ಕೇಂದ್ರದ “ಎಡಬಾಧೆ” ಮತ್ತು ಮೀಡಿಯಾ ರಾಜಕಾರಣ…

gali.gif“ಗಾಳಿ ಬೆಳಕು”

 

 

ನಟರಾಜ್ ಹುಳಿಯಾರ್

“ಈಗ ಕೇಂದ್ರದಲ್ಲಿ ಚುನಾವಣೆ ನಡೆಸಿದರೆ ಕಾಂಗ್ರೆಸ್ಸಿಗೆ ಅನುಕೂಲ” ಎಂದು ದಿಲ್ಲಿ ರಾಜಕೀಯ ಪಂಡಿತರು ಕಳೆದೆರಡು ತಿಂಗಳಿನಿಂದ ಬರೆಯುತ್ತಿದ್ದಾರೆ. ಇಂಗ್ಲಿಷ್ ನ್ಯೂಸ್ ಚಾನಲ್ಲುಗಳಂತೂ ಕಮ್ಯುನಿಸ್ಟರು ಮತ್ತು ಕಾಂಗ್ರೆಸ್ಸಿನವರ ನಡುವಣ ಸಂಬಂಧವನ್ನು ಏನಾದರೂ ಮಾಡಿ ಮುರಿಯಲೇಬೇಕೆಂದು ಹಟ ತೊಟ್ಟಂತೆ ತಮ್ಮ ಸುದ್ದಿ ಚೀರಾಟ ಮುಂದುವರಿಸಿವೆ. ಮೊನ್ನೆ ಹರಿಯಾಣದಲ್ಲಿ ಸೋನಿಯಾ ಗಾಂಧಿ “ವಿದ್ಯುಚ್ಛಕ್ತಿಯ ಉತ್ಪಾದನೆಯನ್ನು ವಿರೋಧಿಸುವವರು ಅಭಿವೃದ್ಧಿಯ ಶತ್ರುಗಳು” ಎಂಬ ಅಭಿಪ್ರಾಯ ಹೇಳುವಾಗ “ವಿಕಾಸ್ ಕೆ ದುಶ್ಮನ್ ಹೈ” ಎಂಬ ಮಾತನ್ನು ಬಳಸಿದರು. ಇದು ನಮ್ಮ ನ್ಯೂಸ್ ಚಾನಲ್ ಗಳಿಗೆ  ಹಬ್ಬವಾಯಿತು. ಆ ಡೈಲಾಗನ್ನು ಮತ್ತೆ ಮತ್ತೆ ತೋರಿಸುತ್ತಾ ಕಾಂಗ್ರೆಸ್ ಮತ್ತು ಎಡಪಂಥೀಯರ ನಡುವಿನ ಬಿರುಕು ದೊಡ್ಡದಾಗತೊಡಗಿದೆ ಎಂದು ವ್ಯಾಖ್ಯಾನಿಸತೊಡಗಿದವು. ಕೇಂದ್ರ ಸರ್ಕಾರ ಪತನಗೊಳ್ಳಲಿದೆ ಎಂದು ಕುಣಿಯತೊಡಗಿದವು. ಕಮ್ಯುನಿಸ್ಟ್ ನಾಯಕ ಡಿ ರಾಜಾ ಅವರನ್ನು “ಕಾಂಗ್ರೆಸ್ಸಿಗೆ ಕೊಟ್ಟ ಬೆಂಬಲವನ್ನು ಯಾವಾಗ ವಾಪಸ್ ತೆಗೆದುಕೊಳ್ಳುತ್ತೀರಿ?” ಎಂದು ನ್ಯೂಸ್ ಚಾನಲ್ ಒಂದರ ಸುದ್ದಿ ಓದುಗ ಮತ್ತೆ ಮತ್ತೆ ಕೇಳುತ್ತಿದ್ದ. ರಾಜಾ “ನಾವು ನ್ಯೂಕ್ಲಿಯರ್ ಒಪ್ಪಂದದಲ್ಲಿ ಭಾರತ ಅಮೆರಿಕಕ್ಕೆ ಶರಣಾಗಬಾರದು ಎಂದು ಹೇಳುತ್ತಿದ್ದೇವೆಯೇ ಹೊರತು ಬೆಂಬಲ ವಾಪಸ್ ಪಡೆಯುವುದು ನಮ್ಮೆದುರಿಗಿರುವ ಪ್ರಶ್ನೆಯಲ್ಲ” ಎಂದರು. ಆದರೂ ಸುದ್ದಿ ಶೂರ ಬಿಡಲಿಲ್ಲ. “ಕಾಂಗ್ರೆಸ್ ನಿಮ್ಮ ಮಾತಿಗೆ ಒಪ್ಪದಿದ್ದರೆ ನೀವು ಬೆಂಬಲ ವಾಪಸ್ ತೆಗೆದುಕೊಳ್ಳಲೇಬೇಕಾಗುತ್ತದಲ್ಲವೇ?” ಎಂದು ಮತ್ತೆ ಮತ್ತೆ ಕೇಳಿದ. ರಾಜಾ ರೇಗಿ ಸುಮ್ಮನಾದರೂ ಕೆಲವು ದಿವಸಗಳ ಹಿಂದೆ ಡೆವಿಲ್ಸ್ ಅಡ್ವೋಕೇಟ್ ಕರಣ್ ಥಾಪರ್ ಸೀತಾರಾಂ ಯೆಚೂರಿಯ ಬಳಿ ಇದೇ ಆಟ ಆಡಿದಾಗ ಸೀತಾರಾಂ ಯೆಚೂರಿ “ನಿನ್ನ ಆಸೆಯನ್ನ ನನ್ನ ಬಾಯಿಗೆ ಯಾಕೆ ತುರುಕುತ್ತಿದ್ದೀಯಪ್ಪ?” ಎಂದು ಕೇಳಿದರು. ಅತ್ತ ನ್ಯೂಕ್ಲಿಯರ್ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಭಾರತವೇ ಕತ್ತಲಲ್ಲಿ ಮುಳುಗಲಿದೆ ಎಂದು ಕಾಂಗ್ರೆಸ್ಸಿನವರೂ ಪಟ್ಟು ಹಿಡಿದವರಂತೆ ಆಡುತ್ತಿದ್ದರು.

ಇದೆಲ್ಲದರ ಮಧ್ಯೆ, ಲಾಲೂ ಪ್ರಸಾದ್ ಯಾದವ್ ಮೊದಲಾದವರು ಈಗಂತೂ ಚುನಾವಣೆಯ ಪ್ರಶ್ನೆಯೇ ಇಲ್ಲ ಎಂದು ಇದಕ್ಕೆಲ್ಲಾ ಬ್ರೇಕ್ ಹಾಕಿದ್ದಾರೆ. ತಮಗೆ ಬೇಕಾದ ರೀತಿಯಲ್ಲಿ ಸಮೀಕ್ಷೆಗಳನ್ನು ನಡೆಸಿ ಕಾಂಗ್ರೆಸ್ಸಿಗೆ ಹುಸಿ ಆಶಾವಾದ ಸೃಷ್ಟಿಸುವ ಮೂಲಕ ದಿಲ್ಲಿ ನ್ಯೂಸ್ ಚಾನಲ್ ಗಳು ಯುಪಿಎ ಸಮ್ಮಿಶ್ರ ಸರ್ಕಾರವನ್ನು ಖೆಡ್ಡಾಕ್ಕೆ ಕೆಡವಲೆತ್ನಿಸಿದ್ದವು. ಇದೇ ಚಾನಲ್ ಗಳು ಮೂರು ವರ್ಷಗಳ ಕೆಳಗೆ ಎನ್ ಡಿ ಎ ಯ “ಇಂಡಿಯಾ ಈಸ್ ಶೈನಿಂಗ್” ಪ್ರಚಾರವನ್ನು ಬೆಂಬಲಿಸಿ, ಈಗ ಎನ್ ಡಿ ಎಗೆ ಕಾಲ ಚೆನ್ನಾಗಿದೆ ಎಂದು ಹೊಡಕೊಂಡವು. ವಾಜಪೇಯಿ ಅಂಡ್ ಕೋ ಅವಧಿಗೆ ಮೊದಲೇ ಚುನಾವಣೆ ನಡೆಸಿ, ಸೋತು ಮನೆಗೆ ಹೋಯಿತು. ಇದೀಗ ಅದೇ ಗತಿ ಯುಪಿಎಗೂ ಬಂದರೆ ಈ ಚಾನಲ್ ಗಳಿಗೆ ಖುಷಿ. ಸರ್ಕಾರಗಳ ಮೇಲೆ ಸರ್ಕಾರ ಬಿದ್ದರೆ ಚಾನಲ್ ಗಳಿಗೇನು? ಎಂಬ ಹೊಸ ಗಾದೆ ಈಗ ಚಾಲ್ತಿಗೆ ಬರಲಿದೆ!

ಈ ಮಾಧ್ಯಮಗಳು ಹಾಗೂ ಕೆಲವು ಬಗೆಯ ಆಳುವ ವರ್ಗಗಳು ಹೇಗೆ ಸಮ್ಮತಿಯನ್ನು ಉತ್ಪಾದನೆ ಮಾಡುತ್ತವೆಂದು ಖ್ಯಾತ ಭಾಷಾ ಶಾಸ್ತ್ರಜ್ಞ ಚಾಮ್ ಸ್ಕಿ ಅಮೆರಿಕಾದ ಸಂದರ್ಭದಲ್ಲಿ ತೋರಿಸಿಕೊಟ್ಟಿದ್ದಾನೆ. ಕೊಲ್ಲಿ ರಾಷ್ಟ್ರಗಳ ಮೇಲೆ ಬುಷ್ ಸಾರಿದ ಯುದ್ಧಕ್ಕೆ ಸಮ್ಮತಿಯನ್ನು ಉತ್ಪಾದನೆ ಮಾಡುವ ಕೆಲಸವನ್ನು ಮಾಧ್ಯಮಗಳು ಮಾಡಿದವು. ತಮ್ಮ ಸುದ್ದಿ ಮಂಡನೆಯ ಶೈಲಿಯಿಂದ ಹಿಡಿದು ಎಲ್ಲವನ್ನೂ ಅಮೆರಿಕಾದಿಂದ ಕಾಪಿ ಮಾಡುವ ದಿಲ್ಲಿ ನ್ಯೂಸ್ ಚಾನಲ್ ಗಳು ಈ ರೀತಿ ಸಮ್ಮತಿಯ ಉತ್ಪಾದನೆ ಮಾಡಲು ಆಗಾಗ್ಗೆ  ಪ್ರಯತ್ನಿಸುತ್ತವೆ. ೧೯೯೬ರಲ್ಲಿ ತೃತೀಯ ರಂಗ ಅಧಿಕಾರ ಹಿಡಿಯುವ ಕಾಲ ಬಂದಾಗ ಎನ್ ಡಿ ಟಿವಿಯ ಪ್ರಣವ್ ರಾಯ್ ಒಂಚೂರು ಪ್ರಭಾವಶಾಲಿಯಾಗಿದ್ದ. ಈತನಿಗೆ ರಾಮಕೃಷ್ಣ ಹೆಗಡೆ ಪ್ರಧಾನಿಯಾದರೆ ಸಂತೋಷ. ಆಗ ಬೆಂಗಳೂರಿನಲ್ಲಿದ್ದ ರಾಮಕೃಷ್ಣ ಹೆಗಡೆಯವರ ಮೇಲೆ ಕ್ಯಾಮರಾ ಫೋಕಸ್ ಮಾಡಿದ ಈತ ದಿಲ್ಲಿಯ ತನ್ನ ನ್ಯೂಸ್ ಸೆಂಟರಿನಿಂದ “ದಿಲ್ಲಿಗೆ ಯಾವಾಗ ಬರುತ್ತೀರಿ ಹೆಗಡೆಯವರೇ” ಎಂದು ಜೇನು ಸುರಿಸುವಂತೆ ಕೇಳಿದ. ಜೊತೆಗೆ ಅಲ್ಲೇ ಎಲ್ಲೋ ಇದ್ದ ದೇವೇಗೌಡರನ್ನು “ಮಿಸ್ಟರ್ ಗೌಡ ನೀವೂ ಬರುತ್ತೀರಾ” ಎಂದು ಹಾಸ್ಯಮಿಶ್ರಿತ ದನಿಯಲ್ಲಿ ಕೇಳಿದ.

ಕೊನೆಗೆ ಯಾರು ದಿಲ್ಲಿಗೆ ಬಂದರು, ಈ ಚಾನಲ್ಲುಗಳಿಗೆಲ್ಲ ಚಳ್ಳೆಹಣ್ಣು ತಿನ್ನಿಸಿ ಯಾರು ಪ್ರಧಾನಿಯಾದರು ಎಂಬುದು ಎಲ್ಲರಿಗೂ ಗೊತ್ತಿದೆ. ಅವತ್ತು “ಅಯ್ಯೋ ನಮಗ್ಯಾಕೆ ದಿಲ್ಲಿ” ಎಂದು ಹೆಗಲ ಮೇಲೆ ಟವಲ್ ಹಾಕಿಕೊಂಡು ನಕ್ಕ ಕಿಲಾಡಿ ದೇವೇಗೌಡರು ಪ್ರಧಾನಮಂತ್ರಿಯಾದರು. ಹೆಗಡೆ ದೇವೇಗೌಡರ ಇಂಗ್ಲಿಷನ್ನು ಗೇಲಿ ಮಾಡುತ್ತಾ ಅಸಿಡಿಟಿಯಿಂದ ನರಳಿದರು. ಅದಿರಲಿ, ಈ ದಿಲ್ಲಿ ನ್ಯೂಸ್ ಚಾನಲ್ಲುಗಳು ತಮಗೆ ಬೇಕಾದ ಲೀಡರುಗಳು ಕೇಂದ್ರರಂಗಕ್ಕೆ ಬರದಿದ್ದರೆ ಆಡುವ ರೀತಿಯನ್ನು ನಾವು ಎಚ್ಚರದಿಂದ ಗಮನಿಸುತ್ತಿರಬೇಕು. ಮೊನ್ನೆ ಈ ಚಾನಲ್ಲುಗಳಿಗೆಲ್ಲ ಇನ್ಫೋಸಿಸ್ ನಾರಾಯಣಮೂರ್ತಿ ರಾಷ್ಟ್ರಪತಿಯಾಗಬೇಕಾಗಿತ್ತು. ಕಾಂಗ್ರೆಸ್ ಹಠಾತ್ತನೆ ಪ್ರತಿಭಾ ಪಾಟೀಲರನ್ನು ಕೇಂದ್ರರಂಗಕ್ಕೆ ತಂದಾಗ ಈ ಚಾನಲ್ಲುಗಳು ಅವರ ಮೇಲೆ ಅನೇಕ ಆರೋಪ ಹೊರಿಸಿ, ಅವರ ನೆಂಟರಿಷ್ಟರ ಕೆಲಸಗಳನ್ನೆಲ್ಲ ಅವರಿಗೆ ಗಂಟುಹಾಕತೊಡಗಿದವು. ಆದರೆ ಆವರೆಗೆ ಪ್ರತಿಭಾ ಪಾಟೀಲ್ ಒಂದು ಬಿಜೆಪಿ ಆಡಳಿತದ ರಾಜ್ಯದ ರಾಜ್ಯಪಾಲರಾಗಿದ್ದರು. ಅದಕ್ಕೆ ಮಾತ್ರ ಈ ಚಾನಲ್ಲುಗಳ ಅಭ್ಯಂತರವೇನಿರಲಿಲ್ಲ. ತಮ್ಮ ಅಭ್ಯರ್ಥಿಗೆ ಮನ್ನಣೆ ಸಿಕ್ಕದಿದ್ದ ತಕ್ಷಣ ಪ್ರತಿಭಾ ಪಾಟೀಲ್ ಖಳನಾಯಕಿಯಾಗಿಬಿಟ್ಟರು.

ಇದೆಲ್ಲ ಯಾಕೆ ಹೇಳಿದೆನೆಂದರೆ, ಎಲ್ಲವೂ ಮಾರುಕಟ್ಟೆಯನ್ನೇ ಅವಲಂಬಿಸಿದೆ ಎಂದು ಮಧ್ಯಮ ವರ್ಗ ನಂಬುವ ಈ ಕಾಲದಲ್ಲಿ ಈ ಸುದ್ದಿ ಕಾರ್ಖಾನೆಗಳು ತಮ್ಮ ಪ್ರಸಾರದ ರೇಟಿಂಗ್ ಹೆಚ್ಚಿಸಿಕೊಳ್ಳಲು ಹಲವು ಧೂರ್ತ ಸರ್ಕಸ್ಸುಗಳನ್ನು ಮಾಡುತ್ತಿರುತ್ತವೆ ಎಂಬುದು ನಮಗೆಲ್ಲಾ ಗೊತ್ತಿರಬೇಕು ಎಂಬ ಕಾರಣಕ್ಕಾಗಿ. ಈ ಮಾಧ್ಯಮಗಳು ಹೇಳಿದ್ದೇ ಸತ್ಯವೆಂದು ಅದನ್ನೇ ದಿನವಿಡೀ ಮಾತನಾಡುವ ನಿವೃತ್ತರನ್ನು ನಾನು ಕಂಡಿದ್ದೇನೆ. ಆದ್ದರಿಂದ ಎಲ್ಲ ಹುಲುಮಾನವರು ಒಂದು ಸುದ್ದಿಯನ್ನು ಇನ್ನೊಬ್ಬರಿಗೆ ಮುಟ್ಟಿಸುವಾಗ ಸುಳ್ಳು ಹೇಳುವ ಹಾಗೆ ಚಾನಲ್ ಗಳೂ ಪತ್ರಿಕೆಗಳೂ ತಮಗೆ ಬೇಕಾದ ಸತ್ಯವನ್ನೋ, ಸುಳ್ಳನ್ನೋ ಹುಟ್ಟುಹಾಕುತ್ತವೆ ಎಂಬುದನ್ನು ಸುದ್ದಿ ಜಗಿಯುತ್ತಾ ನೆಮ್ಮದಿಪಡುವ ಮಧ್ಯಮ ವರ್ಗ ಅವಶ್ಯವಾಗಿ ತಿಳಿಯಬೇಕು.

ಸದ್ಯಕ್ಕೇನೋ ಈ ಸುದ್ದಿ ಕಾರ್ಖಾನೆಗಳ ಆಶಯವನ್ನು ಹುಸಿಗೊಳಿಸುವ ಹಾಗೆ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಎಡಪಕ್ಷಗಳ ಜೊತೆ ಮಾತುಕತೆಯಾಡಿ ಎಲ್ಲವನ್ನೂ ಬಗೆಹರಿಸಿಕೊಳ್ಳುತ್ತೇವೆಂದು ಹೇಳಿದ್ದಾರೆ. ಇದರಿಂದ ಚುನಾವಣೆಯ ಸಂದರ್ಭದಲ್ಲಿ ಟಿ ಆರ್ ಪಿ ರೇಟಿಂಗಿನಿಂದ ಜಾಹೀರಾತು ಹೆಚ್ಚಿಸಿಕೊಳ್ಳುವ ಧೂರ್ತರಿಗೆ ನಿರಾಶೆಯಾಗಿರಬಹುದು; ಆದರೆ ಸರ್ಕಾರ ಬಂದ ಮೂರೇ ವರ್ಷಕ್ಕೆ, ಅದರಲ್ಲೂ ಯಾವ ಮುಖ್ಯ ಕಾರಣವೂ ಇಲ್ಲದೆ, ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆ ತಪ್ಪಿದ್ದರಿಂದ ಭಾರತ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದೆ.

‍ಲೇಖಕರು avadhi

October 17, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆ ತಾಯಿಯ ನೆನಪಲ್ಲಿ….

ಇವರು ಮಿಡ್ ಡೇ ಸಂಪಾದಕರಾದ ಎಸ್ ಆರ್ ರಾಮಕೃಷ್ಣ ಅವರ ತಾಯಿ ಇಂದಿರಾ ಸ್ವಾಮಿ ಎಂದು ಪರಿಚಯಿಸಿಕೊಟ್ಟರೆ ತಪ್ಪಾದೀತು. ಎಲ್ಲ ತಾಯಂದಿರನ್ನೂ...

ಬರಲಿರುವ ದುರಂತದ ಮುನ್ಸೂಚನೆ..

'ರೈತ, ದಲಿತ ಸಂಘಟನೆಗಳ ಜೊತೆ ಮತ್ತೆ ಹೊರಡೋಣ' ಗಾಳಿಬೆಳಕು -ನಟರಾಜ್ ಹುಳಿಯಾರ್ ನಾನು ಮತ್ತು ನನ್ನ ವಾರಗೆಯವರು ನಮ್ಮ ಹದಿಹರೆಯದಲ್ಲಿ ಕ್ಲಾಸ್...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This