ಕೀ.ರಂ ನೆನಪಿನ ತೇರು…

ದಿಲಾವರ್ ರಾಮದುರ್ಗ
dilse
ಅದನಾ ಹೋ ಯಾ ಆಲಾ ಹೋ ಸಬ್ ಕೋ ಲೌಟ್ ಜಾನಾ ಹೈ
ಮುಫಲಿಸೋ ತವಂಗರಕಾ ಕಬ್ರ್ ಹೀ ಠಿಕಾನಾ ಹೈ...

ರಾತ್ರಿ 11ರ (ಆಗಸ್ಟ್ 7, 2010) ಸುಮಾರಿಗೆ ಗೆಳೆಯ ವಿಷ್ಣುಕುಮಾರ್ ಫೋನ್ ಮಾಡಿ ಕಿ.ರಂ ಹೋಗಿಬಿಟ್ರು ಎಂದ. ನಂಬೋಕಾಗಲಿಲ್ಲ. ಬೆಳಿಗ್ಗೆ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದ ಕಟ್ಟೆ ಮೇಲೆ ‘ನೀಗಿಕೊಂಡ ಸಂಸ’ ಬರೆದ ನಾಟಕಕಾರ, ವಿಮರ್ಶಕ ಸುಮ್ಮನೇ ಮಲಗಿದಂತೆ ಕಾಣಿಸಿದ. ಒಂದಷ್ಟು ಕ್ಷಣ ಮುಂದೆ ನಿಂತು ಮನದಲ್ಲೇ ಆಖರೀ ಸಲಾಂ ಹೇಳಿ ಅಲ್ಲೇ ಇದ್ದ ಗೆಳೆಯರ ಗುಂಪಿಗೆ ಸೇರಿದೆ. ನಾಗತಿಹಳ್ಳಿ ರಮೇಶ್ ವ್ಯಾನ್ ನಲ್ಲಿ ಕ್ರಮೇಷನ್ ಗೆ ಹೋಗೋಣ ನಡೆಯಿರಿ ಎಂದು ತಮ್ಮ ಪಟಾಲಂ ಸೇರಿಸಿದ. ನನ್ನನ್ನೂ ಕರೆದೊಯ್ದರು. ‘ಎಂದೂ ಎಲ್ಲೂ ನಿಲ್ಲದ, ಮಾತೇ ಮಾಣಿಕ್ಯ ಎಂದು ನಂಬಿದಂಥ, ದಾರಿಯುದ್ದಕ್ಕೂ ಆಶಯಗಳ ಸಾರುತ್ತ ಹೊರಟ ಸಾರೋ ಐನಾರನ ಹಾಗೆ, ಮೆಚ್ಚಿದ್ದನ್ನು, ಮೆಚ್ಚದೇ ಇದ್ದದ್ದನ್ನು ಏಕತಾರಿ ನಾದದಲ್ಲಿ ಹಾಡುತ್ತ ಹೊರಟ ಫಕೀರ, ದರವೇಶಿಯಂಥ.. ತನ್ನದೇ ಜ್ಞಾನದ ಧುನ್ ನಲ್ಲಿ ಮುಳುಗಿಹೋದ ಸೂಫಿಯಂಥ ಮನುಷ್ಯ ಹೊರಟು ಹೋದನಲ್ಲ…’ ಎಂದೆಲ್ಲ ವ್ಯಾಖ್ಯಾನಿಸಲೆತ್ನಿಸಿದೆ. ಹುಟ್ಟು-ಸಾವಿನ ನಿರಂತರ ಪ್ರಕ್ರಿಯೆಯ ಸತ್ಯದೆದುರು, ಒಬ್ಬ ಮನುಷ್ಯ ಇನ್ನಿಲ್ಲ ಎನ್ನುವ ಹೊತ್ತಲ್ಲಿ ಏನು ಹೇಳಿದರೂ ಏನು ಬಂತು!?
ಆ ಎಲೆಕ್ಟ್ರಿಕ್ ಶವಾಗಾರಕ್ಕೆ ನಾನು ಹೋಗಿದ್ದು ಮೊದಲ ಸಲ. ಕಿ.ರಂ ಶರೀರದ ಮುಂದೆ ಬ್ರಾಹ್ಮಣ ಜೋರು ದನಿಯಲ್ಲಿ ಮಂತ್ರಗಳನ್ನೋದಿದ. ತನ್ನ ಲೆಕ್ಕ ಚುಕ್ತಾ ಮಾಡಿಕೊಂಡು ಮತ್ತೊಂದು ಶವಸಂಸ್ಕಾರಕ್ಕೆ ಅವ ಹೊರಟು ಹೋದ. ಕಿ.ರಂ ದೇಹ, ಶವಾಗಾರದ ಬಾಯಲ್ಲಿತ್ತು. ‘ಇದೇ ಕಡೆಯ ದರ್ಶನ. ಈಗಲೇ ನೋಡೋರು ನೋಡಿಕೊಳ್ಳಿ’ ಎಂದು ಶವಾಗಾರದ ಆಧುನಿಕ ಹರಿಶ್ಚಂದ್ರನೊಬ್ಬ ಕೂಗಿ, ತನ್ನ ಕೆಲಸ ತಾನು ಮಾಡಿ, ಆ ನೆಕ್ಷ್ಟ್..ಎಂದ. ಬೆಂಕಿಯ ಕೆನ್ನಾಲಗೆ ಚಾಚಿಕೊಂಡು ಒಳಕ್ಕೆ ದೇಹ ಎಳೆದುಕೊಂಡಂತೆನಿಸಿತು. ಮೂರೇ ಮೂರು ನಿಮಿಷ ಕಿ.ರಂ ಎನ್ನುವ ದೇಹ ಬೂದಿಯಾಯ್ತು. ಅದೆಷ್ಟೋ ಉಳಿದ ಮಾತು, ಚಿಂತನೆ, ವಿಮರ್ಶೆ ಹೊಗೆಯಾಗಿ ಗಾಳಿಯಲ್ಲಿ ಚದುರಿಕೊಂಡಿತು.
ಮೇಲಿನ ಕವ್ವಾಲಿ ಸಾಲು ನೆನಪಾಯಿತು. (ಅರ್ಥ: ಆಳಾಗಲಿ, ಅರಸನಾಗಲಿ ಅಳಿದು ಹೋಗಲೇಬೇಕು, ಮರಳಿ ಮಣ್ಣ ಸೇರಲೇಬೇಕು.) ಹೀಗೆ ಒಂದಿನ ಎಲ್ಲರದೂ ಸರದಿ…
ಕಿ.ರಂ ನೆನಪಿನ ತೇರಿನಲ್ಲಿ...
ಪ್ರತಿಮಾ ಆರ್ಟ್ ಫೋರಂ, ತಿಪಟೂರು ಗೆಳೆಯರು ಆಗಸ್ಟ್ 20, 2010 ರಂದು ಒಂದು ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅದೊಂದು ತುಂಬ ಆಪ್ತ ವಾತಾವರಣ. ಶುಭ್ರವಾದ ವಿಶಾಲ ಹಾಸುಗೆಯ ಮೇಲೆ ನಿರ್ಮಲ ಭಾವಗಳ ನೆನಪಿನ ತೇರು ಮೆಲ್ಲಗೆ ಸಾಗಿದಂತಿತ್ತು. ಆಮಂತ್ರಣ ಪತ್ರಿಕೆಯಲ್ಲಿ ಅಚ್ಚಾದ ಕೆಲ ಹೆಸರುಗಳು ಅಲ್ಲಿ ಮೂರ್ತ ರೂಪದಲ್ಲಿ ಕಾಣಿಸಲಿಲ್ಲ. ಅವರಿಂದ ಹೊಮ್ಮಬಹುದಾಗಿದ್ದ ವಿಚಾರಗಳು ಕೇಳಿಸಲಿಲ್ಲ. ಅದೇನು ಅಂಥ ಕೊರತೆಯಾಗಿಯೂ ಕಾಡಲಿಲ್ಲ.
ಕೀ.ರಂ ಅವರನ್ನು ಹತ್ತಿರದಿಂದ ಬಲ್ಲ ಲೇಖಕ ಎಸ್. ಗಂಗಾಧರಯ್ಯ, ಚಿಂತಕ ಜಿ.ತಿಪ್ಪೇಸ್ವಾಮಿ, ಶ್ರೀಕಾಂತ್ ಮತ್ತಿರರನ್ನು ಸೇರಿಸಿ ಈ ನೆನಪಿನ ತೇರು ಸಜ್ಜುಗೊಳಿಸಿದ್ದರು.
ಆರಂಭದಲ್ಲೇ ಗಂಗಾಧರಯ್ಯ ತುಂಬ ಭಾವುಕರಾದರು. ಮಾತು ಆರಂಭಿಸಲೆತ್ನಿಸುತ್ತಿದ್ದಂತೇ ನೋವಿನ ಮಡುವಿಗೆ ಸರಿದರು. ಅದು ಕೀ.ರಂ ಬಗೆಗಿನ ಅವರ ಗೌರವ, ಗಾಢ ಪ್ರೀತಿ ಸಂಬಂಧದ ಸಂಕೇತ. ಹೀಗಾಗಿ ಕಾರ್ಯಕ್ರಮ ನಿರ್ವಹಣೆಗೆಂದು ತಿಪ್ಪೇಸ್ವಾಮಿ ಅಖಾಡಕ್ಕಿಳಿದರು. ಸವಿತಾ ನುಗಡೋಣಿ (ಧಾರವಾಡದ ಸವಿತಾ ಜಂಗಮಶೆಟ್ಟಿ) ವಚನ ಸಂಗೀತದ ಮೂಲಕ ನೆನಪಿನ ತೇರಿಗೆ ಉತ್ತಮ ಚಾಲನೆ ಕೊಟ್ಟರು. ಮಣ್ಣಿನ ಮಡಕೆಯಲ್ಲಿ ಬೆಳಕಿನ ತೇರು ರೂಪಿಸಿದ್ದಂತಿದ್ದ ದೀಪಗಳು ಕಾರ್ಯಕ್ರಮಕ್ಕೆ ಡಿವಿನಿಟಿ ಕಳೆ ಕೊಟ್ಟು ಬೆಳಗುತ್ತಲೇ ಇದ್ದವು.
ಲೇಖಕ ಡಾ. ರಂಗನಾಥ ಕಂಟನಕುಂಟೆ ಕೂಡ ಮಾತಿಗಿಳಿಯುತ್ತಿದ್ದಂತೆ ನೋವಿನ ಸೆಳವಿಗೆ ಸಿಕ್ಕರು. ತಕ್ಷಣಕ್ಕೆ ದಾಟಿ ಮಾತಿನ ಲಹರಿಗೆ ಬಂದರು. ಕೀ.ರಂ ಅವರ ಕೊನೆಯ ಆ ನಾಲ್ಕು ತಾಸುಗಳ ಬದುಕನ್ನು ಮತ್ತು ಅಂತಿಮ ಉಸಿರೆಳೆಯುವ ಆ ಫಿನಿಶಿಂಗ್ ಲೈನ್ ಕ್ಷಣಗಳ ಚಿತ್ರಣವನ್ನು ಕಟ್ಟಿಕೊಟ್ಟಿದ್ದು, ಆ ಇಡೀ ಘಟನೆಯ ವಿವರ ಪುನರ್ ಸೃಷ್ಟಿಯಂತೆ ಕಣ್ಮುಂದೆ ಬಂದು ಹೋದಂತೆನಿಸಿತು.
ಗಾಂಧೀ ಬಜಾರಿನ ನಡುರಸ್ತೆಯಲ್ಲಿ ಕುಸಿದುಬಿದ್ದ ಕೀ.ರಂ ಸುಧಾರಿಸಿಕೊಂಡಾಗ ಸುತ್ತೆಲ್ಲ ಸೇರಿದ ಗೆಳೆಯರ ಗುಂಪನ್ನು ಬೆದರಿಸಿ “ಛೇ, ಏನ್ರಯ್ಯ ನೀವೆಲ್ಲ ಬದುಕಿನ ಬಗ್ಗೆನೇ ಹೆದ್ರಸ್ತಿರೀರಲ್ಲಯ್ಯಾ, ನನಗೇನಾಗಿಲ್ಲ… ” ಎಂದರು. ಮನೆಗೆ ಬಂದವರೇ ಮಗಳಿಗೆ, ಹಸಿವಾಗುತ್ತಿದೆ ಅನ್ನ ಇದೆಯೇನಮ್ಮಾ ಎಂದಾಗ, ಅಲ್ಲಿ ಉಣ್ಣೋದಕ್ಕೆ ಏನಿಲ್ಲ. ಛೇ, ಅನ್ನ ಮಾಡಬಾರದೇನಮ್ಮ ಎನ್ನುವಾಗಲೇ ಗೆಳೆಯರ ಗುಂಪಿನ ಒಬ್ಬ ಬಜಾರಿಗೆ ಹಾರಿ ಒಂದಷ್ಟು ಬಿಸ್ಕತ್ತು, ಬಾಳೆಹಣ್ಣು ತಂದರು. ತಿಂದದ್ದೇ ತಡ ವಾಂತಿ ಮಾಡಿಕೊಂಡರು. ಆಸ್ಪತ್ರೆ ಸೇರುವಷ್ಟೊತ್ತಿಗೆ ಕೀ.ರಂ ಎದೆಬಡಿತ ನಿಂತು ಹೋಗಿತ್ತು…
ಇಷ್ಟನ್ನು ರಂಗನಾಥ್ ತುಂಬ ಮನಮಿಡಿಯುವಂತೆ ಹೇಳಿದರು.
(ಕೊನೆಯ ಬಡಿತಕ್ಕೂ ಮುನ್ನ ಹಾರ್ಟ್ ನಾಲ್ಕು ಬಾರಿ ಬದುಕುಳಿಯಲು ಎಚ್ಚರಿಕೆ ನೀಡುತ್ತಲೇ ಬಂದಿತ್ತು ಎನ್ನುವ ಅಂಶ ಕೀ.ರಂ ಬಲ್ಲವರೆಲ್ಲರಿಗೂ ತಿಳಿದೇ ಇತ್ತು. ಕೀ.ರಂ ಅದನ್ನು ನಿರ್ಲಕ್ಷಿಸಿದರೇ? ಎನ್ನುವ ಪ್ರಶ್ನೆ ಹಲವರಿಗೆ ಕಾಡಿತ್ತು.)
ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಕೀ.ರಂ, ನಿವೃತ್ತ ಎನ್ನುವ ಪದವನ್ನೇ ದ್ವೇಷಿಸುತ್ತಿದ್ದರು. ಕ್ಯಾಂಪಸ್ ಅಷ್ಟೇ ಅಲ್ಲ ಹೊರಗೂ ಸಭೆ, ಸಮಾರಂಭಗಳನ್ನು ಪಾಠದ ಕೋಣೆಯನ್ನಾಗಿಸುವ ಶಕ್ತಿ ಬಹುಶಃ ಅವರೊಬ್ಬರಿಗೆ ಮಾತ್ರ ಇತ್ತು ಎನ್ನುವ ಅಂಶವನ್ನು ರಂಗನಾಥ್ ಸೊಗಸಾಗಿ ಹೇಳಿದರು.
ಒಂದು ದೊಡ್ಡ ಶೂನ್ಯ ಆವರಿಸಿದೆ ಈ ನಾಡಲ್ಲಿ, ಅವರೊಬ್ಬ ಮಹಾಮೇಧಾವಿ, ಅವರನ್ನು ಕಳಕೊಂಡ ಹಳವಂಡ ನಮ್ಮನ್ನು ಬಿಡದೇ ಕಾಡುತ್ತದೆ ಎನ್ನುವರ್ಥದಲ್ಲಿ ಅವರ ಮಾತಿನ ಓಘ ಸಾಗಿತ್ತು.
ಶಿವಮೊಗ್ಗದ ಲೇಖಕಿ ಕೆ. ಅಕ್ಷತಾ, ತಮ್ಮ ಮೇಷ್ಟ್ರನ್ನು ಕಳಕೊಂಡ ಆಘಾತದಿಂದ ಇನ್ನೂ ಹೊರಬಂದಂತಿರಲಿಲ್ಲ. ವಿವಿಯ ಆವರಣದಲ್ಲಿ ಅವರ ನಗೆಯನ್ನೊಮ್ಮೆ ಕಂಡು ಅದಕ್ಕೆ ಮಾರುಹೋಗಿ ಕವಿತೆಯನ್ನೇ ಬರೆದೆ. ಆ ನಿರ್ಮಲ ನಗೆಯಲ್ಲಿ ಯಾವುದೇ ಫಲಾಪೇಕ್ಷೆಯ ಲವಲೇಶವೂ ಇರಲಿಲ್ಲ. ಮುಂದೆ ನಾನವರ ಆಪ್ತ ವಲಯದ ಅವರದೇ ಶಿಷ್ಯ ಬಳಗ ಸೇರಿಕೊಂಡೆ. ಅವರು ಗಾಂಧಿ ಬಜಾರಿನ ಹುರಿಗಡಲೆ, ವಿದ್ಯಾರ್ಥಿಭವನದ ದೋಸೆಯ ರುಚಿ ಕೂಡ ತೋರಿಸಿದರು. ಕವಿತೆ, ಸಾಹಿತ್ಯದ ಘಮಲನ್ನು, ಅಮಲನ್ನು ನನ್ನೊಳಕ್ಕೆ ಅದೆಷ್ಟೊ ಧಾರೆ ಎರೆದರು. ನೋಡ್ರಿ ಈ ಹುಡುಗಿ ದೊಡ್ಡ ಲೇಖಕಿ, ನನ್ನ ಬಗ್ಗೆನೇ ಕವನ ಬರೆದುಬಿಟ್ಟಿದ್ದಾಳೆ ಎಂದೆಲ್ಲ ಸಮಾರಂಭದಲ್ಲಿ ಸಿಕ್ಕಾಗೆಲ್ಲ ಎಲ್ಲರ ಮುಂದೆ ಹೇಳಿಕೊಂಡು ನಗುತ್ತಿದ್ದರು. ಮತ್ತದೇ ಮುಗ್ಧ ನಿರ್ಮಲ ಭಾವದ ನಗೆ. ನೀವ್ಯಾರದೋ ನಗೆಯನ್ನು ಕಲ್ಪಿಸಿಕೊಂಡು ಕವಿತೆ ಬರೆದು ನನ್ನ ಹೆಸರು ಬಳಸಿಕೊಂಡಿದ್ದೀರಿ ಎಂದೆಲ್ಲ ಚುಡಾಯಿಸುತ್ತಿದ್ದರು. ಅವರೊಳಗೊಬ್ಬ ಮಗು, ತಾಯಿ, ಸ್ನೇಹಿತ ಎನ್ನುವ ಭಾವಗಳ ನಿರ್ಮಲಧಾರೆಯೇ ಇತ್ತು… ಎನ್ನುವರ್ಥದಲ್ಲಿ ಅಕ್ಷತಾರ ತುಂಬ ಆಪ್ತ ನಿವೇದನೆ ಟಚೀ ಅನಿಸಿತು…
ರಂಗಕರ್ಮಿ ನಟರಾಜ್ ಹೊನ್ನವಳ್ಳಿ ಕೂಡ ಕೀ.ರಂ ನೆನಪಿನ ತೇರು ಎಳೆಯುವವರ ಸಾಲಿನ ದೊಡ್ಡ ಆಸಾಮಿಯಾಗೇ ಕಾಣಿಸಿದರು. ಅವರು ಕೀ.ರಂ ಅವರನ್ನು ರಂಗಭಾಷೆಯಲ್ಲೇ ನೆನಪಿಸಿಕೊಂಡರು. ನಾಟಕಕಾರನೂ ಆಗಿದ್ದ ಕೀ.ರಂ ಗೆ ಅದು ಅತ್ಯಂತ ಅರ್ಥಪೂರ್ಣ ನೆನಿಕೆ. ಶೇಕ್ಸಪಿಯರ್ ನಾಟಕದ ದೊಡ್ಡ ನಟನಂತೆ ಕೀ.ರಂ ನನಗೆ ಕಾಣಿಸುತ್ತಿದ್ದರು. ದೊಡ್ಡ ನಟ ರಂಗಮಂಚದ ಮೇಲೆ ನಿಂತು, ನಿಧಾನಕ್ಕೆ ಪಾತ್ರದ ಮೂಲಕ ಬೆಳೆಯುತ್ತ ಇಡೀ ಪಾತ್ರ ಮತ್ತು ವಸ್ತುವಿನ ಎಲ್ಲ ಸಾಧ್ಯತೆಗಳ ಕ್ಷಿತಿಜ ಮುಟ್ಟಿ ನಿಲ್ಲುತ್ತಿದ್ದ. ಪ್ರೇಕ್ಷಕರ ನೋಟವಷ್ಟೇ ಅಲ್ಲ, ಅರಿವಿನ ಹರವನ್ನೇ ಹೆಚ್ಚಿಸುವಂಥ ಅನುಸಂಧಾನದ ಪ್ರಕ್ರಿಯೆ ಅದು ಎನ್ನುವರ್ಥದಲ್ಲಿ ಅವರ ಮಾತಿನ ಲಹರಿ ಇತ್ತು.
ಸಾಹಿತ್ಯಿಕ ನೆಲೆಯಲ್ಲಿ ಕೀ.ರಂ ಬಗ್ಗೆ ಮಾತನಾಡುವುದಕ್ಕೆ ಇದು ಸೂಕ್ತ ಸಮಯವಲ್ಲ. ಹೀಗಾಗಿ ರಂಗಮಾಧ್ಯಮದ ಮೂಲಕವೇ ನಾನವರನ್ನು ನೆನಪಿಸಿಕೊಂಡೆ ಎಂದೆಲ್ಲ ನಟರಾಜ್ ಸಂಕ್ಷಿಪ್ತವಾಗೇ ವಿದ್ವತ್ ಪೂರ್ಣ ಮಾತು ಹೇಳಿದರು. ಶುಭ್ರ ಬಟ್ಟೆಯಿಂದ ಅಲಂಕೃತ ಹಾಸುಗೆಯ ಮೇಲೆ ಕುಳಿತ ಭಂಗಿ, ಮೈಕನ್ನು ಮುಟ್ಟಿ, ಮೆಲ್ಲಗೆ ತಟ್ಟಿ ಗಾಂಭೀರ್ಯದಿಂದ ಮಾತನಾಡುತ್ತಿದ್ದ ರೀತಿ ಹೋಮದ ಮುಂದೆ ಅಧ್ವೈರ್ಯು ವಿರಾಜಮಾನರಾಗಿದ್ದ ಹಾಗಿತ್ತು.
ಮಧ್ಯದಲ್ಲೇ ಹೊಸ ಪಾತ್ರಧಾರಿಯಂತೆ ಕಾರ್ಯಕ್ರಮ ನಿರ್ವಹಣೆಗೆ ಉಗಮ ಶ್ರೀನಿವಾಸ ಧುತ್ತನೇ ಅಖಾಡಕ್ಕೆ ನುಗ್ಗಿದರು. ಎಲ್ಲರೂ ಸಿಕ್ಕ ಅವಕಾಶವನ್ನು ಚೆನ್ನಾಗೇ ಬಳಸಿಕೊಂಡರು.
ಸವಿತಾ ಜಂಗಮಶೆಟ್ಟಿ ವಚನ ಸಂಗೀತ ಒಂದಷ್ಟು ಹೊತ್ತು ಮತ್ತೆ ಕಳೆಕಟ್ಟಿತು. ವಚನಗಳ ಮೂಲಕ ಕೀ.ರಂ ನೆನಪಿಸಿಕೊಂಡಿದ್ದು ಅರ್ಥಪೂರ್ಣ. ಹಿಂಬದಿಯ ಗೋಡೆಯ ಮೇಲೆ ಗೆಳೆಯ ವಿಷ್ಣುಕುಮಾರ್ ರೂಪಿಸಿದ ಕಾರ್ಯಕ್ರಮದಷ್ಟೇ ಅರ್ಥಪೂರ್ಣ ಬ್ಯಾಕ್ ಡ್ರಾಪ್ ನಲ್ಲಿ ಕೀ.ರಂ ತುಂಬ ಸಂಕಟದಿಂದ ‘ಯಾಕ್ರಪ್ಪಾ ಮನಸಿಗೆ ಅಷ್ಟು ನೋವು ಮಾಡಿಕೋತಾ ಇದೀರಿ… ‘ ಎನ್ನುವಂತೆ ವೇದಿಕೆಯನ್ನೇ ನೋಡುತ್ತಿದ್ದಂಥ ಚಿತ್ರ ತುಂಬ ಕಾಡುವಂಥದ್ದು.
ಕೀ.ರಂ ಮಾತಿಗೆ ನಿಂತರೆಂದರೆ ಅನುಭಾವ ಮಂಟಪದ ಅಲ್ಲಮನಾಗುತ್ತಿದ್ದರು. ತಮ್ಮ ವಿಚಾರ, ಆಶಯ, ಜ್ಞಾನದ ಪ್ರತಿ ಸಾಲಿನ ಕೊನೆಗೆ ರುಜು ಹಾಕಿ ಅದನ್ನು ತಮ್ಮದೇ ಆಗಿಸಿಕೊಳ್ಳುವ ಎನ್ ಕ್ಯಾಶ್ ಬುದ್ಧಿ ಅವರಲ್ಲಿರಲಿಲ್ಲ. ಒಂದು ನಾಡು, ಪರಂಪರೆಗೆ ಹೊಸ ಕಣ್ಣು ಮೂಡಿಸುವ, ಹೊಸ ಬೆಳಕು, ಹೊಳಹು ಕೊಡುವ ಅಪ್ಪಟ ಸೂಫಿಯಾಗಿದ್ದರೆನ್ನುವ ಅಂಶ ಕಾರ್ಯಕ್ರಮದುದ್ದಕ್ಕೂ ಮತ್ತೆ ಮತ್ತೆ ನೆನಪಾಗುತ್ತಿತ್ತು. ಆದರೆ, ಎಲ್ಲರೂ ಕೀ.ರಂ ಸಾವನ್ನು ಒಂದು ದೊಡ್ಡ ಶೂನ್ಯ ಎಂದೇ ವ್ಯಾಖ್ಯಾನಿಸುತ್ತಿದ್ದರು. ಸಾಹಿತ್ಯ ಅಥವಾ ಒಟ್ಟಾರೆ ಬದುಕು ಎನ್ನುವ ಕ್ಯಾನವಾಸಿನಲ್ಲಿ ಅವರದು ಅವರದೇ ಆದೊಂದು ಜರ್ನಿ. ಅದು ಮುಗಿದಂತೆನಿಸಿದೆ. ಮುಂದೆ ಅದು ಎಲ್ಲಿಂದಲಾದರೂ ಮುಂದುವರಿಯುತ್ತದೆ. ಚಿಂತನೆಗಳಲ್ಲಿ, ಆಶಯಗಳಲ್ಲಿ ಅದು ನಮ್ಮೊಂದಿಗೆ ನಡಿತಾನೇ ಇರುತ್ತೆ.
ಮತ್ತೆ ಸೂಫಿ ಕವ್ವಾಲಿಯ ಸಾಲುಗಳು ನೆನಪಾಗುತ್ತಿವೆ.
ಮೌತ್ ಸಬ್ ಕೋ ಆನೀ ಹೈ, ಇಸ್ ಸೇ ಕೌನ್ ಝೂಟಾ ಹೈ
(ಅರ್ಥ: ಸಾವೆಂಬ ಸತ್ಯ ಯಾರನ್ನು ಬಿಟ್ಟೀತು)

‍ಲೇಖಕರು avadhi

September 28, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

೧ ಪ್ರತಿಕ್ರಿಯೆ

  1. ashok shettar

    ಕೃತ್ರಿಮವಾಗಿ ಸಾಹಿತಿಗಳ ಕೃತಿಗಳನ್ನು ಹಲವಾರು ಆವೃತ್ತಿಗಳಲ್ಲಿ ಪ್ರಕಟಿಸಿ, ಹೊತ್ತು ಮೆರೆಸುವ ವಿಲಕ್ಷಣ ಪ್ರವೃತ್ತಿಗಳ ನಡುವೆ ಕಿ.ರಂ.ನಾಗರಾಜ್ ರ೦ಥ ವ್ಯಕ್ತಿ ಎಷ್ಟೆಲ್ಲಾ ಜನರ ಮನಸಿನಲ್ಲಿ ಎಷ್ಟು ಬಗೆಯ ನೆನಪಾಗಿ, ಸಂವೇದನೆಯಾಗಿ,ಕೊರತೆಯಾಗಿ, ಪ್ರೀತಿಯ ಒರತೆಯಾಗಿ ಎಷ್ಟೆಲ್ಲಾ ಕಾರಣಗಳಿಗಾಗಿ ಉಳಿದುಕೊಳ್ಳುತ್ತಿದ್ದಾರೆ ಎಂಬುದು ವಿಸ್ಮಯ. ಅಗಸ್ಟ್ ೮ನೆಯ ತಾರೀಖು ಕುರ್ತಕೋಟಿ ಪ್ರತಿಷ್ಥಾನ ಆಯೋಜಿಸಿದ್ದ ಸಭೆಯಲ್ಲಿ ಪುಸ್ತಕಗಳನ್ನು ಬಿಡುಗಡೆಗೊಳಿಸಲು ಅವರು ಧಾರವಾಡಕ್ಕೆ ಬರಬೇಕಿತ್ತು.ಅವರ ಜೊತೆ ಹರಟುವ ಸಂದರ್ಭಕ್ಕೆ ಕಾಯ್ದಿದ್ದೆ. ಆದರೆ ಅವರ ಪಯಣ ಬೇರೆ ದಿಕ್ಕಿನಲ್ಲಿ ನಿಗದಿಯಾಗಿತ್ತು ಎಂದು ಯಾರು ತಿಳಿದಿದ್ದರು? ಜುಲೈ ೧೬ರನ್ದು ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ನಾನು ಅವರ ಜೊತೆ ಒಂದೇ ವೇದಿಕೆಯಲ್ಲಿ ಇದ್ದದ್ದೇ ಕೊನೆಯಾಯ್ತು.ದಿಲಾವರ್ ರಾಮದುರ್ಗರ ಲೇಖನ ಕಿ.ರಂ ಅವರ ನೆನಪಿನಲ್ಲಿ ಮತ್ತೊಂದಾವರ್ತಿ ಕೆಲಹೊತ್ತು ಮೈಮರೆಸಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: