ಕೆನೆತ್ ಅಂಡರ್ಸನ್ ಬೇಟೆಯ ಜಾಡಿನಲ್ಲಿ – ಭಾಗ ೧

ಕೆನೆತ್ ಅಂಡರ್ಸನ್ ಬೇಟೆಯ ಜಾಡಿನಲ್ಲಿ…

–  ಮಲ್ಲಿಕಾರ್ಜುನ ಹೊಸಪಾಳ್ಯ

(ಇದರಲ್ಲಿ ಬರುವ ಕೆಲವು ಕೋಡ್ ವರ್ಡ್ ಗಳ ವಿಸ್ತೃತ ರೂಪ:

ಕೇಪಿ- ಜಿ.ಕೃಷ್ಣಪ್ರಸಾದ್

ಪ್ಯಾಟಿ- ಆನಂದತೀರ್ಥ ಪ್ಯಾಟಿ

ಕೆಂಪಿ- ನನ್ನ ಮಾರುತಿ ಝಿಂಗ್ ಕೆಂಪು ಕಾರು)

ನಾವು 21ನೇ ಮೈಲಿಕಲ್ಲಿನ ಬಳಿ ಹೋದಾಗ ಸಂಜೆ ಆರು ಗಂಟೆ. ಆಗಲೇ ಮುಕ್ಕತ್ತಲು ಕವಿಯುತ್ತಿತ್ತು. ಕೆನೆತ್ ಅಂಡರ್ಸನ್ ಸುಮಾರು ಏಳೆಂಟು ದಶಕಗಳ ಹಿಂದೆ ವಿವರಿಸುವ ರಸ್ತೆ, ರಸ್ತೆ ಪಕ್ಕದ ಅರಣ್ಯ ನರ್ಸರಿ, ಬಿದಿರು ಮೆಳೆ, ಹಳ್ಳ, ಲಂಟಾನ ಜಿಗ್ಗು, ಎತ್ತರದ ಮರಗಳು… ಎಲ್ಲವೂ ಅಲ್ಲಿದ್ದವು. ನರ್ಸರಿ ಹಾಳು ಬಿದ್ದಿತ್ತಾದರೂ ಅದರ ಗುರುತು ಮತ್ತು ಕಾವಲುಗಾರನ ಮನೆ ಈಗಲೂ ಇವೆ. ಹಳ್ಳದ ಗುಂಡಿಗಳಲ್ಲಿ ನೀರಿತ್ತು. 21ನೇ ಮೈಲಿಕಲ್ಲಿನ ಬಳಿ ಕಟ್ಟಿದ್ದ ಹಸುವನ್ನು ಇದೇ ಹಳ್ಳದಗುಂಟ ಹುಲಿಯೊಂದು ಎತ್ತೊಯ್ದಿರುತ್ತದೆ. ನಾವೂ ಆ ಹಳ್ಳದಲ್ಲಿ ನಡೆದೆವು.

ಇದ್ದಕ್ಕಿದ್ದಂತೆ ಬಂದ ‘ಸರ್ರ್…ರ್ರ್…’ ಎಂಬ ಸದ್ದಿಗೆ ಬೆಚ್ಚಿದೆವು. ಎತ್ತರದ ಮರಗಳಲ್ಲಿ ಏನೋ ಓಡಾಡಿತು. ನೋಡಿದರೆ ಕಪ್ಪು ಮೂತಿಯ ಮುಸಿಯಗಳ ಹಿಂಡು. ಕೆನೆತ್ ಅಂಡರ್ಸನ್ ಬೇಟೆಗೆ ಕುಳಿತ ಅನೇಕ ಸಾರಿ ಇವು ನರಭಕ್ಷಕನ ಬರುವಿಕೆ ಬಗ್ಗೆ ಮಾಹಿತಿ ನೀಡುತ್ತಿದ್ದ ಬಗ್ಗೆ ಓದಿದ್ದ ನಮಗೆ ಅವುಗಳನ್ನು ಇಲ್ಲಿ ನೋಡಿ ಖುಷಿಯೇ ಆಯಿತು.

ಇನ್ನೂ ಮೇಲೆ ಹೋದೆವು. ದೂರದ ಬಯಲಿನಲ್ಲಿ ಬೆಳಕಿದ್ದರೂ ನಾವಿದ್ದ ಜಾಗದಲ್ಲಿ ಮರಗಳ ನಿಬಿಡತೆಯಿಂದಾಗಿ ನೆಲ ಕಾಣದಷ್ಟು ಕತ್ತಲು. ಬಯಲುಸೀಮೆಯ ನಮಗೆ ರಸ್ತೆಯಿಂದ ಹತ್ತು ನಿಮಿಷದ ನಡಿಗೆ ದೂರದಲ್ಲೇ ಇಷ್ಟೊಂದು ದಟ್ಟಕಾಡು ಕಂಡು ಗಾಬರಿ. ಮುಂದಕ್ಕೆ ಹೋಗುವುದೋ ಬೇಡವೋ ಎಂಬ ಗೊಂದಲ. ಬಾಯ್ಬಿಟ್ಟು ಹೇಳಲು ಹಿಂಜರಿಕೆ. ಹತ್ತಿರದಲ್ಲಿ ಏನೋ ಸರಿದಾಡಿದ ಸದ್ದು. ಈ ಬಾರಿ ನೆಲದಲ್ಲಿ! ನೋಡಿದರೆ ಕೇಪಿ ಕಾಲಬಳಿಯೇ ಕೊಳಕುಮಂಡಲದ ಹಾವು! ಏನನ್ನೋ ತಿನ್ನುತ್ತಿತ್ತು. ಅಷ್ಟು ದಪ್ಪನೆ ಕೊಳಕುಮಂಡಲದ ಹಾವು ನೋಡಿದ್ದು ಇದೇ ಮೊದಲು. ನಮ್ಮ ಪಿಸಿ-ಪಿಸಿ ಮಾತು, ಕಾಲಿನ ಸಪ್ಪಳ, ಕ್ಯಾಮರಾ ಫé್ಲಾಷಿನ ಬೆಳಕಿಗೆ ಬೇಜಾರು ಮಾಡಿಕೊಂಡು ಅದರ ಸ್ವಭಾವಕ್ಕನುಗುಣವಾಗಿ ನಿಧಾನವಾಗಿ ಬಿದಿರುಮೆಳೆಗಳಲ್ಲಿ ಮರೆಯಾಯಿತು.

ಉದಕಮಂಡಲದ ಬಳಿ ಬಾಳೆತೋಟವೊಂದರಲ್ಲಿ ಕೆನೆತ್ಗೆ ಇದೇ ರೀತಿ ಕೊಳಕುಮಂಡಲವೊಂದು ಸಿಕ್ಕಿರುತ್ತದೆ. ಸ್ವಲ್ಪದರಲ್ಲೇ ಅದರ ಮೇಲೆ ಕಾಲಿಡುವುದರಿಂದ ಪಾರಾಗಿರುತ್ತಾರೆ.

ಅರೆರೆ! 1930ರ ಆಸು-ಪಾಸಿನಲ್ಲಿ ನರಭಕ್ಷಕನನ್ನು ಬೇಟೆಯಾಡಿ ಬರೆದ ಆ ಅನುಭವಗಳು ಪೂರ್ಣಚಂದ್ರ ತೇಜಸ್ವಿಯವರ ಮೂಲಕ ಕನ್ನಡೀಕರಣಗೊಂಡು, ಅದನ್ನು ಓದಿದ ನಾವು 2012ರಲ್ಲಿ ಆ ಸ್ಥಳಗಳನ್ನು ನೋಡಲು ಬಂದರೆ, ಪುಸ್ತಕದಲ್ಲಿ ವಿವರಿಸಿರುವ ಪರಿಸರ ತುಸು ಹೆಚ್ಚು ಕಡಿಮೆ ಹಾಗೇ ಎದುರಾದರೆ ಹೇಗಾಗಬೇಡ? ಅದಕ್ಕಿಂತ ಮಿಗಿಲಾಗಿ ಕೆನೆತ್ಗೆ ಎದುರಾಗುವ ಮುಸಿಯಗಳೂ, ಕೊಳಕುಮಂಡಲದ ಹಾವೂ ಕಾಲಿಗೆ ತೊಡರಿದರೆ ಹೇಗಾಗಬೇಡ??

ಮೊದಲೇ ಹೆದರಿದ್ದ ನಮಗೆ ಕೊಳಕುಮಂಡಲ ಸಿಕ್ಕ ಮೇಲೆ ಮುಂದೆ ಹೋಗಲು ಕಾಲು ಬರಲಿಲ್ಲ. ‘ನಾಳೆ ಮತ್ತೆ ಬರುವ’ ತೀರ್ಮಾನ ಮಾಡಿ ವಾಪಸಾದೆವು.

ನಮ್ಮ ‘ಕೆನೆತ್ ಅಂಡರ್ಸನ್ ಬೇಟೆಯ ಜಾಡಿನ ಮರುಬೇಟೆ’ ಹೀಗೆ ಆರಂಭವಾಯಿತು. ಕೊಳ್ಳೆಗಾಲ ತಾಲ್ಲೂಕು ಬೈಲೂರು ಬಳಿ ಕೆನೆತ್ ಒಂದು ನರಭಕ್ಷಕ ಹುಲಿಯನ್ನು ಬೇಟೆಯಾಡುತ್ತಾರೆ. ‘ರಾಂಪುರದ ಒಕ್ಕಣ್ಣ’ ಎಂಬ ಹೆಸರಿನಲ್ಲಿ ತೇಜಸ್ವಿಯವರು ಅದನ್ನು ಭಾವಾನುವಾದ ಮಾಡಿದ್ದಾರೆ. (ಮುನಿಶಾಮಿ ಮತ್ತು ಮಾಗಡಿ ಚಿರತೆ, ಕಾಡಿನ ಕಥೆಗಳು ಭಾಗ 4) ಆ ಮಾಹಿತಿಯನ್ನಾಧರಿಸಿದ ನಮ್ಮ ಮರುಭೇಟಿ ಹೀಗೆ 21ನೇ ಮೈಲಿಕಲ್ಲಿನ ಬಳಿ, ಮುಕ್ಕತ್ತಲಿನಲ್ಲಿ, ಮುಸಿಯ, ಕೊಳಕುಮಂಡಲಗಳ ಸ್ವಾಗತದೊಂದಿಗೆ ಆರಂಭವಾಗಿತ್ತು. ಮುಂದಿನ ಎರಡು ದಿನ ಕುತೂಹಲ, ಖುಷಿ, ರೋಮಾಂಚನ, ನಿರಾಶೆ, ದುಗುಡ . . . .

ಕೊಳಕುಮಂಡಲಕ್ಕೆ ಹೆದರಿ ರಸ್ತೆಗೆ ಹಿಂತಿರುಗಿದ ನಂತರ ಬಂದ ದಾರಿಯಲ್ಲೇ ವಾಪಸು ಒಂದು ಫರ್ಲಾಂಗ್ ಹೋಗಿ ಎಡಗಡೆ ಟಾರುರಸ್ತೆಗೆ ಹೊರಳಿದೆವು. ಇದು ತುಸು ಎತ್ತರದ ಪ್ರದೇಶ. ಸುಮಾರಾಗಿ ಬೆಳಕಿತ್ತು. 21ನೇ ಮೈಲಿಕಲ್ಲಿನ ಬಳಿ ಕಟ್ಟಿದ್ದ ಹಸುವನ್ನು ಹೊತ್ತೊಯ್ದಿದ್ದ ಹುಲಿಯನ್ನು ಹುಡುಕುತ್ತಾ ಹಳ್ಳದಗುಂಟ ಸಾಗುವ ಕೆನೆತ್ ಒಂದು ಸಾಧಾರಣ ಎತ್ತರದ ಗುಡ್ಡ ತಲುಪುತ್ತಾರೆ. ಅಲ್ಲಿನ ಬಂಡೆಗಲ್ಲುಗಳ ನಡುವೆ ಆಕಸ್ಮಿಕವಾಗಿ ಎರಡು ಮರಿ ಹುಲಿಗಳು ಎದುರಾಗುತ್ತವೆ. ತಮ್ಮಷ್ಟಕ್ಕೆ ತಾವು ಚಿನ್ನಾಟವಾಡುತ್ತಿದ್ದ ಅವು ಮನುಷ್ಯಾಕಾರವನ್ನು ಕಂಡ ತಕ್ಷಣ ‘ಕೆಸ್’ ಎಂಬ ಸದ್ದು ಹೊರಡಿಸುತ್ತವೆ. ಅಷ್ಟು ಎಚ್ಚರಿಕೆ ಸಾಕಾಗುತ್ತದೆ ಅವರಮ್ಮನಿಗೆ. ಘರ್ಜಿಸುತ್ತಾ ಕೆನೆತ್ ಎದುರು ಬರುತ್ತದೆ. ಬರುವುದಷ್ಟೇ ಅಲ್ಲ ಜಿಗಿಯಲು ಸನ್ನದ್ಧವಾಗಿ ಕವುಚಿ ಕುಳಿತುಕೊಳ್ಳುತ್ತದೆ.

ಆ ಜಾಗವನ್ನು ನೋಡುವುದು ನಮ್ಮ ಉದ್ದೇಶ. ನಿಧಾನವಾಗಿ ‘ಕೆಂಪಿ’ಯನ್ನು ನಡೆಸುತ್ತಾ ಹೋದೆವು. ಕೆನೆತ್ ವಿವರಣೆಗೆ ತಾಳೆಯಾಗುವ ಸ್ಥಳಗಳು ಕಾಣಲಿಲ್ಲ. ಜೀರಿಗೆಗದ್ದೆ ಎಂಬ ನಾಲ್ಕೈದು ಮನೆಗಳ ಹಳ್ಳಿ ಸಿಕ್ಕಿತಾದರೂ ಮಾತಿಗೆ ಯಾರೂ ಸಿಕ್ಕಲಿಲ್ಲ. ಮುಂದುವರಿದೆವು. ಒಂದು ಫéಾರೆಸ್ಟ್ ಔಟ್ಪೋಸ್ಟ್ ಸಿಕ್ಕಿತು. ಸುತ್ತ-ಮುತ್ತಲ ಕಾಡು ಹುಲಿ ಅಭಯಾರಣ್ಯ ಪ್ರದೇಶವಾದ್ದರಿಂದ ಐದಾರು ಫ಼ಾರೆಸ್ಟ್ ಇಲಾಖೆ ಅಧಿಕಾರಿಗಳಿದ್ದರು.

‘….ಈತರಕೀತರ’ ಎಂದು ನಾವು ಬಂದ ಉದ್ದೇಶವನ್ನು ಹೇಳಿದೆವು. 80 ವರ್ಷಗಳ ಹಿಂದೆ ಯಾರೋ ಬ್ರಿಟಿಷ್ ಬೇಟೆಗಾರ ಹುಲಿ ಹೊಡೆದ ಜಾಗಗಳನ್ನು ನೋಡಲು ಬಂದಿದ್ದೇವೆ ಎಂದರೆ ಯಾರಾದರೂ ಅನುಮಾನ ಪಡುವುದಿಲ್ಲವೇ? ಅದೂ ಮಬ್ಬುಗತ್ತಲಲ್ಲಿ!! ಅವರ ಕಣ್ಣುಗಳಲ್ಲೂ ಅಚ್ಚರಿ, ಅನುಮಾನ, ಗೊಂದಲ ಮೂಡಿದವು. ಜನ ಗುಂಪುಗೂಡಿದರು. ನಮಗೂ ಪೀಕಲಾಟಕ್ಕೆ ಇಟ್ಟುಕೊಂಡಿತು. ಆಗ ‘…ಇವರು ಪ್ರಜಾವಾಣಿ ಜರ್ನಲಿಸ್ಟು, ಇಂತದ್ರಾಗೆಲ್ಲಾ ತುಂಬಾ ಇಂಟ್ರೆಸ್ಟು’ ಎಂದು ಕೇಪಿ, ಪ್ಯಾಟಿಯನ್ನು ಮುಂದೆ ಬಿಟ್ಟರು. ಮುಂದೆ ಮಾತು-ಕತೆ ಸುಲಲಿತವಾಯಿತು. ಆದರೆ ಅವರಾರಿಗೂ ಕೆನೆತ್ ಬಗ್ಗೆ ಗೊತ್ತಿರಲಿಲ್ಲ.

ಸಿಕ್ಕ ಕಗ್ಗತ್ತಲೂ… ಸಿಗದ ಮಿಂಚುಹುಳುಗಳೂ…

ವಾಪಸ್ಸು ಮುಖ್ಯರಸ್ತೆಗೆ ಬಂದು ಕೆನೆತ್ ಬೇಟೆ ಸಮಯದಲ್ಲಿ ವಾಸ್ತವ್ಯ ಹೂಡಿದ್ದ ಬೈಲೂರಿನ ಅರಣ್ಯ ವಸತಿಗೃಹ ನೋಡಲು ಹೊರಟೆವು. ‘ಒಡೆಯರಪಾಳ್ಯದಲ್ಲಿ ಒಂದ್ ವಮ್ಮ ಬಲ್ ಚನಾಗಿ ಟೀ ಮಾಡ್ತೈತೆ ಕುಡ್ಯನ’ ಎಂಬ ಕೇಪಿ ಒತ್ತಾಯಕ್ಕೆ ಮಣಿದು ಆ ‘ವಮ್ಮ’ನ ಹೋಟೆಲ್ಗೆ ಹೋದೆವು. ಊರಿನ ಶುರುವಿಗೇ ಸಿಗುತ್ತದೆ. ವಾಸವೂ ಅಲ್ಲೇ ಹೋಟೆಲ್ಲೂ ಅಲ್ಲೇ, ಟು ಇನ್ ವನ್.

ನರಭಕ್ಷಕನ ಗುಂಗಿನಲ್ಲೇ ಇದ್ದ ನಾವು ಆವಮ್ಮನನ್ನೂ ಬಿಡಲಿಲ್ಲ. ಟೀ ಕುಡಿಯುತ್ತಾ ತಲೆ ತಿಂದೆವು. ‘ನಮ್ ತಾತೋರು ಏಳೋರು ಸಾ, ದನುಗುಳ್ನ ಕಟ್ಟಿ ಉಲಿ ವಡಿತಿದ್ರಂತೆ, ನಾವೂ ಸಣ್ಣೊರಿದ್ದಾಗ ಉಲಿ ನೋಡಿವಿಕನೇಳಿ, ಮೌರಿಸ್ ದೊರೆ ಅನ್ನೊರು ಇಲ್ಲೆಲ್ಲಾ ಉಲಿ ವಡಿತಿದ್ರಂತೆ’ ಎಂದರು. ನಮ್ಮೆಲ್ಲರ ಕಿವಿ ನೆಟ್ಟಗಾದವು!

‘ಅದು ಮೌರಿಸ್ ಅಲ್ಲ, ಕೆನೆತ್ ಅಂಡರ್ಸನ್ ಇಬರ್ೇಕು ಜ್ಞಾಪಿಸ್ಕಳಿ’ ಎಂದು ಪ್ಯಾಟಿ ವರದಿಗಾರನ ಗತ್ತಿನಲ್ಲೇ ಕೇಳಿದರು.

‘ಅದೇನೋ ಗೊತ್ತಿಲ್ರ’ ಎಂಬ ಉತ್ತರದ ತಣ್ಣೀರೆರಚಿತು.

ಕೆನೆತ್ ಬಗ್ಗೆ ಅವರಿಗೆ ಗೊತ್ತಿರಲಿಲ್ಲ. ಆದರೆ ಮೌರಿಸ್ ಎಂಬ ಹುಳುವನ್ನು ತಲೆಗೆ ಬಿಟ್ಟಿತ್ತು ಆ ವಮ್ಮ! ಮುಂದೆ ಈತನ ಬಗ್ಗೆ ದೊಡ್ಡ ಅಧ್ಯಾಯವನ್ನೇ ಬರೆಯಬಹುದಾದಷ್ಟು ಮಾಹಿತಿ ಸಿಕ್ಕಿತು, ಇರಲಿ.

ಕೆನೆತ್ ವಿವರಣೆಯಲ್ಲೆಲ್ಲೂ ಈ ಒಡೆಯರಪಾಳ್ಯ ಪ್ರಸ್ತಾಪವಾಗಿಲ್ಲ. ಬಹುಶಃ ಆಗ ಇದು ಕೆಲವೇ ಮನೆಗಳ ಗ್ರಾಮವಾಗಿದ್ದು ಪಕ್ಕದಲ್ಲಿ ಟಿಬೆಟಿಯನ್ ಸೆಟ್ಲಮೆಂಟ್ ಬಂದ ನಂತರ ಬೆಳೆದಿರಬಹುದು. ಪ್ರಸ್ತುತ ಈ ಸುತ್ತಿಗೆಲ್ಲ ಇದೇ ದೊಡ್ಡೂರು.

ಬೈಲೂರು ಅರಣ್ಯ ವಸತಿಗೃಹ ತಲುಪಿದಾಗ ರಾತ್ರಿ ಎಂಟು ಗಂಟೆ. ನಮ್ಮ ಅದೃಷ್ಟಕ್ಕೆ ಕರೆಂಟ್ ಹೋಗಿತ್ತು. ಕೆನೆತ್ ಇಲ್ಲಿಗೆ ಬಂದಾಗಲಂತೂ ಆಗ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಹಾಗಾಗಿ ಮತ್ತೊಂದು ಕೋ-ಇನ್ಸಿಡೆನ್ಸ್. ಅವರು ರಾಂಪುರದಿಂದ 19 ಮೈಲಿ ನಡೆದುಕೊಂಡು ಬಂದು 21ನೇ ಮೈಲಿಕಲ್ಲಿನ ಬಳಿ ಹೋಗಿ ಇಲ್ಲಿಗೆ ಬಂದಾಗಲೂ ಕತ್ತಲಾಗಿರುತ್ತದೆ. ಈಗ ನಾವು ಬಂದಾಗಲೂ ಕತ್ತಲು!

‍ಲೇಖಕರು G

September 26, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

11 ಪ್ರತಿಕ್ರಿಯೆಗಳು

 1. Nagesh Hegde

  ನಿರೂಪಣೆ ಹಾಗೂ ಡೈಲಾಗು ಸೊಗಸಾಗಿದೆ. ‘ನಮ್ಮ ಅದೃಷ್ಟಕ್ಕೆ ಕರೆಂಟ್ ಹೋಗಿತ್ತು’ ಅನ್ನೋ ಮಾತು ಸಖತ್ ಖುಷಿ ಕೊಡುತ್ತದೆ. ಈ ಅದೃಷ್ಟ ವಿವಿಐಪಿಗಳಿಗೆ ಎಂದೂ ಸಿಗುವಂಥದ್ದಲ್ಲ.
  ಕೊಳಕು ಮಂಡಲದ ಫೋಟೊವನ್ನು ನಿರೀಕ್ಷಿಸಿದರೆ ಅದ್ಯಾವುದೊ ಫ್ರೆಸ್ಕೊ ಪೇಂಟಿಂಗ್ ಹಾಕಿದೀರಲ್ಲ?
  ನಾ.ಹೆಗಡೆ.

  ಪ್ರತಿಕ್ರಿಯೆ
  • Shree Padre

   ಕೆಂಪಿಯೊಡೆಯನ ತಿಳಿ ಹಾಸ್ಯ, ಸಸ್ಪೆನ್ಸ್ ಸೃಷ್ಟಿ ಓದಿಸಿಕೊಂಡು ಹೋಗುತ್ತದೆ. ಆ ಹಳ್ಳಿಯ ಜನರನ್ನು ಬಿಡಿ, ಈ ಕೋಡ್ವರ್ಡ್ಧಾರಿಗಳು ಶತಮಾನದ ನಂತರ ತನ್ನನ್ನು ಹಿಂಬಾಲಿಸಲಿದ್ದಾರೆ ಎಂಬ ಸಣ್ಣ ಸೂಚನೆ ಸಿಕ್ಕರೂ ಸ್ವತಃ ಕೆನ್ನೆತ್ ತುಂಬಾ ಅನುಮಾನ ಪಡುತ್ತಿದ್ದರು!

   ಪ್ರತಿಕ್ರಿಯೆ
   • Mallikarjuna Hosapalya

    ಎಂಥಾ ಮಾತೇಳಿದ್ರಿ ಸಾರ್. ಥ್ಯಾಂಕ್ಯು, ನಾವು ಕೆನೆತ್ ಅನ್ನು ಇಷ್ಟಕ್ಕೇ ಬಿಡುವುದಿಲ್ಲ, ಈಗಾಗಲೇ ಜವಳಗಿರಿ ನರಭಕ್ಷಕ, ಸೂಲಕುಂಟೆ ನರಭಕ್ಷಕನ ಜಾಡು ಹಿಡಿಯಲು ಸ್ಕೆಚ್ ಹಾಕಿದ್ದೇವೆ. ನಿಮ್ಮ ಕಡೆ ಕೆನೆತ್ ಬಂದಿದ್ದರೆ ಹೇಳಿ.

    ಇಂತಿ ಕೆಂಪಿಯೊಡೆಯ.

    ಪ್ರತಿಕ್ರಿಯೆ
  • Mallikarjuna Hosapalya

   ಬರಹವನ್ನು ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು ಸಾರ್, ನಾವು ಮೋಹನ್ ಅವರಿಗೆ ನೋಡಿ ಅಭಿಪ್ರಾಯ ತಿಳಿಸಲು ಬರಹವನ್ನು ಮಾತ್ರ ಕಳಿಸಿದ್ದೆವು, ಹಾಗಾಗಿ ಮೊದಲ ಭಾಗಕ್ಕೆ ಚಿತ್ರಗಳು ಬಂದಿಲ್ಲ, ಮುಂದಿನ ಭಾಗದಲ್ಲಿ ಚಿತ್ರಸಹಿತ ಬರಹ ಇರುತ್ತದೆ.

   ಪ್ರತಿಕ್ರಿಯೆ
 2. N.N.Murthy Pyati

  ‘ನಮ್ಮ ಅದೃಷ್ಟಕ್ಕೆ ಕರೆಂಟ್ ಹೋಗಿತ್ತು’ಅನ್ನೋ ಮಾತು ನನಗೂ ಖುಷಿ ಕೊಟ್ಟಿತು. ನಿರೂಪಣೆ ಚೆನ್ನಾಗಿದೆ. ಸನ್ನಿವೇಶಕ್ಕೆ ಸಂಬಂಧಿಸಿದ ಕೆಲ ಫೋಟೋಗಳನ್ನ ಹಾಕಿ. ಸಾಧ್ಯವಾದರೆ ಫೋಟೋಗಳ ಸಂಖ್ಯೆಯೂ ಹೆಚ್ಚಾಗಿರಲಿ…

  ಪ್ರತಿಕ್ರಿಯೆ
  • Mallikarjuna Hosapalya

   ಎರಡನೇ ಭಾಗವೂ ಬಂದಾಯಿತು ರವೀ, ಧನ್ಯವಾದ.

   ಪ್ರತಿಕ್ರಿಯೆ
 3. Anusuya SSharma.

  ಸೊಗಸಾದ ನಿರೂಪಣೆ. ಮುಂದೇನು? ಕುತೂಹಲ ಹುಟ್ಟಿಸಿದರೂ, ಚಿತ್ರಗಳಿಲ್ಲದ ನಿರಾಸೆ. ಬೆನ್ನ ಹಿಂದೇ ಚಿತ್ರಗಳು ಪ್ರಕಟವಾಗಿರುವ ಸುದ್ದಿ, ಭರವಸೆ. ಮುಂದಿನ ಕಂತಿಗಾಗಿ ಕಾಯುತ್ತಿರುತ್ತೀವಿ ಶುಭಾಷಯಗಳು.
  ಅನುಸೂಯ ಶರ್ಮ.

  ಪ್ರತಿಕ್ರಿಯೆ
 4. Dr.Ganesh M Hegde

  ’ಅವಧಿ’ ಕಳಿಸಿದ್ದಕ್ಕೆ ಧನ್ಯವಾದಗಳು.
  ನನ್ನ ಕೆಲವು ಅನಿಸಿಕೆಗಳು:
  -‘….ಈತರಕೀತರ’ ಎಂದು ನಾವು ಬಂದ ಉದ್ದೇಶವನ್ನು ಹೇಳಿದೆವು.’- ಈ ವಾಕ್ಯ ಇಷ್ಟವಾಯಿತು,
  -ಎಂಥ ವ್ಯತ್ಯಾಸ ನೋಡಿ- ಕೆನೆತ್ ನ ಕಾಲದಲ್ಲಿ ೨೧ನೇ ಮೈಲಿಕಲ್ಲಿನ ಹತ್ತಿರ ’ಗರ್ ಗರ್ ’ಅಂತ ’ನರ’ಭಕ್ಷಕ ಬರುತ್ತಿತ್ತು. ಈಗ ವಾ’ನರ’ಗಳು ’ಸರ್ ಸರ್’ ಅಂತಿದಾವೆ!
  -ಇದೊಳ್ಳೆ ’ಬುಕಾನನ್ ಹಾದಿಯಲ್ಲಿ ಶಿವಾನಂದ ಕಳವೆ ’ ಅನ್ನೋ ಥರ ಇದೆಯಲ್ಲ?
  -ಈ ಕಥೆಗೆ ಒಂದು ಸಬ್ ಟೈಟಲ್- “ಕೆಂಪಿಯೊಳಗೆ ಕೇಪಿ!”
  -ಅಂತೂ ’ಪ್ಯಾಟೀ ’ಮಂದೀನ ಕಾಡೀಗ್ ಒಯ್ದಿದೀರಿ!
  -ನಂಗೂ ನಿಂ ಜತೀ ಬರೂಣು ಅನಸಾಕ ಹತ್ತೈತಿ!
  =ಗಣೇಶ ಹೆಗಡೆ
  ==ಗಣೇಶ ಹೆಗಡೆ

  ಪ್ರತಿಕ್ರಿಯೆ
 5. shadakshari.tarabenahalli

  ನಿರೂಪಣೆ ತುಂಬಾ ಚೆನ್ನಾಗಿದೆ ಮಲ್ಲಿ….
  ನಿಮ್ಮೊಂದಿಗೆ ನಮ್ಮನ್ನೂ ಕರೆದೊಯ್ಯುತ್ತಿರುವುದಕ್ಕೆ ತುಂಬಾ ಧನ್ಯವಾದಗಳು…
  ಕೇ.ಪಿ.ಗೆ ಕೇಳಿದೆ ಅಂತಾ ಹೇಳಿ…ಪ್ಯಾಟಿಗೂ ಕೂಡ…ನನ್ನ ನೆನಪುಗಳು…
  ಇಂತಿ ನಿಮ್ಮ ಪ್ರೀತಿಯ…
  ಷಡಕ್ಷರಿ ತರಬೇನಹಳ್ಳಿ.

  ಪ್ರತಿಕ್ರಿಯೆ
 6. sampath

  ನೀವು ಅಪ್ ಲೋಡ್ ಮಾಡಿದ 2 ವಷ೵ಗಳ ನಂತರ ನಿಮ್ಮ ಬರಹ ಓದಲು ಸಿಕ್ಕಿತು. ಪೂಣ೵ಚಂದ್ರ ತೇಜಸ್ವಿಯವರ ಅಭಿಮಾನಿಗಳಲ್ಲಿ ನಾನು ಒಬ್ಬ. ಅಂಡಸ೵ನ್ ರವರು ಬರೆದು ತೇಜಸ್ವಿರವರು ಅನುವಾದಿಸಿದ ಅಷ್ಟು ಪುಸ್ತಕಗಳನ್ನು ಓದಿದ್ದೇನೆ. ನಿಮ್ಮ ಬರವಣಿಗೆ ಶೈಲಿ ಕೂಡ ಇಷ್ಟವಾಯಿತು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: