ಕೆ ಬಿ ಸಿದ್ದಯ್ಯ ಅವರ ಖ೦ಡಕಾವ್ಯದ ಬಗ್ಗೆ…

ಪ್ರಭೆಗೆ ಪ್ರಭೆ ಕತ್ತಲಿಗೆ ಕತ್ತಲು

– ಅಮಾಸ

ಒಂಟಿತನದಲ್ಲಿ ಹುದುಗಿರುವ ಸಮರ್ಪಣಾ ಆಧ್ಯಾತ್ಮ ಅದೆಲ್ಲೋ ಸಿಗುವುದೆಂದು ತಪಸ್ಸಿಗೆ ಹೋಗುವುದಲ್ಲ ಇಗೋ ಇಗೋ ಇಲ್ಲೆ ಇಲ್ಲೆ ಎಂದು ಆರಂಭವಾಗುವ ಗಲ್ಲೇಬಾನಿ ಖಂಡಕಾವ್ಯದಲ್ಲಿ ದಕ್ಕುತ್ತದೆ. ಕಾಯಕದ ಕುಸರಲ್ಲಿ ಅಡಕಗೊಂಡಿರುವ ಗಲ್ಲೇಬಾನಿಯಂತ ಸಾಮಾಜಿಕ ಆಧ್ಯಾತ್ಮದ ಠಾವುಗಳು ಕೆಳಸ್ತರದ ಎಲ್ಲ ಜನಾಂಗದ ಒಲವಿನಲ್ಲಿ, ಭಾವಬದುಕಿನಲ್ಲಿ, ಸಾಂಸ್ಕೃತಿಕ ಚಹರೆಗಳಲ್ಲಿ ಬೆಸೆದುಕೊಂಡಿರುತ್ತವೆ. ಬರೆಯಬೇಕೆಂಬ ಒತ್ತಡಕ್ಕೆ ಬರೆಯುವ ಕಾವ್ಯಗಳ ಪ್ರೇರಣೆ ಮೊಟಕಾಗಲಾರದ ಮಹಾಕಾವ್ಯದ ಒಡನಾಟದೊಂದಿಗೆ ಹುಟ್ಟುಪಡೆದಿರುತ್ತದೆ, ಅಂಥ ಆದರ್ಶಪ್ರಾಯವಾದ ಮಾದರಿ ಎಂದುಕೊಳ್ಳುವ ಪಾತ್ರದ ಜೊತೆಯಲ್ಲಿ ಹೊಂದಾಣಿಕೆ ಮಾಡಿಕೊಂಡ ಖಂಡಕಾವ್ಯಗಳು ಕನ್ನಡದಲ್ಲಿ ರಚನೆಗೊಂಡಿವೆ. ಆದರೆ ಗಲ್ಲೆಬಾನಿ ಪಡೆದುಕೊಳ್ಳುವ ಆಕರ ಕಾಯಕ ನಿಷ್ಠ ಮತ್ತು ಮನುಷ್ಯನ ಪ್ರಜ್ಞೆಯಿಂದ ರೂಪಗೊಂಡದ್ದು. ಶರಣರ ವ್ಯರ್ಥವಾದ ಬಂಡಾಯದ ಸಮಾಜೋ ಆಧ್ಯಾತ್ಮಿಕ ನೆಲೆಯ ಮೌಲ್ಯಗಳನ್ನು ಇಂದಿಗೂ ಒಡಲೊಳಗಿಟ್ಟು ಕಾಪಾಡಿಕೊಂಡು ಬಂದಿರುವವರು ತಳಸಮುದಾಯದವರು. ಅಂದು ಹಚ್ಚಲ್ಪಟ್ಟ ಕ್ರಾಂತಿಯ ದೀವಿಗೆಗೆ ಪ್ರತಿರೋಧ ತೋರುವ ಗುಣ ಇನ್ನೂ ನಿಂತಿಲ್ಲ. ಮರ್ಯಾದೆ ಹತ್ಯಯಂತ ಘಟನೆಗಳು ನಮಗೆ ಎಳೆಹೂಟೆಯನ್ನು ಮತ್ತೆ ಮತ್ತೆ ನೆನಪಿಸುತ್ತಲೇ ಇರುವುದು ಅಸಮಾಧಾನದ ಸಂಗತಿಯೇ ಹೌದು. ಹಾಗೆ ಅಕ್ಷರಕ್ಕೆ ಸಿಕ್ಕದ ಪ್ರತಿಮೆಗಳಲ್ಲಿ, ರೂಪಕಗಳಲ್ಲಿ ಕಾಣಬರಲಾರದ ಕಾಣ್ಕೆ ಒಂದು ಗಲ್ಲೆಬಾನಿಯಲ್ಲಿ ಸ್ಪಷ್ಟಗೋಚರಿಸುತ್ತದೆ. ನಿರಂತರವಾಗಿ ಹುಡುಕಾಡುತ್ತ ಅಲೆದಾಡುತ್ತ ಜಂಗಮವಾಗಿ ತಿರುಗುವ ಆಟದ ಅಂತ್ಯ ಮತ್ತು ಆದಿಗಳನ್ನು ಕೈಬಿಟ್ಟು ನಡುವಿನ ತ್ರಿಶಂಕುವಿನ ಭ್ರಮೆಯಂತೆ ಕಾಜಗದ ದೋಣಿ ಈಜುವ ಸೋಜಿಗವಾಗಿ ಪ್ರವಾಹದೊಟ್ಟಿಗೆ ತೇಲುವ ಕಾವ್ಯದಂತೆ ಅನ್ನಿಸಿದರೂ…. ಭಕುತಿ ಎಂಬುದರ ರುಚಿ ಕಾಣಿಸುವಲ್ಲಿ ಗಲ್ಲೆಬಾನಿ ಸೊಗಸುಗಾರಿಕೆಯನ್ನು ಮೆಚ್ಚಲೇಬೇಕು. ಮೆಟ್ಟು ಬಿಡುವ ಜಾಗದಲ್ಲೆ ಬಿಟ್ಟು ಬಿಡುವುದು –ವಗರಾದದ್ದನ್ನು ನವೀರಾಗಿ ತಿರಸ್ಕರಿಸುವುದರ ಜೊತೆಯಲ್ಲಿ ಅಲ್ಲಿ ಬಿಡುವುದೋ ಇಲ್ಲಿ ಬಿಡುವುದೋ ಎಂಬುದನ್ನು ಮೀರಿ ಅದರ ಜಾಗಕ್ಕೆ ಅದನ್ನು ಬಿಟ್ಟು ಮತ್ತೆಲ್ಲೋ ಹೊರಡುವ ಶುಭ ಸೂಚನೆ ಇದೆ.ಇಲ್ಲಿ ಕೆಬಿ ಅವರ ಒಂದು ಮಾತು ಸಂಪೂರ್ಣ ಧ್ವನಿತವಾಗಿದೆ “ಬೆನ್ನ ಹಿಂದೆ ಅಂಬೇಡ್ಕರ್ ಕೂಗಿದ ಕೂಗು, ಒಂದು ಅಂಗೈಯಲ್ಲಿ ಗಾಂಧೀಜಿ, ಇನ್ನೊಂದು ಅಂಗೈಯಲ್ಲಿ ಬುದ್ಧ, ಎದುರಿಗೆ ಅಲ್ಲಮ ಪ್ರಭು ನಾಲ್ಕು ಮಹಾಜ್ಯೋತಿಗಳ ನಡುವೆ ಹಣತೆ ಧ್ಯಾನಿಸುತ್ತದೆ.” ಸಾವು ಧೇನಿಸುವ ಹೊತ್ತಲ್ಲಿ ಕಾಣುವ ಅಸ್ಪೃಸ್ಯದೇವನ ಕಣ್ಣಲ್ಲಿ ಉರಿಯುವ ಜ್ಯೋತಿ ಕಂಡು ಆದಿಗ ಬರುವುದು, ಅವನೇ ಜಾವಕಟ್ಟುವ ಜಂಬೂದ್ವೀಪಸ್ಥ ಆಗಿರುವುದು, ಶರೀರವಾಣಿಯಲ್ಲಿ ಸಿಕ್ಕುವ ಸ್ವಾಗತ, ಮುಟ್ಟಾದೆನೆಂದು ಯಾರಿಗು ಹೇಳಲಾರದ ಸಂಕಟಗಳ ದಿಕ್ಕಿನಲ್ಲಿ ಬಹು ಮುಖ್ಯವಾದ ಭಾವಕ್ಕೆ ಸಂಬಂಧಪಟ್ಟ ಭಾಗವೇ ಕಳಚಿಕೊಂಡಿರುವುದು ತಾಗುತ್ತದೆ. ಕೈಯನೆತ್ತಿ ಕಡಿದುಬಿಡುವ ರೋಷ ಉಕ್ಕಿ ಉಕ್ಕಿ ಉಕ್ಕಿ ಉಕ್ಕಿತೋ ನೆತ್ತಿ ತಣ್ಣಗಾಯಿತೋ ಸ್ಖಲನತೀಟೆ ತೀರಿದಾಕ್ಷಣ ಷಂಡನಾಗುವ ಗಂಡಸಿನಂತೆ ಮಲಗಿದ್ದೆ ಸುಮ್ಮನೆ ಮಡ್ಲಕ್ಕಿಗುಟ್ಟೆ ಮಡಿಲಲ್ಲಿ ಇವೊತ್ತು ಸತ್ತು ಹೋಗಲೇಬೇಕೆಂದು ಕರುಣಾರ್ದ್ರತೆಯಲ್ಲಿ ಮಹಾಕಾವ್ಯಗಳು ಮಿಂದು ಹೋಗಿರುತ್ತವೆ. ಅಂತೆಯೇ ಅಂಥ ಕರುಣಾಮಯಿ ಜಗದ ಸರುಪವನ್ನು ಗಲ್ಲೆಬಾನಿ ದಾಖಲಿಸುತ್ತದೆ.ಸ ಇದರ ಒಳಗಿನ ತಾಳ್ಮೆಯ ಶಕ್ತಿಯು ಕುಂದಿ ಹೋಗಿ ಸಾವಿಗೆ ವೀಳ್ಯ ಹಿಡಿದ ಹಾಗೆ ಭಾಸವಾದದ್ದು ಕಳೆದುಕೊಂಡದ್ದನ್ನು ಅರಸಿ ಇನ್ನೆಲ್ಲೋ ಹೋಗುವ ತವಕದಲ್ಲಿರುವುದನ್ನು ಬಿಚ್ಚಿಡುತ್ತದೆ. ಮುಂದೆ ಹೋದಂತೆ ರುದ್ರನಲ್ಲಿ ಕರೆದುಕೋ ಎಂದು ಹೇಳುವ ಕವಿಗಳು ಗಲ್ಲೆಬಾನಿಯೆಂಬ ಹೇಮಕೂಟವನ್ನೆ ಮರೆತು ಸ್ವರ್ಗ ಸುಳ್ಳು ರವರವ ನರಕದ ಮುಲೆಯಲ್ಲಿ ಜಾಗ ಕೊಡು ಎಂದು ಕೇಳಿಕೊಳ್ಳುತ್ತ ದ್ವಯ ಅಳಿದು ಅದ್ವಯದ ರೂಪಕದಲ್ಲಾದರು ಕರೆಯಲು ಕೇಳುವುದು, ಆಸೆಗಳ ಬೆಸೆದೂ ತತ್ವಂಬೆಸಗಳ ಬದುಕಿ ಬೆಸೆಯೊ ಸತ್ಯಂಶಿಗಳ ಅಳಿದು ಬದುಕೊ ಎಂಬ ಮಾತುಗಳು ಪರ್ಯಾಯವಾಗಿ ಹೊಸದೇ ಪುರಾಣ ಕಟ್ಟಿಕೊಳ್ಳಲು ಹಂಬಲಿಸುತ್ತವೆ. ಈ ದೇಹ, ನನ್ನ ದೇಹ, ಇಡೀ ದೇಹ ಭವದ ಸಾಲ ತಿರಿ ಹೋಗಲೆಂದು ಸಾಲ ಇಡೀ ದೇಹ ಮಾರಿಬಿಟ್ಟೆ ಮೂರು ಕಾಸಿಗೆ. ಕೊಲ್ಲುವವರೂ ಕೊಳ್ಳಲಿಲ್ಲ ಮಡಿಯುವವರೂ ಮುಟ್ಟಲಿಲ್ಲ ಇರಲಿ ಬಿಡು ಈ ದೇಹ ಹೋಗಲಿ ಬಿಡು ನನ್ನ ದೇಹ ಎಂದು ಅರಿತು ಕಟ್ಟಕಡೆಗೆ ಸುಲಿದು ಸುಲಿದು ಸುಲಿದು ಚರ್ಮ ಸುಲಿದು ಮೆಟ್ಟು ಹೊಲೆದು ಮೆಟ್ಟೀ ಮೆಟ್ಟೀ ಮೆಟ್ಟೀ ಬಿಟ್ಟುಬಿಟ್ಟೆ ಮೆಟ್ಟುಬಿಡುವ ಜಾಗದಲ್ಲಿ ಓದುವ ಹಂಗಿಗೆ ಪ್ರಮಾಣವೆಂಬುದು ಕೆಬಿ ಮಾತ್ರ ಆಗಿರದೆ ಓದುಗನ ಅಂತರಂಗ-ಬಹಿರಂಗ ಅಲ್ಲದ ಆಧ್ಯಾತ್ಮಿಕ ಸರಳೀಕರಣದ ತುಡಿತ ಗಲ್ಲೆಬಾನಿ ಆಗುತ್ತದೆ. ಕಾವ್ಯದ ಕಸುವು ತನ್ನತಾನೇ ಕಟ್ಟಿಕೊಳ್ಳುತ್ತ ಹೋಗುವ ಪರಿಯಲ್ಲಿ ವಚನಕಾರರ ದಟ್ಟ ಪ್ರಭಾವವನ್ನು ಕಾಣಿಸುತ್ತದೆ. ಇವತ್ತಿನ ನನ್ನ ಓರಗೆ ಗೆಳೆಯರಿಗೆ ಮಾದರಿ ಆಗಬಹುದಾದ ಆಧ್ಯಾತ್ಮಿಕ ಸಾಧ್ಯತೆ ಗಲ್ಲೆಬಾನಿ ಎಂಬ ಹೆಮ್ಮೆ ನನಗಿದೆ.    ]]>

‍ಲೇಖಕರು G

March 17, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This