ಕೈ ಹಿಡಿದು ನಡೆಸಿದವ ನೀನಲ್ಲವೆ…

ಯಾಮಿನಿchandamama.jpg

ನನಗೆ ಗೊತ್ತು ಕಣೋ “ಚಂದಮಾಮ”,
ಅವತ್ತು ನೀನು ಮತ್ತೆ ಮತ್ತೆ ನಮ್ಮನ್ನು ಕರೆದು ಕೂರಿಸಿಕೊಂಡು ಕಥೆಗಳನ್ನು ಹೇಳದೇ ಇರುತ್ತಿದ್ದರೆ ಇವತ್ತು ಹೀಗೆ ನಿನ್ನೊಂದಿಗೆ ಮನಸು ತೆರೆದಿಟ್ಟು ಮಾತನಾಡಿಸುವುದಕ್ಕೂ ನನ್ನೊಳಗೊಂದು ಭಾವದೊರತೆ ಇರುತ್ತಿರಲಿಲ್ಲ.

ಇಂದಿನ ಹುಡುಗರದ್ದಾದರೂ ಎಂಥ ಸ್ಥಿತಿ ನೋಡು. ಇಲ್ಲಿ ಇವರೆದುರು ಮನಸ್ಸಿನಲ್ಲಿ ಅದ್ದಿ ತೆಗೆದ ಅಕ್ಷರಗಳೇ ಇಲ್ಲ. ಲಯ, ನಾದ ಯಾವುದೂ ಇಲ್ಲ. ಇದನ್ನೆಲ್ಲ ನೋಡುವಾಗ ವ್ಯಥೆಯಾಗುತ್ತದೆ. ನನ್ನ ಪಾಲಿಗಿದ್ದ ಅದೃಷ್ಟ ಅದೆಷ್ಟು ದೊಡ್ಡದಾಗಿತ್ತಲ್ಲ ಎಂದೆನಿಸುತ್ತದೆ. ಆದರೆ ಒಂದು ಮಾತು ಮಾತ್ರ ನಿಜ. ನಿನ್ನನ್ನು ಹೊಗಳುತ್ತೀನಿ ಅಂತಲ್ಲ. ಅಂಥ ಭಾಗ್ಯವನ್ನು ತಂದುಕೊಟ್ಟ ಬಹುಪಾಲು ಶ್ರೇಯಸ್ಸು ನಿನ್ನನ್ನೇ ಸೇರಬೇಕು.

ನಿನ್ನ ಕಥೆಗಳ ಸುಂದರ ರಾಜಕುಮಾರಿ ನಮ್ಮ ಸುತ್ತಲಿನ ಹುಡುಗಿಯರಿಗೂ ಚೆಲುವನ್ನು ಹಂಚಿದ್ದಳು. ನಮ್ಮಲ್ಲಿ ನಿರೀಕ್ಷಿಸುವ ಗುಣವನ್ನು ಬೆಳೆಸಿದ್ದೇ ನಿನ್ನ ಕಥೆಗಳಲ್ಲಿ ಬರುವ ಏಳು ಮಲ್ಲಿಗೆ.

ನಿನ್ನ ಕಥೆಗಳಲ್ಲಿ ರಾಜಕುಮಾರ ಏಳು ಸಮುದ್ರ ದಾಟಿ, ಏಳು ಕೋಟೆಗಳನ್ನು ಏರಿಕೊಂಡು, ಅದರಾಚೆ ಬಚ್ಚಿಟ್ಟಿದ್ದ ರಾಜಕುಮಾರಿಯನ್ನು ಕರೆತರುವಾಗ ನಾವೇ ಕುದುರೆಯನ್ನು ಏರಿರುತ್ತಿದ್ದೆವು. ಅದರ ಖರಪುಟದ ಸದ್ದು ಕಿವಿ ತುಂಬಿರುತ್ತಿತ್ತು.

ನಿನ್ನನ್ನು ಓದಲು ನಾವೆಲ್ಲಾ ಎಷ್ಟೊಂದು ದುಂಬಾಲು ಬೀಳುತ್ತಿದ್ದೆವೋ, ನಿನಗೆ ಗೊತ್ತಿದೆ. ಯಾರು ಮೊದಲು ಓದಬೇಕು ಎಂಬುದರಲ್ಲಿ ಇರುವ ನಾಲ್ಕೈದು ಮಂದಿಯೊಳಗೆ ನಾ ಮುಂದು ತಾ ಮುಂದು ಎಂದು ಪೈಪೋಟಿ ಏಳುತ್ತಿತ್ತು. ಚೀಟಿ ಎತ್ತದ ಹೊರತು ಬಗೆಹರಿಯುತ್ತಿರಲಿಲ್ಲ. ಅಷ್ಟಾದ ಮೇಲೆಯೂ ಒಬ್ಬರು ಓದುವಾಗ ಇನ್ನುಳಿದವರಿಗೆ ಕಾತರ. ಹಾಗಾಗಿ ಓದಲು ಕೈಗೆತ್ತಿಕೊಳ್ಳುವ ಮೊದಲೇ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ನೀನು ಗೊತ್ತಾಗಿ ಬಿಟ್ಟಿರುತ್ತಿದ್ದೆ.

ಎಂತೆಂಥ ಕನಸುಗಳನ್ನು ತುಂಬಿಕೊಟ್ಟವನು ನೀನು. ನಿನ್ನ ಪ್ರತಿ ನುಡಿಯಲ್ಲೂ ಒಂದು ಬಗೆಯ ಮೋಹಕತೆ ಇತ್ತು. ಅದು ಜೀವನವನ್ನು ನೋಡಲು ಕಲಿಸುವಂಥ ಮೊದಮೊದಲ ಪಾಠದಂತಿತ್ತು. ನಮ್ಮ ದೃಷ್ಟಿಗೂ ಅಲ್ಲಿ ಗಾಳಿಯೂ ನೀರೂ ಒದಗಿದವು. ಒಂದೊಂದೇ ವರ್ಷಗಳನ್ನು ದಾಟಿ ಮೂಡಿಕೊಂಡ ನಮ್ಮ ಹೆಜ್ಜೆಗಳಲ್ಲಿ ನಿನ್ನ ಸಾಂಗತ್ಯದ ಬಲವೇ ಇತ್ತು.

ಅವತ್ತಿನ ಆ ಕ್ಷಣಗಳಿಂದ ಇವತ್ತಿನವರೆಗೂ ನಮ್ಮ ಕೈ ಹಿಡಿದು ನಡೆಸಿದವ ನೀನೇ. ನಿನ್ನ ಸಾಕ್ಷಿಯಲ್ಲೇ ಹೊಸ ಕಥೆಗಳು ಹುಟ್ಟಿಕೊಂಡಿದ್ದು ಮತ್ತು ನಮಗೇ ಕೇಳಿಸಿದ್ದು.

ನಾನಂತೂ, ನಿನ್ನ ಒಡನಾಟದಲ್ಲೇ ಓದಿನ ಅನುಭವಕ್ಕೆ ತೆರೆದುಕೊಂಡವನು. ನನ್ನ ಧ್ಯಾನದಲ್ಲಿ ನಿನ್ನ ವಿಶ್ವವಿದೆ, ಇರುತ್ತದೆ.

——————————————-

ಎಂಟಿವಿ ಆಚಾರ್ಯ ನೆನಪಾಗುತ್ತಾರೆ

ಪ್ರಿಯ ಅವಧಿ,

ಚಂದಮಾಮ ಎಂದ ತಕ್ಷಣ ನನ್ನ ಮನಸ್ಸು ಓಡಿದ್ದು ಗಾಂಧಿನಗರಕ್ಕೆ. ಗಾಂಧಿನಗರದಲ್ಲಿರುವ ಸುಖ್ ಸಾಗರ್ ಬಳಿಯೇ ಆಚಾರ್ಯ ಚಿತ್ರಕಲಾ ಭವನ ಇದೆ. ಚಂದಮಾಮಗೆ ಮಹಾಭಾರತವನ್ನು ಕಟ್ಟಿ ಕೊಟ್ಟವರೇ ಎಂಟಿವಿ ಆಚಾರ್ಯ. ಎಂಟಿವಿ ಮತ್ತು ಚಂದಮಾಮ ಒಂದೇ ನಾಣ್ಯದ ಎರಡು ಮುಖಗಳಾಗಿದ್ದರು.

ಎಂಟಿವಿ ಅವರ ಯುದ್ಧ ಭೂಮಿ ಚಂದಮಾಮದ ಮುಖಪುಟವನ್ನು ಯಾರು ತಾನೆ ಮರೆಯಲು ಸಾಧ್ಯ? ಭೀಮ ಗದೆ ಎತ್ತಿ ದುರ್ಯೋಧನನೆಡೆಗೆ ಬೀಸುತ್ತಿರುವುದು ಚಂದಮಾಮದ ಓದುಗರ ಕಣ್ಣಲ್ಲಿ ಇನ್ನೂ ನಿಂತಿದೆ. ಆ ಕಾರಣಕ್ಕೆ ವಿದೇಶಗಳಲ್ಲೂ ಇದು ಪ್ರದರ್ಶನಗೊಂಡಿತು.

ಎಂಟಿವಿ ಬರೆಯುತ್ತಿದ್ದುದು ಕವರ್ ಪೇಜ್ ಕಲೆ ಅಲ್ಲ. ಆಯಿಲ್ ಪೇಂಟಿಂಗ್ಸ್. ಇಡೀ ಮಹಾಭಾರತವೇ ಎದ್ದು ಬಂದಂತೆ ಎಂಟಿವಿ ಸರಣಿಯಾಗಿ ಬಿಡಿಸ್ತಿದ್ದರು.

ಚಂದಮಾಮ ಶುರುವಾಗಿದ್ದು ಬಹುಶ ೧೯೪೭ರಲ್ಲಿ. ಆರಂಭದಿಂದಲೂ ಆಚಾರ್ಯ ಚಂದಮಾಮ ಭಾಗವಾಗಿದ್ದರು. ಚಂದಮಾಮ ಸಂಪಾದಕರು, ಪ್ರಕಾಶಕರು ಓದುಗರಿಗೆ ಗೊತ್ತಿದ್ದರೊ ಇಲ್ಲವೋ ಆಚಾರ್ಯ ಅಂತೂ ಕಣ್ಣಿಗೆ ಕಟ್ಟಿದಂತಿದ್ದರು.

ಎಂಟಿವಿ ಗಾಂಧಿನಗರದಲ್ಲಿ ಪುಟ್ಟ ಕಚೇರಿ ತೆರೆದು ಕಲಾಶಾಲೆ ನಡೆಸುತ್ತಿದ್ದರು. ಅಷ್ಟೇ ಅಲ್ಲ, ಆ ಕಾಲದಲ್ಲಿಯೇ ಚಿತ್ರಕಲೆಯ ಬಗ್ಗೆ ಕರೆಸ್ಪಾಂಡೆನ್ಸ್ ಕೋರ್ಸ್ ನಡೆಸಿದ ಹೆಮ್ಮೆ ಇವರದ್ದು. ಆ ಅರ್ಥದಲ್ಲಿ ನಿಜಕ್ಕೂ ಇವರು ಆಚಾರ್ಯರೇ ಆಗಿದ್ದರು.

ನನ್ನ ಅಣ್ಣ ಎಸಿಬಿ ಕೋರ್ಸ್ ಗಾಗಿ ಹಣ ಹೊಂದಿಸುತ್ತಿದ್ದುದು, ಆತನಿಗೆ ಅಂಚೆಯಲ್ಲಿ ಬರುತ್ತಿದ್ದ ಕೋರ್ಸ್ ಮೆಟೀರಿಯಲ್ ಗಳು, ನೆಲದ ಮೇಲೆ ಕುಳಿತು ಅದನ್ನು ಶ್ರದ್ಧೆಯಿಂದ ಅಣ್ಣ ಪೆನ್ಸಿಲ್ ನಲ್ಲಿ ಮೂಡಿಸುತ್ತಿದ್ದುದು ನನ್ನ ಮನಸ್ಸಲ್ಲಿ ಅಚ್ಚೊತ್ತಿ ನಿಂತಿದೆ.

ಅಣ್ಣ ನಂತರ ಬರೆದ ಚಿತ್ರಗಳು, ಅವನ ಸುಂದರ ಅಕ್ಷರ, ಅವನ ಕಲೆಯ ಗೀಳು ಎಲ್ಲವೂ ಆಚಾರ್ಯ ನಮಃ ಎನ್ನುವಂತೆ ಮಾಡಿದೆ.

ಕೊನೆ ಹನಿ: ಚಂದಮಾಮ ಮತ್ತು ಚಂದಾ ಮಾಮ

ಸಂಕ್ರಮಣದ ಚಂಪಾ ಸಾಹಿತ್ಯ ಪತ್ರಿಕೆ ನಡೆಸುತ್ತಿದ್ದ ಎಲ್ಲರನ್ನೂ ಚಂದಾ ಮಾಮಗಳು ಎಂದು ಬಣ್ಣಿಸಿದ್ದರು. ಅವರ ಪ್ರಕಾರ ಸಿಕ್ಕವರ ಬಳಿಯೆಲ್ಲಾ ಪತ್ರಿಕೆಗೆ ಚಂದಾ ಮಾಡಿಸಿ ಎಂದು ಗೋಗರೆಯುತ್ತಿದ್ದ ಸಂಪಾದಕರೇ “ಚಂದಾ”ಮಾಮಗಳು.

ಜಿ ಎನ್ ಮೋಹನ್, ಹೈದ್ರಾಬಾದ್

‍ಲೇಖಕರು avadhi

June 24, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಪಾಟುಗಳಲ್ಲಿ ಸಿಗುವ 'ಮೇಷ್ಟ್ರು'..

ಪಾಳ್ಯದ ಲಂಕೇಶಪ್ಪ, ‘ಮತ್ತೊಂದು ಮೌನ ಕಣಿವೆ’ ವಿದ್ಯಾರ್ಥಿ ಭವನದ ಮಸಾಲೆ ದೋಸೆ                                                      ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This