ಕೆಂಪು ಪ್ರೇಮದ ರಾಯಭಾರ!

 alexandra1.jpg

ಫೆಮಿನಿಸಂ ಎಲ್ಲಿಂದಾದರೂ ಶುರುವಾಗಿರಲಿ,
ಅಲೆಕ್ಸಾಂಡ್ರಾಳ ಮನೆಯ ಉಪ್ಪಿನ ಋಣದಿಂದ
ಅದು ಮುಕ್ತವಾಗಿರಲಿಕ್ಕಂತೂ ಸಾಧ್ಯವಿಲ್ಲ!

______________________ 

“ರೆಡ್ ಲವ್”.

ಅದೊಂದು ಕಾದಂಬರಿ. ಆ ಕಾದಂಬರಿಯ ಕಡೆಯಲ್ಲಿ ಕಥಾನಾಯಕಿ ತನ್ನ ಪ್ರಿಯಕರನನ್ನು ಬಿಟ್ಟುಬಿಡುತ್ತಾಳೆ. ಆದರೆ ಆತನಿಂದ ತನ್ನೊಳಗೆ ಅಂಕುರಿಸಿರುವ ಗರ್ಭವನ್ನು ಹಾಗೇ ಉಳಿಸಿಕೊಳ್ಳುವ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳುತ್ತಾಳೆ.

“ರೆಡ್ ಲವ್” ಬರೆದವಳ ಕಥೆಯೂ ಹೆಚ್ಚು ಕಡಿಮೆ ಇದೇ ಬಗೆಯದು. ಮದುವೆಯಾದ ಮೂರು ವರ್ಷಗಳ ಬಳಿಕ ಗಂಡನನ್ನು ಬಿಡುತ್ತಾಳೆ. ಅದಾಗಲೇ ಆತನಿಂದ ಪಡೆದಿರುವ ಮಗುವನ್ನು ಅಷ್ಟೇ ಪ್ರೀತಿಯಿಂದ ಬೆಳೆಸುತ್ತಾಳೆ.

“ಪುರುಷನ ಅಗತ್ಯವಿಲ್ಲ” ಎಂಬ ನಿಶ್ಚಯದಲ್ಲಿ ಹಾಗೆ ನಡೆದವಳು ಅಲೆಕ್ಸಾಂಡ್ರಾ ಕೊಲೊಂಟಾಯ್. ರಷ್ಯಾದ ಸಮಾಜವಾದಿ ಚಳವಳಿಯ ಇತಿಹಾಸದಲ್ಲಿ ಬಲು ಘನತೆಯುಳ್ಳ ಹೆಸರು ಅವಳದು. ಒಂದು ದೇಶದ ರಾಯಭಾರತ್ವವನ್ನು ನಿಭಾಯಿಸಿದ ವಿಶ್ವದ ಮೊದಲ ಮಹಿಳೆ ಎಂಬ ಹಿರಿಮೆ ಕೂಡ ಅವಳ ಖಾತೆಯಲ್ಲಿದೆ. ೧೯೧೭ರ ರಷ್ಯನ್ ಕ್ರಾಂತಿಯ ವೇಳೆ ಲೆನಿನ್ನನ ಪಕ್ಷದಲ್ಲಿ ಅತ್ಯಂತ ಪ್ರಮುಖ ಸ್ಥಾನದಲ್ಲಿದ್ದ ಏಕೈಕ ಮಹಿಳೆ ಕೂಡ. ಲೆನಿನ್ನನ ಪಕ್ಷದಲ್ಲಿ ಮಹಿಳಾ ಘಟಕ ಸ್ಥಾಪನೆಗೆ ಕಾರಣಳಾದವಳೂ ಅವಳೇ.

ಅಲೆಕ್ಸಾಂಡ್ರಾ ಕ್ರಮಿಸಿದ ರಾಜಕೀಯ ಹೆದ್ದಾರಿಯ ಚಿತ್ರಣ ಸಿಗಲು ಇಷ್ಟು ವಿವರಗಳು ಸಾಕು. ಗಮನಿಸಬೇಕಾದ ಮುಖ್ಯ ಸಂಗತಿಯೆಂದರೆ, ಈ ಹೆದ್ದಾರಿಯನ್ನು ಅವಳು ಮಹಿಳಾ ಸಮುದಾಯದ ಬದುಕನ್ನು ಸುಂದರಗೊಳಿಸುವ ದಿಕ್ಕಿಗೆ ತಿರುಗಿಸಿಕೊಂಡಳು ಎಂಬುದು; ಮತ್ತು ಇದನ್ನು ಅವಳು ಅಕ್ಷರ ಲೋಕದ ಬಾಂಧವ್ಯದ ಮೂಲಕ ಸಾಧಿಸಿದಳು ಎಂಬುದು.

alexandra2.jpg

ಅಪ್ಪ ಸೇನಾಧಿಕಾರಿಯಾಗಿದ್ದ. ಅಮ್ಮ ಕೂಡ ಶ್ರೀಮಂತ ಕುಟುಂಬದವಳು. ಅಪ್ಪನಿಗೆ ಇವಳ ಅಮ್ಮ ಎರಡನೆಯ ಪತ್ನಿ.  ಮಗಳೆಂದರೆ ಇಬ್ಬರಿಗೂ ಅಚ್ಚುಮೆಚ್ಚು. ಉಕ್ರೇನ್, ರಷ್ಯಾ ಮತ್ತು ಫಿನ್ ಲ್ಯಾಂಡಿನ ಹಿನ್ನೆಲೆ ಅವಳ ಬಾಲ್ಯಕ್ಕೆ. ಎಲ್ಲವೂ ಇತ್ತು. ಆದರೆ ಅವಳು ಬಯಸಿದ್ದ ಸ್ವಾತಂತ್ರ್ಯ ಮಾತ್ರ ಕನಸಾಗಿತ್ತು. ತನಗನಿಸಿದ್ದನ್ನು ಹೇಳಬೇಕೆಂಬ ಅವಳ ಬಯಕೆಗೆ ಅಲ್ಲಿ ಜಾಗವಿರಲಿಲ್ಲ. ತನ್ನ ಸುತ್ತಲಿನ ಇತರ ಮಕ್ಕಳೊಂದಿಗೆ ಬೆರೆತು ಆಡುವ ಆಸೆಗೆ ಇಂಬಿರಲಿಲ್ಲ. ಅವಳು ಶಿಕ್ಷಣ ಪಡೆದದ್ದು ಕೂಡ ಇತರ ಮಕ್ಕಳಿಗಿಂತ ಭಿನ್ನವಾಗಿ. ಮನೆಪಾಠದ ಮೂಲಕ. ಅದರಿಂದ ಅವಳಿಗೆ ಎಷ್ಟು ನಷ್ಟವಾಯಿತೊ. ಆದರೆ, ಜಗತ್ತಿಗೊಬ್ಬ ಹೋರಾಟಗಾರ್ತಿ ಸಿಕ್ಕಿದಳು. ಅಲೆಕ್ಸಾಂಡ್ರಾಗೆ ಮನೆಪಾಠ ಹೇಳಲು ನೇಮಕವಾಗಿದ್ದವನು ಅವರ ಕುಟುಂಬ ಮಿತ್ರನೇ ಆಗಿದ್ದ ಸಾಹಿತ್ಯ ಚರಿತ್ರಕಾರ. ಆತ ಅವಳಲ್ಲಿದ್ದ ಸಾಹಿತ್ಯಿಕ ಪ್ರತಿಭೆಯನ್ನು ಗುರುತಿಸಿದ. ಬರೆಯೋದಕ್ಕೆ ಹೇಳಿದ. ಸೇನಾಧಿಕಾರಿಯ ಮಗಳು ಕೈಯಲ್ಲಿ ಲೇಖನಿ ಹಿಡಿದಳು. ಮಹಿಳಾ ಲೋಕಕ್ಕೆ ಶಕ್ತಿ ಬಂತು.

ಅಕ್ಷರಗಳ ಜೊತೆಗಿನ ಅವಳ ಸಂಬಂಧ, ಬರವಣಿಗೆಯ ಮೂಲಕ ಸಮಾಜದ ಕಡೆಗೆ ಮತ್ತು ಸಮಾಜದ ಮೂಲಕ ಬರವಣಿಗೆಯ ಕಡೆಗೆ ಸಾಗುವ ಯಾನವಾಗಿತ್ತು. ಹಲವಾರು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದವಳು ಅತ್ಯಂತ ಬಡತನವನ್ನು ಬದುಕುತ್ತಿರುವವರ ಮನೆಯಂಗಳದ ತಲ್ಲಣಗಳನ್ನು ಕಣ್ಣಾರೆ ಕಂಡಳು. ಅದೇ ಹೊತ್ತಲ್ಲಿ ಆಕೆ ಮಾರ್ಕ್ಸ್ ವಾದವನ್ನೂ ಅಧ್ಯಯನಿಸುತ್ತಿದ್ದಳು. ಈ ದೇಶ-ಕೋಶಗಳ ಸಂಗಾತದಲ್ಲಿ, ತನ್ನ ದಾರಿ ಏನು ಎಂಬುದು ಅವಳಿಗೆ ಗೊತ್ತಾಯಿತು.

ರಷ್ಯಾದ ಯೂನಿವರ್ಸಿಟಿ ಆಫ್ ಜೂರಿಚ್ ನಲ್ಲಿ ಲೇಬರ್ ಹಿಸ್ಟರಿಯನ್ನು ಓದಿದಳು. ರಷ್ಯಾದ ಕೈಗಾರಿಕೆಗಳಲ್ಲಿ ದುಡಿವವರ ಕುರಿತ ರಾಜಕೀಯ ಪತ್ರಿಕೆಯೊಂದರಲ್ಲಿ ಲೇಖನಗಳನ್ನು ಬರೆಯತೊಡಗಿದಳು. ಮಾರ್ಕ್ಸ್ ವಾದ ಹಲವು ದಾರಿಗಳ ಮೂಲಕ ಅವಳ ಮನದ ಜಗುಲಿಗೆ ಬಂದು ಕೂತಿತು. ಅವಳ ಧೋರಣೆ ಹೊಸ ಬೆಳಕಿನಲ್ಲಿ ಪಯಣ ಶುರು ಮಾಡಿತು.

ಹೆಚ್ಚು ಕಡಿಮೆ ಈ ಹೊತ್ತಲ್ಲೇ, ಫಿನ್ ಲ್ಯಾಂಡಿನ (ಆಕೆಯ ತಾಯಿಯ ತವರು) ಜನರ ಸ್ವಾತಂತ್ರ್ಯ ಹೋರಾಟ ಅಲೆಗ್ಸಾಂಡ್ರಾಳ ಮನಸ್ಸಲ್ಲಿ ಸುಳಿಯಿತು. ಫಿನ್ ಲ್ಯಾಂಡಿನ ಶ್ರಮಿಕ ವರ್ಗ ಸಂಘಟಿತವಾಗುವುದಕ್ಕೆ ನೆರವಾಗುವುದು ತನ್ನ ಕರ್ತವ್ಯ ಅನ್ನಿಸಿತು. ಫಿನ್ ಲ್ಯಾಂಡಿನ ಜನತೆ ಮತ್ತು ರಷ್ಯಾದ ನಿರಂಕುಶಾಧಿಪತ್ಯದ ನಡುವಿನ ಸಂಘರ್ಷದ ಬಗ್ಗೆ ಬರೆಯಲಾರಂಭಿಸಿದಳು.

ರಷ್ಯಾದಲ್ಲಿ ನೂರಾರು ಕಾರ್ಮಿಕರನ್ನು ಬಲಿ ತೆಗೆದುಕೊಂಡ, “ರಕ್ತಸಿಕ್ತ ಭಾನುವಾರ” ಎಂದೇ ರಷ್ಯಾದ ಕಾರ್ಮಿಕ ಹೋರಾಟದ ಚರಿತ್ರೆಯಲ್ಲಿ ದಾಖಲಾಗಿರುವ ದುರಂತದ ಬಳಿಕ ಅಲೆಕ್ಸಾಂಡ್ರಾ ಕಾರ್ಮಿಕ ಚಳವಳಿಗೆ ತನ್ನ ಪ್ರಯತ್ನ ಆರಂಭಿಸಿದಳು. ಅದರಲ್ಲೂ ಮಹಿಳಾ ಕಾರ್ಮಿಕರನ್ನು ಸಂಘಟಿಸುವತ್ತ ಗಮನ ಕೇಂದ್ರೀಕರಿಸಿದಳು. ಈ ಹಂತದಲ್ಲಿ ಆಕೆ ರಷ್ಯಾ ಸರ್ಕಾರದ ಕೆಂಗಣ್ಣಿಗೂ ತುತ್ತಾಗಬೇಕಾಯಿತು. ರಷ್ಯಾ ಬಿಟ್ಟು ಜರ್ಮನಿಗೆ ತೆರಳುವುದು ಅನಿವಾರ್ಯವಾಯಿತು. ಮುಂದಿನ ಕೆಲ ವರ್ಷಗಳ ಕಾಲ ಹಲವಾರು ಕೃತಿಗಳನ್ನು ಬರೆದಳು. ೧೯೦೫ರಿಂದ ೧೯೦೮ರವರೆಗಿನ ಅವಧಿಯಲ್ಲಿ ಕಾರ್ಮಿಕ ಮಹಿಳೆಯರು ತಮ್ಮ ಹಿತಾಸಕ್ತಿಗಾಗಿ ಹೋರಾಟಕ್ಕಿಳಿಯುವಂತೆ ಅವರನ್ನು ಸಂಘಟಿಸುವುದಕ್ಕೆ ನಡೆಸಿದ ಆಂದೋಲನ, ಅಲೆಕ್ಸಾಂಡ್ರಾಳನ್ನು ಚರಿತ್ರೆಯ ಪುಟಗಳು ಮರೆಯಲಾರದಂತೆ ಮಾಡಿದವು. 

ಮಹಿಳೆಯ ಉಸಿರುಗಟ್ಟಿಸುವ ಪುರುಷ ರೂಪಿತ ಸಂಹಿತೆಗಳ ವಿರುದ್ಧದ ಅವಳ ಅಸಹನೆ ಹೋರಾಟವಾಗಿ ನಿಂತಿತು. ಬಾಲ್ಯದಿಂದಲೇ ವಿಲಕ್ಷಣ ಬಂಧನದ ಕಟು ನೆನಪು ಕಟ್ಟಿಕೊಂಡು ಬಂದಿದ್ದ ಆಕೆಗೆ, ಅದರ ವಿರುದ್ಧ ಪ್ರತಿಭಟಿಸುವ ಮಾರ್ಗಗಳು ತನ್ನ ವೈಯಕ್ತಿಕ ಬದುಕಿನ ಹಾದಿಯಲ್ಲೇ ಕಂಡಿದ್ದವು ಕೂಡ. ತನ್ನ ೨೧ನೇ ವಯಸ್ಸಲ್ಲಿ ತಾನೇ ಆರಿಸಿಕೊಂಡ ಹುಡುಗನೊಂದಿಗೆ ಮದುವೆಯಾದ ಆಕೆ, ತನ್ನ ಅಪ್ಪ ಅಮ್ಮನ ಇಷ್ಟದ ವಿರುದ್ಧ ಪ್ರತಿಭಟಿಸಲೆಂದೇ ಆ ಮದುವೆ ಮಾಡಿಕೊಂಡದ್ದಾಗಿ ಆಮೇಲೆ ತನ್ನ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾಳೆ. ಗಂಡನೆಂದರೆ ತನಗೆ ಆಮೇಲೆಯೂ ದ್ವೇಷವೇನಿರಲಿಲ್ಲ; ಆದರೆ ಗೃಹಿಣಿಯಾಗಿ, ಒಂದು ಅಧಿಕಾರ ಭಾವದ ವರ್ತುಲದಲ್ಲಿ ಬದುಕುವುದು ತನಗೆ ಪಂಜರದ ಬದುಕು ಎನ್ನಿಸಿತು ಎಂದು ಹೇಳಿಕೊಂಡಿದ್ದಾಳೆ. 

ಹಾಗೆ ನೋಡಿದರೆ, ಮೊದಲಿಂದಲೂ ಅವಳು ಧಿಕ್ಕರಿಸಿದ್ದೇ ಅಧಿಕಾರಯುತ ಲೈಂಗಿಕತೆಯನ್ನು. ಮಹಿಳೆಯನ್ನು ಲೈಂಗಿಕ ನಿರ್ಬಂಧಗಳಿಂದ ಮುಕ್ತಗೊಳಿಸುವುದು ಅಲೆಕ್ಸಾಂಡ್ರಾ ಹೋರಾಟದ ಪ್ರಧಾನ ಗುರಿಯಾಗಿತ್ತು. ಆಕೆಯ ಆತ್ಮಕಥೆಯ ಹೆಸರೇ “Autobiography of a Sexually Emancipated Communist Woman” ಎಂದಿದೆ. “ಲೈಂಗಿಕ ಬಯಕೆ ಅನ್ನುವುದು ಒಂದು ನಾಚಿಕೆಯ ಮತ್ತು ಪಾಪದ ವಿಚಾರ ಎಂಬ ಭಾವನೆ ಇಲ್ಲವಾಗಬೇಕು; ಅದು ಹಸಿವು ಮತ್ತು ನೀರಡಿಕೆಯಷ್ಟೇ ಸಹಜವಾದ ಅಗತ್ಯ ಎಂಬುದನ್ನು ಮನಗಾಣಬೇಕು” ಎಂದು ಪ್ರತಿಪಾದಿಸಿದಳು ಅಲೆಕ್ಸಾಂಡ್ರಾ. ಮುಕ್ತ ಪ್ರೇಮದ ಬಗೆಗಿನ ಅವಳ ಮಾತುಗಳು ಕೂಡ ಸಮಾಜ ಹುಬ್ಬೇರಿಸುವಂತಾಗಲು ಕಾರಣವಾಗಿದ್ದವು. ಸಾಂಪ್ರದಾಯಿಕ ಕಲ್ಪನೆಯ ಮದುವೆ ಬಗ್ಗೆಯೂ ಅವಳ ತೀವ್ರ ವಿರೋಧವಿತ್ತು.

ಫೆಮಿನಿಸಂ ಎಲ್ಲಿಂದಾದರೂ ಶುರುವಾಗಿರಲಿ, ಅಲೆಕ್ಸಾಂಡ್ರಾಳ ಮನೆಯ ಉಪ್ಪಿನ ಋಣದಿಂದ ಅದು ಮುಕ್ತವಾಗಿರಲಿಕ್ಕಂತೂ ಸಾಧ್ಯವಿಲ್ಲ!

‍ಲೇಖಕರು avadhi

December 2, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹಿರೋಶಿಮಾದಲ್ಲಿ ಆರತಿ  

ಹಿರೋಶಿಮಾದಲ್ಲಿ ಆರತಿ  

          ಆರತಿ ಎಚ್.ಎನ್     ನ್ಯೂಕ್ಲಿಯರ್ ಬಾಂಬ್ ದಾಳಿಯಲ್ಲಿ ನಲುಗಿದ ಹಿರೋಶಿಮಾ, ತತ್ತರಿಸುವ...

… ಆಮೆನ್! 

… ಆಮೆನ್! 

ಸುಮಾರು ಹೊತ್ತು ಸುಧಾರಿಸಿಕೊಂಡ ನಂತರ ಎದ್ದು ನಮ್ಮ ನಡಿಗೆ ಮುಂದುವರೆಸುವ ತುಸು ಮಾತ್ರದ ತ್ರಾಣ ಬಂದಿತು. ಆದರೆ ಅಪ್ಪ-ಅಮ್ಮ ನಡೆಯುವ...

ಸಮಾಧಿಗಳ ಮಧ್ಯೆ ‘ಭಾರತಿ ಟೂಂಬ್’

ಸಮಾಧಿಗಳ ಮಧ್ಯೆ ‘ಭಾರತಿ ಟೂಂಬ್’

ಇಡೀ ಜಾಗದ ತುಂಬ ಓಡಾಡಿ ಫೋಟೋಗಳನ್ನು ತೆಗೆದಿದ್ದಾದ ನಂತರ ಅಲ್ಲಿಯವರೆಗೆ ನಾವು ನಡೆದಿರುವುದು ಎರಡು ಕಿಲೋಮೀಟರ್‌ ಆಸುಪಾಸು ಅಂದ ಮಹಮ್ಮದ್. ಹಾಗೆ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This