ಕೊಲ್ಕತ್ತಾದಲ್ಲಿ ಕೊನೆಗೂ ಒಬ್ಬ ಕನ್ನಡದ ಗೆಳೆಯನ ಪರಿಚಯವಾಗಿತ್ತು..

– ನಟರಾಜು ಎಸ್ ಎ೦

ಖುಷಿನಗರಿ

ನಾನು ಕೊಲ್ಕತ್ತಾಗೆ ಬಂದು ಆರು ವರುಷವಾಯಿತು. ಈ ಆರು ವರುಷದಲ್ಲಿ ನಮ್ಮ ಕನ್ನಡದವರು ಅಂತ ಕೊಲ್ಕತ್ತಾದಲ್ಲಿ ನನಗೆ ನೋಡಲು ಸಿಕ್ಕಿದ್ದು ಬಹಳ ಅಪರೂಪ. ಯಾಕೆಂದರೆ ನಾವು ಕನ್ನಡಿಗರು ಬೇರೆ ಜಾಗಗಳಿಗೆ ಹೋದಾಗ ನಮ್ಮ ಪಕ್ಕದಲ್ಲಿ ಯಾರಾದರೂ ಕನ್ನಡ ಮಾತನಾಡುತ್ತಿದ್ದರೂ ನಾವೇ ಮೇಲೆ ಬಿದ್ದು ಮಾತನಾಡಿಸುವುದು ತುಂಬಾ ಅಪರೂಪ. ಅದೇ ತೆಲುಗಿನವರೋ ತಮಿಳಿನವರೋ ಆದರೆ ಮತ್ತೊಬ್ಬ ತನ್ನ ರಾಜ್ಯದವನು ಸಿಕ್ಕಿದರೆ ಆನಂದತುಲಿತರಾಗಿಬಿಡುತ್ತಾರೆ. ಐದು ವರ್ಷ ಕಳೆದಾದ ಮೇಲೆ ಕೊಲ್ಕತ್ತಾದಲ್ಲಿ ಕೊನೆಗೂ ಒಬ್ಬ ಕನ್ನಡದ ಗೆಳೆಯನ ಪರಿಚಯವಾಗಿತ್ತು. ಮೊದ ಮೊದಲಿಗೆ ಒಂದೇ ಒಂಚೂರು ಮಾತನಾಡುತ್ತಿದ್ದ ಗೆಳೆಯ ನನ್ನನ್ನು ತನ್ನ ಆತ್ಮೀಯರಲ್ಲಿ ಸೇರಿಸಿಕೊಳ್ಳಲು ಕೆಲವು ತಿಂಗಳುಗಳನ್ನೇ ತೆಗೆದುಕೊಂಡ. ನನ್ನ ಮತ್ತು ಆ ಗೆಳೆಯನ ಮೊದ ಮೊದಲ ಭೇಟಿಗಳಲ್ಲಿ ನನಗೆ ಸಾಹಿತ್ಯದ ಅಭಿರುಚಿ ಇದೆ ಎಂದು ತಿಳಿದಿದ್ದ ಆ ಗೆಳೆಯ ‘ನಿಮಗೆ ಕುಮಾರಪ್ಪ ಸರ್ ಗೊತ್ತಾ?’ ಎಂದು ಒಮ್ಮೆ ಕೇಳಿದ್ದ. ‘ಇಲ್ಲ ನನಗೆ ಗೊತ್ತಿಲ್ಲ’ ಎಂದು ಹೇಳಿದ್ದೆ. ‘ಕುಮಾರಪ್ಪ ತುಂಬಾ ಒಳ್ಳೆ ವ್ಯಕ್ತಿ ಸರ್. ಅವರು ಕನ್ನಡದಲ್ಲಿ ಪುಸ್ತಕ ಬರೆದಿದ್ದಾರೆ. ಮೂರ್ನಾಲ್ಕು ವರ್ಷದ ಹಿಂದೆ ಅವರ ಮನೆಗೆ ಹೋಗಿದ್ದೆ. ಟೈಮ್ ಇದ್ದಾಗ ಒಮ್ಮೆ ಅವರನ್ನು ಮೀಟ್ ಮಾಡಿ’ ಎಂದಿದ್ದ ಗೆಳೆಯ. ಮೊದಮೊದಲ ಬಾರಿಗೆ ಕುಮಾರಪ್ಪ ಎಂಬ ಹೆಸರು ಕಿವಿಗೆ ಬೀಳುತ್ತಿದ್ದಂತೆ ಯಾಕೋ ಅವರನ್ನೊಮ್ಮೆ ಭೇಟಿ ಮಾಡಬೇಕು ಎಂದು ಮನಸು ಒತ್ತಿ ಒತ್ತಿ ಹೇಳುತ್ತಿತ್ತು. ನನ್ನ ಗೆಳೆಯನ ಬಳಿ ಇದ್ದ ಕುಮಾರಪ್ಪ ರವರ ಹಳೆಯ ಲ್ಯಾಂಡ್ ಲೈನ್ ನಂಬರ್ ಗೆ ಫೋನ್ ಮಾಡಿದಾಗ ಅದು ಕಾರ್ಯ ನಿರತವಾಗಿರಲಿಲ್ಲ. ಹೊಸ ಫೋನ್ ನಂಬರ್ ಗಾಗಿ ನಾನು ಹುಡುಕಾಟ ನಡೆಸುತ್ತಿದ್ದಾಗ ಅಚನಕ್ಕಾಗಿ ನನಗೆ ಫೇಸ್ ಬುಕ್ ನಲ್ಲಿ ಪರಿಚಯವಾದ ಅಕ್ಕನಂತಹ ಮೇಡಂ ಒಬ್ಬರು ನಾನು ಕೊಲ್ಕತ್ತಾದಲ್ಲಿದ್ದೇನೆ ಎಂದು ಕೇಳಿದ ತಕ್ಷಣ “ಕೊಲ್ಕತ್ತಾದಲ್ಲಿ ನಮ್ಮ ಫ್ರೆಂಡ್ ಒಬ್ಬರಿದ್ದಾರೆ. ಕುಮಾರಪ್ಪ ಅಂತ. ವೆರಿ ನೈಸ್ ಪರ್ಸನ್. ಅವರು ನಿಮಗೆ ಗೊತ್ತಾ?” ಎಂದು ಪ್ರಶ್ನೆಯೊಂದನು ನನ್ನ ಮುಂದಿಟ್ಟಿದ್ದರು. ಆ ಪ್ರಶ್ನೆ ನನ್ನ ಮುಂದೆ ಬಿದ್ದಾಗ “ಕುಮಾರಪ್ಪ ನವರ ಹೆಸರು ಕೇಳಿದ್ದೇನೆ ಆದರೆ ನೋಡಿಲ್ಲ. ನೀವು ನಂಬುತ್ತೀರೋ ಬಿಡುತ್ತೀರೋ ಅವರನ್ನು ಮೀಟ್ ಮಾಡಬೇಕು ಎಂದು ನಾನು ತುದಿಗಾಲಲ್ಲಿ ನಿಂತಿದ್ದೇನೆ. ಅವರ ಫೋನ್ ನಂಬರ್ ಇದ್ದರೆ ಕೊಡಿ” ಎಂದು ಕೇಳಿಕೊಂಡಿದ್ದೆ. ತನ್ನ ಬಳಿ ಫೋನ್ ನಂಬರ್ ಇಲ್ಲ ಈ ಮೇಲ್ ಐಡಿ ಇದೆ ಎಂದು ಕುಮಾರಪ್ಪನವರು ತಮಗೆ ಕಳುಹಿಸಿದ್ದ ಈ ಮೇಲ್ ಒಂದನು ನನಗೆ ಫಾರ್ ವರ್ಡ್ ಮಾಡಿದ್ದರು. ಅವರ ಈ ಮೇಲ್ ನ ಕನ್ನಡದ ಅನುವಾದದ ತುಣುಕು ಹೀಗಿದೆ. “ಡಿಯರ್ ಮೇಡಂ, ನೀವು ನ್ಯಾಷನಲ್ ಲೈಬ್ರರಿಗೆ ಭೇಟಿ ನೀಡಿದ್ದಕ್ಕೆ ನಿಮಗೆ ವಂದನೆಗಳು. ಎಷ್ಟೋ ಜನ ಜೂ ಮತ್ತು ಮ್ಯೂಜಿಯಮ್ ಗಳಿಗೆ ಭೇಟಿ ನೀಡುತ್ತಾರೆಯೇ ಹೊರತು ಲೈಬ್ರರಿಗೆ ಭೇಟಿ ನೀಡುವುದಿಲ್ಲ. ನಿಮ್ಮ ಅಮೂಲ್ಯವಾದ ಸಮಯವನ್ನು ಇಲ್ಲಿ ಕಳೆದಿದ್ದೀರ. ನಿಮ್ಮೆಲ್ಲರ ಭೇಟಿ ನನಗೆ ಅಚ್ಚರಿ ಮೂಡಿಸಿತ್ತು. ಇಲ್ಲಿಗೆ ಮತ್ತೆ ಬನ್ನಿ. ಜೊತೆಗೆ ನಿಮ್ಮ ಗೆಳೆಯರು ಯಾರಾದರೂ ಕೊಲ್ಕತ್ತಾಗೆ ಬಂದಾಗ ನ್ಯಾಷನಲ್ ಲೈಬ್ರರಿಗೆ ಒಮ್ಮೆ ಭೇಟಿ ನೀಡಲು ಹೇಳಿ” ಎಂಬಂತಹ ಸಾಲುಗಳನ್ನು ನೋಡಿ ನಾನು ಅಚ್ಚರಿಗೊಂಡಿದ್ದೆ. ನಾನು ಯಾವತ್ತಿಗೂ ನಂಬುವ ಹಾಗೆ ಹಣವಿರುವ ಕಡೆ ಒತ್ತಡ ಜಾಸ್ತಿ ಇರುತ್ತದೆ. ಪುಸ್ತಕವಿರುವ ಕಡೆ ಒಂದು ಶಾಂತಿ ಇರುತ್ತದೆ. ಬರೀ ಪುಸ್ತಕಗಳೇ ತುಂಬಿರೋ ಜಾಗವಾದ ಲೈಬ್ರರಿಯಲ್ಲಿ ವ್ಯಕ್ತಿಯೊಬ್ಬರು ತನ್ನ ಇಡೀ ದಿನ ಕಳೆದರೆ ಒಂದು ಅಧಮ್ಯವಾದ ಶಾಂತತೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಮಿಳಿತವಾಗಿಬಿಡುತ್ತದೆ. ಅಂತಹ ವ್ಯಕ್ತಿತ್ವ ಬಹುಶಃ ಕುಮಾರಪ್ಪನವರದಾಗಿತ್ತು ಎನಿಸುತ್ತದೆ. ಆ ಮೇಡಂ ನೀಡಿದ ಕುಮಾರಪ್ಪನವರ ಈ ಮೇಲ್ ಐಡಿಗೆ ಮೇಲ್ ಒಂದನು ಬರೆದು ಅವರನ್ನು ಭೇಟಿ ಮಾಡಬೇಕೆಂಬ ನನ್ನಲ್ಲಿರುವ ಆಸೆಯನ್ನು ಆ ಮೇಲ್ ನಲ್ಲಿ ತೋಡಿಕೊಂಡಿದ್ದೆ. ಅವರ ಉತ್ತರಕ್ಕಾಗಿ ಒಂದಿಡೀ ವಾರ ಕಾದು ಕೊನೆಗೂ ಉತ್ತರ ಬಾರದಿದ್ದಾಗ ಒಂದೆಜ್ಜೆ ಲೈಬ್ರರಿಗೆ ಹೋಗಿ ಬರೋಣ ಎಂದು ಒಂದು ದಿನ ನ್ಯಾಷನಲ್ ಲೈಬ್ರರಿಗೆ ಹೋಗಿದ್ದೆ. ಈ ಮೊದಲು ಒಂದೆರಡು ಸಲ ಆ ಲೈಬ್ರರಿಗೆ ಹೋಗಿದ್ದೇನಾದರೂ ಅಲ್ಲಿ ನಮ್ಮ ಕನ್ನಡದ ಕುಮಾರಪ್ಪನವರು ಇದ್ದಾರೆ ಎಂದು ನನಗೆ ಗೊತ್ತಿರಲಿಲ್ಲ. ಹಾಗೆಯೇ ನ್ಯಾಷನಲ್ ಲೈಬ್ರರಿಯಲ್ಲಿ ಕನ್ನಡದ ಸಾವಿರಾರು ಪುಸ್ತಕಗಳು ಇವೆ ಎಂದು ಸಹ ಗೊತ್ತಿರಲಿಲ್ಲ. ಲೈಬ್ರರಿಯ ಕ್ಯಾಂಪಸ್ ನ ಮುಖ್ಯ ದ್ವಾರ ಪ್ರವೇಶಿಸುತ್ತಿದ್ದಂತೆ ಕುಮಾರಪ್ಪ ನವರ ಭೇಟಿ ಮಾಡಲು ಬಂದಿದ್ದೇನೆ ಎಂದು ಸೆಕ್ಯುರಿಟಿ ಗೆ ತಿಳಿಸಿದಾಗ ಎಷ್ಟು ಮರ್ಯಾದೆಯಿಂದ ನನ್ನ ಹೆಸರನ್ನು ವಿಸಿಟಿಂಗ್ ಪುಸ್ತಕವೊಂದರಲ್ಲಿ ಆ ಸೆಕ್ಯುರಿಟಿ ಬರೆಸಿದ್ದ. ನ್ಯಾಷನಲ್ ಲೈಬ್ರರಿಯು ನಾಲ್ಕೈದು ವರ್ಷಗಳ ಹಿಂದೆ ಬಂದಿದ್ದಾಗ ಹೊಸ ಕಟ್ಟಡದಲ್ಲಿ ಶುರುವಾಗುವುದರಲ್ಲಿತ್ತು. ಈಗ ಆ ಹೊಸ ಕಟ್ಟಡ ಪೂರ್ಣ ಪ್ರಮಾಣದಲ್ಲಿ ತನ್ನ ಕಾರ್ಯ ನಿರ್ವಹಿಸುತ್ತಿದೆ. ಲೈಬ್ರರಿ ಒಳ ಹೋಗುವ ಮುನ್ನ ಕುಮಾರಪ್ಪನವರನು ಭೇಟಿ ಮಾಡಲು ಬಂದಿದ್ದೇನೆ ಎಂದು ರೆಸೆಪ್ಷನ್ ನಲ್ಲಿ ತಿಳಿಸಿದಾಗ ಅವರನ್ನು ಭೇಟಿ ಮಾಡುವ ನನ್ನ ಆಸೆಗೆ ತಣ್ಣೀರೆರೆಚುವಂತೆ ಕುಮಾರಪ್ಪನವರು ರಜಾದಲ್ಲಿದ್ದಾರೆ. ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ತಿಳಿಯಿತು. ಅವರ ಫೋನ್ ನಂಬರ್ ಪಡೆಯಬಹುದೇ ಎಂದಾಗ ಲೈಬ್ರರಿಯಲ್ಲಿ ಕುಮಾರಪ್ಪನವರಿಗೆ ತುಂಬಾ ಆತ್ಮೀಯರಾದ ಗೆಳೆಯರೊಬ್ಬರ ಬಳಿ ನನ್ನನ್ನು ಕಳುಹಿಸಿದ್ದರು. ಮೂಲತಃ ತೆಲುಗಿನವರಾದ ಕುಮಾರಪ್ಪನವರ ಸಹೋದ್ಯೋಗಿ ತುಂಬಾ ಆತ್ಮೀಯವಾಗಿ ಮಾತನಾಡಿ ಕುಮಾರಪ್ಪನವರ ಆರೋಗ್ಯದ ಸ್ಥಿತಿಯನ್ನು ನನಗೆ ವಿವರಿಸಿ, ಕಳೆದ ವಾರವಷ್ಟೇ ಬೆಂಗಳೂರಿನಿಂದ ಚಿಕಿತ್ಸೆ ಪಡೆದು ಬಂದಿದ್ದಾರೆ. ಮುಂದಿನ ವಾರ ಬಹುಶಃ ಅವರು ಆಫೀಸಿಗೆ ಬರಬಹುದು ಎಂದು ನನಗೆ ಕುಮಾರಪ್ಪನವರ ಮೊಬೈಲ್ ನಂಬರ್ ನೀಡಿದ್ದರು. ಲೈಬ್ರರಿಯಿಂದ ಹೊರಗೆ ಬಂದು ಕುಮಾರಪ್ಪ ನವರ ಮೊಬೈಲ್ ನಂಬರ್ ಗೆ ಫೋನ್ ಮಾಡಿ ಅವರನ್ನು ಭೇಟಿ ಮಾಡಲೆಂದು ಬಂದಿದ್ದೆ ಎಂದು ತಿಳಿಸಿದಾಗ ತುಂಬಾ ಆತ್ಮೀಯವಾಗಿ ಮಾತನಾಡಿ ಸದ್ಯ ತಾವು ಮನೆಯಲ್ಲಿ ಇರುವುದಾಗಿ ತಿಳಿಸಿ ಲೈಬ್ರರಿಯಲ್ಲಿ ಕನ್ನಡ ವಿಭಾಗವನ್ನು ನೋಡಿ ಬರುವಂತೆ ಹೇಳಿದ್ದರು. ಜೊತೆಗೆ ಆ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಮ್ಮ ಸಹಾಯಕ ಗ್ರಂಥ ಪಾಲಕರ ಹೆಸರು ಹೇಳಿದ್ದರು. ಲೈಬ್ರರಿಯ ಕನ್ನಡ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಗೆಳೆಯನ ಭೇಟಿ ಮಾಡಿದಾಗ ಆ ಗೆಳೆಯ ತನ್ನ ಕೆಲಸದ ಒತ್ತಡದ ನಡುವೆಯೂ ಲೈಬ್ರರಿಯ ಪುಸ್ತಕಗಳ ಸಂಗ್ರಹವನ್ನು ನನಗೆ ತೋರಿಸಿದ್ದ. ಅಲ್ಲಿ ಸುಮಾರು ನಲವತ್ತು ಸಾವಿರಕ್ಕೂ ಹೆಚ್ಚು ಕನ್ನಡದ ಪುಸ್ತಕಗಳು ಲೈಬ್ರರಿಯಲ್ಲಿ ಇರುವುದನ್ನು ನೋಡಿ ನಾನು ಅಚ್ಚರಿಗೊಂಡಿದ್ದೆ. ವಿಪರ್ಯಾಸವೆಂದರೆ ಅಲ್ಲಿ ಕನ್ನಡ ಪುಸ್ತಕಗಳನ್ನು ಓದುವವರೇ ಇಲ್ಲ. ಆಗ ನನಗೆ ಅನಿಸಿದ್ದು ಎಂದರೆ ಆ ಪುಸ್ತಕಗಳನ್ನು ಉಪಯೋಗಿಸಲು ನಮ್ಮ ಕರ್ನಾಟಕ ವಿಶ್ವವಿದ್ಯಾಲಯಗಳ ಸಂಶೋಧನಾ ವಿದ್ಯಾರ್ಥಿಗಳನ್ನು ಇಲ್ಲಿಗೆ ಒಂದಷ್ಟು ತಿಂಗಳು ಕಳುಹಿಸದರೆ ಒಳ್ಳೆಯದು ಎನಿಸಿತು. ನಂತರ ಆ ಗೆಳೆಯನಲ್ಲಿ ಕುಮಾರಪ್ಪ ನವರ ಕುರಿತು ನನಗೆ ಏನೂ ಗೊತ್ತಿಲ್ಲ ಎಂದಾಗ ಹಿರಿಯ ಲೇಖಕ ರಹಮತ್ ತರೀಕೆರೆ ಯವರ ಕದಳಿ ಹೊಕ್ಕಿ ಬಂದೆ ಎಂಬ ಕೃತಿಯನ್ನು ನನ್ನ ಕೈಗಿತ್ತು ಅದರಲ್ಲಿದ್ದ ಕುಮಾರಪ್ಪನವರ ಕುರಿತ ಲೇಖನವನ್ನು ಓದಲು ತಿಳಿಸಿದ್ದ. ಕುಮಾರಪ್ಪನವರ ಕುರಿತು ತುಂಬಾ ಆತ್ಮೀಯವಾಗಿ ರೆಹಮತ್ ತರೀಕೆರೆ ಯವರು ಬರೆದಿದ್ದರು. ಅದನ್ನು ಓದಿ ಖುಷಿಯಾಗಿತ್ತು. ನಂತರದ ದಿನಗಳಲ್ಲಿ ಕುಮಾರಪ್ಪನವರನ್ನು ನಾನು ಭೇಟಿ ಮಾಡಬೇಕೆಂದು ಒಂದೆರಡು ಬಾರಿ ಫೋನ್ ಮಾಡಿದ್ದೆ. ಯಾಕೋ ಅವರನ್ನು ಭೇಟಿ ಮಾಡುವ ಕಾಲ ಕೂಡಿ ಬಂದಿರಲೇ ಇಲ್ಲ. ಆದರೆ ಕಳೆದ ಕೆಲವು ತಿಂಗಳುಗಳಲ್ಲಿ ಮೂರ್ನಾಲ್ಕು ಬಾರಿ ಅವರೊಡನೆ ಫೋನ್ ನಲ್ಲಿ ಮಾತನಾಡಿದ್ದೆ. ಒಂದು ಬಾರಿ ನನ್ನ ಪುಸ್ತಕದ ಪ್ರಕಟಣೆ ಕುರಿತು ಒಂದಷ್ಟು ಚಂದದ ಅಡ್ವೈಸ್ ಸಹ ಮಾಡಿದ್ದರು. ಮೂಲತಃ ಹೊಳಲ್ಕೆರೆ ತಾಲ್ಲೂಕಿನ ಬಸಾಪುರ ಗ್ರಾಮದವರಾದ ಕುಮಾರಪ್ಪನವರು ಪೂರ್ತಿ ಹೆಸರು ಜಿ. ಕುಮಾರಪ್ಪ. ಅವರು ಕನ್ನಡದಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ ಎಂದು ಕೇಳಿದ್ದೇನೆ. ಬೆಂಗಾಳಿ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಎಂದೂ ಸಹ ಕೇಳಿದ್ದೇನೆ. ಅವರ ಕೃತಿಗಳನ್ನು ಇನ್ನೂ ಓದುವ ಭಾಗ್ಯ ನನಗೆ ಕೂಡಿ ಬಂದಿಲ್ಲ. ಮಳೆಯನ್ನೇ ಕಾಣದ ಕೊಲ್ಕತ್ತಾದ ದಿನದ ತಾಪಮಾನ ಕೆಲವು ದಿನಗಳಿಂದ 40 ಡಿಗ್ರಿ ಸೆಲ್ಸಿಯಸ್ ಗಿಂತಲೂ ಹೆಚ್ಚಿತ್ತು. ಇಂದು ಮುಂಜಾನೆ ಗುಡುಗಿನಿಂದ ಕೂಡಿದ ಸುರಿಮಳೆಗೆ ಮುಂಜಾನೆ ಬೇಗನೆ ಎಚ್ಚರವಾಯಿತು. ಎದ್ದವನೇ ನನ್ನ ಕೆಲವು ಆತ್ಮೀಯ ಗೆಳೆಯರಿಗೆ ಗುಡ್ ಮಾರ್ನಿಂಗ್ ಮೆಸೇಜ್ ಕಳಿಸಿದಾಗ ನನ್ನ ಮೆಸೇಜ್ ಗೆ ಉತ್ತರವಾಗಿ ಬಂದ ಮೆಸೇಜ್ ಒಂದು “ಕುಮಾರಪ್ಪ ನೋ ಮೋರ್” ಎಂದಿತ್ತು. ಯಾರೋ ಮನಸು ಮುಂಜಾನೆಯೇ ಮೌನಕ್ಕೆ ಶರಣಾಗಿ ನಾನು ಭೇಟಿ ಮಾಡಬೇಕೆಂದುಕೊಂಡಿದ್ದ ಹಿರಿಯ ಜೀವವನ್ನು ಕೊನೆಗೂ ಭೇಟಿಯಾಗಲಿಲ್ಲವಲ್ಲ ಎನಿಸಿತು. ಕುಮಾರಪ್ಪ ನವರು ಕೊಲ್ಕತ್ತಾದಲ್ಲಿ ಕಾಲು ಶತಮಾನ ಕಳೆದಿದ್ದರಂತೆ. ನಾನು ಇಲ್ಲಿ ಆರು ವರ್ಷ ಕಳೆದಿರುವೆ. ಅವರನ್ನು ನಾನು ಭೇಟಿ ಮಾಡಲು ಹಾತೊರೆಯುವಂತೆ ಮಾಡಿದ್ದು ಬೇರೆ ಏನಲ್ಲ. ನಮ್ಮ ಕನ್ನಡ. ಕೊನೆಗೆ ನನ್ನೊಳಗೆ ಹೀಗೊಂದು ನೆನಪಾಗಿ ಉಳಿದು ಹೋದ ಜಿ ಕುಮಾರಪ್ಪ ನವರಿಗೆ ಹೀಗೊಂದು ನುಡಿ ನಮನ ಸಲ್ಲಿಸಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ದೇವರಲಿ ಪ್ರಾರ್ಥಿಸುವೆ.]]>

‍ಲೇಖಕರು G

June 12, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ರಮಾಕಾಂತ್ ಆರ್ಯನ್‌ ಅವನು ಕಾಲ ಹೆಬ್ಬರಳ ತುದಿಯಲ್ಲಿ ವಿಶ್ವವನ್ನೇ ಪುಟಿಪುಟಿದು ಕುಣಿಸಿದವನು. ಫುಟ್ಬಾಲ್ ಅಂಗಳದಲ್ಲಿ ಅವನು ಓಡಿದ, ಓಡಾಡಿದ...

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಇಂದು ಸಂಜೆ ಜರುಗುವ 'ಅಮ್ಮ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಬೀದರ್ ನ ದೇಶಾಂಶ ಹುಡುಗಿ ಅವರು ಇನ್ನಿಲ್ಲ.....

3 ಪ್ರತಿಕ್ರಿಯೆಗಳು

 1. malathi S

  ನಾನು ಯಾವತ್ತಿಗೂ ನಂಬುವ ಹಾಗೆ ಹಣವಿರುವ ಕಡೆ ಒತ್ತಡ ಜಾಸ್ತಿ ಇರುತ್ತದೆ. ಪುಸ್ತಕವಿರುವ ಕಡೆ ಒಂದು ಶಾಂತಿ ಇರುತ್ತದೆ. ಬರೀ ಪುಸ್ತಕಗಳೇ ತುಂಬಿರೋ ಜಾಗವಾದ ಲೈಬ್ರರಿಯಲ್ಲಿ ವ್ಯಕ್ತಿಯೊಬ್ಬರು ತನ್ನ ಇಡೀ ದಿನ ಕಳೆದರೆ ಒಂದು ಅಧಮ್ಯವಾದ ಶಾಂತತೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಮಿಳಿತವಾಗಿಬಿಡುತ್ತದೆ. ಅಂತಹ ವ್ಯಕ್ತಿತ್ವ ಬಹುಶಃ ಕುಮಾರಪ್ಪನವರದಾಗಿತ್ತು ಎನಿಸುತ್ತದೆ.
  Nataraju though u have not met him u have summed up his nature perfectly…
  glad to note the increase in the number of books since our Visit
  malathi S

  ಪ್ರತಿಕ್ರಿಯೆ
 2. ಅಶೋಕವರ್ಧನ ಜಿ.ಎನ್

  ಸುಮಾರು ಹದಿನೈದು ವರ್ಷಗಳ ಹಿಂದೆ, ನನ್ನ ಎರಡನೇ ಭಾರತ ಬೈಕ್ ಯಾನದ ಯೋಜನೆಯಲ್ಲಿದ್ದಂದು, ನನ್ನಂಗಡಿಗೆ ಹೀಗೇ ಬಂದಿದ್ದ ಕನ್ನಡ ವಿವಿ ಹಂಪಿಯ ಗ್ರಂಥಪಾಲೆ – ನಾಗವೇಣಿ ಒಂದೇ ಉಸುರಿಗೆ ಹೇಳಿದರು, “ಕಲ್ಕತ್ತಾದಲ್ಲಿ (ಆಗ ಇನ್ನೂ ಕೋಲ್ಕತ್ತಾ ಆಗಿರಲಿಲ್ಲ) ಕುಮಾರಪ್ಪನವರನ್ನು ಸಂಪರ್ಕಿಸಲು ಮರೆಯಬೇಡಿ.” (ಮತ್ತೆ ಅವರು ರಾಷ್ಟ್ರೀಯ ಗ್ರಂಥಾಲಯ ತೋರಿಸದೆ ಬಿಡುವುದಿಲ್ಲ ಎನ್ನುವುದನ್ನು ಪರೋಕ್ಷವಾಗಿ ಸೂಚಿಸಿದ್ದರು.)ನಾವು ಸ್ವಾಮಿ ಜಗದಾತ್ಮಾನಂದರ ಕೃಪೆಯಲ್ಲಿ ಕಲ್ಕತ್ತಾದ ಕನ್ನಡ ಸಂಘದಲ್ಲಿ ವಸತಿ ತಲಪಿದಂದೇ ಕುಮಾರಪ್ಪನವರು ನನ್ನನ್ನು ಕೇವಲ ಒಬ್ಬ ಕನ್ನಡ ಪುಸ್ತಕೋದ್ಯಮಿ ಎಂಬ ಅಭಿಮಾನದಲ್ಲಿ ಭೇಟಿಯಾಗಲು ಬಂದಿದ್ದರು. ಅವರ ಸೂಚನೆಯಂತೇ ಮಾರಣೇ ದಿನ ಗ್ರಂಥಾಲಯಕ್ಕೆ ಹೋಗಿದ್ದೆವು. ಹೆಸರು, ಇತಿಹಾಸಗಳಿಂದ ಯಾವುದೇ ಸಂಸ್ಥೆ (ಪುಸ್ತಕಗಳ ಮೊತ್ತದಿಂದ ಗ್ರಂಥಾಲಯ ಎಂದೂ ಧಾರಾಳ ಹೇಳಬಹುದು) ದೊಡ್ಡದು ಆಗುವುದಿಲ್ಲ. ಅದನ್ನು ಕಾಲದಿಂದ ಕಾಲಕ್ಕೆ ಸಾರ್ವಜನಿಕವಾಗಿ ಉಪಯುಕ್ತವಾಗುವಂತೆ ನಿರ್ವಹಿಸುವ ವ್ಯಕ್ತಿಯಿಂದಷ್ಟೇ ಅದು ಸಾಧ್ಯ. ಕುಮಾರಪ್ಪನವರು ಅಲ್ಲಿ ಕೇವಲ ಕನ್ನಡ ವಿಭಾಗದ ನಿರ್ವಾಹಕರಾಗಿದ್ದರು. ಆದರೆ ಅವರ ಪುಸ್ತಕ ಪ್ರೀತಿ, ಕೆಲಸದ ಮೇಲಿನ ಶ್ರದ್ದೆ ಆ ಬೃಹತ್ ಸಂಸ್ಥೆಯ (ವ್ಯಕ್ತಿ ಮತ್ತು ಭಾಷಾಬೇಧವಿಲ್ಲದೆ ಪುಸ್ತಕಗಳೂ ಸೇರಿ) ಅಂಗುಲಂಗುಲವನ್ನೂ ಆತ್ಮೀಯವಾಗಿಸಿಕೊಂಡಿತ್ತು. ಸುತ್ತಿಸಿದರು, ವಿವರಿಸಿದರು. ಸರಕಾರೀ ಪುಸ್ತಕೋದ್ಯಮದ ಬಗ್ಗೆ ತೀವ್ರ ಜಿಗುಪ್ಸೆಯನ್ನು ಬೆಳೆಸಿಕೊಂಡಿದ್ದ ನನಗೆ ಆತ್ಮೀಯ ಮಿತ್ರನ ನೆಲೆಯಲ್ಲಿ ರಾಷ್ಟ್ರೀಯ ಗ್ರಂಥಾಲಯದ ಔಚಿತ್ಯ ಮತ್ತು ನನ್ನಂಥವರ ಪಾಲ್ಗೊಳ್ಳುವಿಕೆಯ ಅಗತ್ಯವನ್ನು ಮನಗಾಣಿಸಿದರು. ಅರ್ಧ ದಿನವನ್ನೇ ಅಲ್ಲಿ ಕಳೆದಿದ್ದರೂ ಅದು ಏನೂ ಅಲ್ಲವೆನ್ನುವ ಭಾವ ನಮ್ಮಲ್ಲಿ ಬರುವುದಕ್ಕೆ ಏಕೈಕ ಕಾರಣಮೂರ್ತಿ ಕುಮಾರಪ್ಪ. ಇವರ ಕನ್ನಡ ಪ್ರೇಮ ಅಷ್ಟಕ್ಕೇ ಮುಗಿಯಲಿಲ್ಲ. ಹಿಂದಿನ ದಿನವೇ ನಮ್ಮನ್ನು ಅವರು ಒತ್ತಾಯಪೂರ್ವಕವಾಗಿ ಮಧ್ಯಾಹ್ನದ ಮನೆಯೂಟಕ್ಕೂ ಒಪ್ಪಿಸಿದ್ದನ್ನೂ ನಡೆಸಿಬಿಟ್ಟರು. (ನನ್ನ ನೆನಪು ಸರಿಯಿದ್ದರೆ) ಅವರ ಶ್ರೀಮತಿಯವರು ಇನ್ಯಾವುದೋ ಸಂಸ್ಥೆಯಲ್ಲಿ, ನಗರದ ಇನ್ಯಾವುದೋ ಮೂಲೆಯಲ್ಲಿ ನೌಕರಿಯಲ್ಲಿದ್ದರು. ಆದರೇನು, ಅವರಿಗೆ ಖುದ್ದು ಹಾಜರಿರಲು ಸಾಧ್ಯವಿಲ್ಲವಾಗಿದ್ದರೂ ಕುಮಾರಪ್ಪನವರ ಕನ್ನಡ ಪ್ರೀತಿಗೆ ಇಂಬಾಗಿದ್ದ ಅವರು, ನಮಗಾಗಿ ಹಬ್ಬದೂಟವನ್ನು ಸಜ್ಜುಗೊಳಿಸಿ ಇಟ್ಟಿದ್ದರು!
  ಭಾರತೀಯ ಪ್ರಕಾಶಕರೆಲ್ಲರೂ ದೇಶದ ರಾಷ್ಟ್ರೀಯ ಗ್ರಂಥಾಲಯಗಳಿಗೆ (ಆಗ ನಾಲ್ಕೋ ಐದೋ ಇತ್ತೆಂದು ನನ್ನ ನೆನಪು) ತಮ್ಮೆಲ್ಲಾ ಪ್ರಕಟಣೆಗಳ ಒಂದೊಂದು ಪ್ರತಿಯನ್ನು ಉಚಿತವಾಗಿ ಕಳಿಸಬೇಕೆಂದು ಶಾಸನಾತ್ಮಕ ಆದೇಶವಿದ್ದರೂ ಎಲ್ಲೋ ಕೆಲವೊಮ್ಮೆ ಪತ್ರಿಕಾ ಸಾದರ ಸ್ವೀಕಾರ ನೋಡಿದ ಕೆಲವು ಗ್ರಂಥಪಾಲರು ಪ್ರತ್ಯೇಕ ಮನವಿ ಕಳಿಸಿದರೂ ನಾನೆಂದೂ ಪುಸ್ತಕ ಕಳಿಸುವುದಿರಲಿ, ಉತ್ತರಿಸುವ ಗೋಜಿಗೂ ಹೋದವನಲ್ಲ. ಆದರೆ ಆ ಬಾರಿ ಪ್ರವಾಸ ಮುಗಿಸಿ ಮಂಗಳೂರಿಗೆ ಮರಳಿದ ಕೂಡಲೇ ನಾನು ಅದುವರೆಗಿನ ನನ್ನೆಲ್ಲ ಪ್ರಕಟಣೆಗಳ ಒಂದೊಂದು ಪ್ರತಿ ತೆಗೆದೆ. ಜೊತೆಗೆ ಕುಮಾರಪ್ಪನವರ ನಿರ್ವ್ಯಾಜ ಪ್ರೀತಿಗೆ ಸಣ್ನ ಕಾಣಿಕೆಯಾಗಿ ಕೆಲವು ಅನ್ಯ ಪ್ರಕಾಶಕರ ಕನ್ನಡ ಮಕ್ಕಳ ಪುಸ್ತಕಗಳನ್ನು ಅವರ ಪುಟಾಣಿಗಾಗಿ ಸೇರಿಸಿ, ಒಟ್ಟು ಕಳಿಸಿದೆ. ಕೆಲವೇ ದಿನಗಳಲ್ಲಿ ಕುಮಾರಪ್ಪನವರಿಂದ ನಿರೀಕ್ಷಿತ ಅಧಿಕೃತ ರಸೀದಿಯೇನೋ ಬಂತು. ಆದರೆ ಎಲ್ಲ ಪುಸ್ತಕಗಳನ್ನೂ ಗ್ರಂಥಾಲಯಕ್ಕೇ ತೆಗೆದುಕೊಂಡ ಕುಮಾರಪ್ಪನವರು, ಸಣ್ಣ ವೈಯಕ್ತಿಕ ಪತ್ರವನ್ನು ಲಗತ್ತಿಸಿದ್ದರು. ಆ ಕನ್ನಡ ಮಕ್ಕಳ ಪುಸ್ತಕಗಳೂ ಅವರ ಗ್ರಂಥಾಲಯಕ್ಕೆ ಬಂದಿರಲಿಲ್ಲವಂತೆ. ಕುಮಾರಪ್ಪ ಸಹಜವಾಗಿ ಅವನ್ನೂ ಗ್ರಂಥಾಲಯಕ್ಕೇ ತೆಗೆದುಕೊಂಡು ತನ್ನ ಪುಟಾಣಿಗೆ ಮಾತ್ರವಲ್ಲ, ಲೋಕದ ಎಲ್ಲಾ ಪುಟಾಣಿಗಳಿಗೂ ಸಾರ್ವಕಾಲಿಕವಾಗಿ ಅವು ಒದಗುವ ಅವಕಾಶವನ್ನು ಕಲ್ಪಿಸಿದ್ದು ತೀರಾ ಅನಿರೀಕ್ಷಿತ.
  ಕುಮಾರಪ್ಪನವರ ನಿಧನವೂ ಅಷ್ಟೇ ಅನಿರೀಕ್ಷಿತ, ಅಕಾಲಿಕ; “ಒಳ್ಳೆಯವರಿಗಿದು ಕಾಲವಲ್ಲ.”

  ಪ್ರತಿಕ್ರಿಯೆ
 3. ಎಚ್. ಸುಂದರ ರಾವ್

  ಕುಮಾರಪ್ಪ “ಕಾಬೂಲಿವಾಲನ ಬಂಗಾಲಿ ಹೆಂಡತಿ” ಎಂಬ ಹೆಸರಿನಲ್ಲಿ ಬಂಗಾಳಿ ಮಹಿಳೆಯೊಬ್ಬರ ಆತ್ಮಕತೆಯನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟಿದ್ದಾರೆ. ಬಂಗಾಳದ ಮಹಿಳೆಯೊಬ್ಬಳು ಅಫ್ಘಾನಿಸ್ಥಾನದ ಪುರುಷನನ್ನು ಪ್ರೀತಿಸಿ, ಕೇವಲ ಕುತೂಹಲಕ್ಕಾಗಿ ಗಂಡನ ಮನೆಗೆ -ಅಫ್ಘಾನಿಸ್ಥಾನಕ್ಕೆ – ಹೋಗಿ, ಅಲ್ಲಿ ಸಿಕ್ಕಿಬಿದ್ದು, ಹಲವಾರು ವರ್ಷ ಕಳೆದು, ನಂತರ ಹೇಗೋ ಮಾಡಿ ತಪ್ಪಿಸಿಕೊಂಡು ಭಾರತಕ್ಕೆ ಹಿಂದೆ ಬಂದುದರ ರೋಚಕ ವಿವರಗಳು ಅದರಲ್ಲಿವೆ. ಆಫ್ಘಾನಿಸ್ಥಾನದಲ್ಲಿ ತಾಲಿಬಾನಿಗಳ ಕಾರುಭಾರನ್ನು, ಮಹಿಳೆಯರ ಸ್ಥಿತಿಗತಿಗಳನ್ನು ಈ ಪುಸ್ತಕ ಹೃದಯಂಗಮವಾಗಿ ಚಿತ್ರಿಸುತ್ತದೆ. ಪುಸ್ತಕದಲ್ಲಿ ಕುಮಾರಪ್ಪನವರು ಅಲ್ಲಲ್ಲಿ ಬಳಸುವ ಆಡುಭಾಷೆ ನನಗೆ ಅಷ್ಟಾಗಿ ಇಷ್ಟವಾಗಲಿಲ್ಲವಾದರೂ, ಒಟ್ಟಿನ ಮೇಲೆ ಪುಸ್ತಕ ತುಂಬಾ ಚೆನ್ನಾಗಿದೆ. ಎಲ್ಲರೂ ಓದಬೇಕಾದ ಪುಸ್ತಕ ಅದು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: