ಕುಂಟೋಬಿಲ್ಲೆಯ ಹುಡುಗಿ ಹಿತ್ತಿಲಲ್ಲಿ ಕುಂಟುತ್ತಿದ್ದಾಳೆ…

ಉಫೀಟ್…!


ಲೇ: ಚೇತನಾ ತೀರ್ಥಹಳ್ಳಿ
ಪ್ರ: ಇಬ್ಬನಿ ಭಾವಬಿಂದು, ೩೬೩೪, ೪ನೇ ಕ್ರಾಸ್, ಕೌಂಡಿನ್ಯ ಮೆಡಿಕಲ್ಸ್ ಸಮೀಪ, ಗಾಯತ್ರಿ ನಗರ, ಬೆಂಗಳೂರು-೨೧
ಬೆಲೆ: ೨೦ ರೂ. ಪುಟಗಳು: ೪೪

chetana_coverone5.jpg

* * *

ಚೇತನಾ ತೀರ್ಥಹಳ್ಳಿ ನನಗೆ ಪರಿಚಯವಿರುವುದು “ಪುರುಷಾಕಾರ”ವನ್ನು ಬೆಚ್ಚಿಸಬಲ್ಲ ಅವರ ಬರಹಗಳ ಮೂಲಕ. ಪುಟ್ಟ ಪುಟ್ಟ ಬರಹಗಳು ಅವು. ಕಾವ್ಯದ ಶಕ್ತಿಯೊಂದಿಗೆ ಕೆಲವೇ ಮಾತುಗಳಲ್ಲಿ ಮಾರ್ಮಿಕವಾಗಿ, ಆದರೆ ಬಲು ನಿರಾಯಾಸವಾಗಿ, ಹೇಳಬೇಕಾದ್ದನ್ನು ಹೇಳಿ ಮುಗಿಸಬಲ್ಲ ಸಹಜವಂತಿಕೆಯಿಂದ ಅವರ ಬರಹಗಳು ಗಮನ ಸೆಳೆಯುತ್ತವೆ. ಅವರು ಕವಿತೆಯನ್ನೂ ಬರೆಯುತ್ತಾರೆ ಎಂಬುದು ಗೊತ್ತಾದದ್ದೇ ಮೊನ್ನೆ.

ಅಳಲು, ಸಿಟ್ಟು ಮತ್ತು ಪ್ರತಿಭಟನೆಯನ್ನು ಹಾಹಾಗೇ ವ್ಯಕ್ತಪಡಿಸುವ ಯಾವುದೇ ಮನೆಯ ಹುಡುಗಿಯ ಹಾಗೆ ಚೇತನಾ ಅವರ ಅಭಿವ್ಯಕ್ತಿ. ಹಾಗಾಗಿಯೇ ಚೇತನಾ ಎಷ್ಟೋ ಸಲ ಗೋಳು ಮತ್ತು ಗೋಜಲುಗಳ ಕಥೆಗಳಲ್ಲಿ ಮುಳುಗಿಹೋಗಿದ್ದಾರೆ ಎನ್ನಿಸಿದರೂ, ಅವರು ಹೇಳುತ್ತಿರುವುದು ಮಾತ್ರ ಹಲವು ಹುಡುಗಿಯರ ಕಥೆಯನ್ನು ಎಂಬುದೂ ನಿಚ್ಚಳ. ವೈಯಕ್ತಕ ಸಂಕಟಗಳ ಕತ್ತಲ ಕೋಣೆಯ ಬಾಗಿಲಿಂದಾಚೆಯೂ ನಿರುಕಿಸುವ ಧ್ಯಾನ ಅವರದು. ಅದರಿಂದ, ಒಂದಿಡೀ ಸಮುದಾಯದ ಆತ್ಮಕಥನವಾಗಲು ತವಕಿಸುವ ಮಿಂಚಿನ ಧಾರೆಗಳು ಕೂಡ ಅವರ ಬರಹಗಳಲ್ಲಿ ಗೋಚರವಾಗುತ್ತವೆ.

*

“ಹನ್ನೆರಡು ಮನೆ
ಕುಂಟೋಬಿಲ್ಲೆಯ ಹುಡುಗಿ
ಹಿತ್ತಿಲಲ್ಲಿ ಕುಂಟುತ್ತಿದ್ದಾಳೆ,
ಆಟ ಸೋತಿದ್ದಾಳೆ.”

chetana2.jpgಇಲ್ಲಿನ ಬಹುಪಾಲು ಕವಿತೆಗಳಲ್ಲಿ ಇರುವವರು ಹೀಗೆ “ಆಟ ಸೋತ” ಹುಡುಗಿಯರು. “ಬಲಗಾಲಿಟ್ಟು ಶುರುವಾಗುವ ಆಟ”ದಲ್ಲಿ ಸೋತವರು. ಇವರದೆಲ್ಲ “ನೋವುಗಳ ಬಗೆಬಗೆದು ಹೊರಗೆಳೆದು ಅಳು”ವ ಸ್ಥಿತಿ. ಹಾಗಿದ್ದೂ ಬೇರೆಯವರ ಅನುಕಂಪದ ನೋಟ ಇವರನ್ನು ಸಂತೈಸುವುದಿಲ್ಲ; ಬದಲಾಗಿ ಇನ್ನಷ್ಟು ತಲ್ಲಣಗೊಳಿಸುತ್ತದೆ. ನಿರ್ದಯಿ ಲೋಕದಲ್ಲಿ ನಗುವಾಗಿ ಅವತರಿಸುವ ಶಕ್ತಿವಂತೆಯರು ಇವರು.

“ಎಷ್ಟು ದಿನಗಳಾಗಿ ಹೋಗಿವೆ
ನನ್ನ ನೆರಳು ನೋಡಿ ನಾನು!”

ಹೆಣ್ಣೊಬ್ಬಳ “ಗೃಹಬಂಧನ” ಅವಸ್ಥೆಯನ್ನು ನಿರೂಪಿಸುವುದಕ್ಕೆ ಇದಕ್ಕಿಂತ ಬೇರೆ ಸಾಲುಗಳು ಬೇಕಿಲ್ಲವೇನೊ. ಒಂದು ನಿರೀಕ್ಷೆಯಿಂದ, ಸುಂದರ ಕನಸಿನಿಂದ ಶುರುವಾಗುವ ಬಾಳು ಯಾವ ಹಂತಕ್ಕೆ ಮುಟ್ಟಿದೆಯೆಂದರೆ, ಈಗ ಸೂರ್ಯನ ಮುಖ ನೋಡದೆ ದಿನಗಳು ಹುಟ್ಟುವುದು, ಮುಗಿದುಹೋಗುವುದು ಅಭ್ಯಾಸವೇ ಆಗಿಹೋಗಿದೆ.

ಇಂಥ ಹಲವು ಕಥನಗಳನ್ನು ಚೇತನಾ ಕವಿತೆಗಳು ನುಡಿಸುತ್ತವೆ. ಹಲವು ದಿಗ್ಭ್ರಮೆಗಳ ಮೊತ್ತವನ್ನು ಗಂಟು ಕಟ್ಟಿಕೊಂಡು ಸಾಗಿರುವ ಹುಡುಗಿಯರ ದನಿಯನ್ನು ಇವರ ಕವಿತೆಗಳ ತೀರದಲ್ಲಿ ಕೇಳಿಸಿಕೊಳ್ಳಬಹುದಾಗಿದೆ.

ನನಗೆ ತುಂಬ ಇಷ್ಟವಾದ ಚೇತನಾ ಅವರ ಮತ್ತೊಂದು ಕವಿತೆಯ ಬಗ್ಗೆ ಒಂದು ಮಾತು ಹೇಳಲೇಬೇಕು. ಈ ಕವಿತೆಯಲ್ಲಿ ಅವರು, ಸಮಾಜದ ಪುರುಷ ಪ್ರಧಾನ ಧೋರಣೆಯನ್ನು ಅಣಕಿಸುವ ಬಗೆ ಬಲು ಸೂಕ್ಷ್ಮವಾಗಿದೆ. ಮಹಾದೇವಿ ಅಕ್ಕ ಆದದ್ದು, ಮೀರಾ ಸಂತಳೆನಿಸಿದ್ದು ನಿಜವಾಗಿಯೂ ಹೇಗೆ ಎಂಬ ಪ್ರಶ್ನೆಗಳನ್ನು ಈ ಕವಿತೆ ಉತ್ತರಿಸುತ್ತದೆ. ಅವರಿಬ್ಬರೂ ಕ್ರಮವಾಗಿ “ಕಲ್ಲು” ಚೆನ್ನಮಲ್ಲಿಕಾರ್ಜುನನನ್ನು, “ಗೊಂಬೆ” ಮಾಧವನನ್ನು ಗಂಡನೆಂದು ಬಗೆದರು. ಆದರೆ ಅವರ ಹಾಗೆಯೇ ಗಂಡನ್ನ ಬಿಟ್ಟು ಮತ್ತಾರನ್ನೋ ಗಂಡನೆಂದು ಬಗೆದ ಹೊಸ ಸಮಾಜದ ಹೆಣ್ಣುಮಗಳೊಬ್ಬಳು ಪಡೆದದ್ದು ಹಾದರಗಿತ್ತಿಯ ಪಟ್ಟ. ಯಾಕೆಂದರೆ, ಅವಳು ಗಂಡನೆಂದು ಧೇನಿಸಿದ್ದು ಕಲ್ಲನ್ನೊ, ಗೊಂಬೆಯನ್ನೊ ಆಗಿರಲಿಲ್ಲ; “ಸಜೀವ ಗಂಡಸಾಗಿದ್ದ!”

ಇದನ್ನು ಇನ್ನೂ ವಿವರಿಸುವುದು ಬೇಕಿಲ್ಲ. ಅಲ್ಲದೆ ಇದಕ್ಕಿಂತ ಹೆಚ್ಚಾಗಿ ನಾನಿಲ್ಲಿ ಚೇತನಾ ಅವರ ಕವಿತೆಗಳ ಭಾಗಗಳನ್ನು ಉದ್ಧರಿಸುವುದಕ್ಕೂ ಬಯಸುವುದಿಲ್ಲ. ಹೇಳಿಕೊಳ್ಳುವ, ಹೇಳುವ ತೀವ್ರತೆ ಅವರೊಳಗೆ ಗಾಢವಾಗಿದೆ ಎಂಬುದಷ್ಟೇ ಮುಖ್ಯವಾಗಿ ಕಂಡಿದೆ. ಈ ತೀವ್ರತೆಯೇ ಅವರನ್ನು ಮುನ್ನಡೆಸಬಲ್ಲುದು.

ವೆಂಕಟ್ರಮಣ ಗೌಡ 
(ಮುನ್ನುಡಿಯಿಂದ)

‍ಲೇಖಕರು avadhi

March 7, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

2 ಪ್ರತಿಕ್ರಿಯೆಗಳು

 1. ಮನೋಜ್

  ಚೀತನಾರವರ ಬರಹಗಳ ಮೊನಚು ಬಹಳ ಅಪರೂಪವಾದದ್ದು. ಯೋಚನೆ ಮಾಡೋ ಹಾಗೆ ಮಾಡುತ್ತೆ, ಎರಡೇ ಸಾಲು ಸಾಕು!

  ಪ್ರತಿಕ್ರಿಯೆ
 2. malathi S

  Yes. It makes us stop in our line of thoughts for a moment and then proceed – like ‘a deer stunned in its track to immobility when it comes in contact with sudden brightness at night’ and makes us speculate deeply. Coming from some one so young is a true wonderment. Every Sentence is loaded with deep meaning

  malathi S

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: