ಕೆ ಎಸ್ ಪೂರ್ಣಿಮಾ ಇನ್ನಿಲ್ಲ

ಕೆ ಎಸ್ ಪೂರ್ಣಿಮಾ ಇನ್ನಿಲ್ಲ. ಸದಾ ಆತ್ಮವಿಶ್ವಾಸ ತುಂಬುತ್ತಿದ್ದ, ಸ್ಫೂರ್ತಿ ನೀಡುತ್ತಿದ್ದ ಪೂರ್ಣಿಮಾ ಇಲ್ಲವಾಗಿದ್ದಾರೆ. ಟಿ ಪಿ ಅಶೋಕ್ ಇವರ ಜೊತೆ ಸಾಹಿತ್ಯ ಲೋಕದಲ್ಲಿ ದಶಕಗಳ ಕಾಲ ಹೆಜ್ಜೆ ಹಾಕಿದ ಪೂರ್ಣಿಮಾರನ್ನು  ಈ ಹಿಂದೆ ‘ಅವಧಿ’ಗಾಗಿ ಕೆ ಅಕ್ಷತಾ ನೆನಪಿಸಿಕೊಂಡಿದ್ದು ಹೀಗೆ. ‘ನೀನಾಸಂ ಶಿಬಿರ ನಡೆಯುವಾಗ ಓಹ್ ಮೇಡಂ, ಮೇಡಂ ಎಂಬ ಒಕ್ಕೂರಲ ಧ್ವನಿ ಕೇಳಿ ಬಂದತ್ತ ತಿರುಗಿದರೆ ಅಲ್ಲಿ ತಮ್ಮ ಎಂದಿನ ಚೈತನ್ಯ ಶಾಲಿ ನಗುವಿನೊಂದಿಗೆ ಪೂರ್ಣಿಮಾ ಮೇಡಂ ಯಾವ ಭಿನ್ನಭಾವವೂ ಇಲ್ಲದೆ ಎಲ್ಲರೊಂದಿಗೆ ಬೆರೆತು ಕುಶಲೋಪರಿ ನಡೆಸುತ್ತಿರುವ ದೃಶ್ಯ ಕಣ್ಣಿಗೆ ಬೀಳುತ್ತದೆ. ಸಾಗರದ ಎಲ್.ಬಿ. ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿರುವ ಪೂರ್ಣಿಮಾರ ಪಾಠದಷ್ಟೆ ಅವರ ಚೈತನ್ಯಶಾಲಿ ವ್ಯಕ್ತಿತ್ವ ಕೂಡ ಪ್ರಾರಂಭದ ಬ್ಯಾಚ್ನಿಂದ ಹಿಡಿದು ಇಂದಿನ ವಿದ್ಯಾರ್ಥಿಗಳವರೆಗೂ ಎಲ್ಲರನ್ನು ಪ್ರಭಾವಿತಗೊಳಿಸುತ್ತಿದೆ’. ಕೆ ಎಸ್ ಪೂರ್ಣಿಮಾ ಅವರು ಅವಧಿ ಶಿಕ್ಷಕರ ದಿನಕ್ಕಾಗಿ ತಂದ ವಿಶೇಷ ಸಂಚಿಕೆ ಗುರುವೇ ನಮನಕ್ಕೆ ಬರೆದ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇವೆ. ‘ಅವಧಿ’ ಈ ಮೂಲಕ ಪೂರ್ಣಿಮಾರಿಗೆ ಸಂತಾಪ ಸಲ್ಲಿಸುತ್ತಿದೆ.

ವೈದೇಹಿ ವಾಚಿಕೆ ಬಿಡುಗಡೆ ಸಮಾರಂಭದಲ್ಲಿ ‘ನುಡಿ’ ಪುಸ್ತಕದ ರಂಗನಾಥ್ ಅವರೊಂದಿಗೆ ಕೆ ಎಸ್ ಪೂರ್ಣಿಮಾ

+++ -ಕೆ.ಎಸ್. ಪೂರ್ಣಿಮಾ w5ಸೃಜನ್ ಹೈಸ್ಕೂಲಿನ ದಿನಗಳು–ತುಂಬ ಉತ್ಸಾಹದ, ವಿಚಿತ್ರ ಸಂಕೋಚಗಳ, ಸಣ್ಣ ಸಣ್ಣ ನಾಚಿಕೆಗಳ ವಯಸ್ಸು. ನಮ್ಮೂರಿನಲ್ಲಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ, ಅಲ್ಲಿನ ಎಲ್ಲ ಶಿಕ್ಷಕರು ಒಂದಲ್ಲ ಒಂದು ರೀತಿಯಲ್ಲಿ ನಮ್ಮನ್ನು ಪ್ರಭಾವಿಸುತ್ತಾರೆ ಎಂದು ಭಾಸವಾಗುತ್ತಿದ್ದ ಕಾಲ. ಹಾಗಿದ್ದೂ ಕೆಲವರ ಬಗ್ಗೆ ಮೆಚ್ಚುಗೆ, ಕೆಲವರ ಬಗ್ಗೆ ಆಕರ್ಷಣೆ, ಕೆಲವರ ಬಗ್ಗೆ ಭಯ, ಇನ್ನು ಕೆಲವರ ಬಗ್ಗೆ ನಿರಾಸಕ್ತಿ ಈ ಎಲ್ಲವು ಅಪ್ರಯತ್ನವಾಗಿ ಮೂಡಿದ ಭಾವನೆಗಳು. ಇಂಥ ವಾತಾವರಣದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ತಮ್ಮ ಲವಲವಿಕೆಯ ವರ್ತನೆ, ಆಲೋಚನೆಗಳಿಂದಾಗಿ ವಿಶಿಷ್ಟರಾಗಿ ಕಾಣುತ್ತಿದ್ದ ಶಾಂತಾರಾಮ-ಸರ್ವೇ ಸಾಮಾನ್ಯವಾಗಿ -ಎಸ್.ಆರ್.ಎಸ್. ಎಂದೇ ಪರಿಚಿತರಾಗಿದ್ದ ಆ ಮೇಷ್ಟರು ನನಗೆ ಇಂದಿಗೂ ನೆನಪಾಗುತ್ತಾರೆ. ಮೂಲತ: ಅವರು ವಿಜ್ಞಾನ ಶಿಕ್ಷಕರು. ನಮಗೆ ವಿಜ್ಞಾನ ಹಾಗು ಗಣಿತ ಕಲಿಸುತ್ತಿದ್ದವರು. ನನ್ನ ಹಗಲುಗನಸಿನ ಮನಸ್ಸಿನಲ್ಲಿ ಗಣಿತ ಅಷ್ಟಾಗಿ ಕೂರುತ್ತಿರಲಿಲ್ಲ. ಹಾಗಾಗಿ ಅವರ ಕಲಾತ್ಮಕ ಆಲೋಚನೆ ಪ್ರತಿಭೆಗಳ ಬಗ್ಗೆ ತುಂಬ ಸೆಳೆತವಿದ್ದರೂ ಅವರ ಜತೆ ಸಹಜ ಮಾತುಕತೆ ನಡೆಸಲು ಸಹ ನನ್ನ ಗಣಿತಭಯ ಅದಕ್ಕೆ ಅವಕಾಶ ಕೊಡುತ್ತಿರಲಿಲ್ಲ. ಆದರೆ ಎಸ್.ಆರ್.ಎಸ್ ನಮ್ಮ ಶಾಲೆಯಲ್ಲಿ ಕೇವಲ ಶಿಕ್ಷಕರು ಮಾತ್ರವಾಗಿರದೆ ತಮ್ಮ ಬಹುಮುಖ ವ್ಯಕ್ತಿತ್ವದಿಂದ. ಬಹುಮುಖೀ ಆಸಕ್ತಿಗಳಿಂದ, ಶಿಸ್ತಿನ ವರ್ತನೆಯಿಂದ, ತಮ್ಮ ಪ್ರತಿಭೆಯಿಂದ ಉತ್ತಮ ಸಂವೇದನೆಗಳ ಆದರ್ಶದ ಪ್ರತೀಕದಂತಿದ್ದರು. ಆ ನಂತರ ಎಷ್ಟೋ ದಶಕಗಳು ಕಳೆದಿವೆ. ಶಾಂತಾರಾಮ ಮೇಷ್ಟ್ರು ಈಗ ನಮ್ಮ ಮನೆಯ ಬಳಿಯೇ ವಾಸವಾಗಿದ್ದಾರೆ. ಆಗಿಗಿಂತ ಬಹಳಷ್ಟು ವಿಸ್ತಾರವಾದ ಇಂದಿನ ಬಾಳ ಸಂದರ್ಭದಲ್ಲಿ ಅವರನ್ನು ಮತ್ತೆ ಮತ್ತೆ ಭೇಟಿ ಮಾಡುತ್ತೇನೆ. ಸಂಸಾರದ್ದೇ ಆಗಿರಲಿ ಸಮಾಜದ್ದೆ ಆಗಿರಲಿ ಅಥವಾ ಅವರ ಇನ್ನೊಂದು ಗಾಢವಾದ, ತೀವ್ರವಾದ ಆಸಕ್ತಿ ವಿಶೇಷ–ಸಂಗೀತವಾಗಿರಲಿ-ಅವುಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತ ಅದರಿಂದಾಗಿ ನನ್ನ ಬುದ್ಧಿ ಮನಸ್ಸು ಹಿಗ್ಗಿವೆ ಅಲ್ಲವೇ ಅಂತ ಆನಂದಪಡುತ್ತೇನೆ. ದಿಢೀರಂತ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ತೊಂದರೆ ಬಂದರೆ, ನ್ಯಾಶನಲ್, ಇಂಟರ್ನ್ಯಾಶನಲ್ ವಿಷಯಗಳ ಮಾಹಿತಿ ಬೇಕಾಗಿದ್ದರೆ ನಾನು ಅವರ ಜತೆ ಚರ್ಚಿಸಿ ನಿರ್ಧರಿಸಲು ಅವರಲ್ಲಿಗೆ ಓಡುತ್ತೇನೆ. ಅತ್ಯಂತ ಕೃತಕೃತ್ಯತೆಯ ಸಂಗತಿ ಎಂದರೆ -ಸಂಗೀತ,ಸಾಹಿತ್ಯ, ರಾಜಕೀಯ, ಸಮಾಜ, ವಿಜ್ಞಾನ, ಆರೋಗ್ಯ,ವಾಸ್ತುಶಿಲ್ಪ—-ಹೀಗೇ ಇನ್ನೂ ಅನೇಕ ಆಸಕ್ತಿಗಳು, ಜ್ಞಾನಗಳು ಮೈಗೂಡಿದಂಥ ಅವರ ವ್ಯಕ್ತಿತ್ವ ನನ್ನ ದೃಷ್ಟಿಯಲ್ಲಿ ಮತ್ತಷ್ಟೂ ಮೇಲೇರಿದೆ. ಅಂಥ ಹೃದಯವಂತ, ಸರಳ, ಜೀವಂತಿಕೆ ತುಂಬಿದ, ತನ್ನ ಸಹಾಯ ಬಯಸಿದವರನ್ನು ಎಂದೂ ಉಪೇಕ್ಷಿಸದ, ಹಲವರ ದೃಷ್ಟಿಯಲ್ಲಿ ವಿಕ್ಷಿಪ್ತವೆನ್ನಿಸುವ ಈ ಜೀನಿಯಸ್-ಎಸ್.ಆರ್.ಎಸ್ ನನಗೆ ಚಿರಗುರುವಾಗಿ, ಬಂಧುವಾಗಿ ನಮ್ಮ ಬಳಿಯಿರುವುದೇ ನನಗೆ ಸಿಗುತ್ತಿರುವ ವಿಶೇಷ ಸಮಾಧಾನ, ಸಂತೋಷ ಹಾಗು ತೃಪ್ತಿ.  ]]>

‍ಲೇಖಕರು G

July 24, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಗರದಾಚೆಯ ಸೂರು…

ಸಾಗರದಾಚೆಯ ಸೂರು…

ರಂಜನಾ ಹೆಚ್ ಬೆಚ್ಚಗಿನ ಮನೆಯಿರಲು ವೆಚ್ಚಕ್ಕೆ ಹೊನ್ನಿರಲು ಇಚ್ಛೆಯನರಿತು ನಡೆವ ಸತಿಯಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಈ...

‘ಬಂಟಿ’ ನೆನಪು

‘ಬಂಟಿ’ ನೆನಪು

ಉಷಾ ನರಸಿಂಹನ್ ಎಲ್ಲೋ ಏನೋ ಕಳೆದು ಹೋದ ಹಾಗೆ… ಬದುಕಿನ ಮುಖ್ಯ ತಂತುವೊಂದು ಕಳಚಿಕೊಂಡ ಹಾಗೆ. ನ್ಯಾಯವೆ; ಎಲ್ಲಾ ಸಾವುಗಳು ಹತ್ತಿರದವರನ್ನು...

2 ಪ್ರತಿಕ್ರಿಯೆಗಳು

 1. mahadev

  ಅವರ ನೆನಪು ಅಂದರೆ ಇದೆಲ್ಲ ನೆನಪಾಗುತ್ತಿದೆ. ನೀನಾಸಮ್ ವಿದ್ಯಾರ್ಥಿಯಾಗಿದ್ದಾಗ ನಾಟಕ ಮುಗಿದಾದ ಮೇಲೆ ಪೂರ್ಣಿಮಾ ಮೆಡಮ್ ಯಾವತ್ತೂ ಗ್ರೀನ್ ರೂಮಗೆ ಬಂದು ವಿಷ್ ಮಾಡಿಯೇ ಹೋಗುತ್ತಿದ್ದರು. ನೀನಾಸಮ್ ಮುಂದಿನ ಕಟ್ಟೆಯ ಮೇಲೆ ಅವರು ವಿದ್ಯಕ್ಕ ಜೊತೆಜೊತೆಯಾಗಿ ಮಾತಾಡುತ್ತ ಕುಳಿತಿರುತ್ತಿದ್ದರು. ಮಹಾರಾತ್ರಿ ನಾಟಕದ ನನ್ನ ಮಾರನ ಪಾತ್ರ ತುಂಬ ಮೆಚ್ಚಿಕೊಂಡು ಮಾತಾಡಿದ್ದರು. ಅವರಿಲ್ಲ ಅನ್ನೋದು ಬೇಜಾರಿನ ಸಂಗತಿ..

  ಪ್ರತಿಕ್ರಿಯೆ
 2. D.RAVI VARMA

  ಪೂರ್ಣಿಮಾ ಇನ್ನಿಲ್ಲ ಎನ್ನವ ಮಾತೆ ನನಗೆ ಒಂದು ದೊಡ್ಡ ಶಾಕ್ ,ನಾನು ಕಾಲೇಜು ಓದುವಾಗ ಹೆಗ್ಗೋಡು ಸಂಸ್ಕೃತಿ ಶಿಭಿರಕ್ಕೆ ಹೋಗಿದ್ದೆ, ಅಲ್ಲಿಅನಂತಮೂರ್ತಿ, ಕಾರಂತರು,, ಕಾರ್ನಾಡರು,ಕಾಸರವಳ್ಳಿ, ದಿ ಅರ ನಾಗರಾಜ್, ಕೀರಂ ಒಲೆನ್, ಪ್ರಸನ್ನ,ಜಿ,ಎಹ್ ನಾಯಕ, ಕಂಬಾರರು ,ಸುಬ್ಬಣ್ಣ,ವೈದೇಹಿ ,ಒಂದಿಸ್ತು ಬೇರೆ ರಜುಅದ ಬರಹಗಾರರು , ಇಡೀ ಕಾರ್ಯಕ್ರಮದ ನಿರ್ದೇಶಕ ಅನಂತಮೂರ್ತಿ ಅವರೊಟ್ಟಿಗೆ ತಿ,ಪಿ ಅಶೋಕ, ಆ ಕ್ಷಣದಲ್ಲಿ ನಮ್ಮೆಲ್ಲರ ಗಮನ ಸೆಳೆಯುತ್ತಿದು ಈ ಮೇಡಂ ಪೂರ್ಣಿಮ ಅವರ ಸರಳ ಮಾತು, ಎಲ್ಲೋರೋದನೆಸಂವಾದ, ಕುಶೋಲೋಪರಿ, ಅವರ ಘಮ್ಬೀರ್ಯ, ಅವರ ಸುಂದರ ಉಡುಗೆ, ನೀನಾಸಂ ಗೆ ಹೋಗಿರುವ ಯಾವುದೇ ವಿದ್ಯಾರ್ಥಿ, ಶಿಬಿರರ್ತಿ, ಉಪನ್ಯಾಸಕರು, ಅಥಿತಿಗಳು ಎಲ್ಲರೊಡನೆ ಪ್ರೀತಿಯ ಮಾತನಾಡಿದ, ಎಲ್ಲರ ಜೊತೆ ಸಂವಾದಮಾಡಿದ ,ಅಲ್ಲಿಯ ಎಲ್ಲ ಕಾರ್ಯಕ್ರಮಗಳಲ್ಲಿ ಒಂದಾಗಿ ಬೆರೆತು ಕೊಂದ ಈ ಮಹಾ ಜೀವಿಗೊಂದು ನನ್ನ ಹೃದಯ ಮಿಡಿದ ಕಂಬನಿ , ಮತ್ತೆ ಮತ್ತೆ ಸಾವು ನನ್ನನ್ನು ಕಾಡುತ್ತಿದೆ ,
  ಈ ದೇಹದಿಂದ ದೂರನಾದೆ ಏಕೆ ಆತ್ಮವೇ ,
  ಈ ಸಾವು ನ್ಯಾಯವೇ ……
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: