ಕಿ ರಂ ಬರೆದಿದ್ದಾರೆ: ಶಬ್ದ ಚಿತ್ರಗಳ ಭಾವಲೋಕ

-ಕಿ. ರಂ. ನಾಗರಾಜ
abdulana-kailash1
ಸುದೇಶ್ ಮಹಾನ್ ನಮ್ಮ ನಡುವಿನ ಮಹತ್ವದ ಕಲಾವಿದರು. ವರ್ಣ ಚಿತ್ರ, ಶಿಲ್ಪ ನಿರ್ಮಿತಿಯಲ್ಲಿ ತುಂಬ ಶ್ರದ್ಧೆಯಿಂದ ತೊಡಗಿರುವವರು. ಅವರು ಕಾಲೇಜು ದಿನಗಳಲ್ಲಿ ಕವಿತೆ, ಕತೆಗಳನ್ನು ಬರೆಯುತ್ತಿದ್ದವರು. ಅನಂತರದ ದಿನಗಳಲ್ಲಿ ತಮ್ಮ ಸೃಜನಶೀಲತೆಯನ್ನು ಕಲೆಗಾಗಿ ಮೀಸಲಿಟ್ಟವರು. ಈಗ ಮತ್ತೆ ಕವಿತೆಗಳನ್ನು ಬರೆಯಲು ಆರಂಭಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಬರೆದ ಇಪ್ಪತ್ತಾರು ಕವಿತೆಗಳನ್ನು ಕೂಡಿಸಿ ‘ಅಬ್ದುಲ್ಲನ ಕೈಲಾಸ’ ಎಂಬ ಹೆಸರಿನ ಕವನ ಸಂಕಲನವನ್ನು ಪ್ರಕಟಿಸುತ್ತಿದ್ದಾರೆ. ಒಂದೊಂದು ಕವಿತೆಗೂ ಓದುಗರು ಚಲಿಸಬಹುದು ಎನ್ನುವಂತೆ. ಕುಂಚ ಮತ್ತು ಚಾಣಗಳ ಮೂಲಕ ಸೂಕ್ಷ್ಮ ಹಾಗೂ ಪಾರದರ್ಶಕ ಕಲಾಕೃತಿ ಮೈ ಪಡೆಯುವಂತೆ ಇಲ್ಲಿ ಕವನ ವೇಷವನ್ನು ತೊಟ್ಟಿದೆ.
ತನ್ನ ತೀವ್ರವಾದ ಭಾವಲೋಕವನ್ನು ಸಹಜವಾಗಿ ಕೌಶಲ್ಯ ಇಲ್ಲಿನ ಅನೇಕ ಕವಿತೆಗಳಲ್ಲಿ ಕಾಣುತ್ತೇವೆ. ನೆನಪುಗಳು ಹಾಗೂ ದುಃಸ್ವಪ್ನದ ಚಿತ್ರಗಳು ಮೇಲಿಂದ ಮೇಲೆ ಆವರ್ತನಗೊಳ್ಳುತ್ತ ಬೆಳೆಯುತ್ತವೆ. ನೆನಪು, ವೇದನೆ, ಭಯ, ಕನಸು- ಇವೆಲ್ಲವೂ ಅಮೂರ್ತ ಅನುಭವಗಳು. ಇವುಗಳನ್ನು ಕವಿತೆಯಾಗಿಸುವುದೆಂದರೆ ಕ್ರಿಯಾಶೀಲವಾಗಿ ಪುನ್ ಸೃಷ್ಟಿಸುವುದೇ ಆಗಿದೆ. ಇಲ್ಲಿನ ಕವಿತೆಗಳನ್ನು ಒಂದು ಯಾದಿಯಲ್ಲಿ ಓದುವುದಕ್ಕಿಂತ ಒಂದು ಕವಿತೆಯೊಂದಿಗೆ ಮತ್ತೊಂದು ಕವಿತೆಯನ್ನು ಜೋಡಿಸಿಕೊಂಡು ಅಥವಾ ಹೊಂದಿಸಿಕೊಂಡು ಓದುವುದರಿಂದ ವಿಶಿಷ್ಟ ಅನುಭೂತಿ-ಅನುಭವಗಳನ್ನು ಪಡೆಯಬಹುದು.
ಹುಡುಗಿ(ಹೆಣ್ಣು) ಬೇರೆ ಬೇರೆ ಛಾಯೆಗಳಲ್ಲಿ ಕಾಣಿಸಿಕೊಳ್ಳುತ್ತಾಳೆ. ಅವಳು ನಿರೂಪಕನಿಗೆ ಮೂರ್ತವಾಗಿ ಅಮೂರ್ತವಾಗಿ ಕಾಡುತ್ತಲೇ ಇದ್ದಾಳೆ.
ರಾತ್ರಿ
ರಾಕ್ಷಸನ ಮಗಳು
ಕೆರಳಿ
ಬಿಲ್ಲಾಗಿ
ಕನಸಲ್ಲಿ ಕರಗುವಳು
(‘ನೀರು’)
ಆದರೂ ಪ್ರೀತಿ
ನನಗೆ
ಯಾಕೆಂದರೆ
ನೆನಪಿನಂಗಳದಲ್ಲಿ
ನನಗೆ ನೀನಿನ್ನೂ
ತಂಗಾಳಿಗೆ ಮೈನೆರೆದ
ಹೂ ಮಾರುವ
ಹುಡುಗಿ
(‘ನೀರು’)
ಸ್ವಂತದಲ್ಲಿ ಪಡೆದ ಅನುಭವಗಳಿಗೆ ನಿಷ್ಠೆಯಿಂದ ಎದುರಾಗುವ ಸುದೇಶ್ ನಗರದ ಕ್ರೌರ್ಯ ಲೋಕವನ್ನು ತುಂಬಿ ಗಂಬೀರವಾಗಿ ಪರಿಶೀಲಿಸಿದ್ದಾರೆ. ‘ಮುಂಬೈ’, ‘ನಗರವಿದು’, ‘ಡಾಲರಿನ ಮಗ್ಗಿ’ ಕವಿತೆಗಳಲ್ಲಿ ರೂಪಕಗಳ ಸರಣಿಯನ್ನು ಬಳಸಿ ಭಯಾನಕ ವರಣವನ್ನು ಸೃಷ್ಟಿಸಲಾಗಿದೆ. ವಿರೋಧಗಳನ್ನು ಬೆಸೆಯುತ್ತ ನಿರ್ಮಾಣವಾಗಿರುವ ಈ ಕವಿತೆ ಈ ಹೊತ್ತಿನ ನಗರಗಳು ಸೃಷ್ಟಿಸಿರುವ ವಿಕೃತಿಯನ್ನು ತುಂಬ ಮಾರ್ಮಿಕವಾಗಿ ಪ್ರತಿಬಿಂಬಿಸಿದೆ.
ಬಿಚ್ಚಲು ಹೃದಯವಿಲ್ಲ
ಮುಚ್ಚಲು ಮೂಗಿಲ್ಲ
ಉಸಿರಾಡಲು
ಸಂಬಳ ಬರಬೇಕು
ಭಯವಾಗುತ್ತದೆ
ಮುಂಬೈ ಎತ್ತರಕ್ಕೆ ಬೆಳೆದು
ಬಿಟ್ಟಿದೆ
ಆಕಾಶಕ್ಕೆ
ದಿಗಿಲಾಗಿದೆ
ಸಮುದ್ರಕ್ಕೆ ಸುಸ್ತಾಗಿದೆ
(‘ಮುಂಬೈ’)
‘ಅಬ್ದುಲ್ಲನ ಕೈಲಾಸ’ ಈ ಸಂಕಲನದ ಗಮನಾರ್ಹ ಕವಿತೆಗಳಲ್ಲಿ ಒಂದಾಗಿದೆ. ಸುದೇಶ್ ಅವರ ಕವಿತೆಗಳು ಈಗಾಗಲೇ ಸೂಚಿಸಿರುವಂತೆ ಶಬ್ದ ಚಿತ್ರಗಳಿಂದ ಕೂಡಿದವುಗಳಾಗಿವೆ. ಈ ಕವಿತೆಯೂ ಕೂಡ ಒಂದು ಸಾವಯವ ಚಿತ್ರಗಳ ಸರಮಾಲೆ. ಮಾಂಸದಂಗಡಿಯ ರಕ್ತಸಿಕ್ತ ಆವರಣವನ್ನು ಈ ಕವಿತೆ ವರ್ಣಮಯವಾಗಿ ನಿರೂಪಿಸುತ್ತದೆ. ಮರಿರುಂಡಗಳು ಹೂಗುಚ್ಛಗಳಂತೆ, ನಸುಗೆಂಪು ತಾವರೆಗಳಂತೆ ಕಾಣುತ್ತಿವೆ. ಕವನದ ಆರಂಭದಲ್ಲಿ ಅಬ್ದುಲ್ಲನ ಕಾಯಕ ರಕ್ತಸಿಕ್ತ ಕೈಲಾಸದಂತೆ ಕಂಡಿದೆ. ಕೈಲಾಸ, ಅಲ್ಲಾಹು, ಜನಿವಾರದಂತೆ ನೇತುಬಿದ್ದಿರುವ ಚರ್ಬಿ, ಭಾಗವತದ ಬಿಳಿಲುಗಳು, ಬುದ್ಧನ ನೆನಪು, ಬೇಡನ ಭಯ, ಕ್ರಿಸ್ತನ ನೆರಳು – ಹೀಗೆ ವಿರುದ್ಧ ದಿಕ್ಕಿನಲ್ಲಿ ಚಲಿಸುವ ಅನನ್ಯ ಚಿತ್ರಗಳನ್ನು ಕೂಡಿಸುವ ವಿಶಿಷ್ಟ ಸಂಘಟನೆ.
ಅಬ್ದುಲ್ಲನ ದಿನನಿತ್ಯದ ಕಾಯಕವು, ಕೈಲಾಸದಂತೆ ಕಾಣುವ ಪರಿಯಲ್ಲಿಯೇ ಒಂದು ನಾವೀನ್ಯ ಹಾಗೂ ವ್ಯಂಗ್ಯವಿದೆ. ಹಿಂಸೆಯ ಭಯಾನಕ ಪರಿಸರದಲ್ಲಿ ಮುಗ್ಧತೆ, ರಾಶಿರಾಶಿಯಾಗಿ ತುಂಬಿರುವ ಇಲ್ಲಿನ ನಿಷೇಧ ರೂಪಕಗಳಲ್ಲಿ ವಿಷಾದ ಅನಾಥ ಸ್ಥಿತಿ, ಹಿಂಸೆಯ ಎದುರು ಅಬ್ದುಲ್ಲನನ್ನೂ ಒಳಗೊಂಡು ಬೇರೆಲ್ಲ ದ್ವನಿಗಳೂ ಮೂಕಗೊಂಡಿರುವುದನ್ನು ತುಂಬ ಗಂಭೀರವಾಗಿ ಈ ಕವಿತೆ ಪರಿಶೀಲಿಸಿದೆ. ಇಲ್ಲಿನ ಚಿತ್ರಗಳು ಜನ್ನ ಕವಿಯ ಯಶೋಧರ ಚರಿತೆಯ ಹಿಂಸಾರಭಸಮತಿಯಾದ ಮಾರಿದತ್ತನ ನೇತೃತ್ವದ ಮಾರಿಗುಡಿಯ ವರ್ಣನೆಯನ್ನು ನೆನಪಿಗೆ ತರುತ್ತದೆ. ಹಿಂಸೆ ಮತ್ತು ಅಹಿಂಸೆ ಇವೆರಡರ ನಡುವಣ ಗಂಭೀರ ತರ್ಕವನ್ನು ಓದುಗರ ಅನುಭವಕ್ಕೆ ಪರಿಣಾಮಕಾರಿಯಾಗಿ ದಾಟಿಸುತ್ತದೆ.
ಉಕ್ಕಿ ಹರಿದ ನಗು
ಕುರಿ ಮೈಯ ಸುರುಳಿ
ಗುಂಗುರು ಕೂದಲು
ಅನಾಥ ರುಂಡದ ನೋಟ;
ಕೆಂಪು ವಿಷಾದದ ಕಣ್ಣು
ಮುಂದಲೆಯಿಂದ ಜಲಪಾತದಂತೆ ಇಳಿದ ಮೂಗು
ನೀಳಗಲ್ಲದ ತುಂಬಾ
ಬುದ್ಧನ ನೆನಪು
(‘ಅಬ್ದುಲ್ಲನ ಕೈಲಾಸ’)
ಸುದೇಶ್ ಮಹಾನ್ ಕವಿತೆಗಳಲ್ಲಿ ಸೂಕ್ಷ್ಮ ವ್ಯಂಗ್ಯ ವಿಡಂಬನೆಗಳ ಧಾಟಿಯೂ ಇದೆ. ‘ಬೇಕು’ ಎಂಬ ಕವಿತೆಯಲ್ಲಿ ಇಂದಿನ ಗದ್ದಲದ ಜಗತ್ತಿನಲ್ಲಿ ಮೌಲ್ಯಗಳು ವಿನಾಶಗೊಳ್ಳುತ್ತಿರುವುದನ್ನು ವಿಡಂಬನೆಯ ಮೂಲಕ ಚಿಂತಿಸಲಾಗಿದೆ. ಬುದ್ಧ, ಗಾಂಧೀ, ಮಾರ್ಕ್ಸ್ ಇವರ ಚಿಂತನೆಗಳಿಗೆ ಒದಗಿರುವ ಸ್ಥಿತಿಯನ್ನು ಹೇಳಲು ಹೊರಟಿದ್ದಾರೆ. ಕವಿತೆಯ ಆರಂಭದಲ್ಲಿ ಕವಿತೆ ಒಳ್ಳೆಯ ರೂಪಕದಿಂದ ಆರಂಭವಾಗುತ್ತದೆಯಾದರೂ ಅನಂತೆ ಕೆವಲ ಹೇಳಿಕೆಯಾಗಿ ನಿಂತುಬಿಡುತ್ತದೆ. ಇಲ್ಲಿನ ಚಿತ್ರಗಳಿಗೆ ನಾಟ್ಯಗುಣ ಇಲ್ಲದೆ ಕೇವಲ ಮಾತಿಗಷ್ಟೇ ಸೀಮಿತಗೊಂಡಿದೆ. ಆದರೆ ‘ಸುಟ್ಟ ಬೇರಿನ ಹೂವು’ ಎಂಬ ಕವಿತೆ ನೆರೂದನ ನೆನಪಿನ ಸುತ್ತ ಹಬ್ಬುವ ಕವಿತೆ. ಈ ಕವಿತೆ ಕೂಡ ವಿಷಾದ ದುಃಸ್ವಪ್ನದ ಒಟ್ಟು ಪರಿಸರಕ್ಕೆ ಪ್ರತಿಕ್ರಿಯೆಯಾಗಿದೆ. ಸಾವುನೋವುಗಳ ವಿಷವರ್ತುಲದ ಜಗತ್ತಿನಲ್ಲಿ ನಾನಿನ್ನೂ ಬದುಕಿದ್ದೇನೆ ಎಂಬ ಆತ್ಮಾವಲೋಕನದಲ್ಲಿ ವಿಡಂಬನೆ, ವ್ಯಂಗ್ಯಗಳಿಗೆ ಮೊನಚು ಬಂದಿದೆ.
ಗುಜರಾತಿನಲ್ಲಿ ಮುಂಡೆಯಾದವಳ
ಮಡಿಲ ಜೋಗುಳವಾಗಿ
ನಾನಿನ್ನೂ ಬದುಕಿದ್ದೇನೆ
ಬೆಂಕಿಯ ಚಿಗುರಾಗಿ
ಬಳೆಯಸದ್ದಿನಲ್ಲಿ
ಬೆಳಕ ಅರಸುತ್ತಾ
(‘ಸುಟ್ಟ ಬೇರಿನ ಹೂವು’)
ಸುದೇಶ್ ಮಹಾನ್ ಕಲಾವಿದರಾಗಿರುವುದರಿಂದ ಅವರ ನೋಡುವಿಕೆಗೆ ವಿಭಿನ್ನ ಪರಿಗಳಿವೆ. ಚಿತ್ರಕಲೆಯ ವಿಧಾನಕ್ಕೂ ಶಾಬ್ದಿಕ ಕಲೆಯ ವಿಧಾನಕ್ಕೂ ಸಾಕಷ್ಟು ಅಂತರವಿದೆ. ಆದರೆ ಈ ಎರಡೂ ವಿಧಾನಗಳನ್ನು ಪರಸ್ಪರ ಸರಿಬೆರೆಸುವ ಕ್ರಮಗಳನ್ನು ಕುರಿತು ಅವರು ಯೋಚಿಸುತ್ತಿರುವುದು ಸಾಧ್ಯವಿದೆ ಎಂಬುದನ್ನು ಕಾವ್ಯಚಿಂತಕರು, ಕಲಾ ಚಿಂತಕರು ಬಹತೇಕ ಒಪ್ಪಿದ್ದಾರೆ. ಆದರೆ ಅದರ ವಿಧಿವಿಧಾನಗಳು ತುಸು ಬೇರೆಯೇ ಆದದ್ದು. ಇಂತಹ ಪ್ರಯತ್ನಗಳು ಸಾಕಷ್ಟು ನಡೆದಿವೆ. ರವೀಂದ್ರನಾಥ ಠಾಕೂರ್, ಜೆನ್ ಕಾವ್ಯೋಕ್ತಿಗಳು, ಗಿಬ್ರಾನ್, ಉಮರ್ ಖಯಾಮ್, ಇಂಗ್ಲೀಷ್ ಕವಿ ಬ್ಲೇಕ್, ಸ್ಯಾಪೋ ಮುಂತಾದವರ ರಚನೆಗಳ ಹಿನ್ನಲೆಯಲ್ಲಿ ಇಂತಹ ಪ್ರಯೋಗಗಳನ್ನು ಕಾಣುತ್ತೇವೆ.
‘ಅಬ್ದುಲ್ಲನ ಕೈಲಾಸ’ ಸಂಕಲನದ ರೂಪಕ ವಿಧಾನ ಅತಿವಾಸ್ತವದ ಅಭಿವ್ಯಕ್ತಿ ವಿಧಾನಕ್ಕೆ ಹತ್ತಿರವಾಗಿದೆ. ಬೆಡಗಿನ ನುಡಿಗಟ್ಟಿಗೆ ಸಮೀಪವಾದದ್ದಾಗಿ ತೋರಿದರೂ ಗ್ರಹಿಕೆಗೆ ಯಾವ ಸಮಸ್ಯೆಯನ್ನೂ ಒಡ್ಡುವುದಿಲ್ಲ. ಅಂತಹ ನುಡಿಗಟ್ಟುಗಳ ಬಳಕೆಯಲ್ಲಿ ಸಮತೋಲ ಕಂಡುಬಂದಿದೆಯಾದರೂ ಅನೇಕ ಕಡೆ ಪುನರಾವರ್ತನೆಯಾಗಿರುವುದನ್ನು ಕಾಣುತ್ತೇವೆ. ಅದನ್ನು ಮೀರಿದ ಸಂದಿಗ್ಧತೆಗಳನ್ನು ಕಾಣುತ್ತೇವೆ. ಆಧುನಿಕ ಕಾಲದ ಹಿಂಸೆಯ ಗರ್ಭದಲ್ಲಿ ಹುದುಗು ಹೊರದಾರಿಗಳನ್ನೇ ಕಾಣದ ವ್ಯಗ್ರ ಸ್ಥಿತಿಯನ್ನು ಮೂಕವಾಗಿ ಅನುಭವಿಸುತ್ತಿರುವ ಇಡೀ ಪರಿಸರದ ಸ್ಥಿತಿಗತಿಗಳು ಈ ಸಂಕಲನದ ತಾತ್ವಿಕ ಭಿತ್ತಿಯಾಗಿದೆ. ಹಲವಾರು ಒತ್ತಡಗಳಿಗೆ ಬಂಧಿತನಾಗಿರುವ ಮನುಷ್ಯನ ಸಂಕಟಗಳನ್ನು ಘೋಷಣೆ ಅಬ್ಬರಗಳಿಲ್ಲದೆ ಧ್ಯಾನಸ್ಥ ಮನಸ್ಥಿತಿಯಲ್ಲಿ ನಿಂತು ಪರಿಭಾವಿಸುವ, ಪರಿಶೀಲಿಸುವ ವ್ಯವಧಾನ ಇಲ್ಲಿನ ಕವಿತೆಗಳಲ್ಲಿ ವ್ಯಕ್ತವಾಗಿದೆ.
ಶ್ರೇಷ್ಠ ಕಲಾವಿದರಾಗಿ ಕಲಾಸ್ತಕರ ಅಭಿಮಾನ ಪ್ರೀತಿಗಳನ್ನು ಗಳಿಸುತ್ತಿರುವ ಶ್ರೀ ಸುದೇಶ್ ಮಹಾನ್ ಅವರು ತಮ್ಮ ಮೊದಲ ಸಂಕಲನದಲ್ಲಿಯೇ ಓದುಗರ ಪ್ರೀತಿಗೆ ಸಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ. ಅವರು ತಾವು ಕಾಣುತ್ತಿರುವ ಜಗತ್ತನ್ನು ನೆನಪು ಅನುಭವಗಳೊಂದಿಗೆ ಚಿತ್ರ-ಶಿಲ್ಪಗಳನ್ನು ನಿರ್ಮಿಸುವಂತೆಯೇ ಅಂಥದೇ ಅನುಭವ-ನೆನಪುಗಳು ಬಲದಿಂದ ಕವಿತೆಗಳನ್ನು ಸೃಷ್ಟಿಸಲೆಂದು ಆಶಿಸುತ್ತೇನೆ.

‍ಲೇಖಕರು avadhi

April 3, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

ಅಮೃತಾ ಪ್ರೀತಮ್ ರ ‘ಪಿಂಜರ್’

ಅಮೃತಾ ಪ್ರೀತಮ್ ರ ‘ಪಿಂಜರ್’

ಪಿಂಜರ್ ಅಂದರೆ ಕನ್ನಡದಲ್ಲಿ ಪಂಜರ ಅಥವಾ ಮಾನವನ ಅಸ್ಥಿಪಂಜರ ಎಂದು ಹೇಳಬಹುದು. ಏನು ಈ ಕಾದಂಬರಿಯ ಹೆಸರು ಹೀಗಿದೆ? ಇದು ಸತ್ತವರ ಕತೆಯನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This