ಅಮೆರಿಕಾದಲ್ಲಿ ಉಲ್ಟಾ ಪಲ್ಟಾ

ವಸಂತರಾಜ ಎನ್ ಕೆ

ಲ್ಲಿ ಫುಟ್ ಬಾಲ್ ಅತ್ಯಂತ ಜನಪ್ರಿಯ ಮೂರು ಆಟಗಳಲ್ಲಿ ಒಂದು. ಇತರ ಎರಡು ಜನಪ್ರಿಯ ಆಟಗಳೆಂದರೆ ಬೇಸ್ ಬಾಲ್ ಮತ್ತು ವಾಲಿಬಾಲ್. ಆದರೆ ಈ ಫುಟ್ ಬಾಲ್ ನಮ್ಮ ಫುಟ್ ಬಾಲ್ ನಂತಲ್ಲ. ಮೊದಲನೆಯದಾಗಿ ಬಾಲು ದುಂಡಗಿಲ್ಲ, ತೆಂಗಿನಕಾಯಿ ಥರ ಇದೆ.

oneworldhands.gifಫುಟ್ ಬಾಲೇ ಅಲ್ಲ ಅದು. ಯಾಕೆ ಹೇಳ್ದೆ ಅಂದರೆ ಫುಟ್ ಬಾಲ್ ನ ಅಮೆರಿಕದ ಅವತಾರದಲ್ಲಿ ಬಾಲನ್ನು ಕಾಲಲ್ಲಿ ಒದೆಯುವುದಕ್ಕಿಂತ ಕೈನಲ್ಲಿ ಹ್ಯಾಂಡಲ್ ಮಾಡುವುದೇ ಹೆಚ್ಚು. ಒಂದು ದಿನ ಟೀವಿಯಲ್ಲಿ ನಾನು ಅಮೆರಿಕನ್ ಫುಟ್ ಬಾಲ್ ನೋಡುತ್ತಿದ್ದೆ. ಆಟದ ನಿಯಮಗಳು ಏನು ಎತ್ತ ಅಂತ ಏನೂ ತಲೆ ಬುಡ ಗೊತ್ತಾಗಲಿಲ್ಲ. ನನಗೆ ಗೊತ್ತಾಗಿದ್ದು ಇಷ್ಟೆ- ಬಾಲ್ ಕಿತ್ತುಕೊಳ್ಳಬೇಕು ಏನಾದರೂ ಮಾಡಿ. ಬಾಲ್ ಕಿತ್ತುಕೊಳ್ಳಲು ಏನು ಮಾಡಿದರೂ ಸರಿ ಅಂತ. ಬಹಳ ರಫ್ ಆಟ. ನನಗೆ ಬಾಲ್ಯದಲ್ಲಿ ಉಡುಪಿಯಲ್ಲಿ ಆಡಿದ “ಪಿಲ್ಚೆಂಡಿ” ನೆನಪಾಯಿತು. ಅದರಲ್ಲಿ ಯಾರಿಗಾದರೂ ಬೆನ್ನಿಗೆ ಚೆನ್ನಾಗಿ ತಾಗುವ ಹಾಗೆ ಹೊಡೆಯಬೇಕು. ಹಾಗೆ ತಾಗಿದವ ಇನ್ನಾರಿಗಾದರೂ ಹೊಡೆಯಬೇಕು ಇನ್ನೇನು ನಿಯಮಗಳಿಲ್ಲ. ಅದೇ ರೀತಿ ಈ ಫುಟ್ ಬಾಲಲ್ಲೂ. ಆದ್ದರಿಂದಲೋ ಏನೋ ಈ ಆಟದಲ್ಲಿ ಆಡುವ ಆಟಗಾರರು ಹಳೆಯ ರಾಜರ ಕಾಲದ ಸೈನಿಕರ ಹಾಗೆ ಕವಚ, ಶಿರಸ್ತ್ರಾಣ ಎಲ್ಲಾ ಧರಿಸ್ತಾರೆ. ಅದೇನೇ ಇರಲಿ, ನಮಗೆ ಗೊತ್ತಿರುವ ಫುಟ್ ಬಾಲ್ ಗೂ ಈ ನೇಷನಲ್ ಫುಟ್ ಬಾಲ್ ಗೂ ಏನೂ ಸಂಬಂಧ ಇಲ್ಲ. ಇಡೀ ಜಗತ್ತಿನ ಫುಟ್ ಬಾಲ್ ಒಂದು ರೀತಿಯದಾದರೆ, ಇವರ ಫುಟ್ ಬಾಲ್ ಬೇರೆ. ಯುರೋಪಿನಿಂದ ಅಮೆರಿಕಕ್ಕೆ ಬಂದು ನೆಲೆಸಿದ ವಲಸೆಗಾರರು ಫುಟ್ ಬಾಲ್ ನ ಈ  ವೆರೈಟಿಯನ್ನು ಆಡಲು ಆರಂಭಿಸಿದರಂತೆ. ಅಮೆರಿಕದ ಈ ಫುಟ್ ಬಾಲ್ ಗೂ ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇದೆಯಂತೆ. ಅದೇನೇ ಇರಲಿ ಜಗತ್ತಿಗಿಂತ ಬೇರೆಯದಾದ ತಮ್ಮದೇ ಒಂದು ವಿಶಿಷ್ಟವಾದದ್ದನ್ನು ಎತ್ತಿ ಹಿಡಿಯುವ ಖಯಾಲಿ ಇದೆ ಅಮೆರಿಕನ್ನರಿಗೆ. ಇದೂ ಕಾರಣವಾಗಿರಬಹುದು ಅಮೆರಿಕನ್ ಫುಟ್ ಬಾಲ್ ಗೆ. ಇದೇ ರೀತಿ ಇಲ್ಲಿನ ಇನ್ನೊಂದು ಆಟ ಬೇಸ್ ಬಾಲ್. ಕ್ರಿಕೆಟ್ ಥರಾನೆ, ಆದರೆ ಸಾಕಷ್ಟು ಬದಲಾವಣೆ ಮಾಡಿರುವಂಥದು. ಇವೆರಡೂ ಆಟಗಳನ್ನು ಜಗತ್ತಿನಲ್ಲಿ ಬೇರೆಲ್ಲೂ ಆಡಲ್ಲ, ಅಮೆರಿಕ ಬಿಟ್ಟರೆ. ಅದರ ಬಾಲವಾದ ಕೆನಡಾದಲ್ಲಿ ಆಡುತ್ತಾರೆ ಅಷ್ಟೇ.

ಇದು ಮಾತ್ರವಲ್ಲ, ಎಲ್ಲದರಲ್ಲೂ ಬೇರೆಯಾಗಿ ಇರುವ “ನಾವು ಎಲ್ಲರಂಥವರಲ್ಲ” ಎನ್ನುವ ಖಯಾಲಿ. ಇಡೀ ಜಗತ್ತೇ ಮೆಟ್ರಿಕ್ ಪದ್ಧತಿಯ ಮಾಪನೆ ಅಂಗೀಕರಿಸಿತು. ಆದರೆ ಇಲ್ಲಿ ಈಗಲೂ ಇಂಚು, ಅಡಿ, ಮೈಲ್, ಪೌಂಡು, ಔನ್ಸುಗಳದ್ದೇ ರಾಜ್ಯ. ಅದರ ತವರೂರಾದ ಬ್ರಿಟಿಷರೇ ಬದಲಾಯಿಸಿದ್ದಾರೆ. ಆದರೆ ಅಮೆರಿಕನ್ನರು ಇನ್ನೂ ಅದಕ್ಕೆ ಅಂಟಿಕೊಂಡಿದ್ದಾರೆ. ಇದೇ ರೀತಿ ವಿದ್ಯುತ್ತಿನಲ್ಲಿ ಇಡೀ ಜಗತ್ತಲ್ಲಿ ೨೩೦ ವೋಲ್ಟು ಬಳಸಿದರೆ, ಅಮೆರಿಕನ್ನರದೇ ಬೇರೆ ತಾಳ-೧೧೦ ವೋಲ್ಟು.

amnew.jpgಅದೇನೇ ಇರಲಿ, ಅವರವರ ಆಟ ಅವರಿಗೆ. ಆಟಗಳಿಗೆ ಇಲ್ಲಿ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ತುಂಬಾ ಪ್ರೋತ್ಸಾಹ, ಸವಲತ್ತು ಇದೆ. ಪ್ರತಿಯೊಬ್ಬರೂ ಏನಾದರೂ ಆಡುತ್ತಾರೆ. ಸ್ಕೂಲು, ಕಾಲೇಜು, ವಿಶ್ವವಿದ್ಯಾಲಯಗಳ ಟೀಮುಗಳ ನಡುವೆ ಆಡುವ ಆಟ ದೇಶದ ತುಂಬೆಲ್ಲಾ ಸುದ್ದಿ. ಪತ್ರಿಕೆ, ರೇಡಿಯೋ, ಟಿವಿಗಳಲ್ಲೆಲ್ಲಾ ಆ ದಿನ ವಿಶೇಷ ಕ್ರೈಮ್ ಇಲ್ಲದಿದ್ದರೆ, ಆಟೋಟಗಳದ್ದೇ ಮುಖಪುಟದ ಸುದ್ದಿ. ಈ ಮೂರು ಆಟಗಳಲ್ಲಿ ಬಾಸ್ಕೆಟ್ ಬಾಲ್ ಹೆಚ್ಚು ಜನಪ್ರಿಯ. ಜನ ಬಾಸ್ಕೆಟ್ ಬಾಲ್ ನೋಡುವುದು ಮಾತ್ರವಲ್ಲ, ಸ್ವತಃ ತಾವೂ ಆಡುತ್ತಾರೆ. ಅಲ್ಲದೆ ಗಂಡಸರೂ, ಹೆಂಗಸರೂ ಸಮಾನವಾಗಿ ಆಡುವ, ನೋಡುವ ಆಟ ಇದು. ಸ್ವಲ್ಪ ಅನುಕೂಲಸ್ತರ, ಮನೆ ಎದುರು ಜಾಗ ಇರುವ ಮನೆಗಳಲ್ಲಿ ಬಾಸ್ಕೆಟ್ ಬಾಲ್ “ಬಾಸ್ಕೆಟ್” ಇರುವ ಕಂಬ ನೋಡಬಹುದು. ಇನ್ನೆರಡು – ಫುಟ್ ಬಾಲ್ ಮತ್ತು ಬೇಸ್ ಬಾಲ್ ಸ್ಕೂಲ್, ಕಾಲೇಜು, ವಿಶ್ವವಿದ್ಯಾಲಯ, ಕಂಪನಿ, ಕ್ಲಬ್ ಇಂಥಲ್ಲಿ ಹೆಚ್ಚು. ಅದು ಹೆಚ್ಚೆಚ್ಚು ನೋಡುಗರ ಆಟ ಆಗಿದೆ ಅಂತ ಕಾಣ್ತದೆ. ಅಂದರೆ ಅದನ್ನು ಆಡುವವರಿಗಿಂತ ನೋಡುವವರು ಹೆಚ್ಚು. ಈ ಆಟಗಳನ್ನು ಆಡುವ ೬೪೦ ಕಾಲೇಜು, ವಿಶ್ವವಿದ್ಯಾಲಯ ಟೀಮುಗಳಿವೆಯಂತೆ.

ಯಾವ ಆಟ ಎಷ್ಟು ಕಮರ್ಷಿಯಲ್ ಆಗಿಬಿಟ್ಟಿದೆ ಅಂತ ಅತ್ಯಂತ ೪೦ ಶ್ರೀಮಂತ ಆಟಗಾರರು ಯಾವ ಆಟ ಆಡುವವರು ಎಂದು ನೋಡಿದರೆ ಗೊತ್ತಾಗುತ್ತದೆ. ೨೪ ಕೋಟಿ ರೂಪಾಯಿಗಿಂತ ಹೆಚ್ಚಿನ ವಾರ್ಷಿಕ ಆದಾಯ ಪಡೆಯುವ ೪೦ ಆಟಗಾರರಲ್ಲಿ ತಲಾ ೮ ಆಟಗಾರರು ಬೇಸ್ ಬಾಲ್, ಫುಟ್ ಬಾಲ್, ಬಾಸ್ಕೆಟ್ ಬಾಲ್ ಆಡುವವರು; ತಲಾ ೫ ಜನ ಟೆನ್ನಿಸ್ ಮತ್ತು ಬಾಕ್ಸಿಂಗ್ ಆಟಗಾರರು; ಉಳಿದವರು ಉಳಿದ ಆಟ ಆಡುವವರು. ಇಲ್ಲಿಯ ಆಟೋಟಗಳ ಬಗ್ಗೆ ದರಿದ್ರ ಎಂದು ಅನ್ನಿಸಿದ್ದು ಇಲ್ಲಿನ ಚಿಯರ್ ಗರ್ಲ್ಸ್ ಪದ್ಧತಿ ಬಗ್ಗೆ. ಇದೂ ಮುಖ್ಯವಾಗಿ ಫುಟ್ ಬಾಲ್, ಬೇಸ್ ಬಾಲ್ ಆಟಗಳಲ್ಲೇ ಇರುವುದಂತೆ. ಸ್ಕೂಲು, ಕಾಲೇಜುಗಳ ಟೀಮು ಆಡುವಾಗ ಆ ಸ್ಕೂಲ್, ಕಾಲೇಜುಗಳ ಹುಡುಗರು, ಹುಡುಗಿಯರು ತಮ್ಮ ಟೀಮನ್ನು ಹುರಿದುಂಬಿಸಲು ಕೇಕೇ ಹಾಕುವುದು ಇತ್ಯಾದಿ ಸ್ವಾಭಾವಿಕ ತಾನೆ. ಈ ಚಿಯರ್ ಗರ್ಲ್ಸ್ ತಂಡ ಈ ರೀತಿ ಹುರಿದುಂಬಿಸುವ ಅಧಿಕೃತ ತಂಡ. ಸ್ಕೂಲಿನ ಅತ್ಯಂತ ಸುಂದರಿ, ಥಳಕಿನ ಹುಡುಗಿಯರನ್ನು ಸೇರಿಸಿ ಇಂತಹ ಟೀಮುಗಳನ್ನು ಮಾಡಲಾಗುತ್ತದೆ. ತಮ್ಮ ಸ್ಕೂಲ್, ಕಾಲೇಜು ಟೀಮು ಚೆನ್ನಾಗಿ ಆಡಿದಾಗ ಕುಣಿದು ಕುಪ್ಪಳಿಸಿ (ಅತ್ಯಂತ ಕನಿಷ್ಠ ಉಡುಗೆ)ಯಲ್ಲಿ ಹುರಿದುಂಬಿಸುವುದು ಇವರ ಕೆಲಸ. ಇದು ಮಹಿಳೆಯನ್ನು ಪ್ರದರ್ಶನದ ಸರಕು ಅಂತ ಕಾಣುವ ಹೀನ ಸಂಪ್ರದಾಯದ ಮತ್ತೊಂದು ಮುಖ. ಎಲ್ಲರೂ “ನೋಡುವ ಆಟ”ಗಳಲ್ಲಿ ಮುಳುಗಿಲ್ಲ ಇನ್ನೂ. ದೊಡ್ಡ ಪ್ರಮಾಣದಲ್ಲಿ ಜನ ಓಟ, ಈಜು, ಸೈಕಲಿಂಗ್, ಇತರ ವ್ಯಾಯಾಮಗಳಲ್ಲಿ ತೊಡಗಿರುವುದು ಕಾಣುತ್ತದೆ. ನಾನು ನೋಡಿದ ಹಾಗೆ (ಅಂಕೆ ಸಂಖ್ಯೆಗಳ ಪ್ರಕಾರವೂ) ಅತ್ಯಂತ ಹೆಚ್ಚು ಬೊಜ್ಜು ಬೆಳೆಸಿರುವ ಜನ ಇರುವ ಈ ದೇಶದಲ್ಲಿ ಬೊಜ್ಜು ಕರಗಿಸುವುದು ಅತ್ಯಂತ ಪ್ರಿಯ ಹವ್ಯಾಸಗಳಲ್ಲೊಂದು (ಬೊಜ್ಜು ಬೆಳೆಸುವುದನ್ನು ಬಿಟ್ಟರೆ). ಬೆಳಗ್ಗೆ ಸಾಯಂಕಾಲ ಜಾಗಿಂಗ್ ಅತ್ಯಂತ ಜನಪ್ರಿಯ ಬೊಜ್ಜು ಕರಗಿಸುವ ವಿಧಾನ. ಇಲ್ಲೂ ತಮಾಷೆಗಾಗಿ ಕಂಡಿದ್ದು ಇದಕ್ಕೂ ಬೇಕಾಗುವ (ನಿಜವಾಗಲೂ ಬೇಕಾಗಿಲ್ಲದ) ಪರಿಕರಗಳದ್ದೇ ದೊಡ್ಡ ಗಲಾಟೆ. ಈ ಪರಿಕರಗಳದ್ದೇ ಬೇರೆ ಅಂಗಡಿ, ಭಾರೀ ವಹಿವಾಟು. ಸಾಮಾನ್ಯವಾಗಿ ಜಾಗಿಂಗ್ ಗೆ, ರನ್ನಿಂಗ್ ಗೆ ಬೇರೆ ಬನಿಯನ್, ಚಡ್ಡಿ, ಶೂಗಳು, ಸಾಕ್ಸ್ ಗಳು. ಹೆಚ್ಚಿನವರಿಗೆ ಸ್ಪೋರ್ಟ್ಸ್ ವಾಕ್ ಮನ್ ಸಹ ಕಡ್ಡಾಯ ಅಗತ್ಯ. ಸೈಕಲಿಂಗ್ ಗಂತೂ ಕೇಳುವುದೇ ಬೇಡ. ಭಾರಿ ಶಿರಸ್ತ್ರಾಣ, ವಿಶೇಷ ಶೂ, ಕೆಲವರಿಗೆ ಮೊಣಕಾಲು, ಮೊಣಕೈಗಳಿಗೆ ಕವಚಗಳು, ಕೈಚೀಲ ಹೀಗೆ ತುದಿ ಮೊದಲಿಲ್ಲದ ಪರಿಕರಗಳು. ಚಿಕ್ಕ ಮಕ್ಕಳು ಸೈಕಲಿಂಗ್ ಮಾಡುವಾಗಲೂ ಇವೆಲ್ಲಾ “ಕಡ್ಡಾಯ” ಪರಿಕರಗಳು. ನನಗಂತೂ ಇದು ಭಾರಿ ತಮಾಷೆ, ಅಷ್ಟೇ ಹಾಸ್ಯಾಸ್ಪದ ಎನ್ನಿಸಿತು. ಜಾಹೀರಾತುಗಳಿಂದ ಇವೆಲ್ಲ ಅತ್ಯಗತ್ಯ ಪರಿಕರಗಳು ಎಂದು ಇವರ ತಲೆಯಲ್ಲಿ ತುಂಬಲಾಗಿದೆ. ಕೆಲವರಂತೂ ಇವೆಲ್ಲ ಪರಿಕರಗಳನ್ನು ಕೊಂಡಿದ್ದರಿಂದ ಅನಿವಾರ್ಯವಾಗಿ ಈ ವ್ಯಾಯಾಮಗಳನ್ನು ಮಾಡುತ್ತಾರೇನೋ ಅನ್ನಿಸುತ್ತದೆ. ಇನ್ನು ಇಲ್ಲಿ ಹೆಚ್ಚಿನ ರಾಜ್ಯಗಳಲ್ಲಿ ಜೂಜು ಕಾನೂನುಬದ್ಧ ಆಟ. ಕುದುರೆ ರೇಸ್ ಸಹ ಹಾಗೆ. “ಲಾಸ್ ವೇಗಾಸ್” ಎಂಬ ಅಮೆರಿಕನ್ ಪಟ್ಟಣದ ಬಗ್ಗೆ ಕೇಳಿರಬೇಕು. ಇದಂತೂ ಜೂಜುಗಾರರ ಸ್ವರ್ಗ. ಇಡೀ ನಗರ ಜೂಜಿಗೆ ಮೀಸಲಾದದ್ದು. ಜಗತ್ತಿನ ಶ್ರೀಮಂತರಲ್ಲಿ (ಶ್ರೀಮಂತರಲ್ಲದಿದ್ದವರೂ) ಇಲ್ಲಿಗೆ ಜೂಜು ಆಡಲು ಬರುತ್ತಾರೆ. ಇಡೀ ನಗರ ಜೂಜಿನ ಮೇಲೆ ಅವಲಂಬಿಸಿದೆ. ಪ್ರವಾಸಿಗರು ಬರೀ ಜೂಜು ಆಡಲಿಕ್ಕೇ ಹೋಗಿ ಬರುವವರೂ ಇದ್ದಾರೆ.

‍ಲೇಖಕರು avadhi

July 19, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಲಂಕೇಶ್ Interviews ಕುವೆಂಪು

ಲಂಕೇಶ್ Interviews ಕುವೆಂಪು

1974 ರಲ್ಲಿ ಲಂಕೇಶ್ ರ ಸಂಪಾದಕತ್ವದಲ್ಲಿ ಪ್ರಕಟವಾದ `ಪಾಂಚಾಲಿ' ಸಂಚಿಕೆಯನ್ನು ಕನ್ನಡ ಸಾಹಿತ್ಯದ ಹಲವು ಮಹತ್ವದ ಬರವಣಿಗೆಗಳ ಕಣಜ ಎನ್ನಬಹುದು....

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This