ಕುಂಜನಿಗೆ ಜಗನ್ಮೋಹಿನಿ ದರ್ಶನವಾದದ್ದು

ಬಿಳುಮಲೆ ರಾಮದಾಸ್

ಮೇಗರವಳ್ಳಿಯ ನಮ್ಮ ಮನೆ ಎದುರಿಗೆ ನಮ್ಮ ಬಂಧು ರಾಮಪ್ಪಗೌಡರ ಮನೆ ಇದೆ. ಗೌಡರ ಅಡಿಕೆತೋಟ ಮೇಗರವಳ್ಳಿಗೆ ಅನತಿ ದೂರದಲ್ಲಿ ಕಗ್ಗಾಡಿನ ಮಧ್ಯೆ ಹೊಂಡದಲ್ಲಿದೆ. ಆ ಪ್ರದೇಶದಲ್ಲಿ ಶಾಂತವಾತಾವರಣವಿದ್ದು ಪ್ರಕೃತಿಯಲ್ಲಿ ಆಸಕ್ತಿ ಇರುವವರಿಗೆ ಸಮಯ ಕಳೆಯಲು ಅದು ರಮ್ಯತಾಣ. ತೋಟದ ಮೇಲೆ ಬಯಲಲ್ಲಿ ಕುರುಚಲು ಗಿಡಗಳು ಹಸಿರು ಹುಲ್ಲು ಈಚಲು ಬೆಮ್ಮಾರಲು ಹುಳುಸೊಪ್ಪಿನ ಹಣ್ಣುಗಳು ಬಿಡುವ ಸಣ್ಣ ಗಿಡಗಳಿರುವ ಬೇಣವಿದೆ. ಬೆಳಗ್ಗೆ ಗೌಡರ ಮನೆಯ ದನಕರುಗಳು ಅಲ್ಲಿ ಹಸಿರನ್ನು ಮೆಂದು ಸಂಜೆಯಾಗುತ್ತಿದ್ದಂತೆ ಮನೆಗೆ ಹಿಂದಿರುಗುತ್ತವೆ. ಗೌಡರ ಮನೆಯ ಕೆಲಸದಾಳು ಕುಂಜನು ಬೆಳಗ್ಗೆ ದನಕರುಗಳನ್ನು ಅಲ್ಲಿ ಮೇಯಲು ಬಿಟ್ಟು ದನಕರುಗಳು ಬೆಚ್ಚಗೆ ಮಲಗಲು ಒಂದು ಹೊರೆ ಸೊಪ್ಪನ್ನು ಕಡಿದು ಹೊರೆ ಮಾಡಿ ಹೊತ್ತು ಗೌಡರ ಮನೆಗೆ ಬರುವುದು ಪದ್ಧತಿ. ಒಂದು ಸಾರಿ ಗೌಡರು ಕುಂಜನಿಗೆ ದನಕರುಗಳನ್ನು ಮೇಯಲು ಬಿಟ್ಟಾದ ಮೇಲೆ ತೋಟದಲ್ಲಿ ಉದುರಿಬಿದ್ದ ಅಡಿಕೆ ಸೋಗೆಯನ್ನು ಗುಡಲಿಗೆ ಪೇರಿಸಿ ಇಡಲು ಹೇಳಿದರು. ಕುಂಜನು ದನಕರುಗಳನ್ನು ಮೇಯಲು ಬಿಟ್ಟಾದ ಮೇಲೆ ತಗ್ಗಿನಲ್ಲಿದ್ದ ತೋಟಕ್ಕೆ ಸೋಗೆ ಎಳೆಯಲು ಹೋದ. ತೋಟ ಯಾವುದೇ ಸದ್ದು ಗದ್ದಲವಿಲ್ಲದೆ ತಣ್ಣಗಿತ್ತು. ಆಗೀಗೊಂದು ಸೋಗೆ ಅಡಿಕೆ ಮರದಿಂದ ಉಗಿದು ಬೀಳುತ್ತಿತ್ತಷ್ಟೆ. ಅದು ಬಿಟ್ಟರೆ ತೋಟದಿಂದಾಚೆ ಕಾಡಿನಲ್ಲಿ ಗಿಳಿಗಳು ಕಾಜಾಣಗಳು ಹಾರಾಡುತ್ತ ಹಾಡುತ್ತಿದ್ದವು. ಕುಂಜನಿಗೆ ಅದೆಲ್ಲ ನಿತ್ಯದ ಹಾಡಾದ್ದರಿಂದ ಆತ ಆ ಬಗ್ಗೆ ತಲೆಕೆಡಿಸಿಕೊಳ್ಳದೆ ಅಂಕುಡೊಂಕಾಗಿ ಸಾಗಿದ ಕಾಲುದಾರಿಯಲ್ಲಿ ತೋಟಕ್ಕೆ ಇಳಿದ. ತೋಟದಲ್ಲಿ ತಂಪು ಇದ್ದು ಬಿಸಿಲಿರಲಿಲ್ಲ. ತೋಟದ ಕಪ್ಪಿನಲ್ಲಿ ತಿಳಿನೀರು ಜುಳುಜುಳು ಸದ್ದುಮಾಡಿ ತಗ್ಗಿನ ಕಡೆಗೆ ಹರಿಯುತ್ತಿತ್ತು. ಸೋಗೆಗಳನ್ನು ಹೆಕ್ಕಿ ಗುಡಲಿಗೆ ಹಾಕದೆ ನಾಲ್ಕಾರು ದಿನವಾದ್ದರಿಂದ ಸೋಗೆಗಳು ದಂಡಿಯಾಗಿ ಅಲ್ಲಲ್ಲಿ ರಾಶಿ ಬಿದ್ದಿದ್ದವು. ಕುಂಜ ಒಂದೊಂದೆ ಸೋಗೆಯನ್ನು ಹೆಕ್ಕಿ ಗುಡಲಿಗೇರಿಸುತ್ತ ಜಗನ್ಮೋಹಿನಿ ಸಿನಿಮಾದ “ಎಂದೋ ಎಂದೋ ನಿನ್ನ ದರುಶನವು. ನಾನಿನ್ನ ಕಾದು ಕುಳಿತೆ. ನೀನೇಕೆ ಎನ್ನ ಮರೆತೆ” ಎಂದು ಸಿಳ್ಳೆ ಹಾಕಿ ಹಾಡತೊಡಗಿದ. ಅಂದಿನ ದಿನಗಳಲ್ಲಿ ಜಗನ್ಮೋಹಿನಿ ಸಿನೆಮಾ ಮತ್ತು ಅದರ ಹಾಡುಗಳು ಅಷ್ಟು ಜನಪ್ರಿಯವಾಗಿತ್ತು. ಬಹಳ ಮಂದಿ ಆ ಸಿನೆಮಾದಿಂದಾಗಿ ತಲೆಕೆಡಿಸಿಕೊಂಡಿದ್ದರು. ಎಲ್ಲರ ಬಾಯಲ್ಲೂ ಅದೇ ಹಾಡುಗಳು. ಕುಂಜನಿಗೆ ಕೊಳಲೂದುವ ಹವ್ಯಾಸ ಇದ್ದುದರಿಂದ ಹಾಡುಗಳನ್ನು ಅಭ್ಯಾಸ ಮಾಡಲು ಮೂರುನಾಲ್ಕು ಬಾರಿ ತೀರ್ಥಹಳ್ಳಿಗೆ ಎರಡನೇ ಶೋಗೆ ಸೈಕಲ್ ಹಾಕಿಕೊಂಡು ಹೋಗಿ ಜಗನ್ಮೋಹಿನಿ ಸಿನೆಮಾ ನೋಡಿ ಬಂದಿದ್ದ. ಹಗಲಿಡೀ ಸಿಳ್ಳೆ ಹಾಕಿ ಹಾಡು ಅಭ್ಯಾಸ ಮಾಡುವುದೂ ರಾತ್ರಿ ಕೊಳಲೂದಿ ಅಭ್ಯಾಸ ಮಾಡುವುದು ಮಾಡುತ್ತಿದ್ದ. ಕೊಳಲೂದುವ ಅವನ ಹವ್ಯಾಸದಿಂದ ಆತ ಮೇಗರವಳ್ಳಿಯಲ್ಲಿ ಸಾಕಷ್ಟು ಜನಪ್ರಿಯನೂ ಆಗಿದ್ದ.

ಕುಂಜ ಸಿಳ್ಳೆ ಹಾಕುತ್ತ ಸೋಗೆ ಹೆಕ್ಕುತ್ತಿರುವಾಗ ತೋಟದ ಮೇಲೆ ಕೆರೆಯ ಕಡೆ ಏನೋ ಗುರುಗುಟ್ಟಿದ ಸದ್ದಾಯಿತು. ತೋಟದ ಮೇಲೆ ತುಸು ಎತ್ತರದಲ್ಲಿ ಸಣ್ಣ ಕೆರೆಯೊಂದಿದ್ದು ತೋಟಕ್ಕೆ ಅದರಿಂದ ನೀರು ಹರಿದು ಬರುತ್ತಿತ್ತು. ಆ ಕೆರೆ ಕಾಡುಪ್ರಾಣಿಗಳಿಗೆ ನೀರು ಕುಡಿಯಲು ಅನುಕೂಲವಾಗಿತ್ತು. ಏರುಬಿಸಿಲು ಹೊತ್ತಿನಲ್ಲಿ ನೀರು ಕುಡಿಯಲು ಬಂದ ಪ್ರಾಣಿಗಳನ್ನು ಮರೆಯಲ್ಲಿ ಅವಿತು ಕೂತ ಹುಲಿಗಳು ಹಿಡಿದು ತಮ್ಮ ಹಸಿವನ್ನು ನೀಗಿಸಿಕೊಳ್ಳುತ್ತಿದ್ದವು. ಗುರುಗುಟ್ಟಿದ ಸದ್ದು ಕೇಳಿ ಕುಂಜ ಹೌಹಾರಿಬಿದ್ದು ಅತ್ತ ಕಡೆಗೆ ತಿರುಗಿ ನೋಡಿದ. ಕುಂಜನ ಜಂಘಾಬಲವೇ ಉಡುಗಿ ಹೋಯಿತು. ಆತ ತತ್ತರ ನಡುಗ ಹತ್ತಿದ. ಕೆರೆದಂಡೆಯ ಮೇಲೆ ಬಾರೀ ಪಟ್ಟೆ ಹುಲಿಯೊಂದು ಅವನನ್ನೆ ನೋಡುತ್ತ ಕೂತಿತ್ತು. ಕುಂಜ ಜೀವಂತ ಹುಲಿಯನ್ನು ನೋಡಿದ್ದು ಅದೇ ಮೊದಲು. ಹಿಂದೆ ಶಿಕಾರಿಯವರು ಬೇಟೆಯಾಡಿದ ಸತ್ತ ಹುಲಿಯನ್ನು ನೋಡಿದ್ದ. ಆಗ ಭಯವಾಗಿರಲಿಲ್ಲ. ಈಗ ಭಯವಲ್ಲದೆ ಅವನ ಹರಿದ ಖಾಕಿ ಚಡ್ಡಿಯಲ್ಲಿ ಒಂದು ಎರಡೂ ಆಗಿತ್ತು. ಹುಲಿ ತನ್ನನ್ನು ಅಟ್ಟಿಸಿಕೊಂಡು ಬರುವುದೇನೊ ಎಂದು ಜೀವ ಭಯದಿಂದ ಅಡಿಕೆ ಮರ ಹತ್ತಿ ತಪ್ಪಿಸಿಕೊಳ್ಳೋಣವೆಂದು ಹತ್ತಿರದ ಅಡಿಕೆ ಮರವನ್ನು ಹತ್ತಿದ. ಅಡಿಕೆ ಮರ ಹತ್ತುವುದು ಅಷ್ಟು ಸುಲಭವಲ್ಲ. ಆ ಮರಗಳಿಗೆ ರೆಂಬೆಕೊಂಬೆಗಳಿರುವುದಿಲ್ಲ. ನೆಟ್ಟಕ್ಕೆ ಉದ್ದಕ್ಕೆ ಅವು ಮೇಲಕ್ಕೆ ಹೋಗಿರುತ್ತವೆ. ಹಳೆ ಮರಗಳನ್ನು ಹತ್ತಿದರೆ ಅವು ಮುರಿದು ಬೀಳುತ್ತವೆ. ಮಳೆಗಾಲದಲ್ಲಿ ಅಡಿಕೆಗೊನೆಗಳಿಗೆ ಕೊಳೆರೋಗ ಹತ್ತಿದಾಗ ಗೊನೆಗಳಿಗೆ ಔಷಧಿ ಹೊಡೆಯುವವರು ಹಳೆ ಮರಗಳಿಗೆ ಹತ್ತದೆ ಹೊಸಮರಗಳಿಗೆ ಪೆಟ್ಟುಮಣೆ ಸಹಾಯದಿಂದ ಅರ್ಧಕ್ಕೆ ಹತ್ತಿ ಹಳೆಮರಗಳಿಗೆ ಔಷಧಿ ಸಿಂಪಡಿಸುತ್ತಾರೆ. ಅಂತಹದರಲ್ಲೂ ಕೆಲವರು ಆಯತಪ್ಪಿ ಮೇಲಿನಿಂದ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಾರೆ. ಹೀಗಿದ್ದಾಗ ಕುಂಜ ಪೆಟ್ಟುಮಣೆ ಸಹಾಯವಿಲ್ಲದೆ ಅಡಿಕೆಮರ ಹತ್ತಲು ವ್ಯರ್ಥ ಪ್ರಯತ್ನ ಮಾಡಿ ಜಾರಿಜಾರಿ ಕೆಳಗೆ ಬೀಳುತ್ತಿದ್ದ. ಆತನ ಆಟಗಳನ್ನು ಹುಲಿ ನೋಡುತ್ತಲೇ ಕೂತಿತ್ತು. ಸಾಮಾನ್ಯವಾಗಿ ಹುಲಿಗಳು ಮನುಷ್ಯನನ್ನು ನೋಡಿದರೆ ಓಡಿಹೋಗುತ್ತವೆ. ಅದೇಕೊ ಆ ಹುಲಿ ಅವನನ್ನು ನೋಡುತ್ತ ಕೂತೇಬಿಟ್ಟಿತ್ತು. ದಿಗಿಲು ಬಿದ್ದವನು ಕುಂಜ ಮಾತ್ರ. ಈ ಹೊತ್ತಿಗೆ ಮತ್ತೊಂದು ಹುಲಿ ಕಾಡಿನಿಂದ ಹೊರಬಂದು ಕೆರೆದಂಡೆಯ ಮೇಲೆ ಕೂತ ಹುಲಿಯನ್ನು ಸೇರಿಕೊಳ್ಳಲು ಬಂದಿತು. ಕುಂಜ ಮತ್ತಷ್ಟು ದಿಗಿಲಾಗಿ ಅಡಿಕೆಮರ ಹತ್ತುವ ಪ್ರಯತ್ನವನ್ನು ಕೈಬಿಟ್ಟು ಊರ ಕಡೆಗೆ ಓಡಿದ. ಆತ ಏದುಸಿರು ಬಿಡುತ್ತ ಓಡುತ್ತಿದ್ದುದನ್ನು ನೋಡಿ ದಾರಿಹೋಕರು “ಏನು? ಯಾಕೆ? ಯಂತದು?” ಎಂದು ಕೇಳಿದರೆ ಆತನಿಂದ ಉತ್ತರವೇ ಇಲ್ಲ. ಸತ್ತೆನೊ ಕೆಟ್ಟೆನೊ ಎಂದು ಎದ್ದು ಬಿದ್ದು ಓಡುತ್ತಲೇ ಇದ್ದ.

ಕುಂಜ ಓಡಿಬಂದು ಮನೆಯ ಹಿಂದೆ ತತ್ತರ ನಡುಗುತ್ತ ಕೂತದ್ದನ್ನು ನೋಡಿದ ಗೌಡರು ಅವರ ಹೆಂಡತಿ ಮಕ್ಕಳು “ಏನಾಯಿತೋ? ಯಾಕೆ ನಡಗತಿದಿಯಾ?” ಎಂದು ಕೇಳಿದರೆ ಅವನು “ಹುಲಿ…ಹುಲಿ… ತ್ವಾಟದಾಗೆ” ಎಂದು ನಡುಗುತ್ತ ಕಂಪಿಸುವ ಧ್ವನಿಯಲ್ಲಿ ಹೇಳಿದ. ಅವನ ಚಡ್ಡಿಯಲ್ಲಿ ವಾಸನೆ ಹೊಡೆಯುತ್ತಿದ್ದುದನ್ನು ನೋಡಿ ಮಕ್ಕಳಿಗೆ ನಗು. ಆತ ಹುಲಿ ನೋಡಿ ಹೆದರಿದ್ದಾನೆಂದು ಮನೆಮಂದಿಗೆ ಅರ್ಥವಾಯಿತು. ಗೌಡರು ಅವನಿಗೆ ಹುಲಿರಾವು ತೆಗೆಯಲು ಸಿದ್ಧತೆ ಮಾಡಿದರು. ಹುಲಿ ನೋಡಿ ಹೆದರಿದವರಿಗೆ ಹುಲಿರಾವು ತೆಗೆಯುವ ಪದ್ಧತಿ ಅಂದು ಇದ್ದಿತು. ಗೌಡರು ದೋಸೆಯ ಸಟ್ಟುಗವನ್ನು ಒಲೆಗೆ ಹಾಕಿ ಕೆಂಪಗೆ ಕಾಯಿಸಿದರು. ಅವನಿಗೆ ತಿಳಿಯದಂತೆ ಅವನ ಹಿಂದೆ ಒಂದು ಬೋಗಣಿಯಲ್ಲಿ ತಣ್ಣೀರು ಇಟ್ಟರು. ಕೆಂಪಾಗಿ ಕಾದ ದೋಸೆ ಸಟ್ಟುಗವನ್ನು ತಣ್ಣೀರಿನ ಬೋಗಣೆಗೆ ಅದ್ದಿದರು. ಸಟ್ಟುಗ ನೀರಿಗೆ ಬಿದ್ದದ್ದೆ ತಡ ಅದು “ಚೊಸ್” ಎಂದು ಭಾರೀ ಸದ್ದು ಮಾಡಿತು. ಹುಲಿಯೆ ಮೈ ಮೇಲೆ ಬಿದ್ದಿತೆಂದು ಹೌಹಾರಿಬಿದ್ದ ಕುಂಜ “ಅಯ್ಯಯ್ಯೋ” ಎಂದು ಕೂಗಿದ. ಮನೆಮಂದಿಯೆಲ್ಲ ಗೊಳ್ಳೆಂದು ನಕ್ಕರು. ಮನೆಯವರಿಗೇನೊ ಹುಲಿರಾವು ತೆಗೆದೆವೆಂದು ಸಮಾಧಾನವಾಯಿತು. ಹುಲಿ ನೋಡಿ ಹೆದರಿದ್ದ ಕುಂಜ ನಾಲ್ಕು ದಿನ ಜ್ವರ ಬಂದು ಮಲಗಿದ.

‍ಲೇಖಕರು avadhi

April 23, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಿನಿಮಾ ತಯಾರಿಯ ತಮಾಷೆಗಳು…

-ಕೃಷ್ಣ ಮಾಸಡಿ ನಾನು ಬಾಲ್ಯದಲ್ಲಿ ಹೊನ್ನಾಳಿ ಮತ್ತು ರಾಂಪುರ ಜಾತ್ರೆಯಲ್ಲಿ ಹಾಕುತ್ತಿದ್ದ ಟೂರಿಂಗ್ ಟಾಕೀಸುಗಳಲ್ಲಿ ನೆಲದಲ್ಲಿ ಹಾಗೂ ಆಗಾಗ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This