ಕು೦ ವೀ ಮತ್ತು ಹೇಮರೆಡ್ಡಿ ಮಲ್ಲಮ್ಮ

ಕು೦ ವೀ ಬರೆದ ಹೊಸ ಕಾದ೦ಬರಿ ’ಹೇಮರೆಡ್ಡಿ ಮಲ್ಲಮ್ಮ’  ಈ ವಾರದಲ್ಲೇ ಬಿಡುಗಡೆಯಾಗುತ್ತಿದೆ.

ಆ ಕಾದ೦ಬರಿಯ ಕೆಲವು ಪುಟಗಳು ‘ಅವಧಿ’ ಓದುಗರಿಗಾಗಿ :

ಕಾಲುವೆಯ ಕಟ್ಟೆಯ ಒಂದು ಬದಿ ಸರ್ಪಹುಣ್ಣಿನಿಂದ ನರಳುತ್ತ ಕುಳಿತ್ತಿದ್ದ ಕೆಳಮನಿ ಶಿವಾರೆಡ್ಡಿಯವರನ್ನೂ, ಅದರ ಇನ್ನೊಂದು ತುದಿಯಲ್ಲಿ ತನ್ನ ಒಡಕು ಚಾಳೇಸದ ಮೂಲಕ ಸೂರ್ಯನನ್ನು ನೋಡುವ ಸಾಹಸ ನಡೆಸಿದ್ದ ಕಠಾರಿ ಲಿಂಗಾರೆಡ್ಡಿಯವರನ್ನೂ ಮಾತಾಡಿಸಿ ನಡಿಗೆಯನ್ನು ತೀವ್ರಗೊಳಿಸಿದೆ. ಎಷ್ಟೋ ವರ್ಷಗಳ ಬಳಿಕ ಸೇರುತ್ತಿರುವ ದಾವಂತ ನನ್ನ ನಡಿಗೆಯಲ್ಲಿತ್ತು, ವಾಗಿಲಿಯ ಅಗಸೆ ಬಾಗಿಲು ದಾಟುವಾಗ ರೋಮಾಂಚನವಾಯಿತು. ದೂರದಲ್ಲಿ ಎಲ್ಲೋ ತಮ್ಮಟೆ ನುಡಿಸುತ್ತಿರುವ ಹುಡುಗರುಪ್ಪಡಿ ಕೇಕೆ ಹಾಕುತ್ತಿರುವ ಸದ್ದು ಕೇಳಿಸಿತು. ತಂಬಿಗೆಯೊಂದಿಗೆ ಎದುರಾದ ಜೀರ್ರ ಪಂಪಣ್ಣನನ್ನು ಕೇಳಿದ್ದಕ್ಕೆ ನಾಟಕ ಆಡುವವರು ಬಂದಾರೆ ಸ್ವಾಮಿ ಎಂದು ಸುಳಿವು ನೀಡಿದ. ವಾಗಿಲಿಯಲ್ಲಿ ನಾಟಕಗಳನ್ನು ಆಡುವವರು ಬಂದರೆಂದರೆ ಶಾಲೆ ನಡೆಯುವುದು ಕಷ್ಟ, ಮಕ್ಕಳ ಗೈರುಹಾಜರಿಯನ್ನೇ ನೆಪವಾಗಿಟ್ಟುಕೊಂಡು ಸಹೋದ್ಯೋಗಿಗಳು ಇಸ್ಪೀಟ್ ಚದುರಂಗಗಳಂಥ ಆಟಗಳನ್ನು ಆಶ್ರಯಿಸಿ ಕಾಲಕ್ಷೇಪಕ್ಕೆ ತೊಡಗುವುದು ಮಾಮೂಲು. ಅದಕ್ಕೆ ಸಂಬಂಧಿಸಿದ ಮನರಂಜನಾ ಸಂಘಗಳು ಅನಧಿಕೃತ ರೀತಿಯಲ್ಲಿ ಎಲ್ಲಂದರಲ್ಲಿರುವವು ಬೇರೆ. ಬೇಸರದೊಳಗೆ ಬೇಸರ. ಯೋಚಿಸುತ್ತಲೇ ನಾನು ತಲುಪಿದ ಮನೆಗೆ ಬೀಗ ಹಾಕಲಾಗಿತ್ತು, ಅದರ ಛಾವಿ ಕೊಡುತ್ತ ಮೂಲಿಮನಿ ಮೀಸೆ ಗೌಡ ನಿಮ್ಮ ತಮ್ಮನೂ ಪರಶುರಾಮನೂ ಯಾವುದೋ ಊರಿಗೆ ಹೋದರು ಸ್ವಾಮಿ, ಇಗೋ ತಗೊಳ್ಳಿ ಎಂದು ಹೇಳಿ ಛಾವಿ ನೀಡಿದನು. ಆ ಕ್ಷಣ ನನಗೆ ಆಗಿದ್ದು ಸಂತೋಷವೋ ಬೇಸರವೋ! ಬೆಳೆಗ್ಗೆಯಿಂದಲೇ ನಾಪತ್ತೆಯಾಗಿರುವನೆಂದರೆ! ಓಹ್ ಇಂಥ ಸಂತೋಷದ ಸಂಗತಿ! ಹಾವು ತನ್ನ ಹುತ್ತ ಬದಲಾಯಿಸುವಂತೆ ಹುಲಿ ತನ್ನ ಕಾಡು ಬದಲಾಯಿಸುವಂತೆ ಶರಭ ಪರಶುರಾಮನ ಸಹಾಯದಿಂದ ಅಥವಾ ಆತನ ನಿದರ್ೇಶನದ ಮೇರೆಗೆ ತನ್ನ ವಾಸ್ತವ್ಯ ಬದಲಾಯಿಸಿರಬಹುದೆ! ಸಂದೇಹ ಕಾಡಿತು. ಸಮಾಧಾನ ಪಡುತ್ತ ಶಾಲೆಯನ್ನು ದೇನಿಸುತ್ತ ಶಾಲೆಯ ಮಕ್ಕಳನ್ನು ಕನವರಿಸುತ್ತ ಅರೆಬರೆಯಾಗಿ ಉಳಿದಿರುವ ಕಾದಂಬರಿಯ ಹಸ್ತಪ್ರತಿಯ ಪುನರುದ್ದರಣೆಯ ಕನಸು ಕಾಣುತ್ತ ಅಗೋಚರ ಸ್ಥಿತಿಯಲ್ಲಿರಬಹುದಾದ ವೃಶ್ಚಿಕಗಳನ್ನು ಒಂದೊಂದಾಗಿ ಕ್ರಮಿಸುತ್ತ ನಾಲ್ಕಡಿ ವಿಸ್ತೀರ್ಣದ ಬಚ್ಚಲನ್ನು ಪ್ರವೇಶಿಸಿ ಐದು ತಂಬಿಗೆ ಸುರಿದು ಅಭಿಜಾತ ದೇಹಕ್ಕೆ ಸಾಂತ್ವನ ಹೇಳಿದ್ದಾಯಿತು. ಒಲೆ ಹೊತ್ತಿಸಿ ಅದರ ಮೇಲೆ ಅಕ್ಕಿಯನ್ನು ಅನ್ನವನ್ನಾಗಿ ಪರಿವತರ್ಿಸಿ ಭುಂಜಿಸಿ ಒಡಲ ತೀಟೆಯನ್ನು ತೀರಿಸಿದ್ದಾಯಿತು. ಇನ್ನು ನಾನು.. ಸರ್ವತಂತ್ರ ಸ್ವತಂತ್ರನೆಂದು ಭ್ರಮಿಸಿದೆ. ಬಿದಿರ ಮಂಚದ ಮೇಲೊರಗಿದೆ. ಮಾಡೊಳಗೆ ಇಲಿಗಳ ಓಡಾಟ! ತೊಲೆ ಜಂತುಗಳ ಸಂದುಗೊಂದುಗಳಲ್ಲಿರಬಹುದಾದ ಚೇಳುಗಳು! ಎದರಿಗಿರುವ ಕಪಾಟಿನಲ್ಲಿ ಪೇರಿಸಿಟ್ಟಿರುವ ತರಾವರಿ ಪುಸ್ತಕಗಳು! ಅವುಗಳ ಪೈಕಿ ಯಾವುದೋ ಒಂದು ತನ್ನನ್ನೆತ್ತಿಕೊಳ್ಳುವಂತೆ ಅಂಗಲಾಚುತ್ತಿರುವಂಥ ಅನುಭವ. ಓಹ್! ಜೀನ್ ಪಾಲ್ ಸಾತ್ರರ್ೆಯೋ! ಅವನ ಸೇಂಟ್ ಜಿನೆಟ್ ಕೃತಿಯೋ! ಜಿನೆಟ್ನಂಥ ದಾರಿ ಬಡುಕ ಸುಲಿಗೆಕೋರ ಸಾತ್ರರ್ೆ ಮೇಲೆ ಅಚ್ಚಳಿಯದಂತಹ ಪ್ರಭಾವ ಬೀರಿರಬಹುದಾದರೆ ಈ ಬಾಡಿಗೆ ಕೊಲೆಗಾರ ಶರಭನ ವಿಲಕ್ಷಣ ವ್ಯಕ್ತಿತ್ವ ನನ್ನನ್ನು ಪ್ರಭಾವಿಸುವುದರಲ್ಲಿ ತಪ್ಪೇನು! ಉದ್ದೇಶಿತ ಕಾದಂಬರಿಯ ಪುಟಪುಟಗಳಲ್ಲಿ ಅವನನ್ನು ಯಾಕೆ ಪನರ್ನಿರೂಪಿಸಬಾರದು! ಕೃತಿಯ ಸಹಾಯದಿಂದ ಸಂಭವನೀಯ ಕೃತಿಯನ್ನು ಪುನಶ್ಚೇತನಗೊಳಿಸಬಾರದು! ಏನೋ ಹೊಳೆದಂತಾಗಿ.. ಎಂದೋ ಬರೆದಿರುವ ಎಲ್ಲೋ ಇಟ್ಟಿರುವ ತನ್ನೊಳಗಿನ ಪಾತ್ರಗಳ ಮೂಲಕ ಅಗಾಗ್ಗೆ ಗಲಿಬಿಲಿಗೊಳಿಸುತ್ತಿರುವ ಕಾದಂಬರಿಯ ಹಸ್ತಪ್ರತಿ ಹುಡುಕಲಾರಂಭಿಸಿದೊಡನೆ ದೊರಕುವುದು ಸಾಧ್ಯವೆ! ಅದು ಬರೆಯುವವನ ಮನದ ಗೋಮಾಳದೊಳಗೆ ಮೇದುಂಡು ಪೊಗದಸ್ತಾಗಿ ಬೆಳೆಯಲಿ ಎಂಬ ಕಾರಣದಿಂದಲ್ಲವೆ ನಾನು ಅದರ ಗೊಡವೆಗೆ ಹಲವು ದಿವಸಗಳಿಂದ ದೂರ ಉಳಿದಿರುವುದು! ಆದರೆ ಹುಡುಕುವ ಕೈಗಳಿಗೆಟುಕದೆ ಕಣ್ಣಾಮುಚ್ಚೆ ಕಾಡೇಗೂಡೆ ಉದ್ದಿನ ಮೂಟೆ ಉರುಳೇ ಹೋಯಿತು ಎಂದು ಹಾಡುತ್ತಿರುವುದು ಸೋಜಿಗ. ಕಪಾಟಿನ ಪುಟ್ಟ ಪರಿಸರದಲ್ಲಿ ಅದರ ಕಳ್ಳಾಟ ನಡೆಯುವುದು, ಓಹ್ ಹುಡುಕುವುದು ದುಸ್ತರವಾಯಿತು. ಕೊನೆಗೂ ಅಗೋ ಅಲ್ಲಿ ದಾಸೋವಸ್ಕಿಯ ಅಜರಾಮರ ಕೃತಿ ಕ್ರೈಂ ಅಂಡ್ ಪನಿಷ್ಮೆಂಟ್ ಪಕ್ಕದಲ್ಲಿ ಅಂದರೆ ಋಷಿ ಸದೃಶ ಲೇಖಕ ಟಾಲ್ಸ್ಟಾಯ್ರವರ ವಾರ್ ಅಂಡ್ ಪೀಸ್ ಕೃತಿಯ ನಡುವೆ ಬೆಚ್ಚಗೆ ಅಡಗಿ ಕೂತಿರುವುದು! ತನ್ನ ಬೇಕುಬೇಡಗಳನ್ನು ಅಲಕ್ಷಿಸಿರುವ ನೀನೂ ಒಬ್ಬ ಲೇಖಕನೇ ಅಣಕಿಸುತ್ತಿರುವ ರೀತಿಯಲ್ಲಿ ಗೋಚರಿಸುತ್ತಿರುವುದು! ಮೊದಲು ತನ್ನನ್ನಲ್ಲಿಂದ ಕೈಗೆತ್ತಿಕೊಂಡು ಹಸಿವು ತೀರಿಸು ದಾಹ ತಣಿಸು ಎಂದು ಕೇಳಿಕೊಳ್ಳುತ್ತಿರುವುದು! ಕೂಲಿನಾಲಿ ಮುಗಿಸಿಕೊಂಡು ಬಂದ ತಾಯಿ ತನ್ನ ಮಗುವನ್ನೆತ್ತಿಕೊಳ್ಳುವಂತೆ ಅದನ್ನು ಕೈಗೆತ್ತಿಕೊಂಡೆ. ಅದರ ಮೇಲೆ ಅಗತ್ಯಕ್ಕಿಂತ ಹೆಚ್ಚು ಲೇಪನಗೊಂಡಿದ್ದ ಧೂಳನ್ನು ನಿಚ್ವಾಸದ ಸಹಾಯದಿಂದ ಊದಿ ನಿಚ್ಚಳಗೊಳಿಸಿದೆ. ಅದರ ಒಂದೊಂದು ಪುಟಗಳನ್ನು ಮಗುಚಿದೆ. ಕಾದಂಬರಿಯ ಆರಂಭದ ಭಾಗದಲ್ಲಿ ಕೋಸಿಗಿಯ ನಾರಾಯಣದೊರೆಯೂ, ಎರಡನೆ ಭಾಗದಲ್ಲಿ ಆತನ ಸಹೋದರ ಪಂಪನಗೌಡನೂ, ಮೂರನೆ ಭಾಗದಲ್ಲಂತೂ ಸರಿಯೇ! ಒಂದೊಂದು ಪುಟವೂ ಭೀಭತ್ಸಕರ. ಅವರಿವರನ್ನೆಲ್ಲ ಕಾದಂಬರಿಯಿಂದ ಉಚ್ಚಾಟಿಸಬೇಕು, ಆರಂಭದಿಂದ ಕಥಾನಕವನ್ನು ಪುನಃ ಮುರಿದು ಕಟ್ಟಬೇಕು. ಹಿಂಸೆ ಮತ್ತು ಪ್ರೇಮಗಳಂಥ ಮಾನವನ ಮೂಲಭೂತ ಸಂವೇದನೆಗಳನ್ನು ಕಥಾನಕದುದ್ದಕ್ಕೂ ಹಾಸುಹೊಕ್ಕಾಗಿಸಬೇಕು. ನಗರೂರಿನ ಲಕ್ಷ್ಮಿಯ ಕಳೇಬರದ ಮೂಲಕ ಆಕೆಯ ಮರಣೋತ್ತರದ ಕಥೆಯನ್ನು ನಿರೂಪಿಸುವುದೋ! ಶರಭ ಮತ್ತು ವನಜಾಕ್ಷಿಯರೀರ್ವರ ಪ್ರೇಮ ಅಚಂದ್ರಾರ್ಕವೆಂದು ಸಾದರಪಡಿಸುವುದೋ! ಪ್ರೇಮಿಗಳೆನಿಸಿದವರಿಗೆ ಮರಣವೇ ಮಹಾನವಮಿ ಎಂದು ಸಾರುವುದೋ! ಕಾದಂಬರಿ ದುರಂತ ಅಂತ್ಯ ಕಂಡಲ್ಲಿ ವಿಮರ್ಶಕರು ಸಹೃದಯ ವಾಚಕರು ಸುಮ್ಮನಿರುವರೆ! ಎಂದೂ ಯೋಚಿಸಿದೆ. ಕಥೆಯುದ್ದಕ್ಕೂ ಮೈನವಿರೇಳಿಸುವ ಘಟನೆಗಳನ್ನು ಹಾಸುಹೊಕ್ಕಾಗಿಸಿದರೆ ಮೆಲೋಡ್ರಾಮ! ಅಕಸ್ಮಾತ್ತಾಗಿ ಸಿನೆಮಾದವರ ಗಮನ ಸೆಳೆದಲ್ಲಿ! ಜನಪ್ರಿಯ ನಿದರ್ೇಶಕರಿಗೆ ಕೃತಿಯ ಹಕ್ಕುಗಳನ್ನು ಕೊಡುವುದೋ! ಕಲಾತ್ಮಕ ರೀತಿಯಲ್ಲಿ ನಿದರ್ೇಶಕರಿಗೆ ಹಕ್ಕುಗಳನ್ನು ಕೊಡುವುದೋ! ಒಟ್ಟಿನಲ್ಲಿ ಯಾರೋ ಒಬ್ಬರಿಗೆ! ಕೂಸು ಹುಟ್ಟುವುದಕ್ಕೂ ಮೊದಲೆ! ನನಗೆ ನಾನೇ ನಗಾಡಿಕೊಂಡೆ. ಎಲ್ಲೂ ರಾಜಿಗೊಳಗಾಗದೆ ಗಂಭೀರ ದಾಟಿಯಲ್ಲಿಯೇ ಬರಹ ಆರಂಭಿಸುವುದು ಮುಖ್ಯ! ಎಳೆ ಎಳೆಯಾಗಿ ಹೊಳೆಯುತ್ತಿರುವ ಘಟನೆಗಳು ಮನಃಪಟಲದಿಂದ ಕಳಚುವ ಮೊದಲೇ ಟಿಪ್ಪಣಿ ಮಾಡಿಟ್ಟುಕೊಳ್ಳುವುದು ಮುಖ್ಯ! ಇನ್ನೂ ಹಗಲು ಬಾಕಿ ಉಳಿದಿರುವುದು ಎಂಬುದಕ್ಕೆ ಕಿಟಿಕಿ ಬಾಗಿಲುಗಳಿಂದ ಬೆಳಕು ಮುಗುಳ್ನಗೆಯೋಪಾದಿಯಲ್ಲಿ ಒಳ ಹರಿಯುತ್ತಿರುವುದು ನನ್ನಂಥ ಯಾವುದೇ ಲೇಖಕನ ಸೌಭಾಗ್ಯ. ಇನ್ನು ತಡಮಾಡಬಾರದೆಂದು ನಿರ್ಧರಿಸಿ.. ಶರಭ ಶರಭನೆಂದೂ, ವನಜಳನ್ನು ವನಜಳೆಂದೂ.. ಬೇಡವೇ ಬೇಡ, ಇವೆರಡೂ ಹೆಸರುಗಳು ಕ್ಷೀಷೆ, ಹೆಸರುಗಳು ಧ್ವನಿಪೂರ್ಣವೆನಿಸುವುದು ಮುಖ್ಯ. ಶರಭನಿಗೆ ದಯಾನಂದನೆಂದೂ, ವನಜಳಿಗೆ ಉಷಾ ಎಂದೂ ಕರೆಯಬಹುದೇನೋ ಸರಿ, ಆದರೆ ಖಳನಾಯಕನನ್ನು ರಾಜಕಾರಣಿಯನ್ನಾಗಿಸುವುದೋ ಜಮೀನ್ದಾರನನ್ನಾಗಿಸುವುದೋ! ಅವನು ನಾಯಕನಿಗೆ ತಂದೆಯನ್ನಾಗಿಸುವುದೋ! ನಾಯಕಿಗೆ ತಂದೆಯನ್ನಾಗಿಸುವುದೋ! ಕಥೆ ವಾತಾವರಣ ಹಳ್ಳಿಯದ್ದೋ ನಗರದ್ದೋ! ಕಳೇಬರ ರೂಪದಲ್ಲಿ ಒಡನಾಡಿದ ಲಕ್ಷ್ಮಿಯ ಕಥೆಯನ್ನು ಕಥೆಯೊಳಗೆ ಉಪಕಥೆಯನ್ನಾಗಿ ಬಳಸಿದರೆ ಹೇಗೆ! ಕಥೆಯನ್ನು ಮಧ್ಯಭಾಗದಿಂದ ಆರಂಭಿಸುವುದೋ! ಅಂತ್ಯದಿಂದ ಆರಂಭಿಸುವುದೋ! ಇನ್ನಷ್ಟು ಒಳವಿವರಗಳನ್ನು ಸಂಗ್ರಹಿಸುವ ಸಲುವಾಗಿ ನಾನು ಹಲವು ದಿವಸಗಳ ಕಾಲ ಶರಭನೊಂದಿಗೂ ಲಕ್ಷ್ಮಿಯ ಊರಾದ ನಗರೂರೊಳಗೂ ಒಡನಾಡಿದ್ದಲ್ಲಿ ಕಥಾನಕ ಇನ್ನಷ್ಟು ಸಶಕ್ತವಾಗಿರುತ್ತಿತ್ತು. ಆದರೆ ಅದೃಷ್ಟವೋ ದುರಾದೃಷ್ಟವೋ! ಆ ಎರಡೂ ಪಾತ್ರಗಳು ನನ್ನಿಂದ ದೂರವಾಗಿವೆ. ಏನಿದ್ದರೂ ಕಲ್ಪಕತೆಯ ಸಹಾಯದಿಂದ ಕಥೆಯನ್ನು ವಿನ್ಯಾಸಗೊಳಿಸಬೇಕು. ಹೀಗೆ ಯೋಚಿಸುತ್ತ ಕೂತರೆ ಏನು ಪ್ರಯೋಜನ! ಮೈಚಳಿಬಿಟ್ಟು ಎದೆಯೊಳಗೆ ಅವಿತು ಹಿಂಸಿಸುತ್ತಿರುವ ಅನುಭವಗಳನ್ನು ಹೊರಹಾಕಿ ಅವುಗಳನ್ನು ಅಕ್ಷರ ಪ್ರಸಾದನಗಳಿಂದ ವಿನ್ಯಾಸಗೊಳಿಸಬೇಕು, ಒಂದೆರಡು ಪುಟಗಳನ್ನು ಬರೆದು ಅಂತರಂಗದ ಸ್ವಾಸ್ಥ್ಯ ಕಾಪಾಡಿಕೊಳ್ಳಬೇಕು, ಆಗ ಮಾತ್ರ ಕಥೆಗಾರನೂ ಕ್ಷೇಮ, ಕಥೆಯೂ ಕ್ಷೇಮ ಅಲ್ಲವೆ]]>

‍ಲೇಖಕರು G

May 9, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This