ಕೆ ಡಿ ಶಿವಕುಮಾರ್ ಹಾತ್ಮಚರಿತ್ರೆ!

ಮಾಸೆ ಟೈಮ್ಸ್. ಕನ್ನಡ ಟೈಮ್ಸ್ ಪತ್ರಿಕೆಯನ್ನು ರೆಗ್ಯೂಲರ್ ಆಗಿ ಓದುವವರಿಗೆ ಈ ಅಮಾಸೆ ಟೈಮ್ಸ್ ರುಚಿ ಗೊತ್ತಿರುತ್ತದೆ. ಇದರ ಆರೋಗ್ಯಕರ ಕೀಟಲೆ ಖುಷಿ ಕೊಡುವಂಥದ್ದು. ಇದರ ರುಚಿಯನ್ನು ಅವಧಿಯ ಓದುಗರಿಗೂ ಬಡಿಸೋಣ ಎಂಬ ಆಸೆ.

* * *

amaase.jpgತ್ತ “ಕನಕನ ಕಿಂಡಿ” ಫೈಟರ್ ವಿಶ್ವನಾಥ್ ತಮ್ಮ ಮಹಾತ್ಮ ಚರಿತ್ರೇಲಿ ಎಸ್ ಎಂ ಕೃಷ್ಣ ಪಾತ್ರ ರಚಿಸಲು ಹೋಗಿ ಪದ್ಮಸ್ತ್ರೀ ಸರೋಜಾದೇವಿಯ ಪೋಷಕ ಪಾತ್ರವನ್ನೂ ಪ್ರಸ್ತಾಪಿಸಿರುವರಷ್ಟೇ? ಇದಕ್ಕೆ ಪ್ರತಿಯಾಗಿ ಕೆ ಡಿ ಶಿವಕುಮಾರ್ ಎನ್ನುವವರು ಪ್ರತ್ಯಾತ್ಮ ಚರಿತ್ರೆ ಬರೆಯಲು ರೆಡಿಯಾಗಿ ಸ್ಫೂರ್ತಿಯಿಂದ ಕಂಪಿಸುತ್ತಿರುವ ಸುದ್ದಿ ಬಂದಿದೆ. “ನಂದೂ ಒಂದು ಹಾತ್ಮಚರಿತ್ರೆ ಬರೀತೀನಿ. ಅದ್ರಾಗೆ ಆ ವಿಸ್ವನಾಥ ಎಂಬೋನು ಕಲ್ಪನಾ, ಭಾರತಿ, ಆರತಿ, ಜಯಂತಿ ಎಲ್ಲರಿಗೂ ಲೈನ್ ಹೊಡೆದದ್ದು ಬರೀತೀನಿ. ಸತ್ಯದ ತಲೇ ಮೇಲೆ ಗ್ರಾನೈಟ್ ನಲ್ಲಿ ಹೊಡೆದಂಗೆ ಬರೀತೀನಿ” ಎಂದು ಅ ಆ ಇ ಈ ಕಲಿಯಲು ಶುರು ಮಾಡೇಬಿಟ್ಟರಲ್ಲ ಕಾಮ್ರೇಡ್!

ಅತ್ತ ಇದನ್ನೆಲ್ಲ ಕೇಳಿ, “ಕನ್ನಡ ಸಾಹಿತ್ಯಕ್ಕೆ ರಾಜಕೀಯ ಸ್ಪರ್ಶ ಆಗಬೇಕು” ಎಂದು ವಾದಿಸುವ ಬಂಡಾಯ ಕ್ರಿಟಿಕ್ಸ್ “ಕನ್ನಡ ಆತ್ಮಚರಿತ್ರೆಯಲ್ಲಿ ಹೊಸ ಹೆಣ್ವಂತರ ಆರಂಭ” ಎಂಬ ಟೈಟಲ್ ರೆಡಿ ಮಾಡ್ಕೊಂಡು ವಸ್ತುನಿಷ್ಠ ಕೃತಿ ವಿಮರ್ಶೆಗಾಗಿ ಕಾಯುತ್ತಾ ಇರುವ ಸುದ್ದಿ…

*

amaase.jpg“ರಾಮಾಯಣ ಮಹಾನ್ವೇಷಣಂ”

ಮೊನ್ನೆ ಮಾಕವಿ ಮೊಯ್ಲಿಗೆ ೬೮ ತುಂಬಿದಾಗ ೬೮ ಕೇಜಿ ಬರ್ತ್ ಡೇ ಕೇಕ್ ಕಟ್ ಮಾಡ್ತಾರೆ ಅಂತ ಖುಷಿಯಾಗಿದ್ದ ತುಂಕೂರ್ ಸಾಹಿತಿಗಳ ಮನೆಗೆ ತಲಾ ಇಪ್ಪತ್ತು ಕೇಜಿ ಪ್ಯಾಕೇಟ್ ಬಂತು!

ಓಪನ್ ಮಾಡಲಾಗಿ, ಮಾಕವಿ ಮೊಯ್ಲಿ ವಿರಚಿತ “ರಾಮಾಯಣ ಮಹಾನ್ವೇಷಣಂ” ಗ್ರಂಥ!

“ತಾಕತ್ತಿದ್ದರೆ ಓದಿಕೊಂಡು ಬರ್ತ್ ಡೇಗೆ ಬರುವುದು” ಎಂದು ಡಾ. ಹುಲಿ ನಾಯ್ಕರ್ ಫತ್ವಾ!

ಮಾಕಾವ್ಯವನ್ನು ಸರಿಯಾಗಿ ಓದಿಕೊಳ್ಳುತ್ತಿದ್ದಾರೋ ಇಲ್ಲವೋ ಎಂದು ನಿಗಾ ಇಡಲು ಅಮಾಸೆ ತುಂಕೂರ್ ರೈಟರ್‍ಸ್ ಮನೆಮನೆಗೆ ಹೋದರೆ ಒಬ್ಬೊಬ್ಬರ ಮನೇಲೂ ಚಿಂತಾಕ್ರಾಂತ ಭಂಗಿ! ಬ್ಯಾಂಡೇಜು! ಈ ಸಂಬಂಧದಲ್ಲಿ ಸಾಹಿತಿಗಳ ಹೇಳಿಕೆಗಳನ್ನು ಯಥಾವತ್ತಾಗಿ ಕೊಡಲಾಗಿದೆ.

ಉಗಮ ಶ್ರೀನಿವಾಸ್: ಓದೇಬಿಡೋಣಾಂತ ಕೈಗೆತ್ತಿಕೊಂಡೆ ಸಾ! ಆದ್ರೆ ಮಹಾಗ್ರಂಥ ಕಾಲ್ ಮೇಲೆ ಬಿದ್ದು ಮೂರು ಬೆರಳು ಫಿನಿಷ್ ಸಾ!

ಕೇಬಿ: ಕುರಿತೋದದೆಯೂ ಅರಿಯದೆಯೇ ಅಡ್ಡಾಡುತಿರಲು ಕಲ್ಲೂನೂ ನೀರೂನೂ ಕರಗೋ ಹೊತ್ತಲ್ಲಿ ಆ ಗ್ರಂಥವು ಬುಕ್ ಶೆಲ್ಫಿನಿಂದ ನನ್ನ ಎಡಗೈ ಮೇಲೆ ಬಿದ್ದು… (ಎಂದು ಎಡಗೈ ಬ್ಯಾಂಡೇಜು ತೋರಿಸಿದರು)

ಕೆ.ಪಿ.ನಟರಾಜ್: (ಸಂತೋಷದಿಂದ) ಏನೂ ಆಗಿಲ್ಲ! ಡೈಲಿ ಈ ಗ್ರಂಥಾನ ಲಿಫ್ಟ್ ಮಾಡೀ ಮಾಡೀ ನನ್ನ ತೋಳು ಇನ್ನಷ್ಟು ಸ್ಟ್ರಾಂಗ್ ಆಗಿವೆ.

-ಹೀಗೆ ಅಮಾಸೆ ಎಲ್ಲೆಡೆ ತನಿಖೆ ಮಾಡುತ್ತಾ ಬರುವಾಗ ಕೆಲವರು ಮಹಾಕಾವ್ಯವನ್ನು ತಲೆದಿಂಬಿನಲ್ಲಿಟ್ಟುಕೊಂಡು ನಿದ್ರಿಸುತ್ತಲೂ ಇನ್ನು ಕೆಲವರು ಅದರ ಮೇಲೆ ಪದ್ಮಾಸನ ಹಾಕಿ ಕುಂತು ಧ್ಯಾನಿಸುತ್ತಲೂ ಇರುವ ದೃಶ್ಯ ಕಂಡುಬಂತು.

ಇದೆಲ್ಲದರ ನಡುವೆ ಸಾಹಿತಿಯೊಬ್ಬರು ಮನೆಗೆಲಸ ಮಾಡದೆಯೇ ವಾರಗಟ್ಟಲೆ ಸದರಿ ಗ್ರಂಥಾಧ್ಯಯನದಲ್ಲಿ ತೊಡಗಿದ್ದರಿಂದ ಮನೆಯಲ್ಲಿ ದೊಡ್ಡ ರಾಮಾಯಣವಾಗಿ ಪತ್ನಿಯು “ಶ್ರೀ ರಾಮಾಯಣ ಮಹಾನ್ವೇಷಣಂ” ಕೃತಿಯಿಂದ ತಲೆಗೆ ಬಾರಿಸಿದ್ದರಿಂದ ಆ ಸಾಹಿತಿಗೆ ಮಹಾ ವಿಸ್ಮೃತಿ ಆವರಿಸಿದ ಘಟನೆ ವರದಿಯಾಗಿದೆ. “ಜೀವಕ್ಕೇನೂ ಅಪಾಯವಿಲ್ಲ; ಆದರೆ ತಲೆಗೆ ಮಾತ್ರ ಭವಿಷ್ಯವಿಲ್ಲ” ಎಂದು ಶ್ರೀಯುತರನ್ನು ನೋಡಿಕೊಳ್ಳುತ್ತಿರುವ ಡಾ.ರಂಗಸ್ವಾಮಿ ಹಾಗೂ ಡಾ.ಬಸವರಾಜು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಉಳಿದ ಸಾಹಿತಿಗಳ ಸ್ಥಿತಿಯ ಬಗ್ಗೆ ವಿಚಾರಿಸಲಾಗಿ, “ಇನ್ನು ಆರು ತಿಂಗಳು ಯಾರೂ ಸಾಹಿತ್ಯದ ತಂಟೆಗೆ ಹೋಗಲ್ಲ, ನೀವಿ ನಿಶ್ಚಿಂತರಾಗಿರಬಹುದು” ಎಂದು ಡಾಕ್ಟರುಗಳು ಭರವಸೆ ನೀಡಿದರು.

‍ಲೇಖಕರು avadhi

February 17, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಿನಿಮಾ ತಯಾರಿಯ ತಮಾಷೆಗಳು…

-ಕೃಷ್ಣ ಮಾಸಡಿ ನಾನು ಬಾಲ್ಯದಲ್ಲಿ ಹೊನ್ನಾಳಿ ಮತ್ತು ರಾಂಪುರ ಜಾತ್ರೆಯಲ್ಲಿ ಹಾಕುತ್ತಿದ್ದ ಟೂರಿಂಗ್ ಟಾಕೀಸುಗಳಲ್ಲಿ ನೆಲದಲ್ಲಿ ಹಾಗೂ ಆಗಾಗ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This