ಕುಂ ವೀ ಕಾಲಂ : ಕಥೆ ’ಅಪಸ್ಮಾರ’

’ಅಷ್ಟೆ ನಿನ್ನ ಪೂರ್ವಾಶ್ರಮ ಸ್ನೇಹಿತರನ್ನೂ ದೂರ ಇಟ್ಟರ್ತೀ ಎಂದು ಗೊತ್ತು, ನಾನ್ಯಾರೂಂತ ಗುರುತಿಸಿ ಮುಠ್ಠಾಳ ಎಂಬ ಅಮೂಲ್ಯ ಪದದಿಂದ ಕಾಪಾಡಿಕೊ’ ಎಂದು ಕಿಲಕಿಲ ನಗಾಡಿದಳು. ಅಡುಗೆಮನೇಲಿರುವ ಜಲಜ ಅಪಾರ್ಥ ಮಾಡಿಕೊಂಡರೆಂಬ ಆತಂಕ.. ರಿಸೀವರನ್ನು ಕುಕ್ಕಲೆತ್ನಿಸಿದನಾದರೂ ಸಾಧ್ಯವಾಗಲಿಲ್ಲ, ಕ್ಷೀಣಸ್ವರದಲ್ಲಿ ತಾನೆ ಹಲೋ ಮೇಡಂ..ನೆನಪಾಗ್ತಿಲ್ಲ ಹೇಳಿಬಿಡಿ ಪ್ಲೀಜ್ ಎಂದು ಗೋಗರೆದ.. ಅದಕ್ಕಿದ್ದು ಅಪರಿಚಿತ ಹೆಂಗಸು ಬೆಪ್ತಕ್ಕಡಿ ಅಂದ್ರೆ ನೀನೆ ನೋಡು.. ನಳಿನಿ..ನಳಿನಿ ಕುಲಕರ್ಣಿ..ಮಿಸ್ ಯೂನಿವರ್ಸಿಟಿ ಅಂತ ನಿನ್ನ ಗೆಳೆಯರೆಲ್ಲ ಕರೀತಿದ್ರು ನೆನಪಿದೆಯಾ.. ಆ ಆಸೆ ನಿನ್ನ ಕಣ್ಣುಗಳಲ್ಲೂ ಇತ್ತು, ಆದರೆ ನಿನಗೋ ಸ್ನಾನ ಮಾಡದೆ ಇರೋ ಭಯ.. ಸದಾ ಕೀಳರಿಮೆಯಿಂದ ನರಳುತ್ತಿದ್ದ ನಿನಗೆ ನನ್ನನ್ನು ಪ್ರೀತಿಸಲಾಗಲೇ ಇಲ್ಲ.. ತುಂಬಾ ಇಷ್ಟಪಟ್ಟು ನಿನ್ನ ಕಡೆ ನೋಡ್ತಿದ್ದೆ..
ನೀರಿನ ಸುಖ ಸಂತೃಪ್ತಿಯಿಂದ ವಂಚಿತಾಗಿರೋರು ಸೌಂಧರ್ಯವನ್ನು ಆಸ್ವಾದಿಸಲಾರರು.. ಅದಕ್ಕೆ ನೀನೆ ಜ್ವಲಂತ ನಿದರ್ಶನ.. ಅದೆಲ್ಲ ಇರಲಿ.. ಮದುವೆ, ಮಕ್ಕಳು.. ಆಗಿರಬೌದುಬಿಡು.. ನಿನ್ನನ್ನ ಕೈಹಿಡಿದಿರೋ ಹೆಂಗಸು ಅದ್ಯಾವ ಜನ್ಮದಲ್ಲಿ ಏನು ಪಾಪ ಮಾಡಿದ್ಲೋ ಏನೋ.. ಅದನ್ನೆಲ್ಲ ಕಟ್ಕೊಂಡು ನನಗೇನಾಗಬೇಕು.. ಒಂದು ಮುಖ್ಯವಾದ ವಿಷಯಕ್ಕೆ ಬರ್ತೀನಿ.. ನಮ್ಮ ಪತ್ರಿಕೆಯಿಂದ ಲೆಟರ್ ತಲುಪಿರಬೌದು ತಾನೆ.. ಅದೇ ಕಣೋ ಗಾಂಧಿ ವಿಶೇಷಾಂಕಕ್ಕೆ ಕೂಡಲೆ ಕಥೇನ ಕಳಿಸೂಂತ.. ಎಂದು ಹರಳು ಹುರಿದಂತೆ ಮಾತಾಡಿದಳು..
ನಳಿನಿ!.. ತಾನು ಪ್ರಾಣಿಶಾಸ್ತ್ರ ವಿಭಾಗದಲ್ಲೂ, ಆಕೆ ಸಸ್ಯಶಾಸ್ತ್ರ ವಿಭಾಗದಲ್ಲೂ.. ಹೌದು, ಆ ಸುಂದರಿಯ ಬೆನ್ನಿಗೆ ಬಿದ್ದಿದ್ದವರು ನೂರಾರು ವಿದ್ಯಾರ್ಥಿಗಳು ಆದರೆ ಆಕೆ ಅವರ್ಯಾರನ್ನೂ ಪ್ರೀತಿಸದೆ ತನ್ನನ್ನು ಪ್ರೀತಿಸುತ್ತಿದ್ದಳೆಂದರೆ ತನಗೆ ರೋಮಾಂಚನವಾಗದಿರಲು ಸಾಧ್ಯವೆ!.. ಸ್ನಾನದಿಂದ ವಂಚಿತಗೊಂಡಿದ್ದರೂ ಕಾವ್ಯಾತ್ಮವಾಗಿ ಒಂದು ಪ್ರೇಮಪತ್ರವನ್ನು ಬರೆದು ಆಕೆಗೆ ಕೊಡುವ ಸಲುವಾಗಿ ಜೇಬೊಳಗಿಟ್ಟುಕೊಂಡು ಹಲವು ತಿಂಗಳುಗಳ ಕಾಲ ಸ್ಖಲಿಸುತ್ತಲೇ ಇದ್ದ, ಕೊಟ್ಟೂರಿನ ಛೀಫ್ ಆಫಿಸರ್ ಮುಕುಂದ್ ಅವರ ಮಗಳನ್ನು ಮದವೆಯಾದ ಬಳಿಕ.. ಅಷ್ಟೇ ಏಕೆ ಮಕ್ಕಳಾದ ನಂತರವೂ ಆಕೆಯ ಕನಸನ್ನು ಕಾಣುತ್ತಲೇ ಇದ್ದನು.
ತನ್ನ ಕುಬ್ಲಾಖಾನ್ ಕಥೆ ಪ್ರಕಟವಾದ ಬಳಿಕ ಆಕೆ ಸರಿಯಾಗಿ ಕನಸೊಳಗೆ ಕಾಣಿಸಿಕೊಳ್ಳದೆ ದೂರವಾಗಿರುವಳು, ಅಂಥ ಆಕೆ ತನ್ನೊಂದಿಗೆ, ಅದೂ ಹಳೆಯ ನೆನಪುಗಳನ್ನು ಕೆದಕಿ, ಕಟುಕಿ ಮಾತಾಡುವುದೆಂದರೇನು.. ಅದೂ ಅಪ್ಯಾಯಮಾನವಾಗಿ, ಪತಿ ಒಂದು ಕ್ಷಣ ಜಲಜಲ ಬೆವೆಯದೆ ಇರಲಿಲ್ಲ. ಸಸ್ಯಶಾಸ್ತ್ರ ಓದಿರುವ ಆಕೆಗೂ, ಪತ್ರಿಕೆಗೂ ಏನು ಸಂಬಂಧ?. ಕಳೆದ ವಾರ ತನಗೆ ಚಿರಂತನ ಪತ್ರಿಕೆ ಸಂಪಾದಕರೋರ್ವರು ತನಗೆ ಪತ್ರ ಬರೆದು ಕಥೆ ಕಳಿಸುವಂತೆ ಮನವಿ ಮಾಡಿಕೊಂಡಿದ್ದರು, ಅದರಲ್ಲಿ ಸಂಭಾವನೆಯ ವಿವರಗಳಿರದಿದ್ದುರಿಂದಾಗಿ ಅದಕ್ಕೆ ಸ್ಪಂದಿಸುವ ಗೋಜಿಗೆ ತಾನು ಹೋಗಿರಲಿಲ್ಲ, ಅದನ್ನು ತಾನೆಲ್ಲಿ ಎಸೆದಿರುವನೋ ಏನೋ.. ನೆನಪಾಗುತ್ತಿಲ್ಲ.
 
ಪುನಃ ರೀಸೀವರೆತ್ತಿಕೊಂಡು ಹೌದು ಎಂದಷ್ಟೆ ಹೇಳಿದ. ಅದಕ್ಕೆ ನಳಿನಿ ಸಂಭಾವನೆ ಬಗ್ಗೆ ಮಾಹಿತಿ ಇಲ್ಲದಿರುವುದರಿಂದ ಎಲ್ಲೋ ಎಸೆದಿರ್ತೀಯಂತ ಗೊತ್ತು, ನಾವು ತರ್ತೀರೋದು ಗಾಂಧಿ ವಿಶೇಷಾಂಕ.. ಸಂಭಾವನೆ ಕೊಡೊಲ್ಲವೆಂಬ ಕಾರಣಕ್ಕೆ ಕೆಟ್ಟದಾಗಿ ಏನಾದ್ರು ಬರೆದೀಅಂದ್ರೆ ಹುಷಾರ್.. ಕಥೆಯ ವಸ್ತು ಗಾಂಧಿಗೆ ಸಂಬಂಧಿಸಿದ್ದಾಗಿರಲೇಬೇಕು..ಅದೂ ಅಲ್ಲದೆ ನಿನಗೆ ಈಗಾಗ್ಲೆ ಗೊತ್ತಿರೋ ಅನೇಕ ಗಾಂಧಿಗಳ ಪೈಕಿ ಯಾವುದಾದರೊಂದು ಗಾಂಧೀನ ಆರಿಸ್ಕೋ.. ಹ್ಹಾ!.. ಪಟಪಟ ನುಡಿದಳು.

ನನಗ್ಯಾವ ಗಾಂಧಿ ಗೊತ್ತು ನಳಿನಿಯವರೇ..ಒಹ್ಹೋ ಬಹುವಚನ ಬೇರೆ ಕೇಡು.. ಅದೇ ಕಣಪ್ಪಾ ನೀನು ನಿನ್ನ ಉಪನ್ಯಾಸಗಳಲ್ಲಿ ಹೇಳಿಕೊಳ್ತಾ ಎನ್ಕ್ಯಾಷ್ನ ಮಾಡಿಕೊಳ್ತಿರ್ತೀಯಲ್ಲ.. ಆ ಗಾಂಧೀಜಿ..
ಅದು ನಿನಗೆ ಹೇಗೆ ಗೊತ್ತು?
ಅಯ್ಯೋ ಬೆಪ್ಪೆ.. ನಾನು ಪತ್ರಕರ್ತೆ ಕಣೋ.. ತಿಳಿಯದೆ ಇದ್ದೀತಾ.. ಅದೂ ಅಲ್ಲದೆ ನಾನು ನಿನ್ನ ಫ್ಯಾನು.. ನಿನ್ನ ಪ್ರತಿಯೊಂದು ಭಾಷಣಾನ ಕೇಳಿದ್ದೀನಿ..ಒಳ್ಳೆಯ ಭಾಷಣಕಾರರಾಗೋಕೆ ಸ್ನಾನ ಮಾಡಬಾರದೆಂಬ ಫಾರ್ಮುಲ ಬೇರೆಯರಿಗೆ ತಿಳೀತಂದ್ರೆ ಎಷ್ಟೋ ಮಂದಿ ನೀರಿನ ಸಮೀಪ ಹೋಗೋದೇ ಇಲ್ಲ.. ಹ್ಹ..ಹ್ಹ.. ತಮಾಷೆ ಮಾಡ್ತಿದ್ದೀನಿ.. ತಪ್ಪು ತಿಳಿಬೇಡ.. ನಾನು ವಿಶೇಷಾಂಕಾನ ರೂಪಿಸೋ ಹೊಣೆ ನನ್ನ ಹೆಗಲ ಮೇಲಿದೆ.. ವಾರದೊಳಗೆ ಕಥೆ ನನ್ನ ಟೇಬಲ್ ಮೇಲಿರಬೇಕಷ್ಟೆ.. ಎಂದವಳೆ ರಿಸೀವರ್ ಕೆಳಕ್ಕಿಟ್ಟಳು. ಪತಿ ಪುನಃ ಬೆವರೊರೆಸಿಕೊಳ್ಳುವ ಸಲುವಾಗಿ ಕರವಸ್ತ್ರಕ್ಕಾಗಿ ತಡಕಾಡಿದ, ಅಡುಗೆಮನೆಯಿಂದ ಹೆಂಡತಿ ಯಾವೋಳ್ರೀ ಅವ್ಳು? ಇಷ್ಟೊತ್ತು ಮಾತಾಡ್ತಿದ್ರಿ? ಎಂದು ಕೇಳಿ ದಿಗ್ಭ್ರಮೆಗೊಳಿಸಿದಳು. ಈ ದಶಕದ ಅತ್ಯುತ್ತಮ ರೋಮಾಂಚನವೆಂದರೆ ತಾನು ನಳಿನಿಯೊಂದಿಗೆ ತುಸು ಹೊತ್ತು ಮಾತಾಡಿದ್ದು, ಹಳೆಯ ನೆನಪುಗಳನ್ನು ಕೆದಕಿ ರೀಫ್ರೆಷ್ ಆಗಿದ್ದು.. ಆಕೆಯ ಒಂದೊಂದು ಮಾತೂ..
ಶ್ರೀಪತಿಮಜುಂದಾರ್ ಆ ಕ್ಷಣದಿಂದ ಕಥೆಗೆ ಸಂಬಂಧಿಸಿದಂತೆ ಕಾರ್ಯಪ್ರವೃತ್ತನಾಗದೆ ಇರಲಿಲ್ಲ. ವೆಂಕೋಬರಾಯರನ್ನು ಸಂದರ್ಶಿಸುವ ಸಲುವಾಗಿ ಅವರ ತೋಟಕ್ಕೆ ಹೋಗಲೆಂದುಕೊಂಡು ಮರುಕ್ಷಣ ಯಾಕೋ ಹಿಂದೇಟು ಹಾಕಿದ.. ಅವರಿವರ ಮೂಲಕ ಪಂಚೇಂದ್ರಿಯಗಳಿಗೆಟುಕಿದ ಸಂಗತಿಗಳನ್ನು ಕಲ್ಪನೆ ಸಹಾಯದಿಂದ ಝಗಮಗಿಸುವಂತೆ ಮಾಡಿ ಇಡೀ ಒಂದು ವಾರ ಪಟ್ಟಾಗಿ ಕೂತು (ಅದೂ ತನ್ನ ಪತ್ನಿಗೆ ತಿಳಿಯದ ಹಾಗೆ) ಕಥೆ ಬರೆದು ಮುಗಿಸಿದ, ಎಷ್ಟು ಯೋಚಿಸಿದನಾದರೂ ತನ್ನ ಬುರಡೆಗೆ ಶೀರ್ಷಿಕೆ ಹೊಳೆಯಲಿಲ್ಲ. ಪರಾಮರ್ಶಿಸಿ ಸೂಕ್ತ ಶೀರ್ಷಿಕೆ ಬಯಸಿ ಹಸ್ತಪ್ರತಿಯನ್ನು ತನ್ನ ಮೆಚ್ಚಿನ ವಿಮರ್ಶಕರೂ, ಗಾಡ್ಫಾದರ್ ಸಮಾನರೂ ಆದಂಥ ಪ್ರೊ. ಧಸೂಡಿಯವರಿಗೆ ಕಳಿಸಿದ. ಧಸೂಡಿಯವರು ಎರಡೇ ಎರಡು ದಿವಸಗಳಲ್ಲಿ ಓದಿ ಮುಗಿಸಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದೂ ಅಲ್ಲದೆ ಅದಕ್ಕೆ ‘ಅಪಸ್ಮಾರ’ ಎಂಬ ಶೀರ್ಷಿಕೆ ಕರುಣಿಸಿ ಮರಳಿಸಿದರು.

****

ಚಿರಂತನ ಮಾಸಿಕ ಎಂದಿನಂತೆ ವಾರ್ಷಿಕ ವಿಶೇಷಾಂಕ ಬಿಡುಗಡೆ ಸಮಾರಂಭವನ್ನು ಉಡ್ಲ್ಯಾಂಡ್ನ ಕನ್ವೆನ್‌ಶನ್ ಸಭಾಂಗಣದಲ್ಲಿ ಆಯೋಜಿಸಿತು. ಪ್ರೊ.ಧಸೂಡಿಯವರ ಅಧ್ಯಕ್ಷತೆಯಲ್ಲಿ ಸಂಸ್ಕೃತಿ ಸಚಿವರು ವಿಶೇಷಾಂಕವನ್ನು ಅವಿಷ್ಕರಿಸಿದರು. ಧಸೂಡಿಯವರು ತಮ್ಮ ಉಪನ್ಯಾಸದ ಮುಕ್ಕಾಲು ಭಾಗವನ್ನು ಅಪಸ್ಮಾರ ಕಥೆಯ ವಿಮರ್ಶೆ ಮೀಸಲಿಟ್ಟರು. ಅಪಸ್ಮಾರ ಜಾಗತಿಕ ಸರ್ವಶ್ರೇಷ್ಠ ಕಥೆಗಳಲ್ಲಿ ಒಂದೆಂದು ಶ್ಲಾಘಿಸಿದರಲ್ಲದೆ, ಕಥೆಗಾರ ಶ್ರೀಪತಿಮಜುಂದಾರ್ ಭವಿಷ್ಯದಲ್ಲಿ ನೋಬಲ್ ಪ್ರಶಸ್ತಿಗೆ ಅರ್ಹ ಲೇಖಕನೆಂದು ಕೊಂಡಾಡಿದರು. ನಳಿನಿ ಎಲ್ಲಿ ತನ್ನನ್ನು ನೋಡಿ ಮಾತಾಡಿಸುವಳೋ ಎಂಬ ಆತಂಕದಿಂದ ವಿಶೇಷ ರೀತಿಯಲ್ಲಿ ಸ್ನಾನ ಮಾಡಿಬಂದಿದ್ದ ಪತಿ ಹಿಂದಿನ ಸಾಲಲ್ಲಿ ಕುಳಿತಿದ್ದವನು ಮೆಲ್ಲಗೆ ವಾಪಸು ಹೋಗಿಬಿಟ್ಟನು.. ಶಾಶ್ವತ ಕಥೆ ಮುಖ್ಯವೇ ಹೊರತು ನಶ್ವರ ಕಥೆಗಾರನಲ್ಲವೆಂದು ಭಾವಿಸಿ ಸಂಯೋಜಕರು ಆತನನ್ನು ವೇದಿಕೆಗೆ ಆಮಂತ್ರಿಸುವ ರಿಸ್ಕ್ ತೆಗೆದುಕೊಳ್ಳಲಿಲ್ಲ. ಜಿಂಕೆಯಂತೆ ಸಂಚರಿಸುತ್ತಿದ್ದ ನಳಿನಿಯ ಕಣ್ಣುಗಳಿಗೂ ಆತ ನಿಲುಕಲಿಲ್ಲ.
ಅಪಸ್ಮಾರ ಕಥೆಯ ಕಾರಣದಿಂದಾಗಿಯೋ, ಮುಖಪುಟದಲ್ಲಿ ರಾರಾಜಿಸುತ್ತಿದ್ದ ಐಟಂ ಗರ್ಲ್ ಟೆಡ್ಡಿ ಕಾರಣದಿಂದಾಗಿಯೋ, ಧಸೂಡಿಯವರ ಶ್ಲಾಘನೆ ಕಾರಣದಿಂದಾಗಿಯೋ, ಅಂತೂ ಚಿರಂತನ ವಿಶೇಷಾಂಕದ ಐದು ಸಹಸ್ರ ಸಂಚಿಕೆಗಳು ವಾರೊಪ್ಪತ್ತಲ್ಲಿ ಖರ್ಚಾದವು. ಸಂಭಾವನೆಯ ಬದಲಿಗೆ ನಳಿನಿಯವರು ಅಭಿಮಾನಿಗಳ ಪತ್ರಗಳನ್ನು ಒಂದು ಚೀಲದಲ್ಲಿ ತುಂಬಿ ಕಥೆಗಾರನಿಗೆ ಕಳಿಸಿಕೊಟ್ಟಳು.. ಸ್ವಾತಂತ್ರ್ಯಪೂರ್ವ ಮತ್ತು ಸ್ವತಂತ್ರ್ಯೋತ್ತರ ಸಮಾಜದ ನವಿರಾದ ಚಿತ್ರಣವನ್ನು ವೆಂಕೋಬರಾಯರೆಂಬ ರೂಪಕದಲ್ಲಿ ಸೆರೆ ಹಿಡಿದಿದ್ದ ಸದರಿ ಕಥೆ ವಿಮರ್ಶಕರಿಗಿಂತ ಮುಖ್ಯವಾಗಿ ಚಲನಚಿತ್ರರಂಗದವರ ಮನಸ್ಸನ್ನು ಸೂರೆಗೊಳ್ಳದೆ ಇರಲಿಲ್ಲ. ಭರತೇಶ್ ಕಣಕುಪ್ಪೆ, ಸರ್ಜಾಶಂಕರ್ ಬೊಕಾಡಿಯಾರಂಥ ನಿರ್ದೇಶಕರಿಗಿಂತ ಮುಖ್ಯವಾಗಿ..

****

ಆ ದಿವಸ ‘ಕಶೇರುಕ’ (ಪತಿ ತನ್ನ ಎಲ್ಐಜಿ ಹೌಸಿಗೆ ಇಟ್ಟಿದ್ದ ಹೆಸರು)ದ ಮುಂದಿನ ಕಣಗಿಲೆ ಗಿಡದ ಮೇಲೆ ಎರಡು ಕಾಗೆಗಳು ಒಂದೇ ಸಮನೆ ಬೆಳ್ಳಂಬೆಳೆಗ್ಗೆ ಅರಚಲಾರಂಭಿಸಿದವು. ಮೊನ್ನೆ ತಾನೆ ಷಷ್ಠ್ಯಭ್ದಿ ಆಚರಿಸಿಕೊಂಡಿರುವ ತಮ್ಮ ತಂದೆ ಬರಬಹುದೆಂಬ ಹೆಂಡತಿಯ ಅಭಿಪ್ರಾಯವನ್ನು ಪತಿ ಅನುಮೋದಿಸದೆ ಇರಲಿಲ್ಲ. ಆದರೆ ಬಂದದ್ದು ಪೋಸ್ಟ್ಮ್ಯಾನ್ ರಾಮಣ್ಣ, ಆತ ಕೊಟ್ಟು ಹೋದ ಬೆನ್ನಲ್ಲೇ ಫೋನೂ ಬಂತು. ತಾನು ನಿರ್ದೇಶಿಸಿದ ಹನ್ನೊಂದು ಚಿತ್ರಗಳಿಗೂ ಒಂದಲ್ಲಾ ಒಂದು ಪ್ರಶಸ್ತಿಯನ್ನು ಗಳಿಸಿಕೊಂಡಿರುವ, ವರ್ಷದಲ್ಲಿ ಹಲವು ಸಲ ವಿದೇಶಿ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ವರ್ಷದಲ್ಲಿ ಹಲವು ಸಲ ವಿದೇಶಗಳಿಗೆ ಹೋಗಿ ಬರುವ, ಅನತಿ ಕಾಲದಲ್ಲಿ ವಿದಾನಪರಿಷತ್ನ ಸದಸ್ಯರಾಗಿ ನೇಮಕಗೊಳ್ಳಲಿರುವ, ಪ್ರಪಂಚದ ಏಳೆಂಟು ಭಾಷೆಗಳಲ್ಲಿ ಹರಳುರಿದಂತೆ ಮಾತಾಡುವ ತ್ರೈಯಂಬಕ ಮೂರ್ತಿ ಪಟುವರ್ಧನ್!.. ನಾನು, ಪಟುವರ್ಧನ್ ಪತಿಯವ್ರೆ.. ನಿಮ್ಮ ಅಪಸ್ಮಾರಾನ ಓದಿ ಸ್ಟನ್ನಾಗಿಬಿಟ್ಟೆ ಕಣ್ರೀ.. ನಿಮ್ಮ ಕಥೇಲಿರೋದು ಜಾಗತಿಕ ಸಮಾಜ, ಗಾಂಧಿಗಂಗಾಧರರಾಯ್ರು ಕೇವಲ ಗಾಂಧಿಯಷ್ಟೇ ಅಲ್ಲ, ಅವ್ರು ಮಾರ್ಟಿನ್ ಲೂಥರ್ ಕಿಂಗೂ ಹೌದು, ಕನ್ಫ್ಯೂಷಿಯಸ್ಸೂ ಹೌದು.. ಇಂಗ್ಲೀಷ್ನಲ್ಲಿ ಸಿನೆಮಾ ಮಾಡಿದಿರೀ ಅಂದ್ರೆ ಆಸ್ಕರ್ಗೆ ನಾಮಿನೇಷನ್ನಾಗೋದಂತೂ ಗ್ಯಾರಂಟೀಂತ ಖುದ್ದ ಧಸೂಡಿಯವ್ರೇ ಹೇಳಿದ್ರು ಕಣ್ರೀ ಪತಿ.. ಈ ಕುರಿತು ನಿಮ್ ಜೊತೆ ಮಾತಾಡೋದಿದೆ, ಬೆಂಗಳೂರಲ್ಲಿ ನೀವು ನಾಳೆ ಬೆಳೆಗ್ಗೇನೆ ಇರ್ಲೇಬೇಕು.. ಎಂದೊಡನೆ ಕಥೆಗಾರ ತನ್ನ ಹೆಂಡತಿಯ ಮೂಕವಿಸ್ಮಿತ ಮುಖವನ್ನು ನೋಡಿದ..
ಪತಿ ಬೆಂಗಳೂರಿಗೆ ಹೋಗಿ ಬಂದದ್ದೂ ಆಯಿತು, ಸಿನೆಮಾ ಸುದ್ದಿ ಎಲ್ಲಾ ಪತ್ರಿಕೆಗಳಲ್ಲಿ ಅತಿರಂಜಿತವಾಗಿ ಪ್ರಕಟಗೊಂಡಿದ್ದೂ ಆಯಿತು, ಓದಿದವರು ಸುಮ್ಮನಿರಲಾಗುವುದೇನು?.. ಅಭಿನಂದನೆಗಳ ಸುರಿಮಳೆ.. ಕಾಲೇಜಿನ ಆಡಳಿತ ಮಂಡಳಿ ಪತಿಯ ಕೊರಳಿಗೆ ಮಾಲೆ ಹಾಕಿ ನಿಮ್ಮಿಂದಾಗಿ ನಮ್ಮ ಶಿಕ್ಷಣ ಸಂಸ್ಥೆಯ ಕೀರ್ತಿ ಹೆಚ್ಚಿದೆ, ರಜೆಗಳಿಗೆ ಚಿಂತೆ ಮಾಡಬೇಡಿ ಎಂದು ಭರವಸೆ ನೀಡಿ ಪ್ರೋತ್ಸಾಹಿಸಿದ್ದೂ ಆಯಿತು. ಆದರೆ ಕಥೆಯ ಕ್ರೆಡಿಟ್ ಒರಟೊರಟಾದ ಮಾತುಗಳಿಂದ ಬರೆಸಿದ ನಳಿನಿಗೋ, ತಮ್ಮ ಮೆಚ್ಚುಗೆಯನ್ನು ಜನಪ್ರಿಯವಾಗಿಸಿದ ಪ್ರೊ.ಧಸೂಡಿಯವರಿಗೋ, ಕಥೆಗೆ ತಮ್ಮ ವಿಲಕ್ಷಣ ಬದುಕಿನಿಂದ ಸ್ಪೂರ್ತಿ ನೀಡಿದ ವೆಂಕೋಬರಾಯರಿಗೋ.. ಬರೆದಿರುವ ತನಗೋ.. ಇವರ ಪೈಕಿ ಯಾರಿಗೆ ಹೋಗಬೇಕು.. ಕೇಳಿದ್ದಕ್ಕೆ ಜಲಜ ಅದ್ಯಾಕ್ರಿ ಅವರಿವರಿಗೆ ಹೋಗಬೇಕು.. ಹಗಲಿರುಳು ಕುಂತು ಅಪಸ್ಮಾರಾನ ಲೆಕ್ಕಿಸದೆ ಬರೆದಿರೋ ನಿಮಗೆ ಸಲ್ಲಬೇಕ್ರೀ ಕ್ರೆಡಿಟ್ಟೂ.. ಸ್ನಾನ ಮಾಡದಿರೋ ನಿಮ್ಮೊಂದಿಗಿರೋ ನನಗೆ ಸಲ್ಲಬೇಕ್ರೀ ಕ್ರೆಡಿಟ್ಟು.. ಬರೋ ರಾಯಲ್ಟೀನ ಮೊದ್ಲು ನನ್ನ ಅಕೌಂಟಿಗೆ ಹಾಕಿ.. ನಿಮ್ ಕೈಲಿದ್ರೆ ಬೇಕಾಬಿಟ್ಟಿ ಖರ್ಚು ಮಾಡಿಬಿಡ್ತೀರಿ.. ಎಂದು ಹೇಳುವುದರ ಮೂಲಕ ಮಂಕನ್ನು ಇಮ್ಮಡಿಗೊಳಿಸಿದಳು.
ನಿರ್ದೇಶಕ ಪಟುವರ್ಧನ್ ದಿನಕ್ಕೊಂದು ಸಾರಿಯಾದರು ಫೋನಿನಲ್ಲಿ ಕಥೆ, ಚಿತ್ರಕತೆ ಕುರಿತಂತೆ ಚರ್ಚಿಸುತ್ತಿದ್ದರು. ಸ್ವರ್ಣಕಮಲಕ್ಕಾಗಿ ಕನ್ನಡದಲ್ಲೂ, ಆಸ್ಕರ್ ಸಲುವಾಗಿ ಇಂಗ್ಲೀಷಿನಲ್ಲೂ ಮಾಡುತ್ತಿರುವುದಾಗಿಯೂ, ಗಾಂಧಿ ಪಾತ್ರ ಮಾಡುವಂತೆ ಕ್ಲೈಂಟ್ ಈಸ್ಟ್ ವುಡ್ ಅನ್ನು ಕೇಳಿಕೊಂಡಿರುವುದಾಗಿಯೂ ವಿವರಿಸಿದ್ದು ಮೊನ್ನೆ ಮದ್ಯಾಹ್ನ, ಆದರೆ ನಿನ್ನೆ ರ್ರೀ ಪತಿ, ಸ್ಕ್ರಿಪ್ಟ್ ವರ್ಕ್ ಎಲ್ಲಾ ರೆಡಿ, ನಿರ್ಮಾಪಕರನ್ನು ಹುಡುಕುವ ಸಲುವಾಗಿ ಮುಂಬಯಿ, ಕಲ್ಕತ್ತಾಗಳಿಗೆ ಕೆಲವರನ್ನು ಕಳಿಸಿದ್ದೀನಿ, ಇವೆರಡೂ ಪ್ರಾಜೆಕ್ಟಿಗೆ ಏನಿಲ್ಲಾಂದರು ಇಪ್ಪತ್ತಾರು ಕೋಟಿಯಾದ್ರು ಬೇಕು.. ರಿಲಯನ್ಸ್ನೋರು ಹಿಂದೇಟು ಹಾಕಿದ್ರು.. ನಿಮ್ಮೂರಲ್ಲಿ ಯಾರಾದ್ರು ಇದ್ದಾರೇನ್ರಿ.. ಕಥೆ ಬರೆದರಷ್ಟೇ ಸಾಲದು.. ಪ್ರೊಡ್ಯೂಸರ್ ಹುಡುಕೋದು ಕೂಡ ಕ್ರಿಯೇಟಿವ್ ವರ್ಕು .. ಆ ವೆಂಕೋಬರಾಯರೇನಾದ್ರು ಪ್ರೊಡಕ್ಷನ್ ಪಾರ್ಟನರಾಗ್ತಾರೇನೋ ಒಂದು ಮಾತು ವಿಚಾರಿಸಿ ನೋಡಿ.. ಎಂದು ಹೇಳಿ, ಕೆಲವು ನಿಮಿಷಗಳ ಬಳಿಕ ಅವರೇ ಸುಮ್ಮನೆ ಜೋಕ್ ಮಾಡ್ದೆ.. ಈಗಾಗ್ಲೆ ಟ್ವೆಂಟೀಯಥ್ ಸೆಂಚುರಿ ಫಾಕ್ಸ್ನೋರ ಸಂಗಡ ಮಾತುಕತೆ ನಡೀತಿದೆ.. ಈ ಗ್ರೌಂಡ್ ವರ್ಕ್ ಮುಗಿತೂಂದ್ರೆ ನಿಮಗೇನಿಲ್ಲಾಂದ್ರು ಟೆನ್ಟು ಫಿಫ್ಟೀನ್ ಥೌಜಂಡ್ ಡಾಲರ್ಸು ರಾಯಲ್ಟಿ ಗ್ಯಾರಂಟಿ.. ಅಮೇರಿಕಾಕ್ಕೂ ಹೋಗಬೇಕಾಗಿ ಬರಬೌದು.. ಯಾವುದ್ಕೂ ಪಾಸ್ಪೋರ್ಟ್ ರೆಡಿ ಮಾಡಿಟ್ಟುಕೊಳ್ಳಿ.. ಎಂದು ನಿರರ್ಗಳವಾಗಿ ಹೇಳಿದರು, ಆ ಸಂಭಾಷಣೆಯನ್ನು ಯಾವ ರೀತಿ ಪರಿಭಾವಿಸಬೇಕೆಂಬುದು ಪತಿಗೆ ಹೊಳೆಯಲಿಲ್ಲ.
****
ಪತಿಯ ದುಗುಡ ಹೆಚ್ಚಿತು, ತಪಾಸಣೆಗೆಂದು ಕುಟುಂಬ ವೈದ್ಯ ಕುಲಕರ್ಣಿ ಯವರ ಆಸ್ಪತ್ರೆಗೆ ಹೋದ. ಬೀಪಿ, ಶುಗರ್, ಮೂತ್ರ ಚೆಕ್ಕ ಮಾಡಿ ಅವರು ಆತಂಕ, ಅಪಸ್ಮಾರದ ಮುನ್ಸೂಚನೆ. ಆದಷ್ಟು ರಿಲ್ಯಾಕ್ಸಾಗಿರಿ.. ಮೆಡಿಷನ್ಗಿಂತ ಮೆಡಿಟೇಷನ್ ಹಾರ್ಟ್ ಗೆ ರಕ್ಷಾಕವಚ ಎಂದು ಹೇಳಿದ ಬಳಿಕವೇ ಪುನಃ ತಾನು ಪಿರಿಮಿಡ್ ಧ್ಯಾನಕೇಂದ್ರವನ್ನು ನೆನಪಿಸಿಕೊಂಡಿದ್ದು, ಇನ್ನೇನು ತಾನಲ್ಲಿಗೆ ಹೊರಡಬೇಕೆನ್ನುವಷ್ಟರೊಳಗೆ ಆಮಿಸಿದ ಐದು ಮಂದಿ ಮುದುಕರು ತನಗೆ ಪರಿಚಿತ ಕೂಡ್ಲಿಗಿಯ ಸ್ವಾತಂತ್ರ್ಯಯೋಧರಾಗಿದ್ದರು, ಅದಕ್ಕೂ ಮೊದಲೆ ಗಾಂಧಿತೊಟಕ್ಕೆ ಹೋಗಿ ಬರಿಗೈಲಿ ಮರಳಿದ್ದ ಅವರು ತಾವು ಹಮ್ಮಿಕೊಳ್ಳಲಿರುವ ಸನ್ಮಾನ ಸಮಾರಂಭಕ್ಕೆ ಹೇಗಾದರು ಮಾಡಿ ರಾಯರನ್ನು ಒಪ್ಪಿಸುವಂತೆ ಕೇಳಿಕೊಂಡರು. ತನ್ನನ್ನೂ, ಕುಟುಂಬದ ಸದಸ್ಯರನ್ನೂ ದೂರವಿಟ್ಟು ತೋಟದೊಳಗೆ ಉಳಿದಿರುವ ಆ ಏಕಾಂಗಿಯನ್ನು ಒಪ್ಪಿಸುವುದು ತನ್ನಿಂದ ಸಾಧ್ಯವೇ.. ಬಲವಂತಕ್ಕೆ ಮಣಿದು ಅವರೊಂದಿಗೆ ತೋಟಕ್ಕೆ ಹೋದ,
ಅವರೋ, ಅವರೊಂದಿಗಿದ್ದ ಏಳೆಂಟು ಮಂದಿ ಮುದುಕರೋ, ಅಲ್ಲಲ್ಲಿ ಚದುರಿ ಬಿದ್ದಿದ್ದ ಮೂರುನಾಲ್ಕು ಚರಕಗಳೋ, ಅವರೆಲ್ಲ ಇದ್ದ ಗುಡಿಸಲೋ.. ಅತಂತ್ರೀಯತೆಯೇ ಹೆಪ್ಪುಗಟ್ಟಿದಂತಿತ್ತು, ತಮ್ಮ ಬಗ್ಗೆ ಆಸಕ್ತಿ ತೋರಿಸದಿದ್ದರೂ ಪತಿ ಸಾಂದರ್ಭಿಕವಾಗಿ ವಿಷಯ ಪ್ರಸ್ತಾಪಿಸದೆ ಇರಲಿಲ್ಲ, ಮಾತಿನ ನಡುವೆ ಅಪಸ್ಮಾರ, ಸಿನೆಮಾ, ಪಟುವರ್ಧನ್, ಕ್ಲಿಟ್ಈಸ್ಟ್ವುಡ್, ರಿಲಯನ್ಸು.. ಆದರೆ ಅವರ್ಯಾರಲ್ಲೂ ಆಸಕ್ತಿ ಕೆರಳಲಿಲ್ಲ, ಒಬ್ಬೊಬ್ಬರೂ ತುಕ್ಕು ಹಿಡಿದ ಗುಜರಿ ವಸ್ತುಗಳಿಗಿಂತ ಭಿನ್ನವಿರಲಿಲ್ಲ, ತನಗೆ ಮುಂದೊಂದು ದಿವಸ ಲಭಿಸಲಿರುವ ಹಣದಿಂದ ತೋಟಕ್ಕೆ ಸಾಬರ್ಮತಿಯ ಪ್ರಭಾವಳಿ ತೊಡಿಸಲಿರುವುದಾಗಿ, ವೃದ್ಯಾಪ್ಯ ಸಂಬಂಧೀ ಖಾಯಿಲೆಗಳಿಗೆ ನೆರವಾಗುವುದಾಗಿಯೂ.. ಆದರೆ ಹೇಳಲಾಗಲಿಲ್ಲ, ಅಸ್ತಮಾ ಮರುಕಳಿಸಿ ತಮ್ಮೆರಡೂ ಕೈಗಳನ್ನು ನೆಲಕ್ಕೂರಿ ರಾಯರು ಕೆಮ್ಮೀಕೆಮ್ಮಿ ಬಳಲಿದವರಂತೆ ಗೋಚರಿಸಿದರು, ಅವರ್ಯಾರೂ ಪರಸ್ಪರ ಅಪರಿಚಿತರೇನಾಗಿರಲಿಲ್ಲ, ಸ್ವಾತಂತ್ರ್ಯಪೂರ್ವದಲ್ಲಿ ಜೊತೆಗೂಡಿ ಸೆರೆವಾಸ ಅನುಭವಿಸಿದ್ದಂಥವರೇ.. ಅವರ ಮಧ್ಯೆ ಬಿರುಕು ಕಾಣಿಸಿಕೊಂಡಿದ್ದಕ್ಕೆ ಕಾರಣ ಸರ್ಕಾರ ಕೊಡಮಾಡುವ ಪಿಂಚಣಿ.. ಅದೂ ತೀರಾಭ್ರಷ್ಟ ರಾಜಕೀಯ ಪಕ್ಷಗಳ ಕೃಪಾರ್ಶೀರ್ವಾದದಿಂದ.. ಇದಕ್ಕೆ ರಾಯರು ಮೊದಲಿಂದ ವಿರೋಧ.. ಸ್ಥಳೀಯ ಜನಪ್ರತಿನಿಧಿಗಳೊತ್ತಟ್ಟಿಗಿರಲಿ, ನಿಮ್ಮ ಔಷಧಿ ಖರ್ಚಿ ಗೆ ಬೇಡವೇನು, ಸೈನ್ ಮಾಡಿ ಎಂದು ಮಕ್ಕಳೂ, ಹಲವೊಮ್ಮೆ ತಾನೂ.. ಮೊಂಡುಸ್ವಭಾವದ ರಾಯರನ್ನು ಒಪ್ಪಿಸುವುದು ಯಾರಿಗೆ ತಾನೆ ಸಾಧ್ಯ?.. ಒತ್ತಾಯಿಸಿದ್ದಕ್ಕೆ ಅಂತಿಮವಾಗಿ ರಾಯರು ಕೂಡ್ಲಿಗಿಲಿರೋ ಗಾಂಧೀಜಿ ಚಿತಾಭಸ್ಮಕ್ಕೂ, ತಮಗೂ ನಡುವೆ ವ್ಯತ್ಯಾಸವಿಲ್ಲವೆಂದೂ, ನಿಮ್ಮೆಲ್ಲರ ಬದುಕಿಗೆ ಆಸರೆ ನೀಡಿರುವ ಅದಕ್ಕೆ ಸನ್ಮಾನ ಮಾಡಿರೆಂದು ಹೇಳಿ ಹತ್ತಿಯನ್ನು ಅರಳೆ ಮಾಡುವತ್ತ ಗಮನ ಹರಿಸಿದರು. ಟೀಕಿಸುವುದಾಗಲೀ, ಹಳೆಯ ನೆನಪುಗಳಿಂದ ತಿವಿಯುವುದಾಗಲೀ ತಮ್ಮ ವೃದ್ಯಾಪ್ಯಕ್ಕೆ ಶೋಭೆ ತರಲಾರದೆಂದು ವೃದ್ದ ಅತಿಥಿಗಳು ಮುರು ಮಾತಾಡದೆ ಹೊರನಡೆದರು.
ಅಂದಿನಿಂದ ರಾಯರು ತನಗೆ ಹೆಚ್ಚು ನಿಕಟವಾಗದೆ ಇರಲಿಲ್ಲ. ತೋಟಕ್ಕೆ ತಾನು ಬರಿಗೈಲಿ ಹೋಗದೆ ವಿಶ್ವಾಸಕ್ಕೆ ಪಾತ್ರನಾದ, ಪಟುವರ್ಧನ್ನ ಸಿನೆಮಾ ಸಂಬಂಧಿ ಮಾತುಗಳನ್ನು ರಾಯರಿಗೂ, ರಾಯರ ದೈಹಿಕ, ಮಾನಸಿಕ ಸ್ಥಿತಿಗಳನ್ನು, ಅವರ ಆಲೋಚನೆಗಳನ್ನು ವರ್ಧನ್ಗೂ ವಿಲೇವಾರಿ ಮಾಡುತ್ತ ತನ್ನ ಹೃದಯದ ನೈರ್ಮಲ್ಯ ಕಾಪಾಡಿಕೊಂಡನು. ಆ ಒಂದು ದಿವಸ ಸಪ್ಪಗಿದ್ದ ರಾಯರು ಪತಿಗೆ ಹೆರಿಗೆಗೆಂದು ತವರಿಗೆ ಬಂದಿರುವ ಮಗಳು ಝಾನ್ಸಿ ಕುರಿತಂತೆ ನೊಂದು ಹೇಳಿದರು, ಅಲ್ಲಿಯೇ ಸ್ಟೆಥೆಸ್ಕೋಪನ್ನು ಮಡಚಿಡುತ್ತಿದ್ದ ಡಾ.ಕುಲಕರ್ಣಿಯೂ, ಪತಿಯೂ ತೆಂಗಿನಮರಗಳ ನಡುವೆ ನಿಂತು ರಾಯರ ಕ್ಷೀಣಿಸುತ್ತಿರವ ಆರೋಗ್ಯ ಕುರಿತಂತೆ ಚರ್ಚಿಸಿದರು. ಅದೂ ಅಲ್ಲದೆ ವರ್ಧನ್ ಮೊನ್ನೆ ಹೇಳಿದ್ದ ಹತ್ತಾರು ಮಾತುಗಳು ಹೃದಯವಿದ್ರಾವಕವಾಗಿದ್ದವು, ಅವೆಂದರೆ.. ತಮ್ಮ ಮಹಾತ್ವಾಕಾಂಕ್ಷೆಯ ಚಿತ್ರ ಋತುವಿನ ಡಬ್ಬಿಂಗು, ಮಿಕ್ಸಿಂಗು ಸಲುವಾಗಿ ಚೆನೈಯಲ್ಲಿದ್ದುಕೊಂಡೇ ಅವರು ಮಾತಾಡಿ ಸಾಗರದ ವಿದ್ಯಾಮಾನಗಳನ್ನು ಕೂಲಂಕಷ ಚರ್ಚಿಸಿದರು. ವಿಷಯ ತಿಳಿದು ವ್ಯಕ್ತಪಡಿಸಿದ ವಿಷಾಧ ಸಣ್ಣಪ್ರಮಾಣದಾಗಿತ್ತು, ತಮ್ಮ ಮಹಾತ್ವಾಕಾಂಕ್ಷೆ ಯೋಜನೆ ಪೂರ್ಣಗೊಳ್ಳುವವರೆಗೆ ರಾಯರ ಆರೋಗ್ಯ ಕಾಪಾಡುವಂತೆ ಮನವಿ ಮಾಡಿಕೊಂಡರು. ಎರಡು ತಿಂಗಳಿಗೆ ತಗುಲುವ ಔಷಧ ಖರ್ಚನ್ನು ತಾವು ಭರಿಸುವುದಾಗಿ ಹೇಳಿದ್ದೂ ಅಲ್ಲದೆ ಪತಿಯ ಬ್ಯಾಂಕ್ ಅಕೌಂಟ್ ನಂಬರ್ ಆಪೇಕ್ಷಿಸದೆ ಇರಲಿಲ್ಲ, ಇವೆಲ್ಲವನ್ನೂ ಕೇಳಿಸಿಕೊಂಡ ಕುಲಕರ್ಣಿ ಅಸ್ತಮಾ ಕಾಯಿಲೆ ಕೇವಲ ದೇಹಕ್ಕಷ್ಟೇ ಸೀಮಿತವಲ್ಲವೆಂದೂ, ಜೊತೆಗೆ ತಮ್ಮ ಮಗಳು ಝಾನ್ಸಿಯ ಸಂಗಡ ತುಸು ಹೊತ್ತು ಕಳೆದಲ್ಲಿ ರಾಯರು ಗೆಲುವಾಗಬಹುದೆಂದೂ ಅಭಿಪ್ರಾಯಪಟ್ಟರು.
 
ಕೇಳಿದ್ದಕ್ಕೆ ಹೆಂಡತಿ ತವರುಮನೆಯಿಂದ ದೂರವಾಗಿರುವ ತನ್ನ ಉದಾಹರಣೆಯನ್ನು ನೀಡಿ ಸಮ್ಮತಿಸಿದಳು. ಒಪ್ಪಿಸುವ ಸಲುವಾಗಿ ತಾನೂ ಬರುವುದಾಗಿ ಹೇಳಿ ಜವಾಹರನ ನಾಲಗೆಗೆ ಹೆದರಿ ಹಿಂದೇಟು ಹಾಕಿದ್ದರಿಂದ ಪತಿ ತಾನೊಬ್ಬನೇ ಹೊರಟು ಮನೆಯನ್ನು ತಲುಪಿ ವಿಷಯ ಪ್ರಸ್ತಾಪಿಸಿದ, ಕೇಳಿದೊಡನೆ ಕಣ್ಣಲ್ಲಿ ನೀರು ತಂದುಕೊಂಡ ತಂಗಿಯ ಕಡೆ ಅಣ್ಣಂದಿರಿಬ್ಬರೂ ದುರುಗುಟ್ಟಿ ನೋಡಿದರು. ಇನ್ನೋ ಒಂದು ಹೆಜ್ಜೆ ಮುಂದೆ ಹೋಗಿ ಸುಭಾಷ್ ಝಾನ್ಸಿ ನಿನ್ನ ಹೆರಿಗೆ, ಬಾಣಂತನಯೆಲ್ಲಾ ತೋಟದಲ್ಲಾಗ್ಲಿಬಿಡು ಎಂದು ಕೊಂಕು ನುಡಿದನು. ಆಕೆಯ ಗಂಡ ಮಧ್ಯೆ ಪ್ರವೇಶಿಸಿ ತಾವಿಬ್ಬರೂ ತೋಟಕ್ಕೆ ಹೋಗಿಬರುವುದಾಗಿ ಔಪಚಾರಿಕವಾಗಿ ಹೇಳಿ ಆಸೆ ಹುಟ್ಟಿಸಿದ. ಆದರೆ ಅವರ್ಯಾರೂ..
****
ಮಗಳು, ಅಳಿಯ ತೋಟಕ್ಕೆ ಹೋಗಿ ರಾಯರ ಕ್ಷೇಮ ವಿಚಾರಿಸಿಕೊಂಡು ಹೋದರೋ, ಇಲ್ಲವೋ ಎಂಬುದಕ್ಕಿಂತ ಮುಖ್ಯವಾಗಿ ಸಾಗರದ ಪ್ರಸಿದ್ದ ಕೃಷಿ ಮಾರುಕಟ್ಟೆಯಲ್ಲಿ ಬೆಲೆ, ಅಧಿಕಾರಿಗಳ ಬ್ರಷ್ಟತೆ ವಿರುದ್ಧ ರೈತರು ತಮ್ಮ ಅಸಹನೆಯನ್ನು ಪ್ರತಿಭಟನೆ ಮೂಲಕ ತೋರಿಸಿದ್ದು ಚಿಕ್ಕಪ್ರಮಾಣದಲ್ಲಿ. ಮಾರುಕಟ್ಟೆಯ ದಲ್ಲಾಳಿಗಳೊಂದಿಗೆ ಅಧಿಕಾರಿಗಳೂ ಶಾಮೀಲಾಗಿರುವರೆಂಬ ಗುಮಾನಿ ಮೊದಲಿಂದಲೂ ಇತ್ತಷ್ಟೆ, ಒಂದೆರಡು ದಿವಸಗಳ ಬಳಿಕ ಎಲ್ಲೆಲ್ಲಿಂದಲೋ ಆಗಮಿಸಿದ ರೈತಮುಖಂಡರು ಹಲವು ಕಡೆ ಭಾಷಣಗಳನ್ನು ಮಾಡಿದ ಬಳಿಕವೇ ಪರಿಸ್ಥಿತಿ ಬಿಗಡಾಯಿಸಿದ್ದು. ರೈತರು ಸಾಗರದ ಮುಖ್ಯಬೀದಿಗಳಲ್ಲಿ ಮೆರವಣಿಗೆ ಹೊರಟು ಸಂಬಂಧಿತ ಬ್ರಷ್ಟ ಅಧಿಕಾರಿಗಳನ್ನು ಅಮಾನತ್ತಿನಲ್ಲಿಡುವಂತೆ ಒತ್ತಾಯಿಸಿದ್ದೂ ಅಲ್ಲದೆ ಅದಕ್ಕೆ ಎರಡು ದಿವಸಗಳ ಗಡುವು ಸಹ ನೀಡಿದರು. ಅಂದಿನಿಂದ ಜಿಲ್ಲೆಯ ನಾನಾಕಡೆಯಿಂದ ರೈತರು ತಂಡೋಪತಂಡವಾಗಿ ಆಗಮಿಸಿದ ಪರಿಣಾಮವಾಗಿ ಸಾಗರ ಹಸಿರುವಲ್ಲಿಗಳಿಂದ ತುಂಬಿ ತುಳುಕಿತು. ಅವರ ನಡುವೆ ಮಾಧ್ಯಮದವರೂ ಇದ್ದ ಪರಿಣಾಮವಾಗಿ ಸಾಮಾನ್ಯಜನತೆಯ ದುಗುಡ ಹೆಚ್ಚಿತು,
ಪತಿ ಸದರಿ ವಿದ್ಯಾಮಾನವನ್ನು ವರ್ಧನ್ರಿಗೆ ಪೋನಿನ ದ್ವಾರಾ ತಿಳಿಸದೆ ಇರಲಿಲ್ಲ, ಅದಕ್ಕೆ ಪ್ರತಿಯಾಗಿ ನಿರ್ದೇಶಕರು ಓಹ್! ಗುಡ್, ತುಂಬಾ ಒಳ್ಳೆಯ ನ್ಯೂಸ್ ಪತಿಯವ್ರೆ.. ಫಾರ್ಮಸರ್ ಎಜಿಟೇಷನ್ಸು ಯಾವ ಕಾರಣಕ್ಕೂ ಕಡಿಮೆಯಾಗದಿದ್ರೆ ಒಳ್ಳೇದು ಕಣ್ರಿ.. ಇದರೊಟ್ಟಿಗೆ ಗೌರ್ನಮೆಂಟು ಒನ್ ಫಾರ್ಟಿ ಫೋರ್ ಗಿಂತ ಮುಖ್ಯವಾಗಿ ಕರ್ಫ್ಯೂ ವಿಧಿಸಿದರಂತೂ ಇನ್ನೂ ಒಳ್ಳೇದು.. ಇದನ್ನೇ ನಾವು ದಂಡಿಯಾತ್ರೆ, ಕ್ವಿಟ್ಟಿಂಡಿಯಾ ಚಳವಳಿಗಳನ್ನಾಗಿ ಪರಿವರ್ತಿಸೋಣ, ಹೇಗೋ ಗ್ರಾಫಿಕ್ ಟೆಕ್ನಾಲಜಿ ಬೇರೆ ಕೈಲಿದೆ.. ತುಂಬಾನೆ ನ್ಯಾಚ್ಯುರಲ್ಲಾಗಿರುತ್ತೆ.. ಅಲ್ಲದೆ ಫಿಲ್ಮೂ ತುಂಬಾ ರಿಚ್ಚಾಗಿರುತ್ತೆ.. ನಾಳೇನೆ ನಮ್ಮ ಕೆಮೆರಾ ತಂಡದೋರ್ನ ಗುಣಸಾಗರಕ್ಕೆ ಕಳಿಸ್ತೀನಿ.. ಕೆಮೆರಾಮೆನ್ ವಾಸೂಂತ, ಅವನು ತುಂಬಾ ಟ್ಯಾಲೆಂಟೆಡ್ಡು.. ಪರಿಚಯ ಮಾಡ್ಕೊಳ್ಳಿ ಎಂದು ಹೇಳಿ ಒಡನೆಯೇ ಲೈನ್ ಕಟ್ ಮಾಡಿಬಿಟ್ಟರು. ಇದು ಅಮಾನವೀಯತೆ ಎಂಬೆರಡು ಶಬ್ದಗಳು ಪತಿಯ ಗಂಟಲೊಳಗೆ ಉಳಿದು ಕಾಡಲಾರಂಭಿಸಿದವು..
 
ನಿರ್ದೇಶಕ ಕರಿನಾಲಗೆಯವನೇನೋ.. ಅವತ್ತು ಕರ್ಫ್ಯೂ ರಿಗೊಳಿಸಿದ ವಿಷಯ ತಿಳಿದದ್ದು ರಜೆಯ ತುಳಿತಕ್ಕೆ ತುತ್ತಾಗಿದ್ದ ಮಕ್ಕಳಿಂದ. ಮುನ್ನೆಚ್ಚರಿಕೆಯಿಂದ ಜಿಲ್ಲಾಡಳಿತದ ಮನವಿ ಮೇರೆಗೆ ಗೃಹಖಾತೆ ಅರೆಸೈನಿಕರನ್ನು ಅಗತ್ಯಕ್ಕಿಂತ ಹೆಚ್ಚು ಕಳಿಸಿತೆನ್ನಬಹುದು. ಅವರೆಲ್ಲ ಸಾಗರದ ನಿರ್ಮಾನುಷ ಬೀದಿಗಳಲ್ಲಿ ಕವಾಯತು ನಡೆಸಿದ್ದರಿಂದಾಗಿ ಬೂಟುಗಳ ಸದ್ದು ಮಾರ್ಧನಿಸಿತು. ಕರ್ಫ್ಯೂವಿನ ಸಾಧಕಬಾಧಕಗಳ ಪರಿಚಯಿಸುತ್ತ ತಿರುಗಾಡತೊಡಗಿದ ನೀಲಿವರ್ಣದ ವ್ಯಾನುಗಳು ಅಲ್ಲಲ್ಲಿ, ಯಾರೊಬ್ಬರು ಮನೆಗಳಿಂದೀಚೆ ಬರಬಾರದೆಂಬ ಎಚ್ಚರಿಕೆ ಬೇರೆ.. ಅದೇ ದಿವಸ ಮದ್ಯಾಹ್ನ ದುರಂತ ವಾರ್ತೆಯೊಂದು ಮುಖ್ಯವಾಗಿ ಪತಿಯ ಕಿವಿ ಮೇಲಪ್ಪಳಿಸಿತು, ಅದು ನಿಜವಾಗದಿರಲಿ ಎಂದುಕೊಂಡನಾದರೂ..
 
ಕರ್ಫ್ಯೂ ಅಂದರೇನು?, ಕಂಡಲ್ಲಿ ಗುಂಡು ಎಂದರೇನು? ತೋಟದಲ್ಲಿದ್ದ ರಾಯರು ಕೇಳಿಸಿಕೊಂಡೊಡನೆ ನಗಾಡಿದರು.. ಹೇಳಿದ ನರಹರಿಗೆ ಅವರು ಹೋಗೋ ಹುಚ್ಚಪ್ಪ ಅದೆಲ್ಲ ಆ ಕಾಲದ ಮಾತು.. ತನಗೆ ಮತ ನೀಡಿದ ರೈತನನ್ನು ಕೊಲ್ಲೋ ಕೆಲಸಾನ ಚುನಾಯಿತ ಸರ್ಕಾರಗಳು ಮಾಡುವುದುಂಟೇನು? ಎಂದರು, ತಡಮಾಡದೆ ಇದ್ದುದರಲ್ಲೇ ನೀಟಾಗಿ ಖಾದಿ ಪಂಚೆ, ಜುಬ್ಬಾ, ವೇಸ್ಟ್ಕೋಟೂ, ತಲೆ ಮೇಲೊಂದು ಗಾಂಧಿಟೊಪ್ಪಿಗೆ ಧರಿಸಿ ಉಂಗುಟ ಕಿತ್ತಿದ್ದರೂ ಚಪ್ಪಲಿಗಳನ್ನು ತಮ್ಮ ಪಾದಗಳಿಗೆ ಧರಿಸಿ ಕೈಗೆ ಕೋಲು ತೆಗೆದುಕೊಂಡರು. ಕರೆದಿದ್ದಕ್ಕೆ ನರಹರಿಯವರು ನೀನೊಬ್ಬನೆ ಹೋಗಿ ಕ್ಷೇಮವಾಗಿ ಮರಳಿ ಬಾರೋ ಮಹರಾಯ.. ನಿನಗೆಲ್ಲೋ ಹುಚ್ಚು ಎಂದು ಬೀಳ್ಕೊಟ್ಟರು.

ತುಂಬಾ ವಯಸ್ಸಾಗಿರುವ, ಇಡೀ ತಾಲ್ಲೂಕಿನಲ್ಲಿ ಅಭಿನವ ಗಾಂಧಿ ಎಂದು ಹೆಸರಾಗಿರುವ ತಮ್ಮ ತಂಟೆಗೆ ಯಾರಾದರು ಬಂದಾರೆಯೇ.. ಹುಮ್ಮಸ್ಸು, ಆತ್ಮವಿಶ್ವಾಸದಿಂದ ರಾಯರು ನಿರ್ಮಾನುಷ ಬೀದಿಗಳಲ್ಲಿ ನಡೆದೂ ನಡೆದು ಬಲಕ್ಕೆ ತಿರುಗಿ ನೋಡುತ್ತಾರೆ, ಮುವ್ವತ್ತೆಂಟರಲ್ಲಿ ಬಾಪೂಜಿಯವರು ಭಾಷಣ ಮಾಡಿದ್ದ ಸ್ಥಳ ನಿಸ್ಸಂದೇಹವಾಗಿ, ನೂರಾರು ದಾರಿಹೋಕರಿಗೆ ನೆರಳನ್ನು ಪ್ರಸಾದಿಸುವಷ್ಟು ಎತ್ತರಕ್ಕೆ ಬೆಳೆದಿರುವ ಆಲದಮರ ಆ ಕಾಲದಲ್ಲಿ ತಾವು ನೆಟ್ಟು ಪೋಷಿಸಿದ್ದು ಬೇರೆ.. ಅಪರೂಪಕ್ಕೆ ಮುಖದ ಮೇಲೆ ಸಂತೋಷ ತಂದುಕೊಂಡ ರಾಯರು ಅದರಡಿ ಇದ್ದ ಕಟ್ಟೆ ಮೇಲೆ ಹಲವರೊಂದಿಗೆ ನಿಂತುಕೊಂಡರು. ಅಪರೂಪಕ್ಕೆ ರಾಯರು ಹೊರಗಡೆ ಬಂದು ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ತಮ್ಮ ಪುಣ್ಯ.. ಸ್ವಾತಂತ್ರ್ಯಹೋರಾಟ, ಬ್ರಿಟೀಷರು, ಅವರ ಸಶಸ್ತ್ರ ಪೋಲಿಸರೂ.. ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂಥ ಮಾತುಕತೆ.. ಇದ್ದಕ್ಕಿದ್ದಂತೆ ಕರ್ಫ್ಯೂ ವಿಧಿಸಿದ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಓಡಿ ತಲೆಮರೆಸಿಕೊಳ್ಳುತ್ತಿರುವ ಪ್ರತಿಭಟನಾನಿರತರು, ಅವರನ್ನು ಅಟ್ಟಾಡಿಸಿಕೊಂಡು ಧಾವಿಸುತ್ತಿರುವ ಪೋಲಿಸರು..
ಇದ್ದಕ್ಕಿದ್ದಂತೆ ವ್ಯಾನೊಂದು ಆಲದಕಟ್ಟೆ ಎದುರು ಬಂದು ನಿಂತಿತು, ಅದರಿಂದ ಯುವಕನೋರ್ವ ಇಳಿದು ಎರಡು ಹೆಜ್ಜೆ ಮುಂದೆ ಸಾಗಿ ನೇರವಾಗಿ ದಿಟ್ಟಿಸುವುದರ ಮೂಲಕ ಮುಖ್ಯವಾಗಿ ರಾಯರ ಗಮನ ಸೆಳೆದನು. ಯಾರೋ ಪರಿಚಿತ ಯುವಕನಿದ್ದಂತಿರುವನು, ನೋಡಿದರು, ಬಳಿಕ ಹುಬ್ಬಿಗೆ ಅಂಗೈ ಅಂಟಿಸಿ ನೋಡಿ ಅರೆ!. ನಮ್ಮ ಸೀತಾರಾಮು ಅಲ್ವೆ ನೀನು.. ಯಾವಾಗ ಪೋಲಿಸಾದೆಯೋ? ಎಂಬ ಮಾತುಗಳನ್ನಾಡಬೇಕೆಂದಿದ್ದರು, ಆದರೆ ಆ ಯುವಕ ಇನ್ನೂ ಎರಡು ಹೆಜ್ಜೆ ಮುಂದೆ ಬಂದು ಕೋವಿಯನನ್ನು ಅವರೆಡೆಗೆ ಗುರಿ ಇರಿಸಿ, ನಿಶ್ಯಬ್ಧವಾಗಿ ಟ್ರಿಗ್ಗರೊತ್ತಿದ, ಬಳಿಕ ನಮಸ್ಕರಿಸಿ ವ್ಯಾನೇರಿ ಬುರ್ರಂತ ಹೊರಟು ಹೋದ.
 
ರಾಯರು ಸಹವಂದಿಗರನ್ನುದ್ದೇಶಿಸಿ ಈಗ ಅವನ ಗುರುತು ಹತ್ತಿತು ನೋಡಿ, ಅವನು ಬೇರಾರೂ ಅಲ್ಲ, ನಮ್ಮ ದಾಯಾದಿ ಗೋಪಾಲಯ್ಯನ ಮಗ ಸೀತಾರಾಮು.. ಇವೇ ಕೈಗಳಿಂದ ಅವನನ್ನೆತ್ತಿ ಆಡಿಸಿದ್ದೀನಿ.. ಈಗಿನ ಮಕ್ಕಳು ಬೆಳೆಯೋದಾಗಲೀ, ದೊಡ್ಡೋರಾಗೋದಾಗಲೀ ತಡಾಗೋದಿಲ್ಲ ನೋಡಿ.. ಎಲ್ಲಾ ಕಾಲದ ಮಹಿಮೆ.. ಎಂದು ನಿಡುಸುಯ್ದುರು. ತಾವು ಧರಿಸಿದ್ದ ದೋತರದೊಳಗೆ ಏನೋ ಒಂದು ರೀತಿಯ ತಣ್ಣನೆಯ ದ್ರವ ಹರಿಯುತ್ತಿರುವಂಥ ಅನುಭವ!.. ಆತಂಕದ ವೇಳೆಯಲ್ಲಿ ತಾವು ತಮಗರಿವಿಲ್ಲದಂತೆಯೇ ಮೂತ್ರ ವಿಸರ್ಜಿಸಿಕೊಳ್ಳುವುದು ಇತ್ತೀಚೆಗೆ ಮಾಮೂಲು, ಕೇಳಿದ್ದಕ್ಕೆ ಕುಲಕರ್ಣಿ ಪ್ರಾಸ್ಟೇಟ್ಗ್ಲಾಂಡ್ಸ್ ಪ್ರಾಬ್ಲೆಂ ರಾಯರೇ.. ಒಂದು ಸಣ್ಣ ಆಪರೇಷನ್ ಮಾಡೋದಿದೆ. ನಾನೇ ಅದಕ್ಕೆ ಏರ್ಪಾಡು ಮಾಡ್ತೀನಿ, ನಿಶ್ಚಿಂತೆಯಿಂದಿರಿ ಎಂದು ಹೇಳಿದ್ದನ್ನು ನೆನಪು ಮಾಡಿಕೊಂಡರು. ಸಮಾಧಾನವಾಗದೆ ಮೆಲ್ಲಗೆ ತಮ್ಮ ಶಿಶ್ನ ಮುಟ್ಟಿ ನೋಡಿಕೊಂಡರು, ಕರ್ಫ್ಯೂ ಅಂದರೆ ಇಷ್ಟೇನಾ.. ತಾವಿನ್ನೇನು ಅಲ್ಲಿಂದ ಹೊರಡಬೇಕೆನ್ನುವಷ್ಟರಲ್ಲಿ ನೆಲದ ಮೇಲೆ ಇಷ್ಟಗಲ, ಅಷ್ಟುದ್ದದ ರಕ್ತ ಹರಿದು ಕೆಂಪಗೆ ನಿಂತಿತ್ತು, ಅದನ್ನು ನೋಡಿದ ಮರುಗಳಿಗೆಯಲ್ಲಿಯೇ ಸಣ್ಣ ಪ್ರಮಾಣದ ನೋವು ಕಾಣಿಸಿಕೊಂಡು ಉಲ್ಬಣಿಸಿತು ನೋಡಿಕೊಳ್ಳುತ್ತಾರೆ ತಮ್ಮ ಬಲದೊಡೆಯ ಊಧ್ರ್ವಭಾಗದಲ್ಲಿ ಚಿಕ್ಕದೊಂದು ರಂದ್ರ.. ಮಾಂಸದೊಳಗೆಲ್ಲೋ ಬುಲೆಟ್ನ ಅಳುಕು.. ರಾಯರು ನಿಧಾನವಾಗಿ ಕೆಳಕ್ಕುರುಳಿದರೆನ್ನುವಷ್ಟರಲ್ಲಿ..
****
ಗುಣಸಾಗರದ ಅಭಿನವ ಗಾಂಧಿ ಎಂದೇ ಪ್ರಖ್ಯಾತರಾದ ವೆಂಕೋಬರಾಯರ ತೊಡೆಗೆ ಪೋಲಿಸರ ಗುಂಡು ತಗುಲಿರುವುದೆಂಬ ವಾತರ್ೆ ಕಾಳ್ಗಿಚ್ಚಿನೋಪಾದಿಯಲ್ಲಿ ಹರಡಲು ತೆಗೆದುಕೊಂಡ ಸಮಯ ಕೆಲವೇ ಕೆಲವು ನಿಮಿಷಗಳು ಮಾತ್ರ.. ಅದರಿಂದ ರೈತರಿಗಿಂತ ಮುಖ್ಯವಾಗಿ ವಿದ್ಯಾರ್ಥಿಗಳು ಕರ್ಫ್ಯೂ ಲೆಕ್ಕಿಸದೆ ಕೆರಳಿ ನಡೆಸಿದ ದಾಂಧಲೆಗೆ ಸಾಗರ ಅಲ್ಲೋಲಕಲ್ಲೋಲವಾಗದೆ ಇರಲಿಲ್ಲ. ಸಾವಿರಾರು ಅಭಿಮಾನಿಗಳ ಕಾಲ್ತುಳಿತಕ್ಕೆ ಸಿಲುಕಿ ಗಾಂಧಿತೋಟ ಭಣಗುಟ್ಟಲಾರಂಭಿಸಿತು..
ತನ್ನ ಅಪಸ್ಮಾರ ಕಥೆಯ ಕೇಂದ್ರಪಾತ್ರವೇ ರಕ್ತಸಿಕ್ತವಾಗಿರುವುದೆಂದು ಭಾವಸಿದ ಪತಿ ತನ್ನೆರಡೂ ಕಣ್ಣುಗಳನ್ನು ಒದ್ದೆ ಮಾಡಿಕೊಳ್ಳದೆ ಇರಲಿಲ್ಲ, ತಾನು ಸುತ್ತಿಬಳಸಿ ಮನೆ ತಲುಪುವಷ್ಟರಲ್ಲಿ ಅಂಗಳದಲ್ಲಿ ಒಂದೆರಡು ಕಾರುಗಳು ನಿಂತಿದ್ದವು.. ಕೆಮೆರಾದ ಮೂಲಕ ದುರ್ಘಟನೆಗಳನ್ನು ಸೆರೆ ಹಿಡಿಯುವ ಸಲುವಾಗಿ ತಂಡದೊಂದಿಗೆ ಆಗಮಿಸಿದ್ದ ಪಟುವರ್ಧನ್ ಪತಿ ಹೆಗಲ ಮೇಲೆ ಕೈ ಹಾಕಿ ನಿಮ್ಮ ಕಥೆಯ ಗಾಂಧಿ, ಖರೇವಂದ್ರು ಗಾಂಧೀಜಿ.. ಈಗ ಗುಂಡು ಹೊಡೆಸಿಕೊಂಡಿರೋ ರಾಯರಿಗಿಂತ ಗುಂಡು ಹಾಕಿರೋ ಆ ಪೋಲಿಸ್ ತರುಣ ಇಂಟರೆಸ್ಟಿಂಗ್ ನೋಡಿ.. ನಿಮ್ಮ ಮುಂದಿನ ಕಥೆಯ ಕೇಂದ್ರಪಾತ್ರ ಆ ಯುವಕನದ್ದಾಗಿರಬೇಕು.. ಸರಿಯಾಗಿ ಟಿಪ್ಪಣಿ ಮಾಡಿಕೊಳ್ಳೋದನ ಮರೀಬ್ಯಾಡಿ.. ಎಂದು ಹೇಳಿ ಒಂದು ಕ್ಷಣ ಎದೆ ಮೇಲೆ ಕೈಯಿಟ್ಟುಕೊಂಡು ನಿರಮ್ಮಳಗೊಂಡರು. ರಾಯರ ಉಗ್ರಾಭಿಮಾನಿಯಾದ ಕಟುಗರ ವಿಠೋಬ ನೇರವಾಗಿ ತೋಟದಿಂದ ಬಂದದ್ದು ಸಿನೆಮಾದವರು ಬಂದಿರುವರೆಂಬ ಸುದ್ದಿ ಕೇಳಿಯೇ.. ಮೇಸ್ಟ್ರೇ.. ನಿಮ್ಮ ಕಥೆಯ ಅಂತ್ಯ ದುರಂತವಾಗಬಹುದೆಂದುಕೊಂಡಿರಲಿಲ್ಲ, ರಾಯರು ಸ್ಥಿತಿ ಚಿಂತಾಜನಕವಾಗಿದೆ ಕಣ್ರೀ..ಈಗಲೋ, ಆಗಲೋ.. ಹೇಳೋಕೆ ಬರೋಲ್ಲ.. ಎಂದು ಹೇಳಿ ಹಸ್ತಲಾಘವ ಮಾಡುವ ನಿಮಿತ್ತ ನಿರ್ದೇಶಕರ ಕಡೆ ನಡೆದ. ಆದರೆ ಯಾರನ್ನೂ ಮಾತಾಡಿಸುವ ವ್ಯವಧಾನ ನಿದರ್ೇಶಕರಿಗಿರಲಿಲ್ಲ, ತಮ್ಮ ಮುಂದಿನ ಕಾರ್ಯಕ್ರಮಗಳ ಸ್ಪಷ್ಟ ಅರಿವು ಸಹ ಇರಲಿಲ್ಲ, ಏನು ಮಾಡುವುದು?, ಏನು ಮಾತಾಡುವುದು?.. ಮರಣೋನ್ಮುಖ ರಾಯರನ್ನು ನೋಡುವುದೋ, ಬೇಡವೋ ಎಂಬ ಸಂದಿಗ್ದತೆ ಬೇರೆ.. ಸಲಹೆಗಾಗಿ ಪತಿಯ ಕಡೆ ನೋಡಿದರು, ಆದರೆ ಅದು ಸಲ್ಲೇಖನಾರೂಢ ಮುನಿಯ ಮುಖವನ್ನು ಹೋಲುತ್ತಿತ್ತು, ಆದರೂ ಸುಮ್ಮನಿರಲಾಗುವುದೇನು? ಅವರೆಲ್ಲ ಹೊರಟು..
ಕೆಮೆರಾ ಸಿಬ್ಬಂದಿಯೊಂದಿಗೆ ತೋಟ ತಲುಪಿದಾಗ ಸಾಯಂಕಾಲ ಐದೂವರೆ.. ತೋಟದ ಒಳಹೊರಗೆ ನೆರೆದಿದ್ದ ಸಹಸ್ರಾರು ಜನ ನೋಡಿದೊಡನೆ ಓಹ್ಹೋ ಪಟುವರ್ಧನ್ ಎಂದು ಕೂಗಿ ಮುನ್ನುಗ್ಗಿದರು, ಅಷ್ಟರಲ್ಲಿ ರಾಯರ ಆರೋಗ್ಯ ವಿಚಾರಿಸಿಕೊಂಡು ಹೊರಬಂದ ಅರಣ್ಯಖಾತೆ ಸಚಿವ ಸಿದ್ಧಾರೂಢ ಪಟುವರ್ಧನೆದುರು ಕಣ್ಣುಗಳನ್ನು ಒಮ್ಮೆ ಮುಚ್ಚಿತೆಗೆದರು. ತಾವು ಕಳೆದ ಸಲ ವಾರ್ತಾ ಸಚಿವರಾಗಿದ್ದಾಗಿನಿಂದಲೂ ಪಟುವರ್ಧನ್ ತೀರಾ ಪರಿಚಯ.. ಮಾತಾಡಲು ಕಾಲಾವಕಾಶವಿರಲಿಲ್ಲ. ಕೂಡಲೆ ಹೋಗಿ ರಾಯರ ದರ್ಶನ ಪಡೆಯಿರಿ ಮೊದಲು ಎಂದು ಸಚಿವರೇ ದಾರಿ ಮಾಡಿಕೊಟ್ಟರು. ಆದರೆ ಇವರೆಲ್ಲ ಒಳಹೋಗುವುದಕ್ಕೂ ರಾಯರ ಪ್ರಾಣ ಊಧ್ರ್ವಮುಖವಾಗಿ ಹಾರಿ ಹೋಗುವುದಕ್ಕೂ ಸರಿ ಹೋಯಿತು.
ಸಾರ್ವಜನಿಕರ ದರ್ಶನದ ಸಲುವಾಗಿ ರಾಯರ ಪಾರ್ಥಿವ ಶರೀರವನ್ನು ತೋಟದಲ್ಲಿರಿಸುವುದೋ, ಆಲದ ಕಟ್ಟೆ ಮೇಲಿರಿಸುವುದೋ ಎಂಬ ಸಮಸ್ಯೆ ಸ್ಥಳೀಯ ಸರ್ಕಾರವನ್ನು ಕಾಡಿತು. ಈಗಾಗಲೇ ಸಾಕಷ್ಟು ಹಾನಿಗೊಳಗಾಗಿರುವ ದೂರದ ತೋಟಕ್ಕಿಂತ ಊರ ಹೃದಯ ಭಾಗದಲ್ಲಿರುವ ಆಲದಕಟ್ಟೆ ಮೆಲಿರಿಸುವುದು ಒಳ್ಳೆಯದೆಂದು ಸುಭಾಷ್ ದುಃಖದ ನಡುವೆ ಸಲಹೆ ನೀಡಿದ. ಆತನ ಅನ್ನಿಸಿಕೆಯಂತೆ ಶವವನ್ನು ಅಲ್ಲಿಗೆ ಸಾಗಿಸಿ ಶೃಂಗರಿಸಿ ಇಡೀ ಒಂದು ದಿವಸ ಇರಿಸಲಾಗಿತ್ತು. ಎರಡನೆ ದಿವಸ ಬೆಳೆಗ್ಗೆ ನಡೆದ ಅಂತಿಮ ಯಾತ್ರೆ ಹಲವು ಘಟನೆಗಳಿಗೆ ನಾಂದಿ ಹಾಡಿತು. ಜನಪ್ರಿಯ ಚಲನಚಿತ್ರ ನಿರ್ದೇಶಕರ ದೈಹಿಕ ಹಾಜರಿಯೇ ಹಲವು ಅಹಿತಕರ ಘಟನೆಗಳಿಗೆ ಕಾರಣವಾದರೆ!.. ಪೋಲಿಸ್ ಅಧಿಕಾರಿಗಳು ಗೈರುಹಾಜರಾಗುವುದರ ಮೂಲಕ ಸಹಕರಿಸುವಂತೆ ಪಟುವರ್ಧನ್ ಅವರನ್ನು ಪರಿಪರಿಯಿಂದ ವಿನಂತಿಸಿಕೊಂಡು ವಿಫಲರಾದರು. ನಿರೀಕ್ಷೆಗೆ ಮೀರಿ ಜಮಾವಣೆಗೊಂಡ ಸಿನಿಮಾ ಅಭಿಮಾನಿಗಳನ್ನು ನಿಯಂತ್ರಿಸಲು ಪೋಲಿಸರು ಲಾಠಿಚಾರ್ಜು ಮಾಡಬೇಕಾಯಿತಲ್ಲದೆ ಹಲವು ಬಾರಿ ಅಶ್ರುವಾಯು ಸಿಡಿಸಬೇಕಾಯಿತು, ಶವಯಾತ್ರೆ ನೃಸಿಂಹಘಾಟ್ ತಲುಪುವಷ್ಟರಲ್ಲಿ ಹತ್ತಾರು ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದು ರಾಯರ ದುರಂತ ಮರಣೋತ್ತರ ಸಂಭವಿಸಿ ಇನ್ನೊಂದು ದುರಂತವೇ ಸರಿ!.
 
 

‍ಲೇಖಕರು avadhi

June 13, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕುಂ ವೀ ಕಾದಂಬರಿ ಝಲಕ್ ಆರಂಭ

ಕುಂ ವೀ ಅವರು ಹೊಸದಾಗಿ ಬರೆದಿರುವ ಕಾದಂಬರಿ 'ಒಳಚರಂಡಿ'. ಅವಧಿಯ ಮೇಲಿನ ಪ್ರೀತಿಯಿಂದ ಆ ಕೃತಿಯ ಆಯ್ದ ಭಾಗವನ್ನು ಬಿಡುಗಡೆಗೆ ಮುಂಚೆಯೇ...

ಕುಂ ವೀ ಬರೆದ ನೀಳ್ಗತೆ ’ಪಿಂಚಣಿ’

ಕುಂ ವೀರಭದ್ರಪ್ಪ (ಇಲ್ಲಿಯವರೆಗೆ) ತನ್ನತ್ತ ಹೆಜ್ಜೆ ಸದ್ದು ಕೇಳಿಸಿದಂತೆಯೂ, ಸಿಲವಾರ ತಟ್ಟೆಯನ್ನು ಕುಕ್ಕಿದಂತೆಯೂ, ಈ ಮೀನನ್ನ ನೀನೇ ತಿಂದ್ಕಾ...

4 ಪ್ರತಿಕ್ರಿಯೆಗಳು

 1. Sharanappa Bachalapur

  ವಾಸ್ತವಕ್ಕೆ ಹಿಡಿದ ಕನ್ನಡಿ.. ಸಮಾಜಕ್ಕೆ ಅಪಸ್ಮಾರವಾಗಿದೆ. ಗಾಂಧಿ ಈಗ ಪ್ರಚಾರ ವಸ್ತು ನಿಜ ಅನಿಸುತ್ತಿದೆ
  ಶರಣಪ್ಪ ಬಾಚಲಾಪೂರ
  ಕೊಪ್ಪಳ

  ಪ್ರತಿಕ್ರಿಯೆ
 2. ಉದಯಕುಮಾರ್ ಹಬ್ಬು

  ರಾಜಕೀಯ ವಿಡಂಬನಾತ್ಮಕ ಕಥೆ ಬರೆಯುವುದರಲ್ಲಿ ಕುಂ ವಿ ಎತ್ತಿದ ಕೈ. ಮನುಷ್ಯ ಸಂಬಂಧಗಳ ಕತೆಗಳನ್ನು ನಾನು ಅವರಿಂದ ನಿರೀಕ್ಷಿಸುತ್ತೇನೆ.ಉದಯಕುಮಾರ ಹಬ್ಬು, ಕಿನ್ನಿಗೋಳಿ

  ಪ್ರತಿಕ್ರಿಯೆ
 3. ವಿಜಯ್ ಜೂಚಾನಿ

  ಸರ್, ನಿಮ್ಮ ಕಥೆಗಳನ್ನು ತುಂಬಾ ಎಂಜಾಯ್ ಮಾಡುತ್ತೇನೆ, ಯಾವುದೇ ವಿಷಯವನ್ನು ಹೇಳುವ ದಾಟಿ ಇದೆಯಲ್ಲ ಕನ್ನಡದಲ್ಲಿ ಯಾವ ಲೇಖಕನಿಗೂ ಒಲಿದಿಲ್ಲ ಅನ್ನಿಸುತ್ತದೆ… ನಿಮ್ಮ ಗಾಂಧೀಕ್ಲಾಸಿನ ಓಣಿಗಳಲ್ಲಿ ಓಡಾಡುವಾಗ ಎಷ್ಟು ನಕ್ಕೆನೋ ಅಷ್ಟೇ ಹೃದಯ ಭಾರವಾಯ್ತು… ನಮ್ಮ ನಡುವೆ ಇಂಥಾ ಅದ್ಬುತ ಲೇಖಕರಿದ್ದಾರೆ ಎನ್ನುವುದೇ ನಮ್ಮ ಪುಣ್ಯ.

  ಪ್ರತಿಕ್ರಿಯೆ
 4. Anil Talikoti

  ಕುಂ.ವೀ ಕಥೆಗಳಾಳ ಅಳೆದವರಿಲ್ಲಾ. ತಲೆಯಲ್ಲಿರುವದೆಲ್ಲಾ ಅದ್ಹೇಗೆ ಬರಹಕ್ಕೆ ಇಳಿಸುತ್ತಾರೋ, ಅಮೂರ್ತ ಭಾವನೆಗಳ ಅಷ್ಟು ಶೀಘ್ರತೆಯಿಂದ ಅಕ್ಷರಕ್ಕಿಳಿಸುವ ಪರಿ ಅನನ್ಯ. ಇನ್ನೂ ಅದ್ಭುತವಾಗಬಹುದಾಗಿದ್ದ ಕಥೆಗಳಿವು -ಈ ಧಾವಂತದ ಬದುಕಿಗೆ , ನಾವಿರುವ ಈ ದೇಶ-ಕಾಲಕ್ಕೆ ಸರಿಯಾಗಿ ತೆಕ್ಕೆ-ಮುಕ್ಕೆ ಹಾಕಿಕೊಂಡು ಅನುಪಮ ಅನುಭವ ನೀಡುತ್ತವೆ. ಬ್ರಂಹಾಂಡ ಬರವಣಿಗೆಗೆ ಬೆರಗಾಗುವ ಪರಿ ನಮ್ಮೆಲ್ಲರದು – ವಾರಕ್ಕೊಂದು ಕಥೆಗೆ ಯಾವಾಗಲೂ ಕಾಯುತ್ತಿರುತ್ತೇನೆ.
  -ಅನಿಲ ತಾಳಿಕೋಟಿ

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Anil TalikotiCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: