ಕುಡಿಯೋದೇ ನನ್ ವೀಕ್ನೆಸ್ಸೂ…

– ಎ ಎಸ್ ಅಶೋಕ ಸೂರ್ಯ ನಡು ನೆತ್ತಿಯ ಮೇಲೆ ಸುಡುತ್ತಿದ್ದ. ಅತ್ಲಾಗಿ ಎರಡು ಹೆಜ್ಜೆ ಬಲಕ್ಕೆ ತಿರುಗಿದರೆ ಉಡುಪಿ ಕೃಷ್ಣ ಭವನ, ಇತ್ಲಾಗಿ ಎರಡು ಹೆಜ್ಜೆ ಎಡಕ್ಕೆ ತಿರುಗಿದರೆ ಕವಿತಾ ಬಾರ್ ಅಂತಿದ್ದ ಜಾಗದಲ್ಲಿ ಸರಿಯಾಗಿ ದೊಡ್ಡೇಗೌಡ್ರ ದರ್ಶನ ಅತು. ನನ್ನನ್ನು ನೋಡಿದವರೆ ಬಿಸಿಲಿನ ಝಳಕ್ಕೆ ತಮ್ಮ ನೆತ್ತಿಗೆ ಅಡ್ಡ ಹಿಡಿದಿದ್ದ ಪೇಪರನ್ನು ತುಸು ಕೆಳಗಿಳಿಸಿ ನಕ್ಕೋತ ನಮಸ್ಕಾರ ಅಂದ್ರು. ‘ನಮಸ್ಕಾರ ಗೌಡ್ರೆ, ಪೇಪರ್ ಏನು ಹೇಳ್ತಾ ಇದೆ’ ಅಂತ ಪ್ರಶ್ನೆ ಎಸೆದೆ. ‘ಇನ್ನೂ ಓದಿಲ್ಲ’ ಅಂತ ಸರಳ ಉತ್ತರ ಬಂತು. ಮಾತಿಗೆ ನಾನು ಎಳೆ ಹುಡುಕುತ್ತಿರ ಬೇಕಾದ್ರೆ ಗೌಡ್ರು ಏಕಾ ಏಕಿ ‘ವಸಿ ತಕ್ಕೊಳೋಣ್ವೆ’ ಅಂದು ಬಿಡಬೇಕೆ! ನಾನು ಗಾಭರಿಯಿಂದ , ‘ಗೌಡ್ರೆ ಇದೇನು ತಮಾಷೆ’ ಅಂದೆ . ‘ತಮಾಷೆ ಅಲ್ಲ ಇದು, ಕಹಿ ಸತ್ಯ. ಮೊದಲೆಲ್ಲಾ ನಾನು ಆರೋಗ್ಯಕ್ಕೊಳ್ಳೇದಲ್ಲ ಅಂತ ಕುಡೀತಾನೆ ಇರಲಿಲ್ಲ. ಆದ್ರೆ ಹಾಳಾದ್ದು ಈ ಪ್ರೆಂಡ್ಸ್ ಬಿಡ್ಬೇಕಲ್ಲ. ಯಾಕವ್ರ ಮನಸ್ಸು ನೋಯ್ಸೋದು ಅಂತ ಒಂದಿಷ್ಟು.. ಒಂದಷ್ಟು ಅಂತ ಸುರು ಮಾಡ್ದೆ ನೋಡಿ.. ಹಾಳಾದ್ದು ಚಟಾ ಹತ್ಕಂಬುಡ್ತು. ಈಗ ಹೆಂಡ್ತಿನ್ನಾರೂ ಬುಟ್ಟೇನು, ಇದನ್ ಬುಡಾಕಾಗಕಿಲ್ಲ..’ಅಂದರು ಗೌಡರು. ಅವರೆಡೆಗೆ ಅನುಕಂಪದ ದೃಷ್ಟಿ ಬೀರಿ, ‘ಗಟ್ಟಿ ಮನಸ್ಸು ಮಾಡಿ ಬಿಟ್ಬಿಡಿ ಗೌಡ್ರೆ’ ಅಂದೆ. ‘ಅಯ್ಯೋ, ನಿಮ್ಮಂತ ಪ್ರೆಂಡ್ಸನ್ನೆಲ್ಲಾ ಸಂಪಾದ್ಸಿಕೊಟ್ಟಿರೋ ಈ ಚಟನ್ನ ಹಂಗೆಲ್ಲಾ ಸಲೀಸಾಗಿ ಬುಟ್ಬುಡೋಕಾಗುತ್ಯೇ!? ಅಲ್ಲಾ ಅದ್ಯಾಕ್ ಹಂಗ್ ಮಾನ ಹರಾಜಾದಂಗೆ ಮಖ ಮಾಡ್ಕಂಡ್ರಿ! ನಾನು ಕರೆದಿದ್ದು ..ಓ ಆಲ್ಲೈತೆ ನೋಡಿ ಉಡುಪಿ ಹೋಟೆಲ್, ಅಲ್ಹೋಗಿ ಪೇಪರ್ ಬುಡುಸ್ಕೊಂಡು ಒಂದು ಗುಟುಕು ಸ್ಟ್ರಾಂಗ್ ಕಾಫಿ ಕುಡಿಯೋದಕ್ಕೆ..’ ಗೌಡ್ರ ಮುಖದಲ್ಲಿ ತುಂಟ ನಗುವಿತ್ತು. ಗೌಡ್ರ ಪಾಲಿನ ಕಹಿ ಸತ್ಯ ನನಗೂ ಅನ್ವಯಿಸುವುದೇ ಆಗಿತ್ತು. ‘ಓಹ್ ಹಾಗೋ..ಅಲ್ಲಾ ಒಂದು ಗುಟುಕು ಯಾವ ಮೂಲೆಗೆ ಗೌಡ್ರೇ..ಒಂದು ಲೀಟರ್ರೇ ಇಳ್ಸೋಣ್ವಂತೆ, ನಡೀರಿ..’ ಅಂದೆ ನಾನು ಅಗದಿ ಕುಡುಕನ ತರ ಅಲ್ಲಲ್ಲಾ ಕಾಫಿ ಕುಡುಕನ ತರ ! ಕಾಫಿ ಕುಡಿಯಲು ನಾನು ಮುಹೂರ್ತ ನೋಡುವವನೇ ಅಲ್ಲ. ಗೌಡರ ಜೊತೆ ಮಟ ಮಟ ಮದ್ಯಾಹ್ನ ಬಿಸಿ ಬಿಸಿ ಕಾಫಿ ಹೀರಿ ವಿದಾಯ ಹೇಳಿ ಬಂದೆ. ಮನಸ್ಯಾಕೋ ಕಾಫಿಯ ಹಿಂದೆಯೇ ಅಲೆಯತೊಡಗಿತು. ಈ ವಿ ಷಯದಲ್ಲಿ ಮಾತ್ರ ನಾನು ‘ ಕುಡಿಯೋದೆ ನನ್ ವೀಕ್‌ನೆಸ್ಸು’ ಅಂತ ಎದೆ ತಟ್ಟಿ ಹೇಳಿಕೊಳ್ಳಲು ಹಿಂದೆ ಮುಂದೆ ನೋಡುವವನಲ್ಲ. ಅಲ್ಲ.. ಇದರಲ್ಲಿ ನಾಚಿಕೆ ಏನು ಬಂತು. ನಮ್ಮ ತಾತ ಮುತ್ತಾತರಾದಿಯಾಗಿ ನಡೆದು ಬಂದಿರೋದು ತಾನೆ ಇದು. ಅವರೆಲ್ಲಾ ಬೆಳಗ್ಗೆ ಎದ್ದೊಡನೆಯೆ ಕಾಫಿಯೆಂಬ ಮಾಯಾಂಗನೆಯನ್ನು ಅರಸಿಕೊಂಡು ಅಡುಗೆ ಮನೆಗೆ ಹೋಗುತ್ತಿದ್ದರು. ನಾವು ಬೆಡ್ಡಲ್ಲೇ ಬಿದ್ದುಕೊಂಡು ‘ಕಾಪಿ… ಕಾಫಿ’ ಎಂದು ಅರಚುತ್ತಿರುತ್ತೇವೆ, ಅಷ್ಟೇ ವ್ಯತ್ಯಾಸ. ನಮ್ಮ ಅಜ್ಜಿಯಂತೂ ಪೀಪಾಯಿಗಟ್ಟಲೆ ಕಾಫಿ ಕುಡಿದು ಬಾಳಿ ಬದುಕಿದವರು. ಬರೇ ಕುಡಿಯುವುದು ಮಾತ್ರ ಅಲ್ಲ, ಇಡ್ಲಿ ದೋಸೆಗಳಿಗೂ ಸಾಂಬಾರಿನಂತೆ ಸುರಿದುಕೊಳ್ಳುತ್ತಿದ್ದರು. ಬಾಯಾರಿಕೆಯಾದಾಗಲೆಲ್ಲ ನೀರಿಗೆ ಬದಲಾಗಿ ಪಾತ್ರೆಯಲ್ಲಿ ಸದಾ ಸಿದ್ದವಾಗಿರುತ್ತಿದ್ದ ಕೋಲ್ಡ್ ಕಾಫಿ ಹೀರುತ್ತಿದ್ದರು. ಭರ್ತಿ ತೊಂಬತ್ತು ವರ್ಷ ಹಾಯಾಗಿ ಬದುಕಿದ ದೊಡ್ಡ ಜೀವ ಅವರದ್ದು. ಕಾಫಿಯಲ್ಲಿರೋ ಕೆಫಿನ್ ಗೆ ಅವರನ್ನೇನೂ ಜಗ್ಗಿಸಲಾಗಿರಲಿಲ್ಲ. ಅಂತಾ ಅಜ್ಜಿಯ ಹಿರೀ ಪುಳ್ಳಿ ನಾನು. ಕೆಫಿನ್‌ಗೆ ಹೆದರುವುದುಂಟೇ? ಪರಂಪರೆಗೇ ಅವಮಾನವಲ್ಲವೇ? ನನಗೆ ಹತ್ತಿದ ಕಾಫಿ ಚಟ ಇಂದು ನಿನ್ನೆಯದಲ್ಲ. ನನ್ನ ಮತ್ತು ಅಜ್ಜಿಯ ನಂಟಿನಷ್ಟೇ ಹಳೆಯದು. ಆಗೆಲ್ಲಾ ಸಕ್ಕರೆ ಕಾಫಿಯ ಜಮಾನ ಸುರುವಾಗಿರಲಿಲ್ಲ. ಏನಿದ್ದರೂ ಬೆಲ್ಲದ ಕಾಫಿಯದ್ದೇ ದರ್ಬಾರು. ಅಜ್ಜಿ ಪ್ರತಿ ನಿತ್ಯ ಬೆಳ್ಳಿ ಮೂಡುವ ಮೊದಲೇ ಎದ್ದು, ಒಲೆಯ ಮೇಲೆ ದೊಡ್ಡ ಕೊಪ್ಪರಿಗೆಯಂತಾ ಪಾತ್ರದ ತುಂಬಾ ನೀರಿಗೆ ಒಂದು ಹೆಡಿಗೆ ಕರಿ ಬೆಲ್ಲ ಹಾಕಿ ಕುದಿಯಲು ಇರಿಸುತ್ತಿದ್ದರು. ಅದು ಕುದಿಯುವವರೆಗೆ ಕಾಫಿ ಹುಡಿ ಹಾಕುವಂತಿರಲಿಲ್ಲ. ಕಾಫಿ ಕುಡಿಯದೆ ಬೇರೇನೂ ಕೆಲಸ ಮಾಡುವ ಕ್ರಮ ಇಲ್ಲವಾಗಿತ್ತು. ಹಾಗಾಗಿ ಒಲೆ ಬುಡದಲ್ಲೆ ಕುಳಿತು, ಬೆಂಕಿಯ ಕಾ”ಗೆ ಮೈಯೊಡ್ಡಿಕೊಂಡು ಕಾಫಿ ಹಂಡೆಯನ್ನೇ ದಿಟ್ಟಿಸಿ ನೋಡುತ್ತಾ, ‘ಈಶ ನಿನ್ನ ಚರಣ ಭಜನೆ ಆಸೆಂದ ಮಾಡುವೆನು’ ಅಂಬೊ ಕನಕದಾಸರ ಕೀರ್ತನೆಯನ್ನು ಭಕ್ತಿ ಭಾವದಲ್ಲಿ ರಾಗವಾಗಿ ಹೇಳಿಕೊಳ್ಳುತ್ತಿದ್ದರು. ಅದೇನು ಮಾಯವೋ ಕಾಣೆ, ಈ ಹೊತ್ತಿಗೆ ನನಗೆ ಪಳಕ್ಕನೆ ಎಚ್ಚರಿಕೆಯಾಗಿ ಬಿಡುತ್ತಿತ್ತು. ಚುಮು ಚುಮು ಚಳಿಗೆ ಕಂಬಳಿಯಡಿಯಲ್ಲಿ ಗಾಢ ನಿದ್ರೆಯಲ್ಲಿರುತ್ತಿದ್ದ ಅಮ್ಮನ ತೋಳ್ತೆಕ್ಕೆಯಿಂದ ಮೆಲ್ಲನೆ ಬಿಡಿಸಿಕೊಂಡು ಕಣ್ಣು ಹೊಸಕಿಕೊಳ್ಳುತ್ತಾ ಅಡುಗೆ ಮನೆಗೆ ಬಂದು ಅಜ್ಜಿಗೆ ಮೈಯಾನಿಸಿ ಕುಳಿತು ಬಿಡುತ್ತಿದ್ದೆ.  ಸ್ವಲ್ಪ ಹೊತ್ತಿಗೆ ನೀರು ಕುದಿಯಲಾರಂಭಿಸಿ, ತಳದಲ್ಲಿ ಇನ್ನೂ ಕರಗದ ಬೆಲ್ಲದ ತುಣುಕುಗಳು ಪಾತ್ರೆಯನ್ನು ಒಳಗಿಂದಲೇ ತಾಳ ಹಾಕಿದಂತೆ ಕುಟ್ಟಲಾರಂಭಿಸುತ್ತಿದ್ದವು. ಈ ವಿಶಿಷ್ಟ ಸ್ವರ ಸಂಯೋಜನೆಯ ಹಿಮ್ಮೇಳದಲ್ಲಿ, ಅಜ್ಜಿಯ ತೋಳ ಸಂದಿನಲ್ಲಿ ತಲೆರಿಸಿ ಬೆಚ್ಚಗೆ ಕುಳಿತಿರುತ್ತಿದ್ದ ನನ್ನ ಕಿವಿಗಳಿಗೆ ದಾಸರ ಭಜನೆ ಈಗಿನ ಡಾಲ್ಬಿ ಸರೌಂಡ್ ಸೌಂಡ್ ಸಿಸ್ಟಮಿನಲ್ಲಿ ಕೇಳಿದಂತಾಗುತ್ತಿತ್ತು. ಬೆಲ್ಲದ ಥಕ ಥೈ ಶಬ್ದ ನಿಲ್ಲುವಾಗ ಕಾಫಿ ಹುಡಿ ಹಾಕುವ ಮಹೂರ್ತ ಸನ್ನಿಹಿತವಾಯಿತೆಂದೇ ಅರ್ಥ. ಇನ್ನು ಅಜ್ಜಿಯೊಂದಿಗೆ ಕಣ್ಣು ಮುಚ್ಚಿಕೊಂಡು ಸೊರ್ ಬರ್ ಎಂದು ಶಬ್ದ ಮಾಡುತ್ತಾ ಬಿಸಿ ಬಿಸಿ ಕಾಫಿಯನ್ನು ಹೀರುವುದಕ್ಕೆ ಹೆಚ್ಚು ಕಾಯಬೇಕಿಲ್ಲ. ಅಷ್ಟರಲ್ಲಿ ನನ್ನನ್ನು ಆಚೆ ದೂಡಿ, ‘ಹೋಗು ಹಲ್ಲುಜ್ಜಿ ಮುಖ ತೊಳೆದುಕೊಂಡು ಬಾ, ಇಲ್ಲದಿದ್ರೆ ಕಾಫಿ ಇಲ್ಲ’ ಎಂಬ ಆರ್ಡರ್ ಹೊರಡಿಸುತ್ತಿದ್ದರು. . ಕೊರೆವ ಚಳಿಯಲ್ಲಿ, ಮನೆಯಿಂದ ಹೊರಗಿದ್ದ ಬಚ್ಚಲಿನವರೆಗೆ ಹೋಗಿ ಹಲ್ಲು ತಿಕ್ಕುವ ಶಿಕ್ಷೆ ಯಾರಿಗೆ ಬೇಕು? ಇನ್ನೂ ಕತ್ತಲು ಇರುತ್ತಿದ್ದದ್ದರಿಂದ ಭೂತ ಪಿಶಾಚಿಗಳ ಭಯ ಒಂದು ಕಡೆ. ಹಾಗಂತ ಸುಮ್ಮನಿದ್ದರೆ ಕಾಫಿ ದಕ್ಕುತ್ತಿರಲಿಲ್ಲ. ಹೀಗಿರುವಾಗ ಬಾಯಲ್ಲಿ ಶಾಸ್ತ್ರಕ್ಕಾದರೂ ಒಂದೂ ಹಲ್ಲಿಲ್ಲದ ಅಜ್ಜಿ ಎಷ್ಟು ಪುಣ್ಯವಂತೆ ಎಂದು ನನಗನಿಸುತ್ತಿದ್ದುದರಲ್ಲಿ ಏನು ತಪ್ಪಿದೆ? ಮನಸ್ಸಿಲ್ಲದ ಮನಸ್ಸಿನಲ್ಲಿ ಅಜ್ಜಿಯ ಆಜ್ಞೆಯನ್ನು ಪಾಲಿಸಿ, ಕಹಿ ಮಿಶ್ರಿತ ಸಿಹಿಯ ಅಮೃತ ಸಮಾನವಾದ ಆ ಪೇಯವನ್ನು ಕುಡಿದು ಏನೂ ಅರಿಯದವನಂತೆ ಸದ್ದು ಮಾಡದೆ ಅಮ್ಮನ ಬಳಿ ಹೋಗಿ ಮತ್ತೆ ಮಲಗಿಕೊಳ್ಳುತ್ತಿದ್ದೆ. ಕಾಫಿಯ ರುಚಿ ಇನ್ನೂ ನಾಲಗೆಯಲ್ಲಿ ಇರುವಾಗಲೇ ಅದೆಲ್ಲಿಂದ ನಿದ್ದೆ ಬರುತ್ತಿತ್ತೋ ಏನೋ! ಮತ್ತೆ ಕನಸುಗಳ ಸರಮಾಲೆ ಬಿಚ್ಚಿಕೊಳ್ಳುತ್ತಿತ್ತು. ಒಂದು ದಿನವಂತೂ ಕನಸೋ ನನಸೋ ಎಂದು ಹೇಳಲಾರದಷ್ಟು ನಿಚ್ಚಳವಾಗಿ ಒಂದು ದಿವ್ಯ ಅನುಭೂತಿಯಾಗಿತ್ತು. ಬೆಳ್ಳಿ ಬೆಟ್ಟದ ಶಿವನ ಮನೆ ಮುಂದೆ ರೇಷನ್ ಅಂಗಡಿಯ ಮುಂದೆ ಇರುವಂತೆ ಒಂದು ಸರತಿಯ ಸಾಲು. ಸಾಲಿನಲ್ಲಿ ಯಾರ್ಯಾರು ನಿಂತಿದ್ದಾರೆ ಎಂದು ನೋಡಿದರೆ, ಚಿತ್ರ ವಿಚಿತ್ರ ಆಯುಧಗಳನ್ನು ಬಗಲಲ್ಲಿ ಸಿಕ್ಕಿಸಿಕೊಂಡು ಕೈಯ್ಯಲ್ಲಿ ಸಾಸರ್ ಅನ್ನು ಹೋಲುವಂತಹ ಬಟ್ಟಲುಗಳನ್ನು ಹಿಡಿದ ಶಿವ ಗಣಗಳು. ಅಷುತೋಷ್ ಮಹರಾಜ್ ಕಿ ಜೈ, ಸುಬ್ಬಮ್ಮಾ ಕಿ ಜೈ ಎಂಬ ಜೈಕಾರಗಳು ಮುಗಿಲು ಮುಟ್ಟುತ್ತಿವೆ. ಅರೆ..!! ಸುಬ್ಬಮ್ಮ ನನ್ನ ಅಜ್ಜಿಯಲ್ಲವೇ!? ಅಚ್ಚರಿಂದ ಸರತಿಯ ಸಾಲಿನ ಮುಂಭಾಗಕ್ಕೆ ಕಣ್ಣು ಹಾಯಿಸಿದರೆ ಅಲ್ಲಿ ಸಾಕ್ಷಾತ್ ನನ್ನ ಅಜ್ಜಿ ಹಣೆಯ ಮೇಲೆ ನೀಟಾಗಿ ಮೂರು ಗೆರೆ ವಿಭೂತಿ ಬಳಿದುಕೊಂಡು, ನಡುವೆ ಕಾಸಗಲದ ಕುಂಕುಮದ ಬೊಟ್ಟನ್ನಿಟ್ಟುಕೊಂಡು ದಿವ್ಯ ಮಂದಹಾಸವನ್ನು ಬೀರುತ್ತಿದ್ದಾರೆ!! ಏನಾಶ್ಚರ್ಯ! ಒಬ್ಬರ ಹಿಂದೆ ಒಬ್ಬರಂತೆ ಶಿವ ಗಣಗಳೊಂದಿಗೆ ದೇವಾನುದೇವತೆಗಳು ಸಹಾ ಅಜ್ಜಿಯ ಕೈಂದ ಬೆಳ್ಳಿಯ ಸೌಟಿನಲ್ಲಿ ಹಬೆಯಾಡುತ್ತಿರುವ ಕಾಫಿಯನ್ನು ಸ್ವೀಕರಿಸುತ್ತಿದ್ದಾರೆ! ಇನ್ನೊಂದು ಬದಿಯಲ್ಲಾಗಲೇ ಗಣಪತಿ ಚಾ”ಯು ತನ್ನ ಸೊಂಡಿಲನ್ನು ಸ್ಟ್ರಾದಂತೆ ಬಳಸಿಕೊಂಡು ವಿನೋದ ಭಾವದಲ್ಲಿ ಕಾಪಿ ಹೀರುತ್ತಿದ್ದಾನೆ. ಆಗ ಅವನ ತಮ್ಮ ಸುಬ್ರಮಣ್ಯ ನಾನೇನು ಕಮ್ಮಿ ಅನ್ನುವ ಹಾಗೆ ತನ್ನ ಈಟಿಯ ಅಲಗನ್ನು ತಿರುಗಣೆ ತಿರುಗಿಸಿದಂತೆ ಬಿಚ್ಚಿ ಬದಿಗಿಟ್ಟು ಸ್ಟ್ರಾದಂತೆ ಮಾಡಿಕೊಂಡ. ನನಗೆ ಸುಬ್ರಮಣ್ಯನ ಉಪಾಯ ಇಷ್ಟವಾಗಿ ಜೋರಾಗಿ ಚಪ್ಪಾಳೆ ತಟ್ಟಿದೆ. ಆದರೆ ಅದು ಅವರಿಗೆ ಕೇಳಿಸಲೇ ಇಲ್ಲ! ನಿಧಾನಕ್ಕೊಮ್ಮೆ ಒಂದು ಸುತ್ತು ತಿರುಗಿ ಬಂದೆ. ಯಾರೂ ನನ್ನನ್ನು ‘ಕ್ಯಾರೇ’ ಅನ್ನಲಿಲ್ಲ! ಅಯ್ಯೋ..ಸಕಲವನ್ನೂ ಬಲ್ಲವನಾದ ಮಹಾದೇವ ಶಿವನಿಗೇ ನಾನಿಲ್ಲಿರುವುದು ಗೊತ್ತಾಗಿರಲಿಲ್ಲ. ಯಾಕೋ ದುಃಖ ಒತ್ತರಿಸಿಕೊಂಡು ಬಂದು ಅಜ್ಜಿಯ ಕಡೆಗೆ ಓಡಿ ಅವರ ಕಾಲುಗಳನ್ನು ತಬ್ಬಿಕೊಂಡು ಜೋತು ಬಿದ್ದೆ. ಅಜ್ಜಿ ಮಿಸುಕಾಡಲಿಲ್ಲ. ಈಗಷ್ಟೆ ಅಡುಗೆ ಮನೆಯಲ್ಲಿ ಒಲೆಯ ಮುಂದೆ ಕುಕ್ಕರುಗಾಲಿನಲ್ಲಿ ಕೂತಿದ್ದ ಅಜ್ಜಿ ನನಗೆ ಹೇಳದೆ ಇಲ್ಲಿಗೆ ಬಂದದ್ದೂ ಅಲ್ಲದೆ, ಈಗ ನನ್ನನ್ನು ಪರಿಚಯವಿಲ್ಲದಂತೆ ಮಾಡುತ್ತಿರುವುದು ಅತಿ ದೊಡ್ಡ ಮೋಸವೆಂದೆನಿಸಿ ಜೋರಾಗಿ ಅಳುವುದಕ್ಕೆ ಸುರು ಮಾಡಿದೆ. ಅಜ್ಜಿಗೆ ಕರುಣೆ ಬಂತೋ ಏನೋ! ನನ್ನನ್ನು ಎದೆಗೊತ್ತಿಕೊಂಡು ಏನಾಯ್ತು ಪುಟ್ಟಪ್ಪ.. ಏನಾಯ್ತು ರಾಜ ಅಂತೆಲ್ಲಾ ಮುದ್ದಿನಿಂದ ಕೇಳಲು ತೊಡಗಿದರು. ಅರೆ ಅಜ್ಜಿ ಈಗ ಮಾತಾಡ್ತಾ ಇದ್ದಾರೆ! ಹಾಗಾದ್ರೆ ಈಗ ದೇವರುಗಳೆಲ್ಲಾ ನನ್ನೊಂದಿಗೆ ಮಾತಾಡುವರೋ ಎನೋ ಅಂದುಕೊಂಡು ಹಿಂದೆ ತಿರುಗಿ ನೋಡಿದರೆ ಆಲ್ಲಿ ನಮ್ಮ ದೇವರ ಕೋಣೆಯಲ್ಲಿ ತೂಗು ಹಾಕಿದ್ದ ಶಿವ ,ಪಾರ್ವತಿ , ಗಣಪತಿ ಇವರ ಚಿತ್ರ ಪಟಗಳು ಮಾತ್ರ ಕಾಣಬೇಕೆ ! ಛೆ.. ಹಾಗಾದರೆ ನಾನೆಲ್ಲಿದ್ದೇನೆಂದು ಮೆಲ್ಲನೆ ಕಣ್ಣು ಹೊಸಕಿಕೊಂಡು ನೋಡಿದರೆ ಅಮ್ಮ ಎದ್ದು ಹೋದ ಖಾಲೀ ಹಾಸಿಗೆಯಲ್ಲಿ ನಾನೊಬ್ಬನೇ ಇದ್ದೆ. ನನ್ನನ್ನು ಪ್ರೀತಿಂದ ದಿಟ್ಟಿಸಿ ನೋಡುತ್ತಿದ್ದ ಅಜ್ಜಿಯ ಮುಖದಲ್ಲಿದೊಡ್ಡ ನಾಮದ ವಿಭೂತಿಯೂ ಇಲ್ಲ,ಕಾಸಗಲದ ಕುಂಕುಮವೂ ಇಲ್ಲ! ನಾನು ಸಂದೇಹಭರಿತ ಸ್ವರದಲ್ಲಿ ಅಜ್ಜಿಯನ್ನು ಕೇಳಿದೆ , ‘ಕೈಲಾಸದಲ್ಲಿ ಈಗಷ್ಟೆ ಕಾಫಿ ಹಂಚುತ್ತಿದ್ದದ್ದು ನೀವೆ ತಾನೆ?!’ ಅಜ್ಜಿ ನಗುತ್ತಾ, ‘ನಿನಗೆಲ್ಲೋ ಕನಸು! ಸಧ್ಯಕ್ಕೆ ನಿಮ್ಮಜ್ಜನ ಮನೆಯೇ ನನಗೆ ಕೈಲಾಸ. ಇದನ್ನು ಬಿಟ್ಟು ಇನ್ಯಾವ ಕೈಲಾಸಕ್ಕೆ ಹೋಗಲಿ! ಹಾಗೊಂದು ವೇಳೆ ಹೋದರೂ, ನಿನಗೆ ಯಾರು ಕಾಫಿ ಮಾಡಿ ಕೊಡುವುದು!? ಸಾಕ್ಷಾತ್ ಶಿವನೇ ಬಂದು ಕರೆದರೂ ನಾನು ನನ್ನ ಪುಟ್ಟುವನ್ನು ಬಿಟ್ಟು ಹೋಗೋಲ್ಲ’ ಅಂತ ಹೇಳುತ್ತಾ ಅಜ್ಜಿ ನನ್ನ ಕೈಯ್ಯಲ್ಲಿ ಕಾಫಿಯ ಗ್ಲಾಸನ್ನಿರಿಸಿದ್ದು ಈಗಲೂ ನೆನಪಿದೆ. ಹೀಗೆ ಅಜ್ಜಿ ಮಾಡುತ್ತಿದ್ದ ಬೆಲ್ಲದ ಕಾಪಿ ನನಗೆ ಚಿಕ್ಕ ವಯಸ್ಸಿನಲ್ಲೇ ಕೈಲಾಸ ದರ್ಶನವನ್ನೂ ಮಾಡಿಸಿ ಬಿಟ್ಟಿತ್ತು. ಅಂದ ಹಾಗೆ ನಸುಕಿನ ನಮ್ಮ ಕಾಫಿ ಸಮರಾಧನೆ ಸಾಂಗೋಪಸಾಂಗವಾಗಿ ನಡೆಯುತ್ತಿತ್ತು ಅಂತ ನಾನು ತಪ್ಪು ಮಾಹಿತಿ ಕೊಡುವುದಿಲ್ಲ. ಕೆಲವೊಮ್ಮೆ ಪರಮಾನಂದವನ್ನನುಭವಿಸುತ್ತಾ ಕಣ್ಣು ಮುಚ್ಚಿ ಕಾಫಿ ಹೀರುತ್ತಿರುವಾಗ, ಅದೆಲ್ಲಿಂದಲೋ ದುತ್ತನೆ ಪ್ರತ್ಯಕ್ಷವಾಗುತ್ತಿದ್ದ ನನ್ನಮ್ಮ ಲೋಟವನ್ನು ಕಸಿದುಕೊಂಡು ಬದಲಿಗೆ ಸಪ್ಪೆ ಹಾಲಿನ ಲೋಟವನ್ನು ಕೈಗೆ ಹಿಡಿಸುತ್ತಿದ್ದರು. ನಾನು ವರುಣಾಸ್ತ್ರವನ್ನು ಬಳಸಿ ಅಮ್ಮನನ್ನು ಸೋಲಿಸಿ ಕಾಫಿಯ ಲೋಟವನ್ನು ಮತ್ತೆ ಪಡೆಯುತ್ತಿದ್ದೆ. ಒಮ್ಮೊಮ್ಮೆ ಮುಸ್ಸಂಜೆ ಹೊತ್ತಿನಲ್ಲಿ ಅಜ್ಜಿಯ ಬಾಯಿಯಿಂದ ಕಥೆ ಕೇಳುತ್ತಾ ಕುಳಿತಿರುವಾಗ, ಒಳ್ಳೆ ಆಸಕ್ತಿಕರ ಘಟ್ಟದಲ್ಲೇ ಅಜ್ಜಿಗೆ ಗಂಟಲು ಗರ ಗರ ಎನ್ನಲು ತೊಡಗುತ್ತಿತ್ತು. ಆಗೆಲ್ಲಾ ನಾನು ಅಮ್ಮನಿಗೆ ದಂಬಾಲು ಬಿದ್ದು ಅಜ್ಜಿಗೆ ಕಾಫಿ ಮಾಡಿಸಿ ಕೊಡುತ್ತಿದ್ದೆ. ಇದರಿಂದ ಅಜ್ಜಿಯ ಕತೆಗಳಲ್ಲಿ ಧೈರ್ಯವನ್ನಷ್ಟೇ ಬಂಡವಾಳವಾಗಿಟ್ಟುಕೊಂಡು ಮೂರು ಲೋಕಗಳನ್ನು ಜೈಸುತ್ತಿದ್ದ ವೀರರು ಹಾಗೂ ಸಾಧಾರಣ ರೂಪಿನ ಹುಡುಗರನ್ನು ಕೇವಲ ಗುಣದ ಆಧಾರದ ಮೇಲೆ ಮೆಚ್ಚಿ ವರಿಸುತ್ತಿದ್ದ ಸುಂದರ ರಾಜಕುಮಾರಿಯರು ಕಥೆಯ ಕಟ್ಟಿನಿಂದ ಜಾರಿ ಹೋಗುತ್ತಿರಲಿಲ್ಲ. ಅಲ್ಲದೆ ಅಜ್ಜಿಯ ಗಂಟಲು ರಿಪೇರಿಯ ನೆಪದಲ್ಲಿ ನನ್ನ ಗಂಟಲೂ ಕಾಫಿಂದ ನೆನೆದು ಧನ್ಯವಾಗುತ್ತಿತ್ತು. ನಿಮ್ಮಲ್ಲಿ ಹಲವರೀಗ, ಏನು ಮಹಾ ! ನಾವು ಕಾಣದ ಕಾಫಿಯೇ ಅಂತ ಅಂದುಕೊಳ್ಳುತ್ತಿರ ಬಹುದು. ಕ್ಷಮಿಸಿ, ನಿಖರವಾಗಿ ಹಾಗೂ ನಿರ್ಧಿಷ್ಟವಾಗಿ ಇಲ್ಲಿಯೇ ನಿಮ್ಮನ್ನು ತಿದ್ದಲು ಬಯಸುತ್ತೇನೆ. ಇದು ನೀವು ಪ್ರತಿನಿತ್ಯ ಕುಡಿಯುವ ಸಕ್ಕರೆ ಕಾಫಿ ಅಲ್ಲ. ಅಥವಾ ಯಾವುದೊ ಬಲವಾದ ಕಾರಣಕ್ಕೆ ಕಟ್ಟು ಬಿದ್ದು ಕಾಫಿ ಡೇಯಲ್ಲಿ ಕುಡಿಯುವ ದುಬಾರಿ ಎಸ್ಪ್ರೆಸ್ಸೋ ಕಾಫಿಯೂ ಅಲ್ಲ. ಇದು ಸಾಧಾರಣ ಕರಿ ಬೆಲ್ಲದ ಕಾಫಿ. ಒಮ್ಮೆ ಮಾಡಿ ಕುಡಿದು ನೋಡಿ. ನೀವು ಅದರ ರುಚಿಯನ್ನು ಪ್ರಶಂಶಿಸದೇ ಇರಲು ಸಾಧ್ಯವಿಲ್ಲ. ಕರಿ ಕಾಫಿ ಕುಡಿಯಲು ಮನಸ್ಸಿಲ್ಲದವರು ಸ್ವಲ್ಪ ಹಾಲು ಬೆರೆಸಿಕೊಳ್ಳಿ, ನನ್ನದೇನೂ ಅಭ್ಯಂತರವಿಲ್ಲ. ಇದರ ರುಚಿ ನಿಮ್ಮೊಳಗೆ ತಣ್ಣಗೆ ಮಲಗಿರುವ ವ್ಯಾಪಾರಿಯನ್ನು ಬಡಿದೆಬ್ಬಿಸಲೂ ಸಾಕು. ಮುಂದೊಂದು ದಿನ ನೀವು ಕಾಫಿ ಡೇಯನ್ನು ಮೀರಿಸುವಂತಹ, ಅಪ್ಪಟ ದೇಸೀ ಶೈಲಿಯ, ಬೆಲ್ಲದ ಕಾಫಿಯ ಸರಣಿ ಅಂಗಡಿಗಳ ಯಶಸ್ವೀ ಮಾಲಿಕರೂ ಆಗಬಹುದು. ಹಾಗೇನಾದರೂ ಆದ ಪಕ್ಷದಲ್ಲಿ ದಯವಿಟ್ಟು ನನಗೆ ರಾಯಲ್ಟೀ ಕಳುಹಿಸಲು ಮರೆಯದಿರಿ.]]>

‍ಲೇಖಕರು G

May 6, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬಿರಿಯಾನಿಯಿಂದ ಫಿರ್ನಿವರೆಗೆ..

ಬಿರಿಯಾನಿಯಿಂದ ಫಿರ್ನಿವರೆಗೆ..

ಕೆ ಮುದ್ದುಕೃಷ್ಣ  ಮೈಸೂರಿಗರಿಗೆ ಒಂದು ಸಿಹಿ ಸುದ್ದಿ. ಬಹಳ ವರ್ಷಗಳಿಂದ ದೊಡ್ಡ ಚರ್ಚ್ ಬಳಿ ಮಾತ್ರವೇ ಇದ್ದ ಪ್ರಸಿದ್ದ “ನಶೇಮನ್” ಹೋಟೆಲ್ ಈಗ...

ಪೂಜೆ!!

ಪೂಜೆ!!

ಎಸ್.ಜಿ.ಶಿವಶಂಕರ್ ನನ್ನ ಚಡ್ಡಿ ಫ್ರೆಂಡು ಸುಬ್ಬು ಯಾನೆ ಸುಭಾಶ್ ಲಂಚ್‍ಗೆ ಮುಂಚೆ ಮನೆಗೆ ಹೋಗಿದ್ದು ತಿಳಿದು ಆತಂಕಗೊಂಡೆ. ಕಾರಣ...

ಇದು ನನ್ನ ಸವಾಲ್..

ಇದು ನನ್ನ ಸವಾಲ್..

ನಾಗೇಂದ್ರ ಶಾ  ಹೀಗೊಂದು ಹೋಟ್ಲು ರಾಜರಾಜೇಶ್ವರಿ ನಗರದಲ್ಲಿ. ಹೆಸರಿಗೂ ಒಳಗಿನ ಊಟ, ತಿಂಡಿಗೂ ಸಂಬಂಧವಿಲ್ಲ. ಒಳ ಹೊಕ್ಕರೆ ಅಪ್ಪಟ ದೇಸಿ ಊಟ....

8 ಪ್ರತಿಕ್ರಿಯೆಗಳು

 1. Veena Bhat

  ಮಕ್ಕಳಿಗೆ ಬೆಲ್ಲದ ನೀರು ..ದೊಡ್ಡವರಿಗೆ ಮಾತ್ರ ಕಾಫಿ ಇತ್ತು ಆವಾಗ …:) ಕಾಫಿಯ ಸಿಹಿ ಕಹಿ ನೆನಪುಗಳು….:) ಆತ್ಮೀಯ ಬರಹ …

  ಪ್ರತಿಕ್ರಿಯೆ
 2. suguna

  ಬೆಲ್ಲದ ಕಾಫಿ ನಾವು ಕುಡಿದಿದ್ದೇವೆ ನಮ್ಮ ಅಜ್ಜಿ ಮನೆಯಲ್ಲಿ ಮಾಡುತ್ತಲಿದ್ದರು… ತುಂಬಾ ಚೆನ್ನಾಗಿರುತ್ತೆ. ಅಂದಹಾಗೆ ನಿಮ್ಮ ನೆನಪಿನ ಕಾಫಿ ತಣ್ಣಗೇ ಹಾಗಿಲ್ಲ ನೋಡಿ ಇನ್ನೂ ಬಿಸಿಬಿಸಿಯಾಗಿದೆ.

  ಪ್ರತಿಕ್ರಿಯೆ
 3. D.RAVI VARMA

  ನಮ್ಮ ಬದುಕಿನ ಬಾಲ್ಯದ ಸುಖ, ಆ palavattada ಬದುಕು , ಆ ಕಥೆಗಳು, ಆ ಆಟಗಳು, ಎಲ್ಲವಿಂದ ಈ ಮಕ್ಕಳು ವಂಚಿತರಗುತಿದ್ದರಲ್ಲ, ಅನ್ನೋದೇ ಕೊರಗು ,ನಿಮ್ಮ ಸ್ವದಿಸ್ತ ಕಾಫ್ಫೀಯನ್ನು ನಾನು ತುಂಬಾ enjoymaadide ನಾನು ತಿತ್ಲೇ ನೋಡಿ ಏನೋ ಗುಂಡಿನ ಬಗ್ಗೆ ಬರೆದಿದ್ದೆರಿ ಅಂತಾ ತುಂಬಾ ಕುತೂಹಲದಿಂದ ಓದಿದೆ, ಅದು ನಮ್ಮಜ್ಜಿ ಕಥೆನೇ ನಾನಾಗ ದೊಡ್ಡ cupnalle ಕಾಫಿ ಕೇಳ್ತಿದ್ದೆ,, ಸ್ವಲ್ಪ ನೆಗಡಿ ಬಂದ್ರೆ ನಮ್ಮಮ್ಮ ಸೊಂಟಿ ಕಾಫಿ ಮಾಡಿಕೊದುತಿದ್ದಳು, ಕುಡಿಯೋದು ಸ್ವಲ್ಪ ಕಸ್ತವಗ್ತಾ ಇತ್ತು kududmele ಆ ನೆಗಡಿ,ಕೆಮ್ಮು ಓದಿಹೊಗಿರ್ತಿತ್ತು ಯಾವಾಗ್ಲಾದ್ರು ಬೆಲ್ಲದ ಕಾಫ್ಫೆ ಕುಡಿಯೋ ಆಶೆ ಆಗ್ತಿದೆ ,ಆದ್ರೆ………….
  ರವಿ ವರ್ಮ hosapete

  ಪ್ರತಿಕ್ರಿಯೆ
 4. Swarna

  ಈಗ ಕರಿಬೆಲ್ಲ ಹುಡುಕ ಬೇಕು 🙂
  ಚೆನ್ನಾಗಿದೆ
  ಸ್ವರ್ಣಾ

  ಪ್ರತಿಕ್ರಿಯೆ
  • Ashoka Bhagamandala

   ಓದಿದ ಮತ್ತು ಪ್ರತಿಕ್ರಿಯೆ ವ್ಯಕ್ತ ಪಡಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.

   ಪ್ರತಿಕ್ರಿಯೆ
 5. Murali Krishna Maddikeri

  ಹಾಸ್ಯ, ನೆನಪು, ಬಾಲ್ಯ ಇತ್ಯಾದಿ ನಮ್ಮ ಆಪ್ತ ವಿಷಯಗಳನ್ನ ಕಾಫಿ ಎನ್ನುವ ದಾರದಿಂದ ಪೋಣಿಸಿ ಸುಂದರವಾದ ಹೂಮಾಲೆಯನ್ನ ಕಟ್ಟಿದ್ದೀರಿ ಅಶೋಕ.. ಹೂವಿನ ಸೌಂದರ್ಯ, ಕೋಮಲತೆ ಮತ್ತು ಕಾಫಿಯ ವಿಶಿಷ್ಟ ಸುವಾಸನೆಯಿಂದ ಕೂಡಿದ ನಿಮ್ಮ ಈ ಲೇಖನ ತುಂಬಾ ಖುಷಿ ಕೊಟ್ಟಿತು.. ಬಾಲ್ಯದ ನೆನಪುಗಳನ್ನೂ ತಂದಿತು.. ಪದವಿಯ ಮೊದಲನೇ ವರ್ಷಕ್ಕೆ ಕಾಲಿಡುವವರೆಗೂ ಕಾಫಿಯನ್ನೇ ನಾನು ಕುಡಿದಿರಲಿಲ್ಲ.. ಆದರೆ ಮೈಸೂರಿನ ಕಾಫಿ ಪ್ರಿಯ ಸ್ನೇಹಿತರು ಮತ್ತು ಸ್ಥಳೀಯ ಸ್ನೇಹಿತರು ಮತ್ತು ಕುಟುಂಬಗಳಿಂದ ಕಾಫಿಯ ನಶೆ ಏರಿಸಿಕೊಂದುಬಿಟ್ಟೆ.. 🙂 ಸಂತೋಷ ಹಂಚಿಕೊಂಡಿದ್ದಕ್ಕೆ ಧನ್ಯವಾದ..

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ D.RAVI VARMACancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: