ಕುವೆಂಪು ಕಾರಿಗೆ ಕೈಯಲ್ಲಿ ಬಡಿಗೆ ಹಿಡಿದು ದಾರಿಮಾಡಿಕೊಟ್ಟ ಎಸ್.ಎಂ.ಕೃಷ್ಣ!

ಡಿ ಪಿ ಸತೀಶ್ ಸಿ ಎನ್ ಎನ್- ಐ ಬಿ ಎನ್ ನಲ್ಲಿ ಸುದ್ದಿ ಸಂಪಾದಕ. ಕನ್ನಡದ ಹುಡುಗನೊಬ್ಬ ಅತಿ ಎತ್ತರಕ್ಕೆ ತಲುಪಿಕೊಂಡಿದ್ದಾನೆ. ಸದಾ ನಮ್ಮ ಅರೆಕೊರೆಗಳನ್ನು ತಿಳಿಸುವ, ಅಗತ್ಯವಿದ್ದಾಗಲೆಲ್ಲಾ ಬೆನ್ನು ತಟ್ಟುವ ಸತೀಶ್ ಕುವೆಂಪು ಬಗ್ಗೆ ವಿಶೇಷ ಸಂಚಿಕೆ ನೋಡಿ ತನ್ನ ನೆನಪುಗಳ ಗಣಿಯಿಂದ ಒಂದನ್ನು ಹೆಕ್ಕಿ ಕೊಟ್ಟಿದ್ದಾನೆ. ಅಪರೂಪದ ನೆನಪಿದು.
25
ಸುಮಾರು ಒಂದು ತಿಂಗಳ ಹಿಂದೆ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರ ಜೊತೆ ಫಾರಿನ್ ಸರ್ವೀಸಸ್ ಇನ್ಸ್ ಸ್ಟಿಟೂಟ್ ಅತಿಥಿಗೃಹಕ್ಕೆ ಮಧ್ಯಾಹ್ನದ ಊಟಕ್ಕೆ ಹೋಗುತ್ತಿದ್ದೆ. ಐಐಟಿ ಡೆಲ್ಲಿ ಹಿಂಭಾಗದ ಈ ಅತಿಥಿಗೃಹಕ್ಕೆ ಎಸ್.ಎಂ.ಕೃಷ್ಣರ ಸೌತ್ ಬ್ಲಾಕ್ ಕಚೇರಿಯಿಂದ ಸುಮಾರು 45 ನಿಮಿಷದ ಹಾದಿ. ಕಾರಿನಲ್ಲಿ ಅವರ ಪಕ್ಕ ಕುಳಿತಿದ್ದ ನಾನು ಮಲೆನಾಡು, ಶಿವಮೊಗ್ಗ ಮುಂತಾದ ವಿಷಯ ಮಾತನಾಡುತ್ತಿದ್ದೆ.
ಎಸ್.ಎಂ.ಕೃಷ್ಣರಿಗೆ ಗಂಭೀರ ವಿಷಯಗಳ ಬಗ್ಗೆ ಹರಟೆ ಹೊಡೆಯುವುದೆಂದರೆ ಎಲ್ಲಿಲ್ಲದ ಆಸಕ್ತಿ. ಗಂಭೀರ ಸ್ವಭಾವದವರಾದ ಕೃಷ್ಣ ಯಾರಿಗೂ ಸಲೀಸಾಗಿ ಸಲಿಗೆ ಕೊಡುವವರಲ್ಲ. ಒಮ್ಮೆ ಹತ್ತಿರವಾದರೆ ಅವರ ಬಳಿ ಮಾತನಾಡಲು, ಮುಕ್ತವಾಗಿ ಬೆರೆಯಲು ಯಾವುದೇ ಹಿಂಜರಿಕೆ ಉಂಟಾಗುವುದಿಲ್ಲ. ಅವರದ್ದು ಅಷ್ಟು ಸಲೀಸಾದ, ಸಹಜವಾದ, ಸ್ನೇಹಮಯ ಗುಣ. ಅದೆಷ್ಟೋ ವರ್ಷಗಳ ಸಲಿಗೆಯಿಂದ ಅವರ ಬಳಿ ನೇರವಾಗಿ ಮಾತನಾಡುವ ಧೈರ್ಯ, ಅಧಿಕಾರ ನನಗೆ ಬಂದಿದೆ ಎಂದುಕೊಳ್ಳುತ್ತೇನೆ. ಒಮ್ಮೊಮ್ಮೆ ನಾವು ಮಾತನಾಡದ ವಿಷಯವೇ ಇಲ್ಲ.
ಆದಿನ ನಮ್ಮ ಮಾತು ಕುವೆಂಪು ಬಗ್ಗೆ ತಿರುಗಿತು. ಕುವೆಂಪು ಬಗ್ಗೆ ಕೃಷ್ಣರಿಗೆ ಅಪಾರ ಅಭಿಮಾನ, ಹೆಮ್ಮೆ.
ನಾನು ಕೇಳಿದೆ ‘ ಸರ್, ಕುವೆಂಪು ನಿಮ್ಮ ಗುರುಗಳಾಗಿದ್ದರ? ‘.
ಕೃಷ್ಣ ಉತ್ತರಿಸಿದರು ‘ ಇಲ್ಲ. ನಾನು ಮೈಸೂರಿನಲ್ಲಿ ಓದುತ್ತಿದ್ದಾಗ, ಕುವೆಂಪು ಅವರು ಕನ್ನಡ ಆನರ್ಸ್ ವಿಧ್ಯಾರ್ಥಿಗಳಿಗೆ ಮಾತ್ರ ಪಾಠ ಮಾಡುತ್ತಿದ್ದರು. ನಮಗೆಲ್ಲಾ ಅವರ ಬಗ್ಗೆ ಅತೀವ ಗೌರವ, ಅಷ್ಟೇ ಹೆದರಿಕೆ. ಅವರು ಯಾರ ಬಳಿಯೂ ಮಾತನಾಡುತ್ತಿರಲಿಲ್ಲ. ಸದಾ ಗಂಭೀರವಾಗಿ ಯೋಚಿಸುತ್ತಾ ಇರುತ್ತಿದ್ದರು. ಅವರ ಮನೆಯಿದ್ದದ್ದು, ಒಂಟಿಕೊಪ್ಪಲ್ ನಲ್ಲಿ. ಅದಾಗ ಬರೀ ರೈತರೇ ವಾಸವಾಗಿದ್ದ ಜಾಗ. ಅವರ ಹತ್ತಿರ ಸಣ್ಣ ಫ್ರಿಫೆಕ್ಟ್ ಕಾರಿತ್ತು. ಅವರೇ ಅದನ್ನು ಡ್ರೈವ್ ಮಾಡಿಕೊಂಡು ಬರುತ್ತಿದ್ದರು. ಹೇಳಿ-ಕೇಳಿ ಒಂಟಿಕೊಪ್ಪಲ್ ಹಳ್ಳಿ ಜನರಿದ್ದ ಜಾಗ. ಅಲ್ಲಿನ ದನ, ಕರುಗಳೆಲ್ಲಾ ದಾರಿಗಡ್ಡವಾಗಿ ಕುವೆಂಪು ಕಾರಿಗೆ ಜಾಗ ಬಿಡುತ್ತಿರಲಿಲ್ಲ. ಕುವೆಂಪು ಜೋರಾಗಿ ಹಾರ್ನ್ ಮಾಡುತ್ತಿದ್ದರೇ ಹೊರತು ಯಾರೊಡನೆಯೂ ಮಾತನಾಡುತ್ತಿರಲಿಲ್ಲ. ಕುವೆಂಪು ಬರುವುದನ್ನೆ ಕಾದಿರುತ್ತಿದ್ದ ನಾವೆಲ್ಲಾ ಕೈಯಲ್ಲಿ ಕೋಲಿಡಿದು ಈ ದನ, ಕರು, ಕುರಿಗಳನ್ನೆಲ್ಲಾ ಓಡಿಸಿ ಅವರಿಗೆ ದಾರಿಮಾಡಿಕೊಡುತ್ತಿದ್ದೆವು. ಅವರು ಸಣ್ಣದಾಗಿ ನಕ್ಕು ನಮ್ಮ ಉಪಕಾರಕ್ಕೆ ಪ್ರತಿಕ್ರಿಯಿಸುತ್ತಿದ್ದರು. ನಮಗೋ ಕುವೆಂಪು ಅವರಂತಹಾ ಮಹಾನ್ ಗುರುಗಳಿಗೆ, ಕವಿಗಳಿಗೆ ಕಾರು ಓಡಿಸಲು ಜಾಗಮಾಡಿಕೊಟ್ಟ ಧನ್ಯಭಾವ. ನಾನು 70 ರ ದಶಕದಲ್ಲಿ ದೇವರಾಜ ಅರಸರ ಸಂಪುಟದಲ್ಲಿ ಹಣಕಾಸು ಸಚಿವನಾಗಿದ್ದಾಗ ಕುವೆಂಪು ಅವರಿಗೆ ಈ ಬಗ್ಗೆ ಹೇಳಿದ್ದೆ. ಅವರು ನಸು ನಗುತ್ತಾ, ಗೊತ್ತು, ನನಗೆ ಗೊತ್ತು. ನೀವು ಕೋಲಿಡಿದು ದನ, ಕರು, ಕುರಿ ಓಡಿಸಿ, ನನ್ನ ಕಾರಿಗೆ ದಾರಿಕೊಡುತ್ತಿದ್ದುದು ಗೊತ್ತು ಎಂದಿದ್ದರು.’
ಕೃಷ್ಣ ಇನ್ನೂ ಏನೋ ಹೇಳುತ್ತಿದ್ದರೇನೋ. ಅಷ್ಠರಲ್ಲೇ ಅವರ ಅತಿಥಿಗೃಹ ತಲುಪಿಯಾಗಿತ್ತು. ಮಾತು ಮೈಸೂರಿನಿಂದ ವಾಷಿಂಗ್ಚನ್ ನತ್ತ ತಿರುಗಿತು.
ಇನ್ನೊಮ್ಮೆ ಕೃಷ್ಣರ ಜೊತೆ ವಿಮಾನದಲ್ಲಿ ಕುಳಿತಾಗ ಅವರು ಕುವೆಂಪು ಬಗ್ಗೆ ಹೇಳುವುದನ್ನೆಲ್ಲಾ ದಾಖಲಿಸಬೇಕೆಂದಿದ್ದೇನೆ. ಏಕೆಂದರೆ ಎಸ್.ಎಂ.ಕೃಷ್ಣ ಹಳೆ ಮೈಸೂರಿನ ಕತೆಗಳ ಕಣಜ. ಅವರಿಗೆ ಗೊತ್ತಿಲ್ಲದ ವ್ಯಕ್ತಿಗಳಿಲ್ಲ, ತಿಳಿಯದ ವಿಷಯಗಳಿಲ್ಲ. ವಿಮಾನದಲ್ಲಿ ಮೊಬೈಲ್ ಪೋನ್ ಕಾಟವೂ ಇಲ್ಲ.

‍ಲೇಖಕರು avadhi

November 12, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

 1. Santhosh Ananthapura

  wonderful idea Sir… you must record all those stories… you rightly said Mr. SMK is – ” ಹಳೆ ಮೈಸೂರಿನ ಕತೆಗಳ ಕಣಜ” I wish you all the best…..expecting the same very soon…

  ಪ್ರತಿಕ್ರಿಯೆ
 2. Rajanna

  ಕೃಷ್ಣ ಮತ್ತು ಕುವೆಂಪು ಅವರ ಮತ್ತಷ್ಟು ವಿಷಯಗಳನ್ನು ತಿಳಿಯುವ ಆಸೆ ಇದೆ. ವಿಶೇಷತೆಗಳನ್ನು ತಿಳಿಸಿಕೊಟ್ಟ ತಮಗೆ ಧನ್ಯವಾದಗಳು

  ಪ್ರತಿಕ್ರಿಯೆ
 3. ಶಿವ

  ನೀವು ಬರೆದುದನ್ನು ಓದುತ್ತಿರುತ್ತೇನೆ.ಯಾವತ್ತೂ ಕಮೆಂಟ್ ಮಾಡ್ಲಿಲ್ಲ.ಕುವೆಂಪು ಬಗ್ಗೆ, ಮೈಸೂರಿನ ಬಗ್ಗೆ, ಕರ್ನಾಟಕದ ಬಗ್ಗೆ ಎಸ್.ಎಂ.ಕೃಷ್ಣ ಹೇಳುವುದನ್ನ ನಮಗೆ ಹೇಳಿ!! 🙂
  ನಿಮ್ಮ ಕಾಶ್ಮೀರಿ ಡೈರಿ ಏನಾಯಿತು? ಅದನ್ನು ಬರೆಯಿರಿ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: