
ಮಂಜುನಾಥ್ ಚಾಂದ್
ಧರೆಯ ಒಡಲಿನಿಂದ
ತೊರೆಗಳಾಗಿ ಬಂದವರ
ಗುಂಡಿಗೆಗೆ ತುಪಾಕಿ
ಹಿಡಿಯುವ ಮುನ್ನ
ದೊರೆ ತಾನೆಂದು ಬೀಗಿ
ಸೆಟೆಯುವ ಮುನ್ನ
ನಿನ್ನ ದುಃಖ ನನ್ನ ಪಾಲಿಗಿರಲಿ
ಅನಬೇಕಿತ್ತು ಈ ಪ್ರಭುತ್ವ
ಅನುದಿನವೂ
ಅನುಕ್ಷಣವೂ
ರಟ್ಟೆಯನು ಕಲ್ಲಾಗಿಸಿ
ನೀವು ಉಣ್ಣುವ ತಟ್ಟೆಗೆ
ಅಮೃತವನೇ ಉಣಿಸಿದೆವು
ತುತ್ತನುಣ್ಣುವ ಮುನ್ನ
ನಿನ್ನ ಕಣ್ಣೀರು ನನಗಿರಲಿ
ಅನಬೇಕಿತ್ತು ಈ ಪ್ರಭುತ್ವ

ಅಶಾಶ್ವತ ಅರಮನೆಗೆ
ಕದವನಿಕ್ಕಿ ಕುಳಿತಿರಿ
ಅಶಾಂತ ಸಾಗರವು
ಕೋಟೆ ಬಾಗಿಲಿಗೇ ಬಡಿದಿದೆ
ಫಿರಂಗಿಗೆ ಮದ್ದು ತುಂಬುವ ಮುನ್ನ
ಬಂದವರು ನನ್ನ ಜನ
ಅನ್ನ ಕೊಟ್ಟ ಪುಣ್ಯ ಜನ
ಅನಬೇಕಿತ್ತು ಈ ಪ್ರಭುತ್ವ
ನೀವೊಡ್ಡಿದ ಬೆಳಕಿನ ಸೆಳಕಿಗೆ ಸಿಕ್ಕ
ಪತಂಗಗಳಲ್ಲ ನಾವು
ಕಡಲಾಗಿ ಸಿಡಿದಿದೆ
ನಮ್ಮಂತರಂಗದ ಸಂಕಟದ ಕೀವು
ಯುದ್ಧ ಗೆದ್ದವರಂತೆ ಬೀಗುವ ಮುನ್ನ
ಒಳಗಿನ ಕದನವನು
ಗೆದಿಯಬೇಕು ಪ್ರಭುತ್ವ
ಪ್ರಭುತ್ವವೆನ್ನುವುದು
ನೀವು ಪಡೆದಿದ್ದಲ್ಲ
ನಾವು ಕೊಟ್ಟಿದ್ದು
ಅದು ನಮ್ಮ ರಟ್ಟೆಯ ಫಲ
ನಿಮ್ಮ ತಟ್ಟೆಗೆ ಬಿದ್ದ ತುತ್ತಲ್ಲ
ಅದನು ಅರಿಯದ ಪ್ರಭುತ್ವ
ಬರಿಯ ಲೊಳಲೊಟ್ಟೆ.
0 ಪ್ರತಿಕ್ರಿಯೆಗಳು