'ಕೋಟಿವಿದ್ಯೆಗಳಲಿ ಟೋಪಿವಿದ್ಯೆಯೇ ಮೇಲು. . .

‘ಬಡ್ಡಿ ಬಾಬಣ್ಣನ ಪೋಂಜೀ ಸ್ಕೀಂ’

– ಜಯದೇವ ಪ್ರಸಾದ ಮೊಳೆಯಾರ

ಕರಾವಳಿ ಕರ್ನಾಟಕವನ್ನು ದಂಗುಬಡಿಸಿದ ‘ಬಡ್ಡಿ ಬಾಬಣ್ಣ’ನ ಮೋಸದಾಟದ ವಿವರಗಳು  ಕಳೆದ ವಾರದಿಂದ ಡೈಲಿ ಸೀರಿಯಲ್ನಂತೆ ನಿಧಾನವಾಗಿ ಬಿಚ್ಚಿಕೊಳ್ಳುತ್ತಾ ಇದೆ. ಬಾಯಲ್ಲಿ ನೀರೂರುವಷ್ಟು ಹೆಚ್ಚಿನ ಬಡ್ಡಿದರ ನೀಡುವ ಭರವಸೆ ಇತ್ತು, ಕೋಟಿಗಟ್ಟಲೆ ಪ್ರಮಾಣದಲ್ಲಿ ಸಾರ್ವಜನಿಕ ಹಣವನ್ನು ನುಂಗಿ ಪರಾರಿಯಾದ ‘ಪರಾಪಕಾರಿ ಬಾಬಣ್ಣ’ನ ಕಥನ ಸಧ್ಯಕ್ಕೆ  ಒಂದು ಹಾಟ್ ನ್ಯೂಸ್!
ಕೇರಳದಿಂದ ಕೇವಲ ಐದು ವರ್ಷ ಹಿಂದಷ್ಟೇ ಪುತ್ತೂರಿನ ನಿಡ್ಪಳ್ಳಿಗೆ ಬಂದು ಟೈಲರ್ ವೃತ್ತಿ ಆರಂಭಿಸಿ ಟೈಲರ್ ಬಾಬಣ್ಣನೆಂದು ಪ್ರಖ್ಯಾತನಾದ ಬಾಬಣ್ಣ, ಚಿಟ್ ಫಂಡ್  ಆರಂಭಿಸಿ, ಕ್ರಮೇಣ ಬಡ್ಡಿ ವ್ಯವಹಾರ ನಡೆಸಿ ಬಡ್ಡಿ ಬಾಬಣ್ಣನಾಗಿ ಬಡ್ತಿಹೊಂದಿದ. ತನ್ನ ಉತ್ತಮ  ನಡತೆಯಿಂದ, ಪರೋಪಕಾರಿ ಧೋರಣೆಯಿಂದ, ಶಿಸ್ತು-ನಿಯತ್ತಿನಿಂದ ಊರಜನರ ಮನಗೆದ್ದ ಬಾಬಣ್ಣ 19 % ದಂತಹ ವಿಪರೀತ ಬಡ್ಡಿದರದ ಆಮಿಷ ತೋರಿಸಿ ಹೇರಳ ಧನ ಸಂಗ್ರಹಿಸಿ ಕಳೆದ ವಾರ ಅಂತರ್ಧಾನನಾಗಿದ್ದಾನೆ. ಪೋಲಿಸರು ಈಗ ಆತನಿಗಾಗಿ ಎಲ್ಲೆಲ್ಲೂ ಹುಡುಕಾಡುತ್ತಿದ್ದಾರೆ. ಊರವರ ಕೆಲವು ಕೋಟಿ ರೂಪಾಯಿ ಗುಳುಂ.
ಕಾಲ ಎಷ್ಟು ಕೆಟ್ಟುಹೋಗಿದೆಯೆಂದರೆ ದೊಡ್ಡ ದೊಡ್ಡ ನೋಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿಗಳನ್ನು, ಮನುಕುಲದ ಏಳಿಗೆಗಾಗಿ ದೇಶರಕ್ಷಣೆಗಾಗಿ ಜೀವವನ್ನೇ ತೆತ್ತ ಮಹಾತ್ಮರನ್ನು ನೆನೆಯಬೇಕಾದಂತೆಯೇ ವಿಶ್ವಕುಖ್ಯಾತ ಕ್ರಿಮಿನಲ್ಗಳನ್ನೂ ನೆನೆಯಬೇಕಾದ ಕಾಲ ಬಂದಿದೆ. ಅವರನ್ನೂ, ಅವರುಗಳ ಕಾರಾನಾಮವನ್ನು ಮರೆತೆವಾದರೆ ಪುನಃ ಅಂತಹ ಮೋಸದ ಜಾಲಕ್ಕೆ ಸಿಲುಕಿ ಮನೆಮಠವನ್ನೆಲ್ಲ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಬಹುದು. Those who forget history are made to repeat it! ಅಲ್ಲವೇ?
ಟೋಪಿ ಪಿತಾಮಹ ಚಾರ್ಲ್ಸ್ ಪೊಂಜೀ :
ಬಾಬಣ್ಣನ ಟೆಕ್ನೋಲೊಜಿಯಲ್ಲಿ ಹೊಸತು ಏನೇನೂ ಇಲ್ಲ. ಇದೊಂದು ಅತ್ಯಂತ ಪುರಾತನ ಹಾಗೂ ಶಾಸ್ತ್ರೀಯ ಟೋಪಿ ವಿದ್ಯೆ. ಇದನ್ನು  ಬಾಬಣ್ಣನಿಗೂ, ವಿನಿವಿಂಕ್ ಶಾಸ್ತ್ರಿಗೂ, ಮೋಸದ ಬ್ಲೇಡ್ ಕಂಪೆನಿಗಳಿಗೂ,  ಸಾವಿರಾರು ಇತರರಿಗೂ, ತೋರಿಸಿಕೊಟ್ಟ ವಿದ್ಯಾಸ್ಥಾಪಕ, ಮಾರ್ಗದರ್ಶಿ, ಇಟಾಲಿಯನ್ ಮೂಲದ Charles Ponzi ಎಂಬ ಪಿತಾಮಹ. ಒಂದು ಅತ್ಯಾಕರ್ಷಕ ಸ್ಕೀಂ ಮುಖಾಂತರ 1919 ರಲ್ಲಿ ಅಮೆರಿಕಾದಲ್ಲಿ ಲಕ್ಷಾಂತರ ಜನರ ಕೋಟ್ಯಾಂತರ ಡಾಲರ್ ನುಂಗಿಹಾಕಿದ ಕುಖ್ಯಾತ ಚೋರ – ವಿತ್ತ ಜಗತ್ತಿನ ವೀರಪ್ಪನ್!  ಎಲ್ಲಾ ಟೋಪಿವೀರರ ಆರಾಧ್ಯ ದೈವ!
ಸಣ್ಣ ಪುಟ್ಟ ಕಳ್ಳತನ ಮಾಡುತ್ತಾ ಅಲ್ಲಿ ಇಲ್ಲಿ ಕೆಲಸ ನೋಡುತ್ತಾ ಇರುತ್ತಿದ್ದ ಅಮೇರಿಕದ ಚಾರ್ಲ್ಸ್ ಪೋಂಜಿಗೆ ಒಂದು ದಿನ ಸ್ಪೈನ್ ದೇಶದ ಒಬ್ಬ ಗ್ರಾಹಕನಿಂದ ಒಂದು ಓಲೆ ಬಂತು. ಅದರೊಳಗೆ ಮರು ಉತ್ತರಕ್ಕಾಗಿ ಬೇಕಾದ ಅಂಚೆ ವೆಚ್ಚಕ್ಕಾಗಿ ‘International Reply Coupon’ ಒಂದನ್ನು ಇರಿಸಲಾಗಿತ್ತು. ಪದ್ಧತಿ ಪ್ರಕಾರ ಆ ಕೂಪನನ್ನು ಅಮೇರಿಕಾದ ಪೋಸ್ಟ್ ಆಫೀಸಿನಲ್ಲಿ ತೋರಿಸಿ ಸ್ಪೈನ್ ದೇಶಕ್ಕೆ ಮರು ಉತ್ತರಕ್ಕೆ ಬೇಕಾದಷ್ಟು ಅಂಚೆ ಚೀಟಿಯನ್ನು ವಿನಿಮಯದಲ್ಲಿ ತೆಗೆದುಕೊಳ್ಳಬಹುದಿತ್ತು. ಅದನ್ನು ಮಾಡುವಾಗ ಆತನು ಗಮನಿಸಿದ ಅಂಶವೆಂದರೆ ಸ್ಪೈನ್ ನಲ್ಲಿ ಅಂತಹ ಒಂದು ಕೂಪನ್ನಿಗೆ ತಗಲುವ ವೆಚ್ಚ ಅಮೇರಿಕಾದಿಂದ ಮರುಟಪ್ಪಾಲಿಗೆ ತಗಲುವ ಅಂಚೆ ವೆಚ್ಚಕ್ಕಿಂತ ಬಹಳಷ್ಟು ಕಡಿಮೆಯಾಗಿತ್ತು. ಪೋಂಜಿಯ ತೀಕ್ಷ್ಣ ಬುದ್ಧಿಗೆ ಇಷ್ಟೇ ಸಾಕಿತ್ತು. ಕೂಡಲೇ ಅದರಲ್ಲಿ ಒಂದು ಟೋಪಿ ಬಿಸಿನೆಸ್ ಶುರು ಮಾಡೇ ಬಿಟ್ಟ, ಪೋಂಜಿ.
ಸಾರ್ವಜನಿಕರಿಗೆ ಈ ವ್ಯತ್ಯಾಸದಿಂದಾಗುವ ಭಾರೀ ಲಾಭದ ಕತೆಯನ್ನು (Arbitrage Benefit) ಹೇಳಿ ಅಂತಹ ಕೂಪನ್ಗಳಲ್ಲಿ ಹಣ ಹೂಡಿ 90 ದಿನಗಳಲ್ಲಿ ಅದನ್ನು ದುಪ್ಪಟ್ಟು ಮಾಡಿಕೊಡುತ್ತೇನೆ ಎಂದು ಹಣ ಸಂಗ್ರಹ ಶುರು ಮಾಡಿದ. ಜನರು ಅವನ ಸ್ಕೀಂ ವಿವರಣೆಯನ್ನು ಕೇಳಿ ಅತಿಯಾಸೆಯಿಂದ ಮರುಳಾಗಿ ಹಣ ಹೂಡಿಕೆಗೆ ಮುಗಿಬಿದ್ದರು. ಪೋಂಜಿ ವಾಸ್ತವದಲ್ಲಿ ಕೂಪನ್ನುಗಳನ್ನು ಆಂತಹ ಸಗಟು ಪ್ರಮಾಣದಲ್ಲಿ ವಿನಿಮಯ ಮಾಡಿಕೊಳ್ಳಲೇ ಇಲ್ಲ. ಜಗತ್ತಿನಲ್ಲಿ ಅಷ್ಟು ಪ್ರಮಾಣದಲ್ಲಿ ಕೂಪನುಗಳೂ ಇರಲಿಲ್ಲ. ಬರೇ ಕತೆ ಹೇಳಿ ಹೊಸ ಹೂಡಿಕೆದಾರರ ಹಣದಿಂದಲೇ ಹಳೆ ಹೂಡಿಕೆದಾರರಿಗೆ ಬಡ್ಡಿ ಪಾವತಿ ಮಾಡುತ್ತಿದ್ದ ಹಾಗೂ ಪ್ರವಾಹದಂತೆ ಹರಿದು ಬರುತ್ತಿದ್ದ ಹೂಡಿಕೆಗಳನ್ನು ಬಾಚಿ ಬಾಚಿ ತನ್ನ ಜೇಬು ತುಂಬಿಸಿಕೊಳ್ಳುತ್ತಿದ್ದ. ‘ಕೋಟಿವಿದ್ಯೆಗಳಲಿ ಟೋಪಿವಿದ್ಯೆಯೇ ಮೇಲು. . . ‘ ಎಂದು ಹಾಡಿ ನಲಿಯುತ್ತಿದ್ದ. ಪೋಂಜಿಯ ಈ ಮಹಾಮೋಸದಿಂದಾಗಿ ಬಳಿಕ ‘Ponzi scheme’ ಎಂದೇ ಜಗತ್ಪ್ರಸಿದ್ಧಿಯಾದ ಈ ಸುಲಭ ತಂತ್ರವನ್ನು ಬಡ್ಡಿ ಬಾಬಣ್ಣನಂತಹ ಉತ್ತರಾಧಿಕಾರಿಗಳು ಅಂದಿನಿಂದ ಇಂದಿನವರೆಗೂ ಬೇರೆ ಬೇರೆ ಮುಖವಾಡ ತೊಟ್ಟು ನಡೆಸುತ್ತಲೇ ಬಂದಿದ್ದಾರೆ.
ಪೋಂಜಿ ಸ್ಕೀಂ ಹೇಗಿರುತ್ತದೆ :
ಒಂದು ಆಕರ್ಷಕ ಉದ್ಯಮದ ಕತೆ ಹೇಳಿ ಜನರನ್ನು ಮರುಳು ಮಾಡಿ  ಹೂಡಿಕೆದಾರರಿಗೆ ಬಾಯಲ್ಲಿ ನೀರೂರುವಂತಹ ಪ್ರತಿಫಲ ಕೊಡುವ ಘೋಷಣೆ ಮಾಡಿ ಹೇರಳ ಧನಸಂಗ್ರಹ ಮಾಡಿ ಒಂದು ದಿನ ಮಂಗನಾಮ ಹಾಗಿ ಓಡಿಹೋಗುವುದೇ ಪೋಂಜಿ  ಸ್ಕೀಂನ ಮುಖ್ಯ ಲಕ್ಷಣ.  ಇದರಲ್ಲಿ, ಒಬ್ಬ ಹೂಡಿಕೆದಾರನಿಗೆ ಬಡ್ಡಿಪಾವತಿ ಮಾಡುವುದು ಮುಂಬರುವ ಇನ್ನೊಬ್ಬನ ಹೂಡಿಕೆಯಿಂದಲೇ ಹೊರತು ಯಾವುದೇ ಔದ್ಯಮಿಕ ಹೂಡಿಕೆಯಿಂದ ಹುಟ್ಟುವ ನೈಜ ಲಾಭದಿಂದಲ್ಲ. ಅಕ್ಕ ಪಕ್ಕದವರಿಗೆ ಮೊದಮೊದಲು ಸಿಗುವ ಭಾರೀ ಲಾಭವನ್ನು ಕಂಡು ಹೊಸ ಹೊಸ ಅಮಾಯಕರು ಅದನ್ನು ಸುಲಭದಲ್ಲಿ ನಂಬಿಬಿಟ್ಟು ಸ್ಕೀಮಿಗೆ ಸೇರಲು ಮುಗಿಬೀಳುತ್ತಾರೆ. ಆ ರೀತಿ ಭಾರೀ ಮೊತ್ತದಲ್ಲಿ ದುಡ್ಡು ಬರತೊಡಗಿದಾಗ ಒಂದು ಶುಭ ಮುಂಜಾವು ಸ್ಕೀಂ ಅನ್ನು ಅರಂಭಿಸಿದ ಖದೀಮರು ಇದ್ದದ್ದನ್ನೆಲ್ಲ ಮೂಟೆಕಟ್ಟಿ ಅಲ್ಲಿಂದ ಪರಾರಿಯಾಗುತ್ತಾರೆ. ಹೀಗೆ ಎಲ್ಲರ ಹೂಡಿಕೆಯೂ ಒಂದು ದಿನ ತೆಳುಗಾಳಿಯಲ್ಲಿ ಆವಿಯಾಗಿ ಹೋಗುತ್ತದೆ. ಯಾವುದೇ ಸ್ಕೀಂನಲ್ಲಿ ಈ ಪೋಂಜಿ ಲಕ್ಷಣಗಳನ್ನು ಗುರುತಿಸಲು ಎಲ್ಲರೂ ಕಲಿಯಬೇಕು. ವರ್ಷಂಪ್ರತಿ ಇಂತಹ ವಿಪರೀತ ಬಡ್ಡಿಯ ಮೋಸದ ಜಾಲ  ದೇಶದ ಉದ್ದಗಲಕ್ಕೂ ನಿರಂತರವಾಗಿ ನಡೆಯುತ್ತಲೇ ಇದೆ.
ನೆನಪಿಡಿ:
ಪೋಂಜಿಯನ್ನು ಅಮೇರಿಕದ ಸರಕಾರ ಹಿಡಿದೂ ಆಯಿತು; ಶಿಕ್ಷಿಸಿಯೂ ಆಯಿತು. ಆದರೆ ಬೇಸರದ ಸಂಗತಿಯೇನೆಂದರೆ ತೊಂಭತ್ತು ವರ್ಷಗಳ ಬಳಿಕವೂ, ಇಂದಿಗೂ ಜಗತ್ತಿನಾದ್ಯಂತ ಜನರು ಈ ಸಿದ್ಧ ಮಾದರಿಯ ಸಂಚಿಗೆ ಅಮಾಯಕರಾಗಿ ಬಲಿಯಾಗುತ್ತಲೇ ಇದ್ದಾರೆ. ಬ್ಲೇಡ್ ಕಂಪನಿಗಳು, ವಿನಿವಿಂಕ್ ಶಾಸ್ತ್ರಿ, ಬಡ್ಡಿ ಬಾಬಣ್ಣ ಮತ್ತು ಅಮೇರಿಕಾದ ಬರ್ನಾಡ್ ಮಡೋಫ್ ಇತ್ಯಾದಿ ಚಾಣಾಕ್ಷರು ಇಂದಿಗೂ ಪೋಂಜಿ ತತ್ವಾಧಾರಿತ ಸ್ಕೀಂಗಳೊಂದಿಗೆ ನಮ್ಮನ್ನು ದೋಚುತ್ತಲೇ ಇದ್ದಾರೆ.
ಯಾವುದೇ ಒಂದು ಹಣಕಾಸಿನ ವ್ಯವಸ್ಥೆಯಲ್ಲಿ, ಪ್ರತಿಯೊಂದು ಕಾಲಘಟ್ಟದಲ್ಲೂ ಬಡ್ಡಿದರ ‘ಇಂತಿಷ್ಟು’ ಎಂದು ಇರುತ್ತದೆ. ರಿಸರ್ವ್ ಬ್ಯಾಂಕ್ ಇದನ್ನು ನಿರ್ಧರಿಸುತ್ತದೆ. ಸಧ್ಯಕ್ಕೆ ಅದು 7-8 % ದ ಆಸುಪಾಸಿನಲ್ಲಿ ಇದೆ. ಬಡ್ಡಿ ಬಾಬಣ್ಣ ನಮ್ಮಿಂದ 19 % ಗೆ ಸಾಲ ತೆಗೆದುಕೊಂಡಲ್ಲಿ ಆತನು 20 % ಕ್ಕೂ ಹೆಚ್ಚು ಆದಾಯ ಬರುವ ಯಾವುದೋ ನೈಜ, ನ್ಯಾಯಬದ್ಧ ಉದ್ಯಮದಲ್ಲಿ ಅದನ್ನು ಹೂಡಬೇಕಾಗುತ್ತದೆ. ಯಾವುದಿದೆ ಅಂತಹ ಬಿಸಿನೆಸ್?  ಒಂದು ವೇಳೆ ಇದ್ದರೂ, ಪ್ರಚಲಿತ ಬ್ಯಾಂಕಿನ ಸಾಲದರಕ್ಕಿಂತ ಅತಿಹೆಚ್ಚನ ದರದಲ್ಲಿ ಯಾರಾದರೂ ಜನರಿಂದ ಸಾಲ ಯಾಕೆ ಪಡೆಯಬೇಕು? ಬ್ಯಾಂಕಿನಲ್ಲೇ ಕಡಿಮೆ ದರಕ್ಕೆ ಆತ ಸಾಲ ಪಡೆಯಬಹುದಲ್ಲವೇ? ಈ ಸರಳ ತತ್ವವನ್ನು ಮನಸ್ಸಿನಲ್ಲಿ ಯಾವತ್ತಿಗೂ ಇಟ್ಟುಕೊಳ್ಳಬೇಕು. ಎಲ್ಲಾ ವಿತ್ತ ವೈಪರೀತ್ಯಗಳ ಕೇಂದ್ರಬಿಂದುವೇ ಮಾನವನ ಲೋಭ. ಅತಿಯಾದ ದುಡ್ಡಿನಾಸೆಗೆ ಮರುಳಾಗಿ ಅತೀ ಹೆಚ್ಚಿನ ಬಡ್ಡಿದರಗಳ ಹಿಂದೆ ಹೋದಲ್ಲಿ ಪೋಂಜಿ ಭೂತದ ಪೀಡೆಗೆ ಬಲಿಯಾಗುವುದು ಗ್ಯಾರಂಟಿ. ಎಚ್ಚರವಿರಲಿ ! ಅತ್ಯಂತ ಸರಳವೂ ಪುರಾತನವೂ ಆದ ಈ ಪೋಂಜಿ ಸ್ಕೀಂ ಬೇರೆ ಬೇರೆ ವೇಷವೆತ್ತಿ ನಿರಂತರವಾಗಿ ಸಮಾಜವನ್ನು ದೋಚುವುದನ್ನು ನೋಡಿದರೆ ಇದರ ಬಗ್ಗೆ ಒಂದು ಪಾಠವನ್ನು ಪ್ರೌಡಶಾಲಾ ಮಟ್ಟದಲ್ಲಿ ಅಳವಡಿಸಲೇಬೇಕು ಎಂದೆನಿಸುತ್ತದೆ.
ಬರೇ ಪೋಂಜಿ ಸ್ಕೀಂ ಮಾತ್ರವಲ್ಲ; ದುಡ್ಡಿನ ಲೇವಾದೇವಿಯಿರಲಿ, ಶೇರುವ್ಯವಹಾರವಿರಲಿ, ಆಫ್ರಿಕಾ/ಸ್ಪೈನ್ ಮುಂತಾದ ದೇಶಗಳಲ್ಲಿ ಅಚಾನಕ್ಕಾಗಿ ನಿಮಗೆ ದಕ್ಕಿದ ಧನರಾಶಿಯಿರಲಿ, ಅತ್ಯಂತಸುಲಭವಾಗಿ ಬಿಡಿಸಬಲ್ಲಂತಹ ಸಂಖ್ಯಾಬಂಧ ಸ್ಪರ್ಧೆಯಾಗಲಿ, ‘ಮನೆಯಲ್ಲಿಯೇ ಕುಳಿತು ಸುಲಭವಾಗಿ ಸಂಪಾದಿಸಿ’ ಎಂಬ ಸ್ಕೀಂಗಳಾಗಲಿ, ಕೆಲವು ಸರಣಿ ಮಾರಾಟದ ಜಾಲಗಳಾಗಲಿ, ಅಷ್ಟೇ ಏಕೆ? ರಾಷ್ಟ್ರೀಕೃತ ವಿತ್ತೀಯ ಸಂಸ್ಥೆಗಳ ಸ್ಕೀಂಗಳ ಮೇಲೂ  ಅನಧಿಕೃತ ಕರಪತ್ರಗಳನ್ನು ಮುದ್ರಿಸಿಯಾದರೂ, ಒಂದಲ್ಲ ಒಂದು ರೀತಿಯಲ್ಲಿ ನಮ್ಮನ್ನು ಬೇಸ್ತು ಬೀಳಿಸುವ ಮೋಸದಜಾಲವು ಸದಾ ಕಾರ್ಯಾಚರಣೆಯಲ್ಲಿರುತ್ತದೆ.
ಇತ್ತೀಚೆಗಂತೂ, ಹಣಸಂಪಾದನೆಗಿಂತ ಅದನ್ನು ಕಾಪಿಡುವುದೇ ಹೆಚ್ಚು ದೊಡ್ಡ ಸಮಸ್ಯೆಯಾಗಿ ತೋರುತ್ತಿದೆ!

‍ಲೇಖಕರು avadhi

November 30, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: