ಕೊಟ್ಟ ಕುದುರೆಯನ್ನೇರಿ…

ಎಸ್ ಮಂಜುನಾಥ್ ಅವರ ‘ಮಗಳು ಸೃಜಿಸಿದ ಸಮುದ್ರ’ ಕವನ ಸಂಕಲನವನ್ನು ಅಕ್ಷರ ಪ್ರಕಾಶನ ಇತ್ತೀಚಿಗೆ ಹೊರತಂದಿದೆ. ಮಂಜುನಾಥ್ ಸಂಕಲನಕ್ಕೆ ಮುಮ್ಮಾತಾಗಿ ಬರೆದಿರುವುದು ಇಲ್ಲಿದೆ.
ನನ್ನ ಕವಿತೆಯ ಪ್ರಕ್ರಿಯೆ ನನಗೆ ಕಾಣುವುದು ಹೀಗೆ; ಲೋಕದ ಅನುಭವದ ಬಾಣ ಮನಸ್ಸನ್ನು ನಾಟಿ, ತಾನು ಇಲ್ಲವಾಗಿ, ಹಾಗೆ ನಾಟಿದ್ದಕ್ಕೆ ಅಲ್ಲಿ ಮನಸ್ಸು ತೆರೆತೆರೆಯಾಗಿ ಏಳುವುದು… ಅಂದರೆ ಅಮೂರ್ತತೆಯೆನ್ನುವುದು ಪರಿಣಾಮವಷ್ಟೇ, ಮೂರ್ತತೆಯೇ ದಾರಿ. ನಾನು ಈ ವೇಳೆ ಮೂರ್ತತೆಯ ಆರಾಧಕನಾಗಿಬಿಟ್ಟಿದ್ದೇನೆ. ನಮ್ಮ ಬದುಕು ನಡೆಯುವುದು ಮೂರ್ತವಾದ ವಿವರಗಳಲ್ಲೇ. ಬದುಕಿಗೆ ಮೂರ್ತತೆಯ ಹೊರತಾಗಿ ಇನ್ನಾವ ಅರ್ಥವೂ  ಇದ್ದಂತಿಲ್ಲ. ಆದರೆ ಈ ಮೂರ್ತತೆಯೆನ್ನುವುದು ಜಡ ಪದಾರ್ಧವಲ್ಲ. ಕಿಂಚಿತ್ ಅಧ್ಯಾತ್ಮವೂ ಸೇರಿದೆ ಅದರಲ್ಲಿ.ನಾನು ತಿಳಿಯುವಂತೆ ಕವಿತೆ
ಶೀಲಗೆಡೆದೆ ಸಹಿಸಬಹುದಾದ್ದು ಅಷ್ಟನ್ನು ಮಾತ್ರ! ನಮ್ಮ ‘ಬೆಳಗು’ ಪದ್ಯದಲ್ಲಿರುವಷ್ಟು. ಲೋಕದ ಅನುಭವವೇ ಬೀಜ. ಭಾವಿಸಿ ನೋಡುವ ನೋಟವೇ ಅದನ್ನು ಸುತ್ತುವರೆದ ತಿರುಳು…
ಅನುಭವವೆನ್ನುವುದು ಕವಿತೆಯಾಗಿ, ಪ್ರೀತಿಯಾಗಿ ಮೈತುಂಬಿಕೊಳ್ಳುವುದು ಹೀಗೆ. ಪ್ರೀತಿಯೆಂದರೆ ಸುಂದರವಾದ್ದರ ಜೊತೆ ನಮ್ಮನ್ನು ಸಂಬಂಧಿಸಿಕೊಳ್ಳುವುದಲ್ಲ. ಇರುವುದನ್ನು ಮುಟ್ಟಿ ಅರಿಯುವ ರೀತಿ ಅದು. ಪ್ರತಿಮೆ ರೂಪಕಗಳಿಂದ ಹೆಚ್ಚದೆ, ಸ್ವಭಾವೋಕ್ತಿಯಾಗಿರುವ ಕಾರಣಕ್ಕೆ ಸೊರಗದೆ ಇರುವ ಹದ ಅದು. ಅದೇ ತೀವ್ರತೆ ಕೂಡ. ಕವಿತೆ ನಮಗೆ ಕಾಣಿಸಬಹುದಾದ, ಕೊಡಬಹುದಾದ ಮಹತ್ವದ ಜೀವನ ದರ್ಶನವೆಂದರೆ ಇದೇ ಇರಬೇಕು.
ಆ ಹದದಲ್ಲಿ ತೀವ್ರತೆಯಲ್ಲಿ ಅನುಭವಿಸುವ  `ಭವಿ’ಯಾಗುವುದು ಬಹುಶಃ ಕವಿಯಾಗುವುದಕ್ಕಿಂತಲೂ, ಯೋಗಿಯಾಗುವುದಕ್ಕಿಂತಲೂ ಕಠಿಣತರವಾದ್ದು. ಹಾಗೆ ಸರಿಯಾಗಿ ಭವಿಯಾಗುವುದಷ್ಟೇ ನಮ್ಮ ಕೈಯಲ್ಲಿರುವಂಥದ್ದು. ಹಾಗಾದ ಪಕ್ಷದಲ್ಲಿ ಕವಿತೆ ನಮ್ಮಿಂದ ಹೊರಡಲೂಬಹುದು. ಅದು ಮಾತ್ರ- ಅದರಿಚ್ಚೇಗೇ ಬಿಟ್ಟದ್ದು!
+++
ನನ್ನ ಕವಿತೆಯ ಪರಿವಾರ ಈಗ ಬಹಳ ಪುಟ್ಟದು. ದೊಡ್ಡ ಜಗತ್ತಿಗೋಸ್ಕರ ಬರೆಯುತ್ತಿದ್ದೇನೆ ಎಂದು ನಾನು ಭಾವಿಸುವುದು ಕಡಿಮೆ. ನಾನು ಒಂದು ಪುಟ್ಟ ಪದ್ಯ ಬರೆದರೆ ಮೊದಲು ಅದನ್ನು ನನ್ನ ಈ ಪುಟ್ಟ ಜಗತ್ತಿನಲ್ಲಿ ಚಲಾವಣೆಗೆ ಬಿಡುತ್ತೇನೆ.ಅಲ್ಲಿ ಅದು ಒಂದು ಶಬ್ದ, ಒಂದು ಸಾಲು ಅಧವಾ ಒಂದು ಭಾವನೆಯಲ್ಲಿ ತಿದ್ದಿಸಿಕೊಂಡು ಮರಳಿದಷ್ಟಕ್ಕೆ ನನ್ನ ಕವಿತೆ ಲೋಕಕ್ಕೆ ಸಂಪೂರ್ಣ ಪ್ರಕಟವಾಯಿತು ಎಂದು ತೃಪ್ತನಾಗಿಬಿಡುತ್ತಿದ್ದೇನೆ, ಈಚೀಚೆಗೆ.
ನಾನು ಬರೆಯುವ ಕವಿತೆ ಹಾಗೆ ನನ್ನ ತಕ್ಷಣದ ಪರಿಸರದಲ್ಲಿ ಅರ್ಥಪೂರ್ಣ ವಾಗುವುದು ನನಗೆ ಮುಖ್ಯವೆನಿಸಿದೆ. ಜೀವ ಏನಂದರೂ ಒಂದು ದೇಹದಲ್ಲಿ ಉಸಿರಾಡುವಂತೆ, ಈ ಪರಿಮಿತ ಆವರಣದೊಳಗೆ ನನ್ನ ಕವಿತೆ ಉಸಿರಾಡುವುದಾದರೆ ಮಾತ್ರ ಅದು ಜೀವಂತವೆನಿಸುತ್ತದೆ. ಅಂತರರಾಷ್ಟ್ರೀಯ, ಜಾಗತಿಕ ಎನ್ನುವುದೆಲ್ಲ ಈ ಕಾಲಮಾನದ ಸಂಭ್ರಮಗಳೆನಿಸುತ್ತಿರುವಾಗ ನನ್ನ ಕವಿತೆ ಹೀಗೆ ಇಷ್ಟಗಲ ನೆಲದಲ್ಲಿ ಬೇರು ಬಿಡುವುದು ವಿಚಿತ್ರವೆನಿಸಬಹುದು. ನಮ್ಮ ಈ ಕಾಲದಲ್ಲಿ ಸಹಜವಾದ್ದಕಿಂತ ವಿಚಿತ್ರವಾದ್ದು ಯಾವುದಿದೆ?
ಹೀಗೆ ಬಂದ ಕವಿತೆ ಕನ್ನಡ ಬಲ್ಲ ಹಲವರಲ್ಲಿ ಹಬ್ಬಿಕೊಂಡರೆ ಹಿಗ್ಗೆನಿಸುವುದೇನೋ ನಿಜ. ಆದರೆ ಅದರಿಂದ ಕವಿತೆಯೇ ಹೆಚ್ಚಾಗುವುದೆಂದು ಭಾವಿಸುವ ಸ್ಧಿತಿಯಲ್ಲಿ ಯಾಕೋ ನಾನಿಲ್ಲ. ಕವಿತೆಯಲ್ಲ, ಬದುಕೇ ಹಾಗೆ ಜ್ಞಾನ-ಖ್ಯಾತಿ-ಹಣ ಯಾವುದರಿಂದಾಗಲೀ ಉಬ್ಬುವುದರಲ್ಲಿ ಹೆಚ್ಚುತ್ತದೆಂಬ ಭ್ರಮೆಯೂ
ಇಲ್ಲ. ಹೀಗೆ ಕವಿತೆ-ಬದುಕು ಪರಸ್ಪರ ಕೊಟ್ಟುಕೊಂಡಂತಿರುವ ತಥ್ಯತೆಯ  (felt experience) ಈ ಅರಿವು ಈ ದಾರಿಯಲ್ಲಿ ನನಗಾಗಿರುವ ದೊಡ್ಡ ಲಾಭವೆನಿಸುತ್ತದೆ.
ಒಂದು ಕೊಟ್ಟ ಕುದುರೆಯನ್ನೇರಿ ನನ್ನ ಕವಿತೆ ಪಯಣಿಸುತ್ತದೆ.
+++
ಅದು ಕಾಣಿಸುವ ಲೋಕವೇ ಬೇರೆ. ಅದು ಸಮಾಧಾನದ್ದು.ಸಮಾಧಾನ ವೆನ್ನುವುದು ಮನಸ್ಸಿನ ಗುಣ. ಮನಸ್ಸು ಅಲೆಯೆದ್ದು ಮಲೆಯುವುದು ಕವಿತೆಯ ವಸ್ತುವಾಗಬಲ್ಲದೇ ಹೊರತು ಸ್ವರೂಪವಾಗಲಾರದು ಎಂದೇ ನನ್ನ ಅನಿಸಿಕೆ.
ಲೋಕ ಕವಿತೆಯ ವಸ್ತು. ಆದರೆ ಕವಿತೆ ಲೋಕದ್ದಲ್ಲ. ಆವರಿಸಿರುವ ಮನಸ್ಸಿನದು. ಆದು ಮನಸ್ಸನ್ನು ಕುರುಹುಗೊಳಿಸುವ ಹಚ್ಚೆ. ಈ ನನ್ನ ಕವಿತೆಗಳನ್ನು ಓದುವ ನಿಮಗೆ ಇವು ಅಂಧ ಸಂವೇದನಾಶೀಲ ಅನುಭವವಾಗಿ ಪರಿಣಮಿಸಲೆಂಬ ಆಶಯದೊಂದಿಗೆ,
ಎಸ್. ಮಂಜುನಾಧ್
ಸಂಪರ್ಕ ಸಂಖ್ಯೆ 94800 42424

‍ಲೇಖಕರು avadhi

November 1, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

ಅಮೃತಾ ಪ್ರೀತಮ್ ರ ‘ಪಿಂಜರ್’

ಅಮೃತಾ ಪ್ರೀತಮ್ ರ ‘ಪಿಂಜರ್’

ಪಿಂಜರ್ ಅಂದರೆ ಕನ್ನಡದಲ್ಲಿ ಪಂಜರ ಅಥವಾ ಮಾನವನ ಅಸ್ಥಿಪಂಜರ ಎಂದು ಹೇಳಬಹುದು. ಏನು ಈ ಕಾದಂಬರಿಯ ಹೆಸರು ಹೀಗಿದೆ? ಇದು ಸತ್ತವರ ಕತೆಯನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This