ಕುಟ್ಟ ಬ್ಯಾರಿಯ ಮೂಲಕ ಸಾರಾ ಅಬೂಬಕರ್

-ಪುರುಷೋತ್ತಮ ಬಿಳಿಮಲೆ

ಪುತ್ತೂರಿನಿಂದ ಬೆಳ್ಳಾರೆ ಅಥವಾ ಕಾಣಿಯೂರು ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ಮಾರ್ಗದಲ್ಲಿ ಪಂಜ ಹೆಸರಿನ ಪುಟ್ಟ ಪೇಟೆಯೊಂದು ಸಿಗುತ್ತದೆ. ಈ ಪೇಟೆಯಲ್ಲಿ ಇಳಿದು ಕಾಲ್ನಡಿಗೆಯಲ್ಲಿ ಎಂಟು ಕಿ.ಮೀ ನಡೆದರೆ ಬಿಳಿಮಲೆ ಎಂಬ ಹೆಸರಿನ ಹಳ್ಳಿ ದೊರೆಯುತ್ತದೆ. ಪಶ್ಚಿಮಘಟ್ಟದ ಭಾಗವಾದ ಬಂಟಮಲೆಯ ದಟ್ಟ ಹಸಿರಿನ ನಡುವೆ ವಾಸಿಸುವ ಬಿಳಿಮಲೆಯ ನಾಲ್ಕಾರು ಕುಟುಂಬಗಳಿಗೆ ಹೊರಲೋಕದ ಸುದ್ದಿ ಕೊಡುತ್ತಿದ್ದವನೆಂದರೆ ಒಬ್ಬ ಮುಸ್ಲಿಮ್ ವ್ಯಾಪಾರಿ ಅಥವಾ ಬ್ಯಾರಿ. ಆತನ ನಿಜ ಹೆಸರೇನೆಂದು ನನಗೆ ಇಂದಿಗೂ ತಿಳಿಯದು. ಬಹುಶಃ ಮೊಯಿದು ಎಂದೇನೋ ಇರಬೇಕು. ಆದರೆ ತಲೆಯಲ್ಲಿ ಒಂದೂ ಕೂದಲಿಲ್ಲದ ಆತನನ್ನು ನಾವೆಲ್ಲ ಕುಟ್ಟ ಬ್ಯಾರಿ ಎಂದು ಕರೆಯುತ್ತಿದ್ದೆವು. ವಾರಕ್ಕೆ ಮೂರು ಬಾರಿಯಾದರೂ ಆತ ದೂರದ ಪಂಜದಿಂದ ಬಿಳಿಮಲೆಗೆ ಕಾಲ್ನಡಿಗೆಯಲ್ಲಿ ಬರುತ್ತಿದ್ದ. ಹರುಕು ಮುರುಕು ಬ್ಯಾರಿ ಭಾಷೆಯಲ್ಲಿ ತುಳು ಸೇರಿಸಿ ತಂದೆಯವರೊಡನೆ ಮಾತಾಡುತ್ತಾ ಆತ ಮನೆಯೊಳಕ್ಕೆ ಬರುತ್ತಿದ್ದಂತೆ ನನ್ನ ಅಮ್ಮ ಆತನಿಗೆ ಕುಡಿಯಲು ನೀರು ಮತ್ತು ಬಾಯಿಗೆ ಹಾಕಿಕೊಳ್ಳಲು ಒಂದು ತುಂಡು ಬೆಲ್ಲ ಕೊಡುತ್ತಿದ್ದರು. “ಈ ಸುಟ್ಟ ಕುಟ್ಟ ಬ್ಯಾರಿ ಬಂದರೆ ಬೆಲ್ಲ ಖರ್ಚು” ಎಂದು ಅಮ್ಮ ಗೊಣಗುತ್ತಿದ್ದರೂ, ಬೆಲ್ಲ ಕೊಡದೆ ಆತನನ್ನು ಹಿಂದೆ ಕಳಿಸುತ್ತಿರಲಿಲ್ಲ.

ಕುಟ್ಟ ಬ್ಯಾರಿ ನೆಲದಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಅವನ ಹತ್ತಿರವೇ ಕುಳಿತುಕೊಳ್ಳುತ್ತಿದ್ದ ತಂದೆಯವರು ಕುಟ್ಟ ಬ್ಯಾರಿಯ ಕಿವಿಯಿಂದ ಸಾಧು ಬೀಡಿಯೊಂದನ್ನು ತೆಗೆದು ನನ್ನ ಕೈ ನೀಡಿ, ಅದಕ್ಕೆ ಬೆಂಕಿ ತಾಗಿಸಿ ಬರಲು ಆಜ್ಞಾಪಿಸುತ್ತಿದ್ದರು. ದಪ್ಪನೆಯ ಕುಳ್ಳಗಿನ ಬೀಡಿಯೊಂದು ಕೈಗೆ ಬರುತ್ತಿದ್ದಂತೆ ಛಂಗನೆ ಅಡಿಗೆ ಮನೆಗೆ ನೆಗೆಯುತ್ತಿದ್ದ ನಾನು, ಬೀಡಿಗೆ ಬೆಂಕಿಯೇರಿಸಿ, ಫಕ ಫಕನೆ ಒಂದೆರಡು ದಮ್ಮು ಎಳೆದು, ಬೀಡಿ ತುಂಡನ್ನು ತಂದೆಯ ಕೈಯಲ್ಲಿರಿಸಿ ಅವರಿಬ್ಬರ ಸಂಭಾಷಣೆಗೆ ಕಿವಿಗೊಡುತ್ತಿದ್ದೆ. ೭೦ರ ದಶಕದಲ್ಲಿ ನಡೆಯುತ್ತಿದ್ದ ಅವರ ಸಂಭಾಷಣೆಯಲ್ಲಿ ಅಡಿಕೆಧಾರಣೆ, ಪಂಜದಲ್ಲಿ ಹಾದು ಹೋಗುವ ಬಸ್ಸುಗಳು, ಊರಿನ ಜಾತ್ರೆ, ದೇಶದ ಭವಿಷ್ಯವೆಲ್ಲ ಸರಾಗವಾಗಿ ಹಾದು ಹೋಗುತ್ತಿದ್ದುವು. ನಾನು ರೋಮಾಂಚಿತನಾಗಿ ಕತೆ ಕೇಳುತ್ತಿದ್ದೆ. ಆಗಿನ ಕಾಲದಲ್ಲಿ ನಮಗಿದ್ದ ಏಕಮಾತ್ರ ರೇಡಿಯೋ ಎಂದರೆ ಕುಟ್ಟ ಬ್ಯಾರಿ. ಕೆ.ಎಸ್. ನರಸಿಂಹ ಸ್ವಾಮಿಯವರ ‘ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹನು’ ಕೇಳಿದಾಗಲೆಲ್ಲ ನನಗೆ ನೆನಪಾಗುವವನೆಂದರೆ ಕುಟ್ಟ ಬ್ಯಾರಿ.

news8

ಹೀಗೆ ನಾನು ಕಣ್ದೆರೆಯುತ್ತಿದ್ದಾಗ ನನಗೆ ಹೊರಲೋಕದ ಪರಿಚಯ ಮಾಡುತ್ತಿದ್ದವನೆಂದರೆ ಕುಟ್ಟ ಬ್ಯಾರಿ. ಅವನ ಜೊತೆಗೆ ಆಗೀಗ ತೆಳ್ಳಗೆ ಬಳುಕುವ ಮೈಮಾಟದ ‘ಸಂಕಬಳ’ ಎಂಬ ಹೆಸರಿನ ಇನ್ನೊಬ್ಬ ಬ್ಯಾರಿಯೂ ಬರುತ್ತಿದ್ದ. ಆನಂತರದ ಕಾಲದಲ್ಲಿ ಶಾಲೆಗೆ ಸೇರಿದಾಗ ಪಂಜದಲ್ಲಿ ಅಬ್ಬೂಬಕರೆ ಎಂಬ ಇನ್ನೊಬ್ಬ ಸ್ನೇಹಿತ ನನಗೆ ದೊರಕಿದ್ದ. ಚೋಟುದ್ದದ ನನ್ನನ್ನು ರಬಕ್ಕನೆ ಎತ್ತಿ ಎತ್ತಿ ಹೆಗಲ ಮೇಲೇರಿಸಿಕೊಂಡು ಶಾಲೆಗೆ ಮೂರು ಸುತ್ತು ಬರುತ್ತಿದ್ದ ಆತನ ಮಹಾ ಶಕ್ತಿಗೆ ನಾನು ಮಾರುಹೋಗಿದ್ದೆ. ಹೀಗೆ ಎಳವೆಯಲ್ಲಿ ದಕ್ಕಿದ ಮುಸ್ಲಿಂ ಸ್ನೇಹಿತರ ಸಂಪರ್ಕ ಹಾಗೆಯೇ ಮುಂದುವರೆದರೂ ಈ ಪಟ್ಟಿಗೆ ಯಾವ ಮುಸ್ಲಿಂ ಮಹಿಳೆಯರೂ ಸೇರಿರಲಿಲ್ಲ. ನಾನು ಓದಿದ ಶಾಲಾ ಕಾಲೇಜುಗಳಲ್ಲಿ ಮುಸ್ಲಿಂ ಹುಡುಗಿಯರು ಯಾರಾದರೂ ಇದ್ದದ್ದು ನನಗೆ ಗೊತ್ತಿಲ್ಲ.

ಆಗೀಗ ಇದರ ಬಗ್ಗೆ ನಾವು ಕೆಲವು ಗೆಳೆಯರಾದರೂ ಚರ್ಚಿಸುತ್ತಿದ್ದೆವು. ಪುತ್ತೂರಿನ ಐ.ಕೆ. ಬೊಳುವಾರು ಮುಸ್ಲಿಮರ ಕುರಿತಾದ ನಮ್ಮ ಅನೇಕ ಸಮಸ್ಯೆಗಳಿಗೆ ಉತ್ತರ ನೀಡುತ್ತಿದ್ದೆ. ಆತನ ಅಣ್ಣ ಬೊಳುವಾರು ಮಹಮ್ಮದ್ ಕುಂಞ್ಞ ಆಗಲೇ ದೊಡ್ಡ ಕತೆಗಾರನಾಗಿ ಪ್ರಖ್ಯಾತನಾದ್ದರಿಂದ ನಮ್ಮ ಸಣ್ಣ ಚರ್ಚೆಗೆ ಸುಲಭವಾಗಿ ದೊರೆಯುತ್ತಿರಲಿಲ್ಲ. ಅಥವಾ ಭಯದಿಂದ ನಾವೆಲ್ಲ ಅವರನ್ನು ಕರೆಯುತ್ತಿರಲಿಲ್ಲ. ಮಂಗಳೂರಿನಲ್ಲಿದ್ದ ಫಕೀರ್ ಮಹಮ್ಮದ್ ಕಟಪಾಡಿ ನಮಗೆಲ್ಲ ನಂಬುಗೆಯ ಸ್ನೇಹಿತ. ಅವರು ಆಗೀಗ ಸಿಕ್ಕಾಗ ನಮ್ಮ ಕುತೂಹಲ ತಣಿಸುತ್ತಿದ್ದರು. ಸುಮಾರು ಏಳನೇ ಶತಮಾನದಿಂದಲೂ ಅರಬರ ಸಂಪರ್ಕ ತುಳುನಾಡಿಗಿತ್ತು. ಬಾರ್ಕೂರು, ಮಂಗಳೂರು, ಉಳ್ಳಾಲ, ಮಂಜೇಶ್ವರ, ಕುಂಬಳೆ ಮತ್ತು ಕಾಸರಗೋಡುಗಳು ತುಳುನಾಡಿನ ಪ್ರಮುಖ ವ್ಯಾಪಾರೀ ಪಟ್ಟಣಗಳಾಗಿದ್ದು ಅಲ್ಲೆಲ್ಲಾ ಮುಸ್ಲಿಮರ ಪ್ರಭಾವ ಹೇರಳವಾಗಿತ್ತು. ಇವರ ಪ್ರಭಾವ ಎಷ್ಟು ತೀವ್ರವಾಗಿತ್ತೆಂದರೆ, ತುಳುವರು ಆಲಿ, ಬಬ್ಬರ್ಯರಂಥ ದೈವಗಳನ್ನು ಸೃಷ್ಟಿಸಿಕೊಂಡರು. ಬಪ್ಪ ಬ್ಯಾರಿ ಬಪ್ಪನಾಡಿನಲ್ಲಿ ದೇವಸ್ಥಾನ ಕಟ್ಟಿದ, ಹಾಗೆಯೇ ಆತನ ವ್ಯಕ್ತಿತ್ವ ಯಕ್ಷಗಾನಕ್ಕೂ ಪ್ರಿಯವಾಗಿ, ‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಜನಪ್ರಿಯ ಪ್ರಸಂಗವಾಗಿ ಬೆಳೆಯಿತು. ಮುಸಾನೆಬಿ, ಮಾಲಪ್ಪಾಟ್ಟು, ಅಮ್ಮಾಯಿಪಾಟ್ಟು ಮತ್ತಿತರ ಹಾಡುಗಳನ್ನು ನಾವು ತಪ್ಪು ತಪ್ಪಾಗಿಯಾದರೂ ಹಾಡುತ್ತಿದ್ದೆವು, ಕೇಳಿಸಿಕೊಳ್ಳುತ್ತಿದ್ದೆವು.

ಇಂಥ ಅಸ್ಪಷ್ಟ ಪರಿಸರದಲ್ಲಿ ಮುಸ್ಲಿಂ ಮಹಿಳೆಯೊಬ್ಬರ ಸ್ನೇಹ ನಮಗೆ ಅವಶ್ಯವಾಗಿತ್ತು. ತುಳುನಾಡಿನ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದ ಟಿಪ್ಪು ಸುಲ್ತಾನನು ಪ್ರೆಂಚರೊಡನೆ ಸಂಬಂಧ ಹೊಂದಿದ್ದ. ಆಧುನಿಕ ಕಾಲದ ಕೆಲವು ಮೌಲ್ಯಗಳ ಬಗ್ಗೆಯೂ ಆತನಿಗೆ ತಿಳುವಳಿಕೆಯಿತ್ತು. ಆದರೂ ಆತ ಮುಸ್ಲಿಂ ಮಹಿಳೆಯರಿಗಾಗಿ ಶಾಲೆಗಳನ್ನೇಕೆ ತೆರೆಯಲಿಲ್ಲ ಎಂಬ ನಮ್ಮ ಪ್ರಶ್ನೆ ಹಾಗೆಯೇ ಉಳಿದು ಹೋಯಿತು. ಆಗ ಮಂಗಳೂರಿನಲ್ಲಿ ನಮಗೆ ಪರಿಚಯವಾದವರು ಡಾ. ಸಬಿಹಾ ಮತ್ತು ಶ್ರೀಮತಿ ಸಾರಾ ಅಬೂಬಕರ್ ಅವರು. ಸಬಿಹಾ ಅವರ ತಂದೆ ಬಹಳ ದೊಡ್ಡ ಪ್ರಾಧ್ಯಾಪಕರಾದ್ದರಿಂದ ಅವರೊಡನೆ ಸ್ನೇಹ ಸುಲಭವಾಗಿರಲಿಲ್ಲ. ಹಾಗಿದ್ದರೂ ಇವರಿಬ್ಬರೂ ನಮ್ಮ ತಿಳುವಳಿಕೆಯ ಪರಿಧಿಗಳನ್ನು ಅಗಾಧವಾಗಿ ವಿಸ್ತರಿಸುತ್ತಿದ್ದರು.

ಆಗ ತಾನೇ ಲಂಕೇಶ್ ಪತ್ರಿಕೆಯಲ್ಲಿ ಸಾರಾ ಅವರ ‘ಚಂದ್ರಗಿರಿಯ ತೀರದಲ್ಲಿ’ ಧಾರವಾಹಿಯಾಗಿ ಪ್ರಕಟವಾಗುತ್ತಿತ್ತು. ಧಾರವಾಹಿ ಓದುವುದು ನನಗಿಷ್ಟವಾದ ಕೆಲಸವಲ್ಲವಾದ್ದರಿಂದ ಅದು ಪುಸ್ತಕರೂಪದಲ್ಲಿ ಬಂದ ಆನಂತರವೇ ನಾನು ಓದಿದ್ದೆ. ಮುಸ್ಲಿಂ ಮಹಿಳಾಲೋಕದ ಬಗ್ಗೆ ನಮಗೆಲ್ಲ ಮಾಹಿತಿ ನೀಡಿದ ಮೊದಲ ಕೃತಿಯೆಂದರೆ ‘ಚಂದ್ರಗಿರಿಯ ತೀರದಲ್ಲಿ’. ಮುಸ್ಲಿಂ ಸಮುದಾಯದದಲ್ಲಿ ಆಳವಾಗಿ ಬೇರು ಬಿಟ್ಟಿರುವ ಧಾರ್ಮಿಕ ಕಂದಾಚಾರವನ್ನು ಈ ಕಾದಂಬರಿ ಅದ್ಭುತವಾಗಿ ಅನಾವರಣ ಮಾಡಿದಾಗ ನಾವೆಲ್ಲ ಬೆಚ್ಚಿ ಬಿದ್ದಿದ್ದೆವು, ನಿದ್ದೆಗೆಟ್ಟಿದ್ದೆವು. ಸಹನಾ ಮತ್ತು ವಜ್ರಗಳು ಮುಂದೆ ಪ್ರಕಟವಾದಾಗ ನಮಗೆಲ್ಲಾ ಸಾರಾ ಅವರಲ್ಲಿ ಪುಟಿದೇಳುತ್ತಿರುವ ಬಂಡಾಯ ಪ್ರವೃತ್ತಿಯ ಬಗೆಗೆ ಒಂದು ಬಗೆಯ ತಿಳುವಳಿಕೆ ಮೂಡತೊಡಗಿತ್ತು. ಅವರ ಬಗ್ಗೆ ಅಗಾಧವಾದ ನಂಬಿಕೆ ಬರತೊಡಗಿತ್ತು.

ಈ ನಡುವೆ ಉಡುಪಿಯ ಡಾ. ಆರ್‍ಕೆ ಮಣಿಪಾಲ ಅವರ ನೇತೃತ್ವದಲ್ಲಿ ನಾವೆಲ್ಲ ಬಂಡಾಯ ಸಾಹಿತ್ಯ ಸಂಘಟನೆಗಾಗಿ ದಣಿವಿಲ್ಲದೆ ಕೆಲಸ ಮಾಡುತ್ತಿದ್ದೆವು. ಎಲ್ಲ ಬಗೆಯ ಶೋಷಣೆಗಳ ವಿರುದ್ಧ ಹೋರಾಡುವುದು ನಮ್ಮ ಗುರಿ. ಸ್ವತಃ ಬಂಡಾಯಗಾರ್ತಿಯಾಗಿರುವ ಶ್ರೀಮತಿ ಸಾರಾ ಅಬೂಬಕರ್ ಅವರನ್ನು ನಮ್ಮೊಡನೆ ಸೇರಿಸಿಕೊಳ್ಳಬೇಕೆಂದು ನಾವೆಲ್ಲ ಬಯಸುತ್ತಿದ್ದೆವು. ಆದರೆ ಇದು ಸುಲಭದ ಕೆಲಸವಾಗಿರಲಿಲ್ಲ.

ಸುಲಭದ ಕೆಲಸ ಆಗಿರಲಿಲ್ಲ ಏಕೆಂದರೆ ಆ ಒಟ್ಟು ಪ್ರಕ್ರಿಯೆಯೇ ಬಹಳ ಸಂಕೀರ್ಣವಾಗಿತ್ತು. ಬಂಡಾಯ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ ನಾವು ಆಗಲೇ ಹಲವರ ವಿರೋಧಕ್ಕೆ ಗುರಿಯಾಗಿದ್ದೆವು. ಮಾತ್ರವಲ್ಲ ಉಡುಪಿಯಲ್ಲಿ ಡಾ. ಪೋಲಂಕಿ ರಾಮಮೂರ್ತಿ ಅವರ ಭಾಷಣಕ್ಕೆ ಅಡ್ಡಿ ಮಾಡಿ ಮತಾಂಧ ಶಕ್ತಿಗಳು ತಮ್ಮ ಕ್ರೌರ್ಯವನ್ನು ಆಗಲೇ ಪ್ರದರ್ಶಿಸಿದ್ದವು. ಲಂಕೇಶ್ ಅವರಂಥವರು ಬಂಡಾಯ ಸಂಘಟನೆಯನ್ನು ಸಮಯಸಿಕ್ಕಾಗಲೆಲ್ಲ ಗೇಲಿ ಮಾಡುತ್ತಿದ್ದರು. ಜನರ ನಡುವೆ ಹೋಗಿ ಕೆಲಸ ಮಾಡಬಯಸುವ ನಮ್ಮ ಬಗ್ಗೆ ನಮ್ಮಲ್ಲಿಯೇ ಗುಮಾನಿ ಹುಟ್ಟಿಕೊಳ್ಳುತ್ತಿದ್ದ ಆ ಸಂದರ್ಭದಲ್ಲಿ ಸಾರಾ ಅವರನ್ನು ಸಂಘಟನೆಯತ್ತ ಎಳೆದು ತರುವುದು ನಮ್ಮ ಮುಂದೆಯೇ ಅನೇಕ ಪ್ರಶ್ನೆಗಳನ್ನು ತಂದೊಡ್ಡುತ್ತಿತ್ತು.

ಇದರ ಜೊತೆಗೆ ಇಸ್ಲಾಂ ಧರ್ಮದ ಮತಾಂಧ ಶಕ್ತಿಗಳು ಸಾರಾ ಅವರ ಬಗೆಗೆ ಇಲ್ಲ ಸಲ್ಲದ ಆರೋಪ ಹೊರಿಸುವ ಲೇಖನಗಳನ್ನು ಪ್ರಕಟಿಸಿ ಅವರ ತೇಜೋವಧೆಗೆ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದುವು. ಸಾರಾ ಅವರ ಚಲನವಲನಗಳನ್ನು ತೀವ್ರವಾಗಿ ಗಮನಿಸುತ್ತಿದ್ದ ಈ ಶಕ್ತಿಗಳನ್ನು ನಾವು ವಿರೋಧಿಸುವ ಸಂದರ್ಭದಲ್ಲಿ ಹಿಂದೂ ಮತಾಂಧ ಶಕ್ತಿUಳು ನಮಗೆ ಬೆಂಬಲ ಸೂಚಿಸುವ ಸಾಧ್ಯತೆ ಇತ್ತು. ಬಾಣಲೆಯಿಂದ ಉರಿಯುವ ಬೆಂಕಿಗೆ ಹಾರಲು ನಾವು ಸಿದ್ಧರಿರಲಿಲ್ಲ. ನಮ್ಮ ಒಂದು ಸಣ್ಣ ನಡೆಯಿಂದ ಕೋಮು ಗಲಭೆ ಉಂಟಾಗಬಹುದಾದ ಸಾಧ್ಯತೆಗಳ ಬಗ್ಗೆ ನಾವು ಅತೀವ ಎಚ್ಚರಿಕೆಯಿಂದ ಇದ್ದೆವು.

ಸಾರಾ ಬರೆಯುತ್ತಿದ್ದ ಅಂದಿನ ಸಂದರ್ಭ ಹೀಗೆ ಬಹಳ ಸಂಕೀರ್ಣವಾಗಿತ್ತು. ಇದನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದ ನಾವು ಕೆಲವರು ಬಂಡಾಯದ ಕಾರ್ಯಕ್ರಮವೊಂದಕ್ಕೆ ಅವರನ್ನು ಆಹ್ವಾನಿಸಲು ಸಂಕೋಚದಿಂದಲೇ ಮಂಗಳೂರಿನ ಲಾಲ್‌ಭಾಗ್‌ನಲ್ಲಿದ್ದ ಅವರ ಮನೆಗೆ ಹೋಗಿದ್ದೆವು. ಪ್ರೀತಿಯಿಂದ ಮನೆಗೆ ಸ್ವಾಗತಿಸಿದ ಅವರು ‘ಅನ್ಯಾಯಗಳ ವಿರುದ್ಧದ ನಿಮ್ಮ ಹೋರಾಟದಲ್ಲಿ ಭಾಗವಹಿಸುವುದು ನನಗೆ ಹೆಮ್ಮೆಯ ಸಂಗತಿ. ನಾನು ವಿದ್ವಾಂಸಳಲ್ಲ, ನನಗೆ ಮಾತಾಡಲು ಬರುವುದಿಲ್ಲ, ಆದರೆ ನಿಮ್ಮೊಂದಿಗೆ ನಾನಿರುತ್ತೇನೆ” ಎಂದದ್ದು ಈಗಲೂ ನನ್ನ ಕಿವಿಯಲ್ಲಿ ಅನುರಣಿಸುತ್ತಿವೆ.

ಅವರ ತಣ್ಣಿಗಿನ ಆದರೆ ನಿಖರ ಉತ್ತರಕ್ಕೆ ನಾವು ದಂಗಾಗಿದ್ದೆವು. ನಮ್ಮಲ್ಲಿದ್ದ ಯಾವ ಗೊಂದಲವೂ ಅವರಲ್ಲಿ ಇರಲಿಲ್ಲ. ಅವರ ಹೋರಾಟದ ಗುರಿಯ ಬಗ್ಗೆ ಅವರಿಗೆ ಖಚಿತವಾದ ತಿಳುವಳಿಕೆಯಿತ್ತು. ಮುಂದೆ ಸಾರಾ ಅವರು ನಮ್ಮ ಸಣ್ಣ-ದೊಡ್ಡ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದರು. ಅವರ ಭಾಗವಹಿಸುವಿಕೆ ನಮ್ಮ ವಿಶ್ವಾಸವನ್ನು ಹೆಚ್ಚಿಸುತ್ತಿತ್ತು ಮಾತ್ರವಲ್ಲ ಹೋರಾಟಕ್ಕೆ ಹೊಸ ಉತ್ಸಾಹ ನೀಡುತ್ತಿತ್ತು. “ಕುರಾನ್ ಎಂದೂ ಮಾನವ ವಿರೋಧಿಯಲ್ಲ. ಈ ಕುರಿತು ನಮ್ಮಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸಬೇಕಾಗಿದೆ. ಇತರ ಸಮುದಾಯಗಳೊಂದಿಗೆ ಬೆರೆಯಲು ಮತ್ತು ಪ್ರಗತಿ ಸಾಧಿಸಲು ಮುಸ್ಲಿಮರು ಆಧುನಿಕ ಶಿಕ್ಷಣ ಪಡೆಯಬೇಕು. ಇಸ್ಲಾಮೀ ಸಂಘ-ಸಂಸ್ಥೆಗಳು ಮುಸ್ಲಿಮರ, ಅದರಲ್ಲೂ ಮುಸ್ಲಿಂ ಮಹಿಳೆಯರ ವಿದ್ಯಾಭ್ಯಾಸಕ್ಕಾಗಿ ಪ್ರಾಮಾಣಿಕವಾಗಿ ದುಡಿಯಬೇಕು” ಎಂಬ ಮಾತುಗಳನ್ನು ಅವರು ಯಾವಾಗಲೂ ಹೇಳುತ್ತಿದ್ದರು.

ಇವೆಲ್ಲದರ ನಡುವೆ ನಾವು ಸಾಗುತ್ತಿದ್ದ ಹಾದಿ ಅಷ್ಟೇನೂ ಸುಗಮವಾಗಿರಲಿಲ್ಲ. ಆಗೀಗ ಬೆದರಿಕೆಯ ಪತ್ರಗಳು, ಕರೆಗಳು ಬರುತ್ತಲೇ ಇರುತ್ತಿದ್ದುವು. ನಾವು ಯಾವ ಬೆದರಿಕೆಗೂ ಜಗ್ಗುತ್ತಿರಲಿಲ್ಲವಾದರೂ ಅಂಥ ಅನಾಮಧೇಯ ಪತ್ರಗಳು ಮತ್ತು ಕರೆಗಳು ನಮ್ಮ ಮೇಲೆ ಬಗೆ ಬಗೆಯ ಒತ್ತಡಗಳನ್ನು ಹೇರುತ್ತಿದ್ದವು. ಆಗೆಲ್ಲಾ ನಮ್ಮನ್ನು ಸಮಾಧಾನ ಮಾಡುತ್ತಿದ್ದವರೆಂದರೆ ಸಾರಾ ಅವರೇ. “ಅಭಿವ್ಯಕ್ತಿ ಸ್ವಾತಂತ್ರ್ಯ ನಮ್ಮ ಹಕ್ಕು, ನಮ್ಮ ಪ್ರಗತಿ ಪರಚಿಂತನೆಗಳನ್ನು ಕಸಿದುಕೊಳ್ಳುವ ಶಕ್ತಿ ಯಾರಿಗೂ ಇಲ್ಲ. ಅಮಾಯಕರಾದ ಬಡಜನತೆಯೊಡನೆ ನಾವು ಪ್ರಾಮಾಣಿಕರಾಗಿರಬೇಕು. ನಮ್ಮ ನಿಲುವುಗಳನ್ನು ಧೈರ್ಯವಾಗಿ ಜನರ ಮುಂದಿಡೋಣ. ಯಾವುದು ಒಳ್ಳೆಯದು, ಯಾವುದು ಕೆಟ್ಟದೆಂಬುದನ್ನು ಜನರು ತೀರ್ಮಾನಿಸಲಿ” ಎಂದು ಅವರು ನಮಗೆ ಕಿವಿ ಮಾತು ಹೇಳುತ್ತಿದ್ದರು.

ಸಾರಾ ಅವರ ದಿಟ್ಟತನ ನಮಗೆ ಪ್ರಾಯೋಗಿಕವಾಗಿ ಅರ್ಥವಾದದ್ದು ಪುತ್ತೂರಿನಲ್ಲಿ ನಡೆದ ಘಟನೆಯೊಂದರಲ್ಲಿ. ಬಂಡಾಯ ಸಂಘಟನೆಯ ಕಾರ್ಯಕ್ರಮವೊಂದರಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು. ಅವರು ಭಾಷಣ ಮಾಡಲು ಎದ್ದು ನಿಲ್ಲುತ್ತಿದ್ದಂತೆ ಎಲ್ಲಿಂದಲೋ ನುಗ್ಗಿ ಬಂದ ಕೆಲವು ಮತಾಂಧಶಕ್ತಿಗಳು ಅವರನ್ನು ಭಾಷಣ ಮಾಡದಂತೆ ತಡೆದವು. ಅವರ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ನಮ್ಮ ಮನವಿ ಯಾವುದೇ ಪ್ರಯೋಜನಕ್ಕೆ ಬರಲಿಲ್ಲ. ಕೆಲವರಂತೂ ಕುರ್ಚಿಯನ್ನು ಎತ್ತಿ ವೇದಿಕೆಯತ್ತ ಎಸೆಯಲು ಆರಂಭಿಸಿದರು. ನಾವು ನಾಲ್ಕಾರು ಜನ ಸಾರಾ ಅವರ ಸುತ್ತ ನಿಂತು ಅವರನ್ನು ರಕ್ಷಿಸಿದೆವು. ಕೊನೆಗೂ ನಾವು ಕಾರ್ಯಕ್ರಮವನ್ನು ರದ್ದುಗೊಳಿಸಬೇಕಾಯಿತು. ಮತಾಂಧ ಶಕ್ತಿಗಳು ಅಟ್ಟಹಾಸದಿಂದ ಮೆರೆಯುತ್ತಿದ್ದಂತೆ ನಾವು ಹಿಂದಿರುಗಿದೆವು. ನಾವೆಲ್ಲ ವಿಚಲಿತರಾಗಿದ್ದೆವು, ಆದರೆ ಸಾರಾ ವಿಚಲಿತರಾಗಿರಲಿಲ್ಲ. ಅವರ ಮುಖದಲ್ಲಿ ದಿಟ್ಟತನವಿತ್ತು. “ನಿಮಗೆ ನನ್ನ ಮಾತನ್ನಾಗಲೀ, ಬರೆಹವನ್ನಾಗಲೀ ನಿಲ್ಲಿಸಲು ಸಾಧ್ಯವಿಲ್ಲ” ಎಂದವರು ಗಟ್ಟಿಯಾಗಿ ಹೇಳುತ್ತಿದ್ದರು. ಮಹಿಳೆಯರ ಮೇಲೆ ಆಕ್ರಮಣ ಮಾಡುವ ಶಕ್ತಿಗಳಿಗೆ ಕರಾವಳಿಯಲ್ಲಿ ಸುಧೀರ್ಘವಾದ ಇತಿಹಾಸವೇ ಇದೆ.

‘ನಮ್ಮ ಧರ್ಮ, ನಮ್ಮ ಸಂಸ್ಕೃತಿ’ ಎಂದು ಬೊಬ್ಬಿರಿಯುವ ಹಿಂದೂ ಹಾಗೂ ಮುಸ್ಲಿಂ ಮತಾಂಧಶಕ್ತಿಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಸಂಸ್ಕೃತಿಯ ಹೆಸರಲ್ಲಿ ಬಾಲ್ಯವಿವಾಹ ಬಂತು, ವರದಕ್ಷಿಣೆ ಬಂತು, ಸತಿ ಪದ್ಧತಿಯನ್ನು ಪುರಸ್ಕರಿಸಲಾಯಿತು. ಪರ್ದಾ ತೊಡಿಸಲಾಯಿತು. ಮಹಿಳೆಯ ಹಕ್ಕುಗಳನ್ನೆಲ್ಲಾ ಕಸಿದುಕೊಳ್ಳಲಾಯಿತು. ಇಷ್ಟೆಲ್ಲಾ ಆದ ಮೇಲೂ ‘ಇದಕ್ಕೆಲ್ಲಾ ಮಹಿಳೆಯರ ಸ್ವಭಾವವೇ ಕಾರಣ’ ಎಂದೂ ಹೇಳಲಾಯಿತು. ಬಲಿಪಶು ಮಾಡಿ, ಅದಕ್ಕೆ ಕಾರಣ ‘ಬಲಿಪಶುವೇ’ ಎಂದು ಹೇಳುವುದು ಗಂಡು ರೂಢಿಸಿಕೊಂಡು ಬಂದ ಮಾಹಾನ್ ಕ್ರೌರ್ಯದ ಒಂದು ಮಾದರಿಯಾಗಿದೆ. ಈ ಕ್ರೌರ್ಯದ ಪಾಲನೆಯಲ್ಲಿ ಹಿಂದೂ-ಮುಸ್ಲಿಂ ಎಂಬ ವ್ಯತ್ಯಾಸವಿಲ್ಲ. ತಾಲಿಬಾನೀಕರಣ ಪ್ರಕ್ರಿಯೆಯಲ್ಲಿ ಈ ಎರಡೂ ಕೋಮುಗಳು ಒಂದರೊಡನೊಂದು ಸ್ಪರ್ಧಿಸುತ್ತಿವೆ.

ಏನೇ ಇರಲಿ, ಸಾರಾ ಅವರಂಥವರು ನಮ್ಮ ನಡುವೆ ಇರುವುದರಿಂದಲೇ ನಮಗೆ ಮಾನವತೆಯ ಬಗ್ಗೆ ನಂಬಿಕೆ ಉಳಿದಿದೆ. ಹೋರಾಟಗಳ ಬಗ್ಗೆ ಗೌರವ ಬರುತ್ತಿದೆ. ಹೊರಜಗತ್ತಿನ ಬಗೆಗೆ ಮೊದಲ ಮಾಹಿತಿ ನೀಡಿದ ಕುಟ್ಟ ಬ್ಯಾರಿ ಮತ್ತು ಹೋರಾಟಕ್ಕೆ ಹಾದಿ ತೋರಿಸಿದ ಸಾರಾ ಅಬೂಬಕರ್ ಇವರಿಬ್ಬರೂ ನನ್ನ ಮನಃಪಟಲದಲ್ಲಿ ಶಾಶ್ವತವಾಗಿ ಉಳಿದಿರುವ ಎರಡು ಪ್ರತಿಮೆಗಳಾಗಿವೆ.

೬೦೯೮/೮, ಡಿ-೬

ವಸಂತಕುಂಜ

ನವದೆಹಲಿ-೧೧೦೦೭೦

‍ಲೇಖಕರು avadhi

June 25, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

7 ಪ್ರತಿಕ್ರಿಯೆಗಳು

 1. Santhosh Ananthapura

  Sir, It is nice experience to read your write up. well expressed.
  — Santhosh Ananthapura

  ಪ್ರತಿಕ್ರಿಯೆ
 2. kaviswara shikaripura

  howdu… namma urina ‘mandakki saabanna’ kuda nammallina aashavaadada pratheeka… adeshte kashtagalu bandaru mandakkiiii yendu koogutta ade vrutthiyindale idi urina mane-maathagiddane… yava aamishakku olagaagade anya muslimaranthe bereya duddu maaduva kaaryakke nillade indigu namma keriya gadiyaaradanthe mandakki maarutthale iddane.. namma kaviswara balaga-dinda avanige karmayogi sanmaana kuda maadiddevu…

  ಪ್ರತಿಕ್ರಿಯೆ
 3. test

  ಉದ್ದೇಶಪೂರ್ವಕ ಅನಾಮಧೇಯ ಕಮೆಂಟು. ಈ ಪೋಸ್ಟಿಗೆ ಸಂಬಂಧಪಟ್ಟಿದ್ದಲ್ಲ. ಸಾಧ್ಯವಾದರೆ ಕನ್ನಡ ಬ್ಲಾಗರ್ಸ್ ತಾಣದಲ್ಲಿ ಪ್ರಕಟಿಸಿ.

  Over-enthusiastic ಬ್ಲಾಗರುಗಳು ತಮ್ಮ ಬ್ಲಾಗಿನಲ್ಲಿ ಹೊಸ ಪೋಸ್ಟುಗಳಿವೆ ಅಂತ ಕಳುಹಿಸುವ ಸಂದೇಶಗಳ ಸಂಖ್ಯೆ ಇತ್ತೀಚೆಗೆ ಮಿತಿಮೀರಿದೆ. ಜಿಮೇಲು, ಜಿಟಾಕ್, ನಿಂಗ್ ಪ್ರೊಫೈಲ್ – ಎಲ್ಲಿ ಹೋದರೂ ಇಂಥ ಸಂದೇಶಗಳದ್ದೇ ಹಾವಳಿ: ‘ಮಿತ್ರರೇ, ನನ್ನ ಬ್ಲಾಗಿನಲ್ಲಿ ಹೊಸ ಬರಹ ಇದೆ’, ‘ಕವನ ಬರೆದಿದ್ದೇನೆ’, ಅದೂ ಇದೂ ಅಂತ.

  ಇಂಥ ಮಿತ್ರರಿಗೆಲ್ಲ ಒಂದು ಸಲಹೆ: ನಿಮ್ಮ ಅಭ್ಯಾಸ ಬಹಳ ಕಿರಿಕಿರಿ ಉಂಟುಮಾಡುವಂಥದು, ದಯವಿಟ್ಟು ಅದನ್ನು ಬಿಡಿ.

  ನಿಮ್ಮ ಬರಹಗಳನ್ನು ಪ್ರಚಾರಪಡಿಸಲು ಬೇಕಾದಷ್ಟು ಸುಲಭ ಉಪಾಯಗಳಿವೆ – ಬರಹ ಡಾಟ್ ಕಾಂ ನ ಕನ್ನಡಲೋಕ ಹಾಗೂ ಪ್ಲಾನೆಟ್ ಕನ್ನಡ ತಾಣಗಳಲ್ಲಿ ನೊಂದಾಯಿಸಿಕೊಳ್ಳುವ ಮೂಲಕ ನಿಮ್ಮ ಇತ್ತೀಚಿನ ಬ್ಲಾಗ್ ಪೋಸ್ಟುಗಳು ಎಲ್ಲರ ಗಮನಕ್ಕೂ ಬರುವಂತೆ ಮಾಡಬಹುದು. ಗೂಗಲ್ ರೀಡರ್ (ರೀಡರ್ ಡಾಟ್ ಗೂಗಲ್ ಡಾಟ್ ಕಾಂ) ಮೂಲಕ ನಿಮ್ಮ ಬರಹಗಳನ್ನು ನಿಮ್ಮ ಮಿತ್ರರೊಡನೆ ಹಂಚಿಕೊಳ್ಳಬಹುದು.

  ಇದನ್ನೆಲ್ಲಾ ಬಿಟ್ಟು ಇಮೇಲ್ ಕಳುಹಿಸುವುದನ್ನೇ ಮುಂದುವರೆಸುತ್ತೇನೆ ಎಂದಿರಾ? ನಿಮ್ಮ ಇಮೇಲ್ ಪಡೆದುಕೊಳ್ಳುವವರು ನಿಮ್ಮ ಸಂದೇಶಗಳನ್ನು ಇಷ್ಟರಲ್ಲೇ ಸ್ಪಾಮ್ ಎಂದು ಗುರುತಿಸುತ್ತಾರೆ, ನೆನಪಿರಲಿ! ಜಂಕ್ ಮೇಲ್ ಪಟ್ಟಿಗೆ ಸೇರುವುದೇ ನಿಮ್ಮ ಉದ್ದೇಶವಾದರೆ ಯಾರೇನು ಮಾಡಲಾದೀತು!?

  ಆದರೆ ದಯವಿಟ್ಟು, ನನಗೊಬ್ಬನಿಗಾದರೂ ತೊಂದರೆಕೊಡುವುದನ್ನು ಬಿಡ್ತೀರಾ, ಪ್ಲೀಸ್??

  ಪ್ರತಿಕ್ರಿಯೆ
 4. ಎಂ, ಎಸ್. ಪ್ರ್ದಭಾಕರ

  ಈ ಬರವಣಿಗೆ ನನಗೆ ಗೊತ್ತಿರದಿಲ್ಲದ ಅನೇಕ ವಸ್ತುವಿಷಯಗಳ ಬಗ್ಗೆ, ಅನೇಕ ವ್ಯಕ್ತಿಗಳ
  ಬಗ್ಗೆ ನನ್ನ ತಿಳುವಳಿಕೆಗೆ ಬಹಳ ಸಹಾಯ ಮಾಡಿದೆ. ಅವಧಿಯಲ್ಲಿ ಪ್ರಕಟವಾಗಿರುವ
  ಲೇಖನಗಳಿಂದ ಈ ಕಳೆದ ಐದಾರು ತಿಂಗಳುಗಳಲ್ಲಿ ಕನ್ನಡ ಸಾಹಿತ್ಯ,ಸಂಸ್ಕೃತಿ ಮತ್ತು
  ಸಮಾಜ,ಕನ್ನಡ ನಾಡು,ನುಡಿ ಇವಕ್ಕೆ ಸಂಬಂಧ ಪಟ್ಟ ವಿಷಯಗಳ ಬಗ್ಗೆ ಬಹಳ
  ಕಲಿತುಕೊಂಡಿದ್ದೇನೆ. ತುಂಬ thanks.

  ಪ್ರತಿಕ್ರಿಯೆ
 5. ನಾಗೇಶ್

  ಸಾರಾ ಅವರನ್ನು ಕುರಿತಾದ ನಿಮ್ಮ ಲೇಖನ.ಸಾರಾ ಅವರ ದಿಟ್ಟನಿಲುವನ್ನು, ಹೊರಟದ ಹಾದಿಯ ಪರೀಚಯ ಮಾಡುವುದರ ಜೊತೆಗೆ ಮುಸ್ಲಿಂ ಲೇಖಕಿಯೊಬ್ಬರು ತಮ್ಮ ನಿಲುವುಗಳನ್ನು ನಿರ್ಬಯವಾಗಿ ಹೇಳಿರುವುದರಿಂದ ಸಾರಾ ನಿಜವಾಗಿಯು ನಮ್ಮ ಮನದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ.
  ಬಿಳಿಮಲೆ ಸಾರ್ ಗೆ ದನ್ಯವಾದಗಳು

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: