ಕುಪ್ಪಳಿ, ತೇಜಸ್ವಿ, ಪುಸ್ತಕ ಬಿಡುಗಡೆ, ಕವಿಶೈಲ, ಸೂರ್ಯಾಸ್ತ…

ಬಿ ಆರ್ ಸತ್ಯನಾರಾಯಣ ನನ್ದೊಂದ್ಮಾತು http://www.youtube.com/watch?v=2DOc504V6zs&feature=player_embedded ಕುಪ್ಪಳಿಯ ಹೇಮಾಂಗಣದಲ್ಲಿ ಎರಡು ಪುಸ್ತಕಗಳ ಬಿಡುಗಡೆಯ ಸಮಾರಂಭ. ಒಂದು, ರಾಜೇಶ್ವರಿಯವರ ನನ್ನ ತೇಜಸ್ವಿಯಾದರೆ, ಎರಡನೆಯದು ಕರೀಗೌಡ ಬೀಚನಹಳ್ಳಿಯವರ ತೇಜಸ್ವಿ ಬದುಕು ಮತ್ತು ಬರಹ. ಮದ್ಯಾಹ್ನ ವಿಚಾರಗೋಷ್ಠಿ. ಕಾರ್ಯಕ್ರಮಕ್ಕೂ ಮೊದಲು ತೇಜಸ್ವಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಒಂದು ನಿಮಿಷದ ಮೌನಾಚರಣೆಯಲ್ಲಿ ಅಲ್ಲಿದ್ದವರೆಲ್ಲಾ ಮುಳುಗಿದ್ದಾಗ, ಕಾಡಿನೊಳಗಿದ್ದ ಹಕ್ಕಿಗಳು ಮಾತ್ರ ಹಾಡುತ್ತಲೇ ಇದ್ದವು! ಜೀರುಂಡೆಗಳೂ ಸಹ! ನಂತರ ನಡೆದ ಸಮಾರಂಭದಲ್ಲಿ ಜಯಂತ ಕಾಯ್ಕಿಣಿ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಮಾತನಾಡುವಾಗ ನನ್ನ ತೇಜಸ್ವಿ ಎಂಬ ಶಿರ್ಷಿಕೆಯಲ್ಲಿ ಅಡಗಿರುವ ಆಪ್ತಭಾವವನ್ನು ಆತ್ಮೀಯವಾಗಿ ವ್ಯಾಖ್ಯಾನಿಸಿದರು. ರಾಜೇಶ್ವರಿಯವರೂ ಪ್ರತಿಕ್ರಿಯಿಸಿದರು. ತೇಜಸ್ವಿ ಹುಡಕಾಟದಲ್ಲಿದ್ದಾಗ, ರಾಜೇಶ್ವರಿಯವರೂ ಹಡುಕಾಟದಲ್ಲಿರುತ್ತಿದ್ದರು. ತೇಜಸ್ವಿ ಕಂಡಿದ್ದನ್ನು ತಾವೂ ಕಾಣುತ್ತಿದ್ದರು. ಒಂದು ಹೆಜ್ಜೆ ಮುಂದೆ ಹೋಗಿ, ಆ ಕ್ಷಣದ ತೇಜಸ್ವಿಯವರನ್ನು ಕಾಣುತ್ತಿದ್ದರು. ತೇಜಸ್ವಿ ಹಕ್ಕಿಗಳ ಭಾವನೆಗಳನ್ನು ಗ್ರಹಿಸುತ್ತಿದ್ದರೆ, ರಾಜೇಶ್ವರಿಯವರು ಅದರ ಜೊತೆಗೆ ತೇಜಸ್ವಿಯವರ ಭಾವನೆಗಳನ್ನೂ ಗ್ರಹಿಸುತ್ತಿದ್ದರು. ಅವೆಲ್ಲವುಗಳನ್ನು ಪುಸ್ತಕದಲ್ಲಿ ತುಂಬಾ ತುಂಬಾ ಆಪ್ತವಾಗಿ ದಾಖಲಿಸಿದ್ದಾರೆ. ತೇಜಸ್ವಿಯವರು ರಾಜೇಶ್ವರಿಯವರಿಗೆ ಬರೆದ ಪತ್ರಗಳನ್ನೂ ಪುಸ್ತಕದಲ್ಲಿ ಸಂಕಲಿಸಲಾಗಿದೆ. ಅವು ಆ ಕಾಲದ ಸಾಮಾಜಿಕ ಸಾಹಿತ್ಯಕ ವಿಚಾರಗಳನ್ನು ಒಳಗೊಂಡಿರುವ ವಿಶಿಷ್ಟ ದಾಖಲೆಗಳು!   ತಾರಿಣಿಯವರ ಮಗಳು ಕಂಡ ಕುವೆಂಪು ಕೃತಿ ಕುವೆಂಪು ಅವರನ್ನು ನಮ್ಮ ಸಮೀಪಕ್ಕೇ ತಂದು ನಿಲ್ಲಿಸಿತ್ತು. ಈಗ ರಾಜೇಶ್ವರಿಯವರ ನನ್ನ ತೇಜಸ್ವಿ ತೇಜಸ್ವಿಯವರನ್ನು ಇನ್ನಷ್ಟು ಮತ್ತಷ್ಟು ಸಮೀಪಕ್ಕೆ ತಂದು ನಿಲ್ಲಿಸುತ್ತಿದೆ! ಇಡೀ ಸಮಾರಂಭ ಆಪ್ತವಾಗಿ ನಡೆಯಿತು. ನಡುವೆ ಕುವೆಂಪು ಗೀತೆಗಳ ಗಾಯನ ಸುಮಧುರವಾಗಿತ್ತು. ಪ್ರೊ. ಚಿದಾನಂದಗೌಡ, ಶ್ರೀಮತಿ ತಾರಿಣಿ, ಕಡಿದಾಳು ಶಾಮಣ್ಣ, ಅವರ ಶ್ರೀಮತಿ ಶ್ರೀದೇವಿ, ಕಡಿದಾಳು ಪ್ರಕಾಶ್, ಶ್ರೀಕಂಠ ಕೂಡಿಗೆ, ರಾಜೇಂದ್ರ ಚೆನ್ನಿ, ಹಿ.ಚಿ.ಬೋರಲಿಂಗಯ್ಯ, ಕರೀಗೌಡ ಬೀಚನಹಳ್ಳಿ, ನರೇಂದ್ರ ದೇರ್ಲ, ಅಮರೇಶ ನುಗುಡೋಣಿ, ದಿವಾಕರ ಹೆಗಡೆ, ಜವಳಿ, ಈಶ್ವರಪ್ರಸಾದ್, ಜಾದವ್, ದೀಪಕ್, ಮಲ್ಲಕ್, ಕೃಷ್ಣಮೂರ್ತಿ ಹನೂರು, ನಾಗೇಶ, ಗಣಪತಿ, ರಮೇಶ್ ಇನ್ನೂ ಅನೇಕರಿಂದ (ಹೆಚ್ಚಿನವರ ಹೆಸರು ಗೊತ್ತಿಲ್ಲ) ಕೂಡಿದ್ದ ಸಭೆಯಲ್ಲಿ ತೇಜಸ್ವಿಯವರ ನೆನಪಿನೊಂದಿಗೆ ಹರಟೆ ನಗೆ ಸಂವಾದ ಎಲ್ಲವೂ ಸೇರಿಕೊಂಡಿತ್ತು. ಯುಗಾದಿ ಹಬ್ಬದ ಮಾರನೆಯ ದಿನವಾದರೂ ಸ್ಥಳೀಯರು ಸಾಕಷ್ಟು ಜನ ಭಾಗವಹಿಸಿದ್ದರು. ಕುಪ್ಪಳಿಯಲ್ಲಿದ್ದಷ್ಟೂ ಹೊತ್ತು, ಬೇರೊಂದು ಲೋಕದಲ್ಲಿದ್ದ ಅನುಭವ! ಬೆಂಗಳೂರಿನಲ್ಲಿ ಅವಸರದಿಂದ, ವಾಹನಗಳ ಶಬ್ದ, ಹೊಗೆಗಳ ನಡುವೆ ನಡೆಯುತ್ತಿದ್ದ ಪುಸ್ತಕ ಬಿಡುಗಡೆ ಸಮಾರಂಭಗಳನ್ನು ಕಂಡಿದ್ದ ನನಗೆ, ಕಾಡಿನ ನಡುವಿನಲ್ಲಿ, ಹತ್ತಾರು ಹಕ್ಕಿಗಳ, ಜೀರುಂಡೆಗಳ, ಆಗಾಗ ಬೀಸುವ ತಂಗಾಳಿಗೆ ಅಲುಗಾಡುವ ಸಸ್ಯಸಂಕುಲ-ಚೈತ್ರಕಾಲದ ಚಿಗುರಿನ ಕಲರವ-ದ ನಡುವೆ ನಡೆದ ಪುಸ್ತಕ ಬಿಡುಗಡೆ ಸಮಾರಂಭ ಹೊಸತೊಂದು ಲೋಕವನ್ನು ತೆರೆದಿಟ್ಟಿತ್ತು. ಅತ್ಯಂತ ಅಚ್ಚುಕಟ್ಟಾಗಿ ಸಮಾರಂಭವನ್ನು ಆಯೋಜಿಸಿದ್ದ ಶ್ರೀ ಕಡಿದಾಳು ಪ್ರಕಾಶ್ ನಿಜಕ್ಕೂ ಅಭಿನಂದಾರ್ಹರು.   ಸಂಜೆ ಕವಿಶೈಲದಲ್ಲಿ ಕಂಡ ಸೂರ್ಯಾಸ್ತ ಅತ್ಯದ್ಭುತವಾಗಿತ್ತು. ಕವಿಶೈಲದಲ್ಲಿ ಬಿ.ಎಂ.ಶ್ರೀ., ಟಿ.ಎಸ್.ವೆಂ., ಕುವೆಂಪು, ಪೂಚಂತೇ ಎಂದು ಕವಿಗಳ ಸ್ವಹಸ್ತಾಕ್ಷರವಿದೆ. ಕವಿಶೈಲವನ್ನು ಕುರಿತಂತೆ ಕುವೆಂಪು ಅವರ ಸಾಹಿತ್ಯದಲ್ಲಿ ನೂರಾರು ಪುಟಗಳ ದಾಖಲೆಯಿದೆ. ಕವಿಶೈಲ ಎಂಬ ಶಿರ್ಷಿಕೆಯ ಆರು ಕವಿತೆಗಳಲ್ಲದೆ, ಅಲ್ಲಿನ ಸೂರ್ಯಾಸ್ತವನ್ನು, ಕವಿಶೈಲದಿಂದ ಕಾಣುವ ಕುಂದಾದ್ರಿಯನ್ನು ಕುರಿತು ಹಲವಾರು ಕವಿತೆಗಳನ್ನು ನೋಡಬಹುದಾಗಿದೆ. ಓ ನನ್ನ ಪ್ರಿಯತಮ ಶೀಖರ ಸುಂದರನೆ, ನನ್ನ ಜೀವನಾನಂದ ನಿಧಿ ಕವಿತಾ ಮನೋಹರಿಯ ಪ್ರಥಮೋತ್ತಮಪ್ರಣಯಿ, ವನದೇವಿಯೈಸಿರಿಯ ಪೀಠ ಚೂಡಾಮಣಿಯೆ, ಓ ಕವಿಶೈಲ ಎಂದು ಕವಿಶೈಲವನ್ನು ಕುವೆಂಪು ಸಂಬೋಧಿಸಿದ್ದಾರೆ! ಅಲ್ಲಿಂದ ಕಾಣುವ ದೃಶ್ಯವನ್ನು ತೆರೆ ಮೇಲೆ ತೆರೆಯೆದ್ದು ಹರಿಯುತಿದೆ ಗಿರಿಪಂಕ್ತಿ ಕಣ್ದಿಟ್ಟಿ ಹೋಹನ್ನೆಗಂ. ಚಿತ್ರ ಬರೆದಂತೆ ಕಡಹಸುರು ತಿಳಿಹಸುರುಬಣ್ಣದ ಸಂತೆ ಎಂದು ಹಾಡಿದ್ದಾರೆ. ಮಿತ್ರರಿರ, ಮಾತಿಲ್ಲಿ ಮೈಲಿಗೆ! ಸುಮ್ಮನಿರಿ: ಮೌನವೆ ಮಹತ್ತಿಲ್ಲಿ, ಈ ಬೈಗುಹೊತ್ತಿನಲಿ ಕವಿಶೈಲದಲಿ. ಮುತ್ತಿಬಹ ಸಂಜೆಗತ್ತಲಲಿ ಧ್ಯಾನಸ್ಥಯೋಗಿಯಾಗಿದೆ ಮಹಾ ಸಹ್ಯಗಿರಿ! ಸಹ್ಯಾದ್ರಿ ಗಿರಿಪಂಕ್ತಿಯೇ ಧ್ಯಾನಕ್ಕೆ ಕುಳಿತಿರುವಂತೆ ಕಂಡಿರುವ ಕಲ್ಪನೆ ಅದ್ಭುತ! ಪಟ್ಟಣದಿ, ಬೀದಿಯಲಿ, ಮನೆಯಲ್ಲಿ, ಸರ್ವತ್ರ ಇದ್ದೆಯಿದೆ ನಿಮ್ಮ ಹರಟೆಯ ಗುಲ್ಲು! ಆ ಸಂತೆ ಇಲ್ಲೇಕೆ? ಪ್ರಕೃತಿ ದೇವಿಯ ಸೊಬಗು ದೇಗುಲದಿ ಆನಂದವೇ ಪೂಜೆ; ಮೌನವೇ ಮಹಾಸ್ತೋತ್ರ!  ]]>

‍ಲೇಖಕರು G

April 5, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ರಮಾಕಾಂತ್ ಆರ್ಯನ್‌ ಅವನು ಕಾಲ ಹೆಬ್ಬರಳ ತುದಿಯಲ್ಲಿ ವಿಶ್ವವನ್ನೇ ಪುಟಿಪುಟಿದು ಕುಣಿಸಿದವನು. ಫುಟ್ಬಾಲ್ ಅಂಗಳದಲ್ಲಿ ಅವನು ಓಡಿದ, ಓಡಾಡಿದ...

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಇಂದು ಸಂಜೆ ಜರುಗುವ 'ಅಮ್ಮ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಬೀದರ್ ನ ದೇಶಾಂಶ ಹುಡುಗಿ ಅವರು ಇನ್ನಿಲ್ಲ.....

3 ಪ್ರತಿಕ್ರಿಯೆಗಳು

  1. shiva prasad

    ತೇಜಸ್ವಿ ಯಾರನ್ನು ಬಿಟ್ಟು ಹೋಗಿಲ್ಲ..ಪ್ರಕೃತಿಯಲ್ಲಿ ಲೀನವಾಗಿಬಿಟ್ಟಿದ್ದಾರೆ…ತೇಜಸ್ವಿಯವರ ಬದುಕು,ಬರಹ,ಚಿಂತನೆಗಳನ್ನು ಅದ್ಯಯನ ಮಾಡುವುದು ಅದನ್ನು ಮುಂದುವರೆಸಿಕೊಂಟು ಹೋಗುವುದು ,..ನಾವು ಅವರಿಗೆ ಸಲ್ಲಿಸುವ ಗೌರವ..ನೀವೇನಂತೀರಿ..?

    ಪ್ರತಿಕ್ರಿಯೆ
  2. swathi gowda

    ತೇಜಸ್ವಿ ಮರೆಯಲಾಗದ ವ್ಯಕ್ತಿತ್ವ……ನನ್ನನ್ನು ಬಹುವಾಗಿ ಕಾಡಿದ ವ್ಯಕ್ತಿ ತೇಜಸ್ವಿ ಮಾತ್ರ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: