ಕೆನೆತ್ ಅಂಡರ್ಸನ್ ಜಾಡಿನಲ್ಲಿ – ೩

ಇಲ್ಲಿಯವರೆಗೆ

ಮಲ್ಲಿಕಾರ್ಜುನ ಹೊಸಪಾಳ್ಯ

ತೇಜಸ್ವಿಯವರ ಕಾಡಿನ ಕತೆಗಳು ಮಾಲಿಕೆಯ ಎಲ್ಲ ಪುಸ್ತಕಗಳನ್ನೂ ನಾವೆಲ್ಲಾ ಹಲವು ಸಲ ಓದಿದ್ದೆವು. ಆದರೆ ಆ ಲೇಖನಗಳ ಜಾಡು ಹಿಡಿದು ಹೋಗುವ ಹುಚ್ಚು ಹತ್ತಿಸಿಕೊಂಡಿದ್ದು ಗುಲ್ಬರ್ಗದ ಪತ್ರಕರ್ತ ಮಿತ್ರ ಆನಂದತೀರ್ಥ ಪ್ಯಾಟಿ. ಆರೇಳು ತಿಂಗಳ ಹಿಂದಷ್ಟೇ ಆತ ಇನ್ನಿಬ್ಬರಿಗೆ ಕೆನೆತ್ ಹುಚ್ಚು ಹತ್ತಿಸಿ, ಅವರೊಂದಿಗೆ ಆಂಧ್ರಪ್ರದೇಶದ ದಿಗುವಮೆಟ್ಟಕ್ಕೆ ಭೇಟಿ ಕೊಟ್ಟಿದ್ದ. ನಾಲ್ಕಾರು ಪ್ಯಾಸೆಂಜರ್ ಗಾಡಿ ಮಾತ್ರ ನಿಲ್ಲುವ ಆ ಹಳ್ಳಿಗೆ ಹೋಗಿ, ಕೆನೆತ್ ಬೇಟೆಯಾಡಿದ ‘ದಿಗುವಮೆಟ್ಟದ ನರಭಕ್ಷಕ’ನನ್ನು ಕೊಂದ ಸ್ಥಳಗಳನ್ನು ನೋಡಿದ್ದ. ಅಲ್ಲಿನ ಸ್ಥಳದ ಚಿತ್ರಗಳನ್ನು ಅಲ್ಲಿಂದಲೇ ಆತ ಕಳುಹಿಸಿದ್ದ. ಅವನ್ನೆಲ್ಲ ನೋಡಿ ‘ಅರೆರೆ..! ಇದೊಂಥರ ಚೆನ್ನಾಗಿದೆ’ ಅನಿಸಿತು. ಅಲ್ಲಿ ಕೆನೆತ್ ಹುಲಿ ಹೊಡೆದ ರೈಲು ಸುರಂಗಮಾರ್ಗದ ಮೇಲ್ಭಾಗ, ಉದ್ದದ ಸೇತುವೆ, ದಿಗುವಮೆಟ್ಟದ ರೈಲ್ವೆ ಸ್ಟೇಷನ್, ಅಲ್ಲಿನ ಐಬಿ, ಐಬಿಯೊಳಗೆ ಕೆನೆತ್ ಉಳಿದಿದ್ದ ಎರಡನೇ ನಂಬರ್ ರೂಮು, ಅದರೊಳಗಿನ ಶೆವರ್, ಪಕ್ಕದ ಮಿಸ್ಚೀಫ್ ಸಮಾಧಿ . . . . ಹೀಗೆ ಎಲ್ಲದರ ಮಾಹಿತಿ ರೋಮಾಂಚನಗೊಳಿಸಿತು.

ಇದರಿಂದ ಉಮೇದುಗೊಂಡು ರಾಂಪುರದ ಕಡೆ ಪ್ಲಾನು ಹಾಕಿದೆವು. ಬೈಲೂರಿನಲ್ಲಿ ಕೇಪಿ ತಮ್ಮ ಸಂಸ್ಥೆಯ ವತಿಯಿಂದ ಯೋಜನೆಯೊಂದಕ್ಕೆ ಸಂಬಂಧಿಸಿ ಈಗಾಗಲೇ ಕೆಲಸ ಮಾಡುತ್ತಿದ್ದುದೂ ಅಲ್ಲಿಗೆ ಹೋಗಲು ಒಂದು ಕಾರಣ. ಪ್ಲಾನ್ ಮಾಡಿದ ಮೇಲೂ ಸಹ ಆ ಕೆಲಸ- ಈ ಕೆಲಸ ಎಂದು ಪ್ರಯಾಣ ಮುಂದಕ್ಕೆ ಹೋಗುತ್ತಲೇ ಇತ್ತು. ಇದರಿಂದ ರೋಸಿದ ಪ್ಯಾಟಿ, ಒಂದು ದಿನ ‘ಇಗಾ ಮಲ್ಲಿಕ್ಕು, ನಾನು ಟಿಕೆಟ್ ಬುಕ್ ಮಾಡಿಸಿ ಆಯ್ತು’ ಎಂದಾಗ ನಮ್ಮ ಕೆನೆತ್ ಬೇಟೆಯ ಜಾಡಿನ ಮರುಬೇಟೆ ಜೂನ್ 21ರಿಂದ 23ರವರೆಗೆ ಎಂದು ಕನ್ಫéಮರ್್ ಆಯ್ತು.

ಹೋಗುವ ದಿನ ಹತ್ತಿರಾದಂತೆ ರಾತ್ರಿ ನನಗೆ ನಿದ್ದೆ ಬರುತ್ತಿರಲಿಲ್ಲ. ಹಲವು ಸಲ ‘ರಾಂಪುರದ ಒಕ್ಕಣ್ಣ’ ಹಾಗೂ ಇತರ ಕಾಡಿನ ಕತೆಗಳನ್ನು ಓದಿದ್ದರ ಪರಿಣಾಮ ಹುಲಿ, ಕಾಡು, ದನ, ವಸತಿಗೃಹ, ರಕ್ತದ ಕಲೆ ಮುಂತಾದುವೇ ಕಣ್ಣೆದುರು ಬಂದಂತಾಗುತ್ತಿತ್ತು. ಅದಕ್ಕೆ ಸರಿಯಾಗಿ ನನ್ನ ಮಡದಿ ‘ನಮ್ಮೆಜಮಾನ್ರು ಬ್ಯಾಟೆ ಹೋಗ್ತಾರಂತೆ’ ಅಂತ ಹೋಗೋರ್ ಬರೋರಿಗೆಲ್ಲಾ ಸಾರುತ್ತಿದ್ದಳು. ಕೆಲವರು ನಾವು ನಿಜವಾಗಿಯೂ ಬೇಟೆಗೆ ಹೋಗುತ್ತಿದ್ದೇವೆ ಎಂಬಂತೆ ಮಾತಾಡುತ್ತಿದ್ದರು. ಒಬ್ಬಿಬ್ಬರು ‘ಏನೇ ಆದ್ರೂ ಫಾರೆಸ್ಟ್ ಡಿಪಾಟರ್್ಮೆಂಟಿಗೆ ಇಂಟಿಮೇಶನ್ ಕೊಟ್ ಹೋಗಾದು ಒಳ್ಳೇದು’ ಎಂಬ ಸಲಹೆ ನೀಡಿದರು!

ಮೊದಲು ನಾನು ಹಾಗೂ ಪ್ಯಾಟಿ ಇಬ್ಬರೇ ಹೋಗುವುದು ಎಂದು ನಿಧರ್ಾರವಾಗಿತ್ತು. ಆದರೆ ಕೆನೆತ್ ಬಗ್ಗೆ ನಮ್ಮಷ್ಟೇ ಹುಚ್ಚು ಹತ್ತಿಸಿಕೊಂಡಿದ್ದ ಕೇಪಿ, ಅದ್ಹೇಗೆ ಬಿಟ್ಟಾರು? ತಾವೂ ಬರುವುದಾಗಿ ಘೋಷಿಸಿದರು. ಕೇಪಿ ಜತೆ ತಾವೂ ಬರುವುದಾಗಿ ಅವರ ಪತ್ನಿ ಸೀಮಾ ಘೋಷಿಸಿದರು. ‘ನಾನು ಕಾಡು ನೋಡಿಲ್ಲಾಂತ ಏನೂ ಇಲ್ಲ. ಆದ್ರ ನೀವೆಲ್ಲ ಹೋಗ್ತೀರಂದ್ರೆ ಅದೇನೋ ಸ್ಪೆಶಲ್ ಇರಬಹುದು’ ಎನ್ನುತ್ತ ನಮ್ಮನ್ನು ಕೇಳದೇ ತಾವೂ ಜತೆಗೂಡುವುದಾಗಿ ಹೇಳಿದ್ದು- ಶಿಕಾರಿಪುರ ತಾಲ್ಲೂಕು ಚುಚರ್ಿಗುಂಡಿಯ ಯುವ ರೈತ ಬಿ.ಎನ್.ನಂದೀಶ.

‘ನಾವು ಕೆನೆತ್ ಬೇಟೆಯ ಜಾಡಿನಲ್ಲಿ ಹೊರಟಿದ್ದೇವೆ’ ಎಂಬ ಇ-ಮೇಲ್ ಸ್ನೇಹಿತರ ಬಳಗದಲ್ಲಿ ಸಂಚರಿಸಿದಾಗ ನಾಗೇಶ ಹೆಗಡೆ, ಅನಿತಾ ಪೈಲೂರು ‘ಸಮೃದ್ಧ ಕಥೆಗಳನ್ನು ಹಿಡಿದು ತನ್ನಿ’ ಎಂದು ಹಾರೈಸಿದ್ದರು. ನಮ್ಮ ಇ-ಮೇಲ್ನಲ್ಲಿ ‘ಕೆನೆತ್ ಬೇಟೆಯ ಜಾಡಿನಲ್ಲಿ…’ ಎಂಬ ಸ್ಟೇಟಸ್ ಮೆಸೇಜ್ ಕಾಣಿಸಿಕೊಂಡಾಗ ‘ಏನು ಹಾಗಂದ್ರೆ?’ ಅಂತ ಪ್ರಶ್ನಿಸಿದವರೂ ಇದ್ದರು.

ಜೂನ್ 21ರಂದು ಬೆಳಿಗ್ಗೆ ಪ್ಯಾಟಿ ಗುಲ್ಬರ್ಗದಿಂದ ಸೀದಾ ತುಮಕೂರಿನ ನಮ್ಮನೆಗೆ ಬಂದ. ಹಿಂದಿನ ರಾತ್ರಿಯೇ ನಂದೀಶ್ ತುಮಕೂರು ತಲುಪಿದ್ದರು. ಬೆಳಗಾಗೆದ್ದು ನಾನು ಕೆಂಪಿಗೆ ಹೊಟ್ಟೆ ತುಂಬಿಸಿ ನಿಲ್ಲಿಸಿದ್ದೆ. ಹತ್ತು ಗಂಟೆಗೆ ಹೊರಟೆವು. ಕಾರಿನ ಹಿಂಬದಿ ಸೀಟಿನಲ್ಲಿ ನಂದೀಶನನ್ನು ಕೂರಿಸಿದ ಪ್ಯಾಟಿ, ‘ನಾವಿಬ್ರು ಹರಟೆ ಹೊಡೀತೀವಿ. ನೀವು ಸುಮ್ಮನೇ ಕೂತು ರಾಂಪುರದ ಒಕ್ಕಣ್ಣ ಓದ್ರಿ’ ಎಂದು ಆರ್ಡರ್ ಮಾಡಿದ. ದಾರಿಯುದ್ದಕ್ಕೂ ಪುಸ್ತಕ ಓದಿದ ನಂದೀಶ್ ‘ಕಾಡು ನೋಡೋದಿಕ್ಕೆ ಒಂದೊಳ್ಳೆ ಕಾರಣ’ ಅಂತ ಹೇಳಿದ್ದು ನಮ್ಮ ಭೇಟಿಗೆ ಹೊಸ ಹೊಳಹನ್ನು ನೀಡಿದಂತಾಯಿತು. ನಾವು ಮದ್ದೂರು ತಲುಪುವ ವೇಳೆಗೆ ಬೆಂಗಳೂರಿನಿಂದ ಕೃಷ್ಣಪ್ರಸಾದ್-ಸೀಮಾ ಬಂದಿದ್ದರು. ಕೆ.ಎಂ.ದೊಡ್ಡಿ ದಾಟಿ ತುಸು ದೂರದಲ್ಲಿ ಸಿಕ್ಕ ‘ಹಳ್ಳಿಮನೆ ಮೆಸ್’ನಲ್ಲಿ ಊಟ ಮಾಡಿದೆವು. ವೆಜ್ಜು, ನಾನ್ವೆಜ್ಜು ಎಲ್ಲಾ ಸೇರಿ ಬರೇ ನೂರೈವತ್ತು ರುಪಾಯಿ ಬಿಲ್ಲಾಯಿತು. ತುಂಬಾ ದೂರದವರೆಗೂ ಬೇಟೆಯ ಬದಲು ಈ ‘ಚೀಪ್ ಅಂಡ್ ಬೆಸ್ಟ್’ ಬಾಡೂಟದ್ದೇ ಮಾತು.

ಕೊಳ್ಳೆಗಾಲ ದಾಟಿ ಲೊಕ್ಕನಹಳ್ಳಿ ಹತ್ತಿರಾದಂತೆ ರಸ್ತೆ ಪಕ್ಕ ಸಾಲಾಗಿ ದನಗಳ ಹಿಂಡು ಬರುತ್ತಿತ್ತು. ಎಷ್ಟೋ ದಿನಗಳ ನಂತರ ನೂರಾರು ದನಗಳ ಹಿಂಡನ್ನು ನೋಡಿ ಅಪಾರ ಖುಷಿಯಾಯಿತು. ಲೊಕ್ಕನಹಳ್ಳಿ ದಾಟಿದ ಬಳಿಕ ಮರಗಳ ಮೇಲೆ ಕೂತು ಆನೆ ಕಾಯುವ ಮಚಾನುಗಳು ಕಂಡವು. ಮರಗಳಿಗೆ ಹತ್ತಲು ಬಿದಿರಿನ ಒಂದೇ ಗಳವನ್ನು ಏಣಿಯಂತೆ ಹಾಕಿದ್ದರು. ನಮಗಂತೂ ಅದನ್ನು ಹತ್ತಲು ಬ್ಯಾಲೆನ್ಸ್ ಸಿಗಲಿಲ್ಲ. ಆದರೂ ಬಗೆಬಗೆಯ ಪೋಸ್ ಕೊಟ್ಟು, ಫೊಟೋ ತೆಗೆಸಿಕೊಂಡೆವು. ಅಲ್ಲಿಂದ ಹೊರಟು ಸಂಜೆ ಆರು ಗಂಟೆ ವೇಳೆಗೆ 21ನೇ ಮೈಲಿಕಲ್ಲು ತಲುಪಿದೆವು. ಅನಂತರದ ಕತೆಯನ್ನು ಈಗಾಗಲೇ ಓದಿದ್ದೀರಿ.

ಇನ್ನೂ ಇದೆ….

‍ಲೇಖಕರು G

September 28, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

3 ಪ್ರತಿಕ್ರಿಯೆಗಳು

 1. N.N.Murthy Pyati

  ನಾನು ಕೆಲ ತಿಂಗಳ ಹಿಂದೆ ಆನಂದ(ಅಣ್ಣ)ನ ಮನೆಯಿಂದ ತೇಜಸ್ವಿಯವರ ಕೆಲ ಪುಸ್ತಕಗಳನ್ನ ಕದ್ದು ತಂದಿದ್ದೆ. ಅದಾಗಲೇ ಹಲವಾರು ಬಾರಿ ಓದಿದ್ದರೂ ಮತ್ತೆ ಮತ್ತೆ ಓದಬೇಕೆನ್ನೋ ಆಸೆ. ಕೆಲ ದಿನಗಳ ಬಳಿಕ ನನಗೆ ಫೋನಿಸಿದ ಆನಂದ್, ಕೂಡಲೇ ಅವುಗಳನ್ನ ಕೋರಿಯರ್ ಮಾಡುವಂತೆ ಹೇಳಿದ್ದ. ಈಗ ಅದರ ನೆನಪು ಬರುತ್ತಿದೆ. ಈ ‘ಜಾಡಿ’ಗಾಗಿ ಮತ್ತೊಮ್ಮೆ ಓದೋಕೆ ಹಾಗೂ ಯೋಜನೆ ರೂಪಿಸೋಕೆ ಆ ಪುಸ್ತಕಗಳ ಅವಶ್ಯಕತೆ ಇತ್ತು ಅಂತಾ ಕಾಣುತ್ತೆ. ಇನ್ನು ಮಚಾನುಗಳ ಬಗ್ಗೆ ಓದಿದಾದ ನಮ್ಮ ಹೊಲದಲ್ಲಿಯೂ ಅಂಥದ್ದೇ ಮಚಾನು ನಿರ್ಮಿಸುವಾಸೆ ಆಗುತ್ತಿದೆ. ನಿರೂಪಣೆ ಇಷ್ಟವಾಗುತ್ತಿದೆ. ಆದರೆ ‘ಜಾಡು’ ಆರಂಭವಾಗುತ್ತಿದ್ದಂತೆಯೇ ಮಗಿದು ಹೋಗುತ್ತಿದೆ. ಹೀಗಾಗಿ ನಿರಾಶೆ. ಅಲ್ಲದೇ ಅದರೊಂದಿಗೆ ಕುತೂಹಲವೂ ಹೆಚ್ಚುತ್ತಿದೆ. ಕೊಂಚ ಹೆಚ್ಚಿಗೆ ಬರೆದರೆ ನಿಮ್ಮದೇನೂ ಗಂಟು ಹೋಗುವುದಿಲ್ಲ ಅಂತಾ ನಾನಂದುಕೊಂಡಿದ್ದೇನೆ..! ಧನ್ಯವಾದಗಳು..!

  ಪ್ರತಿಕ್ರಿಯೆ
  • Mallikarjuna Hosapalya

   ಮೂರ್ತಿಯವರೇ ಈಗಾಗಲೇ ಇಡೀ ಬರಹದ ಗಂಟನ್ನು ಮೋಹನ್ ಅವರಿಗೆ ಕೊಟ್ಟುಬಿಟ್ಟಿದ್ದೇವೆ. ಅವರು ಆ ಗಂಟಿನಲ್ಲಿ ಚೂರು ಚೂರೇ ಮುರಿದು ನಿಮಗೆ ಕೊಡುತ್ತಾ ರುಚಿ ಹತ್ತಿಸುತ್ತಿದ್ದಾರೆ. ಏನೂ ಮಾಡುವ ಹಾಗಿಲ್ಲ, ಕಾಯಲೇಬೇಕು.

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: