ಕೇರಳದಲ್ಲಿ ಕೆಲ ದಿನ – ಒ೦ದು ಯಾನ

ಕೇರಳದಲ್ಲಿ ಕೆಲ ದಿನ -1

– ಶ್ರೀಧರ ಪಿಸ್ಸೆ

  ಕರ್ನಾಟಕದಲ್ಲಿ ಗೆಳೆಯ ತೇರ್ಳಿ ಎನ್ ಶೇಖರ್ ಕೇರಳದ ತಮ್ಮ ಊರಿಗೆ ಬನ್ನಿ ಎಂದು ಹಲವು ಬಾರಿ ಕರೆದಿದ್ದಾರೆ. ಆಗೆಲ್ಲ ಯಾವುದೋ ಹೊರನಾಡಿಗೆ ಭೇಟಿ ನೀಡಲು ಕರೆ ಬಂದಂತೆ ನನಗೆ ಭಾಸವಾಗಿತ್ತು. ಅಲ್ಲದೆ ನನ್ನ ಹಣಕಾಸಿನ ಇತಿಮಿತಿಯೊಳಗೆ ಯಾವುದೇ ಹೊರರಾಜ್ಯಕ್ಕೆ ಹೋಗಿಬರುವುದು ಎಂದರೆ ನನಗೆ ಭರಿಸಲಾಗದ ದುಬಾರಿ ವೆಚ್ಚವನ್ನು ಮೈಮೇಲೆ ಎಳೆದುಕೊಂಡಂತೆ ಕಂಡಿತ್ತು. ಹಾಗಾಗಿ ನಾವು ಭೇಟಿಯಾಗುತ್ತಿದ್ದುದೇ ಅಪರೂಪಕ್ಕೊಮ್ಮೆಯಾದ್ದರಿಂದ ಶೇಖರ್ ಅವರ ಕರೆಯನ್ನು ನಾನು ಔಪಚಾರಿಕವೆಂದೆ ಹೆಚ್ಚಾಗಿ ಸ್ವೀಕರಿಸಿದ್ದೆ. ಇದನ್ನು ಕಂಡು ನನ್ನ ಮನೆಯವರು ಕೇರಳಕ್ಕೆ ಹೋಗುವ ತಮ್ಮ ಆಸೆಯನ್ನು ಆಗಾಗ ಹೊರಹಾಕುತ್ತಿದ್ದರು. ಅವರಿಗಾಗಿಯಾದರೂ ಒಮ್ಮೆ ಕೇರಳಕ್ಕೆ ಹೋಗಿಬರಬೇಕು ಎಂದು ನಾನು ಮನಸ್ಸಿನಲ್ಲೇ ಲೆಕ್ಕ ಹಾಕತೊಡಗಿದೆ. ಆದರೆ ನನ್ನ ಹಣಕಾಸಿನ ಲೆಕ್ಕಾಚಾರ ಪ್ರವಾಸವೊಂದನ್ನು ಯೋಜಿಸಲು ದೈರ್ಯ ನೀಡದಿದ್ದರೂ ಕಾಲ ಮಾತ್ರ ತೆಡೆರಹಿತ ಬಸ್ಸಿನಂತೆ ಓಡುತ್ತಿತ್ತು. ಮುಂದೆ ಸಂಭವಿಸುವ ಸಂಬಳದ ಹೆಚ್ಚಳದೊಂದಿಗೆ ತಳಕು ಹಾಕಿ ಇಡೀ ಕುಟುಂಬ ತೆಂಕಣಗಾಳಿಯ ಮೂಲ ಹಿಡಿದು ಪಯಣ ಕೈಗೊಳ್ಳಲು ನಾನು ಮನಸ್ಸಿನಲ್ಲೆ ಯೋಜನೆ ರೂಪಿಸಿಕೊಂಡು ಮನೆಯವರ ಆಸೆಗೆ ನೀರೆರೆಯುತ್ತಿದ್ದೆ. ನೀವು ಕುಟುಂಬ ಸಮೇತ ಬರುವುದು ಒಳ್ಳೆಯದೆ. ಅದಕ್ಕೂ ಮೊದಲು ನೀವೊಬ್ಬರೇ ಒಂದು ಸಲ ಬಂದು ಹೋಗಿ ಎಂದು ಶೇಖರ್ ಹೇಳತೊಡಗಿದ್ದರು. ಇದು ಆಗುವ ಹೋಗುವ ಮಾತಲ್ಲವೆಂಬುದು ನನ್ನ ಎಣಿಕೆಯಾಗಿತ್ತು. ಅಷ್ಟರಲ್ಲಿ ನಾನು ಕೆಲಸ ಮಾಡುವ ವಿಭಾಗ ಇತ್ತೀಚೆಗೆ ವಿಚಾರ ಸಂಕಿರಣವೊಂದನ್ನು ಮೂಡುಬಿದರೆಯಲ್ಲಿ ಹಮ್ಮಿಕೊಂಡಿತು. ನಾನಲ್ಲಿಗೆ ಹೋಗುವ ಯಾವ ಅವಕಾಶವೂ ಇರಲಿಲ್ಲ. ಕೊನೆಯ ಹಂತದಲ್ಲಿ ಸಹಾಯಕ ಸಿಬ್ಬಂದಿಯಾಗಿ ಜೊತೆ ಸೇರಬೇಕಿದ್ದ ಡಿ ಗ್ರೂಪ್ ನೌಕರರೊಬ್ಬರು ತಮ್ಮ ವೈಯಕ್ತಿಕ ತುರ್ತು ಕಾರ್ಯದಿಂದಾಗಿ ಸ್ಥಳದಲ್ಲೇ ಉಳಿಯುವ ನಿರ್ಧಾರ ಮಾಡಿದರು. ಅವರ ಬದಲಿಗೆ ನಾನು ಹೊರಡುವುದೆಂದು ಆಯಿತಾದರೂ ನಾನು ಒಲ್ಲದ ಮನಸ್ಸಿನಿಂದ ಜೊತೆಗೂಡಿದೆ. ಮೂಡುಬಿದರೆಯಿಂದೊಮ್ಮೆ ಶೇಖರ್ ಗೆ ಪೋನು ಮಾಡಿ ನನ್ನ ಇರವನ್ನು ಅವರಿಗೆ ಹೇಳಿದೆ. ಅದಕ್ಕವರು, ನಮ್ಮೂರಿನ ದಾರಿಯಲ್ಲಿ ನೀವು ಅರ್ಧ ಪಯಣ ಮಾಡಿದ್ದೀರಿ, ಉಳಿದರ್ಧ ದಾರಿ ಕ್ರಮಿಸಿ ನಮ್ಮಲ್ಲಿಗೆ ಬಂದುಬಿಡಿ ಎಂದರು..ನಾನೂ ಒಂದು ರೀತಿಯಲ್ಲಿ ಉತ್ತೇಜಿತನಾದರೂ ನನ್ನ ಇತಿಮಿತಿಗಳು ನನ್ನನ್ನು ಕಟ್ಟಿಹಾಕಿತ್ತು. ದೇಶ, ಭಾಷೆ ಗೊತ್ತಿರದ ನಾಡಲ್ಲಿ ಒಬ್ಬನೇ ಹೋಗಲು ನನಗೆ ಹಿಂಜರಿಕೆಯೂ ಇತ್ತು. ಕೊನೆಗೆ ಏನೇ ಆಗಲಿ ಹೋಗಿಯೇ ಬಿಡೋಣವೆಂದು ನಿರ್ಧರಿಸಿದ ಕೂಡಲೇ ಎಲ್ಲ ಅಡೆತಡೆಗಳು ಇಲ್ಲದಂತಾಯಿತು. ನಾನು ಮಂಗಳೂರಿಗೆ ಹೋಗಿ ರೈಲುನಿಲ್ದಾಣ ತಲುಪಿದ್ದು ಬೆಳಗ್ಗೆ ಸುಮಾರು 8.50ರ ವೇಳೆಗೆ. ಶೇಖರ್ ತ್ರಿಶ್ಯೂರ್ ಗೆ ಬನ್ನಿ, ಅಲ್ಲಿಂದ ಗುರುವಾಯೂರಿಗೆ ಬರಬಹುದು ಎಂದು ಹೇಳಿದ್ದರು. ನಾನು ರೈಲು ನಿಲ್ದಾಣಕ್ಕೆ ಹೋದಾಗ ರೈಲೊಂದು ನಿಂತಿತ್ತು. ಅದು ಎಲ್ಲಿಗೆ ಹೋಗುವುದೆಂದು ತಿಳಿದಿರಲಿಲ್ಲ. ರೈಲು ವೇಳಾ ಪಟ್ಟಿ ನೋಡಿದೆ. ತ್ರಿಶ್ಯೂರ್ ಗೆ ಹೋಗುವ ರೈಲಿನ ಹೆಸರಾಗಲೀ ಅದು ಮಂಗಳೂರು ಬಿಡುವ ಮತ್ತು ತ್ರಿಶ್ಯೂರ್ ತಲುಪುವ ವೇಳೆಯಾಗಲೀ ನನಗೆ ಅದರಿಂದ ತಿಳಿಯಲಿಲ್ಲ. ನೇರ ಟಿಕೆಟ್ ಕೌಂಟರ್ ಗೆ ಹೋಗಿ ತ್ರಿಶ್ಯೂರ್ ಗೆ ಟಿಕೇಟ್ ಕೇಳಿದೆ. ತ್ರಿಶ್ಯೂರ್ ಗೆ ಕೂಡಲೇ ರೈಲು ಇಲ್ಲವೆಂದೂ ಮಧ್ಯಾಹ್ನ 12ಕ್ಕೆ ಹೊರಡುವ ರೈಲು ಶೊರಣೂರಿಗೆ ಸಂಜೆ 5 ಗಂಟೆಗೆ ತಲುಪುವುದೆಂದೂ ಅಲ್ಲಿಂದ ತ್ರಿಶ್ಯೂರ್ ಗೆ ಹೋಗಬಹುದೆಂದು ನನಗೆ ಸೂಚಿಸಲಾಯಿತು. ಕೂಡಲೇ ನಾನು ಶೊರಣೂರಿಗೆ ಟಿಕೆಟ್ ಖರೀದಿ ಮಾಡಿಬಿಟ್ಟೆ. ನಂತರ ಶೇಖರ್ ಗೆ ಕರೆ ಮಾಡಿದ ಮೊಬೈಲನ್ನು ಕಿವಿಗೆ ಹಿಡಿದು, ನಿಂತಿರುವ ರೈಲು ಯಾವುದೆಂದು ನೋಡಿದೆ. ಅದು ಮಂಗಳೂರು ಕಣ್ಣೂರು ರೈಲಾಗಿತ್ತು. ಅದು ಬಿಡುವ ವೇಳೆಯನ್ನು ವೇಳಾಪಟ್ಟಿಯಲ್ಲಿ ಗಮನಿಸಿದೆ. ಬೆಳಿಗ್ಗೆ 9 ಗಂಟೆಗೆ ಎಂದಿತ್ತು. ಶೇಖರ್ ಗೆ ನಾನು ಗುರುವಾಯೂರಿಗೆ ಹೊರಟಿರುವುದಾಗಿ ತಿಳಿಸಿ, 12ಕ್ಕೆ ಹೊರಡುವ ಪಾಲಕ್ಕಾಡ್ ಗಾಡಿಯಲ್ಲಿ ಶೊರಣೂರಿಗೆ ಟಿಕೆಟ್ ತೆಗೆದುಕೊಂಡಿರುವುದಾಗಿಯೂ 9 ಗಂಟೆಗೆ ಹೊರಡುವ ಕಣ್ಣೂರಿನ ರೈಲು ನಿಂತಿರುವುದಾಗಿಯೂ ತಿಳಿಸಿದೆ. ಕಣ್ಣೂರಿನ ರೈಲು ಹತ್ತಿ ಬಂದುಬಿಡಿ ಎಂದು ಹೇಳಿದರು. ಈ ಕುರಿತು ನಾನು ಕೌಂಟರ್ ನಲ್ಲಿ ವಿಚಾರಿಸಿದೆ.ಕಣ್ಣೂರು ಶೊರಣೂರಿಗೂ ಮೊದಲು ಬರುವ ನಿಲ್ದಾಣವೆಂದೂ ಸದ್ಯ ನೀವೀಗ ಎಲ್ಲಿಗೆ ಹೋಗಬೇಕಿದೆ ಎಂದೂ ಅವರು ನನಗೆ ಕೇಳಿದರು. ಶೇಖರ್ ಗೂ ರೈಲುಗಳ ವಿವರ ಸರಿಯಾಗಿ ತಿಳಿಯದೆ ಇರಬಹುದು. ನಾನು ಈ ಪ್ರದೇಶಕ್ಕೆ ಹೊಸಬ, ನಾನು ತ್ರಿಶ್ಯೂರಿಗೆ ಹೋಗಬೇಕಿದೆ ಎಂದು ಹೇಳಿದೆ. ಅದಕ್ಕವರು ನಿಮ್ಮ ಟಿಕೇಟು ಸರಿಯಿದೆ ಎಂದರು. ನಾನು ಶೊರಣೂರಿನಲ್ಲಿ ರೈಲು ಬದಲಿಸಿದರೂ ನನಗೆ ನೇರ ತ್ರಿಶೂರಿಗೆ ಇಲ್ಲಿಯೇ ಟಿಕೇಟು ದೊರೆಯಬಹುದಲ್ಲ! ಎಂದೆ. ಹೌದು ಇಲ್ಲಿಂದಲೇ ಟಿಕೇಟ್ ಪಡೆಯಬಹುದು ಎಂದರು. ಹಾಗಿದ್ದರೆ ದಯವಿಟ್ಟು ಈ ಟಿಕೇಟು ಬದಲಿಸಲು ಸಾಧ್ಯವೇ ಎಂದು ಕೇಳಿದೆ. ನೀವೂ ಟಿಕೇಟ್ ಪಡೆಯುವ ಮೊದಲೇ ಹೇಳಬೇಕಿತ್ತು ಎಂದು ಆತ ನನ್ನ ಮುಖ ನೋಡಿದ. ನನ್ನ ವಿಚಾರಣೆ ಅತಿಯಾಯಿತೆಂದು ಅವನು ಭಾವಿಸಿದಂತೆ ಅನ್ನಿಸಿತು. ಸರಿ ಬಿಡಿ. ನಾನು ಶೊರಣೂರಿನಲ್ಲೆ ಟಿಕೇಟ್ ಕೊಳ್ಳುತ್ತೇನೆ ಎಂದು ಹೇಳಿ ಪ್ಲಾಟ್ ಫಾರಂಗೆ ಬಂದೆ. ಬೆಳಕು ಹೆಚ್ಚು ತುಂಬಿತ್ತು, ಹಳಿಗಳು ಖಾಲಿ ಬಿದ್ದಿದ್ದವು. ಗಡಿಯಾರ ನೋಡಿದೆ, 9 ಗಂಟೆ ಆಗಿಹೋಗಿತ್ತು. ಅಷ್ಟು ಹೊತ್ತಿಗೆ ಹೊಟ್ಟೆ ತನ್ನ ಇರುವಿಕೆಯನ್ನು ಸಾರಿ ಹೇಳುತ್ತಿತ್ತು. ನಾನು ರೈಲು ಪಯಣ ಮಾಡಿದಾಗಲೆಲ್ಲ ರೈಲು ಇಲಾಖೆಯ ಆಹಾರ ಉತ್ಪನ್ನ ಬಳಸಲು ಆದ್ಯತೆ ನೀಡುತ್ತೇನೆ. ಕಾರಣ ರೈಲ್ವೆ ನಿಲ್ದಾಣದ ಹೊರಗೆ ಹೋಟೆಲು ಹುಡುಕಿಕೊಂಡು ಹೋಗಬೇಕು ಮತ್ತು ತುರ್ತಿನ ಸಂದರ್ಭದಲ್ಲಿ ರೈಲು ತಪ್ಪಿ ಇಕ್ಕಟ್ಟಿಗೆ ಸಿಲುಕುವ ಸ್ವಯಂಕೃತ ಅಪರಾಧ ಎದುರಾಗುವ ಸಂದರ್ಭ ಒದಗದಿರಲಿ ಎಂಬ ಮುನ್ನೆಚ್ಚರಿಕೆಯೂ ಆಗಿದೆ. ಆದರೂ ಬೆಲೆ ಹೊರಗಿನದಕ್ಕಿಂತ ಕಡಿಮೆ ಇರುತ್ತದೆ ಎಂಬುದೆ ಮುಖ್ಯ. ಹಾಗಾಗಿ ರೈಲ್ವೆ ಇಲಾಖೆಯ ಕ್ಯಾಟರಿಂಗ್ ವಿಭಾಗ ಹುಡುಕಿಕೊಂಡು ಹೊರಟೆ. ಅದು ಬಸ್ ನಿಲ್ದಾಣಗಳಲ್ಲಿನ ಹೋಟೆಲಿನಂತೆ ದೊಡ್ಡದಾಗಿಯೂ ಇದ್ದು ಸೇವೆಗಿಂತ ವ್ಯಾಪಾರಿ ಮನೋಭಾವವೂ ಎದ್ದು ಕಾಣುತ್ತಿತ್ತು. ನನಗೆ ಒಳಗೆ ಹೋಗಿ ಹೊಟ್ಟೆ ತುಂಬಿಸಲು ಇಷ್ಟವಾಗಲಿಲ್ಲ. ಸ್ವಲ್ಪ ಮುಂದೆ ಹೋದೆ. ಆಹಾರ ಪದಾರ್ಥ ಮಾರಾಟ ಮಾಡುವ ಕ್ಯಾಟರಿಂಗ್ ವಿಭಾಗದಂತೆ ನನಗೆ ಭಾಸವಾಯಿತು. ಅಲ್ಲಿ ಸಿದ್ಧವಿದ್ದ ಪದಾರ್ಥಗಳು ನನಗೆ ಸಮಾಧಾನಕರವೆನಿಸಲಿಲ್ಲವಾದರೂ ಏನಾದರೂ ಒಂದನ್ನು ಕೊಂಡು ತಿನ್ನಲೇಬೇಕಿತ್ತು. ದೋಸೆಗೆ ಬೇಡಿಕೆ ಇಟ್ಟೆ. ಅದರ ಬೆಲೆ ಹೊರಗಿನ ಹೋಟೆಲಿಗೂ ಇಲ್ಲಿಗೂ ಏನೂ ವ್ಯತ್ಯಾಸ ಕಾಣಲಿಲ್ಲ. ಪ್ಲಾಟ್ ಫಾರಂನಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಹಾಕಿದ್ದ ಸ್ಟೀಲಿನ ಮೂರು ನಾಕು ಜನ ಕುಳಿತುಕೊಳ್ಳುಂಥ ಕುರ್ಚಿಯ ಮೇಲೆ ಕುಳಿತು ದೋಸೆಯ ಪಟ್ಟಣ ಬಿಚ್ಚಿ ತಿನ್ನತೊಡಗಿದೆ. ದೊಸೆಯಾಗಲೀ ಚಟ್ನಿಯಾಗಲೀ ರುಚಿಕರವೂ ಇರಲಿಲ್ಲ, ಹೊಟ್ಟೆಯೂ ತುಂಬುವಂತೆಯೂ ಇರಲಿಲ್ಲ. ಹೊರಗೆ ಹೋಟೆಲಿಗೆ ಹೋಗಿದ್ದರೆ ರುಚಿಕರವಾದ ಪದಾರ್ಥ ಅದೇ ಬೆಲೆಗೆ ತಿನ್ನಬಹುದಿತ್ತು, ಗಾಡಿ ಬರಲು ಸಮಯವೂ ಬಹಳಷ್ಟಿತ್ತು ಎಂದು ನನ್ನ ಮೇಲೆ ನಾನೇ ಬೇಸರ ಮಾಡಿಕೊಂಡೆ. ಕೈ ತೊಳೆದು ನೇರ ಕಾಯುವ ಕೊಠಡಿಗೆ ಹೋಗಿ ಕುಳಿತೆ. ಸ್ವಲ್ಪ ಕಳೆಯುವ ಹೊತ್ತಿಗೆ ರೈಲೊಂದು ಪ್ಲಾಟ್ ಫಾರಂನಲ್ಲಿ ಬಂದು ನಿಂತಿತು. ನೋಡಿದೆ. ಪಾಲಕ್ಕಾಡ್ ಎಕ್ಸ್ ಪ್ರೆಸ್ ಎಂದಿತ್ತು. ಆಗ ಟಂಟೆ 9.30 ತೋರಿಸುತ್ತಿತ್ತು. ಅಲ್ಲಿಗೆ ಇಬ್ಬರು ತಳ್ಳುವ ಗಾಡಿ ವ್ಯಾಪಾರಿ ಹುಡುಗರು ಬಂದು ನಿಂತಿದ್ದರು. ಇದು ಎಷ್ಟು ಗಂಟೆಗೆ ಹೊರಡುವುದು ಎಂದು ಕೇಳಿದೆ. 12 ಗಂಟೆಗೆ, ಎಂದರು. ಹನ್ನೆರಡು ಗಂಟೆಗೆ ಹೊರಡುವ ಗಾಡಿ ಈಗಲೇ ಬಂದು ನಿಂತಿದೆಯಲ್ಲ ಮಾರಾಯ! ಎಂದೆ. ಹೌದು, ನಿತ್ಯ ಇದೇ ಹೊತ್ತಿಗೆ ಬರುವುದುಂಟು ಎಂದು ಆತ ಹೇಳಿದ. ಅವನಿಗೂ ವಿಚಿತ್ರವೆನಿಸಿರಬೇಕು, ಅವನ ಮಾತು ನಗೆಯಾಡುವ ರೀತಿಯಲ್ಲಿತ್ತು. ರೈಲು ಬಂದ ಮೇಲೆ ಏನು ಮಾಡುವುದೆಂದು ನಾನು ರೈಲು ಹತ್ತಿದೆ. ನಾನು ಹತ್ತಿದ ಡಬ್ಬಿಯಿಂದ ಎಂಜಿನ್ ವರೆಗಿನ ಎಲ್ಲ ಡಬ್ಬಿಗಳಲ್ಲಿ ಓಡಾಡಲು ಅವಕಾಶವಿತ್ತು ಮತ್ತು ಮೆತ್ತಗಿನ ಸೀಟು ಇತ್ತು- ಬೆಂಗಳೂರು ಮೈಸೂರು ನಡುವೆ ಓಡಾಡುವ ಕಾವೇರಿ ಎಕ್ಸ್ ಪ್ರೆಸ್ಸಿನಲ್ಲಿರುವ ಹಾಗೆ. ಆದರೆ ನಾನೇರಿದ ಡಬ್ಬಿಯಿಂದ ಹಿಂದಿನ ಡಬ್ಬಿಗೆ ಆ ಅವಕಾಶವಿರದೆ ಮುಚ್ಚಲಾಗಿತ್ತು. ಸ್ಲೀಪರ್, ಎಸಿ, ಡಬ್ಬಿಗಳಿಲ್ಲದ ರೈಲಿನಂತಿದೆಯಲ್ಲ? ಇದೇಕೆ ಹೀಗೆ ಮಾಡಿದ್ದಾರೆ? ಕುಳಿತು ಪಯಣಿಸುವ ಡಬ್ಬಿಗಳಲ್ಲೆ ದರ್ಜೆಗಳನ್ನು ಮಾಡಿದ್ದಾರೆಯೆ? ಕೇಳೋಣವೆಂದರೆ ಅಕ್ಕ ಪಕ್ಕ ಕುಳಿತ ಜನರೆಲ್ಲ ನನ್ನನ್ನು ಕೇಳುವರಾಗಲೀ ಅವರಿಗವರೇ ಮಾತನಾಡಿಕೊಳ್ಳುವುದಾಗಲೀ ನನಗೇನೂ ಅರ್ಥವಾಗುತ್ತಿಲ್ಲವಾದರೂ ಮಲಯಾಳಂ ಇರಬೇಕೆಂದುಕೊಂಡೆ. ಮಂಗಳೂರು ನನಗೆ ಮಲಯಾಳಿ ನಾಡ ಭಾಷಿಗರ ಭಾಗವಾಗಿದೆಯೇನೋ ಎನ್ನುವಂತೆ ಭಾಸವಾಗತೊಡಗಿತು. ಅಚ್ಚ ಕನ್ನಡಿಗರ ಕಾಸರಗೋಡು ಮಲಯಾಳಿಗರ ಕೈ ಹಿಡಿತದಿಂದ ಬಿಡಿಸಿಕೊಳ್ಳಲು ಸಾಧ್ಯವಾಗದೆ ಇರುವುದು ಇದೇ ಕಾರಣಕ್ಕಿರಬಹುದೆ ಅನ್ನಿಸಿತು. ಅಲ್ಲಿಗೂ ರೈಲ್ವೆ ಇಲಾಖೆಯ ಆಹಾರ ಪದಾರ್ಥ ಮಾರುವ ಜನ ಬರುತ್ತಿದ್ದರು. ನಾನು ಅತ್ತ ಗಮನೇನೂ ಕೊಡಲಿಲ್ಲ. ನಾನು ಹೋಗುವ ಊರು, ಮಾರ್ಗ, ನನಗೆ ತಿಳಿದುದೇನಲ್ಲ. ರೈಲು ಎಲ್ಲಿ ನಿಲ್ಲುತ್ತದೊ, ಎಲ್ಲಿ ಅನ್ನ ಸಿಗುತ್ತದೋ ಎಂಬ ಅನುಮಾನದಲ್ಲಿ ಮುನ್ನಚ್ಚರಿಕೆಯಾಗಿ ನನ್ನ ಜೊತೆ ಒಂದು ಅನ್ನದ ಪೊಟ್ಟಣ ಇದ್ದರೆ ಕ್ಷೇಮವೆಂದು ಭಾವಿಸಿ, ಕನ್ನಡ ಮಾತನಾಡಿದ ಒಬ್ಬನ ಬಳಿ ಒಂದು ಪೊಟ್ಟಣ ಕೊಂಡೆ. ಅದರ ಬೆಲೆ ಹೊರಗಿನ ಹೋಟೆಲುಗಳ ಬೆಲೆಗೇನೂ ಕಡಿಮೆ ಇರಲಿಲ್ಲ. ಅವನಿಗೆ ಕೇಳಿದೆ: ಇದು ಜನರಲ್ ಕಂಪಾರ್ಟ್ ಮೆಂಟ್ ತಾನೆ? ಅವನು ಹೇಳಿದ: ಅಲ್ಲ. ಈ ಡಬ್ಬಿಗೆ 15 ರೂಪಾಯಿ ಹೆಚ್ಚು ಕೊಡಬೇಕು. ನನಗೆ ಅವನು ಐದು ರೂಪಾಯಿ ಚಿಲ್ಲರೆ ಕೊಡಬೇಕಿತ್ತು. ಅವನಿಗೇನನ್ನಿಸಿತೋ ನನಗೆ ಹತ್ತು ರೂಪಾಯಿ ಕೊಟ್ಟು, ಐದು ರೂಪಾಯಿ ಕೊಟ್ಟು ಹತ್ತು ರೂಪಾಯಿ ಪಡೆಯುತ್ತೇನೆ ಎಂದು ಹೇಳಿ ಹೋದ. ನಾನು ಸ್ವಲ್ಪ ಹೊತ್ತು ನೋಡಿದೆ. ಅವನ ಬರುವಿಕೆಗೆ ಎಷ್ಟು ಹೊತ್ತಾಗುವುದೋ ಎಂದು ಇಳಿದು ಹಿಂದಿನ ಡಬ್ಬಿ ಹತ್ತಿದೆ. ಹಲಗೆ ಸೀಟುಗಳ ಆ ಡಬ್ಬಿ ಜನರಲ್ ಡಬ್ಬಿ ಎನ್ನುವುದರಲ್ಲಿ ಯಾವ ಅನುಮಾನವೂ ಇರಲಿಲ್ಲ. ತಡಮಾಡಿದ್ದರೆ ಕುಳಿತುಕೊಳ್ಳಲು ಸೀಟು ಸಿಗುತ್ತಿತ್ತೋ ಇಲ್ಲವೋ ಆದರೆ ಅನ್ನ ಮಾರುವನಿಗೆ ಐದು ರೂಪಾಯಿ ಚಿಲ್ಲರೆ ಪಡೆಯುವ ಅವಕಾಶ ತಪ್ಪಿಸಿದ ದುಷ್ಟನಾದೆ. ಅಲ್ಲೊಬ್ಬ ಪಯಣಿಗ ತಮಿಳಿನಲ್ಲಿ ಬೆಂಗಳೂರು ಹೈದ್ರಾಬಾದ್ ಹೆಸರುಗಳನ್ನು ಹೇಳುತ್ತ ಯಾವುದೋ ವ್ಯವಹಾರದ ಮಾತುಗಳನ್ನು ಮೊಬೈಲ್ ನಲ್ಲಾಡುತ್ತಿದ್ದ. ಅವನಿಗೆ ಕನ್ನಡ ಖಂಡಿತ ಗೊತ್ತಿರಲು ಸಾಕು ಎಂದು ತಿಳಿದು ಅವನೊಂದಿಗೆ ಮಾತುಕತೆ ಶುರು ಮಾಡಿದೆ. ಇಲ್ಲದಿದ್ದರೆ ನಾನೊಬ್ಬ ಅನ್ಯಗ್ರಹದ ಜೀವಿಯಂತೆ ಪಿಳಿಪಿಳಿ ಕಣ್ಣು ಬಿಟ್ಟು, ಆರ್ಥವಾಗದ ಮಾತುಗಳನ್ನಾಡುವ ಇನ್ನೊಬ್ಬರ ಮುಖಗಳನ್ನು ನೋಡುತ್ತ ಕುಳಿತುಕೊಳ್ಳಬೇಕಿತ್ತು.]]>

‍ಲೇಖಕರು G

March 27, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಇಂದು ಸಂಜೆ ಜರುಗುವ 'ಅಮ್ಮ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಬೀದರ್ ನ ದೇಶಾಂಶ ಹುಡುಗಿ ಅವರು ಇನ್ನಿಲ್ಲ.....

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: