ಕುವೆಂಪು 'ದೋಣಿಯ ಹಾಡು'

ಹೊಸ ‘ಸಂಚಯ’ ಬಂದಿದೆ. ನೆರೆಯ ಬದುಕಿನಲ್ಲಿ ನೊಂದವರಿಗೆ ಸಾಂತ್ವನ, ನೆಮ್ಮದಿ ಬಯಸಿ ಈ ಸಂಚಿಕೆ ರೂಪಿಸಲಾಗಿದೆ. ಮಲ್ಲಿಕಾರ್ಜುನ ಮನ್ಸೂರ್ ಹಾಗೂ ಬಿ ವಿ ಕಾರಂತ ಅವರ ಅಪರೂಪದ ಫೋಟೋಗಳಿವೆ. ರವೀಂದ್ರನಾಥ    ಟ್ಯಾಗೂರರ ‘ಭಾರತದಲ್ಲಿ ರಾಷ್ಟ್ರೀಯವಾದ’ ಲೇಖನವನ್ನು ಪತ್ರಕರ್ತ ಜಯಪ್ರಕಾಶ್ ನಾರಾಯಣ್ ಅನುವಾದಿಸಿದ್ದಾರೆ. ಸಾಕಷ್ಟು ಪುಸ್ತಕ ವಿಮರ್ಶೆಗಳಿವೆ.. ಎಲ್ಲಕ್ಕಿಂತ ಹೆಚ್ಚಾಗಿ ಕುವೆಂಪು, ಬೇಂದ್ರೆ, ಗೋಕಾಕರ ಬಗ್ಗೆ ಭಿನ್ನ ರೀತಿಯ ಬರಹಗಳಿವೆ. ಎಲ್ಲರೂ ಈ ಸಂಚಿಕೆ ತಪ್ಪದೆ ಓದಿ ಎನ್ನುತ್ತಾ ಅಲ್ಲಿನ ಒಂದು ಬರಹ ನಿಮಗಾಗಿ-
-ಬಿ.ಟಿ. ಗೋವಿಂದಯ್ಯ
1930ರ ಕಾಲ. ನಾನಾಗ ಮೈಸೂರು ಮಹಾರಾಜ ಕಾಲೇಜಿನಲ್ಲಿ ಕೊನೆಯ ವರ್ಷದ ಬಿ.ಎ. ವಿದ್ಯಾಥರ್ಿ. ರಾಷ್ಟ್ರಕವಿ ಕೆ.ವಿ. ಪುಟ್ಟಪ್ಪನವರು ಎಂ.ಎ. ತರಗತಿಯ ವಿದ್ಯಾಥರ್ಿ. ತರುಣ ಕವಿಯೆಂದು ಪ್ರಸಿದ್ಧರಾಗಿದ್ದರು. ‘ಬೊಮ್ಮನ ಹಳ್ಳಿಯ ಕಿಂದರಜೋಗಿ’, ಕವನ ಸಂಗ್ರಹ ‘ಕೊಳಲು’, ಕಿರಿಯ ನಾಟಕ ‘ಯಮನಸೋಲು’ ಆ ವೇಳೆಗೆ ಬೆಳಕು ಕಂಡಿದ್ದವು. ‘ಬೆಳೆಯುವ ಪೈರು ಮೊಳಕೆಯಲ್ಲಿಯೇ ತೋರುವುದು’ ಎಂಬ ಗಾದೆಗನುಗುಣವಾಗಿ ಕುವೆಂಪುರವರ ತೇಜಸ್ಸು ಹೊರಹೊಮ್ಮಿ ತೋರುತ್ತಿತ್ತು. ಶುಭ್ರವಾದ ಸರಳ ಬಿಳಿ ಜುಬ್ಬ ಪಂಚೆ ಕಚ್ಚೆ ಇಲ್ಲವೇ ಬಿಳೀ ಷರಾಯಿ ಪಾದರಕ್ಷೆ, ತಲೆ ತುಂಬ ಗುಂಗುರಾದ ಕಪ್ಪು ಕೂದಲು, ಗೌರವರ್ಣ, ಸುಂದರ ಮಂದಸ್ಮಿತ ಮುಖ, ಆಕರ್ಷಣೀಯವಾಗಿದ್ದವು. ವ್ಯಕ್ತಿತ್ವಕ್ಕೆ ಸರಿಯಾದ ನಡೆ-ನುಡಿ. ಮಿತ ಭಾಷಿ, ಮುಕ್ತ ಸಂಗಿ-ಒಂಟಿಕೊಪ್ಪಲಿನ ಶ್ರೀ ರಾಮಕೃಷ್ಣಾಶ್ರಮ ವಸತಿ, ಏಕಾಂತ ನಿವಾಸ. ಸೂಯರ್ೋದಯಕ್ಕೆ ಮುನ್ನ ಎಚ್ಚೆತ್ತು, ಆಶ್ರಮದಿಂದ ಹೊರಟು ಕುಕ್ಕನಹಳ್ಳಿ ಕರೆ ದಂಡೆಯ ಕಿರಿದಾದ ನೇರವಾದ ಕೆಮ್ಮಣ್ಣಿನ ದಾರಿಯಲ್ಲಿ ಕೆರೆಯಂತ್ಯದವರೆಗೆ ಬಿರುಸು ನಡಿಗೆಯ ವ್ಯಾಯಾಮದ ಹವ್ಯಾಸವಿಟ್ಟುಕೊಂಡಿದ್ದರು. ಮಸುಕು ಮಸುಕಾಗುತ್ತಿರುವ ನನ್ನ ಮನಃಪಟಲದ ಚಿತ್ರವನ್ನೀಗ ಮುಂದಿಡುತ್ತೇನೆ.
ಕಾಲೇಜಿನ ದೋನಿ ಕಲಾಪ ಮತ್ತು ಈಜುಗಾರಿಕೆಯ ವಿಭಾಗಕ್ಕೆ ನಾನು ಕ್ಯಾಪ್ಟನ್ನಾಗಿದ್ದೆ. ದಿನ ನಿತ್ಯ ಬೆಳಗಿನ ಜಾವ ಐದು ಗಂಟೆಗೆ ಮುನ್ನ ಎದ್ದು ಸಂಗಡಿಗರೊಡನೆ ಕಾಲೇಜಿನ ಕ್ರೀಡಾ ಮೈದಾನಕ್ಕೆ ಹೋಗಿ, ಕಟ್ಟಡದ ಬಾಗಿಲು ತೆಗೆದು, ಗೋಪಾಲಿಯೆಂಬ ಹೆಸರಿನ ಕಾವಲುಗಾರನ ನೆರವಿನಿಂದ ದೋಣಿಯ ಉಪಕರಣಗಳಾದ ಚುಕ್ಕಾಣಿ, ಹುಟ್ಟು, ಸಟ್ಟುಗ, ಲಾಳದಾಕೃತಿಯ ಸಟ್ಟುಗದ ಕಡಾಣಿಗಳನ್ನು ಕೊಂಡೊಯ್ದು ದೋಣಿಯ ಬೀಗ ಕಳಚಿ, ಉಪಕರಣಗಳಿಂದ ಸಜ್ಜುಗೊಳಿಸಿ ನಮ್ಮ ಉಡುಪು ಕಳಚಿ ಈಜು ಪೋಷಾಕಿನಲ್ಲಿ ಅರೆಬೆತ್ತಲೆ ಬೆಸ್ತರಾಗಿ ದೋಣಿ ಏರುತ್ತಿದ್ದೆವು. ಐದು ಹುಟ್ಟುಗಳ ಕ್ರಮಬದ್ಧವಾದ ಬಿರುಸಾದ ನೀರಿನ ಮೊಗೆತ, ಅಂಚಿನ ಆಸನದಲ್ಲಿ ಕುಳಿತ ಚುಕ್ಕಾಣಿಯವನ ಚಲನ ನಿಯಂತ್ರಣ, ವಿಶಾಲ ಕೆರೆನೀರಿನ ಮೇಲೆ ಪ್ರಶಾಂತವಾದ ಅರುಣೋದಯದ ಸಂಧ್ಯಾಕಾಲದಲ್ಲಿ ಏಕೈಕ ದೋಣಿಯಲ್ಲಿದ್ದ ತರುಣ ವಿದ್ಯಾಥರ್ಿಗಳಿಗೆ ಕೊಲ್ರಿಜ್ ಮಹಾಕವಿಯ —–ಎಂಬ ಪ್ರಾಸರಸ ಭರಿತ ಚರಣಗಳು ಸ್ಮರಣೆಗೆ ಬರುತ್ತಿದ್ದವು. ಎತ್ತರದ ಕೆರೆ ದಿಣ್ಣಿಯಿಂದ ಆ ನೋಟ ಬಲು ರಮ್ಯವಾಗಿ ಕಾಣಿಸುತ್ತಿದ್ದಿರಬೇಕು. ನಗರದ ವಿದ್ಯುದ್ದೀಪವಿನ್ನೂ ಆರಿಲ್ಲ. ಭವ್ಯವಾದ ಚಾಮುಂಡಿ ಬೆಟ್ಟದ ಸಾಲು ದೀಪಗಳ ನೋಟ ಕನಕ ಹೂಮಾಲೆಯಂತೆ ಕಾಣುತ್ತಿದೆ. ಅತ್ತ ದೂರ ತೀರದ ಕಾಂತ ರಾಜರಸಿನವರ ಮನೆ-ಅದರ ಪ್ರಾಕಾರಗಳು ಕೆರೆ ನೀರಿನಲ್ಲಿ ಪ್ರತಿ ಬಿಂಬಿತವಾಗಿವೆ.
ತರುಣ ಕವಿ ಕುವೆಂಪು ನಿಂತು ನೋಡಿದರು-ನಾವೂ ಅವರನ್ನು ನೋಡಿದೆವು. ಗೌರವಾನ್ವಿತ ವ್ಯಕ್ತಿಯಲ್ಲವೇ? “ಬತರ್ೀರಾ ಬನ್ನಿ” ಎಂದು ಕವಿಗೆ ನಾನು ಆಹ್ವಾನವಿತ್ತೆ. ದೋಣಿಯನ್ನು ನಾವಿಕರು ದಂಡೆಯ ಸಮೀಪ ತಂದರು-ಮುಗುಳ್ನಗು ಬೀರುತ್ತಾ ಪುಟ್ಟಪ್ಪನವರು ಮೆಟ್ಟಲುಗಳನ್ನಿಳಿದು ಬಂದರು. -ನೀರಿನಲ್ಲಿಳಿದು ದೋಣಿಯನ್ನು ಹಿಡಿದು ಅವರಿಗೆ ದೋಣಿ ಏರಲು ನೆರವಾದೆ- ಅಲುಗಾಡುತ್ತಿದ್ದ ದೋಣಿಯಲ್ಲಿ ತಡವರಿಸುತ್ತಾ ಅವರು ಕೊನೆಯಂಚಿನ ಅತಿಥಿ ಆಸನದಲ್ಲಿ ಕುಳಿತರು. ದೋಣಿ ದಡ ಬಿಟ್ಟಿತು-ಅದರ ಚಲನ ವೇಗ ತೀವ್ರವಾಯಿತು-ಐವರು ಹುಟ್ಟು ಹಿಡಿದವರು ಕ್ರಮಬದ್ಧವಾಗಿ ಸಟ್ಟುಗ ಮೊಗೆಯಲಾಗಿ ಕಡಾಣಿಯ ಠಕ್ ಠಕ್ ಸದ್ದು, ಸೀಳುವ ನೀರಿನ ಸುಯ್ಯಿ, ತಾಳಮೇಳವಾಯಿತು. ಕವಿಯ ಕುಂಡಲಿನಿ ಶಕ್ತಿ ಕುದುರಿತು. ಹೆಚ್ಚಿನ ಮಾತಿಲ್ಲ. ಅವರ ಭಾವೋನ್ಮುಖವಾದ ಶ್ರೀವದನದಿಂದ ‘ಗೋವಿಂದಯ್ಯ, ನೋಡಿ, ಹುಟ್ಟು ಹಾಕಲು ಈ ಪದಗಳ ನೆರವಾದಿತ್ತೇ? ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ’ ಎಂದರು. ಸಟ್ಟುಗ ಹಿಡಿದು ನೀರು ಮೊಗೆತಕ್ಕೆ ನಾನು ಕುಳಿತೆ. ಕುವೆಂಪು ಧ್ವನಿಗೂಡಿಸಿದರು. ತಾಳ ಸರಿಗೂಡಿತು. ‘ಬಲು ಸೊಗಸು ಜೋಡಿ’ ಎಂದೆ. ಶ್ರೀ ಪುಟ್ಟಪ್ಪನವರು ಸಶ್ರಾವ್ಯವಾಗಿ ಹಾಡುತ್ತಾರೆ. ಹಾಡಿದರು. ಕವಿಯ ಹೃದಯದಲ್ಲಿ ಹೊತ್ತು ಬ್ರಾಹ್ಮೀ ಮುಹೂರ್ತದಲ್ಲಿ ದೋಣಿ ವಿಹಾರ ವೈಭವೋಪೇತವಾಗಿತ್ತು. ಕುವೆಂಪು ಅತಿಥಿಯಲ್ಲ, ಆಗಂತುಕನಲ್ಲ ನಮ್ಮ ಕೂಟಕ್ಕೆ ಸೇರಿಹೋದವರೆಂದೆನಿಸಿತು. ಆನಂದದ ವಾತಾವರಣದಲ್ಲಿ ನಾವೆಲ್ಲರೂ ಮೈಮರೆಯುತ್ತಿದ್ದೆವು. ಏನೊಂದು ಸಿಹಿ!
ಗಂಧದ ಮರವಿದ್ದಲ್ಲಿ ಘಟಸರ್ಪ, ಗನಿಯಿದ್ದಲ್ಲಿ ಭೂತ, ಕಾಲನಿಗೆ ಅಸೂಯೆಯಿದೆ. ನಮ್ಮ ಆನಂದವನ್ನು ಮೊಟಕುಗೊಳಿಸಿದ. ಕುವೆಂಪು ಚುಕ್ಕಾಣಿ ಹಿಡಿದರು. ಪರಿಣತರಾದರು. ಹುಟ್ಟು ಹಾಕುವುದನ್ನು ಕಲಿಯಬೇಕು. ನಾನು ವಿವರ ಹೇಳಿಕೊಟ್ಟೆ. ಸಟ್ಟುಗ, ನೀರೊಳಗೆ ಸಾಕಷ್ಟು ಅದ್ದಿ ಮೊಗೆತದ ಸೆಳೆತಕ್ಕೆ ಸಿಗಬೇಕು ಇಲ್ಲವಾದರೆ ಕಡಾಣಿಯಿಂದ ಜಾರಿ ದೇಹಕ್ಕೆ ಅಪ್ಪಳಿಸೀತು ಎಂಬ ಎಚ್ಚರ ಕೊಟ್ಟಿದ್ದೆ. ಒಂದೇ ಸಾಲಿನಲ್ಲಿ ಈರ್ವರು ಕುಳಿತು ಎರಡು ಬದಿಯಿಂದಲೂ ಹುಟ್ಟು ಹಾಕಬಹುದಿತ್ತು. ನಾನು ಜತೆ ಕುಳಿತು ಪ್ರಾಯೋಗಿಕ ಅಭ್ಯಾಸಕ್ಕೆ ಅನುವು ಮಾಡಿದೆ. ಪುಟ್ಟಪ್ಪನವರು ಸಟ್ಟುಗ ಹಿಡಿದು ಹುಟ್ಟು ಹಾಕಿದರು. ಸರಿದೋರಿತು. ಕವಿಯ ಬಾಯಲ್ಲಿ ಸ್ವರ ಮೂಡಿತು. ‘ಭಾವನಾ ಪ್ರಪಂಚಕ್ಕೇರದೆ ವಾಸ್ತವ ಪ್ರಪಂಚದಲ್ಲಿರಬೇಕು ಪುಟ್ಟಪ್ಪನವರೇ-ಸಟ್ಟುಗ ಅಣಿಯಿಂದ ಜಾರೀತು’ ಎಂದು ನಾನು ಹೇಳುವಷ್ಟರಲ್ಲಿ, ಕುವೆಂಪು ಹಿಡಿದಿದ್ದ ಸಟ್ಟುಗ ‘ಹಿಮಮಣಿ’ ಸೆಳೆತಕ್ಕೆ ಲಾಳದಿಂದ ಹೊರ ಚಿಮ್ಮಿತು. ಬಾಗಿ ಎಳೆಯುತ್ತಿದ್ದ ತರುಣ ಕವಿ ಧೊಪ್ಪನೆ ದೋಣಿಯ ತಳಕ್ಕೆ ಬಿದ್ದರು- ಹಲಗೆ ತಾಕಿತು. ತಳದ ಅಡ್ಡಪಟ್ಟಿಗಳಿಂದ ಬೆನ್ನು ಮೂಳೆಗೆ ನೋವಾಯಿತು. ಅವರನ್ನು ಮೇಲೆಳಿಸುವ ಕೆಲಸ ಕೆಲವರಿಗೆ, ದೋಣಿಯನ್ನು ದಂಡೆಗೆ ಒಯ್ಯುವ ಕೆಲಸ ಇತರರಿಗೆ. ಒಬ್ಬನಂತೂ ದಡ ಸೇರುತ್ತಲೇ ದೋಣಿಯಿಂದ ಹಾರಿ, ಓಡಿ ಓಡಿ ದೂರದಲ್ಲಿ ಹಾಯುತ್ತಿದ್ದ ಟಾಂಗಾ ಒಂದನ್ನು ತಂದ. ಮೃದುವಾಗಿ ಕವಿಯನ್ನು ದೋಣಿಯಿಂದ ದಂಡೆಗೆ, ದಂಡೆಯಿಂದ ಟಾಂಗಾಕ್ಕೆ ಏರಿಸಿದ್ದಾಯಿತು. ನಾನು ಒದ್ದೆಯಾಗಿದ್ದ ಮೈಗೆ ಉಡುಪು ಧರಿಸಿಕೊಂಡು ಹೊರಟೆ. ಕವಿಯಾಗ ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ಡಾಕ್ಟರು ಮತ್ತು ನಸರ್ುಗಳು ಗೌರವ ಉಪಚಾರಗಳಿಂದ ಚಿಕಿತ್ಸೆ ಮಾಡಿ ಪುಟ್ಟಪ್ಪನವರು ಗುಣಮುಖರಾದರು. ನನಗೆ ಹೆಚ್ಚಿನ ಮಾಹಿತಿ ದೊರಕಲಿಲ್ಲ. ಕವಿಯಂತೂ ಮರಳಿ ನಮ್ಮ ದೋಣಿಗೆ ಬಂದ ನೆನಪಿಲ್ಲ. ಹೆಚ್ಚಿನ ಬಾಧೆಯಾಗಿರಲಿಲ್ಲ. ಪ್ರಥಮ ಚಿಕಿತ್ಸೆಯಷ್ಟೇ ಈ ಸನ್ನಿವೇಶ ತುಸು ಕಹಿ! ಸಂದಭರ್ಾನುಸಾರ ನಿರೂಪಣವಲ್ಲದ ಈ ಘಟನೆಯ ಪ್ರಸ್ತಾಪವಿಲ್ಲಿ ಕವಿಗೆ ಕಳಂಕ ತರುವ ಮಾತಲ್ಲ. ಒದಗಿ ಬಂದ ಅಪೂರ್ವ ಸೌಭಾಗ್ಯವೆಂಬ ಹೆಮ್ಮೆ .
ದೋಣಿ ಮತ್ತು ದೋಣಿ ಹಾಡು ನನ್ನಲ್ಲಿ ಉಳಿಯಿತು. ಜನಪ್ರಿಯವಾಯಿತು. ಸಾರ್ವಜನಿಕ ಸ್ವತ್ತಾಯಿತು. ಸಂಗೀತ ಪರಿಣತರ ಕಂಠ ಸೇರಿತು. ಕ್ರಮೇಣ ದೋಣಿ ನನ್ನಿಂದ ತೊಲಗಿತು. ಹಾಡು ನನ್ನ ಹೃದಯದಲ್ಲಿ ಧ್ವನಿ ಗೂಡಿ ಇಂದಿಗೂ ‘ನಾವು ಲೀಲಾ ಮಾತ್ರ ಜೀವರು ನಮ್ಮ ಜೀವನ ಲೀಲೆಗೆ ‘ ಎಂದು ನಿನದಿಸುತ್ತಿದೆ. ದೋಣಿಯ ದೂರ ತೀರವ ಸಾಗಿ ಹೋಗುವ ಸೂಯರ್ೋದಯದ ಹೊತ್ತಿನ ಜೀವನ ನೌಕೆಯ ಪಥ ಸ್ವಗರ್ೀಯ. ಇದೇ ನನ್ನ ಸಿಹಿ ನೆನಪು

‍ಲೇಖಕರು avadhi

November 17, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This