ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ…

ಚಿತ್ರ: ಸತ್ಯ ಹರಿಶ್ಚಂದ್ರ, ಗೀತೆರಚನೆ: ಹುಣಸೂರು ಕೃಷ್ಣಮೂತರ್ಿ
ಸಂಗೀತ: ಪೆಂಡ್ಯಾಲ ನಾಗೇಶ್ವರರಾವ್, ಗಾಯನ: ಘಂಟಸಾಲ ಮತ್ತು ವೃಂದ.
sathya-harishchandra-05
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ
ಮತದಲ್ಲಿ ಮೇಲ್ಯಾವುದೋ
ಹುಟ್ಟಿ ಸಾಯುವ ಹಾಳು
ಮನಸಾ ಮನಸನ ಮಧ್ಯೆ
ಕೀಳ್ಯಾವ್ದು ಮೇಲ್ಯಾವುದೋ, ಹುಚ್ಚಪ್ಪ ||ಪ||
ತಿಲಕ ಇಟ್ಟರೆ ಸ್ವರಗವು ಸಿಗದು
ವಿಭೂತಿ ಬಳಿದರೆ ಕೈಲಾಸ ಬರದು
ಇಟ್ಟ ಗಂಧ, ಬೂದಿ, ನಾಮ
ಚಟ್ಟ ಕಟ್ಟಲು ನಿರನಾಮ  ||1||
ಶೈವರಿಗೆಲ್ಲ ಶಿವ ದೊಡ್ಡೋನು
ವೈಷ್ಣವರಿಗೆ ಹರಿ ಸವರ್ೋತ್ತಮನು
ಉತ್ತಮ ಮಧ್ಯಮ ಅಧಮರೆಲ್ಲರೂ
ಸತ್ತ ಮೇಲೆ ಸಮರಾದಾರು  ||2||
ತಲೆಗೊಂದು ರೀತಿ ನೀತಿಯ ಜಾತಿಯ
ಹೇಳುವ ಜೋಗಿ, ಸಿದ್ಧರು, ಗುರುಗಳು
ಮಸಣದಲ್ಲಿ ಈ ವೀರಬಾಹುವ
ಕೈಯ ಮೇಲ್ಗಡೆ ಬೂದಿಯಾದರು  ||3||
1216646035
ಇದನ್ನು ನಮ್ಮ ಸಮಕಾಲೀನ ಸಂದರ್ಭದ ವ್ಯಂಗ್ಯ ಅನ್ನಬೇಕೋ, ಅವಜ್ಞೆ ಎಂದು ಕರೆಯಬೇಕೋ, ದುರಂತ ಎಂದು ಅರ್ಥ ಮಾಡಿಕೊಳ್ಳಬೇಕೋ ಅಥವಾ ವಿಪರ್ಯಾಸ ಎಂದು ಗೊಣಗಿಕೊಂಡು ಸುಮ್ಮನಾಗಬೇಕೋ ಗೊತ್ತಾಗುತ್ತಿಲ್ಲ. ಏಕೆಂದರೆ, ಅರ್ಥವಾಗದ ಪದ್ಯ ಬರೆದ ಅದೆಷ್ಟೋ ಮಂದಿಯನ್ನು `ಕವಿಗಳು’ ಎಂದು ಒಪ್ಪಿಕೊಂಡಿರುವ ನಮ್ಮ ಸಮಾಜ ಮತ್ತು ಜನರು, ಯಾವುದೇ ಭಾವಗೀತೆಗೂ, ಕವಿತೆಗೂ ಸರಿಸಮನಾಗಿ ನಿಲ್ಲುವಂಥ ಹಾಡು ಬರೆದ ಚಿತ್ರಸಾಹಿತಿಗಳನ್ನು `ಕವಿಗಳು’ ಎಂದು ಪರಿಗಣಿಸಲೇ ಇಲ್ಲ.
ಹುಣಸೂರು ಕೃಷ್ಣಮೂತರ್ಿಯವರು ಬರೆದ `ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ’ ಗೀತೆಯ ಬಗ್ಗೆ ಬರೆಯುವ ಸಂದರ್ಭದಲ್ಲಿ ಈ ಮಾತು ಹೇಳಿಬಿಡಬೇಕು ಎನ್ನಿಸಿತು. ನಾಲ್ಕೂವರೆ ದಶಕಗಳಿಂದಲೂ ಸೂಪರ್ ಹಿಟ್ ಸಾಂಗ್ ಆಗಿಯೇ ಉಳಿದಿರುವ ಈ ಗೀತೆ `ಸತ್ಯ ಹರಿಶ್ಚಂದ್ರ’ ಸಿನಿಮಾದ್ದು. ಈ ಹಾಡಿನ ಹಿಂದೆಯೇ ವೀರಬಾಹುವಿನ ಪಾತ್ರಧಾರಿ ಎಂ.ಪಿ. ಶಂಕರ್ ಅವರ ನೆನಪಾಗುತ್ತದೆ. ಈ ಹಾಡು ಬರುವ ಸನ್ನಿವೇಶದಲ್ಲಿ ಅವರು- `ತ್ತಿರಿ ತ್ತಿರಿ ತ್ತಿರಿ ತ್ತಿರಿ’ ಎಂದು ಹಾಡುತ್ತಾ, ಹುಬ್ಬು ಹಾರಿಸುತ್ತಾ, ಹಣೆಯ ನಿರಿಗೆಗಳನ್ನು ಚಿಮ್ಮಿಸುತ್ತಾ, ದೊಣ್ಣೆಯೊಂದನ್ನು ಅತ್ತಿಂದಿತ್ತ ತಿರುಗಿಸುತ್ತಾ ಅಡ್ಡಾದಿಡ್ಡಿ ಕುಣಿಯುವ ದೃಶ್ಯ ಕಣ್ಮುಂದೆ ಬಂದು ನಿಲ್ಲುತ್ತದೆ. ಮರುಕ್ಷಣವೇ, ಎಂಥ ಅರಸಿಕನಿಗೂ ವೀರಬಾಹುವಿನಂತೆಯೇ ಕುಣಿಯುವ ಮನಸ್ಸಾಗುತ್ತದೆ.
ಇದು `ಕುಲದಲ್ಲಿ ಕೀಳ್ಯಾವುದೋ…’ ಹಾಡಿಗಿರುವ ಶಕ್ತಿ. ಈ ಗೀತೆಯಲ್ಲಿ ತತ್ತ್ವವಿದೆ, ವೇದಾಂತವಿದೆ. ಸಮಾನತೆಯ ಸಂದೇಶವಿದೆ. ನಿಜವಾದ ದಲಿತ ಸಾಹಿತ್ಯವಿದೆ. ಕುಡುಕನೊಬ್ಬ ಹೇಳುವ ನಿಷ್ಠುರ ಸತ್ಯವಿದೆ. ಸಾವಿನ ಮುಂದೆ ಎಲ್ಲರೂ ಸಮಾನರು ಎಂಬ ಮಾತಿಗೆ ಸಾಕ್ಷಿಯಿದೆ.
ಈ ಅಪರೂಪದ, ಅದ್ಭುತ ಹಾಡು ಬರೆಯಲು ಸೂತರ್ಿ ನೀಡಿದ ಸಂದರ್ಭವಾದರೂ ಯಾವುದು? ಸದಾ ಮಸಣದಲ್ಲಿಯೇ ಇರುವ ವೀರಬಾಹುವಿನಂಥ ಆಸಾಮಿ, ವೇದಾಂತದ ಮಾತುಗಳನ್ನು ಹೇಳಲು ಹೇಗೆ ಸಾಧ್ಯ? ಸ್ಮಶಾನದಲ್ಲಿ ಅಡ್ಡಾಡಿಕೊಂಡಿರುವ ಆತ, ರೋದಾತ್ತ ನಾಯಕನಂತೆ ಕುಣಿಯುವುದು ಹೇಗೆ ಸಾಧ್ಯ? ಇಂಥವೇ ಕುತೂಹಲದ ಪ್ರಶ್ನೆಗಳಿಗೆ ಹುಣಸೂರು ಕೃಷ್ಣಮೂತರ್ಿಯವರು ಹೀಗೆ ಉತ್ತರಿಸಿದ್ದರು:
`ಹೇಳಿದರೆ ಅದೊಂದು ದೊಡ್ಡ ಕಥೆ. ನಮ್ಮ ತಂದೆಯವರ ಹೆಸರು ಮಧ್ವಾಚಾರ್ಯ ರಾಜಾರಾವ್. ಅವರು ಪಿಡಬ್ಲ್ಯುಡಿಯಲ್ಲಿ ನೌಕರಿಗಿದ್ದರು. ಅದು ಸ್ವಾತಂತ್ರ್ಯಪೂರ್ವದ ಕಾಲ. ಜಾತಿ ಪದ್ಧತಿ ಎಲ್ಲೆಲ್ಲೂ ಜೀವಂತವಾಗಿತ್ತು. ಈ ಸಂದರ್ಭದಲ್ಲಿಯೇ- `ಹರಿಜನರು ದೇವರ ಮಕ್ಕಳು. ಅವರೊಂದಿಗೆ ಒಡನಾಟ ಇಟ್ಟುಕೊಂಡರೆ ದೇವರಿಗೂ ಖುಷಿಯಾಗುತ್ತದೆ’ ಎಂದು ಮಹಾತ್ಮಗಾಂಜಿ ಘೋಷಿಸಿದ್ದರು. ಗಾಂಜಿಯವರ ಮಾತಿನಂತೆಯೇ ನಡೆದುಕೊಳ್ಳಲು ನಿರ್ಧರಿಸಿ, ಮನೆಗೆ ಹತ್ತಿರವಿದ್ದ ಹೋಟೆಲಿಗೆ ಹೋಗಿ ಎಲ್ಲರೊಂದಿಗೆ ಕಾಫಿ ಕುಡಿಯಲು ಆರಂಭಿಸಿದೆ.
ಕೆಲವೇ ದಿನಗಳಲ್ಲಿ ಈ ವಿಷಯ ನಮ್ಮ ತಂದೆಯವರಿಗೆ ಗೊತ್ತಾಯಿತು. ಕಟ್ಟಾ ಸಂಪ್ರದಾಯಸ್ಥರಾದ ಅವರು ಕಿಡಿಕಿಡಿಯಾದರು. ಅದೊಂದು ದಿನ ನನ್ನನ್ನು ಕರೆದು ಬೆನ್ನಿಗೆ ಎರಡು ಏಟು ಹಾಕಿ- `ನಾವು ಸಂಪ್ರದಾಯಸ್ಥ ಮಾಧ್ವ ಬ್ರಾಹ್ಮಣರು. ನೀನು ಹೋಟೆಲಿಗೆ ಹೋಗಿ ಅಲ್ಲಿರುವ ಎಂಜಲು ಕಪ್ಗಳಲ್ಲಿ ಕಾಫಿ ಕುಡಿಯುವ ವಿಷಯ ನಮ್ಮ ನೆಂಟರಿಗೆ, ಸ್ನೇಹಿತರಿಗೆ ಗೊತ್ತಾದ್ರೆ ಅವರೆಲ್ಲ ಗೇಲಿ ಮಾಡ್ತಾರೆ. ನಮ್ಗೆ ಬಹಿಷ್ಕಾರ ಹಾಕ್ತಾರೆ. ಅಂಥ ಸಂದರ್ಭ ಬಂದ್ರೆ ಮನೆ ಮಯರ್ಾದೆ ಬೀದಿಪಾಲಾಗುತ್ತೆ. ನೆನಪಿಟ್ಕೊ. ಇವತ್ತೇ ಕೊನೆ. ಇನ್ನೊಮ್ಮೆ ಹೋಟೆಲಿಗೆ ಹೋದ್ರೆ ಕಾಲು ಕತ್ತರಿಸಿಬಿಡ್ತೀನಿ’ ಎಂದು ಅಬ್ಬರಿಸಿದರು. ಈ ಸಂದರ್ಭದಲ್ಲಿಯೇ ಬಾಯಿ ಹಾಕಿದ ನಮ್ಮ ತಾಯಿಯವರು- `ಕೃಷ್ಣಾ, ನಿನಗೆ ಯಾವಾಗ ಬೇಕಾದ್ರೂ ಕೇಳು. ಇದ್ದಿಲು ಒಲೆ ಮೇಲೆ ನಾನೇ ಕಾಫಿ ಮಾಡಿ ಕೊಡ್ತೇನೆ’ ಎಂದರು.
ಆ ಕ್ಷಣಕ್ಕೆ ನನಗೆ ಅದೆಲ್ಲಿಂದ ಧೈರ್ಯ ಬಂತೋ ಕಾಣೆ. ಅಮ್ಮನಿಗೆ ಮುಖಕ್ಕೆ ಹೊಡೆದಂತೆ ಹೇಳಿಬಿಟ್ಟೆ. ಅಮ್ಮಾ, ನೀನು ಮಾಡೋ ಕಾಫಿ ಚೊಳನೀರು. ಆ ಹೋಟೆಲಲ್ಲಿ ಕೊಡುವ ಕಾಫಿ ಗಟ್ಟಿ ಇರ್ತದೆ, ಗೊತ್ತಾ?’
ನನ್ನ ಮಾತಿಂದ ಮತ್ತೂ ಸಿಟ್ಟಾದ ತಂದೆಯವರು- `ಮುಚ್ಚೋ ಬಾಯಿ. ಯಾರೋ ಕುಡಿದ ಎಂಜಲು ಲೋಟದಲ್ಲಿ ಅವನ್ಯಾರೋ ಕಾಫಿ ಕೊಡ್ತಾನಂತೆ. ಅದು ಚೆನ್ನಾಗಿರ್ತದಂತೆ. ಇನ್ನೊಂದ್ಸಲ ಹೀಗೇನಾದ್ರೂ ಮಾತಾಡಿದ್ರೆ ನಾಲಿಗೆ ಸೀಳಿಬಿಡ್ತೀನಿ. ಹುಷಾರ್’ ಎಂದು ಅಬ್ಬರಿಸಿದರು.
ಮುಂದೊಂದು ದಿನ, ಈ ಸಾಮಾಜಿಕ ಅನಿಷ್ಟದ ವಿರುದ್ಧ ಜಾಗೃತಿ ಮೂಡಿಸಬೇಕು ಎಂದು ಅವತ್ತೇ ನಿರ್ಧರಿಸಿದೆ. ಅದು ಕಾರ್ಯರೂಪಕ್ಕೆ ಬಂದದ್ದು `ಸತ್ಯ ಹರಿಶ್ಚಂದ್ರ’ದ ಮೂಲಕ.
1965ರಲ್ಲಿ ವಿಜಯಾ ಪ್ರೊಡಕ್ಷನ್ಸ್ನವರು ತೆಲುಗಿನಲ್ಲಿ `ಸತ್ಯ ಹರಿಶ್ಚಂದ್ರ’ ಸಿನಿಮಾ ತೆಗೆದರು. ಅದರಲ್ಲಿ ಎನ್ಟಿಆರ್ ನಾಯಕನ ಪಾತ್ರ ಮಾಡಿದ್ದರು. ಚಿತ್ರ ಜಯಭೇರಿ ಬಾರಿಸಿತು. ರಾಜ್ಕುಮಾರ್ರನ್ನು ಹೀರೊ ಮಾಡಿಕೊಂಡು ಅದೇ ಚಿತ್ರವನ್ನು ಕನ್ನಡದಲ್ಲಿ ನಿಮರ್ಿಸುವ ಯೋಚನೆ ವಿಜಯಾ ಫಿಲಂಸ್ನ ನಾಗಿರೆಡ್ಡಿ ಅವರಿಗೆ ಬಂತು. ನನಗೆ ನಿದರ್ೇಶನದ ಹೊಣೆ ಹೊರಿಸಿ- `ಖಚರ್ಿನ ಬಗ್ಗೆ ಯೋಚಿಸಬೇಡಿ. ತೆಲುಗಿನಲ್ಲಿ ಬಂದಿದೆಯಲ್ಲ? ಅದನ್ನು ಮೀರಿಸುವಂಥ ಸಿನಿಮಾ ಮಾಡಿ’ ಎಂದರು. ಅವರ ಮಾತು ಛಾಲೆಂಜಿಂಗ್ ಆನ್ನಿಸ್ತು. ಒಪ್ಪಿಕೊಂಡೆ. ನನ್ನ ಮೂರು ದಶಕದ ಅನುಭವವನ್ನೆಲ್ಲ ಜತೆಗಿಟ್ಟುಕೊಂಡು ಚಿತ್ರಕಥೆ-ಸಂಭಾಷಣೆ ಬರೆದೆ. ಅವತ್ತಿನ ಸಂದರ್ಭಕ್ಕೇ ಚಿತ್ರದ ಬಜೆಟ್ ಎಂಟು ಲಕ್ಷ ರೂಪಾಯಿ ತಲುಪಿತು…’
* * *
`ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ’ ಹಾಡು ಸೃಷ್ಟಿಯಾದ ಸಂದರ್ಭ ಹೀಗೆ: ಮದ್ರಾಸಿನ ವಾಹಿನಿ ಸ್ಟುಡಿಯೋದಲ್ಲಿ ಕೂತು, ತಮ್ಮ ಫೇವರಿಟ್ 555 ಸಿಗರೇಟು ಸೇದುತ್ತಾ, ಯಾವ್ಯಾವ ಹಾಡು ಎಲ್ಲಿ ಬರಬೇಕು? ಅವು ಹೇಗಿರಬೇಕು ಎಂದು ತಮ್ಮೊಳಗೇ ಲೆಕ್ಕಹಾಕುತ್ತಿದ್ದರು ಹುಣಸೂರು. ಆಗಲೇ, ಅವರಿಗೆ ವೀರಬಾಹುವಿನ ಹಾಡನ್ನು ಡಿಫರೆಂಟ್ ಆಗಿ ಬರೀಬೇಕು ಅನ್ನಿಸ್ತು. ಹೇಳಿ ಕೇಳಿ ಅವನು ಸದಾ ಸ್ಮಶಾನದಲ್ಲಿ ಇರುವ ಆಸಾಮಿ ತಾನೆ? ಹಾಗಾಗಿ ದಿನಕ್ಕೆ ಹತ್ತಾರು ವರೈಟಿಯ ಜನರ/ಧರ್ಮದವರ ಸಾವುಗಳನ್ನು ನೋಡಿಕೊಂಡೇ ಬದುಕ್ತಾ ಇರ್ತಾನೆ. ಈ ಕಾರಣದಿಂದಲೇ ಸಾವಿನ ಮುಂದೆ ಎಲ್ಲರೂ ಸಮಾನರು ಎಂಬ ಸತ್ಯ ಅವನಿಗೆ ಗೊತ್ತಾಗಿಬಿಟ್ಟಿರುತ್ತೆ. ಇಡೀ ದಿನ ಸ್ಮಶಾನದಲ್ಲೇ ಇರ್ತಾನಲ್ಲ, ಅದೇ ಕಾರಣದಿಂದ ಆತ ಚೆನ್ನಾಗಿ ಕುಡಿದಿರ್ತಾನೆ. ಕುಡಿದ ಮೇಲೆ ಹೇಳುವುದೇನಿದೆ? ಮಾತುಗಳು ಸರಾಗವಾಗಿ ಹೊರಬರುತ್ತವೆ. ಆತ ಹಾಡಿನ ಮೂಲಕವೇ ಮಾತಾಡುತ್ತಾನೆ.
ಹೀಗೆಲ್ಲ ಅಂದಾಜು ಮಾಡಿಕೊಂಡ ಹುಣಸೂರು, ಆ ವೇಳೆಗೆ ಮುಗಿದು ಹೋಗಿದ್ದ ಸಿಗರೇಟು ಆರಿಸಿ ಇನ್ನೊಂದನ್ನು ಹಚ್ಚಿದರು. ಆಗಲೇ- `ಯಾವ ಕುಲವೂ ಕೀಳಲ್ಲ, ಯಾವ ಮತವೂ ಮೇಲಲ್ಲ’ ಅನ್ನಿಸಿತು. ಮರುಕ್ಷಣವೇ `ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೋ’ ಎಂಬ ಭವ್ಯ, ದಿವ್ಯ ಸಾಲು ಹೊಳೆಯಿತು. ಹಿಂದೆಯೇ, ಹುಟ್ಟಿದವರೆಲ್ಲ ಕಡೆಗೊಂದು ದಿನ ಸೇರುವುದು ಒಂದೇ ಸ್ಮಶಾನ. ಹಾಗಿದ್ರೂ ನಾನು ಮೇಲು, ಅವನು ಕೀಳು ಅಂತಾರಲ್ಲ ಎಂಬುದು ನೆನಪಾಯಿತು. ತಕ್ಷಣವೇ, ಪಲ್ಲವಿಯ ಮತ್ತೆರಡು ಸಾಲು ಬರೆದರು ಹುಣಸೂರು.
ಪಲ್ಲವಿ ಮುಗಿಸಿ, ಅದಕ್ಕೆ `ತ್ತಿರಿ ತ್ತಿರಿ ತ್ತಿರಿ ತ್ತಿರಿ’ ಎಂಬ ಕುಣಿತದ ಭಾಷೆಯ ಟ್ವಿಸ್ಟ್ ನೀಡಿದವರಿಗೆ, ಅದರಲ್ಲಿ ಎಂಥದೋ ವಿಶೇಷ ಆಕರ್ಷಣೆ ಇದೆ ಎನಿಸಿ ಖುಷಿಯಾಯಿತು. ಮುಂದೆ, ಚರಣವನ್ನು ಹೇಗೆ ಶುರುಮಾಡುವುದು ಎಂದುಕೊಂಡಾಗ- ಚಿಕ್ಕಂದಿನಲ್ಲಿ ತಂದೆಯವರು ಗದರಿಸುತ್ತಾ- `ನಾವು ಮಾಧ್ವ ಬ್ರಾಹ್ಮಣರು. ನಮ್ಮದು ಶ್ರೇಷ್ಠ ಜಾತಿ. ನೀನು ಬೇರೆಯವರೊಂದಿಗೆ ಸೇರಬಾರದು’ ಎಂದಿದ್ದ ಮಾತು ನೆನಪಿಗೆ ಬಂತು. ಹಿಂದೆಯೇ, ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಜನರು ತಮ್ಮ ಜಾತಿಯ ಸಂಸ್ಕಾರದ ಪ್ರಕಾರ ತಿಲಕ ಇಡುವುದು, ವಿಭೂತಿ ಬಳಿಯುವುದು, ಗಂಧ ಹಚ್ಚುವುದು, ಕಪರ್ೂರ ಬೆಳಗುವುದು… ಇತ್ಯಾದಿಯೆಲ್ಲ ನೆನಪಾಯಿತು. ಸಾವಿನ ಮುಂದೆ ಹೀಗೆಲ್ಲ ವತರ್ಿಸುವುದರಲ್ಲಿ ಅರ್ಥವೇ ಇಲ್ಲ ಎಂದುಕೊಂಡ ಹುಣಸೂರು, ಅದನ್ನೇ ಎರಡು ಹಾಗೂ ಮೂರನೇ ಚರಣಗಳಲ್ಲಿ ಬರೆದರು. ಕುಡುಕರ ನಾಲಿಗೆ ಸರಿಯಾಗಿ ತಿರುಗುವುದಿಲ್ಲ ಎಂಬುದು ನೆನಪಾಗಿ `ಸ್ವರ್ಗ’ ಎಂಬುದನ್ನು `ಸ್ವರಗ’ ಎಂದೂ, `ನಿನರ್ಾಮ’ ಎಂಬುದನ್ನು `ನಿರನಾಮ’ ಎಂದೂ ಬದಲಿಸಿಕೊಂಡರು.
ಹಾಡು ಪೂತರ್ಿಯಾದ ನಂತರ, ತಾವೇ ಅದನ್ನೊಮ್ಮೆ ಓದಿ ಗಾಬರಿಯಾದರಂತೆ ಹುಣಸೂರು. ಏಕೆಂದರೆ ಹಾಡಿನಲ್ಲಿ ವೇದಾಂತದಂಥ ಸಾಲುಗಳಿದ್ದವು. ಆ ಕಾರಣದಿಂದಲೇ, ಸ್ಮಶಾನದಲ್ಲಿ ಇರುವವನೊಬ್ಬ ಹೀಗೆಲ್ಲ ಹೇಳಲು ಸಾಧ್ಯವೆ ಎಂದು ಅವರೇ ಯೋಚನೆಗೆ ಬಿದ್ದರು. ಆಗಲೇ- ವೀರಬಾಹುವಿನ ವೇಷದಲ್ಲಿ ಇದ್ದವನಾದರೂ ಯಾರು? ಯಮಧರ್ಮರಾಯ ತಾನೆ? ಎಂಬ ಅರಿವೂ ಅವರಿಗೆ ಬಂತು. ಆಗ ತಮಗೆ ತಾವೇ ಸಮಾಧಾನ ಮಾಡಿಕೊಂಡು- `ಯಮ ಹೇಗೆ ಬೇಕಾದ್ರೂ ಹೇಳಬಹುದು. ಹಾಗಾಗಿ ನಾನು ಬರೆದಿರೋದು ಸರಿಯಾಗೇ ಇದೆ’ ಎಂದುಕೊಂಡು ನಸುನಕ್ಕರಂತೆ ಹುಣಸೂರು.
ಈಗ ಹೇಳಿ, ಈ ಹಾಡು ಕೇಳುತ್ತಿದ್ದರೆ ನಾವೂ ಒಂದರೆಕ್ಷಣದ ಮಟ್ಟಿಗೆ ವೀರಬಾಹುವಿನ ಥರವೇ ಆಡುವುದಿಲ್ಲವೆ?

‍ಲೇಖಕರು avadhi

November 1, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This