ಮಾತಾಡಿಸಲಾಗದೇ ಸುಮ್ಮನೇ ನಿಮ್ಮ ನಗುವನ್ನು ಕಣ್ತುಂಬಿಕೊಂಡು ಮರಳುತಿದ್ದೆ. ಆಗೆಲ್ಲ ಆಸೆ ಆಗೋದು ನಿಮ್ಮ ಜೊತೆ ಚರ್ಚೆ ಮಾಡಬೇಕು ಸಾಹಿತ್ಯದ ಬಗೆಗಿನ ನನ್ನೆಷ್ಟೋ ಅನುಮಾನಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅಂತ ಆದರೆ ಪ್ರತಿಬಾರಿಯೂ ಸಂಕೋಚದಿಂದ ಸುಮ್ಮನಾಗ್ತಿದ್ದೆ. ಆಶಾದೇವಿ ಮೇಡಂ ಸಾಂಗತ್ಯದಲ್ಲಿ ನನ್ನೊಳಗಿನ ನನ್ನನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾಗ ನಿಮ್ಮ ಒಡನಾಟ ನನಗೆ ಸಿಕ್ಕಿತು. ಅದೂ ಮೇಡಂ ಮೂಲಕವೇ. ಮೊದಲ ದಿನವೇ ನೀವು ಅಗಾಧವಾದ ಪ್ರೀತಿ ಮತ್ತು ವಿಶ್ವಾಸವನ್ನು ತೋರಿಸಿದಿರಿ. ಅದು ನನ್ನ ಬಗೆಗಷ್ಟೇ ಅಲ್ಲ ನಿಮ್ಮೆಲ್ಲ ಶಿಷ್ಯ ಕೋಟಿ ಬಗೆಗಿರುವ ನಿಮ್ಮ ಪ್ರೀತಿ. ಶಿಷ್ಯರು ಮತ್ತು ಪುಸ್ತಕಗಳಿಂದ ಸದಾ ಕಾಲ ಇಡುಕಿರಿದಿರುವ ನಿಮ್ಮ ಮನೆಯಲ್ಲಿ ಪಂಪನನ್ನು, ಅಲ್ಲಮನನ್ನು ಲಂಕೇಶರನ್ನು, ಅಕ್ಕನನ್ನು ನಿಮ್ಮ ಬಾಯಿಂದ ಕೇಳುತ್ತಾ ಕಳೆಯುವ ಕ್ಷಣಗಳನ್ನಂತೂ ಅದರಲ್ಲಿ ಪಾಲ್ಗೊಂಡವರು ಯಾರೂ ಮರೆಯಲಾರರು. ಊಟೋಪಚಾರದ ವಿಷಯದಲ್ಲೂ ಕೂಡಾ ನಮ್ಮನ್ನೆಲ್ಲ ಸಾಲಾಗಿ ಕೂರಿಸಿ ಊಟ ಬಡಿಸಿ ಉಪಚರಿಸಿ ಉಣ್ಣಿಸುವ ನಿಮ್ಮ ಪರಿ ಕಂಡಾಗೆಲ್ಲ ನಿಮ್ಮೊಳಗಿನ ತಾಯಿಪ್ರೀತಿಗೆ ಗಂಟಲು ಬಿಗಿಯುತ್ತದೆ. ಸರ್, ಮತ್ತೆ ನೆನಪು ಹೋಗಿಬಿಡಬಹುದು ಹೇಳಿಬಿಡುವೆ ಅದೇ ನಾವಿಬ್ಬರೂ ಸೇರಿ ಒಂದು ಪುಸ್ತಕ ಮಾಡೋಣ ಅನ್ಕೊಂಡಿದ್ವಲ್ಲಾ ಅದೇನಾಯಿತು? ಅಡುಗೆ ಪುಸ್ತಕ ಮಾಡೋಣ ಅಂತ ಮಾತಾಡಿದ್ವಲ್ಲ ನೆನಪಾಯಿತಾ? ಸಸ್ಯಾಹಾರ, ಮಾಂಸಾಹಾರ ಮತ್ತು ಎಲ್ಲ ಕರ್ನಾಟಕದ ಎಲ್ಲ ಪ್ರದೇಶದ ವಿಶಿಷ್ಟ ಅಡುಗೆಗಳನ್ನು ಒಳಗೊಂಡಿರುವ ಆ ಪುಸ್ತಕದಲ್ಲಿ ನೀವು ಸಸ್ಯಾಹಾರ ವಿಭಾಗವನ್ನು ಮತ್ತು ನಾನು ಮಾಂಸಾಹಾರದ ವಿಭಾಗವನ್ನು ರೂಪಿಸೋದು ಎಂದೆಲ್ಲ ಮಾತಾಡಿದ್ವಲ್ಲ. ಜೊತೆಗೆ ಒಂದೆ ವಾರದಲ್ಲಿ ಹಾಕಿದ ಪ್ರತಿಗಳೆಲ್ಲ ಸೋಲ್ಡ್‌ಔಟ್ ಆಗುವ ಕನಸನ್ನು ಕಲ್ಪಿಸಿಕೊಂಡು ಖುಷಿಪಟ್ಟಿದ್ದೆವಲ್ಲ (ಇದು ಮಾತ್ರ ನನ್ನ ಪ್ರತಿಕ್ರಿಯೆ) ಸರ್, ಅದಿನ್ನೂ ಕಾರ್ಯಗತ ಆಗಿಲ್ಲ. ಹೇಳಿದರೆ ಸೋಮಾರಿ ನೀನು ಏನೂ ಮಾಡಲ್ಲ ಎಂದು ನನಗೇ ಬಯ್ಯುತೀರಿ. ಮೇಡಂ ಜೊತೆ ಒಮ್ಮೆ ಮಾತಾಡ್ತಾ ಫೋನ್‌ನಲ್ಲಿ ಅವರು ಸರ್ ಏನ್ಮಾಡ್ತಾ ಇದ್ರಿ ಅಂದಾಗ ನೀವು ಅಕ್ಕಮಹಾದೇವಿ ಜೊತೆ ಇಷ್ಟೊತ್ತು ವಾಕ್ ಹೋಗಿದ್ದೆ ಈಗ ಬಂದೆ ಎಂದಿರಿ. ನಂತರದಲ್ಲಿ ನೀವು ಸಿಕ್ಕಾಗೆಲ್ಲ ಸರ್ ವಾಕ್ ಹೋದಾಗ ಅಕ್ಕ ಏನು ಹೇಳಿದ್ಲು ನಿಮ್ಮ ಹತ್ತಿರ ಅಂತಾ ಕೇಳ್ತಾನೆ ಇದೀನಿ ಪ್ರತಿಬಾರಿಯೂ ನಿಮ್ಮದು ಬೇರೆ ಬೇರೆಯಾದ ಉತ್ತರ ಇರ‍್ತದೆ. ಅದರಲ್ಲೆಲ್ಲ ಅಕ್ಕಮಹಾದೇವಿ ಸರಿ ಬಯ್ದು ಬಿಟ್ಟಳು ನೀವೆಲ್ಲ ಗಂಡಸರ ಭಾಷೆಯಲ್ಲೇ ಮಾತಾಡ್ತೀರಿ ಅಂತ ಹೇಳಿದಿರಲ್ಲ ಆಗಂತೂ ಸರಿ ಅದೂ ಮಹಾದೇವಿಯಕ್ಕನ ಬಳಿ ಬಯ್ಯಿಸಿಕೊಂಡು ಬಂದವರಂತೆಯೇ ಕಂಡಿರಿ. ಮತ್ತೊಮ್ಮೆ ಕೂಡಲಿ ತುಂಗಾಭದ್ರೆಯ ದಡದಲ್ಲಿ ಕೂತಾಗ ನೀವ ನನಗೊಂದು ಕತೆ ಹೇಳಿದ್ರಿ ಸರ್, ಏನಂದ್ರೆ ನೀವೊಮ್ಮೆ ಕಾವೇರಿ ದಡದಲ್ಲಿ ಕೂತು ನದಿಯನ್ನೇ ನೋಡುತ್ತಿದ್ದ ಒಬ್ಬ ಮದ್ಯವಯಸ್ಸಿನ ಮನುಷ್ಯನನ್ನು ಮಾತಾಡಿಸಿದಾಗ ನಿಮಗೆ ಗೊತ್ತಾಯಿತಂತೆ ಅವನ ಕೆಲಸ ಏನಂದ್ರೆ ದಿನವಿಡೀ ನದಿ ನೋಡುವುದು!. ದಿನಾ ಅವನು ಮುಂಜಾನೆಯಿಂದ ಸೂರ್ಯ ಮುಳುಗುವವರೆಗೂ ನದಿ ನೋಡುತ್ತಾ ಕಳೆಯುತ್ತಾನೆ ಎಂದು. ಆ ದಿನ ಇದನ್ನು ಕೇಳಿದಾಗ ಎಷ್ಟು ಸಿಲ್ಲಿ ಅನಿಸಿತ್ತು ಸರ್. ಆದರೆ ಈ ಕತೆ ನನ್ನೊಳಗೆ ಬೆಳೆಯುತ್ತಾ ಹೋಯಿತು ನದಿಯನ್ನೇ ನೋಡುತ್ತಾ ಕಳೆಯುವ ಆ ಮನುಷ್ಯ ಇವತ್ತಿನವರೆಗೂ ನನ್ನನ್ನ ಕಾಡುತ್ತಲೇ ಇದ್ದಾನೆ. ಅವನಿಗೆ ಆ ಏಕಾಗ್ರತೆ ಸಾದ್ಯವಾಯಿತಾದರೂ ಹೇಗೆ? ಇಷ್ಟು ದಿನದ ನಿಮ್ಮ ಒಡನಾಟದಲ್ಲಿ ನನಗೆ ಅನ್ನಿಸಿದ್ದು ಅದು ಬೇರೆ ಯಾರೂ ಅಲ್ಲ ನೀವೆ. ಅದು ನದಿ ಎಂದೂ ನಾನು ತಿಳಿದಿಲ್ಲ ಅದು ನದಿಯಾಗಿರದೇ ಕಾವ್ಯವೇ ಇರಬಹುದು ಮತ್ತೆ ಅದನ್ನು ಎಡಬಿಡದೇ ಧ್ಯಾನಿಸುವ ಮನಸ್ಸು ನಿಮ್ಮದೇ. ಸರ್ ನಿಮ್ಮ ‘ನಗೆಯ ಬಗ್ಗೆ ಕವನ ಬರೆದು ಏಳು ವರ್ಷಗಳ ನಂತರ ಮತ್ತು ಅದು ಪ್ರಕಟಗೊಂಡ ಎರಡು ವರ್ಷಗಳ ನಂತರವೂ ಅಪರಿಚಿತಳೇ ಆಗಿದ್ದ ನನಗೆ ಇತ್ತೀಚೆಗೆ ಬೆಳೆದ ಸಲಿಗೆಯಲ್ಲಿ ನೀವು ಹೇಳಿದಿರಿ ‘ಮನಸಿನಲ್ಲಿದ್ದವರ ನಗೆ ಇನ್ಯಾರದೋ, ತುಂಬಾ ಸುಲಭದಲ್ಲಿ ನನ್ನ ಹೆಸರನ್ನು ಬಳಸಿಕೊಂಡೆ. ಆ ಮಾತು ಹೇಳುವಾಗಲೂ ನಿಮ್ಮ ನಗೆ ಮಸುಕಾಗಲಿಲ್ಲ ಎಂಬುದು ನನಗೆ ಎಷ್ಟು ಸಂತೋಷ ತಂದಿತೆಂದರೆ ಕನಸು, ಕಲ್ಪನೆ ಎಲ್ಲ ಬೆರೆತ ಆ ಕಾವ್ಯದ ಅನುಭವ ನಿಜಕ್ಕೂ ತಟ್ಟಲಾರಂಭಿಸಿತು. ಇಷ್ಟೆಲ್ಲದರ ನಂತರವೂ ನನಗೆ ಒಂದು ಆಸೆಯಿದೆ. ಏನೆಂದರೆ ನಿಮ್ಮ ಲಿಪಿಕಾರಳಾಗಬೇಕು ಎಂದು. ನಿಮ್ಮ ಮಾತುಗಳನೆಲ್ಲ (ಅಲ್ಲಿ ಯಾರಿದ್ದಾರೆ… ಯಾರಿಲ್ಲ… ಕವಿರಾಜಮಾರ್ಗಕಾರನಿಂದ ಹಿಡಿದು ಈ ಹೊತ್ತಿನ ಕವಿವರೆಗೆ) ದಾಖಲಿಸುತ್ತಾ ಹೋಗಬೇಕು ಅಂತ. ನೀವು ಕಂಡ ಆ ಮನುಷ್ಯ ನದಿ ನೋಡಿದ ಹಾಗೆ, ನೀವು ಕಾವ್ಯವನ್ನು ಧ್ಯಾನಿಸುವ ಹಾಗೆ ಅದೇ ತೀವ್ರತೆಯಲ್ಲಿ, ಅದೇ ಏಕಾಗ್ರತೆಯಲ್ಲಿ ನಾನು ನಿಮ್ಮ ಲಿಪಿಕಾರಳಾಗಿ ನೀವು ಹೇಳಿದನೆಲ್ಲ ಬರೆದುಕೊಳ್ಳುತ್ತಾ ಹೋಗಬೇಕು ಎಂದು… ಇದಕ್ಕೆ ಖಂಡಿತಾ ನಿಮ್ಮ ಒಪ್ಪಿಗೆ ಸಿಗುವುದಿಲ್ಲ ಅಂತ ಗೊತ್ತು. ಪೆದ್ದಮ್ಮಾ, ಇಂಥ ತರಲೆಯನ್ನೆಲ್ಲ ಬಿಟ್ಟು ಕಾವ್ಯ ಬರಿ ಎಂದು ನೀವು ಹೇಳುವಿರೆಂದೂ ನನಗೆ ಗೊತ್ತು. ಆದರೆ ಸರ್ ಆ ನಿಮ್ಮ ನದಿ ನೋಡುವವ ನದಿಯ ಒಪ್ಪಿಗೆ ಕೇಳಿದ್ದಿಲ್ಲ. ಕಾವ್ಯವನ್ನೇ ಧ್ಯಾನಿಸುವ ನೀವು ಕಾವ್ಯದೊಪ್ಪಿಗೆ ಕೇಳಿದ್ದಿಲ್ಲ ಅಂದಮೇಲೆ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ಪ್ರೀತಿಯಿಂದ ಈ ಕೆಲಸಕ್ಕೆ ಕೈ ಹಾಕಿರುವ ನಾನು ಒಪ್ಪಿಗೆಯ ಮುದ್ರೆಗಾಗಿ ನಿಮ್ಮತ್ತ ನೋಡುವುದಿಲ್ಲ.

]]>

‍ಲೇಖಕರು avadhi

August 7, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

5 ಪ್ರತಿಕ್ರಿಯೆಗಳು

 1. Laxminarayana Bhat P

  ‘ಎಲ್ಲರಂಥವರಲ್ಲ ಕಿ.ರಂ.’ ಅವರ ಧ್ಯಾನಸ್ಥ ಮನಸ್ಸು ಲಿಪಿಕಾರನಾಗುವ ಹಂಬಲ, ತುಡಿತ, ಎರಡರಿಂದಲೂ ಪಾರಾದ ಬಗೆ ನಿಜಕ್ಕೂ ಒಂದು ವಿಸ್ಮಯ!

  ಪ್ರತಿಕ್ರಿಯೆ
 2. ಮುರಳೀಧರ ಸಜ್ಜನ.

  ಖುಷಿಯಾಗ್ತದೆ. ಲೇಖನ ಚೆನ್ನಾಗಿದೆ.

  ಪ್ರತಿಕ್ರಿಯೆ
 3. pushpapaada

  idannu ‘prajavaani’ yalli naavu odiddivi.. matte illi yaake? lekhana baLasikonDaaga, soujanyakkaadaru patrike hesaru haaka beeku. media meshtru hege maaDidre hege?

  ಪ್ರತಿಕ್ರಿಯೆ
  • avadhi

   ಮಾನ್ಯ ಪುಷ್ಪಪಾದ ಅವರಿಗೆ
   ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

   ಮುದ್ರಣ ಮತ್ತು ಆನ್ಲೈನ್ ಎರಡೂ ಭಿನ್ನ ಮಾಧ್ಯಮಗಳು. ಒಂದಷ್ಟು ಹೊಸ ಓದುಗರು, ರಾಜ್ಯದಾಚೆಯ ಓದುಗರು ಆನ್ಲೈನ್ ನಲ್ಲಿ ಸಿಗುತ್ತಾರೆ.

   ಲೇಖಕರು ನೇರವಾಗಿ ನಮಗೆ ಲೇಖನ ಕಳಿಸಿದಾಗ ಅದು ನಮಗೆ ಬಂದ ಲೇಖನ . ಅದು ಎಲ್ಲಿ ಪ್ರಕಟವಾಗಿತ್ತು ಎಂಬುದು ಅಪ್ರಸ್ತುತ. ಹಾಗೆ ನೇರವಾಗಿ ನಮಗೆ ಬಂದ ಲೇಖನ ಇದು. ಇದಲ್ಲದೆ ನಾವೇ ಬೇರೆ ಪತ್ರಿಕೆ ಹಾಗೂ ಬ್ಲಾಗ್ ನ ಲೇಖನ ಪ್ರಕಟ ಮಾಡುವಾಗ ಖಂಡಿತಾ ಸೌಜನ್ಯ ಅಷ್ಟೇ ಅಲ್ಲ ಆ ಲೇಖನ ಮೊದಲು ಪ್ರಕಟವಾದ ಲಿಂಕ್ ಸಹಾ ಕೊಟ್ಟಿದ್ದೇವೆ. ಅವಧಿ ಓದುಗರಾಗಿ ಇದನ್ನು ನೀವು ಗಮನಿಸಿದ್ದೀರಿ ಎಂದು ಭಾವಿಸಿದ್ದೇವೆ

   ಪ್ರತಿಕ್ರಿಯೆ
 4. Shriranjani Adiga

  hi,
  ki.ram avara nidhandinda nimma aase, aaseyagiye ulidudakke nanna vishadavide.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: