ಕುಂ ವೀ ಬರೆದಿದ್ದಾರೆ: ಜಾಗತೀಕರಣದಿಂದಾಗಿ ದೆವ್ವ್ಗಳು ಕೂಡ ನಾಪತ್ತೆಯಾಗಿದ್ದಾವೆ

– ಕುಂ. ವೀರಭದ್ರಪ್ಪ
ಎಲ್ಲಿ ಕನ್ನಡ ಕತೆಗಳನ್ನ ಹೆಚ್ಚು ಕೇಳ್ತರೋ ಹೇಳ್ತರೋ ಅಲ್ಲಿ ಹೆಚ್ಚು ಮಳೆ ಬರ್ತದೆ ಎನ್ನುವ ಒಂದು ಪ್ರತೀತೀ ಇದೆ. ಹಿಂದಿನ ಕಾಲದಲ್ಲಿ ಮಳೆ ಬರ್ಲಿಲ್ಲ ಅಂತ್ಹೇಳಿದ್ರೆ ಕುಮಾರವ್ಯಾಸನ ಕರ್ನಾಟಕ ಭಾರತ ಕಥಾಮಂಜರಿಯನ್ನ ವಾಚಿಸ್ತಾ ಇದ್ರು. ವಾಚಿಸಿದಾಕ್ಷಣ ಮಳೆ ಬರ್ತಾ ಇತ್ತು. ಕಾರಣ ಕಥೆಗಳಿಗೆ ನಮ್ಮ ಪ್ರಕೃತಿದತ್ತವಾಗಿರುವ ವರ ಇದೆ ಅಂತ ನಾನು ಈ ಸಂದರ್ಭದಲ್ಲಿ ತಿಳ್ಕೊಂಡಿದ್ದೇನೆ.
ಕನ್ನಡ ಕಥೆ ಅಂತ ಹೇಳಿದ್ರೆ ಅದ್ರಲ್ಲಿ ಎರಡು ವಿಧ. ಓದ್ತಕ್ಕಂತಾ ಒಂದು ಪರಂಪರೆ ಇದೆ. ಇತ್ತೀಚಿನ ವರ್ಷಗಳಲ್ಲಿ ನವ್ಯೋತ್ತರ ಸಂದರ್ಭದಲ್ಲಿ ಅನೇಕ ಕಥೆಗಳನ್ನು ಓದಿ ಕಥೆಗಳನ್ನು ಬರೆಯುವ ಒಂದು ಪರಂಪರೆ ಶುರುವಾಗಿದೆ. ಎರಡನೆಯ ಕೇಳ್ತಕ್ಕಂತಾ ಪರಂಪರೆ ಅಂತ್ಹೇಳಿದ್ರೆ ನಮ್ಮ ಮನೆಗಳಲ್ಲಿ ನನ್ನಂತಹ ಗ್ರಾಮೀಣ ಜನರ ಮನೆಗಳಲ್ಲಿ ಅದ್ಭುತವಾಗಿರ್ತಕ್ಕಂತಾ ವೃದ್ಧರು ಇದ್ರು. ಅವ್ರು ಕಥೆಗಳನ್ನು ಹೇಳ್ತಾ ಇದ್ರು. ನನ್ನ ಬಹುಪಾಲು ಕಥೆ ಕಾದಂಬರಿಗಳಲ್ಲಿ ಅನೇಕ ವೃದ್ಧರು ಬರ್ತಾರೆ. ಅರಮನೆಯಂತಾ ಕಾದಂಬರಿಯಲ್ಲಿ ಬೈರಮಾಂಬೆ ಅಂತ ಮುದುಕಿ ಬರುತ್ತೆ, ಜಗಳೂರವ್ವ ಅಂತ ಮುದುಕಿ ಬರ್ತಾರೆ. ಮುದುಕಿಯರು ಕೊಡ್ತಕ್ಕಂತಾ ಒಂದು ಶಕ್ತಿ ಸಮಾಜಕ್ಕೆ ಬಾಳ ದೊಡ್ದು ಅಂತ ನಾ ತಿಳ್ಕೊಂಡಿದ್ದೀನಿ.
ಆ ಮುದುಕ್ರಿರ್ತಕ್ಕಂತಾ ಸಮಾಜ ಅತ್ಯಂತ ಸುಸಂಪನ್ನವಾಗಿರ್ತದೆ. ವಚನಗಳಿವೆ ಮುದುಕ್ರ ಬಗ್ಗೆ. ಮುದುಕ್ರು ಎಲ್ಲಿರ್ತರೋ ಅಲ್ಲಿ ಆ ಕುಟುಂಬ ಚೆನ್ನಾಗಿರುತ್ತೆ, ಆ ಮುದುಕ್ರಿರ್ತಕ್ಕಂತಾ ಸಮಾಜ ಚೆನ್ನಾಗಿರ್ತದೆ ಅಂತ ಒಂದು ಪ್ರತೀತಿ ಇದೆ. ಅಂತಹ ಒಂದು ಕೌಟುಂಬಿಕ ಹಿನ್ನೆಲೆಯ ಕುಟುಂಬದಿಂದ ಬಂದವ ನಾನು. ಈಗ ಕಥೆಯನ್ನಾ ನಾನು ಓದೋದಕ್ಕಿಂತಾ ಆ ಕಥೆಯನ್ನಾ ಹೇಳೋದೇ ಚಲೋ ಅಂತಾ ನಾ ತಿಳ್ಕೊಂಡಿದ್ದೀನಿ.
ನಮ್ಮ ಮನೆ ಅಂತ್ಹೇಳಿದ್ರೆ ಅದು ರೈತಾಪಿ ಕುಲಕಸುಬಿಗೆ ಸಂಬಂಧ ಪಟ್ಟಂತಾ ಮನೆ. ಆ ಮನೆಗಳಲ್ಲಿ ಅನೇಕ ಜನ ಮುದುಕಿರಿದ್ರು. ಸಿದ್ದಮ್ಮಜ್ಜಿ, ಗೌರಮ್ಮಜ್ಜಿ, ಹಂಪಮ್ಮಜ್ಜಿ ಅಂತಕ್ಕಂತಾ ಮುದುಕಿಯರು ಅವರನ್ನ ನೋಡಿದ್ರೆ ಮುದುಕ್ರಾದ್ರೆ ಹೀಗೇ ಆಗ್ಬೇಕ್ಕಪ್ಪಾ ಅಂತಾ ಅನ್ನೋತರಾ ಇದ್ದಂತಾ ಮುದುಕೀರು, ಮುದು ವೃದ್ಧಾಪ್ಯ ಒಂದು ಬಹುದೊಡ್ಡ ಕಲೆ ಅದು. ಈಗೇನಾಗಿದೆ ಅಂತ್ಹೇಳಿದ್ರೆ ವೃದ್ಧಾಪ್ಯ ಪಡಿಯೋ ಪ್ರಕ್ರಿಯೆ ಆಗಿದೆ. ಒಂದು 30-40 ವರ್ಷಗಳ ಹಿಂದಿನ ಒಂದು ಸಮಾಜ ಇದನ್ನ ಸುಳ್ಳು ಮಾಡ್ತು ಸಿದ್ದಮ್ಮಜ್ಜಿ ಅಂತಕ್ಕಂತಾ ಮುದುಕಿ ಇದ್ರು. ಅವರು ಹೇಗಿದ್ರು ಅಂತ್ಹೇಳಿದ್ರೆ ಅವ್ರು ಯಮನಿಗೆ, ಸಾವಿಗೆ ಅತೀತವಾಗಿದ್ರು. ಸಾವು ಅವ್ರನ್ನ ನೋಡಿದ್ರೆ ಭಯ ಪಡ್ತಾ ಇತ್ತು. ಇವ್ರ ಹತ್ರಕ್ಕೆ ಬರ್ತಾ ಇರ್ಲಿಲ್ಲ ಅಂಥಾ ಒಂದು ಅದ್ಭುತವಾದ ಮುದುಕಿರಿದ್ರು.
ಅಂತಾ ಒಂದು ಮುದುಕಿರ ಪೈಕಿ ನಮ್ ಮನೇಲಿದ್ದಂತಹ ಸಿದ್ದಮ್ಮಜ್ಜಿ ಒಂದು. ನಮ್ಮ ಸಿದ್ದಮ್ಮಜ್ಜಿ ಹೇಗಿತ್ತು ಅಂದ್ರೆ ಅಷ್ಟು ಸುಂದರವಾದ ಮುದುಕಿ ಪ್ರಪಂಚದಲ್ಲಿ ಪ್ರಾಯಶ: ಐಶ್ವರ್ಯ ರೈ ಕೂಡಾ ಇರ್ಲಾರದು ಅಷ್ಟು ಸುಂದರವಾಗಿದ್ದಂತಹ ಮುದುಕಿ ಅದು. ನನ್ನತ್ರ ಒಂದ ಕೊಡಾಕ್ ಕ್ಯಾಮರ ಇತ್ತು. ನಾನು ಈ ಮುದುಕಿಯ ಫೋಟೋವನ್ನು ತೆಗೀಬೇಕು ಅಂತಾ ಬಾಳಾ ಪ್ರಯತ್ನಪಟ್ಟೆ. ಆ ಮುದುಕಿ ಎಲೆಅಡಿಕೆ ಕುಟ್ತಾ ಇರುವಾಗ ನಾನ್ ಫೋಟೋ ತೆಗ್ದೆ. ನಿಜವಾಗ್ಲೂ ಚೆನ್ನಾಗ್ ಬಂತು. ಅದು ಚೆನ್ನಾಗ್ ಬಂತಲ್ಲಾ ‘ಕನ್ನಡಪ್ರಭ’ದಲ್ಲಿ ಅದು ಪ್ರಕಟ ಆಯ್ತು. ಪ್ರಕಟ ಆದಾಗ ‘ಹಣ್ಣೆಲೆ’ ಅಂತಾ ಹೆಸ್ರು ಕೊಟ್ರು ಸಂಪಾದಕರು. ಓಣಿಯಲ್ಲಿನ ಕೆಲವು ಹುಡುಗಿಯರು ಸಿದ್ದಮ್ಮಜ್ಜಿ ನಿನ್ ಫೋಟೋ ಬಂದಾತ್ ನೋಡು ಅಂದಾಗ ಆ ಮುದುಕಿ ಆ ಫೋಟೋ ನೋಡಿ ಎಷ್ಟು ನಾಚಿಕೆ ಪಡ್ತು ಅಂತ್ಹೇಳಿದ್ರೆ ಆ ನಾಚಿಕೆಯ ಮುಂದೆ ಯಾವ ಮಹಾಕಾವ್ಯಗಳು ಸರಿಸಮಾನವಾಗಿ ನಿಲ್ಲಲ್ಲು ಸಾಧ್ಯ ಇಲ್ಲ, ಅಷ್ಟು ಅದ್ಭುತವಾಗಿ ನಾಚಿಬಿಡ್ತು.
ಅಯ್ಯೋ, ನನ್ನ ಫೋಟೋ ಬಂದು ನನ್ ಮೊಮ್ಮಗ ನನ್ನ ಮರ್ಯಾದೆಯನ್ನ ಸಾರ್ವಜನಿಕವಾಗಿ ಹರಾಜು ಹಾಕಿಬಿಟ್ನಲ್ಲಾ ಅಂತ ವ್ಯಥೆ ಪಡ್ತು. ಇವ್ನು ನನ್ನ ಮರ್ಯಾದೆಯನ್ನು ಹರಾಜು ಹಾಕ್ತಾನೆ. ಇನ್ನು ಇವ್ನೆದುರಿಗೆ ನಾನು ಹೇಗಪ್ಪಾ ಇರೋದು ಅಂತಾ ಸುಮಾರು ಎಂಟು ದಿನಗಳ ಕಾಲ ನಮ್ ಮನೇಲಿದ್ದ ಒಂದು ಕೋಣೆಯನ್ನು ಸೇರಿಬಿಡ್ತು ಆ ಮುದುಕಿ ಆಮೇಲೆ ಕ್ರಮೇಣ ಎಂಟು ದಿನಗಳ ನಂತ್ರ ಹೊರಗಡೆ ಬಂತು. ನನ್ನ ಕೈಯಲ್ಲಿ ಕ್ಯಾಮರಾ ಇಲ್ಲಾ ಅಂತ ಖಚಿತಪಡಿಸ್ಕೊಂಡ ನಂತ್ರ ಹೊರಗಡೆ ಬರೋಕೆ ಶುರು ಮಾಡ್ತು. ಅಂತಾ ಒಂದು ನಾಚ್ಕೊಳ್ತಕ್ಕಂತಾ ಒಂದು ಸಂಪ್ರದಾಯ ನಮ್ಮ ಸಮಾಜದಲ್ಲಿತ್ತು.
ನಮ್ಮ ಮನೆಯಲ್ಲಿ ಹಂಪಮ್ಮಜ್ಜಿ ಅಂಬೋ ಇನ್ನೊಂದು ಒಂದು ಮುದುಕಿ ಇತ್ತು. ಹಂಪಮ್ಮಜ್ಜಿ ಅಂತ ಹೇಳಿದ್ರೆ ಈಗ್ ನಾನು ಬರೀತಿರೋ ಆರೋಹಣ ಎಂಬ ಕಾದಂಬರಿಯಲ್ಲಿ ಒಂದು ಮುದುಕಿ ಬರುತ್ತೆ. ಈ ಮುದುಕಿಯ ಪ್ರತಿರೂಪ ಅದು. ಆ ಮುದುಕಿ ಹೇಗಿತ್ತು ಅಂತ್ಹೇಳಿದ್ರೆ ಪ್ರಪಂಚದಲ್ಲಿ ಅಷ್ಟು ಅದ್ಭುತವಾಗಿ ಯಾರೂ ವೃದ್ಧಾಪ್ಯವನ್ನು ಅನುಭವಿಸ್ಲಿಕ್ಕೆ ಸಾಧ್ಯನೇ ಇಲ್ಲ. ಆ ಮುದುಕಿ ಯಾವಾಗ್ಲೂ ಹೊಲ್ದಲ್ಲಿ ಇರ್ತಾ ಇತ್ತು. ಸುಮಾರು ವರ್ಷದ ಒಂಭತ್ತು ತಿಂಗಳ ಕಾಲ ಹೊಲ್ದಲ್ಲಿ ಇರ್ತಾ ಇತ್ತು. ಉಳಿದ ಮೂರ್ನಾಲ್ಕು ತಿಂಗಳ ಕಾಲ ಮನೆಯಲ್ಲಿ ಇರ್ತಾ ಇತ್ತು. ಒಂದು ಬಿಸಿ ಊಟ ಮಾಡ್ತ ಇರ್ಲಿಲ್ಲ, ಒಂದು ಚಳಿ ಮಳೆ ಯಾವುದನ್ನೂ ಲೆಕ್ಕಿಸ್ದೆ ಅಂಗ್ಳದಲ್ಲಿ ಮಲ್ಕೊಳ್ತ ಇತ್ತು. ಆ ಮುದುಕಿ ಬಗ್ಗೆ ಯಾಕ್ ಪ್ರೀತಿ ಇತ್ತು ಅಂತ್ಹೇಳಿದ್ರೆ ಸುಮಾರು ನಾನು 4,5ನೇ ತರಗತಿಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ನಾನು ಶಾಲೆಗೆ ಹೋಗ್ಬೇಕಾದ್ರೆ ನಾನು ಆ ಮುದುಕಿ ಎದುರು ಕೈ ಚಾಚ್ತ ಇದ್ದೆ. ಕೈ ಚಾಚಿದಾಗ ಆಗಿನ ಕಾಲದಲ್ಲಿ ಇದ್ದಂತಹಾ ಎರಡಾಣೆಯನ್ನ ನನ್ ಕೈಗೆ ಕೊಡ್ತಾ ಇತ್ತು. ನಾನ್ ಬಹಳ ಖುಷಿಯಿಂದ ಹೋಗ್ತಾ ಇದ್ದೆ.
ನಮ್ ಮುದುಕರ ನಿಜವಾದ ಜನಪರ ಕಾಳಜಿ ಅಂದ್ರೆ ಜಗ್ಳಗಳು. ಆ ಜಗ್ಳದ ಸಂದರ್ಭದಲ್ಲಿ ನಮ್ ನಿಂಗಮ್ಮಜ್ಜಿ ಅಂದ್ರೆ ಹಂಪಮ್ಮಜ್ಜಿ ನೀ ಸಾಯ್ಬರ್ದಾ ಅಂತಾ ಹೇಳ್ತು ಅದ್ಕೆ, ನೀ ಇನ್ನೂ ಬದುಕಿದ್ಯಲ್ಲಾ ನೀ ಸಾಯ್ಬೇಕು ಅಂತಕ್ಕಂತಾ ಒಂದು ಸಾವಿನ ಆಹ್ವಾನವನ್ನಿಡ್ತು. ಅವಾಗ ಆ ಮುದುಕಿ ಅಯ್ಯೋ ನನ್ನ ಹೊಟ್ಟೆಯಲ್ಲಿ ಹುಟ್ಟಿದಂತಾ ಮಗ್ಳು ನನಿಗ್ ಸಾಯಿ ಅಂತಾ ಹೇಳಿದ್ಲಲ್ಲಾ ಅಂತಂದು ಆ ಮುದುಕಿ ಸಲ್ಲೇಖನ ವೃತ್ತ ತಗೊಂಡು ಕುತ್ಕೋಳ್ತು. ಸಲ್ಲೇಖನ ವೃತ್ತ ಅಂತ್ಹೇಳಿದ್ರೆ ಜೈನ ಮುನಿಗಳು ಆ ಮುದುಕಿಯಿಂದ ಕಲೀಬೇಕು. ಹಾಗೇ ಅದು ಉಪವಾಸ ಕುತ್ಕೋಳ್ತು. ಗಾಂಧೀಜಿ 28 ದಿನಗಳ ಕಾಲ ಶ್ರೀರಾಮ 53 ದಿನಗಳ ಕಾಲ ಉಪವಾಸ ಇದ್ರು ಅಂತ ಹೇಳ್ತಾ ಇದ್ರು. ಆದ್ರೆ ನಮ್ ಮುದುಕಿ ಸುಮಾರು ಎರಡು ತಿಂಗಳಗಳ ಕಾಲ ಅನ್ನ ನೀರು ಬಿಟ್ಟು ಕುತ್ಕೋಳ್ತು. ಯಮಧರ್ಮರಾಯ ಅದ್ರತ್ತ ಬರಾದು ಹೋಗೋದು ಮಾಡ್ ತೊಡಗಿದ.
ಎಲ್ಲರೂ ಈ ಮುದುಕಿ ಇನ್ನೇನು ಸಾಯ್ತದೆ ಅನ್ನೋರು. ಅಜ್ಜಿ ಮಲಿಕೊಂಡು ಕಣ್ಣು ಪಿಳುಕು ಪಿಳುಕು ಬಿಡ್ತಾ ಇತ್ತು. 120-130 ವರ್ಷ ಬದುಕಿದಂತಾ ಮುದುಕಿಯದು. ಒಳಗುಂದಿ ಆಂಧ್ರಪ್ರದೇಶ ಅದ್ರ ತೌರಮನೆ. ಆ ಕಡೆಯಿಂದ ತೆಕ್ಕಲ್ಕೋಟೆ, ಶಿರಗುಪ್ಪ ಎಲ್ಲಾ ಕಡೆಯಿಂದ ಕೋಟೆಯಳ್ಳಿ ಎಲ್ಲಾ ಕಡೆಯಿಂದ ನೂರಾರು ಜನ ಬಂದ್ರು ಈಗ್ ಪ್ರಾಣ ಬಿಡ್ತತೆ, ಆಗ್ ಪ್ರಾಣ ಬಿಡ್ತತೆ ಅಂತಾ. ಆ ಮುದುಕಿ ಸುಮಾರು ನಾಲ್ಕೈದು ದಿನಗಳ ಕಾಲ ಆದ್ರು ಪ್ರಾಣ ಬಿಡ್ಲಿಲ್ಲ. ಪ್ರಾಣ ಬಿಡ್ದೆ ಇದ್ದಾಗ ನಮ್ಮಪ್ಪಗ್ ಸಿಟ್ಟ್ ಬಂತು. ಸಿಟ್ಟಿನ ಪ್ರತಿರೂಪ ನಮ್ಮಪ್ಪ. ಸಿಟ್ಟು ಬಂದ್ರೆ ನಮ್ಮಪ್ಪನ ಹಾಗೇ ಬರ್ಬೇಕು.
ಆ ನಮ್ಮಪ್ಪ ಬಂದವ್ನೆ ಆ ಮುದಕಿಯತ್ರ ಬೇಗ್ನೆ ಪ್ರಾಣ ಬಿಡ್ತೀಯಾ ಅಥ್ವ ಕುತ್ಗೆ ಹಿಸ್ಗಿ ಬಿಡ್ಲೋ ಅಂತ ಒಂದು ಒಂದು ವಣರ್ಿಸ್ತಾನೆ ನಮ್ಮಪ್ಪ. ಸಾಯ್ತೀಯ ನಿಮ್ಮಮ್ಮನ ಕೆಲ್ಸ ಬದಿಗ್ಬಿಟ್ಟು ಇಲ್ಲಿ ನಿನಗಾಗಿ ಕಾಯ್ಕೊಂತಾ ಕುತ್ಕೋಬೇಕಾ ನಿನಗ್ ಮಣ್ಣು ಕೊಡಾಕೆ ಅಂತ ಗದರಿಸ್ದ. ಅದು ಸುಮ್ನೆ ಮುಗುಳ್ನಕ್ತಾ ನೋಡ್ತಿತ್ತು. ಆ ಸಾವಿನ ಸಂದರ್ಭದಲ್ಲಿ ಆ ನಕ್ಕಂತಾ ಆ ಮುಗುಳ್ನಗೆ ಎದುರು ಯಾವ ಕುಮಾರವ್ಯಾಸ ಭಾರತ ನಿಲ್ಲೋದಿಲ್ಲಾ ಅಂತಾ ಒಂದು ಅದ್ಭುತವಾದ ಮುಗುಳ್ನಗೆ ನಮ್ಮ ಅಜ್ಜಿಯ ತುಟಿಗಳ ನಡುವೆ. ಮುಗುಳ್ನಕ್ಕಾಗ ನನಿಗೆ ಸಂತೋಷ ಮತ್ತು ಭಯ.
ಭಯ ಅಂದ್ರೆ ನಾನ್ ಸ್ಕೂಲಿಗೆ ಹೋಗೋವಾಗ ಎರಡಾಣೆ ಕೊಡ್ತಕ್ಕಂತಾ ಒಂದು ಮುದುಕಿ ಸತ್ತೋಗುತ್ತಲ್ಲಾ ಅಂತ. ಹಾಗೆ ಇನ್ನೊಂದು ಕುತೂಹಲ ಅಂತಂದ್ರೆ ಹೇಗೆ ಸಾಯ್ತದೆ ಅನ್ನೋದು ನೋಡ್ಬೇಕು ಅಂತ. ಹೇಗೆ ಪ್ರಾಣಪಕ್ಷಿ ಹೋಗ್ತದೆ, ಅದ್ ಯಾವ್ ಕಡೆಯಿಂದ ಹೋಗುತ್ತೆ, ಯಾವ ರೂಪದಲ್ಲಿ ಹೋಗ್ತತೆ ಅಂತಕ್ಕಂತಾ ಕುತೂಹಲ. ನಾನೇನ್ ಮಾಡ್ದೆ ಸುಮ್ನೆ ನೋಡ್ತಾ ಇದ್ದೀನಿ. ಆ ಮುದುಕಿ ಪ್ರಾಣ ಬಿಡೋಕ್ಕಿಂತ ಮೊದ್ಲು ನೋಡು ಈ ತುಂಬ್ರುಗುದ್ದಿ ಅಂತ ಒಂದು ಊರು ಇದೆ. ಆ ತುಂಬ್ರಗುದ್ದಿಯತ್ರ ಇಂಥಾ ವಕ್ರಾಣಿ ಇದೆ. ನೀರಿದ್ದ ಸ್ಥಾವರ. ಆ ನೀರನ್ನ ತಂದು ಕುಡ್ಸಿದ್ರೆ ಮಾತ್ರ ನಾನ್ ಪ್ರಾಣ ಬಿಡ್ತೀನಿ ಅನ್ನುವ ಮಾತನ್ ಹೇಳ್ತು. ಅಂದ್ರೇ ಸುಮಾರು 105-110 ವರ್ಷಗಳ ಹಿಂದೆ ಬರಗಾಲ ಬಂದಾಗ ಒಳಗುಂದಿ ಅಂತಾ ಆಂಧ್ರ ಪ್ರದೇಶದಿಂದ ತನ್ನ ಗಂಡನೊಂದಿಗೆ ತನ್ನ ಹದಿನಾರನೇ ವಯಸ್ಸಿನಲ್ಲಿ ಹನಿಮೂನಿಗೆ ಬಂದದ್ದಂತೆ. ಅಲ್ಲಿಗೆ ತುಂಬ್ರುಗುದ್ದಿಗೆ. ಅಂದ್ರೆ ಬದುಕ್ಲಿಕ್ಕೆ, ಬರಗಾಲದಲ್ಲಿ ಗಂಡನ್ ಜೊತೆಗೆ ದುಡೀಲಿಕ್ಕೆ ಬಂದಾಗ ಆ ಭಾಗದಲ್ಲಿ ಇರ್ತಕ್ಕಂತಾ ನೀರನ್ನ ಕುಡೀತಾ ಇತ್ತಂತೆ ಅದು.
ಆ ನೀರ್ ಬೇಕು ಅಂತ ಬಯಸ್ತತೆ. ಆದ್ರೆ ಇವತ್ತಿನ ಸಂದರ್ಭದಲ್ಲಿ ನಾವ್ ಯಾರಾದ್ರು ಏನಾದ್ರು ಸಾಯ್ ಸಾಯುವಾಗ ಏನ್ ಬೇಕು ಅಂತ ಕೇಳಿದ್ರೆ ಏನೇನೋ ಬಯಸ್ತಾರೆ. ಅಲ್ವಾ? ಈಗ ಭಗತ್ಸಿಂಗ್ ತನ್ನ 22ನೇ ವಯಸ್ಸಿನಲ್ಲಿ ಗಲ್ಲಿಗೇರಿಸುವಾಗ ಅಧಿಕಾರಿಗಳು ಬಂದ್ ಕೇಳಿದ್ರು ನಿನ್ ಕೊನೆಯ ಆಸೆ ಏನು? ಎಂಬ ಮಾತನ್ ಕೇಳಿದ್ರು, ಆವಾಗ ಅವ್ನು ಹೇಳ್ತಾನೆ ನನಿಗೆ ಕಾರ್ಲ್ ಮಾರ್ಕ್ಸ್ ಪುಸ್ತಕ ಬೇಕು ಅಂತ ಕೇಳ್ತಾನೆ. ಅರೇ ನೀನ್ ನಾಳೆ ಸಾಯ್ತ ಇದ್ದೀಯಾ ಆ ಪುಸ್ತಕ ತಗೊಂಡು ಏನ್ಮಾಡ್ತಿಯಾ ಅದನ್ ಓದಿ ಏನು ದೇಶ ಉದ್ಧಾರ ಮಾಡ್ತೀಯಾ ಅಂತ ಹೇಳ್ತಾನೆ. ಇಲ್ಲಾ ನಾನ್ ಅದನ್ನು ಓದ್ಬೇಕು, ಆ ಓದಿನ ಅನುಭವದೊಂದಿಗೆ ನಾನ್ ಸಾಯ್ಬೇಕು ಅಂತ ಹೇಳ್ತಾನೆ. ಆ ಪುಸ್ತಕ ತರಿಸ್ಕೊಂಡು ಸಾಯ್ತಾನೆ ಅವ್ನು ಭಗತ್ಸಿಂಗ್. ಹಾಗೆ ನಮ್ ಮುದುಕಿ ಆ ನೀರು ಕುಡ್ದು ಸಾಯ್ಬೇಕು ಅಂತದೆ. ನಮ್ಮಪ್ಪ ಗಾಳಪ್ಪನ್ ಕರ್ದ. ಲೇ ಓಡೋಗಿ ಅಲ್ಲಿ ಆ ತುಂಬ್ರುಗುದ್ಧಿ ಅನ್ನೋ ಆ ಊರು ಹುಡುಕಿ ಅಲ್ಲಿ ಇರ್ತಕ್ಕಂತಾ ನೀರ್ ತಗೊಂಡ್ಬ ಅಂದ.
ನಮ್ಮ ಗಾಳಪ್ಪ ಹೋದ. ಹೋಗ್ ನೋಡ್ತಾನೆ ಬೇಚಿರಾಗ್ ಗ್ರಾಮ ಅದು. ಸುಮಾರು 105 ವರ್ಷಗಳ ಹಿಂದೆ ಇತ್ತು ಹಿಂದೆ ಇತ್ತು ಅನ್ನೊದಕ್ಕೆ ಯಾವ ಆಧಾರಗಳು ಇಲ್ಲಿ ಇರೋದಿಲ್ಲ ಅಲ್ಲಿ, ಯಾವ ವಕ್ರಾಣಿ ಇರೋದಿಲ್ಲ ಅದು ಎಲ್ಲಾ ಬದಲಾಗಿರ್ತಕ್ಕಂತಾ ಒಂದು ಪ್ರಾಕೃತಿಕ ಸನ್ನಿವೇಶ. ಆಗ್ ಬಂದ್ ಹೇಳ್ತಾನೆ, ಅಯ್ಯೋ ಮಾವ ಅಲ್ಲಿ ಯಾವ್ ತುಂಬ್ರುಗುದ್ದಿ ಅಂತಕ್ಕಂತಾ ಊರಿಲ್ಲಾ, ಆ ಬಾವಿಯಿಲ್ಲಾ, ಏನಿಲ್ಲಾ ಅಲ್ಲಿ ಕಾಡಿಲ್ಲ, ಎಲ್ಲಾ ಬಟಾಬಯಲಾಗ್ಬಿಟ್ಟಿದೆ. ಅಯ್ಯೋ, ಅದಕ್ಯಾಕ್ ಚಿಂತೆ ಮಾಡ್ತೀ ಬಸವನ್ ಬಾವಿ ನೀರ್ ತಗಂಡ್ಬಾ ಅಂತ ಹೇಳ್ತಾನೆ ನಮ್ಮಪ್ಪ. ಆ ಬಸವನ್ ಬಾವಿ ನೀರ್ ತಂದಾಗ ಅದ್ರಲ್ಲಿ ಮಣ್ಣು ಮಸಿ ಹಾಕಿ ಇದು ವಕ್ರಾಣಿ ನೀರು ಅನ್ನೋ ಭ್ರಮೆ ಬರೋತರ ಆ ನೀರೆಲ್ಲಾ ಹಾಕಿ ಆ ಮುದುಕಿ ಬಾಯೊಳಗೆ ಹಾಕ್ತರೆ. ನಂಬ್ತಿರೋ ಇಲ್ವೋ ಮುದುಕ್ರಿಗೆ 84 ವರ್ಷಗಳ ಕಾಲ ಬದುಕಿದ್ರೆ ಸಹಸ್ರ ಚಂದ್ರ ದರ್ಶನ ಮಾಡಿದೋರ್ಗೆ ಒಂದು ಅಪೂರ್ವವಾಗಿರ್ತಕ್ಕಂತಾ ಋಷಿ ಸದೃಶ ವ್ಯಕ್ತಿತ್ವ ಲಬಿಸ್ತದೆ ಎಂದು ನಮ್ಮ ವೇದಗಳೇ ಹೇಳ್ತವೆ. ಹಾಗೇ ಸುಮಾರು ಸಾವಿರಕ್ಕೂ ಮಿಕ್ಕು ವಸಂತಗಳನ್ನಾ ಚಂದ್ರದರ್ಶನ ಮಾಡಿರತಕ್ಕಂತಾ ನಮ್ಮ ಹಂಪಮ್ಮಜ್ಜಿಗೆ ಯಾವ ಅಲೌಕಿಕ ಶಕ್ತಿ ಇತ್ತು ಅನ್ನೋದೆ ಬಾಳ ವಿಸ್ಮಯ. ಯಾವ ಒಂದು ಊಹೆಗೂ ನಿಲುಕದಂತಾ ಒಂದು ಸೋಜಿಗ. ಬಾಯಿಗ್ ನೀರು ಹಾಕಿದ್ ತಕ್ಷಣ ಮುದುಕಿ ಆ ನೀರನ್ನ ಉಗುಳಿ ಇದು ತುಂಬ್ರುಗುದ್ಧಿ ನೀರಲ್ಲಾ ನೀವ್ ಬಸವನ್ ಬಾವಿ ನೀರ್ ತಂದು ನನಿಗೆ ತುಂಬ್ರುಗುದ್ಧಿ ನೀರು ಅಂತಾ ಹೇಳ್ತಾ ಇದ್ದೀರಾ, ನನಿಗ್ ಮೋಸ ಮಾಡ್ತಾ ಇದ್ದೀರಾ ದೇವ್ರು ನಿಮ್ಮನ್ನ ಕ್ಷಮಿಸೋದಿಲ್ಲಾ ಅಂತಕ್ಕಂತಾ ಮಾತನ್ನ ಹೇಳಿ ಗಪ್ಪಂತಾ ಪ್ರಾಣ ಬಿಡ್ತಂತೆ ಆ ಮುದುಕಿ.
ಇದು ನೋಡಿ ನಮ್ಮ ಮುದುಕ್ರು ನಮ್ಮ ಸಮಾಜದಲ್ಲಿ ಎಂತಾ ಅದ್ಭುತವಾದ ಶಕ್ತಿಯಾಗಿದ್ದರು. ತಮ್ಮ 50-60ನೇ ಸತ್ತೋರೆಲ್ಲಾ ದೆವ್ವಗಳಾಗ್ತಾರೆ. ನಾನು ಸಣ್ಣವನಿದ್ದಾಗ ನಮ್ ಓಣಿಯ ತುಂಬೆಲ್ಲಾ ದೆವ್ವಗಳು ಇರ್ತಾ ಇದ್ವು. ಅಮಾವಾಸೆ ಹುಣ್ಣಿಮೆ ಬಂತಂದ್ರೆ ಎಲ್ಲರ ಮೈಯಲ್ಲಿ ದೆವ್ವ್ಗಳು ಹೊಕ್ಕಾಳ್ತ ಇದ್ವು. ಜಾಗತೀಕರಣದಿಂದಾಗಿ ದೆವ್ವ್ಗಳು ಕೂಡ ನಾಪತ್ತೆಯಾಗಿದ್ದಾವೆ. ಅಮಾಸ್ಯೆ ಬಂತು ಅಂತ್ಹೇಳಿದ್ರೆ ಎಲ್ಲಾ ದೆವ್ವಗಳು ನಮ್ ಓಣಿಗೆ ಬರ್ತಾ ಇದ್ವು. ಅವ್ರ ಮೈಯಾಗೆ ಇವ್ರು ಇವ್ರು ಮೈಯಾಗೆ ಆ ದೆವ್ವಗಳೆಲ್ಲಾ ತೂರಿಕೊಂಡು ಒಂದು ಬಹುದೊಡ್ಡ ಒಂದು ಬಯಲಾಟವನ್ನು ಯಕ್ಷಗಾನವನ್ನು ಸೃಷ್ಟಿ ಮಾಡ್ತಾ ಇದ್ವು. ಆ ಮುದುಕಿ ದೆವ್ವಾ ಆಗ್ಲೇ ಇಲ್ಲಾ ಅನ್ನುವುದು ಬಾಳ ಆಶ್ಚರ್ಯದ ಸಂಗತಿ ಅಂತ ತಿಳ್ಕೊಂಡಿದ್ದೀನಿ.
ನನಿಗೆ ಒಂದು ಎರಡಾಣೆ ಕೊಡ್ತಕ್ಕಂತಾ ಅದ್ಭುತವಾದ ಜೀವ ಹೋಗ್ಬಿಡ್ತಲ್ಲಾ ಅಂತಾ ದುಃಖದಲ್ಲಿದ್ದಾಗ ಒಂದು ರಾತ್ರಿ ಕನಸಿನಲ್ಲಿ ನಾನು ಸ್ಕೂಲಿಗೆ ಹೊರಟಿದ್ದೀನಿ, ಅಂಗಳದಲ್ಲಿ ನಮ್ಮಜ್ಜಿ ನಿಂತ್ಕೊಂಡಿದೆ. ನಿಂತ್ಕೊಂಡಾಗ ಹೋಗಿ ಅಮ್ಮಾ, ಅಮ್ಮ ಅಂತಾ ಕೈ ಚಾಚಿದೆ. ಅಮ್ಮ ಅಂತೀವಿ ನಾವು ಅಜ್ಜಿಗೆ. ಕೈ ಚಾಚಿದಾಗ ಆ ಮುದುಕಿ ತನ್ನ ಎಲೆಅಡಿಕೆ ಚೀಲವನ್ನು ಬೆದ್ಕಾಡಿ ಅದ್ರಲ್ಲಿ ದುಡ್ಡಿಲ್ಲ ಅಂತಕ್ಕಂತಾ ಮಾತನ್ನ ಖಚಿತಪಡಿಸ್ಕೊಂಡು ನೋಡೂ ಕಣದಲ್ಲಿ ಈಗ ಕಣಗಳಿಲ್ಲ. ಅಲ್ಲಿ ಅಡಕಲಗಡಿಗೆ ಅಂತಿದೆ ಅದನ್ನ ನೋಡು ಅಂತು.
ನಾನು ಹೋದೆ ಬೆಳಿಗ್ಗೆ ಅಗ್ಸರ ಕೊಟ್ರಾ ಅಂತ ಒಬ್ಬನ್ನ ಕರ್ಕಂಡೋಗೀ ಅಡಕಲ ಗಡಿಗೆಗಳನ್ನ ಎತ್ತಿಡಿಸಿದೆ. ನೋಡಿದೆ ಬೆದಕಿದೆ ಒಂದು ದೊಡ್ಡ ಚೀಲ ಸಿಕ್ತು ಕಂಡ್ರೆ. ಆ ಚೀಲದಲ್ಲಿ ಆ ನೋಡ್ತೀನಿ ಬಂಗಾರದ ಚೂರುಗಳು, ಬೆಳ್ಳಿ ರೂಪಾಯಿಗಳು, ಒಂದು ಬಹುದೊಡ್ಡ ಸುಮಾರು ಪ್ರಾಮಿಸರಿ ನೋಟು ಗಾತ್ರದ ನೂರು ರೂಪಾಯಿ ನೋಟುಗಳು, ಹತ್ತು ರೂಪಾಯಿ ನೋಟು, ಐದು ರೂಪಾಯಿ, ಆ ತೂತು ಬಿಲ್ಲಿ ಅಂತ್ಹೇಳ್ರ ಒಂದು ಬಿಲ್ಲಿ ಅದು, ಅದೊಂದು ನಾಣ್ಯ ಇಷ್ಟೆಲ್ಲಾ ಇತ್ತು ಅದ್ರಲ್ಲಿ. ಎಷ್ಟು ಖುಷಿ ಆಯ್ತು ಅಂದ್ರೆ ಆವಾಗ ನಾವ್ ಸೈ ಅನಿಸ್ಕೋಬೇಕು, (ನಮ್ ಚಂದ್ರಶೇಖರಯ್ಯನವ್ರ ಎದುರಿಗೆ ನಾವ್ ಏನಾದ್ರು ಸಟಪಟ ಪದ್ಯಗಳನ್ ಬರ್ದು ಸಾರ್ ಇದ್ನ ಬರ್ದೀದ್ದೀನಿ ಅಂದಾಗ ಬಾಳ ಖುಷಿಯಿಂದ ಮೈದಡವ್ತಾ ಇದ್ರು. ಆ ಆಶೀರ್ವಾದದಿಂದ ನಾವ್ ಲೇಖಕರಾಗಿದ್ದು ಇವತ್ತು.) ನಮ್ ತಂದೆಯಿಂದ ಸೈ ಅನಿಸ್ಕೋಬೇಕು ಅಂತಾ ನಮ್ ತಂದೆ ಅಂದ್ರೆ ಅಮಿತಾಬ್ ಬಚ್ಚನ್ ಏನೂ ಅಲ್ಲಾ ನಮ್ಮ ತಂದೆ ಮುಂದೆ ಅಷ್ಟು ಆಕರ್ಷಕವಾಗಿದ್ದಂತಾ ವ್ಯಕ್ತಿ ಅವ್ನು. ಎಷ್ಟು ಅದ್ಭುತವಾಗಿದ್ದ ಅಂತ್ಹೇಳಿದ್ರೆ ಅವ್ನು ನೋಡ್ಬಿಟ್ರೆ ಏ ಯಾವ್ ಸಿನಿಮಾದ ಹೀರೋ ಅನ್ನೋತರ ಇದ್ದ ನಮ್ಮಪ್ಪ ಅವ್ನು ಬಾಳ ಸ್ಟೈಲಾಗಿ ಅರಿಷಡ್ವರ್ಗಗಲ ಚಕ್ರವರತಿ ಇರ್ತ ಇದ್ದ ಅವ್ನು. ಸಿಟ್ಟು ಬಂದ್ರೆ ಹಾಗೆ ಬರ್ಬೇಕು, ಹೊಟ್ಟೆಕಿಚ್ಚು ಪಟ್ರೆ ಹಾಗೇ ಪಡ್ಬೇಕು. ಅವ್ನು ಬೀಭತ್ಸ, ರೌದ್ರ ಏನ್ ಆ ರಸಗಳನ್ನೆಲ್ಲಾ ಹೇಗೆ ಪ್ರಕಟಿಸ್ತಾ ಇದ್ದ ಅಂತ್ಹೇಳಿದ್ರೆ ಅವು ಯಾವ ಯಕ್ಷಗಾನದ ರೌದ್ರಬೀಕರ ಪಾತ್ರಗಳು ಪ್ರಕಟಿಸಕ್ ಸಾಧ್ಯ ಇಲ್ಲ ಅಷ್ಟು ಅದ್ಭುತವಾಗಿ ವ್ಯಕ್ತಪಡಿಸ್ತಾ ಇದ್ದ ನಮ್ಮಪ್ಪ.
ನಮ್ಮಪ್ಪ ಸ್ಟೈಲಾಗಿ ಕೂತಿದ್ದ ಕೂತಾಗ ನಾನ್ ಹೋಗಿ ಅಪ್ಪಾ ಅಂತಾ ಆ ಚೀಲಕೊಟ್ಟೆ ಚೀಲ ತೆಗೆದ್ ನೋಡ್ತಾನೆ ಅದ್ರಲ್ಲಿ ಎಲ್ಲಾ ಬೆಳ್ಳಿನೂರ್ ರೂಪಾಯಿ ಅವಾಗ ನಮ್ಮಪ್ಪ ಐದು ಜನನ್ ಜೈಲಿಗೆ ಕಳಿಸ್ಲಿಕ್ಕಾಗಿ ಬೆಂಗ್ಳೂರಿಗೆ ಅಡ್ಡಾಡ್ತ ಇದ್ದ. ಬೆಂಗ್ಳೂರಿಗೆ ಅಡ್ಡಾಡಿ 5 ಜನ್ರಿಗೆ ಜೀವಾವಧಿ ಶಿಕ್ಷೆ ಕೊಡಿಸ್ಲಿಕ್ಕಾಗಿ ಸುಮಾರು 120 ಎಕ್ರೆ ಜಮೀನು, ಒಂದು 60 ತೊಲೆ ಬಂಗಾರ, ಎರಡು ಕೊಡ ಬೆಳ್ಳಿ ರೂಪಾಯಿಗಳನ್ನೆಲ್ಲಾ ನಾಶ ಮಾಡಿದಂತಾ ಒಬ್ಬ ಗ್ರೇಟ್ ಮನಮೋಹನ್ ಸಿಂಗ್ ನಮ್ಮಪ್ಪ. ಅಷ್ಟು ಅದ್ಭುತವಾಗಿದ್ದ. ನಮ್ಮಪ್ಪ ಬೆಂಗ್ಳೂರಿಗೆ ಹೋಗ್ರಾನೆಂದ್ರೆ ನಮ್ಮಪ್ಪ ನಮ್ಗೊಂದು ದೊಡ್ಡ ಹೀರೋ ಯಾವ್ನೋ ಒಬ್ಬ ಕುಂಬಾರ ಜನಾಂಗದಿಂದ ಬಂದಿರ್ತಕ್ಕಂತಾವ್ನು ಗಡಿಗೆ ಮಾಡ್ತಕ್ಕಂತವ್ನು ಬೆಂಗ್ಳೂರಿಗೆ ಹೋಗ್ತಾ ಇದ್ದಾನಲ್ಲ, ಏ ನಮ್ಮಪ್ಪ ಬೆಂಗ್ಳೂರಿಗೆ ಹೋಗ್ತಾನೆ ಕಣೋ ಅಂತ ನಾವು ನಮ್ಮ ಸಹಪಾಠಿಗಳೆದುರು ಬಾಳ ಜಂಭ ಕೊಚ್ಳೋಳ್ತಾ ಇದ್ವಿ ನಾವೆಲ್ಲಾ. ನಾನು ಅದನ್ ತೋರ್ಸಿದ್ ತಕ್ಷಣ ನಮ್ಮಪ್ಪ ನೋಡ್ತಾನೆ, ಬದ್ಧ ಭ್ರಗುಟಿಯಾದ ರನ್ನನ ಗದಾಯುದ್ಧದಲ್ಲಿ ಹೇಗೆ ದುಶ್ಯಾಸನನ್ ನೋಡಿದ್ ಕೂಡ್ಲೆ ಭೀಮ ಹೇಗೆ ಬದ್ಧ-ಭ್ರಗುಟಿಯಾಗ್ತಾನೋ ಕೋಪಾರುಣನೇತ್ರ ಆಗ್ತಾನೋ ಹಾಗೆ ಆಗಿ ದಢಾಂತ ಒಂದು ಏಟು ಕೊಟ್ಟ. ಸೂಳೆಮಗನೇ, ಎಲ್ಲಿತ್ತು ಎಲ್ಲಿ ತಂದಿ ಹೇಳು ಅಂತ ಹೇಳಿದ.
ಇಲ್ಲಪ್ಪಾ ಕನಸಿನಲ್ಲಿ ಅಜ್ಜಿ ಈತರ ಬಂದು…..ಸೂಳೆಮಗನೇ ನಮ್ಮೆಲ್ಲರ ಕನಸಿನಲ್ಲಿ ಬರ್ದೇ ಇರ್ತಕ್ಕಂತಾ ಮುದುಕಿ ನಿನ್ ಕನಸಿನಲ್ಲಿ ಬಂತಾ ಅಂತ ಮತ್ತೆ ಒಂದು ಏಟು ಕೊಟ್ಟ. ನಿಜ ಬೊಗಳು, ಎಲ್ಲಿ ದರೋಡೆ ಮಾಡ್ಕೊಂಡ್ಬಂದೆ ನೀನು ಅಂತಾ, ನಾನು ಕಕ್ಕಾಬಿಕ್ಕಿಯಾದೆ. ಹಗ್ಗಕೊಟ್ಟು ಕೈ ಕಟ್ಸಿಕೊಂಡ ಹಾಗೆ ಆಯ್ತಲ್ಲಾ ಅಂತಾ ಒಂಥರಾ ಗದಗದ ಗದಾ ಅಂತಾ ನಡುಗ್ತಾ ಇದ್ದೆ. ಹೊಡ್ಸಿಕೊಂಡ್ರೆ ನಮ್ಮಪ್ಪನತ್ತನೇ ಹೊಡ್ಸಕೊಳ್ಬೇಕು ಹಾಗಿದ್ದ ನಮ್ಮಪ್ಪ. ಒಂದ್ಸಾರಿ ಹೊಡ್ದಾ ಅಂತಂದ್ರೆ ಕಣ್ಣಲ್ಲಿ ಕಾರ್ತಿಕ ದೀಪಾವಳಿ ಧಗಧಗ ಧಗಾ ಅಂದ್ ಬಿಡೋದ್ ಅಷ್ಟೇ, ಆ ತರ ಹೊಡ್ಸಕ್ಕೊಂಡ್ ಮೇಲೆ ನಾನು ಗದಗದ ನಡುಗ್ ತುಂಬಾ ಬಡಕ್ಲಾಗಿದ್ದಂತಾ ಸುಮಾರು 200 ಗ್ರಾಂ ತೂಕ ಇದ್ದಂತಾ ಬಾಲಕ ಆಗ ನಾನು. ಹೊಡೆದ್ ತಕ್ಷಣ ಗದಗದ ಗದಾ ನಡುಗ್ತಾ ಇದ್ದೆ. ಆ ಮೇಲೆಲ್ಲಾ ಸಾಕ್ಷಿಗಳು ಎಲ್ಲಾ ಬಂದ್ರು ಒಳ್ಳೆ ಟ್ರೈಲ್ ಕೋರ್ಟ್ ಮಾರ್ಷಲ್ ಶುರುವಾಯ್ತು. ಇಲ್ಲಾ ಈ ತರ ಸಿಕ್ಕದ್ ಖರೇ ಈ ತರ ಹೇಳಿದ್ ಖರೇ ಅಂತೇ ಇವ್ನು ಎಲ್ಲಿ ದರೋಡೆ ಮಾಡಿಲ್ಲಾ ಅಂತಕ್ಕಂತಾ ಮನವರಿಕೆ ಮಾಡಿದ್ ತಕ್ಷಣ ನಮ್ಮಪ್ಪ ನಿಧಾನವಾಗಿ ತನ್ನ ಕೋಪವನ್ನಾ ಕಡಿಮೆ ಮಾಡ್ಕೊಂಡ. ಬೆಂಗ್ಳೂರಿಗೆ ಹೋಗಿ ನನಿಗೊಂದು ಚೆಂಡು, ಆ ಮೇಲೆ ಒಂದು ಅಂಗಿ, ನಿಕ್ಕರ್ ಎಲ್ಲಾ ತಂದ್ಕೊಟ್ಟ.
ಈ ಘಟನೆಗಳಿವೆಯಲ್ಲಾ ಈ ಇಂಥಾ ಘಟನೆಗಳಿಂದಾ ನಾವ್ ನಿಜವಾದ ಲೇಖಕರಾಗೋಕ್ ಸಾಧ್ಯ. ಯಾಕಂದ್ರೆ ಆಲಿಸ್ತಕ್ಕಂತಾ ಪರಂಪರೆ ಮೇಲೆ ಓಶೋ ಒಂದ್ ಮಾತು ಹೇಳ್ತಾನೆ, ಬುದ್ಧನತ್ರ ಒಬ್ಬನ್ ಬರ್ತಾನೆ, ಕೇಳೋದಿಕ್ಕೂ ಮತ್ತು ಆಲಿಸೋದಿಕ್ಕೂ ಇರ್ತಕ್ಕಂತಾ ವ್ಯತ್ಯಾಸ ಏನು ಅಂತಾ ಕೇಳ್ತಾನೆ. ನೀನ್ ನನ್ಹತ್ರಾ ಎರಡು ವರ್ಷ ಇರು ಅವಾಗ ನಿನಿಗೆ ಅರ್ಥ ಆಗುತ್ತೆ ಅಂತಾ ಆ ವ್ಯಕ್ತಿಯನ್ನಾ ತನ್ನ ಬಳಿ ಇಟ್ಕೋಳ್ತಾನೆ ಬುದ್ಧ. ಹಾಗೇ ಈ ಮುದುಕ್ರಿಲ್ದೆ ಇರ್ತಕ್ಕಂತಾ ಪ್ರಪಂಚ ಇದೆಯಲ್ಲಾ ಅತ್ಯಂತ ಕಷ್ಟ. ಐಶ್ವರ್ಯ ರೈ ನಮ್ಮಜ್ಜಿ ತರ ಮುದುಕಿ ಆಗೋಕ್ ಸಾಧ್ಯನೇ ಇಲ್ಲಾ. ಮುದುಕಿ ಆಗೋದ್ ಅಂತ್ಹೇಳಿದ್ರೆ ಅದೊಂದು ಅದ್ಭುತವಾದ ಒಂದು ಜೈವಿಕ ಪ್ರಕ್ರಿಯೆ. ಅಂಥ ಜನರ ನಡುವೆ ಇದ್ದದ್ರಿಂದ ನಾವೆಲ್ಲಾ ಬರೆಯೋಕೆ ಸಾಧ್ಯ ಆಯ್ತು.
ಎಲ್ಲಾ ಓದಿಗಿಂತ ಮುಖ್ಯವಾಗಿ ಇಷ್ಟೆಲ್ಲಾ ಬರೇ ಒಂದು ಅನುಭವ ಸಂಪತ್ತು ನೀಡಿದಂತಾ ಮುದುಕರಿಗೆ ನಾವ್ ಬಾಳ ಚಿರಋಣಿ ಅಂತಾ ಮುದುಕರನ್ನು ಗೌರವಿಸ್ತಕ್ಕಂತಾ ಸಮಾಜ ಬಹಳ ಚೆನ್ನಾಗಿರ್ತದೆ.

‍ಲೇಖಕರು avadhi

November 19, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

೧ ಪ್ರತಿಕ್ರಿಯೆ

  1. ಸೂರಿ

    ಅದಕ್ಕೇ ಕುಂ ವೀ ಅನ್ನದು. ಇನ್ನೂ ರಾಯಲಸೀಮಾದ ರೆಡ್ಡಿಗಳು ಕನಸಿನಲ್ಲಿ ಬಂದು ಹೆದರಿಸುತ್ತಿದ್ದಾರೆ. (ಕರ್ನಾಟಕದ ಜನಕ್ಕೇ ಹೆದರಿಕೆ ಹುಟ್ಟಿಸುತ್ತಿದ್ದಾರೆ ಅಂದಮೇಲೆ, ನನ್ನಂತಹ ಪಾಮರನ ಕಥೆ ಏನು?) ತಮ್ಮ ಕಥೆ ಬರೀತಾನೆ ನಮ್ಮ ಕಥೆಯನ್ನೂ ಹೇಳಿ ಬಿಡ್ತಾರೆ. ಅಂದ ಹಾಗೆ, ಈ ಮುದುಕಿಯರೆಲ್ಲ ಎತ್ಲಗೆ ಹೋದರೂ ಅಂತ. ಕಥೆಗಳು ಎತ್ಲಗೆ ಹೊದವೂ ಅಂತ. ಮುದುಕಿಯರಂತೂ ಟೀವೀ ನೋಡ್ತಾನೋ ಅಥವಾ ಟೀವೀ ಒಳಗೋ ಸೇರ್ಕಂಡಿರಾ ಹಂಗೆ ಕಾಣ್ತವೆ. ಆದರೆ ಕಥೆಗಳು? ಕಥೆಗಳನ್ನು ಹೇಳುವ, ಕೇಳುವ ಪರಂಪರೆ? ಮೋಹನ್, ಕಥೆಗಳನ್ನು ವಾಚಿಸುವ ಒಂದು ಪರಂಪರೆ ಶುರು ಮಾಡಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: