'ಕುಚೇಲನ್'-‘ಕಥಾ ಪರೆಯಂಬೋಲ್’

ರಜನೀಕಾಂತ್ ಅಭಿನಯದ ‘ಕುಚೇಲನ್’ ತೆರೆ ಕಂಡಿದೆ. ಸುದ್ದಿಯೂ ಮಾಡುತ್ತಿದೆ. ಇದು ಮಲಯಾಳಂ ನ ‘ಕಥಾ ಪರೆಯಂಬೋಲ್’ ತಮಿಳು ರೂಪ. ಮೂಲದ ಸಿನೆಮಾದ ಬಗ್ಗೆ ಕಳ್ಳ-ಕುಳ್ಳ ಬ್ಲಾಗ್ನಲ್ಲಿ ಬಂದ ‘ಬಾರ್ಬರ್ ಕುಚೇಲ’ ಲೇಖನ ನೀವು ಓದಲಿ ಎಂದು ಇಲ್ಲಿ-

ಅದು ಆಖ್ಯಾನ, ಇದು ವ್ಯಾಖ್ಯಾನ

ಬಂದು ನಿಂತಿದ್ದಾನೆ ಕುಚೇಲ. ಎದುರಿಗೆ ಶ್ರೀಕೃಷ್ಣಪರಮಾತ್ಮನ ದೊಡ್ಡ ಅರಮನೆ. ಕಾವಲಿಗೆ ನೂರಾರು ಕಾಲಾಳುಗಳು. ಕಾಲಾಳುಗಳಿಗೂ ಹೊಳೆಹೊಳೆವ ಬಟ್ಟೆ. ಆದರೆ, ಕುಚೇಲ ತೊಟ್ಟ ತೊಡುಗೆ ಹರಿದಿದೆ, ಮಣ್ಣು ಮೆತ್ತಿದೆ. ಹಾಗಾಗಿ ಅವನ ಹರಕು ಬಟ್ಟೆ ಕೊಳೆಯಾದ ಕಾಲನ್ನೂ, ಕಾಲು ಹರಿದ ಬಟ್ಟೆಯನ್ನೂ ಮರೆಮಾಚಲು ನಾಮುಂದು ತಾಮುಂದು ಎಂದಿದೆ. ಆದರೆ, ಅವನ ಕೊಳೆಕಾಲೂ, ಹರಿದ ಶಾಲೂ ಸಂಕೋಚದಿಂದ ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವುದು ಹರಿದ ವಸ್ತ್ರಗಳಲ್ಲಿ ಕಟ್ಟಿ ತಂದ ಅವಲಕ್ಕಿಯನ್ನು.

ರಾಜಭಟ ಅವನನ್ನು ನೋಡಿದ, ನೋಡಿ ಕೇಳಿದ: ಯಾರೋ ನೀನು, ಏನು ಬೇಕು ನಿನಗೆ?

ಶ್ರೀಮಂತಿಕೆಯನ್ನು ಕಾಣುವುದೋ, ತನ್ನ ಬಡತನವನ್ನು ಮುಚ್ಚಿಟ್ಟುಕೊಳ್ಳುವುದೋ ಎಂದು ತಿಳಿಯದೇ ಗಾಬರಿಯಾಗಿರುವ ಕುಚೇಲ ರಾಜಭಟನ ಮಾತಿಗೆ ಬೆಚ್ಚಿ ತಡವರಿಸುತ್ತಾನೆ. ಕೃಷ್ಣನನ್ನು ನೋಡಬೇಕಿತ್ತು.

ದಿನವೂ ತನ್ನ ಪಕ್ಕವೇ ಕೃಷ್ಣ ಹಾದು ಹೋಗುತ್ತಾನೆ ಎಂಬ ಕಾರಣಕ್ಕೆ ಕೃಷ್ಣನ ಮೇಲಿನ ನಿರಾಸಕ್ತಿಯೋ, ನನ್ನ ಭಾಗ್ಯ ನಿನಗಿಲ್ಲ ಎಂಬ ದರ್ಪವೋ? ರಾಜಭಟ ಕೇಳುತ್ತಾನೆ: ಓಹೋ, ನಿನಗೆ ಕೃಷ್ಣ ಬೇಕೋ? (ಅವನ ವಸ್ತ್ರ ವಿನ್ಯಾಸವನ್ನು ಅಪಾದಮಸ್ತಕದಿಂದ ಗಮನಿಸಿ) ನಿನಗೆ ಕೃಷ್ಣ ನೆಂಟನೋ, ಇಷ್ಟನೋ? (ಹಾಗೆನ್ನುವಾಗ ಅವನ ತುಟಿಯಲ್ಲಿ ಮೀರಿ ಬರುವ ನಗುವಿದೆ).

ಸಂಕೋಚ ಇನ್ನಷ್ಟು ಹೆಚ್ಚಿ ಕುಚೇಲ ತಪ್ಪೆಪ್ಪಿಕೊಳ್ಳುವಂತೆ ಹೇಳುತ್ತಾನೆ: ನನಗೆ ಕೃಷ್ಣ ಬಾಲ್ಯ ಸ್ನೇಹಿತ.

ತುಟಿ ಮೀರಿದ ರಾಜಭಟನ ನಗು ಇದೀಗ ಹೊರ ಹೊರಟು ಅರಮನೆಯ ಕಂಬ ಕಂಬಗಳಲ್ಲಿ ಅಣುರಣಿಸುತ್ತದೆ. ಆತ ತನ್ನ ನಗುವನ್ನು ದ್ವಿಗುಣಗೊಳಿಸುವವನಂತೆ ದೂರದ ಇನ್ನಷ್ಟು ಭಟರಿಗೆ ಇಲ್ಲಿಂದಲೇ ಕೂಗಿ ಹೇಳುತ್ತಾನೆ. ಕೇಳಿರೋ ಇವನು ಅವನ ಗೆಳೆಯನಂತೆ! ನಗು ಹತ್ತಾಗುತ್ತದೆ. ಹಲವಾಗುತ್ತದೆ. ಮತ್ತೆ ಕುಚೇಲನ ಕಡೆ ತಿರುಗಿ ಹೇಳುತ್ತಾನೆ: ಏನು, ನಮ್ಮ ಕೃಷ್ಣನ ಜತೆ ಕಾರಾಗೃಹದಲ್ಲಿ ಒಟ್ಟಿಗೆ ಇದ್ದೆಯೇನೋ, ಅಲ್ಲವೇ?

ಕುಚೇಲ ಈಗ ಬಾಯಿ ಬಿಡುತ್ತಾನೆ: ಇಲ್ಲ, ಇಲ್ಲ, ಸಾಂದೀಪಿನಿ ಮುನಿಗಳ ಆಶ್ರಮದಲ್ಲಿ ಒಟ್ಟಿಗೇ ವಿದ್ಯೆ ಕಲಿತವರು.

ಹೀಗೆ ಕುಚೇಲ ನಂಬಿಸುವುದೂ, ಭಟರು ನಂಬದಿರುವುದೂ ನಡೆದು ಕೊನೆಗೆ ಕೃಷ್ಣನಿಗೆ ವರ್ತಮಾನ ಹೋಗುತ್ತದೆ. ಕೃಷ್ಣ ಗೆಳೆಯನನ್ನು ಬರಮಾಡಿಕೊಳ್ಳುತ್ತಾನೆ. ಚಿನ್ನಖಚಿತ ಸಿಂಹಾಸನದಲ್ಲಿ ಕುಳ್ಳಿರಿಸುತ್ತಾನೆ. ಕಾಲು ತೊಳೆಯುತ್ತಾನೆ. ಅದನ್ನೇ ತೀರ್ಥ ಮಾಡಿಕೊಂಡು ಕುಡಿಯುತ್ತಾನೆ. ಗಾಳಿ ಬೀಸುತ್ತಾನೆ. ಆಶ್ರಮದ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾನೆ. ನಗುತ್ತಾನೆ. ಕಣ್ಣೀರ್ಗರೆಯುತ್ತಾನೆ. ರುಕ್ಮಿಣಿ-ಸತ್ಯಭಾಮೆಯರನ್ನು ಕರೆದು ಕತೆ ಹೇಳುತ್ತಾನೆ. ಮತ್ತೆ ನಗು. ಕೊನೆಗೆ ಅವನ ಕೈಯ್ಯ ಅವಲಕ್ಕಿಯ ಕಡೆ ಗಮನ ಹೋಗುತ್ತದೆ. ತಾನು ತಿನ್ನುತ್ತೇನೆ, ತನಗೆ ಮೊದಲು ಬೇಕು ಎನ್ನುತ್ತಾ ಗಂಡ-ಹೆಂಡಿರ ನಡುವೆ ಕಿತ್ತಾಟವಾಗುತ್ತದೆ. ಭಕ್ತನು ತಂದ ಹಿಡಿ ಅವಲಕ್ಕಿ ಭಕ್ತ ಪೋಷಕನ ಬಾಯಲ್ಲಿ ಬೆಳೆಯುತ್ತದೆ. ಅಕ್ಷಯವಾಗುತ್ತದೆ. ಮುಗಿಯುವುದೇ ಇಲ್ಲ -ಅವರ ಸ್ನೇಹದಂತೇ!

ಅದು ಕೃಷ್ಣ ಕುಚೇಲರ ಕತೆ.

————

ಇಲ್ಲಿ ಬಾರ್ಬರ್ ಬಾಲಾ ಕೂಡಾ ಮಾಡುವುದೋ ಬೇಡವೋ ಎಂಬ ಭಯ, ಆತಂಕ, ಸಂಕೋಚದಲ್ಲಿ ತನ್ನೂರಿಗೆ ಬಂದಿರುವ ಖ್ಯಾತ ನಟ ಅಶೋಕ್ ರಾಜ್‌ನ ಗೆಸ್ಟ್ ಹೌಸ್‌ಗೆ ಫೋನ್ ಮಾಡುತ್ತಾನೆ. ಅತ್ತ ಫೋನ್ ಎತ್ತಿಕೊಳ್ಳುತ್ತಾನೆ ಅಶೋಕ್ ರಾಜ್‌ನ ಒಬ್ಬ ಅಸಿಸ್ಟಂಟ್. ‘ಯಾರು’ ಎಂದು ಕೇಳುತ್ತಾನೆ ಆತ. ‘ನನ್ನ ಹೆಸರು ಬಾಲ. ಬಾರ್ಬರ್ ಬಾಲ’ ಎನ್ನುತ್ತಾನೆ ಈತ. ‘ಹೇಳು ಏನಾಗಬೇಕಿತ್ತು’ ಅನ್ನುತ್ತಾನೆ ಆತ ಅಸಮಾಧಾನದಿಂದ. ‘ಅಶೋಕ್ ರಾಜ್ ಜತೆ ಮಾತಾಡಬೇಕಿತ್ತು’ ಎನ್ನುತ್ತಾನೆ ಈತ. ‘ಓಹೋ ಯಾಕೆ, ಕೆಲಸ ಇಲ್ಲವಾ?’ ಎಂದು ದಬಾಯಿಸುತ್ತಾನೆ ಆತ. ‘ಇಲ್ಲ, ನಾನು, ಅಶೋಕ್ ರಾಜ್ ಇಬ್ಬರೂ ಬಾಲ್ಯ ಸ್ನೇಹಿತರು’ ಎನ್ನುತ್ತಾನೆ ಈತ. ‘ಓಹೋ, ಬಾಲ್ಯಸ್ನೇಹಿತರಂತೆ. ತಾವು ಅಶೋಕ್ ರಾಜ್ ಅವರ ಅಪ್ಪ ಅಂತಲೂ ಹೇಳಿಕೊಂಡು ಇಲ್ಲಿ ಸುಮಾರು ಜನ ಫೋನ್ ಮಾಡುತ್ತಾರೆ. ಇಡು ಇಡು. ಫ್ರೆಂಡ್ ಅಂತೆ’ ಎಂದು ವ್ಯಂಗ್ಯ ಮಾಡಿ ಫೋನ್ ಕುಕ್ಕುತ್ತಾನೆ ಆತ.

————-

ಇತ್ತೀಚೆಗೆ ಬಿಡುಗಡೆಯಾದ ಮಲೆಯಾಳಂನ ‘ಕಥಾ ಪರೆಯಂಬೋಲ್’ ಎಂಬ ಸಿನಿಮಾದಲ್ಲಿ ಬರುವ ನಟ ಅಶೋಕ್ ರಾಜ್ ಮತ್ತು ಬಾರ್ಬರ್ ಬಾಲಾರ ಸ್ನೇಹದ ಕತೆ, ಕೃಷ್ಣ-ಕುಚೇಲರ ಸ್ನೇಹದ ಕತೆಯಂತೇ. ಒಂದು ಪುರಾಣವನ್ನು ಆಧುನಿಕ ಮರು ವ್ಯಾಖ್ಯಾನದೊಂದಿಗೆ ನಟ, ಕತೆಗಾರ ಶ್ರೀನಿವಾಸನ್ ಹೇಳುತ್ತಾ ಹೋಗುತ್ತಾರೆ. ಆದರೆ, ಅಂಥ ಒಂದು ಸ್ನೇಹಕತೆಯನ್ನು ಸಿನಿಮಾಗಳು ಬಿಂಬಿಸುವ ಸಾಧಾರಣ ಸ್ನೇಹಕತೆಯಂತೆ ಹೇಳುತ್ತಾ ಹೋಗದೇ ಬೇರೆಯದೇ ಸ್ಥರದಲ್ಲಿ ಹೇಳಲು ಶ್ರೀನಿವಾಸನ್ ಪ್ರಯತ್ನಿಸಿದ್ದಾರೆ. ಆದರೆ, ಕತೆಗೆ ಬೇಕಾದ ಲಲಿತ ಗುಣ, ಹಾಸ್ಯ ಗುಣ, ರಂಜಕ ಗುಣಗಳನ್ನು ಕಡೆಗಣಿಸಿಲ್ಲ. ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಬೆರೆಸಿ, ಹೊಸ ಆಯಾಮದೊಂದಿಗೆ ಹೇಳುವ ಪ್ರಯತ್ನ ‘ಕಥಾ ಪರೆಯಂಬೋಲ್’ನಲ್ಲಿದೆ.

ಅದು ಹೇಗೆ? ಒಬ್ಬ ಬಡವ. ಕ್ಷೌರಕಾರ್ಯ ಅವನ ವೃತ್ತಿ. ಆದರೆ, ಸ್ಪರ್ಧೆ, ಸಾಲಸೋಲ, ಮಕ್ಕಳ ವಿದ್ಯಾಭ್ಯಾಸ ಮೊದಲಾದ ಅಡ್ಡಕತ್ತರಿಯಲ್ಲಿ ಸಿಲುಕಿರುವ ಕ್ಷೌರಿಕ ಮುದ್ದಿನ ಹೆಂಡತಿ, ಮೂವರು ಮಕ್ಕಳು, ಸಣ್ಣ ಗುಡಿಸಲು, ಹೆಂಡತಿ ಆಗಾಗ ಒಡೆದು ಹಾಕುವ ಪಾತ್ರೆಗಳೊಂದಿಗೆ ಜೀವನ ಸಾಗಿಸುತ್ತಿದ್ದಾನೆ. ಅವನ ಬದುಕು ಸಂಕೀರ್ಣ ಸ್ಥಿತಿಯಲ್ಲಿರುವಾಗ ಊರಿಗೆ ಶೂಟಿಂಗ್ ನಿಮಿತ್ತ ಅಶೋಕ್ ರಾಜ್ ಬಂದುಬಿಡುತ್ತಾನೆ. ‘ಅರೆ, ಅಶೋಕ್ ರಾಜ್ ನಮ್ಮ ಬಾಲಾನ ಬಾಲ್ಯ ಸ್ನೇಹಿತನಂತೆ’ ಎಂಬಿತ್ಯಾದಿ ಗಾಳಿ ಸುದ್ದಿಗಳಿಂದ ಊರಿಗೆ ರೋಮಾಂಚನವಾಗುತ್ತದೆ.

ಅಲ್ಲಿಂದ ಬಾಲಾನ ಲೆವೆಲ್ಲೇ ಬೇರೆಯಾಗಿಬಿಡುತ್ತದೆ. ಅವನ ಮಕ್ಕಳ ಶಾಲೆಯ ವ್ಯವಸ್ಥಾಪಕರು ಬಂದು, ‘ಅಶೋಕ್ ರಾಜ್‌ನನ್ನು ನಮ್ಮ ಶಾಲಾ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಕರೆಸು’ ಎಂದು ದುಂಬಾಲು ಬೀಳುತ್ತಾರೆ. ‘ನಾನೊಂದು ಸಿನಿಮಾ ಮಾಡುತ್ತೇನೆ, ಕಾಲ್‌ಶೀಟ್ ಕೊಡಿಸು’ ಎಂದು ಆ ಊರಿನ ಶ್ರೀಮಂತ ಸಾಲಿಗ ಹಿಂದೆ ಬೀಳುತ್ತಾನೆ. ನಾವು ಅಶೋಕ್ ರಾಜ್ ಅಭಿಮಾನಿಗಳು. ನಮ್ಮನ್ನೂ ಅವನಲ್ಲಿಗೆ ಕರೆದುಕೊಂಡು ಹೋಗಿ’ ಎಂದು ಹೆಂಡತಿ, ಮಕ್ಕಳು ಗೋಗರೆಯುತ್ತಾರೆ.

ಆದರೆ, ಬಾಲಾ ಯಾರಿಗೂ ಸ್ಪಂದಿಸಲಾರ. ತನ್ನ ಅಳಲು ಏನೆಂಬುದನ್ನು ಆತ ತ್ವತಃ ಹೆಂಡತಿ ಜತೆಗೂ ಹಂಚಿಕೊಳ್ಳಲಾರ. ಹಾಗಾದರೆ ಅವನಿಗೆ ಅಶೋಕ್ ರಾಜ್ ಗೆಳೆಯನಲ್ಲವೇ ಅಥವಾ ಗೆಳೆತನ ಅಷ್ಟೊಂದು ಗಾಢವಾಗಿಲ್ಲವೇ? ಗೆಳೆತನ ಯಾವತ್ತಾದರೂ ಕಡಿದುಹೋಗಿದೆಯೇ? ತನ್ನ ಸದ್ಯ ಬಡತನದ ಸಂಕೋಚವೇ? ಗೆಳೆತನವನ್ನು ಮರೆತಿರಬಹುದೆಂಬ ಅನುಮಾನವೇ? ಊರವರ ಒತ್ತಾಯ, ಒತ್ತಡದ ನಡುವೆಯೂ ಬಾಲಾ ಗಟ್ಟಿಯಾಗುತ್ತಾ ಹೋಗುತ್ತಾನೆ. ಕೊನೆಗೆ ಊರವರ ಪಾಲಿಗೆ ‘ಸುಳ್ಳ’ ಎಂಬ ಹಣೆಪಟ್ಟಿ ಹೊತ್ತ ಬಾಲಾ, ಅಶೋಕ್ ರಾಜ್‌ನನ್ನು ಭೇಟಿಯಾಗಲು ನಿರ್ಧರಿಸುತ್ತಾನೆ. ಅಂತೂ ಇಂತೂ ಬೇರೆ ಮೂಲಗಳಿಂದ ಆಡಳಿತ ವರ್ಗ ನಟನನ್ನು ಸಂಪರ್ಕಿಸಿ, ಶಾಲಾ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗುವಂತೆ ಒಪ್ಪಿಸುತ್ತದೆ.

‍ಲೇಖಕರು avadhi

August 11, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: