ಕೆ೦ಪಮ್ಮನ ಗುಡ್ ವರ್ಕ್ ಬುಕ್! – ಸ್ವರ್ಣಾ ಬರಹ

ಆಡದೆಯೆ ಮಾಡುವನು ರೂಢಿಯೊಳು…

ಸ್ವರ್ಣ ಎನ್ ಪಿ

ಶಾಲೆಯ ಅಂಕ ಪಟ್ಟಿಗಳು ತುಂಬಾ ಚೆನ್ನಾಗಿರುತ್ವೆ ನೋಡೋಕೆ. ನಮ್ಮ ಕಾಲದಲ್ಲಿ (ನಾ ಮುದುಕಿ ಅನ್ಕೋಬೇಡಿ ಪ್ಲೀಸ್ ) ಹಳದಿ, ಪಿಂಕು ಬಣ್ಣದಲ್ಲಿ ಬರುತಿತ್ತು. ಎಲ್ಲ ವಿಷಯಗಳ ಅಂಕ, ಒಟ್ಟು ಅಂಕ, ಶ್ರೇಣಿ (rank ), ಶಿಕ್ಷಕರ ಸಹಿ ಅವರ ಷರಾ ಎಂಬ columns ಮುಗಿದ ಮೇಲೆ, ಕೊನೆಯಲ್ಲಿ ಪೋಷಕರ ಸಹಿ ಅಂತ ಒಂದು ಬಹು ಮುಖ್ಯ ಕಾಲಂಗಳ ನಡುವೆ, ಓದಿ ಪರೀಕ್ಷೆ ಬರೆದ ನಮ್ಮ ಪಾಡು ಹರಿದು ಹಂಚಿರುತಿತ್ತು. ಇಂತಿಪ್ಪ ಅಂಕಪಟ್ಟಿಯಲ್ಲಿ ಒಂದು ವಿಷಯ ವಿರುತಿತ್ತು ನೀತಿ ವಿಜ್ಞಾನ ಅಂತ. ಈ ವಿಷಯದಲ್ಲಿ ಬಂದ ಅಂಕ ಒಟ್ಟು ಅಂಕಕ್ಕೆ ಸೇರುತ್ತಿರಲಿಲ್ಲ. ಆದ್ದರಿಂದ ಶ್ರೇಣಿಗೂ ಇದಕ್ಕೂ ಸಂಬಧವಿರಲಿಲ್ಲ. ಕೆಲದಿನಗಳ ನಂತರ ನೀತಿ ವಿಜ್ಞಾನ ಅಂಕ ಪಟ್ಟಿಯಲ್ಲೂ ತನ್ನ ಅಸ್ಥಿತ್ವ ಕಳೆದುಕೊಂಡಿತು. ನೀತಿ ವಿಜ್ಞಾನವನ್ನ ಸಾಮಾನ್ಯವಾಗಿ ನಮ್ಮ ಕಾನ್ವೆಂಟಿನ ಸಿಸ್ಟರುಗಳು ಕಲಿಸುತ್ತಿದ್ದರು. ಎಲ್ಲ ವಿಷಯಗಳಿಗಿರುವಂತೆ ನೀತಿ ವಿಜ್ಞಾನ ಕ್ಕೂ ಒಂದು ನೋಟ್ಸ್ ಇರುತಿತ್ತು . ಲೆಕ್ಕಕ್ಕಿಲ್ಲದ ವಿಷಯವಾದ್ದರಿಂದ ನಾವು ಹಿಂದಿನ ವರ್ಷದ ಅಳಿದುಳಿದ ನೋಟ್ಸ್ನ ಮುಂದಿನ ವರ್ಷದ ನೀತಿ ವಿಜ್ಞಾನ ಕ್ಕೆ ಬಳಸುತ್ತಿದ್ದೆವು . ಸ್ವಲ್ಪ ವರ್ಷಗಳ ನಂತರ ನೋಟ್ಸ್ ಜೊತೆಗೆ ಒಂದು ಸಣ್ಣ ಪುಸ್ತಕ ಸೇರಿಕೊಂತು, ಬೇರೆ ನೋಟ್ಸ್ ಗಳಂತಿಲ್ಲದೆ ಮುದ್ದಾದ ಒಂದು ಹತ್ತಿಂಚು ಉದ್ದದ ಪುಸ್ತಕ. ಹಾಳೆಯ ಕೊನೆಗೆ ಒಂದು ಕೆಂಪಿನ ಗೀಟು ಇದ್ದದ್ದರಿಂದ, ಪುಸ್ತಕ ಮುಚ್ಚಿ, ಬದಿ ಇಂದ ನೋಡಿದರೆ ಪೂರ್ತಿ ಕೆಂಪಗೆ, ಒಂಥರಾ ಚೆನ್ನಾಗಿತ್ತು. ಅದರ ಹೆಸರೇ ,’ಗುಡ್ ವರ್ಕ್ ಬುಕ್’. ಅದರಲ್ಲಿ ದಿನವೂ ನಾವು ಮಾಡಿದ ಒಂದು ಒಳ್ಳೆ ಕೆಲಸದ ಬಗ್ಗೆ ಬರೀ ಬೇಕಿತ್ತು . ಯಾವಾಗಲೋ ಒಮ್ಮೆ ಶಿಕ್ಷಕರು ನೋಡುತ್ತಿದ್ದರು. ಆದ್ದರಿಂದ ಯಾರೂ ಬರೆಯುವ ಕಷ್ಟ ತೆಗೆದುಕೊಳ್ಳುತ್ತಿದ್ದಿಲ್ಲ , ಅಪ್ಪಿ ತಪ್ಪಿ ಶಿಕ್ಷಕರು ನೋಡುತ್ತೆನೆಂದ ದಿನ, ಯಾರೋ ಪುಣ್ಯಾತ್ಗಿತ್ತಿ ಬರೆದ ಒಳ್ಳೆ ಕೆಲಸವನ್ನ ನಾವು ಯಥಾವತ್ತಾಗಿ ಕಾಪಿ ಮಾಡುವ ಒಳ್ಳೆ ಕೆಲಸ ಮಾಡುತ್ತಿದ್ದೆವು. ಅದರಲ್ಲಿ ಬರೆಯುತ್ತಿದ್ದ ಒಳ್ಳೆ ಕೆಲಸಗಳ ಸ್ಯಾಂಪಲ್ಲುಗಳು : ** ನಾನು ಈ ದಿನ ನಾಯಿಗೆ ನೀರು ಕೊಟ್ಟೆ ನಾಯಿ ಕಾಯ್ತಾ ಇರತ್ತಾ ನಾ ಕೊಡೊ ನೀರಿಗೆ? ** ನಾನು ಈ ದಿನ ನನ್ನ ತಾಯಿಗೆ ಸಹಾಯ ಮಾಡಿದೆ . ಅವಳು ತಟ್ಟೆಗೆ ಹಾಕಿದ್ದನ್ನ ಮರು ಮಾತಾಡದೆ ತಿಂದು ಮುಗಿಸಿದೆ ! ** ನಾನು ಈ ದಿನ ಕುರುಡನಿಗೆ ರಸ್ತೆ ದಾಟಿಸಿದೆ ಒಂದೂ ಸಿಗ್ನಲ್ ದೀಪಗಳಿರದ ಊರಲ್ಲಿ , ಐದು ನಿಮಿಷಕ್ಕೆ ೩-೪ ವಾಹನ ಓಡಾಡುವ ಕಾಲದಲ್ಲಿ , ಒಬ್ಬ ಕುರುಡ ನಾನು ರಸ್ತೆ ದಾಟಿಸಲಿ ಅಂಥ ಕಾಯ್ತಾ ಇದ್ದ ! ** ನಾನು ಈ ದಿನ ಭಿಕ್ಷುಕನಿಗೆ ೧೦ ಪೈಸೆ ಕೊಟ್ಟೆ. ೧೦ ಪೈಸೆಗೆ ೨ ಬೋಟಿ, ೨ ಶುಂಟಿ ಪೆಪ್ಪೆರ್ಮೆಂಟ್ , ಒಂದು ಸಣ್ಣ ಮುಚ್ಚಳದ ತುಂಬಾ ಜೀರಿಗೆ ಪೆಪ್ಪೆರ್ಮೆಂಟ್, ಒಂದು ಕಂಬರ್ಗಟ್ (ಬೀಡಿ ಅಂಗಡಿಯಲ್ಲಿ ಗಾಜಿನ ಭರಣಿಯಲ್ಲಿ ಹಾಕಿಡುತ್ತಿದ್ದ ಕೆಂಪನೆ ತಿನಿಸು) ಬರುತ್ತಿದ್ದ ಕಾಲದಲ್ಲಿ ನಾನು ಭಿಕ್ಷುಕನಿಗೆ ಕೊಟ್ಟೆ, ಅದನ್ನ ಲೋಕ ನಂಬಬೇಕು ಇದಕ್ಕೆಲ್ಲ ಕಳಶವಿಟ್ಟಂತ್ತಿದ್ದ ಗುಡ್ ವರ್ಕು, **ನಾನು ಈ ದಿನ ನಾಯಿಗೆ ಬನ್ನು ಕೊಟ್ಟೆ. ಕ್ರಿಶ್ಚಿಯನ್ ಸ್ಕೂಲಿನ ಪ್ರಭಾವವೋ, ಅಥವಾ ಮೊದಲು ಬರೆದ ಮಹಾ ಮಹಿಳೆ ಹಾಗೆ ಬರೆದಿದ್ದರಿಂದಲೋ , ಒಟ್ಟಿನಲ್ಲಿ ನಾವೂ ನಾಯಿಗೆ ಬನ್ನು ತಿನಿಸಿದ್ದೆವು. ಆವಾಗ ನಾಲ್ಕಾಣೆಗೋ (೨೫ಪೈಸೆ) ಎಂಟಾಣೆಗೋ (೫೦ ಪೈಸೆ) ಒಂದು ಬನ್ನು ಬರುತಿತ್ತು. ನಾವಿದ್ದ ವಟಾರದಲ್ಲಿ ನಾಯಿಯೂ ಇತ್ತು, ಅಮ್ಮ ಅದಕ್ಕೆ ಯಾವಾಗಲಾದರೂ ಉಳಿದ ಅನ್ನ ಹಾಕುತ್ತಿದ್ದರು.ಅಷ್ಟು ಬಿಟ್ಟು, ಕೊಂಡು ತಂದ ಬನ್ನನ್ನ ಅದಕ್ಕೆ ಹಾಕಿದ್ದರೆ, ನಮ್ಮ ಕಥೆ ಅಷ್ಟೇ! ಆಗಾಗ ಇವುಗಳಲ್ಲಿ ಸ್ವಲ್ಪ ಬದಲಾವಣೆ ಇರುತ್ತಿತ್ತು. ನಾಯಿಯ ಬಾಯಾರಿಕೆ ಇಂಗಿ ಬೆಕ್ಕಿಗೆ ನೀರಡಿಕೆಯಾದರೆ, ಕುರುಡನ ಬದಲಾಗಿ ಮುದುಕಿ / ಕುಂಟ / ಮುದುಕ ರಸ್ತೆ ದಾಟುತ್ತಿದ್ದರು .ಆದ್ರೆ ೧೦ ಪೈಸೆಗಿಂತ ಜಾಸ್ತಿ ಕೊಟ್ಟೆ ಅನ್ನೋದಕ್ಕೂ ಮನಸು ಬರ್ತಿರ್ಲಿಲ್ಲ !. ಒಂದೆರಡು ವರ್ಷಗಳ ನಂತರ ಸಿಸ್ಟರುಗಳಿಗೆ ನಮ್ಮ ಬಂಡವಾಳ ಗೊತ್ತಾಗಿ, ‘ಗುಡ್ ವರ್ಕ್ ಬುಕ್’ ನಿಂತು ಹೋಯಿತು. ಈಗ ನಮ್ಮಲ್ಲಿಗೆ ಒಬ್ಬ ಅಜ್ಜಿ ಗೃಹ ಕೃತ್ಯಗಳ ಸಹಾಯಕ್ಕೆಂದು ಬರುತ್ತಾರೆ. ಅವರ ಹೆಸರು ಕೆಂಪಮ್ಮ. ಕೋಲಾರದ ಹತ್ತಿರ ಯಾವುದೋ ಹಳ್ಳಿಯವರು. ಅವರ ಮಗ ಗಾರೆ ಕೆಲಸಕ್ಕೆ ಹೋಗುತ್ತಾರೆ. ನಮ್ಮ ಕಟ್ಟಡದ ಯಾವುದೋ ಕೆಲಸಕ್ಕಾಗಿ ಅವರ ಮಗ ರಾಮಾಂಜಿ ಮತ್ತು ಸಂಗಡಿಗರು ಬಂದಿದ್ದರು. ಅವರಲ್ಲಿ ಒಂದು ೨.೫ ವರ್ಷದ ಮರಿಯಮ್ಮ ಎಂಬ ಮಗುವೂ ತಾಯಿಯ ಜೊತೆ ಬಂದಿತ್ತು. ಹೊತ್ತು ಕಳೆದಂತೆ ಆ ಮಗು ಅಲ್ಲೇ ಒಂದು ಸೀಮೆಂಟಿನ ಚೀಲದ ಮೇಲೆ ಮಲಗಿ ನಿದ್ದೆ ಹೋಯಿತು. ಮುದ್ದಾದ, ಮೈ ಕೈ ತುಂಬಿಕೊಂಡಿದ್ದ ಮಗು. ನಾನು ಆ ಮಗುವಿಗೆ ಚಾಕ್ಲೇಟ್ ಕೊಟ್ಟು, ಅವರ ಪ್ರವರ ಕೇಳಿ, ನನ್ನ ಮನದ ‘ಗುಡ್ ವರ್ಕ್ ಬುಕ್’ ನಲ್ಲಿ ಅಂದಿನ ಒಳ್ಳೆ ಕೆಲಸ ದಾಖಲಿಸಿಕೊಂಡು ಬಂದೆ. ಮಾರನೇ ದಿನ ನಾನು ಮೇಲಿಂದ ನೋಡುತ್ತಿದ್ದಾಗ ಮಗುವಿನ ತಾಯಿ ಕೆಂಪಮ್ಮಜ್ಜಿಯಬಳಿ ಏನೋ ಹೇಳುತ್ತಿದ್ದಳು. ಅಜ್ಜಿ ಮೇಲೆ ಬಂದ ಮೇಲೆ ವಿಚಾರಿಸಿದರೆ ಅಜ್ಜಿ ಅಂದರು, “ಮಗೂಕ ನಾಷ್ಟ ತಂದಿಲ್ಲ, ಎಲ್ಲಾನ ಕೊಡ್ಸು, ಅಂದ್ಲು, ಇಲ್ಲಿ ಎಲ್ಲಿ ಕೊಡ್ಸಾದು? ಅದ್ಕೆ ಮನಿಗ್ ಹೋಗಿ, ಬೆಳಿಗ್ಗೆ ಮಾಡಿದ್ದ ಚಿತ್ರಾನ್ನ ತಂದ್ ಕೊಟ್ಟೆ” ಅಂದ್ರು. ಯಾಕೋ ನನ್ನ ಗುಡ್ ವರ್ಕ್ ಬುಕ್’ ರಂಗು ಕಳೆದುಕೊಂಡಂತೆ, ಕೆಂಪಮ್ಮಳ ‘ಗುಡ್ ವರ್ಕ್ ಬುಕ್’ ಅವಳ ಎಲೆ ಅಡಿಕೆ ಜಗಿದ ಬಾಯಿಗೆಂಪಿಗಿಂತ ಕೆಂಪಾಗಿರುವಂತೆ ಕಂಡಿತು .]]>

‍ಲೇಖಕರು G

May 4, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This