ಕೇರಳದಲ್ಲಿ ಕಾರಂತರ ‘ಧ್ವನಿ’ – ಶೂದ್ರ ಶ್ರೀನಿವಾಸ

ಶೂದ್ರ ಶ್ರೀನಿವಾಸ   ‘ತುರ್ತು ಪರಿಸ್ಥಿತಿ’ಯ ಸುದ್ದಿ ವಿವಿಧ ರೂಪದಲ್ಲಿ ಪ್ರಚಾರಗೊಳ್ಳುತ್ತಲೇ ಇತ್ತು. ಪತ್ರಿಕೆಗಳಲ್ಲಿ ಎಲ್ಲಾ ಸೂಕ್ಷ್ಮ ‘ಸುದ್ದಿ’ ಸೆನ್ಸಾರ್ ಆದರೂ; ಕಣ್ಣು ತಪ್ಪಿಸಿ ಪ್ರಕಟಗೊಳ್ಳುತ್ತಿದ್ದವು. ದೇವರಾಜ ಅರಸು ಅವರ ಸ್ವಲ್ಪ ಮಟ್ಟಿನ ಲಿಬರಲ್ ಧೋರಣೆಯಿಂದ ಕರ್ನಾಟಕಕ್ಕೆ ತೀವ್ರ ಪ್ರಮಾಣದಲ್ಲಿ ಇದರ ಬಿಸಿ ತಟ್ಟಲಿಲ್ಲ.ಕೊನೆಗೂ ಇದು ಆಡಳಿತಾತ್ಮಕವಾಗಿ ಎಲ್ಲೆಲ್ಲಿಗೋ ತಲುಪಿಸಬಹುದು ಎಂಬುದನ್ನು ಅರಿತಿದ್ದರು.ಅಧಿಕಾರಿಗಳೂ ಸಹ ಮುಟ್ಟಿದರೆ ಮುನಿಯಬಹುದು ಎಂಬ ಆಂತರಿಕ ತಲ್ಲಣಗಳನ್ನು ಹೊಂದಿದ್ದರು. ಈ ಸಮಯದಲ್ಲಿ ನಮ್ಮ ದಿನ ಪತ್ರಿಕೆಗಳ ಸುದ್ದಿಯನ್ನು ಮೀರಿ; ಭೂಗತವಾಗಿ ಪ್ರಕಟವಾಗುತ್ತಿದ್ದ ಕರಪತ್ರಗಳು ಹಾಗೂ ಒಟ್ಟು ವಾತಾವರಣದ ವಿಷಮತೆಯನ್ನು ಕುರಿತಂತೆ ಎಂತೆಂಥ ಕಿರು ಹೊತ್ತಿಗೆಗಳು ಪ್ರಕಟಗೊಳ್ಳುತ್ತಿದ್ದವು.ಅವುಗಳಲ್ಲಿ ತುಂಬಿರುತ್ತಿದ್ದುದು ಹಿಂಸೆಯ ವಿವಿಧ ಮುಖಗಳು. ಕೆಲವಂತೂ ಆಂತರಿಕವಾಗಿ ಗಾಬರಿಗೊಳಿಸು ವಂಥ ಘಟನೆಗಳು. ಒಂದು ದೃಷ್ಟಿಯಿಂದ ಇಂಥದನ್ನೆಲ್ಲ ಜೀರ್ಣಿಸಿಕೊಂಡು ಮುಖಾಮುಖಿಯಾಗುವ ಚೈತನ್ಯವನ್ನು ಪರೋಕ್ಷವಾಗಿ ಸ್ವಾತಂತ್ರ ಚಳವಳಿಯು ಕೊಡುಗೆಯಾಗಿ ಸಾಕಷ್ಟು ನೀಡಿತ್ತು. ಇದು ಭಾರತದ ರಾಜಕೀಯದಲ್ಲಿ ಅಪ್ರತಿಮವಾದದ್ದು. ಕೇವಲ ತುರ್ತು ಪರಿಸ್ಥಿತಿಗೆ ಮಾತ್ರವಲ್ಲ; ಭವಿಷ್ಯದ ರಾಜಕೀಯ ಮತ್ತು ಸಾಮಾಜಿಕ ಅತಿರೇಕಗಳನ್ನು ಎದುರಿಸಲು ಪ್ರೇರಣ ಶಕ್ತಿಯಾಗಿದೆ. ಯಾವುದೇ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಎಂತೆಂಥ ಸ್ವತಂತ್ರ ಮನಸ್ಸುಗಳನ್ನು ಸೃಷ್ಟಿ ಮಾಡಿರುತ್ತದೆ. ಇಂಥ ಬಿಸಿಬಿಸಿ ಮತ್ತು ಗುಸುಗುಸು ಭೂಗತ ಸುದ್ದಿಯ ನಡುವೆ; ಮಹತ್ತರವಾದ ಆಹ್ವಾನವೊಂದು ನಮಗೆ ತಲುಪಿತು. ಅದು ಕೇರಳ ‘ದೇಶಾಭಿಮಾನಿ’ ವಾರಪತ್ರಿಕೆ ‘ತುರ್ತು ಪರಿಸ್ಥಿತಿ ಲೇಖಕರ ಸಮಾವೇಶ’ ವನ್ನು ಕೊಚ್ಚಿನ್‌ನಲ್ಲಿ ಏರ್ಪಡಿಸಿತ್ತು. ಅದು ರಾಷ್ಟ್ರೀಯ ಮಟ್ಟದ ಸಮಾವೇಶ. ಅದಕ್ಕೆ ನೀವು ಹೋಗಲೇಬೇಕೆಂದು ಗೆಳೆಯರಾದ ಡಿ.ಆರ್. ನಾಗರಾಜ್, ಕವಿ ಸಿದ್ಧಲಿಂಗಯ್ಯ ಮತ್ತು ನನಗೆ ತಿಳಿಸಿದ್ದಾರೆಂದು ಎಂ.ಕೆ. ಭಟ್ ಅವರು ಒತ್ತಾಯ ಮಾಡಿದರು. ಕಾಮ್ರೆಡ್ ಇ.ಎಂ.ಎಸ್. ಅವರ ಅಭಿಲಾಷೆ ಇದು ಎಂದು ಹೇಳಿದರು. ಆ ಕಾಲಘಟ್ಟದಲ್ಲಿ ಎಂ.ಕೆ. ಭಟ್ ಅವರು ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿಯಾಗಿದ್ದರು. ಕಮ್ಯುನಿಸ್ಟ್ ಪಕ್ಷಕ್ಕೆ ಒಂದು ರೀತಿಯ ಸಾಂಸ್ಕೃತಿಕ ಸ್ವರೂಪವನ್ನು ಕೊಡಲು ಪ್ರಯತ್ನಿ ಸಿದ್ದರು. ಇವರ ಕಾರಣಕ್ಕಾಗಿ ನಮ್ಮಂಥ ಬಹ ಳಷ್ಟು ಲೇಖಕರು ಮತ್ತು ಪ್ರಸನ್ನ ಅವರಂಥ ರಂಗಭೂಮಿ ಧೀಮಂತರು ಮಾರ್ಕ್ಸ್‌ವಾದ ದತ್ತ ಒಲವು ತೋರಿದ್ದು. ಯಾಕೆಂದರೆ ಎಲ್ಲಾ ರೀತಿಯ ಮೂಲಭೂತವಾದಿಗಳ ವಿರುದ್ಧ ಹೋರಾಡುವ ವಿಶಾಲ ಮನೋಭಾವನೆಯ ‘ವೇದಿಕೆ’ಯ ಬಗ್ಗೆ ನಾವು ಆಶಯವನ್ನು ಹೊಂದಿದ್ದೆವು. ಇದೇ ಸಮಯದಲ್ಲಿ ಕರ್ನಾಟಕದ ಉದ್ದಗಲಕ್ಕೂ ಗಂಭೀರವಾಗಿ ರಾಜಕೀಯ ಮತ್ತು ಸಾಮಾಜಿಕ ಏರುಪೇರುಗಳನ್ನು ಕುರಿತಂತೆ ಯೋಚಿಸುವ ಸಂಘಟನೆಗಳು ರೂಪುಗೊಂಡಿದ್ದವು. ಇದರ ಜೊತೆಗೆ ದಲಿತ ಚಳವಳಿಯ ‘ಧ್ವನಿ’ ಒಂದು ದೊಡ್ಡ ಪ್ರಮಾಣದಲ್ಲಿ ಬೇರು ಬಿಡುತ್ತಿತ್ತು. ಇದನ್ನೆಲ್ಲ ತುಂಬ ಸೂಕ್ಷ್ಮವಾಗಿ ಎಂ.ಕೆ. ಭಟ್ ಅವರು ಗಮನಿಸುತ್ತಿದ್ದರು. ಇದರಿಂದ ಲೇಖಕರು ಮತ್ತು ಕಲಾವಿದರೊಡನೆ ಹತ್ತಿರವಾದ ಸಂಬಂಧವನ್ನು ಬೆಳೆಸಿಕೊಂಡಿದ್ದರು. ಒಂದು ದೃಷ್ಟಿಯಿಂದ ‘ಕ್ರಿಯಾ’ ಪುಸ್ತಕಾಲಯವು ಪ್ರಾರಂಭವಾಗಿದ್ದು ಕೂಡ ಈ ಹಿನ್ನೆಲೆಯಿಂದಲೇ. ಇದಕ್ಕೆ ಸಂಬಂಧಿಸಿದಂತೆ ಹಿಂದಿನ ಅಂಕಣ ಬರಹದಲ್ಲಿ ಪ್ರಸ್ತಾಪಿಸಿರುವೆ. ಎಂ. ಕೆ. ಭಟ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಸುಶಿಕ್ಷಿತ ಬ್ರಾಹ್ಮಣರ ಕುಟುಂಬದಿಂದ ಬಂದವರು. ಉನ್ನತ ಶ್ರೇಣಿಯಲ್ಲಿ ವಿಜ್ಞಾನದಲ್ಲಿ ಮಾಸ್ಟರ್ ಡಿಗ್ರಿಯನ್ನು ಪಡೆದವರು.ನಾವು ಸಂತೋಷವಾಗಿ ಕೇರಳದ ತುರ್ತು ಪರಿಸ್ಥಿತಿ ವಿರೋಧಿ ಲೇಖಕರ ಸಮಾವೇಶದಲ್ಲಿ ಭಾಗವಹಿಸಲು ಒಪ್ಪಿದೆವು. ಇದಕ್ಕಾಗಿ ಕೊಚ್ಚಿನ್ ನಲ್ಲಿ ನಮಗೆ ಎಲ್ಲ ವ್ಯವಸ್ಥೆ ಮಾಡಿಕೊಡಲು ಎಂ.ಕೆ. ಭಟ್ ಅವರು ಕಾಮ್ರೆಡ್ ವಿ.ಜಿ. ಕೆ. ನಾಯರ್ ಅವರನ್ನು ಸಿದ್ಧಗೊಳಿಸಿದರು. ನಾವು ನೇರವಾಗಿ ಕೇರಳಕ್ಕೆ ಹೋಗದೆ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿದ್ದ ಕಾರ್ಯಕ್ರಮಕ್ಕೆ ಲಂಕೇಶ್ ಅವರ ಜೊತೆಯಲ್ಲಿ ಹೊರಟೆವು. ವಿ.ಜಿ.ಕೆ. ನಾಯರ್ ಅವರಿಗೆ ಕೇರಳದಲ್ಲಿ ಕೂಡಿಕೊಳ್ಳುವೆವು ಎಂದು ತಿಳಿಸಿದೆವು. ಅವರು ಯಾವುದೇ ಕಾರಣಕ್ಕಾಗಿ ತಪ್ಪಿಸಿಕೊಳ್ಳಬಾರದೆಂದು ವಿನಂತಿಸಿಕೊಂಡು ಹೊರಟರು. ಎರಡು ದಿವಸ ಧಾರವಾಡದಲ್ಲಿ ಲಂಕೇಶ್ ಅವರ ಜೊತೆಯಲ್ಲಿ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆವು. ತುಂಬ ಅರ್ಥಪೂರ್ಣವಾದ ಕಾರ್ಯಕ್ರಮಗಳು. ಆಗ ಇನ್ನೂ ಲಂಕೇಶ್ ಪತ್ರಿಕೆ ಹುಟ್ಟಿಕೊಂಡಿರಲಿಲ್ಲ. ಆದರೂ ಲಂಕೇಶ್ ಅವರು ಲೇಖಕರಾಗಿ ಅದಾಗಲೇ ಕರ್ನಾಟಕದಲ್ಲಿ ಸಾಹಿತಿಗಳ ನಡುವೆ ಹಾಗೂ ಸಂಸ್ಕೃತಿ ಚಿಂತಕರ ಮಧ್ಯೆ ಹೆಸರನ್ನು ಪಡೆದಿದ್ದರು. ನಮಗಂತೂ ಲಂಕೇಶ್ ಅವರ ಜೊತೆ ಸುತ್ತಾಡುವುದೇ ಒಂದು ಲಕ್ಸುರಿಯಾಗಿತ್ತು. ಧಾರವಾಡದಲ್ಲಿ ಲಂಕೇಶ್ ಅವರು ತಮ್ಮ ಭಾಷಣದ ಮಧ್ಯೆ ನಾವು ಕೇರಳದ ತುರ್ತು ಪರಿಸ್ಥಿತಿ ವಿರೋಧಿ ಲೇಖಕರ ಸಮಾವೇಶದಲ್ಲಿ ಭಾಗವಹಿಸುತ್ತಿರುವುದರ ಬಗ್ಗೆ ಪ್ರಸ್ತಾಪಿಸಿದ್ದರು. ಒಂದು ರೀತಿಯಲ್ಲಿ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದರು. ನಾವು ಧಾರವಾಡದ ಕಾರ್ಯಕ್ರಮ ಮುಗಿಸಿ ಮಂಗಳೂರಿಗೆ ಹೊರಟೆವು. ಲಂಕೇಶ್ ಅವರು ನಮಗೆ ಶುಭ ಕೋರಿ ಬೆಂಗಳೂರಿಗೆ ಹೊರಟರು. ಮಂಗಳೂರಿನಲ್ಲಿ ನಮಗಾಗಿ ಪಿ.ಆರ್. ಕಾಯುತ್ತಿದ್ದರು. ಪಿ.ಆರ್.ರಾಮಚಂದ್ರರಾವ್ ಅವರನ್ನು ನಾವೆಲ್ಲ ಪ್ರೀತಿಯಿಂದ ಪಿ.ಆರ್. ಎಂದು ಕರೆಯುತ್ತಿದ್ದೆವು. ತುಂಬ ಚೆನ್ನಾಗಿ ಓದಿಕೊಂಡಿದ್ದ ಬಹುದೊಡ್ಡ ಮಾರ್ಕ್ಸ್‌ವಾದಿ ಚಿಂತಕ. ಅಷ್ಟೇ ಸರಳ ಜೀವಿ. ಪಕ್ಷದ ಕಾರ್ಯಕ್ರಮಗಳಿಲ್ಲದಿದ್ದರೆ ಬಹುಪಾಲು ಸಮಯ ಅವರು ಬೆಂಗಳೂರಿನ ಕಬ್ಬನ್ ಪಾರ್ಕ್ ಮಧ್ಯೆ ಇರುವ ರಾಜ್ಯ ಗ್ರಂಥಾಲಯದಲ್ಲಿ ಓದುತ್ತ ಕೂರುತ್ತಿದ್ದರು. ನಾವು ಬಹಳಷ್ಟು ಬಾರಿ ಗ್ರಂಥಾಲಯದಲ್ಲಿ ಭೇಟಿಯಾಗುತ್ತಿದ್ದೆವು. ಪಿ.ಆರ್. ಅವರು ನಾವು ಬರುತ್ತಿದ್ದೇವೆ ಎಂದು ಮಂಗಳೂರಿನಲ್ಲಿ ಯಾರ್ಯಾರಿಗೋ ತಿಳಿಸಿದ್ದರು. ಕೆಲವು ಮುಸಲ್ಮಾನ ಬಾಂಧವರ ಮತ್ತು ಕ್ರಿಶ್ಚಿಯನ್ ಬಾಂಧವರ ಕುಟುಂಬಗಳಲ್ಲಿಗೆ ಕರೆದುಕೊಂಡು ಹೋದರು.ಅಲ್ಲೆಲ್ಲ ಸಾಮಾಜಿಕ ಏರುಪೇರುಗಳ ಬಗ್ಗೆ ಚರ್ಚೆ ಏರ್ಪಡಿಸಿದ್ದರು. ಅವರಿಗೆಲ್ಲ ಸಿದ್ಧಲಿಂಗಯ್ಯ ದೊಡ್ಡ ಆಕರ್ಷಣೆಯಾಗಿದ್ದರು. ಆ ಜನವೆಲ್ಲ ನಮ್ಮನ್ನು ಒಂದು ದೃಷ್ಟಿಯಿಂದ ‘ಸಾಂಸ್ಕೃತಿಕ ಹೀರೋ’ಗಳ ರೀತಿ ಯಲ್ಲಿ ನೋಡಿಕೊಂಡರು. ಹಾಗೆ ನೋಡಲು ‘ಪಿ.ಆರ್.’ ಅವರು ನಮ್ಮ ಬಗ್ಗೆ ವೇದಿಕೆಯನ್ನು ನಿರ್ಮಾಣ ಮಾಡಿದ್ದರು. ಒಂದು ರೀತಿಯಲ್ಲಿ ನಮಗೆ ಮುಜುಗರವಾಗುತ್ತಿತ್ತು. ಇವರೆಲ್ಲ ಇಷ್ಟೊಂದು ಪ್ರೀತಿಯಿಂದ ನೋಡುತ್ತಿದ್ದಾ ರಲ್ಲ ಎಂದು. ಆದರೆ ಆ ಜನವೆಲ್ಲ ಪರಿಚಯವಾಗುತ್ತಿದ್ದಾರೆ ಎಂಬ ಸಂತೋಷವೂ ಆಗುತ್ತಿತ್ತು. ಪಿ.ಆರ್. ಅವರು ಕೆಲವು ಮಂದಿ ಬೀಡಿ ಕಾರ್ಮಿಕರ ಮಧ್ಯೆಯೂ ನಮ್ಮನ್ನು ಕೂರಿಸಿದ್ದರು. ಅವರ ಬದುಕಿನ ವಿವಿಧ ಘಟ್ಟಗಳನ್ನು ಆ ಕಾರ್ಮಿಕರ ಬಾಯಿಂದಲೇ ಕೇಳಿಸಿದ್ದರು. ಇದರ ಜೊತೆಗೆ ಇಂತಿಂಥ ಕಡೆ ಮೀನಿನ ಊಟ ಚೆನ್ನಾಗಿರುತ್ತದೆ ಎಂದು ಕರೆದುಕೊಂಡು ಸಾಕಷ್ಟು ತಿನ್ನಿಸಿದ್ದರು. ಇದು ಸಾಲದೆಂಬಂತೆ ಸಮುದ್ರದ ದಂಡೆಯಲ್ಲಿ ಸುತ್ತಾಡಿಸಿ ಮರಳಿನ ಮೇಲೆ ಕೂತು; ಜಗತ್ತಿನ ಕೆಲವು ಗ್ರೇಟ್ ರಾಜಕೀಯ ಕೃತಿಗಳನ್ನು ಕುರಿತು ಬಹಳಷ್ಟು ಮಾತಾಡಿದ್ದರು. ಹಾಗೆಯೇ ಮಾವೋತ್ಸೆ ತುಂಗರ ಕಲ್ಚರಲ್ ರೆವಲೂಷನ್ ಬಗ್ಗೆ ಎಂತೆಂಥ ಒಳ ನೋಟಗಳನ್ನು ಮುಂದಿಟ್ಟಿದ್ದರು. ಅವರ ಯಾವುದೇ ಒಂದು ಮಾತು ಹೇಳಿಕೆಯಾಗುತ್ತಿರಲಿಲ್ಲ. ಅಂತರಂಗದ ಮಾತಾಗುತ್ತಿರುತ್ತಿತ್ತು. ಗಾಂಧೀಜಿಯವರ ರೀತಿಯಲ್ಲಿ ಒಟ್ಟು ಚೀನಿ ಭಾಷೆ ಮತ್ತು ಸಂಸ್ಕೃತಿಯನ್ನು ಮಾವೋ ಅವರು ಎಷ್ಟು ಅನನ್ಯತೆಯಿಂದ ನೋಡಿದರು. ಎಲ್ಲವನ್ನು ಕಡಿದು ಕಟ್ಟುವುದರಲ್ಲಿ ಅಲ್ಲ ಮುತ್ಸದ್ದಿತನ ಇರಬೇಕಾದದ್ದು. ಚಾರಿತ್ರಿಕವಾಗಿ ಉಳಿಸಿಕೊಂಡು ಕಟ್ಟಬೇಕಾದ್ದದನ್ನು ಸೃಜನಾತ್ಮಕವಾಗಿ ನಿರ್ಮಿಸುವುದರಲ್ಲಿ ‘ಸ್ಟೇಟ್ಸ್‌ಮನ್‌ಷಿಪ್’ಇರುವುದು ಎಂದು ಮಾವೋ ಮತ್ತು ಚಾಯನ್‌ಲಾಯ್ ಅವರನ್ನು ಉದಾಹರಿಸಿ ಹೇಳುತ್ತಿದ್ದರು. ಹಾಗೆಯೇ ಮಾರ್ಕ್ಸ್ ಕುರಿತೂ ಕೂಡ. ಪಿ.ಆರ್. ಅವರು ನಮಗೆ ಒಬ್ಬ ಗುಡಿ ಗುಡಿ ಕಮ್ಯೂನಿಸ್ಟ್ ಆಗಿ ಕಾಣಿಸುತ್ತಿರಲಿಲ್ಲ. ಆದ್ದರಿಂದಲೇ ಅವರನ್ನು ಪಿ.ಆರ್. ಮೇಷ್ಟ್ರು ಎಂದು ಕರೆಯುತ್ತಿದ್ದುದು. ನಾವಂತೂ ಗಾಂಧೀಜಿ, ಲೋಹಿಯಾ ಮತ್ತು ಅಂಬೇಡ್ಕರ್ ಚಿಂತನೆಗಳ ಮೂಲಕ ಬಂದಿದ್ದವರು. ಆ ಚಿಂತನೆಗಳಿಗೆ ಕಿಂಚಿತ್ತೂ ಧಕ್ಕೆಯಾಗದಂತೆ ತಮ್ಮ ಒಟ್ಟು ಆಲೋಚನಾ ಕ್ರಮವನ್ನು ನಮ್ಮ ಮುಂದಿಡುತ್ತಿದ್ದರು. ಈಗಲೂ ಅಷ್ಟೇ ನನ್ನಂಥವರಿಗೆ ಪಿ.ಆರ್. ಅಂಥವರನ್ನು ಮಂಗಳೂರಿನಿಂದ ಪ್ರತ್ಯೇಕ ಪಡಿಸಿ ನೋಡಲು ಸಾಧ್ಯವಿಲ್ಲ. ಸದಾ ಬಿಳಿಯ ಷರ್ಟು, ಪಂಚೆ ಮತ್ತು ಟವಲಿನಿಂದ ನಮ್ಮ ಮನಸ್ಸನ್ನು ತುಂಬಿ ಕೊಂಡಿದ್ದವರು. ತಮ್ಮ ಕಂಕುಳಲ್ಲಿ ನಾನಾ ರೀತಿಯ ವೃತ್ತಪತ್ರಿಕೆಗಳ, ರಾಜಕೀಯ ಹೊತ್ತಿಗೆಗಳ ಜೊತೆಗೆ ಮನಸ್ಸಿನ ತುಂಬ ರಾಜಕೀಯ ತತ್ವ ಚಿಂತನೆಯನ್ನು ತುಂಬಿಕೊಂಡಿದ್ದ ಬಹುದೊಡ್ಡ ರಾಜಕೀಯ ಸಂತರಾಗಿದ್ದರು. ನಾವು ಇಂಥ ಮಹಾನುಭಾವ ವ್ಯಕ್ತಿಯನ್ನು ಕುರಿತು ಚರ್ಚಿಸುತ್ತಲೇ ಕೇರಳವನ್ನು ತಲುಪಿದ್ದೆವು. ಅಲ್ಲಿ ಕಾಮ್ರೆಡ್ ವಿ.ಜಿ.ಕೆ. ನಾಯರ್ ಅವರು ನಮಗಾಗಿ ಕಾಯುತ್ತಿದ್ದರು. ನಾಯರ್ ಅವರಿಗೆ ಪಿ.ಆರ್. ಅವರ ಪ್ರೀತಿಯ ಆತಿಥ್ಯ ಕುರಿತು ವರದಿ ಒಪ್ಪಿಸಿದೆವು. ಅದಕ್ಕೆ ನಾಯರ್ ಅವರು ‘ಪಿ.ಆರ್. ಸರ್ ಅವರು ನಮ್ಮ ಪಕ್ಷದಲ್ಲಿ ಅಪರೂಪದ ಕಾಮ್ರೆಡ್’ ಎಂದು ಪ್ರತಿಕ್ರಿಯಿಸಿದ್ದರು. ಕೇರಳದ ಕೊಚ್ಚಿನ್‌ನ ಬೀದಿ ಮತ್ತು ರಸ್ತೆಗಳಲ್ಲಿ ಎಲ್ಲಿ ನೋಡಿದರೂ ತುರ್ತು ಪರಿಸ್ಥಿತಿ ವಿರೋಧಿ ಘೋಷಣೆಗಳ ಬ್ಯಾನರ್‌ಗಳು. ಲೇಖಕರು ಮತ್ತು ಕಲಾವಿದರ ಜೊತೆಗೆ ಎಡಪಂಥೀಯ ಕಾರ್ಯಕರ್ತರು ತುಂಬಿಕೊಂಡಿದ್ದರು. ನಮ್ಮನ್ನು ದೇಶಾಭಿಮಾನಿ ಪತ್ರಿಕೆಯ ಸಂಪಾದಕರಾದ ಗೋವಿಂದ ಪಿಳ್ಳೆಯವರು ಬೇರೆ ಬೇರೆ ರಾಜ್ಯಗಳಿಂದ ಬಂದ ಲೇಖಕರಿಗೆ ಪರಿಚಯ ಮಾಡಿಕೊಟ್ಟರು.ಅವರಲ್ಲಿ ಗಾಂಧಿವಾದಿಗಳಿದ್ದರು.ಲೋಹಿಯಾವಾದಿಗಳಿದ್ದರು.ಹಾಗೆಯೇ ಸರ್ವೋದಯ ಸಂಘಟನೆಯ ಚಿಂತಕರೂ ಇದ್ದರು.ಒಂದು ಬೃಹತ್ತಾದ ಸಭಾಂಗಣ. ರಾಜಕೀಯ ಚಿಂತನೆಗಳಿಗೆ ಸಂಬಂಧಿಸಿದ ಘೋಷಣೆಗಳನ್ನು ತುಂಬ ಅಚ್ಚುಕಟ್ಟಾಗಿ ಡಿಸ್‌ಪ್ಲೇ ಮಾಡಿದ್ದರು. ವೇದಿಕೆಯನ್ನು ಅಷ್ಟೇ ಅಚ್ಚುಕಟ್ಟಾಗಿ ನಿರ್ಮಿಸಿದ್ದರು. ನಮ್ಮನ್ನು ಗೋವಿಂದ ಪಿಳ್ಳೆಯವರು ಕಾರ್ಯಕ್ರಮಕ್ಕೆ ಮುನ್ನ ಇ.ಎಂ.ಎಸ್. ನಂಬೂದರಿಪಾದ್ ಹಾಗೂ ಉದ್ಘಾಟನೆ ಮಾಡಲು ಬಂದಿದ್ದ ನಮ್ಮವರೇ ಆದ ಶಿವರಾಮ ಕಾರಂತರಿಗೆ ಪರಿಚಯ ಮಾಡಿಕೊಟ್ಟರು. ಅದೊಂದು ನಮಗೆ ಖುಷಿಯ ವಿಷಯವಾಗಿತ್ತು. ಕಾರ್ಯಕ್ರಮ ಪ್ರಾರಂಭವಾಯಿತು. ಒಟ್ಟು ಸಮಾವೇಶ ಕುರಿತು ಗೋವಿಂದ ಪಿಳ್ಳೆಯವರು ಅತ್ಯಂತ ಅರ್ಥಗರ್ಭಿತವಾದ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಯಾವುದೇ ದೇಶದಲ್ಲಿ ‘ತುರ್ತು ಪರಿಸ್ಥಿತಿ’ಯಂಥ ಆತಂಕದ ರಾಜಕೀಯ ಸ್ಥಿತಿ ಯಾಕೆ ಬರುತ್ತದೆಂದು ವಿವರಿಸಿದರು. ಜೊತೆಗೆ ಶಿವರಾಮ ಕಾರಂತರ ಕುರಿತು ದೀರ್ಘ ಪರಿಚಯ ಮಾಡಿಕೊಟ್ಟರು. ಆ ಪರಿಚಯದಲ್ಲಿ ಕಾರಂತರ ವ್ಯಕ್ತಿತ್ವದ ಹಿರಿಮೆಯೂ ಇತ್ತು. ಆ ಹಿರಿಮೆಯ ಮಾತುಗಳಿಗೆ ನಿಜವಾಗಿಯೂ ಅರ್ಹರು ಎನ್ನುವ ರೀತಿಯಲ್ಲಿ ಸುಮಾರು ಒಂದು ಕಾಲು ಗಂಟೆ ಅಮೋಘವಾಗಿ ಮಾತಾಡಿದರು. ಸಾಹಿತ್ಯ, ರಾಜಕೀಯ ಮತ್ತು ಮಾನವೀಯ ಸಂಬಂಧಗಳ ಬಗ್ಗೆ ಪ್ರಸ್ತಾಪಿಸುತ್ತಲೇ; ಯಾವುದೇ ಸಮಾಜದಲ್ಲಿ ಪ್ರತಿಯೊಬ್ಬ ಮನುಷ್ಯನ ವ್ಯಕ್ತಿತ್ವವನ್ನು ಕಾಪಾಡುತ್ತಲೇ ರಾಜಕೀಯ ಚಿಂತನೆಗಳನ್ನು ಆಡಳಿತಾತ್ಮಕವಾಗಿ ಪುನರುಜ್ಜೀವನಗೊಳಿಸಬೇಕು. ಪ್ರಜಾಪ್ರಭುತ್ವವೆಂಬ ಅಮೂಲ್ಯ ವ್ಯವಸ್ಥೆ ಇರುವುದೇ ಅದಕ್ಕಾಗಿ, ನಿರಂಕುಶ ವಾದಿಗಳನ್ನು ಬೆಳೆಸುವುದಕ್ಕಲ್ಲ ಎಂದು; ಇತಿಹಾಸದಿಂದ ಮತ್ತು ಸಾಹಿತ್ಯ ಕೃತಿಗಳಿಂದ ಅಮೂಲ್ಯವಾದ ಸಂಗತಿಗಳನ್ನು ಉದ್ಧರಿಸುತ್ತಲೇ ಒಟ್ಟು ಸಭಿಕರನ್ನು ಮಧ್ಯೆ ಮಧ್ಯೆ ಕರತಾಡನದ ಜೊತೆಗೆ ತಮ್ಮತ್ತ ಸೆಳೆದುಕೊಂಡಿದ್ದರು. ನಾನು ಶಿವರಾಮ ಕಾರಂತರ ಎಷ್ಟೋ ಉಪನ್ಯಾಸಗಳನ್ನು ಕೇಳಿದ್ದೇನೆ. ಆದರೆ ಅಂದಿನ ಉಪನ್ಯಾಸ ಇಂದಿಗೂ ನನ್ನ ಮನಸ್ಸಿನಲ್ಲಿ ಮೂವತ್ತೈದು ವರ್ಷಗಳ ನಂತರವೂ ಗುನುಗುನಿಸುತ್ತಿದೆ. ಈ ಗುನುಗುನುಗುವಿಕೆಗೆ ಪ್ರಮಾಣ ಪತ್ರವೆನ್ನುವ ರೀತಿಯಲ್ಲಿ, ಅಧ್ಯಕ್ಷತೆ ವಹಿಸಿದ್ದ ಮಹಾನ್ ರಾಜಕೀಯ ಮುತ್ಸದ್ದಿ ಇ.ಎಂ. ಎಸ್. ನಂಬೂದರಿಪಾದ್ ಮಾತಾಡುತ್ತ ‘ನಮ್ಮ ನಡುವೆ ರಾಜಕೀಯವಾಗಿ, ಸಾಮಾಜಿಕವಾಗಿ ಇಷ್ಟೊಂದು ಎತ್ತರದ ಮನಸ್ಥಿತಿಯಲ್ಲಿ ತುಂಬ ಧ್ವನಿಪೂರ್ಣವಾಗಿ ಮಾತಾಡುವ ಒಬ್ಬ ಸಾಹಿತಿ ಇದ್ದಾರೆಂಬುದೇ ನಾವು ಸದಾ ಸಂತೋಷಪಡಬೇಕಾದ ವಿಷಯ’ ಎಂದು ಹೇಳಿದಾಗ; ಒಟ್ಟು ಸಭೆ ಧನ್ಯತೆಯಿಂದ ಚಪ್ಪಾಳೆಯ ಮೂಲಕ ಸಮ್ಮತಿ ಸೂಚಿಸಿತ್ತು. ನನಗೆ ಈಗಲೂ ಅಂದಿನ ಕಾರಂತರ ಮಾತು ಒಂದು ಚಾರಿತ್ರಿಕ ಧ್ವನಿಯಾಗಿದೆ. ವಾರ್ತಾಭಾರತಿ ಕೃಪೆ  ]]>

‍ಲೇಖಕರು G

April 8, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಬ್  ಕಿ  ಬಾರ್  ಡೆಮೊಕ್ರಟಿಕ್  ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

ನನ್ನ ’ಎದೆಗೆ ಬಿದ್ದ ಅಕ್ಷರ’

ನನ್ನ ’ಎದೆಗೆ ಬಿದ್ದ ಅಕ್ಷರ’

ಡಾ.ಬಿ.ಆರ್.ಸತ್ಯನಾರಾಯಣ ಮೊನ್ನೆ ರಾತ್ರಿ ನನ್ನ ತೋಟದ ಮನೆಯಲ್ಲಿದ್ದೆ. ತುಂತುರು ಮಳೆ ಬೀಳುತ್ತಿತ್ತು. ಕರೆಂಟು ಮಾಯವಾಗಿತ್ತು. ಮರು ಓದಿಗೆಂದು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This