ಕಿರ ‘ಸೂರ್’ ಗಜಲ್‌ಗಳೊಂದಿಗೆ..

ಕವಿ ಕಿರಸೂರ ಗಿರಿಯಪ್ಪ ಅವರ ಗಜಲ್ ಗಳ ಸಂಕಲನ ‘ಅಲೆವ ನದಿ’.

ಈ ಸಂಕಲನಕ್ಕೆ ಖ್ಯಾತ ವಿಮರ್ಶಕ ಎಸ್ ನಟರಾಜ ಬೂದಾಳು ಅವರು ಬರೆದ ಮುನ್ನುಡಿ ಇಲ್ಲಿದೆ.

ಎಸ್ ನಟರಾಜ ಬೂದಾಳು

ತಲ್ಲಣವೇ ಗಜಲ್‌ನ ಜೀವದ್ರವ್ಯ. ಸಾಮಾನ್ಯನ ನಿತ್ಯದ ಬದುಕಿನಲ್ಲಿ ತೀವ್ರವಾಗುತ್ತಿರುವ ತಲ್ಲಣಕ್ಕೂ ತುಸು ಜಾಸ್ತಿಯಾದವೇನೋ ಎನ್ನುವಂತೆ ಬರುತ್ತಿರುವ ಗಜಲ್ ಸಂಕಲನಗಳಿಗೂ ಏನೋ ಸಂಬಂಧವಿದೆ ಎನ್ನಿಸುತ್ತಿದೆ. ಗಜಲ್ ಒಂದು ಛಂದಸ್ಸು ಮಾತ್ರವಲ್ಲ; ಅದೊಂದು ಮನಸ್ಥಿತಿ. ತೀವ್ರವಾಗಿ ಪರಿಭಾವಿಸದ ಹೊರತು ಗಜಲ್ ಮೂಡುವುದಿಲ್ಲ.

ಕಾಫಿಯಾ, ರದೀಫ್, ಮತ್ಲಾ, ಮುಕ್ತಾಗಳನ್ನು ಹೊಂದಿಸಿದ ಮಾತ್ರಕ್ಕೆ ಗಜಲ್ ಆಗದು; ಬದಲಿಗೆ ಇವೆಲ್ಲವುಗಳ ನಾವೆಯಲ್ಲಿ ಕುಳಿತು ಮತ್ತೆಲ್ಲಿಗೋ ಸಾಗಬೇಕು. ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಎನ್ನುವ ಬಿಕ್ಕಟ್ಟಿನಲ್ಲಿ ಗಜಲ್ ಹುಟ್ಟಬೇಕು.

ಗಜಲ್ ಅಂತಃಕರುಣಿ ಕವಿ, ಅರ್ಥ-ಪರಮಾರ್ಥಗಳ ನಡುವೆ ತುಯ್ದಾಡುವ ಷೇರ್‌ಗಳು, ಮಂದ್ರ ನಡೆಯ ಪಿಸುನುಡಿಗೆ ಓಗೊಡುವ ಪ್ರೇಮಿ, ಹೇಳದೆ ಬಿಟ್ಟ ಇನ್ನರ್ಧವನ್ನು ಹುಡುಕುತ್ತ ವಿದಾಯ ಹೇಳುವ ಸಹೃದಯಿ ಕೇಳುಗರು- ಇವರೊಡನೆ ನಡೆಸುವ ಮಾತುಕತೆ.

ಸುತ್ತೆಲ್ಲ ನಾನಾರೀತಿಯ ತಳಮಳಗಳು ಕುದಿಯುತ್ತಿರುವಾಗ ಹೀಗೂ ಕಾವ್ಯ ಓಗೊಡಬಹುದೆ? ಯಾಕಿಲ್ಲ! ಒತ್ತಿಹಿಡಿದ ಬಿಕ್ಕು, ಕಣ್ಣಾಲಿಗಳಲ್ಲಿ ತಡೆಹಿಡಿದ ಹನಿಗೆ ಇರುವ ತೀವ್ರತೆಯನ್ನು ಹಗುರಾಗಿ ನೋಡಲಾದೀತೆ? ಕಿರಸೂರ ಗಿರಿಯಪ್ಪ ಎನ್ನುವುದೊಂದು ಕನ್ನಡದ ಅಂತಃಕರಣದ ದನಿ.

ಅವರನ್ನು ಕೇಳಿಸಿಕೊಳ್ಳುವ ಅನೇಕ ಶ್ರಾವಕ ಪ್ರತಿಭೆಗಳ ನಡುವೆ ಇದ್ದಾರೆ. ಚಿದಾನಂದ ಸಾಲಿ, ಆರಿಫ್ ರಾಜಾ, ಟಿ ಎಸ್ ಗೊರವರ ಮುಂತಾದವರ ಉತ್ತೇಜನ, ಒತ್ತಾಸೆಗಳು ಅವರನ್ನು ಬೆಚ್ಚಗಿಟ್ಟಿವೆ. ಚಿದಾನಂದಸಾಲಿಯವರ ಗಜಲ್ ಛಂದಸ್ಸಿನ ಕಂಬಚ್ಚನ್ನು ದಾಟಿ ಬಂದಿರಬಹುದಾದ ಈ ಗಜಲ್‌ಗಳ ನಡೆಯ ಬಗೆಗೆ ನನ್ನದೇನೂ ಮಾತಿಲ್ಲ!

ಕುರಿ ಕಾಯುವ ನನ್ನೊಳಗ ನೀನು ಗುಡ್ಡದ ಅವರೆ ಹೂವಿನ್ಹಂಗ
ಕಟಗ ರೊಟ್ಟಿ ಪುಂಡಿ ಪಲ್ಯಾದ ಗಟ್ಟಿ ಪ್ರೀತಿ ಜೇನ ಸವಿದ್ಹಂಗ

ಇಂತಹ ಮತ್ಲಾಗಳಿಂದ ಗಜಲ್ ಆರಂಭಿಸುವ ಗಿರಿಯಪ್ಪ ಅಪ್ಪಟ ಈ ನೆಲದ ಗಜಲ್ ಕವಿ. ಬರಿ ಕವಿಯೆಂದರೆ ಸಾಲದೆ ಗಜಲ್ ಕವಿ ಎಂದು ಬೇರೆ ಅನ್ನಬೇಕೆ? ಎಂದು ಅನ್ನಿಸಿದರೂ, ಅದೇಕೋ ಗಜಲ್ ಕವಿಯಾಗುವುದು ಬರೀ ಕವಿಯಾಗುವಷ್ಟು ಸರಳವಲ್ಲ. ಗಜಲ್ ಆವರಣಕ್ಕೆ ಪ್ರವೇಶಿಸಲು ಕೆಲವು ಅರ್ಹತೆಗಳು ಬೇಕು.

ನಾವೇ ಕಟ್ಟಿಕೊಂಡಿರುವ ಆನೇಕ ಆವರಣಗಳನ್ನು ಕಳಚಿಕೊಂಡು ಹೋದರೆ ಮಾತ್ರ ಒಳಗೆ ಹೋಗಲು ಸಾಧ್ಯ. ಜಗತ್ತಿನ ಮಹಾನ್ ಧರ್ಮಗಳು ನಮ್ಮ ತಲೆ ತುಂಬ ತುಂಬಿರುವ ತಿಪ್ಪೆಯೊಂದಿದೆ. ಆ ತಿಪ್ಪೆಯ ಮೇಲೆ ದೀಪ ಹಚ್ಚಿಡಲು ಸಾಧ್ಯವಾದರೆ ಗಜಲ್ ಬೆಳಕು ಹರಡುತ್ತದೆ. ಅದನ್ನು ವಚನಕಾರ್ತಿ ಲಿಂಗಮ್ಮ ಹೀಗೆಂದು ಗುರುತಿಸಿದ್ದಾಳೆ:

ಹೊತ್ತು ಹೊತ್ತಿಗೆ ಮೆತ್ತಹಾಕಿ ತಿಪ್ಪೆಯಲ್ಲಿ ಕರ್ಪೂರವನರಸುವವನಂತೆ,

ತಿಪ್ಪಯಂತಹ ಒಡಲೊಳಗೆ ಕರ್ತುವನರಸಿಹೆನೆಂಬ ಅಣ್ಣಗಳಿರಾ,
ನೀವೂ ಕೇಳಿರೊ, ಹೇಳಿಹೆನು.
ಆ ಕರ್ತುವನರಸುವುದಕ್ಕೆ ಚಿತ್ತ ಹೇಗಾಗಬೇಕೆಂದಡೆ-
ಜಲದೊಳಗಣ ಸೂರ್ಯನ ಪ್ರತಿಬಿಂಬದಂತಿರಬೇಕು,
ಮೋಡವಿಲ್ಲದ ಚಂದ್ರಮದಂತಿರಬೇಕು.
ಬೆಳಗಿನ ದರ್ಪಣದಂತಿರಬೇಕು.
ಇಂತು ಚಿತ್ತಶುದ್ಧವಾದಲ್ಲದೆ, ಆ ಕರ್ತೃವಿನ ನೆಲೆಯ ಕಾಣಬಾರದೆಂದರು,
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು.

ಇದು ಗಜಲ್‌ನ ಛಂದಸ್ಸಿನಲ್ಲಿ ಇಲ್ಲ. ಆದರೆ ಗಜಲ್‌ಗೆ ಬೇಕಾದ ದಾಟಿದ ಮನಸ್ಥಿತಿಯನ್ನು ಸರಿಯಾಗಿ ನಿರೂಪಿಸುತ್ತಿದೆ. ಗಜಲ್ ಪ್ರಕಾರಕ್ಕೂ ಸೂಫಿ ನಡೆಗೂ ಎಡಗಾಲು ಬಲಗಾಲಿನ ಸಂಬಂಧ. ನಡೆದು ದಾಟುವುದೇ ಎರಡರ ಗುಣ. ಲೋಕ ಸದಾ ನಡೆಯುತ್ತಿದೆ.

ನಿಂತವನಿಗೆ ಕಾಣಿಸುವುದು ತುಸು ಮಾತ್ರ. ನಡೆದು ನೋಡುವವನು ಲೋಕದೊಡನೆ ಬೆರೆತು ಹೋಗುತ್ತಾನೆ. ಹಾಗೆ ಬೆರೆತಾಗ ತಾನು ಇಲ್ಲವಾಗುತ್ತಾನೆ. ಹಾಗೆ ತಾನೇ ಮುರಿದುಬೀಳುವ ಸದ್ದು ಕೇಳಿಸುತ್ತಿದೆಯೇ ಎಂಬ ಪ್ರಶ್ನೆಯೊಂದಿಗೇ ನಾನು ಗಜಲ್ ಕೇಳಿಸಿಕೊಳ್ಳುತ್ತೇನೆ. ಅಲ್ಲಲ್ಲಿ ಆ ಸದ್ದನ್ನು ಕೇಳಿ ಪುಳಕಗೊಂಡಿದ್ದೇನೆ.

ಸೂಜಿಯೊಳಗೆ ಪೋಣಿಸುವ ಕೈಗಳ ನೀರವ ಮೌನದಲಿ
ಬಳಲಿ ಬತ್ತಿಹೋದ ಹೂವಿನ ಕೆಂದುಟಿಗಳು ನಡುಗ್ಯಾವೋ

ಮಣ್ಣ ಮಗುವಾಗಿಸುವ ಮಡಿಕೆಯ ಧ್ಯಾನದ ಕೈಗಳಲಿ
ಗುರುತು ಸಿಗದ ತತ್ರಾಣಿಯ ಮುಖಗಳು ನಡುಗ್ಯಾವೋ

ಕಿರಸೂರರ ಇಂತಹ ಗಜಲ್‌ಗಳು ಈ ನೆಲದ ಬನಿಯನ್ನುಂಡು ರೂಪುಗೊಂಡಿವೆ. ಹಾಗೆ ನೋಡಿದರೆ ಕನ್ನಡದ ಗಜಲ್‌ ಕಾವ್ಯ ಉತ್ತರ ಕರ್ನಾಟಕದ ಬೆಳೆ. ಕನ್ನಡದಲ್ಲಿ ಗಜಲ್ ಊರಿ ಬೆಳೆಸಿದವರಲ್ಲಿ ಶಾಂತರಸರು ಮುಖ್ಯರಾದವರು. ಅವರ ಅನೇಕ ಸಮಕಾಲೀನ ಕವಿಗಳೂ ಈ ಕಾವ್ಯ ಪ್ರಕಾರ ಬೆಳೆಸಿದ್ದಾರೆ. ಅವರ ಉರ್ದು ಒಡನಾಟ ಮತ್ತು ಸೂಫಿ ಸಖ್ಯ ಗಜಲ್‌ನೊಡನೆ ಬಾಂಧವ್ಯ ಬೆಳೆಸಲು ನೆರವಾಯಿತು.

ಹಾಗೆ ನೋಡಿದರೆ, ಉತ್ತರ ಕರ್ನಾಟಕದ ಮನಸ್ಥಿತಿಗೂ ಹಳೆ ಮೈಸೂರಿನ ಮನಸ್ಥಿತಿಗೂ ಬಹಳೇ ಫರಕಿದೆ. ಇದು ಕೇವಲ ಭಾಷಾ ವೈವಿಧ್ಯದ ಸರಳ ಸಂಗತಿಯಲ್ಲ. ಉತ್ತರ ಕರ್ನಾಟಕವು ಈ ಹೊತ್ತಿಗೂ ಒಡನಾಡುತ್ತಿರುವ ಮರಾಠಿ ಮತ್ತು ದಖನಿಯ ಸಾಂಸ್ಕೃತಿಕ ಪರಂಪರೆಗಳು ಅಲ್ಲಿನ ಬದುಕಿನ ಮೇಲೆ ಆಳವಾದ ಪ್ರಭಾವ ಬೀರಿವೆ. ಗಜಲ್ ಅಷ್ಟೇ ಅಲ್ಲ ಇತರ ಸಾಹಿತ್ಯ ಪ್ರಕಾರಗಳೂ ಅವುಗಳ ಜೊತೆ ಕೊಳು-ಪಡೆ ಮಾಡಿವೆ.

ಕನ್ನಡದ ಗಜಲ್ ಕಾವ್ಯವನ್ನು ಈ ಎಲ್ಲ ಸಂಗತಿಗಳ ಜೊತೆಗಿಟ್ಟು ನೋಡಬೇಕಾಗಿದೆ. ಗಜಲ್ ತಾತ್ವಿಕತೆಯನ್ನು ಬದುಕಿನ ಭಾಗವಾಗಿ ಮಾಡಿಕೊಂಡ ಅನೇಕ ಶ್ರಮಣ ಧಾರೆಗಳು ಭಾರತದಲ್ಲಿದ್ದವು. ನಿರ್ವಾಣದ ಮೋಹವನ್ನು ತಗ್ಗಿಸಿ ಭವ ಮತ್ತು ನಿರ್ವಾಣ ಎರಡೂ ಒಂದೇ ಎಂದು ಹೇಳಿ ಗಜಲ್ ಐಹಿಕ ಜೀವನದ ಮೌಲ್ಯವನ್ನು ಹೆಚ್ಚಿಸಿತು. ಹಾಗಾಗಿ ಜಗತ್ತಿನ ಯಾವ ಭಾಗದಲ್ಲಿಯಾದರೂ ನಿಂತು ಗಜಲ್ ಇಲ್ಲಿಯ ಕಾವ್ಯ ಎನ್ನಲಡ್ಡಿಯಿಲ್ಲ.

ಅನುಭಾವವಾಗಲೀ, ಕಾವ್ಯಕಲೆಗಳಾಗಲೀ ಲೌಕಿಕದಾಚೆಗೆ ಮಾತ್ರ ದುಡಿಯದೆ ಬದುಕಿನ ನಿತ್ಯ ಸಂಕಟಗಳಿಗೆ ಸಾಂತ್ವನದ ಆವರಣಗಳಾಗುತ್ತವೆ. ಉತ್ತರ ಕರ್ನಾಟಕದಲ್ಲಿ ತತ್ವಪದಗಳಾಗಲೀ, ಜನಪದ ಕಾವ್ಯ ಕಲೆಗಳಾಗಲೀ ಅಷ್ಟೊಂದು ಹೊರೆಯುತ್ತಿರುವುದಕ್ಕೆ ಕಾರಣಗಳು ಆ ನೆಲದ ದೀರ್ಘಕಾಲದ ರಾಜಕೀಯ, ಆರ್ಥಿಕ ಮತ್ತು ನೈಸರ್ಗಿಕ ಬಿಕ್ಕಟ್ಟುಗಳಲ್ಲಿವೆ. ಅವುಗಳ ನಡುವಿನಿಂದ ಮೂಡಿಬಂದ ಗಿರಿಯಪ್ಪನವರ ಗಜಲ್‌ಗಳು ಲೌಕಿಕ ಬದುಕಿನ ನಿತ್ಯಸಂಕಟಗಳನ್ನು ತಮ್ಮ ಪ್ರಧಾನ ಭೂಮಿಕೆಯನ್ನಾಗಿಸಿಕೊಂಡಿವೆ. ರೋಹಿತ್ ವೇಮುಲ, ಸಾರಾ ಷ ಗುಪ್ತಾ ಅವರನ್ನು ನೆನೆಯುವ ಗಜಲ್‌ಗಳೂ ಇಲ್ಲಿವೆ:

ಶತಮಾನದ ಜಂಗು ಹಿಡಿದ ರೋಗಿಷ್ಟ ನಾಡಿಗಳು ಮನುಷ್ಯತ್ವದ ಮಿಡಿತ ಅರಿಯಲಿಲ್ಲ
ಜಗದ ಮೋರಿಯಲಿ ನಕ್ಷತ್ರಗಳ ಕಣ್ಣೀರು ಕಲ್ಲು ಹೃದಯಗಳ ಅಂಗಳ ಸೇರಿತ್ತು ಸಾವಿಗೆ ಸಾಕ್ಷಿ ಬೇಕಿಲ್ಲ ದೋಸ್ತ


ಕಾಲ್ಗೆಜ್ಜೆ ಸದ್ದಲಿ ಬಾಯಿಹರುಕ ಬೀದಿಗಳು ಗಿರಿ ಯನ್ನು ಬಿಡಲಿಲ್ಲ ಸಾರಾ
ನಿನ್ನ ಹೆಜ್ಜೆಗಳ ಚಪ್ಪರಿಕೆಯಲಿ ನರನಾಡಿ ತಿಂದ ತಿವಿತ ಮತ್ತಷ್ಟು ಅಬ್ಬರ!ಸಾರಾ

ಇದು ಕಿರಸೂರರ ಮೊದಲ ಗಜಲ್ ಸಂಕಲನ. ಹಾಗಾಗಿ ಗಜಲ್ ಪ್ರಕಾರವನ್ನು ಕುರಿತಾಗಿ ಈವರೆಗೆ ನಡೆದಿರುವ ಚರ್ಚೆಯ ಕೆಲವು ಮುಖ್ಯ ಸಂಗತಿಗಳನ್ನು ಇಲ್ಲಿ ಪ್ರಸ್ತಾಪಿಸಬಹುದೆಂದು ಭಾವಿಸಿದ್ದೇನೆ. ಗಜಲ್ ಜಗತ್ತಿನ ಮಹಾನ್ ಮೇಧಾವಿಗಳನ್ನು ದುಡಿಸಿಕೊಂಡಿರುವ ಪ್ರಕಾರ. ಹಾಗಾಗಿ ಅದನ್ನು ಕೈಗೆತ್ತಿಕೊಳ್ಳುವ ಮುನ್ನ ಅದರ ಕಿರುಬೆರಳನ್ನಾದರೂ ಒಮ್ಮೆ ಸ್ಪರ್ಷ ಮಾಡಿದರೆ ಒಳಿತು. ಜಗತ್ತಿನ ಕಾವ್ಯ ಮಾರ್ಗಗಳಲ್ಲಿ ಗಜಲ್ ಪ್ರಕಾರಕ್ಕೆ ಗುರುಸ್ಥಾನವಿದೆ. ಅದು ಗುರುಮಾರ್ಗದ ಕಾವ್ಯವೂ ಹೌದು.

ಗಜಲ್ ಏನೇನಲ್ಲ? ಗಜಲ್ ಅಪ್ಪಟ ಲೌಕಿಕದ ಕಾವ್ಯ ಅಲ್ಲ. ಹಾಗೆಂದು ಲೌಕಿಕವನ್ನು ಬಿಟ್ಟದ್ದೂ ಅಲ್ಲ. ಅಲ್ಲಿದೆ ನಮ್ಮ ಮನೆ ಎಂಬುದೂ ಅದರ ನಿಲುವಲ್ಲ. ಲೌಕಿಕ ಪಾರಲೌಕಿಕ ಎರಡನ್ನೂ ತಿರಸ್ಕರಿಸಿದ್ದೂ ಅಲ್ಲ; ಎರಡಕ್ಕೂ ಜೋತುಬಿದ್ದದ್ದೂ ಅಲ್ಲ; ಗಜಲ್‌ಗೆ ಭಾಷೆ, ಭೌಗೋಳಿಕ ಗಡಿಗಳಿಲ್ಲ; ಗಜಲ್‌ಗೆ ಯಾವ ಧರ್ಮದ ಹಂಗೂ ಇಲ್ಲ; ದೇವಸ್ಥಾನ, ಚರ್ಚು, ಮಸೀದಿಗಳ ಕಿರಿ ಕಿರಿ ಇಲ್ಲ; ಜಗತ್ತಿನ ಮಹಾವ್ಯಾಖ್ಯಾನಗಳೆಂದು ಕರೆದುಕೊಳ್ಳುವ ಮೂರು ಧರ್ಮಗಳ, ನೂರಾರು ಮಹಾಕಾವ್ಯಗಳನ್ನು ಕುರಿತ ಮಾತಿಲ್ಲ; ನಾವೆಂದೂ ಕಾಣದ, ಅನುಭವಿಸದ ಆತ್ಮ, ಪರಮಾತ್ಮ, ಪರಬ್ರಹ್ಮ ಇತ್ಯಾದಿ ಕೇವಲ ಭಾಷೆಯಲ್ಲಿ ಮಾತ್ರ ಸಂಭವಿಸುವ ಪೊಳ್ಳು ಸಂರಚನೆಗಳಿಗೆ ಜಾಗವಿಲ್ಲ. ಜಾತಿ, ಧರ್ಮ, ಬಣ್ಣಗಳ, ವೃತ್ತಿ ತಾರತಮ್ಯಗಳಿಗೆ ಇಲ್ಲಿ ತಾವಿಲ್ಲ; ಮುಖ್ಯವಾಗಿ ಇಲ್ಲಿ ಯಾವುದನ್ನೂ ಪ್ರಮಾಣವೆಂದು ಮಾನ್ಯಮಾಡುವುದಿಲ್ಲ.

ಪ್ರಶ್ನಾತೀತ ಎಂಬುದು ಯಾವುದೂ ಇಲ್ಲ. ಗಜಲ್‌ಗೆ ಈಗಾಗಲೇ ನಿರ್ಧರಿಸಿಕೊಂಡ ಗುರಿಗಳಿಲ್ಲ. ಅದು ಹೋಗಹೋಗುತ್ತಲೇ ಕೇಳಿಕೊಂಡು ಹೋಗುವ ಪಯಣ. ಅದು ಯಾವಾಗ ಲೌಕಿಕದ ಹಂಗು ಹರಿದುಕೊಳ್ಳುತ್ತದೆ ಎನ್ನುವುದು ನಿಶ್ಚಿತವಲ್ಲ. ಯಾವಾಗ ಪಾರಲೌಕಿಕವನ್ನು ಜರಿಯುತ್ತದೆ ಅದೂ ನಿಶ್ಚಿತವಲ್ಲ. ಗಜಲ್ ಆ ಕ್ಷಣದ ಆಗುವಿಕೆಯಲ್ಲಿ ಉಂಟಾಗುತ್ತದೆ. ಅದೂ ಕೇಳುಗನ ಅಂತರಂಗದಲ್ಲಿ! ಇನ್ನು ಮತ್ಲಾ, ಹುಸ್ನೆ ಮತ್ಲಾ ರದೀಫ್, ಕಾಫಿ಼ಯಾ, ರವಿ, ಮಕ್ತಾಗಳಿರುವ ಎಲ್ಲ ಷೇರ್‌ಗಳೂ ಗಜಲ್ ಅಲ್ಲ. ಮುಸಲ್ಸಿಲ್ ಅಥವಾ ಗೈರ್ ಮುಸಲ್ಸಿಲ್ ಹೆಸರಿನಲ್ಲಿ ಏನನ್ನಾದರೂ ತುಂಬ ಬಲ್ಲ ನಕಾಶೆ ಅಲ್ಲ.

ಅದು ನಶೆಯ ಕಾವ್ಯವೂ ಅಲ್ಲ; ಏನೇನಿವೆ? ಏನೇನಿಲ್ಲ? ಎಂಬ ಪಟ್ಟಿಯಲ್ಲ. ಎಲ್ಲವೂ ಇದ್ದು ಯಾವುದೂ ಇಲ್ಲದಂತಿರುವ ಗಜಲ್ ಸೊನ್ನೆಯ ನಿಲುವಿನ ಕಾವ್ಯ. ಏನೂ ಅಲ್ಲದಿದ್ದರೂ ಏನು ಬೇಕಾದರೂ ಆಗಬಲ್ಲ, ಯಾವಾಗಲೂ ಎಚ್ಚರದಲ್ಲಿಯೇ ಇರುವ ಗಜಲ್ ನಾನು ಅರಿತಂತೆ ಅತ್ಯಂತ ಕಠಿಣವೂ ಹೌದು ಅತಿ ಸುಲಭವೂ ಹೌದು. ತಾಕ್ಷಣಿಕತೆಯೇ ಅದರ ಜೀವಾಳ. ಬಹುತ್ವವೇ ಅದರ ಉಸಿರು. ವೈಶ್ವಿಕವಾದ ಪ್ರೇಮವೇ ಅದರ ನಡೆ. ಮತ್ತೂ ಮುಖ್ಯವೆಂದರೆ ಇವೆಲ್ಲವೂ ನಿರಂತರ ಬದಲಾವಣೆಗೆ ಒಳಪಟ್ಟಿವೆ ಎನ್ನುವುದನ್ನು ಬರೆಯುವವರೂ ಒಪ್ಪಿಕೊಳ್ಳಬೇಕು, ಓದುವವರೂ ಒಪ್ಪಿಕೊಳ್ಳಬೇಕು.

ಗಜಲ್ ಒಂದು ಛಂದೋಬದ್ಧ ಕಾವ್ಯ ಎಂಬುದನ್ನು ಒಪ್ಪಿಕೊಳ್ಳೋಣ. ಹಾಗಾದರೆ ಯಾವುದು ಛಂದೋಬದ್ಧ ಕಾವ್ಯವಲ್ಲ? ಆದರೆ ಯಾವ ಛಂದಸ್ಸೂ ಸ್ಥಗಿತವಲ್ಲ. ಛಂದ ಎಂದರೇ ನಡೆ. ನಡೆಯುತ್ತ ಹೋಗುವ ಎಲ್ಲವೂ ಬದಲಾಗುತ್ತ ಹೋಗಲೇಬೇಕು. ಗಜಲ್ ಕೂಡ ಇದಕ್ಕೆ ಹೊರತಲ್ಲ. ಆದರೆ ಇದಕ್ಕೆ ಇರುವ ಛಂದಸ್ಸಿನ ಮಹತ್ವವನ್ನು ಗ್ರಹಿಸದೇ ಹೋದರೆ ಅದಕ್ಕೆ ಪ್ರವೇಶ ಸಿಗಲಾರದು.

ಯಾವ ಕಾವ್ಯ ಸೃಷ್ಟಿಗೂ ಇದು ಅನ್ವಯಿಸುವ ಮಾತು. ನಾವು ಮೊದಲು ಪ್ರವೇಶಿಸಬೇಕಿರುವುದು ಕಾವ್ಯದ ವಸ್ತುವಿಶೇಶಕ್ಕಲ್ಲ; ಅದರ ಛಂದಸ್ಸಿಗೆ. ಗಜಲ್ ಕೂಡ ಅಂಥದ್ದೇ. ಮೊದಲು ಅದರ ಛಂದಸ್ಸಿಗೆ ಪ್ರವೇಶ ಸಿಗಬೇಕು. ಈ ದೃಷ್ಟಿಯಿಂದ ಕವಿಯಾಗಬಯಸುವವರಿಗೆ ಇದೊಂದು ರೀತಿಯ ಪ್ರವೇಶ ಪರೀಕ್ಷೆ. ಛಂದಸ್ಸು ಒಂದು ರೀತಿಯಲ್ಲಿ ಎಡವದೆ ಮುಂದೆ ನಡೆಸುವ ಗುರು.

ಆದರೆ ಛಂದಸ್ಸು ಎಂದರೆ ಕೇವಲ ಮತ್ಲಾ, ರದೀಫ್, ಕಾಫಿಯಾ ಮಕ್ತಾಗಳಲ್ಲ. ಹಾಗೇನಾದರೂ ಅಂದುಕೊಂಡರೆ ದೇಹವನ್ನು ನೋಡಿ ಸುಂದರಿಯೋ ಅಲ್ಲವೋ ಎಂದು ತೀರ್ಮಾನಿಸಿದಂತಾಗುತ್ತದೆ. ಗಜಲ್‌ನ ನೆಲೆ ಲೌಕಿಕವೋ ಪಾರಲೌಕಿಕವೋ? ಇದೂ ಕೂಡ ಮುಖ್ಯ ಪ್ರಶ್ನೆಯೇ ಆಗಿದೆ. ಲೌಕಿಕದ ತುತ್ತ ತುದಿಯಂತಿರುವ ಗಜಲ್ ಮರುಕ್ಷಣವೇ ಅಂತಹ ವಿಭಜನೆಯನ್ನು ಕಡೆಗಣಿಸಿ ದಾಟಿ ಹೋಗುತ್ತದೆ. ಲೌಕಿಕ-ಪಾರಲೌಕಿಕ ಇವೆರಡನ್ನೂ ದಾಟಲು ಯಾವುದಾದರೂ ಒಂದು ಸಾಕು. ಇದು ಗಜಲ್‌ನ್ನು ಪರಿಚಯಿಸುವ ಒಂದು ಮಾದರಿ ಅಷ್ಟೆ.

ಗಜಲ್‌ನ್ನು ಮುಸ್ಲಿಂ ಸಂವೇದನೆಯ ಭಾಗವಾಗಿಯೋ, ಉರ್ದು ಭಾಷೆಯ ಒಂದು ಕಾವ್ಯ ಪ್ರಕಾರವಾಗಿಯೋ ನೋಡಲಾಗದು. ಧರ್ಮ, ತತ್ವ, ಭಾಷೆ, ಸಂಸ್ಕೃತಿ, ಭೌಗೋಳಿಕ ಗಡಿಗಳನ್ನು ದಾಟಿ ಹೋದ ಕೆಲವೇ ಮಟ್ಟುಗಳಲ್ಲಿ ಗಜಲ್ ಕೂಡ ಒಂದು ಎಂದು ನೋಡಿದಾಗ ಮಾತ್ರ ನಾವು ಗಜಲ್‌ನ ಅನುಸಂಧಾನಕ್ಕೆ ಸಿದ್ಧರಾದೆವೆಂದು ನನಗನ್ನಿಸುತ್ತದೆ.

ಇವುಗಳನ್ನೆಲ್ಲ ದಾಟುವ ಒತ್ತಾಯ ಹೇಗೆ ಎಲ್ಲಿಂದ ಮೂಡುತ್ತದೆ? ಎನ್ನುವ ಪ್ರಶ್ನೆಗೆ ಗಜಲ್ ಉತ್ತರ ಕೊಡುತ್ತಲೇ ನಮ್ಮನ್ನು ಸಹ ಪ್ರಯಾಣಿಕರನ್ನಾಗಿಸುತ್ತದೆ. ಯಾವ ಸಂಗತಿಗಳು ನಮಗೆ ಬಿಡುಗಡೆಯ ಮಾರ್ಗವನ್ನೊದಗಿಸುತ್ತವೆ ಎಂದು ಆತುಕೊಳ್ಳುತ್ತೇವೆಯೋ ಅವೇ ನಮ್ಮನ್ನು ಬಂಧಿಸುವ ಸಂಗತಿಗಳಾಗುತ್ತವೆ ಎಂಬುದು ಅರಿವಾದ ತಕ್ಷಣ ಆತಂಕವಾಗುತ್ತದೆ.

ಹಾಗಾಗಿ ಅಂತಹ ಎಲ್ಲವನ್ನೂ ಅನುಭವಿಸುತ್ತಲೇ ದಾಟಿ ಹೋಗುವುದನ್ನು ಕಲಿಸಲು ಸಾಧ್ಯವಾಗುವುದು ಗಜಲ್‌ನಂತಹ ಕೆಲವೇ ನಾವೆಗಳಿಗೆ ಸಾಧ್ಯ. ಮುಖ್ಯ ದಾಟಲು ನಮಗೆ
ಮನಸ್ಸಿರಬೇಕು ಅಥವಾ ಅದಕ್ಕೆ ಅಡ್ಡಿಯಾಗುವ ನಮ್ಮ ಮನಸ್ಸನ್ನು ನಿರಸನಗೊಳಿಸಬೇಕು. ಹಾಗಾಗಿ ಗಜಲ್ ನಮ್ಮನ್ನು ಬಂಧಿಸುವ ಸಂಗತಿಗಳ ನಿರಸನವನ್ನು ಮುಂದಿಡುತ್ತದೆ.

ಗಜಲ್ ನಿಶ್ಚಿತವಾಗಿ ಒಂದು ರಾಜಕೀಯ ಪ್ರಜ್ಞೆ. ಇಂದು ಅಧಿಕಾರ ಕೇಂದ್ರಗಳನ್ನು ನಿಯಂತ್ರಿಸುತ್ತಿರುವ ಸಂಸ್ಥೆಗಳು ಯಾವುವು? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಂಡರೆ ನಮಗೆ ಇದರ ಅರಿವಾಗುತ್ತದೆ. ದೇವರು, ದೇವಸ್ಥಾನಗಳು, ಜಗದ್ಗುರುಗಳು, ಪುರೋಹಿತರು, ಪುಂಡರು, ಬಂಡವಾಳಶಾಹಿಗಳು. ದರೋಡೆಕೋರರು… ಇತ್ಯಾದಿಗಳ ಈ ಪಟ್ಟಿ ಉದ್ದವಿದೆ.

ಆದರೆ ರಾಜಕೀಯ ಕೇಂದ್ರಗಳು ಲೆಕ್ಕ ಕೊಡಬೇಕಾದ ನಿಜವಾದ ಯಜಮಾನರೆಂದರೆ ಕುಟುಂಬಸ್ತರು. ಅವರನ್ನು ಕೇಂದ್ರದಲ್ಲಿಟ್ಟು ನೋಡುವ ಕಾವ್ಯ ರಾಜಕಾರಣವನ್ನು ಗಜಲ್ ಮಾಡುತ್ತದೆ. ಗಿರಿಯಪ್ಪ ಈ ಹೊತ್ತಿನ ಸಮಾಜೋ ರಾಜಕೀಯ ತಲ್ಲಣಗಳನ್ನೂ ತಮ್ಮ ಕಾವ್ಯಕ್ಕೆ ಒಳಗು ಮಾಡಿಕೊಂಡಿದ್ದಾರೆ.

ಸೋಗಿನಲಿ ಮೈಕೊಡವಿಕೊಂಡು ಮತ್ತೆ ಬಂದವು ಮುಖಗಳು
ಸುಳ್ಳು ಭರವಸೆಗಳ ಕುಟ್ಟುವ ಹರಕು ನಾಲಿಗೆಯ ವೇಷಗಳು

ಮುಗ್ಧ ಹೃದಯಗಳಲಿ ಭಕ್ತಿ ಭಜನೆಯ ನಾಟಕೀಯ ಕುಟ್ಟುತ
ತಲ್ಲಣಗಳ ನಡುವೆಯು ಮನಮಿಡಿಯದ ಅಧಿಕಾರದ ಗದ್ದುಗೆಗಳು

ಇದು ಮನುಷ್ಯ ಘನತೆಯನ್ನು ಗೌರವಿಸುವ ಕಾವ್ಯ. ಪ್ರೇಮದ ಸ್ವಾತಂತ್ರ್ಯವನ್ನು, ಸಹಜ ಬದುಕಿನ ಮರ್ಯಾದೆಯ ಸ್ಥಾನವನ್ನು ಧರ್ಮಗಳು, ದರ್ಶನಗಳು, ಕಾವ್ಯಗಳು, ಸಂಗೀತ ಕಲೆಗಳು ಕದಲಿಸದಿರಲಿ ಎಂದು ಗಜಲ್ ಬಯಸುತ್ತದೆ. ನಿಸರ್ಗ ಸಹಜ ಬದುಕನ್ನು ಬಾಳುವ ಲೋಕಜೀವಿಗಳು ಮೊದಲ ಪ್ರಾಶಸ್ತ್ಯ ಪಡೆಯಬೇಕೆಂಬುದು ಅದರ ಆಶಯ.

ದೇವಸ್ಥಾನಗಳು, ಜಗದ್ಗುರುಗಳ ವiಠಗಳು, ಕಲಾಮಂದಿರಗಳು, ಮಹಾಕವಿಗಳು- ಇವರೆಲ್ಲ ದೊಡ್ಡವರೋ, ಪ್ರೀತಿಸಬಲ್ಲ ಮನುಷ್ಯ ದೊಡ್ಡವನೋ ಎನ್ನುವ ಪ್ರಶ್ನೆಗೆ ಜಗತ್ತಿನ ಯಾವ ವಿವೇಕಿಯ ಉತ್ತರವೂ ನಿಶ್ಚಿತವಾಗಿ ಪ್ರೀತಿಸುವ ಮನುಷ್ಯನ ಪರವಾಗಿರುತ್ತದೆ. ಗಜಲ್ ಲೌಕಿಕ ಪರವಾದ ಸಂಗತಿಗಳನ್ನು ಅತ್ಯಂತ ಗೌರವದಿಂದ ಕಾಣುವುದನ್ನು ಕಲಿಸಿಕೊಡುತ್ತದೆ.

ಸೈತಾನನ್ನು ದ್ವೇಷಿಸಲೂ ಜಾಗವಿಲ್ಲದಂತೆ ನನ್ನ ಮನಸ್ಸು ಪ್ರೇಮದಿಂದಲೇ ತುಂಬಿ ಹೋಗಿದೆ ಎನ್ನುತ್ತಾಳೆ ಸಂತ ರಬಿಯಾ. ಸಾಯದಿರುವ, ಕೆಡದಿರುವ ಪ್ರೇಮದ ಹೊರತಾಗಿ ಬೇರೇನೂ ಬೇಡವೆಂದು ಅಕ್ಕ ಹೇಳುತ್ತಾಳೆ. ಉತ್ತರದ ದಾರಿಯಲ್ಲಿ ಪ್ರೇಮಕ್ಕೆ ಅಪಾರವಾದ ಬಡತನ. ರಾಮಾಯಣ ಮಹಾಭಾರತದಲ್ಲೂ ಅದೇ ಗೋಳು. ಅಹಮಿಕೆಗೆ ಯಜಮಾನಿಕೆಗೆ ಪ್ರೀತಿಯಿಂದ ಬಾಳಿಯೇ ಗೊತ್ತಿಲ್ಲ. ಹಾಗಾಗಿ ಪ್ರೀತಿ, ಪ್ರೇಮ, ಸಂಗೀತ, ಸಾಹಿತ್ಯ – ಎಲ್ಲ ಅವರಿಗೆ ಸರಕು ಮಾತ್ರ. ಗಾಲಿಬ್ ಹೀಗೆನ್ನುತ್ತಾನೆ:

ನಾನೊಂದು ಮೆಲ್ಲನರಳುವ ಹಾಡಲ್ಲ ಸ್ವರ ಮಿಡಿಯುವ ತಂತಿಯಲ್ಲ
ನಾನು ಬರೀ ಒಂದು ಸದ್ದು ನಾನೇ ಮುರಿದುಬೀಳುವ ಸದ್ದು.

ಗಜಲ್ ಎಂದರೆ ನಲ್ಲೆಯೊಡನೆ ಮಾತುಕತೆ ಎಂಬರ್ಥವೂ ಇದೆ. ಅದು ಕೇವಲ ಮಾತುಕತೆಯಲ್ಲ; ಇಡಿಯಾಗಿ ತನ್ನನ್ನು ಪ್ರೀತಿಸುವ ಜೀವಕ್ಕೆ ಒಪ್ಪಿಸಿಕೊಳ್ಳುವುದು. ಗಮನಿಸಬೇಕು: ಇದು ದೈವಕ್ಕೆ ತನ್ನನ್ನು ಒಪ್ಪಿಸಿಕೊಳ್ಳುವ ತನ್ನನ್ನೇ ಇಲ್ಲವಾಗಿಸಿಕೊಳ್ಳುವ ಭಕ್ತಿಯಲ್ಲ. ಭಕ್ತಿಗೆ ಯಜಮಾನ ಗುಣವಿದೆ. ಭಕ್ತ ಯಾವ ರೀತಿಯ ಸಂಬಂಧ ಸ್ಥಾಪಿಸಿಕೊಳ್ಳಲು ಬಯಸಿದರೂ ಸರಿಯೇ, ಅಲ್ಲಿ ದೈವದ್ದೇ ಯಜಮಾನಿಕೆ. ಅದಕ್ಕಿಂತ ದೊಡ್ಡದಾದ ಪ್ರೇಮ ಮತ್ತು ವಿಷಾದ ಗಜಲ್‌ನ ಜೀವದ್ರವ್ಯ.

ಈ ಒಪ್ಪಿಸಿಕೊಳ್ಳುವ ಪ್ರಕ್ರಿಯೆ ಅನೇಕ ನಿರಸನಗಳನ್ನು ಒಮ್ಮೆಲೇ ಸಾಧಿಸಿಬಿಡುತ್ತದೆ. ಗಂಡು, ದೈವ ಇತ್ಯಾದಿ ಅಧಿಕಾರ ಕೇಂದ್ರಗಳೆಲ್ಲ ಕಳಚಿಬೀಳುತ್ತವೆ. ಅದಕ್ಕೇ ಗಜಲ್ ಎದುರಾದರೆ ಧಾರ್ಮಿಕತೆ, ಪುರುಷಾಧಿಕಾರ ಇತ್ಯಾದಿ ಅಧಿಕಾರ ಕೇಂದ್ರಗಳು
ಆತಂಕ ಪಡುತ್ತವೆ.

ಗಜಲ್‌ಗೆ ದಂಗೆಯ ಒಂದು ಗುಣವಿದೆ. ಎಲ್ಲರೂ ದೇವರು, ಧರ್ಮ, ವ್ರತ, ನೇಮ, ಮಸೀದಿ, ದೇವಸ್ಥಾನ, ಚರ್ಚು ಎಂದು ಅವುಗಳಲ್ಲೇ ಮುಳುಮುಳುಗಿ ಏಳುತ್ತಿರುವಾಗ ಅವುಗಳನ್ನೆಲ್ಲ ಗಜಲ್ ಗೇಲಿಮಾಡಿ ಗಹಗಹಿಸಿ ನಗುತ್ತದೆ. ಅಧರ, ಮಧುರೆ, ನಿಶೆ, ಹಾಡು, ಕವಿತೆ, ಗೆಳೆಯ, ಗೆಳತಿ, ಪ್ರೀತಿ ಮುಂತಾದುವುಗಳನ್ನು ಮುಂದಿಟ್ಟು ಯಾವುದು ಮಾರ್ಗ ಹುಡುಕಿಕೋ ಎನ್ನುತ್ತದೆ. ಎಲ್ಲ ನಿನ್ನ ಮನಸ್ಸಿನ ಗೋಳು. ಅದನ್ನು ಸಂತೈಸಲು ಎಲ್ಲರೂ ಒದ್ದಾಡುತ್ತಿದ್ದಾರೆ ಎನ್ನುತ್ತದೆ.

ಮೂರ್ತರೂಪದ ಇಂದ್ರಿಯ ಜಗತ್ತನ್ನು ನಿರಾಕರಿಸಿದ ಯಾವ ತಾತ್ವಿಕತೆಯನ್ನೂ ಗಜಲ್ ಮಾನ್ಯ ಮಾಡುವುದಿಲ್ಲ. ನಮ್ಮೆಲ್ಲರ ಇರುವಿಕೆ ಸಾಕಾರಗೊಳ್ಳುವುದೇ ದೇಹದ ಮೂಲಕ, ಇಂದ್ರಿಯಗಳ ಮೂಲಕ. ದೇಹಶಕ್ತಿಯು ನಿಜವಾಗಿ ಒಂದು ಸಂಭ್ರಮ. ಈ ಸಂಕಲನದ ಅನೇಕ ಗಜಲ್‌ಗಳು ನನಗೆ ಮೆಚ್ಚುಗೆಯಾಗಿವೆ. ನನಗೆ ಮೆಚ್ಚುಗೆಯಾದವೇ ನಿಮಗೂ ಮೆಚ್ಚುಗೆಯಾಗುತ್ತವೆ ಎಂದೇನಿಲ್ಲ.

ಆದರೂ ಕೆಲವನ್ನು ಉಲ್ಲೇಖಿಸಬಯಸುತ್ತೇನೆ. ಅದಕ್ಕೆ ಮುನ್ನ, ಕಿರಸೂರರಿಗೆ ಒಂದು ಆತ್ಮೀಯತೆಯ ಮಾತು. ಗಜಲ್ ಪರಂಪರೆಯನ್ನು ಗಂಭೀರವಾಗಿ ಇನ್ನೊಮ್ಮೆ ಒಳಹೊಕ್ಕು ಬಂದು, ಅದರ ಪರಿಮಳವನ್ನು ತಮ್ಮ ಗಜಲ್‌ಗಳಿಗೂ ಲೇಪಿಸಿ ನೀಡಿದರೆ ಗಂಭೀರ ಓದುಗರು ನಿಮ್ಮ ಗಜಲ್‌ಗಳನ್ನೂ ದಾಟಿ ಹೋದಾರು! ಹಾಗೆ ಆಗಲಿ ಎಂದು ಹಾರೈಸುತ್ತೇನೆ.

ಕೆಲವು ಕಿರ ‘ಸೂರ್’ ಷೇರ್‌ಗಳು:

ಹೆಂಟೆಗಳ ಕರಗಿಸಿ ಬೀಜಗಳ ಊರುವ ಗಿರಿಯ ಉಡಿಯಲಿ
ಕಣ್ಣಳತೆಗೂ ಸಿಗದ ಬೆಳಕುಂಡ ಅಕ್ಷರ ತೆನೆಗಳು ನಡುಗ್ಯಾವೋ

ಮಳೆಯ ನೋಟದಲಿ ಮೈನೆರೆದ ಕುರುಚಲು ಗಿಡ ಕಣ್ಣು ತೆರೆಯುವ ಕಾಲ
ಅಲುಗಾಡಿಸದಿರಿ ಎಚ್ಚೆತ್ತ ರೆಂಬೆಯ ಎಲೆಗಳು ಮತ್ತೆ ಬೆಸುಗೆಗೊಳ್ಳುವ ಕಾಲ

ನವಿಲ ಕಣ್ಣು ಮುಗಿಲ ಬಣ್ಣ ಒಳಗೊಳಗೆ ಹರಿವ ದೀಪ
ಉಕ್ಕಿ ಕುದಿವ ಬೆರಗುಗಣ್ಣು ನೂಕಿಬಿಡು ಎದೆಯ ಉರಿಯ.

‍ಲೇಖಕರು Avadhi

September 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ಕಮಲಾಕರ ಕಡವೆ ಕತೆಯಿರುವುದು ಕಣ್ಣಲ್ಲಿ. ಕತೆಗಾರರ ಕಣ್ಣು ಕಾಣಲು ನಿರ್ಧರಿಸುವ ಜಗತ್ತು ಅವರ ಸುತ್ತಲಿನದೋ, ಒಳಗಿನದೋ, ಹಿಂದೆಂದಿನದೋ,...

ಜಯಮೋಹನ್ ಅವರ ‘ನೂರು ಸಿಂಹಾಸನಗಳು’

ಜಯಮೋಹನ್ ಅವರ ‘ನೂರು ಸಿಂಹಾಸನಗಳು’

ಪ್ರಸನ್ನ ಸಂತೆಕಡೂರು 'ನೂರು ಸಿಂಹಾಸನಗಳು' ಮಲಯಾಳಂ ಭಾಷೆಯಿಂದ ಕನ್ನಡ ಭಾಷೆಗೆ ಅನುವಾದವಾಗಿರುವ ಒಂದು ಕಿರು ಕಾದಂಬರಿ. ಇದರ ಮೂಲ ಲೇಖಕರು...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: