ಕೋಡಿಬೆಟ್ಟು ಹನಿಸಿದ ಮಳೆ

ತಿರೆಯನಪ್ಪುವ
ಬಾನೊಲವಿನ ಸೋನೆ
ಮನವ ತೊಳೆದೀತೇ

-ಕೋಡಿಬೆಟ್ಟು ರಾಜಲಕ್ಷ್ಮಿ

a_view_from_valentine_city
ಜಗಳಾ ಜಗಳ.
ಆನೆ ಓಡಿಸಲು ನಿರಂತರ ತಮಟೆ ಬಾರಿಸಿದಂತೆ. ಅಂತರಂಗದ ವ್ಯವಧಾನ ಕದಡುವಂತೆ.
ಚಿನ್ಮೀಗೆ ಮನೆಯ ಗದ್ದಲ ಸಾಕಾಗಿ ಹೋಯಿತು.
ಹೊರ ನೋಡಿದರೆ, ಸಂಜೆ ಇಳಿಯುತಿದೆ ಸುಂದರವಾಗಿ. ಆಷಾಢವನ್ನು ಆಲಿಂಗಿಸಲು ಹೊರಟಿದೆ ಜ್ಯೇಷ್ಠ. ಅದರ ಪ್ರತಿಬಿಂಬ ಬಾನಲ್ಲಿ ತೆವಳುವ ಕಾಮರ್ೋಡದಲ್ಲಿ. ಸೂರ್ಯ ಸಂಜೆಗೆ ಮುನ್ನವೇ ಮಾಯ. ಬಾನು ಬಿರಿಯಬಹುದು ಈಗ. ತೆಕ್ಕಿನ ಮರದ ಗೆರಸೆಯಗಲದ ಎಲೆಗಳು, ಮಲ್ಹಾರದ ಯಾವ ರಾಗಕ್ಕೆ ಯಾವ ಚೀಸ್ ಹಾಡಲಿ ಎಂದು ಯೋಚಿಸುತ್ತಾ ಶ್ರುತಿ ಸರಿಮಾಡಿಕೊಳ್ಳುತ್ತಿರುವಂತೆ ಸುಯ್ ಎಂದು ಗುನುಗುವ ಅಶ್ವತ್ಥದೆಲೆಗಳು, ಅದರ ದಟ್ಟತೆಯ ಸಂದಿಸಂದಿಯಲ್ಲಿ ಮೊಸರು ಚೆಲ್ಲಿದಂತೆ ತೂಗುವ ಬಿಳಿ ಬಂದಳಿಕೆ ಎಲೆಗಳು..
ಅಂತರಂಗದ ಕನ್ನಡಿಗೆ ಮನಸ್ತಾಪದ ಧೂಳು ಮೆತ್ತಿದ ಮೇಲೆ ಯಾವ ಸೌಂದರ್ಯದ ಬಿಂಬ ಕಂಡೀತು ! ಸುಮ್ಮನೇ ಆಕಡೆ ಈಕಡೆ ಸುಳಿದಾಡುತ್ತಿದ್ದ ಚಿನ್ಮೀಗೆ ಬಾನು ನೋಡುತ್ತಿದ್ದಂತೆಯೇ ಮಳೆ ಭೂಮಿಯತ್ತ ಹೊರಟಿರುವುದು ಗೊತ್ತಾಯಿತು. ಹೊರಡುವ ಸಡಗರ ಮೋಡಗಳ ಸದ್ದಿನಲ್ಲಿ. ಅಲ್ಲೊಂದು ಮಿಂಚು, ಅದನ್ನೇ ಬೆಂಬತ್ತುವ ಗುಡುಗು. ಇಲ್ಲಿದ್ದರೆ ಚಿಕ್ಕಮ್ಮನ ಮತ್ತೊಂದು ಜಗಳ, ಬೈಗಳದ ನಡುವೆ ಮನಸ್ಸು ಕೆಸರಾಗುವುದು ಅಂತ ಅಲ್ಲಿಂದ ಹೊರಟಳು.
ಅದೊಂದು ತೋಪು. ಹಿಂದೆ ತುಂಬಾ ದೊಡ್ಡ ಮರಗಳಿದ್ದವಂತೆ. ಈಗಲೂ ತುಸು ದಟ್ಟವಾಗಿಯೇ ಇದೆ. ಕಾಲುದಾರಿಯಿಂದ ತುಸು ಒಳಗೆ ನಡೆದು ಹೋದರೆ ಅಲ್ಲಿ ಸಣ್ಣ ದೊಡ್ಡ ಬಂಡೆಗಳ ರಾಶಿ. ದೊಡ್ಡ ಬಂಡೆಯಲ್ಲಿ ಮೈಚಾಚಬಹುದು-ಹಕ್ಕಿಪಿಕ್ಕೆ ಇಲ್ಲದಿದ್ದರೆ. ಬಂಡೆಗಳ ಬುಡದಲ್ಲಿ ಗುಚ್ಛದಂತೆ ಬೆಳೆದ ಪುಟಾಣಿ ಅಶ್ವತ್ಥ ಗಿಡ. ಯಾವ ಹಕ್ಕಿ ತಂದಿಕ್ಕಿತೋ ಅಶ್ವತ್ಥದ ಬೀಜವನ್ನ. ಚಿನ್ಮೀ ಅಲ್ಲಿ ತುಲುಪಿದಾಗ ಮಂಜು ನುಂಗಿದಂತೆ ಗಾಳಿ ತಣ್ಣಗಿತ್ತು. ಓ ಮಳೆ ಸುರಿದೇ ಬಿಡುತ್ತದೆ.
ತೋಪಿನೊಳಗೆ ಪರಿಚಯದ ಮರಗಳ ನಡುವೆ ಅಡ್ಡಾಡಿ ಬಂಡೆಯ ಮೇಲೆ ಕೂರುವಷ್ಟರಲ್ಲಿ ಪಟ್ ಪಟ್ ಪಟ್ ಶುರುವಾಗೇಬಿಡ್ತು.
ಓ ಬಂತು ಮಳೆ. ಸಾಲದೇ.. ಮನ ಮರೆಯಲು, ಮನಸ್ತಾಪದ ಕೊಳೆ ತೊಳೆಯಲು, ಬರಡು ಹೃದಯಕ್ಕೆ ಹನಿಉಣಿಸಲು ಈ ಮಳೆಯೊಂದು ಸಾಲದೇ ಬದುಕಿನಲ್ಲಿ! ಮೇಲೆ ನೋಡಿದರೆ ಆಕಾಶವೆಂಬ ಮಾಯೆಯಿಂದ ಮಾಯೆಯಾಗಿಯೇ ಸುರಿವ ಮಳೆ . ಈ ಹೊತ್ತಿನವರೆಗೆ ಎದೆಯಲ್ಲಿರುವ ನೋವು ದುಗುಡ, ಜಗಳವೆಂಬ ಧೂಳ ಕಣಗಳೇ ಇಡೀ ಬದುಕಿಗೆ ಭಾರ ಭಾರ, ಅದನೆ ಹೊರಲಾರೆನೆಂದು ಗೋಳಾಡುತ್ತಿದ್ದರೆ, ಮಳೆ ನೋಡು ಎಷ್ಟೊಂದು ದೊಡ್ಡದಿದೆ. ಏ ಹೆಣ್ಣೇ..ಭಾರವಾದ ಅಂತರಂಗ ಎಷ್ಟು ಚಿಕ್ಕದು ನೋಡು, ಮಳೆ ತುಂಬಿಕೊ ಒಳಗೆ.. ಅಂತರಂಗದ ಪರಿಧಿ ಹಿರಿದಾಗುವುದ ಒಮ್ಮೆ ನೋಡು ಎನ್ನುತ್ತಾ ಧೋ ಎನ್ನಲಾರಂಭಿಸಿದೆ. ಒದ್ದೆಯಾಗುತ್ತಾ ಅವಳು ಸಣ್ಣಗೆ ಖುಷಿಯ ಹನಿಗಳಲ್ಲಿ ಮೀಯಲಾರಂಭಿಸಿದಳು.
ಹೌದು. ಅಲ್ಲಿ ಜಗಳ ಜಾಸ್ತಿಯಾಗಿರಬಹುದು.
ಆದರಿಲ್ಲಿ ಮಳೆಯ ಧ್ಯಾನ. ಚಿನ್ಮೀಗೆ ಏನೂ ಕೇಳಿಸದು. ಸುತ್ತಲಿನ ನಿಬಿಡ ಮರಗಿಡ, ಮನೆ, ಪರಿಸರದ ಹಂಗು ಮರೆತು ಬಂಡೆಯ ಮೇಲೆ ಮೈ ಚಾಚಿದಳು ಮಳೆಯೊಡನೆ ಹುಚ್ಚಾಗಿ. ನೆತ್ತಿಯ ಮೇಲೆ, ಕಣ್ರೆಪ್ಪೆ, ಮೂಗು ಮೂತಿಯ ಮೇಲೆ ಟಪಟಪನೆ ಬೀಳುವ ಹನಿಗಳು. ಆ ತೋಪಿನಲ್ಲಿ ಮರಗಳ ಎಲೆ ಮೇಲೆ ಬಿದ್ದ ಮಳೆ ಹನಿಗಳು ತುಸು ಬೆಳೆದು ನಂತರ ಆಕೆಯ ಮೇಲೆ ಹರಿಯಲಾರಂಭಿಸಿದವು. ಆಕಾಶಕ್ಕೆ ಮುಖವೊಡ್ಡಿದ ಚಿನ್ಮೀ ಮೇಲೆ ಕಣ್ಣು ಬಿಡಿಸಲಾರದಷ್ಟು ವೇಗವಾಗಿ ರೊಯ್ಯರೊಯ್ಯನೇ ಬೀಳುವ ಹನಿಗಳು.
ಚಿನ್ಮೀ ಕಣ್ಣಲ್ಲಿ ಆಕಾಶ. ಎದೆಯಲ್ಲಿ ತೆರೆಗಳಾಟದ ಸಮುದ್ರ. ಏ, ಈ ಏಕಾಂತದದಲ್ಲಿ ಎಷ್ಟು ಚೆಂದಾಗಿರುತ್ತದೆ ಮಳೆ. ಆದರೂ ಅವನಿರಬೇಕಿತ್ತು. ಅವನು ಅವಳೆದೆಯ ಹಾಡು.
ಪ ನಿ ಧ ನಿ ಸ …
ಮಲ್ಹಾರಕ್ಕೂ ಮಳೆಗೂ ಏನದು ಥಳುಕು..
ಬರಸನಲಾಗೇ
ಬೂಂದರಿಯಾ
ಘರಜತ ಘನಬ್ರಿಜ
ಘೋರ ಘೋರ. .
ಮಿಯಾ ಮಲ್ಹಾರದ ಚೀಸ್ ಗುನುಗಲಾರದಷ್ಟು ಗಂಟಲು ಕಟ್ಟಿತ್ತು. ಖುಷಿಯಿಂದ.
ಅವನಿಗೂ ಮಳೆ ಇಷ್ಟ. ನನಗೂ ಮಳೆ ಇಷ್ಟ. ಅದಕ್ಕೇ ನನಗವನಿಷ್ಟ ಅಂದುಕೊಳ್ಳುತ್ತಲೇ.. ಅಲ್ಲಲ್ಲ. ಈ ಪ್ರೀತಿಯ ಹುಕಿಯಲ್ಲಿ ಕಾಕತಾಳೀಯದ್ದೇ ಕಾರುಬಾರು. ಯೋಚನೆ ಯಾವಾಗಲೂ ಹೀಗೇ ಸಾಗುತ್ತದೆ. ಅವನ ಭೇಟಿಗೆ ಮುನ್ನವಷ್ಟೆ ಮಳೆಯೊಡನೆ ಒಂಟಿಯಾಗಿ ಮಾತಾಡಿದ್ದು. ಅವನೆ ಕಣ್ಣ ಹನಿಯಾಗಿ ಕುಳಿತ ಮೇಲೆ ಮಳೆ ಎಂದೂ ಅವನ ನೆನಪಿಲ್ಲದೇ ಬಂದದ್ದೇ ಇಲ್ಲ. ಪಕ್ಕದಲ್ಲೇ ಅವನಿರಬೇಕು ಈಗ. ಮಳೆಯಲ್ಲಿ ತೊಳೆದು ಹೋಗುವ, ಹುಚ್ಚು ಕೂಡ ಹೇಗೆ ಸ್ವಚ್ಛ ಮಾಡಬಲ್ಲುದು ಅಂತ ನೋಡುವ ಬಾ ಹುಡುಗ. ಈ ಹನಿಗಳು ನನ್ನ ನಿನ್ನ ನಡುವಿನ ಎಲ್ಲ ಭಾವಗಳಿಗೆ ಸ್ಪಟಿಕದ ಹೊಳಪು ನೀಡುತ್ತವೆ ಬಂದುಬಿಡು.
ಬರಬಾರದೇ ನೀನೊಂದು ಸತರ್ಿ ಮಳೆ ಹನಿಗಳ ಬೊಗಸೆಗೆ ತುಂಬಿಕೊಳ್ಳಲು.
ಅವೆಲ್ಲ ಕವನ ಕತೆಗಳಲ್ಲಿ, ಎಸ್ಸಮ್ಮೆಸ್ಸುಗಳಲ್ಲಷ್ಟೇ ಏಕಿರಬೇಕು. ನಿಜವಾಗಿಯೂ ಆಕಾಶದ ಅಮೃತಹನಿಗೆ ಕೈಯೊಡ್ಡಿದರೆ ಎದೆಯೊಳಗೆ ಚಿಲುಮೆ ಉಕ್ಕುವುದ ನೋಡಬಹುದು.. ಇಷ್ಟು ದೊಡ್ಡ ಬದುಕಿನಲ್ಲಿ ಎಷ್ಟೊಂದು ವರ್ಷ ಬದುಕುತ್ತೇವೆ. ಅವುಗಳಲ್ಲಿ ಹತ್ತಾರು ಕ್ಷಣಗಳಾದರೂ ಈ ಉನ್ಮಾದದ ಮಳೆಯಾಟದಲ್ಲಿ ಕಳೆಯೋಣ ಪ್ರೀತಿ. ನಿನ್ನ ಪ್ರೀತಿ ಹನಿಗಳಂತೆಯೇ ಮಳೆಯ ಹನಿಗಳು, ಮಳೆಯ ಹನಿಗಳಂತೆಯೇ ನೀನು. ಕಣ್ಮುಚ್ಚಿ ಹೊರಳಿದ ಅವಳ ಒಳಗಣ್ಣಲ್ಲಿ ಮಳೆಹನಿಗಳದೇ ಬೆಳ್ಳಿ ಮಂಟಪ. ಬೀಸುವ ಗಾಳಿಯೆಲ್ಲ ಶಾಂತವಾಗಿ, ಗಾಳಿಯ ರಭಸಕ್ಕೆ ಉದುರಿದ ಹಸಿರೆಲೆಗಳೆಲ್ಲ ನೆಲಕ್ಕೆ ಹೊಸ ನೋಟ ನೀಡಿ, ಹರಿವ ನೀರಿನಲ್ಲಿ ತೇಲುತ್ತಾ ಸಾಗುವ ಹೂವು ಎಲೆ ಕಸಕಡ್ಡಿಗಳು ಜುಳುಜುಳು ಸದ್ದಿಗೆ ನತರ್ಿಸುತ್ತಿದ್ದರೆ ಚಿನ್ಮೀಯ ಕಣ್ಣಲ್ಲಿ ತಂಪು ಬೆಳಕಿನ ಲೋಕ. ಆರಂಭದ ಹೊಯ್ದಾಟಗಳ ಮುಗಿಸಿದ ಮಳೆ ಏಕಪ್ರಕಾರವಾಗಿ ಲಾಲಿಯಂತೆ ನೆಲವ ಸಂತೈಸುತ್ತಿತ್ತು. ಮಳೆಮಾಯಿಯ ಸಂತೃಪ್ತಿ, ಅವನೊಡನೆ ಆತ್ಮತೃಪ್ತಿ, ಹಸಿ ಹಸಿ ಮನದೊಳಗೆ ಖುಷಿಯ ಪುಟ್ಟ ಪುಟ್ಟ ಹಸಿರು ಮೊಳಕೆಗಳು.
ಬ್ಲಿಸ್!
ಅಂತ ಅವನಿಗೊಂದು ಮೆಸೇಜ್ ಕಳಿಸಬೇಕೀಗ.
ಚಿನ್ಮೀ ಚಿನ್ಮೀ . .
ಅಮ್ಮ ಚಿನ್ಮೀಯನ್ನ ತಟ್ಟಿ ತಟ್ಟಿ ಕರೆಯುತ್ತಿದ್ದರು. ಚಳಿಯಲ್ಲಿ ನಡುಗುತ್ತಿದ್ದ ಅವಳಿಗೆ ಅಡ್ಡಲಾಗಿ ಕೊಡೆ ಹಿಡ್ಕೊಂಡಿದ್ದರು. ಎಂಥಾಗಿದೆ ನಿಂಗೆ. ಈಪರಿ ಮಳೆಯಲ್ಲಿ ಹೀಗೆ ಬಿದ್ಕೊಂಡಿದಿಯಲ್ಲ. ನಿಜ್ವಾಗ್ಲೂ ನಿಂಗೆ ಗಾಳಿಯಾಗಿದೆ. ಬಾ. ಬಾ .. ಎನ್ನುತ್ತಾ ಎಬ್ಬಿಸಿದರು.
ಅರೆ ತೆರೆದ ಕಣ್ಣ ಮುಂದೆ ಅರೆಬರೆ ನೆಂದ ಅಮ್ಮ ಮತ್ತು ಕೊಡೆಯಂಚಿಂದ ತೊಟ್ಟಿಕ್ಕುವ ಹನಿಗಳು.
ಅಮ್ಮಾ.. ನಿಂಗಾದರೂ ಗೊತ್ತಾ.. ಮಳೆಮೀಹದ ಸುಖ, ಅವನ ಮೋಹದ ಜ್ವರ.. ನಿನ್ನಷ್ಟೇ ಆಪ್ತವಾದ ಕ್ಷಣಗಳನ್ನು ತಂದುಕೊಡುವ ಮಳೆ ಮಾಯಿ ಬರುವಾಗಲೂ ಯಾಕಮ್ಮಾ ಮನೆಯಲ್ಲಿ ಜಗಳದ ದಟ್ಟ ಹೊಗೆ. ಎಲ್ಲ ಮರೆತು ಎರಡು ಕ್ಷಣ ನಾನೂ ನೀನೂ ಹನಿಗಳ ಹಿಡಿದು ನಕ್ಕುಬಿಡುವ. ಮಣಭಾರದ ಮನಸ್ಸು ಕರಗಿಯೇ ಬಿಡುವುದಲ್ಲ. ಚಿಕ್ಕಮ್ಮಂಗೂ ಹೇಳು. ಆಮೇಲೆ ಅವಳಿಗೂ ಗೊತ್ತಾಗುತ್ತದೆ ಜಗಳವನ್ನು ತಪ್ಪಿಸುವುದು ಹೇಗೇ ಅಂತ…
-ಅಂತೆಲ್ಲಾ ಅಮ್ಮಂಗೆ ಹೇಳಬೇಕೆಂದುಕೊಂಡಳು.
ಆದರೆ,
ಸಖಿ ಮೊರೆ ರುಮಜುಮ
ಬಾದಲ್ ಭರ್ಸೇ
ರೆಹನಾ ಕಾ ಅಂಧೇರಿ
ಖಾಲಿ ಬಿಜಾಲಿ ಭರ್ಸೆ
ಕೈಸೇ ಜಾವೂಂ
ಜಲಭರಿ ಬಾದಲ್ ಭರ್ಸೇ...
ರಾಗ್ ದುಗರ್ಾಕ್ಕೆ ಕೊಡೆಯ ಹಿಡಿಯ ಮೇಲೆ ತಾಳ..
ಹೇಗೆ ತಲುಪಲಿ ಅವನಾ..
ಸುಖಾ ಸುಮ್ಮನೇ ಕೊಡೆ ತಿರುವುತ್ತಾ ನೀರಿದ್ದಲ್ಲಿಯೇ ಪಚಕ್ ಪಚಕ್ ಅಂತ ಹೆಜ್ಜೆ ಹಾಕಿ, ಏಯ್, ಶ್ ಶ್ ಸುಮ್ಮನೇ ಬಾ ಅಂತ ಅಮ್ಮನಿಂದ ಬೈಸಿಕೊಂಡಳು.
ಮನೆ ಹತ್ರ ಬಂತು. ಅವನ ಮದುವೆಯಾಗ್ತೇನೆ ಅಂತ ಇವತ್ತು ಅಮ್ಮನಿಗೆ ಹೇಳಬೇಕು ಅಂತ ಕೊಡೆಯಂಚಿಗೆ ಕೈ ಹಿಡಿದು ಕಾದಳು ಹನಿಗಾಗಿ.
ಅಷ್ಟರಲ್ಲಿ,
ಅಮ್ಮ ಅರ್ಧಕ್ಕೇ ನಿಂತು,
ಚಿಕ್ಕಮ್ಮಂಗೆ ಸಿಟ್ಟು ಬಂದಿದೆ. ಭಯಂಕರ ಮಳೆ ಸುರೀತಿದ್ದಾಗ ಕೆಳಗಿನ ಮನೆ ಶಾಂತಮ್ಮ ಬಂದಿದ್ದರು. ಅವರ ಮಾವಿನ ಮರದ ಕೆಳಗೆ ನಮ್ಮ ಗುಡುವು ಉಂಟಲ್ಲ. ಅದು ಮಳೆಗೆ ಕರಗಿ ಹೋಗಿದೆ. ನೀರು ಅವರ ಜಾಗಕ್ಕೆ ಹರಿದು ಹೋಗುತ್ತದೆ ಅಂತ ಸರೀ ಬೈದ್ರು. ಚಿಕ್ಕಮ್ಮನೂ ಬಿಡಲಿಲ್ಲ. ನಿಮ್ಮ ಮರದ ನೀರೇ ಬಿದ್ದು ನಮ್ಮ ಗಡುವಿನ ಬದು ಕರಗಿದ್ದು ಅಂತ ವಾದ ಮಾಡಿದಳು. ಆದರೆ ಶಾಂತಮ್ಮನ ಮಗ ಆ ದೊಡ್ಡ ಪರಂಬೋಕು ತೋಡಿನ ನೀರೂ ಅವರ ಜಾಗಕ್ಕೆ ಬರಬಾರದು ಅಂತ ಕಟ್ಟ ಹಾಕಿದ್ದಾರೆ. ಕೊಟ್ಟಿಗೆಯೊಳಗೆ ನೀರು ಹೊಕ್ಕಿದೆ. ಮನೆ ಸುತ್ತಾ ನೀರೇ ನೀರು. ದನ ಕುಣೀತಾ ಇದೆ ಪಾಪ. ನಿನ್ನ ಚಿಕ್ಕಪ್ಪ ಬೇರೆ ಆಚೆ ಬೈಲಿನಲ್ಲಿ ಗದ್ದೆಗೆ ನೀರು ಕಟ್ಟಲು ಹೋಗಿದ್ದಾರೆ. ನೀ ಸುಮ್ಮನಿರು. ಹೀಗೆ ಹುಚ್ಚುಚ್ಚು ಮಾಡ್ಬೇಡ.
ಚಿನ್ಮೀಗೆ ಹೂಂ ಅನ್ನಲೂ ಬಿಡದೇ ಅಮ್ಮ ದಡಬಡಾ ಅಂತ ಹೇಳಿ ಮನೆಗೆ ಹೋದಳು.
ಮಳೆ ಕೈದಾಗುತ್ತಿತ್ತು. ಮನೆ ಹಿಂದಿನ ಗುಡ್ಡದ ಮೇಲಿಂದ ಕೆಂಪು ಕಾಡ ನೀರು ಬಸಬಸ ಅಂತ ಸುರೀತಾನೇ ಇತ್ತು. ಮಳೆ ಮುಗಿದು ಇನ್ನೊಂದು ಗಂಟೆಯಾದರೂ ಕಾಡನೀರು ಬರುತ್ತಲೇ ಇರುತ್ತದೆ. ಗುಡ್ಡದ ನೀರೆಲ್ಲಾ ಇದೇ ತೋಡಲ್ಲಿ ಹೋಗೋದು.
ಬಾನ ಪ್ರೀತಿಯ ಸೋನೆ ಉಂಡ ಭೂಮಿಯ ಕೆಂಪು ನೀರು ತೆಕ್ಕೆ ಗಾತ್ರದಲ್ಲಿ ಹರಿದು ಬರುತ್ತಲೆ ಇರುವುದ ತಡೆವರಾರು. ತಡಮೆ ಹತ್ರ ಇರುವ ಸಣ್ಣ ತೋಡಿನಲ್ಲಿ ನೀರು ಹೋಗೋದಕ್ಕೆ ಜಾಗ ಸಾಕಾಗುವುದಿಲ್ಲ.
ಕಾಡನೀರಿನ ಈ ತೋಡು ಮಳೆಗಾಲದಲ್ಲಿ ಅದು ಹೇಗೋ ಗೊತ್ತಿಲ್ಲದೇ ಆಪ್ತವಾಗಿಬಿಡುತ್ತದೆ. ಮಳೆ ಬಂದಾಗಲೆಲ್ಲಾ ಅಲ್ಲೊಂದು ಝರಿ ನೀರ ಹಾಡು ಶುರುವಾಗುತ್ತದೆ. ಪಿರಿಪಿರಿ ಅಂತ ಸಪೂರ ಝರಿ ನೀರ ದನಿ ಮಳೆ ಜೋರಾದರೆ ಭೋರ್ಗರೆಯುತ್ತದೆ. ಮಳೆ ಮುಗಿದ ಮೇಲೂ, ಕಛೇರಿ ಮುಗಿದ ನಂತರವೂ ಏನೋ ಗುನುಗುವ ಹಾಡುಗಾತರ್ಿಯಂತೆ ಸದ್ದು ಮಾಡುತ್ತದೆ.
ಜಗಲಿ ಮೇಲೆ ಕುಳಿತವಳಿಗೆ ಚಿಕ್ಕಮ್ಮನ ಬೈಗಳು ಕೇಳಿಸುತ್ತಲೇ ಇತ್ತು. ಅಸಹಾಯಕತೆಗೆ ಮಾಡುವುದಾದರೂ ಏನು ?
ಮಾಡಿನ ಧಾರೆ ನೀರು ಪಾತ್ರೆ ತುಂಬುತಿತ್ತು. ಬಾನು ಬೆಳ್ಳಾಗುತ್ತಿದ್ದರೂ ಚಿಕ್ಕೆ ಮೂಡುವ ಸಮಯ. ಕೊನೆಯ ಬಾರಿ ಅಡ್ಡಾಡಿ ಗೂಡು ಸೇರುವ ತವಕದಲ್ಲಿ ಹಕ್ಕಿಗಳು. ನೀರಿಗೆ ಯಾವ ದಾರಿ ಯಾವ ನೇಮ ? ತಗ್ಗಿದ್ದಲ್ಲಿ ಶರಣಾಗುವ, ಬೃಹತ್ತನ್ನು ಸೇರುವ ಓಟವಲ್ಲದೆ ನೀರಿಗೇನು ಗೊತ್ತು ನನ್ನದು ತನ್ನದು ಎಂಬ ಪಾಡು. ಆದರೆ ನೀರು ಏರುತ್ತಿತ್ತು. ಮಣ್ಣಿನ ಗೋಡೆಯ ಸುತ್ತಲೂ ನೀರು ಹೀಗೆ ಏರುವುದು ಒಳ್ಳೆದಲ್ಲ.. ಕೊಟ್ಟಿಗೆಯ ನೀರೊಳಗೆ ಕಾಲಿಡುತ್ತಾ ಹೋದವಳೆ ಸಣ್ಣ ಹಾರೆ ಹೆಗಲಮೇಲಿಟ್ಟುಕೊಂಡು ನೀರ ತೋಡಿನ ಕಟ್ಟಿನ ಬಳಿ ಹೋದಳು.
ದೊಡ್ಡ ಕಲ್ಲೊಂದನ್ನು ಇರಿಸಿ ಮಣ್ಣು ಜಡಿದು ತೋಡು ಮುಚ್ಚಿದ್ದರು. ನೀರಲ್ಲಿ ಕಾಲೂರಿ ಕಲ್ಲು ಸರಿಸುವುದು ಕಷ್ಟವೇ ಆದರೂ ಕಲ್ಲು ತಳ್ಳಿಯೇ ಬಿಟ್ಟಳು. ಮಣ್ಣು ಕೆಳ ದೂಡಿದ್ದೇ ತಡ,  ನೀರು ಕಟ್ಟು  ಹರಿದು ಕೆಳಗೆ ಧುಮುಕಲಾರಂಭಿಸಿತು.
ಧೋ.. ಧಾರೆ ಧಾರೆ !!
ಅವಳು ನಿಂತು ನೋಡುತ್ತಲೇ ಇದ್ದಳು ಹಾಡು ಮರೆತ ಹಕ್ಕಿಯಂತೆ.

‍ಲೇಖಕರು avadhi

June 19, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This