'ಕೈರೊಟ್ಟಿ'ಯ ರುಚಿ

suresh rajamane

ಸುರೇಶ ಎಲ್ ರಾಜಮಾನೆ

ಹಸಿದ ಹೊಟ್ಟೆಗೆ ಹನಿ ನೀರು ಆಧಾರ ಅಂತಾರಲ್ಲ ಹಾಗೆ ಕಥೆಗಳನ್ನು ಓದಬೇಕು ಅಂತ ಹಸಕೊಂಡು ಕುಂತಿರುವ ಸಮಯಕ್ಕ ಸರಿಯಾಗಿ ಆಕಸ್ಮಿಕ ಭೇಟಿಯ ನೆನಪಿಗಾಗಿ ‘ತಿರುಪತಿ ಭಂಗಿ’ಯವರು ತಮ್ಮ ‘ಕೈರೊಟ್ಟಿ’ಯನ್ನು ಪ್ರೀತಿಯಿಂದ ಕೈಗಿಟ್ಟು ನನ್ನ ಹಸಿವನ್ನೊಂದಿಷ್ಟು ಇಂಗಿಸಿದರು.

ಆದರೆ, ಅದರ ರುಚಿ ಹೆಂಗಿತ್ತು ಅಂತ ಹೇಳಾಕ ಸ್ವಲ್ಪ ಲೇಟಾಗಿ ಹೋಯ್ತು. ಈವತ್ತು ಆ ಕೈರೊಟ್ಟಿಯನ್ನು ತಿಂದುಂಡು ಮುಗಿಸಿದೆ ರುಚಿ ಹೆಂಗಿತ್ತು ಅಂದ್ರ.

ಹೇಳ್ತಿನಿ ಕೇಳ್ರಿ…

kairotti

ಕಥೆಗಾರರಾದ ತಿರುಪತಿ ಭಂಗಿಯವರು ಕಥೆಗಾಗಿ ಬಳಸಿದ ಭಾಷೆಯ ಶೈಲಿ, ಜನಪದ ಜಗತ್ತಿನ ಗಮ್ಮತ್ತಿನ ಮಾತುಗಳು, ಪಂಚಿಂಗ್ ಡೈಲಾಗ್ ತರಾ ಆಗಾಗ ಅನುಭವದ ಗಂಟಲ್ಲಿ ಬಚ್ಚಿಟ್ಟುಕೊಂಡಿದ್ದ ನೆನಪುಗಳ ಮುಂಚು, ಕಥೆಯಲ್ಲಿನ ಭಾವನಾತ್ಮಕ ಸನ್ನಿವೇಶಗಳು ಅವರ ಕಥೆಗಳನ್ನು ಉತ್ತುಂಗಕ್ಕೇರಿಸಿ ನಿಲ್ಲಿಸುತ್ತವೆ.

ಓದುಗರನ್ನು ಮುಂದೆ ಏನಾಗಬಹುದು ?, ಏನಿರಬಹುದು ? ಎಂಬ ಕುತುಹಲದ ಹಳ್ಳಕ್ಕೆ ತಳ್ಳಿ ಕಥಾಹಂದರದಲ್ಲಿ ಮುಳುಗಿಸಿಕೊಂಡು ಸಾಗುವಲ್ಲಿ ಕಥೆಗಳು ಯಶಸ್ವಿಯಾಗಿವೆ. ಹನ್ನೆರಡು ಕಥೆಗಳನ್ನು ಮುಗಿಸಿದರೂ ಇನ್ನೆರಡು ಕಥೆಗಳಿರಬಾರದಿತ್ತಾ ಎನ್ನುವಷ್ಟು ಕಥಾಸಂಕಲನ ನಮ್ಮನ್ನು ಆವರಿಸಿಕೊಳ್ಳುತ್ತದೆ. ಸರಳ ಭಾಷೆ ಇದ್ದರೂ ಭಾಷೆಯ ಗತ್ತು ಅದರಲ್ಲಿನ ಗಮ್ಮತ್ತು ಘಮ್ ಎನ್ನುತ್ತದೆ.

‘ಕೈರೊಟ್ಟಿ’ಅನ್ನುವ ಕಥೆಯಂತು ಕಳೆದುಹೋದ ಬದುಕಿನ ರುಚಿಯನ್ನೊಮ್ಮೆ ಕಣ್ಮುಂದೆ ತಂದು ನಿಲ್ಲಿಸಿ ಬಿಡುತ್ತದೆ. ಬಾಲ್ಯ ಮತ್ತು ಬಡತನವನ್ನು ಬಿಂಬಿಸುವದರ ಜೊತೆಗೆ ತಾಯಿ ಪ್ರೀತಿಯನ್ನು ಉಣಿಸುವ ರೀತಿಯನ್ನು ಪರಿಚಯಿಸುತ್ತದೆ.

ಅವ್ವ ಖಾರಾ ನೀರಾ ಕೊಟ್ರು ಅಮೃತ ಕುಡದಷ್ಟು ಖುಷಿ ಆಗುವ್ಹಂಗ ಕೈರೊಟ್ಟಿ ಕಥೆ ರುಚಿಸುತ್ತದೆ. ಸಹಜವಾಗಿ ಬರುವ ಕೆಲವು ಆಕಸ್ಮಿಕವಾದ ಕರೆಗಳು ಮನಸ್ಸಿಗೆ ಗಾಸಿಗೊಳಿಸಿದರೂ ಅವುಗಳನ್ನು ನಿರ್ಲಕ್ಷಿಸದಂತಿರುವದೇ ಒಳ್ಳೆಯದು ಅವು ಕೂಡಾ ಕೆಲವೊಮ್ಮೆ ಸತ್ಯ ಸಂಗತಿಗಳನ್ನು ರಿಂಗಣಿಸಿ ರಿಂಗಣಿಸಿ ಹೇಳುತ್ತಿರುತ್ತವೆ.

ವಂಶಪಾರಂಪರ್ಯಕ್ಕೆ ಪರಮ ಬಲಿಯಾಗುವ ರೀತಿಯೊಂದಿಗೆ ಮನದ ದುಗುಡಗಳನ್ನು ವ್ಯಕ್ತಪಡಿಸುವ ರೀತಿಯನ್ನು ಮನಮುಟ್ಟುವ ಹಾಗೆ ಕಥೆಗಾರರು ‘ಚಾಕ್ರಿ’ ಕಥೆಯಲ್ಲಿ ತಮ್ಮ ಕಥನ ಶೈಲಿಯ ಅದ್ಭುತವಾದ ರೀತಿಯನ್ನು ನಾವೆಲ್ಲರೂ ಒಪ್ಪಿಕೊಳ್ಳುವಂತೆ ಮಾಡುತ್ತಾರೆ. ಸಮಾಜದಲ್ಲಿರುವ ಮೂಢನಂಬಿಕೆಗಳಿಗೂ ಮತ್ತು ಪ್ರಕೃತಿ ವಿಕೋಪಗಳಿಗೂ ಸಾಮ್ಯತೆಯನ್ನು ಕಂಡುಕೊಂಡು ಮುಗ್ದ ಜನರನ್ನು ತಮ್ಮ ಆಟದ ದಾಳದಂತೆ ಬಳಸಿಕೊಳ್ಳುವ ಪುರೋಹಿತ ವರ್ಗದವರ ಚಾಣಾಕ್ಷತೆಯನ್ನು ‘ಕೃಷ್ಣೆ ಹರಿದಳು’ ಕಥೆಯಲ್ಲಿ ಕಾಣಬಹುದು ಜೊತೆಗೆ ಅಲ್ಲಿಯ ಜನರು ಅನುಭವಿಸಿದ ನೋವನ್ನು ಕಣ್ಮುಂದೆ ಕಟ್ಟುವಂತೆ ಕಥೆಗಾರರು ಕಟ್ಟಿಕೊಡುತ್ತಾರೆ.

ಇನ್ನು ತುಂಬಾ ಸಂಕಟಕ್ಕೆ ಈಡುಮಾಡುವ ‘ನೀಲಿ’ ಕಥೆಯಂತು ಅದ್ಭುತ. ಸಮಾಜದಲ್ಲಿನ ಹೆಣ್ಣಿನ ಸ್ವಾತಂತ್ರ್ಯಕ್ಕೆ ಕೊಲೆಗಾರರು ಹೊಂಚ್ಹಾಕಿ ಕುಳಿತವರ ನಡುವೆಯೇ ಜೀವಂತಿಕೆಯನ್ನು ಹಾಗು ಹೆಣ್ಣಿನ ಜೀವಂತಿಕೆಯ ವಾಸ್ತವದ  ಸ್ಥಿತಿಗತಿಯನ್ನು  ಕಥೆಯು ಸ್ಪಷ್ಟಪಡಿಸುತ್ತದೆ. ಹಿರಿಯರು ಹಾಕಿಕೊಟ್ಟ ಮಾರ್ಗವನ್ನು ಉಲ್ಲಂಘಿಸಿದ್ದೇ ಆದಲ್ಲಿ ನಾನು ನಮ್ಮತನವನ್ನು ಕಳೆದುಕೊಂಡು ಬೆಳೆದು ಬಿಡುತ್ತೇವೆ. ಆದರೆ ಬೆಳೆದ ರೀತಿ ನಮ್ಮನ್ನು ನಮ್ಮೊಂದಲೇ ಶಿಕ್ಷೆಗೊಳಪಡಿಸಿಕೊಂಡು ತನ್ನ ತನವನ್ನು ತೋರಿಸಿ ಬಿಡುತ್ತದೆ

tirupati bhangiಇಲ್ಲಿ ಹಿರಿಯರು, ಶರಣರು ಬರೆದಿಟ್ಟ ಸಾಹಿತ್ಯದ ಒಳಗುಟ್ಟನ್ನು ಸಭೆಯಲ್ಲಿಟ್ಟು ಮಾನವೀತೆಯ ಪಾಠ ಕಲಿಸುವದರೊಂದಿಗೆ ಮತ್ತೆ ಮತ್ತೆ ಶುಧ್ದಿಕರಿಸಿ ಮನುಷ್ಯತ್ವದ ನೆಲೆಯಡೆಗೆ ಕರೆದೊಯ್ಯುವ ಸಾಹಿತ್ಯದಿಂದ ಮನುಷ್ಯ ಬದಲಾಗಬೇಕೆನ್ನುವ ಸಂದೇಶವನ್ನು ಕಥೆಗಾರರು ತಮ್ಮ ‘ನೀತಿ ತಪ್ಪಿ ನಡೆದರೆ ನಿನಗ…’ ಎಂಬ ಕಥೆಯ ಮೂಲಕ ನೀಡುತ್ತಾರೆ. ವೈದ್ಯ ಜಗತ್ತಿನ ವೈರುದ್ಯವನ್ನು ‘ನಾವ ನಿನ್ನ ಕಣ್ಣಿಗೆ ಡಾಕ್ಟರ್ ಗತೆ ಕಾಣುದಿಲ್ಲೇನ’ ಎನ್ನುವ ಗರ್ವದ ಮಾತಿನ ಮೂಲಕ ಗುಟ್ಟು ರಟ್ಟಾಗುವಂತೆ ತಮ್ಮ ‘ಸಾವಿಗೂ ನೋವಿಗು ನಾಕಾಣೆ ಕಿಮ್ಮತ್ತು’ ಎಂಬ ಕಥೆಯಲ್ಲಿ ಚಿತ್ರಿಸಿದ್ದಾರೆ.

ಕಣ್ಮುಂದಿರುವವರನ್ನು ನಾವು ಸರಿಯಾಗಿ ಗಮನಿಸುವದಿಲ್ಲ ಪ್ರಪಂಚವು ಸೌಂದರ್ಯಕ್ಕೆ ಮಾರು ಹೋಗಿದೆ ಎಂಬ ಗಂಭೀರವಾದ ಆರೋಪವನ್ನು ಎಲ್ಲರೂ ಒಪ್ಪಿಕೊಳ್ಳುವಂತೆಯೇ ತಮ್ಮ ‘ಪಾಪಿ ಹೆಣದ ಸುತ್ತ’ ಕಥೆಯಲ್ಲಿ ಹೇರುತ್ತಾರೆ. ಸೇಡು ಎಂಬ ಜ್ವಾಲೆ ಮನಸಿನಲಿ ಉರಿಯುತ್ತಿದ್ದಾಗ ಮನುಷ್ಯ ಹೊರಜಗತ್ತಿಗೆ ಹುಚ್ಚನಂತೆ ಕಂಡರು ಒಳಮನಸು ಜಾಗೃತವಾಗಿದ್ದುಕೊಂಡು ತನ್ನ ಕಾರ್ಯ ಸಾಧಿಸುತ್ತದೆ ಎಂಬುದನ್ನು ‘ಅಯ್ಯಯ್ಯೋ ದೆವ್ವ’ ಎಂಬ ಕಥೆಯು ಭಯಾನಕರೀತಿಯಲಿ ಬಿಡಿಸಿಡುತ್ತದೆ.

ಕಥೆಗಳನ್ನು ಪ್ರಾರಂಬಿಸುವ ಮತ್ತು ಮುಕ್ತಾಯಗೊಳಿಸುವಲ್ಲಿ ಕಥೆಗಾರರು ಬಳಸಿದ ವಿಭಿನ್ನವಾದ ಪದ ಪ್ರಯೋಗಗಳು ತುಂಬಾ ಇಷ್ಟವಾಗುತ್ತವೆ ಜೊತೆಗೆ ಅವರ ‘ಪಾಲು’ ಕಥೆಯಲ್ಲಿ ನಿಸರ್ಗದ ಶೋಷಣೆಯನ್ನು ವಿಷಯವಾಗಿಸಿಕೊಂಡು ಬರೆದ ಕಥನ ಶೈಲಿ ಅಂತೂ ತುಂಬಾ ವಿಭಿನ್ನವಾಗಿದೆ ಎನಿಸಿತು. ಇನ್ನುಳಿದಂತೆ ‘ಸುಣ್ಣದ ಎಮನ್ಯಾ’, ‘ಮಾತಿನ ಕಟ್ಟೆ’ ಕಥೆಗಳೂ ಕೂಡಾ ಭಾಷಾಶೈಲಿಯಿಂದ ಗಮನ ಸೆಳೆಯುತ್ತವೆ. ಒಟ್ಟಾಗಿ ಗುಟ್ಟಾಗಿ ಹೇಳಬೇಕೆಂದರೆ ಕೈರೊಟ್ಟಿಯಲಿ ರುಚಿಗೆ ತಕ್ಕ ಸಾಹಿತ್ಯ, ರುಚಿಸುವ ಭಾಷೆ, ಎಲ್ಲವನ್ನು ನುಂಗಿ ಬಿಡಬೇಕೆಂಬ ಆಸೆ ಎಲ್ಲವೂ ಇದೆ.

ಕಥೆಗಾರರ ಪರಿಸರ ಅವರ ಬೆಳೆದು ಬಂದ ರೀತಿ ನೀತಿಗಳು ಕಥೆಗಳಿಗೆ ಅಲ್ಲಲ್ಲಿ ಮೆರಗನ್ನು ನೀಡುತ್ತವೆ. ಕಥಾಲೋಕಕ್ಕೆ ಒಂದೊಳ್ಳೆಯ ರುಚಿಕರವಾದ ಸಾಹಿತ್ಯವನ್ನು ನೀಡಿದ ಈ ನೆಲೆಯಲ್ಲಿ ನನ್ನ ಬಾಗಲಕೋಟೆ ಜಿಲ್ಲೆಯ ‘ತಿರುಪತಿ ಭಂಗಿ’ಯವರ ಕಥಾಸಂಕಲನ ತುಂಬಾ ಇಷ್ಟವಾಗುತ್ತದೆ. ಪ್ರೀತಿಯಿಂದ ಕೊಟ್ಟ ಕೈರೊಟ್ಟಿ ಕಥೆಗಳಮೇಲೆ ಮತ್ತಷ್ಟು ಪ್ರೀತಿಯನ್ನು ಹೆಚ್ಚಿಸಿತು ಅವರಿಗೆ ಪ್ರೀತಿಯ ಧನ್ಯವಾದಗಳು.

‍ಲೇಖಕರು Admin

September 28, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಯಾವ ‘ಮೋಹನ’ ಮುರಲಿ ಕರೆಯಿತೋ…

ಯಾವ ‘ಮೋಹನ’ ಮುರಲಿ ಕರೆಯಿತೋ…

ಸಂಗೀತ ರವಿರಾಜ್ ನನ್ನನ್ನು ಅತಿಯಾಗಿ ಕಾಡಿದ ಅಗಲಿಕೆಗಳಲ್ಲಿ ಇದೂ ಒಂದು. ನಿರಂತರ ಒಡನಾಟದಲ್ಲಿ, ಮಾತುಕತೆಯಲ್ಲಿ ಇಲ್ಲದೆ ಇದ್ದರು ಕೆಲವುಸಾವು...

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ಕಮಲಾಕರ ಕಡವೆ ಕತೆಯಿರುವುದು ಕಣ್ಣಲ್ಲಿ. ಕತೆಗಾರರ ಕಣ್ಣು ಕಾಣಲು ನಿರ್ಧರಿಸುವ ಜಗತ್ತು ಅವರ ಸುತ್ತಲಿನದೋ, ಒಳಗಿನದೋ, ಹಿಂದೆಂದಿನದೋ,...

ಅಂದಿನಿಂದಿಂದಿಗೆ

ಅಂದಿನಿಂದಿಂದಿಗೆ

ಶ್ಯಾಮಲಾ ಮಾಧವ ಮೊರೆಯುವ ಕಡಲು. ವಿಶಾಲ ಮರಳ ಹಾಸು. ಗಾಳಿಯಲೆಯಾಡುವ ಸುವಿಶಾಲ ಚಬುಕಿನ ತೋಪು. ಅದರ ನಡುವೆ ವೃತ್ತಾಕಾರದ, ಕಟ್ಟೆಯಿರದ, ಇಳಿಯಲು...

೧ ಪ್ರತಿಕ್ರಿಯೆ

  1. Anonymous

    ಸರಿಯಾಗಿ ಗೃಹಿಸಿದ್ದಿರಿ ಸುರೇಶ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: