ಕೊಡಲು ಕೊಳಲು ಒಲವು ಬಿಟ್ಟು ಬೇರೆ ಉ೦ಟೆ ಬಾಳಲಿ…?

ಏಳು ಹೆಜ್ಜೆಗಳನಿಟ್ಟ ಎಂಟು ವರುಷಕ್ಕೆ… – ಶಾ೦ತಲಾ ಭ೦ಡಿ   ಪ್ರೀತಿ ಹುಡುಗಾ… ಅದೆಷ್ಟೋ ದಿನಗಳಾದವು ನಿನಗೊಂದು ಪತ್ರ ಬರೆಯದೆಲೆ. ದಿನಗಳಲ್ಲ, ಅದೆಷ್ಟೋ ವರ್ಷಗಳೇ ಸರಿದುಹೋಗಿದ್ದಾವೆ. ಆವತ್ತು ಪರಸ್ಪರ ಮಾತುಗಳಾಡದೇ ಇರುವಂಥ ದಿನಗಳಲ್ಲೊಂದು ದಿನ ಮತ್ತೆ ಪತ್ರ ಬರೆದಿದ್ದೆ. ಪೋಸ್ಟ್ ಮಾಡಲಿಲ್ಲ. ನಮ್ಮ ಪ್ರೀತಿಯೂ ಇದೀಗ ಕಥೆಯೇ ಆಗುತ್ತಿದೆ ಅಂತ ಭಾವಿಸುತ್ತಿರುವಾಗಲೇ ಅವರೆಲ್ಲ ಸೇರಿ ನಮ್ಮಿಬ್ಬರಿಗೆ ಮದುವೆ ನಿಶ್ಚಯಿಸಿದ್ದರು. ನಿನಗೆ ಖುಷಿಯಾಯಿತ? ಅಂತ ಕೇಳೋಣವೆಂದುಕೊಳ್ಳುವಷ್ಟರಲ್ಲಿ ಮದುವೆ ನಡೆದೇ ಹೋಯಿತು. ಆಗ ಏನನ್ನಿಸಿತೆಂದರೆ ಅದೇ ಈಗಲೂ ಅನ್ನಿಸುತ್ತಿದೆ. ಏನೆಂದರೆ ಸತ್ಯವಾದ ಪ್ರೀತಿಯು ಮೇಲಿನ ಆ ಲೋಕದಲ್ಲಿಯೇ ನಿಶ್ಚಯವಾಗುವ ವಿಚಾರವೆಂದು. ಪ್ರೀತಿಯು ಯಾವುದೇ ನಿರ್ಧಾರ, ನಿಶ್ಚಯಗಳನ್ನು ಕಿತ್ತುಬಿಸಾಕುವಷ್ಟು ಆಳಕ್ಕೆ ಬರೆದಿರಲ್ಪಟ್ಟಿರುತ್ತದೆ ಅನ್ನುವುದಕ್ಕಿಂತ ಮಾಸದ ಹಾಗೆ ಕೆತ್ತಿರಲ್ಪಟ್ಟಿರುತ್ತದೆಯೆಂದು.   ಬೇರೆ ಬೇರೆಯ ಎರಡೂ ಪಯಣದ ಹಾದಿ ಒಂದೇ ಆಗಿ ಎಷ್ಟು ಚೆಂದವಾಗಿ ಸಾಗಿತು. ಇಂಥಹಾದಿಯ ನಿರ್ಮಿಸಿಕೊಂಡ ಹೆಜ್ಜೆಗಳ ಹರಿವನ್ನೇ ಹಿಂಬಾಲಿಸಬೇಕೆಂದು ಇತರರು ಬಯಸುವಷ್ಟು ಚೆಂದದ ಹಾದಿಯಲ್ಲೇ ಬಂದುಬಿಟ್ಟೆವು. ನಿಂತುಸಾಗಿದೆವೇ ಹೊರತು ಪಯಣ ನಿಲ್ಲಿಸಲಿಲ್ಲ. ನಮ್ಮಿಬ್ಬರ ನೋವನ್ನು ನಾವೇ ಹಂಚಿಕೊಂಡೆವು. ನೋವನ್ನು ನಮ್ಮೊಳಗೇ ಹಂಚಿಕೊಳ್ಳುವುದರಲ್ಲಿರುವ ಸುಖ ಬಲ್ಲವನಿಗೇ ಗೊತ್ತು. ನಮ್ಮ ನಡುವಿನ ಪ್ರೀತಿಯೊಳಗಿನ ಒರತೆ ಪ್ರೀತಿಯೊಳಗಿನ ಕೊರತೆಯನ್ನು ಮುಚ್ಚಿಹಾಕುತ್ತಲೇ ಬಂತು. ಮುದ್ದಾಡಲೂ ಇಲ್ಲ, ಕಚ್ಚಾಡಲೂ ಇಲ್ಲ, ಅಂಥ ಪ್ರೀತಿಯೊಂದು ನಮ್ಮನ್ನು ನೇವರಿಸುತ್ತಲೇ ಇತ್ತು. ಹಾದಿಬದಿಯಲ್ಲಿ ನಡೆವಾಗಲೂ ಚೆಂದದೊಂದು ಹಕ್ಕಿಜೋಡಿಯಾಗಿಯೇ ಹಾರಿದೆವು. ಯಾರೂ ನಮ್ಮನ್ನು ನೋಡಿ ನಗಲಿಲ್ಲ. ಪ್ರೀತಿಸಲೇ ಗೊತ್ತಿರದವರು ಒಂದಿಷ್ಟು ಪ್ರೀತಿಸುವುದ ಕಲಿತರು, ಇಷ್ಟು ಸಾರ್ಥಕ್ಯ ಇಡಿಯ ಬದುಕಿಗೆ ಸಾಕಲ್ಲವೇ?   ವಿದ್ಯಾಭ್ಯಾಸವನ್ನು ಇನ್ನಷ್ಟು ಮುಂದುವರೆಸಬೇಕೆಂದಿದ್ದ ನೀನು ಒಂದುಹಂತಕ್ಕೆ ಓದನ್ನು ನಿಲ್ಲಿಸಿದ್ದು ನನಗಾಗಿ ಮಾತ್ರ ಎನ್ನುವುದು ನನಗೂ ಗೊತ್ತಿದೆ. ವಿದ್ಯಾಭ್ಯಾಸದ ಬಗೆಗಿನ ಕೆಲ ಕನಸುಗಳೆಲ್ಲ ಉದ್ಯೋಗದತ್ತ ವಾಲುವಂತಾಗಿದ್ದು ನನ್ನಿಂದಲೆ ಎಂಬ ಬೇಸರವೇನೂ ನನ್ನೊಳಗಿಲ್ಲದ್ದಕ್ಕೆ ಕಾರಣ ಬದುಕನ್ನು ಚೆಂದವಾಗಿ ರೂಪಿಸಿಕೊಳ್ಳಬಲ್ಲಷ್ಟು ವಿದ್ಯಾರ್ಹತೆಯನ್ನಾಗಲೇ ನೀ ಗಳಿಸಿಕೊಂಡಿದ್ದೆ ಎಂಬುದೂ ಸುಳ್ಳಲ್ಲ. ಆದರೀಗ ಪುಸ್ತಕದ ಜ್ಞಾನ ಮಾತ್ರವಲ್ಲದೇ ಬದುಕಿದ ಅನುಭವ ಹೆಚ್ಚು ಪ್ರಯೋಜನವೆಂಬ ಅರಿವು ನಿನ್ನ ಕಣ್ಣುಗಳಲ್ಲಿದೆಯಲ್ಲ ಅಷ್ಟು ಸಾಕು ನನಗೆ. ಪ್ರೀತಿ ಮತ್ತು ವಿದ್ಯಾಭ್ಯಾಸವನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುತ್ತ ಸಮತೋಲನ ಕಾಪಾಡುವಲ್ಲಿ ಹೆಣಗಾಡಿದ್ದಂತೂ ಸತ್ಯ. ಆ ಹೆಣಗಾಟಕ್ಕೊಂದು ಯಶಸ್ಸು ಸಿಕ್ಕಿದ್ದು ಇನ್ನಷ್ಟು ಸತ್ಯ. ಪ್ರೀತಿಯನ್ನು ಉಳಿಸಿಕೊಳ್ಳುವಲ್ಲಿ ಇಬ್ಬರ ವಿದ್ಯಾಭ್ಯಾಸಕ್ಕೊಂದು ಸಾರ್ಥ್ಯಕ್ಯ ಸಿಕ್ಕಿದೆಯೆಂಬ ಖುಷಿ ಮಾಸುವುದಿಲ್ಲ.   ಕಾಲಿಗೆ ಅಂಟಿದ ಮುಳ್ಳನ್ನು ಪ್ರೀತಿಯಿಂದಲೇ ಮುಳ್ಳಿಗೂ ನನಗೂ ನೋವಾಗದ ತೆರನಾಗಿ ತೆಗೆಯುವಾಗ ಅಲ್ಲೊಂದು ಪ್ರೀತಿಯ ಅನುಭವವೇ ನನಗಾಗುತ್ತದೆ. ಆ ಮುಳ್ಳನ್ನೂ ಬಿಸಾಡದೆಲೆ ಆದಷ್ಟು ದೂರ ಕೈಯಲ್ಲಿಟ್ಟುಕೊಂಡು ಕ್ರಮಿಸುತ್ತೇನಲ್ಲ, ಹೀಗಿರುವಾಗ ನನಗಿಂತ ಹೆಚ್ಚಾಗಿ ನನ್ನ ಪ್ರೀತಿಸುವ ನಿನ್ನ ಪ್ರೀತಿಸದೇ ಹೇಗಿರಲಿ ಹೇಳು.   ಜೊತೆ ಸಾಗಿದ ಪಯಣದ ಪ್ರತಿ ಹಂತದ ಹೆಜ್ಜೆಗಳೂ ನನ್ನೊಳಗೆ ಆಗಾಗ ಗೆಜ್ಜೆ ಕಟ್ಟಿಕೊಂಡು ಕುಣಿಯುತ್ತವೆ. ತಪ್ಪುವ ತಾಳ ಮತ್ತೆ ಸರಿಯಾಗುವ ಸದ್ದು ಮನಸ್ಸಿಗೆ ಮುದಕೊಡುತ್ತದೆ. ನಿನ್ನ ಸಹನೆಯ ಲಯದೊಳಗೆ ನಾನು ಸದಾ ತಣ್ಣಗೆ ಹಾಡೊಂದನ್ನು ಗುನುಗುಡತ್ತಲೇ ಇದ್ದದ್ದು ನಿನಗೆ ಕೇಳಿಸುತ್ತಲಿದೆಯೆಂಬುದೇ ಅತ್ಯಂತ ಖುಷಿ. ಇಬ್ಬರೂ ಜತೆಯಲ್ಲಿರುವಾಗ ಬೆಟ್ಟದ ತುದಿಯಲ್ಲಿನ ಮೋಡ ಹಿಡಿಯುವುದೇನೂ ಕಷ್ಟವಲ್ಲ ಅಂತ ಗೊತ್ತಾಗಿದೆಯಲ್ಲ,ಜತೆಯಲ್ಲೇ ಬರುತ್ತೇನೆ ಮುಂದೆ ಸಾಗು. ಹಿಂದೆ ಇದ್ದುಕೊಂಡು ನಿನ್ನ ಹಿಂದೆಳೆಯುವ ಮನದಿಂದಲ್ಲ, ನಿನ್ನ ಬೆನ್ನಿಗಾಸರೆಯಾಗಿ ಬರುತ್ತೇನೆ. ನೀನು ನನ್ನ ಕೈಹಿಡಿದು ಮುಂದೆಳೆದುಕೊಂಡು ಹೋಗುತ್ತಿರು.ಯಾವ ಮೋಡ ಬೇಕಂತ ನಾನು ನಿನಗೆ ಹೇಳುತ್ತೇನೆ, ಆ ಮೋಡ ಹಿಡಿಯುವುದು ಕಷ್ಟವಾದರೊಮ್ಮೆ ನಿಂತು ದಣಿವಾರಿಸಿಕೋ, ನನ್ನ ಮನದ ಬೊಗಸೆಯಲ್ಲಿ ನಿನ್ನ ದಣಿವಾರಿಸಲಿಕ್ಕಾಗಿಯೇ ಒಂದಿಷ್ಟು ನೀರು ಸದಾ ಜಿನುಗುತ್ತಿರುತ್ತದೆ. ಸುಸ್ತಾದರೆ ಈ ಮಡಿಲು ಅಮ್ಮನ ಮಡಿಲಿನಷ್ಟೇ ಮೃದುವೆನ್ನುವುದನ್ನು ಮರೆಯಬೇಡ. ಒಂದಿಷ್ಟು ಹೊತ್ತು ವಿರಮಿಸು. ಜೊತೆಯಲ್ಲಿಯೇ ಇದ್ದೇನೆ.   ಇವತ್ತಷ್ಟೇ ಪ್ರಪೋಸ್ ಮಾಡಿಕೊಂಡ ಪ್ರೇಮಿಗಳ ಹಾಗೆ ಎಲ್ಲಿದ್ದರೂ ಜತೆಯಾಗಿರುತ್ತ, ನಾಳೆಯೇ ಡಿವೋರ್ಸ್ ಕೊಟ್ಟುಕೊಳ್ಳುವ ಗಂಡಹೆಂಡಿರ ಹಾಗೆ ಜಗಳಾಡುತ್ತ,ಭಾರತ ಪಾಕಿಸ್ತಾನದಂಥ ಭಿನ್ನಾಭಿಪ್ರಾಯಗಳ ನಡುವೆಯೂ ಒಂದೇ ನಿರ್ಧಾರ ತೆಗೆದುಕೊಳ್ಳುತ್ತ, ಒಂದೇ ತರಗತಿಯಲ್ಲಿ ಇಪ್ಪತ್ತು ವರ್ಷ ಓದಿದ ಸ್ನೇಹಿತರ ಹಾಗೆ ಬಡಿದಾಡುತ್ತ, ಒಂದೇ ಗೂಡಿನಲ್ಲಿ ಬೆಳೆದ ಹಕ್ಕಿಗಳ ಹಾಗೆ ಕಿಚಪಿಚಗುಡುತ್ತ, ಜೊತೆಯಾಗಿದ್ದು ಯಶಸ್ವಿಯಾಗಿ ಎಂಟು ವರ್ಷ ಪೂರೈಸಿದ ನಮಗೆ ಶುಭಾಶಯಗಳು ಹುಡುಗಾ…   ನಾವು ಜೊತೆಯಾಗಿ ಪಯಣಿಸಲಾರಂಭಿಸಿ ಇಂದಿಗೆ ಎಂಟುವರ್ಷಗಳಾದವು ಹುಡುಗಾ. ‘ಎಲ್ಲಿಗೆ ಪಯಣ?’ ಅಂತ ನಮ್ಮನ್ನು ಯಾರೂ ಕೇಳಲಿಲ್ಲ. ಕೇಳಿದರೆ ನಮಗದು ಗೊತ್ತೂ ಇಲ್ಲ. ನೀ ಕೊಟ್ಟ ಬಾಡದ ಹೂವು ನನ್ನೊಂದು ಕೈಯಲ್ಲಿದೆ. ನನ್ನೀ ಬಲಗೈ ನಿನ್ನ ಕೈಯೊಳಗಿದೆ. ” ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು”   ನಿನ್ನ ಪಯಣದ ಹಾದಿ ನನ್ನ ಅಂಗೈಯೊಳಗಿದೆಯೆಂಬ ನಿನ್ನ ನಂಬಿಕೆ ಸುಳ್ಳಾಗದಿರಲಿ. ಪಯಣಕ್ಕೆ ಜತೆಯಾದ ನಿನಗೆ ಧನ್ಯವಾದ ಮತ್ತು ವಂದನೆ.     ಜಗಳಾಡಬೇಕೆನ್ನಿಸಿ ದಾರಿಮಧ್ಯದಲ್ಲಿಯೇ ನಿಲ್ಲಿಸಿ ಜಗಳಾಡಿದ್ದಕ್ಕೆ, ಬೈಕಲ್ಲಿ ಹಿಂದೆ ಕುಳಿತವರಿಗೂ ಹೆಲ್ಮೆಟ್ ಖಡ್ಡಾಯವಾಗಿದ್ದಾಗ ಫೋಲೀಸಿನವ ಬಂದ ಅಂತ ಬೈಕ್ ರೈಡ್ ಮಾಡ್ತಿದ್ದ ನಿನ್ನ ಹೆಲ್ಮೆಟ್ ತೆಗೆದು ನಾನು ಧರಿಸಿದ್ದನ್ನು ಕಂಡು ಪೋಲೀಸಿನವ ನಕ್ಕಿದ್ದಕ್ಕೆ, ಜೋರುಮಳೆ ಬರೋಕೆ ಶುರುವಾದಾಗ ನಿನ್ನ ಜರ್ಕಿನ್ ನಾನು ಧರಿಸಿದ್ದಕ್ಕೆ, ಹೊಟೆಲ್ ಅಲ್ಲಿ ನಿನ್ನ ಪ್ಲೇಟಿನಲ್ಲಿದ್ದದ್ದನ್ನೇ ಹೆಚ್ಚು ತಿಂದಿದ್ದಕ್ಕೆ, ಡ್ರೈವ್ ಮಾಡೋವಾಗ ನಿನ್ನ ಕನ್ನಡಕ ತೆಗೆದು ನಾನು ಹಾಕ್ಕೊಂಡು ನಿಂಗೆ ಮುಂದಿನ ದಾರಿಯೇ ಕಾಣದಂಗೆ ಮಾಡಿದ್ದಕ್ಕೆ, ನೀ ಉಪಯೋಗಿಸುವ ಕಂಪ್ಯೂಟರ್ರೇ ಬೇಕು,ನೀನು ಓದ್ತಿರೋ ಪುಸ್ತಕಾನೇ ಬೇಕು, ನೀ ಕುಡೀತಿರೋ ಟೀ ಕಪ್’ಏ ಬೇಕು ಅಂತೆಲ್ಲ ನಿನ್ನ ಗೋಳಾಡಿಸುವುದಕ್ಕೆ, ಖರ್ಜೂರ-ಹಲಸಿನ ಹಣ್ಣುಗಳಂಥವನ್ನು ತಿಂದು ಅವುಗಳ ಬೀಜವನ್ನ, ಜೋಳ ತಿಂದು ಉಳಿದ ಅದರ ಭಾಗವನ್ನ, ಟೀ ಕುಡಿದ ಖಾಲೀ ಕಪ್ಪನ್ನು ನಿನ್ನ ಕೈಗಿತ್ತಂಥ ಖಾಯಂ ತಪ್ಪುಗಳಿಗೆಲ್ಲ ಯಾವತ್ತಿನಂತೆ ನಿನ್ನ ಒಪ್ಪಿಗೆಯಿರಲಿ. ಇವಕ್ಕೆಲ್ಲ ಪಕ್ಕದಲ್ಲೊಂದು ಪುಟ್ಟ ಕ್ಷಮೆಯೂ ಇರಲಿ.     ಇಂಥದೊಂದು ದಿನದಂದು ಇಬ್ಬರಿಗೂ ದೇವನು ಮತ್ತೆ ಒಳ್ಳೆಯದನ್ನೇ ಮಾಡುತ್ತಾನೆಂಬ ಯಾವತ್ತಿನ ಅದೇ ಭರವಸೆಯಲ್ಲಿ… ಎಲ್ಲರಿಗೂ ಎಲ್ಲವೂ ಇನ್ನಷ್ಟು ಒಳಿತಾಗಲಿ.   ಪ್ರೀತಿಯಿಂದ, -ಹುಡುಗಿ]]>

‍ಲೇಖಕರು G

June 8, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

3 ಪ್ರತಿಕ್ರಿಯೆಗಳು

 1. D.RAVI VARMA

  ಮೇಡಂ ನಮಸ್ಕಾರ ,ನಿಮ್ಮ ಹುಡುಗನಿಗೆ ಬರೆದ ಹೃದಯದ ಹಾಡು ತುಂಬಾ ಹಿಡಿಸಿತು .ಅಲ್ಲಿಯ ಪಿಸುಮಾತು ,ಅದಮ್ಯ ಪ್ರೀತಿ,ಜಗಳ , ಮುನಿಸು ಎಲ್ಲವನ್ನು ಒಳಗೊಂಡ ನಿಮ್ಮ ಲೇಖನ”ಕೊಡಲು ಕೊಳಲು ಒಲವು ಬಿಟ್ಟು ಬೇರೆ ಉಂಟೆ ” ಓದುತಿದ್ದಂತೆ ನನಗೆ ಕವನ ನೆನಪು ಬಂತು .
  ನಾನು ಬಡವಿ ಆತ ಬಡವ,
  ಒಲವೆ ನಮ್ಮ ಬದುಕು ,
  ಬಳಸಿಕೊಂಡೆವು ಅದನೆ ನಾವು, ಅದಕು ಇದಕು,ಯದಕು .
  ಹತ್ತಿರಿರಲಿ,ದೂರವಿರಲಿ .ಅವನೇ ರಂಗಶಾಲೆ .
  ಕಣ್ಣು ಕಟ್ಟುವಂಥ ಮೂರ್ತಿ ,
  ಕಿವಿಗೆ ಮೆಚ್ಚಿನೋಲೆ .
  ಚಳಿಗೆ,ಬಿಸಿಗೆ ,ಒಂದೇ ಹದನ
  ಅವನ ಮೈಯ ಮುಟ್ಟೆ.
  ಅದೇ ಗಳಿಗೆ ಮೈಯತುಂಬಾ
  ನನಗೆ ನವಿರು ಬಟ್ಟೆ .
  ಆತ ಕೊಟ್ಟ ವಸ್ತು,ಒಡವೆ ,
  ನನಗೆ ಅವಗೆ ಗೊತ್ತು.
  ತೊಲ್ಗಳಿಗೆ,ತೊಲ್ಬಂದಿ,
  ಕೆನ್ನೆ ತುಂಬಾ ಮುತ್ತು .
  ಕುಂದು ಕೊರತೆ,ತೋರಲಿಲ್ಲ ,
  ಬೇಕು ಹೆಚ್ಚಿಗೇನು,
  ಹೊಟ್ಟೆಗಿತ್ತ ಜೀವಫಲವ,
  ತುಟಿಗೆ ಹಾಲು ಜೇನು .
  ಆ ಬೇಂದ್ರೆ ಅಜ್ಜನ ರೋಮಾಂಟಿಕ್ ಭಾವಗೀತೆಗಳಲ್ಲಿ ನನಗೆ ತುಂಬಾ ಕಾಡಿದ, ನಾನು ಆಗಾಗ್ಗೆ ಗುನುಗುಡುವ ಹಾಡು ಇದು ಮತ್ತು “ನಾನಾ ಕೈಯ ಹಿಡಿದಾಕೆ ಅಳುನುಂಗಿ ನಗುವೊಮ್ಮೆ ,ನಾನುನೂ ನಕ್ಕೆನಾ ”
  ನಿಮ್ಮ ಲೇಖನ ನನ್ನನ್ನು ಇಸ್ಟೆಲ್ಲಾ ನೆನಪು ಮಾಡಿಸಿತು ನೋಡಿ , ಆಲ್ ದಿ ಬೆಸ್ಟ್
  ನಿಮ್ಮ,ನಮ್ಮ ದುಗುಡ,ನೋವು, ಹಲಹಲಿಕೆಯನ್ನು ,ಕುಶಿಯಾದ ಕ್ಷಣಗಳನ್ನು ಹಂಚಿಕೊಳ್ಳಲು ಸಾಧ್ಯವಾಗಿಸಿದ ಈ ಅವಧಿಗೆ ನಾನು ಋಣಿ
  ರವಿ ವರ್ಮ ಹೊಸಪೇಟೆ ,

  ಪ್ರತಿಕ್ರಿಯೆ
 2. ಸನ್ನಿಧಿ

  ಧನ್ಯವಾದಗಳು ಪ್ರಿಯ ಅವಧಿ… 🙂
  ಪ್ರೀತಿಯ ಪ್ರತಿಕ್ರಿಯೆಗಳಿಗೂ ಧನ್ಯವಾದ.
  ವಂದನೆಗಳೊಂದಿಗೆ,
  ಪ್ರೀತಿಯಿಂದ,
  ನಿನ್ನ
  ಸನ್ನಿಧಿ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: