ಕೋಮು ಸೌಹಾರ್ದತೆ ಕಾಪಾಡುತ್ತಾ..

ಡಾ.ಕೆ.ಷರೀಫಾ

ನಮ್ಮ ಸಮಾಜದಲ್ಲಿ ಸೌಹಾರ್ದ ಬದುಕಿಗೆ ಭಂಗ ತರುವಂತಹ ಅನೇಕ ಸಂಗತಿಗಳಿವೆ. ಶಾಂತಿಯ ಮತ್ತು ಸೌಹಾರ್ದ ಬದುಕಿಗೆ ಅಡ್ಡಿಯಾಗುವ ಅನೇಕ ಅಂಶಗಳು ದೇಶದಲ್ಲಿ ತಾಂಡವವಾಡುತ್ತಿವೆ. ಕೋಮುವಾದಿಗಳು ಮೂರು ದಶಕಗಳಿಂದ ಹೆಚ್ಚು ಕ್ರಿಯಾಶೀಲರಾಗುತ್ತಿರುವ ಈ ಸಂದರ್ಭದಲ್ಲಿ ಮಹಿಳೆಯರು ಮತಾತೀತವಾಗಿ ಸೌಹಾರ್ದ ಸಂದೇಶವನ್ನು ನೀಡುತ್ತಿದ್ದಾರೆ. ದೇಶ, ಪ್ರದೇಶ, ಜಾತಿ, ಧರ್ಮ, ಲಿಂಗ ಎಲ್ಲಕ್ಕೂ ಮಿಗಿಲಾಗಿ ಮೊದಲು ಮಾನವ ಧರ್ಮವಿದೆ ಎಂದು ಸಾರುತ್ತಿದ್ದಾರೆ.

ಭಾರತ ಬಹುಸಂಸ್ಕೃತಿಗಳ, ಬಹುಧರ್ಮಗಳ ನಾಡಾಗಿದೆ.  ನಾಡಿನ ಪ್ರಗತಿಗೆ, ಅಭಿವೃದ್ದಿಗೆ ಸೌಹಾರ್ದಯುತ ವಾತಾವರಣ ಇರುವುದು ಬಹಳ ಮುಖ್ಯವಾಗಿದೆ. ಯಾವತ್ತೂ ಕಟ್ಟುವ ಸಂಸ್ಕೃತಿ ಮಹಿಳೆಯದೇ ಹೊರತು ಕೆಡಹುವುದಲ್ಲ. ಹೆಣ್ಣು ಅವಳದೊಂದು, ಜಾತಿ, ಧರ್ಮ, ಕುಟುಂಬಕ್ಕಿಂತ ಮೊದಲು ಅವಳೊಬ್ಬ ತಾಯಿಯಾಗುತ್ತಾಳೆ. ತಾಯಿಯದು ಪೊರೆಯುವ ಕೆಲಸವೇ ಹೊರತು ಅಶಾಂತಿ ಹರಡುವುದಲ್ಲ. ಚರಿತ್ರೆಯುದ್ದಕ್ಕೂ ಅವಳು ಸೌಹಾರ್ದದ ಸಂಸ್ಕೃತಿಯನ್ನು ಕಾಪಾಡಿಕೊಂಡೇ ಬಂದವಳಾಗಿರುತ್ತಾಳೆ.

ಹಿಂದಿನ ಕಾಲದಲ್ಲಿ ರಾಜರುಗಳು ಯುದ್ಧಗಳನ್ನು ತಡೆಯುವುದಕ್ಕಾಗಿ, ಹೆಣ್ಣನ್ನು ಶತ್ರು ರಾಜನೊಂದಿಗೆ ಸೌಹಾರ್ದದಿಂದಿರಲು ಮದುವೆ ಮಾಡಿ ಕೊಡುವ, ಅಥವಾ ಎರಡೂ ಕುಟುಂಬಗಳ ನಡುವಿನ ವೈಮನಸ್ಸು ,ಯುದ್ಧಗಳನ್ನು ತಡೆಯಲು ತಡೆಯುವುದಕ್ಕಾಗಿ ಹೆಣ್ಣುಮಕ್ಕಳನ್ನು ಬಳಸಿಕೊಳ್ಳುತ್ತಿದ್ದರು. ಮಹಿಳೆ ಶಾಂತಿ, ಕರುಣೆ ಮತ್ತು ಸಹನೆಯ ಗುಣವುಳ್ಳವಳಾಗಿರುವುದರಿಂದ, ಅವಳು ಎಂದಿಗೂ ಅಶಾಂತಿ ಮತ್ತು ಕ್ರೌರ್ಯವನ್ನು ಬೆಂಬಲಿಸುವುದಿಲ್ಲ.

ಭಾರತದಲ್ಲಿ ಅನೇಕ ಕೋಮು ದಂಗೆ, ಗಲಭೆ, ಕ್ರೌರ್ಯಗಳು ನಡೆದಿವೆ. ಪ್ರತಿ ಬಾರಿಯ ಗಲಭೆಗಳಲ್ಲಿ ಮಹಿಳೆಯೇ ಮೊದಲ ಬಲಿ ಪಶುವಾಗುತ್ತಾಳೆ. ಒಂದು ಧರ್ಮದವರು ಇನ್ನೊಂದು ಧರ್ಮದ ಮಹಿಳೆಯರ ಮೇಲೆ ಅಕ್ರಮಣ, ದೌರ್ಜನ್ಯ ಎಸಗುತ್ತಾರೆ. ಕೋಮುದಂಗೆಗಳ ಸಮಯದಲ್ಲಿ ಒಂದು ಧರ್ಮದ ಮಹಿಳೆ ಮತ್ತೊಂದು ಧರ್ಮದವರ ಮಾನ ಮತ್ತು ಜೀವವನ್ನು ಕಾಪಾಡಿದ ಹಲವಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.

ನಾನು ಚಿಕ್ಕವಳಿದ್ದಾಗ ನಮ್ಮ ತಂದೆ ಇಂತಹ ಅನೇಕ ಘಟನೆಗಳನ್ನು ಹೇಳುತ್ತಿದ್ದರು. ಅದರಲ್ಲಿ ನನ್ನ ನೆನಪಿನಲ್ಲಿರುವುದು ಈ ಘಟನೆ.  ದೇಶ ಅದಾಗಲೇ ಬ್ರಿಟಿಷರಿಂದ ಸ್ವಾತಂತ್ರ ಪಡೆದುಕೊಂಡಾಗಿತ್ತು. ಆದರೆ ಹೈದರಾಬಾದಿನ ನಿಜಾಮರು ಭಾರತ ಒಕ್ಕೂಟಕ್ಕೆ ಸೇರಲು ನಿರಾಕರಿಸಿದ್ದರು. ಆ ಕಾರಣಕ್ಕೆ ಅಲ್ಲಿ ರಜಾಕಾರರ ಚಳುವಳಿ ನಡೆದು, ಮುಂದೆ ಅದು ಕೋಮು ದಂಗೆಗಳ ಸ್ವರೂಪ ಪಡೆಯಿತು. ಆ ಸಂದರ್ಭದಲ್ಲಿ ಕಂಡ ಕಂಡಲ್ಲಿ ಒಂದು ಧರ್ಮದವರು ಇನ್ನೊಂದು ಧರ್ಮದವರನ್ನು ಕೊಚ್ಚಿ ಹಾಕುತ್ತಿದ್ದರು.

ಆಗ ಅಪ್ಪನನ್ನು ಇನ್ನೊಂದು  ಧರ್ಮದ ಮಹಿಳೆ ಮೂರು ದಿನಗಳವರೆಗೆ ತನ್ನ ಮನೆಯಲ್ಲಿಟ್ಟುಕೊಂಡು ಕಾಪಾಡಿದ್ದಳಂತೆ. ಹೀಗೆ ಯಾವ ಧರ್ಮದ ಹಂಗೂ ಇಲ್ಲದಂತೆ ಮಾನವ ಧರ್ಮವನ್ನು ಕಾಪಾಡಿದ ತಾಯಂದಿರು ಎಲ್ಲ ಧರ್ಮಗಳಲ್ಲೂ ಇದ್ದಾರೆ.  ಇಂತಹ ಅಮ್ಮಂದಿರು ಮಾನವ ಸಂಬಂಧಗಳ ಬಗ್ಗೆ, ಬದುಕಿನ ಬಗ್ಗೆ, ಭವಿಷ್ಯದ ಬಗ್ಗೆ ಕಾಳಜಿಯುಳ್ಳವರಾಗಿರುತ್ತಾರೆ. ಅವಳು ಕರುಣೆ, ಪ್ರೀತಿಯ ಸಂಕೇತವಾಗಿರುತ್ತಾಳೆ. ಯುದ್ಧದ ರಕ್ತಪಾತ ಅವಳಿಗೆ ಬೇಕಿಲ್ಲ. ಹಸಿರು, ನೀರು, ನದಿ, ವನಗಳೇ ಅವಳ ಲೋಕ. ಪ್ರಕೃತಿಯನ್ನು ಪೋಷಿಸಿದ ಅವಳು ಸಂತತಿಯನ್ನೂ ಸಂಭಾಳಿಸುತ್ತಾಳೆ. ಯಾವತ್ತೂ ಯುದ್ದ, ಕ್ರೌರ್ಯ ದಂಗೆಗಳ ಮುಂಚೂಣಿಯಲ್ಲಿ ಪುರುಷ ಇರುತ್ತಾನೆಯೇ ಹೊರತು ಮಹಿಳೆಯಲ್ಲ. ಸೌಹಾರ್ದದ ತಂಪು ಗಾಳಿ, ಸಹ್ಯ ವಾತಾವರಣ ನಮಗೆ ಬೇಕಾಗಿದೆಯೇ ಹೊರತು ಅಸಹಿಷ್ಣುತೆಯ ಬೆಂಕಿ ಅವಳಿಗೆ ಬೇಡ.

ಕರುಣೆಯ ಮೂರ್ತಿಯಾದ ತಾಯಂದಿರ ಕಾರಣದಿಂದಲೇ ದೇಶ ವಿನಾಶದ ಅಂಚಿಗೆ ಸಾಗದೇ ಶಾಂತಿಯತ್ತ ಸಾಗುತ್ತಿದೆ. ಆದ್ದರಿಂದಲ್ಲೇ ಹೆಣ್ಣನ್ನು ಭೂಮಿಗೆ ಹೊಲಿಸಲಾಗುತ್ತದೆ. ಜಗತ್ತಿನ ಎಲ್ಲ ಜನಾಂಗಗಳೂ, ಬುಡಕಟ್ಟುಗಳೂ ಬದುಕಿದ ನಿಜವಾದ ಸಂಸ್ಕೃತಿಯ ಬೇರುಗಳೇ ಹೆಣ್ಣುಮಕ್ಕಳಾಗಿದ್ದಾರೆ. ಹೆಣ್ಣು ತನ್ನೆಲ್ಲ ಶಕ್ತಿ ಮೀರಿ ಸೌಹಾರ್ದದ ಕೊಂಡಿಗಳನ್ನು ಕಾಪಾಡಿಕೊಂಡು ಬಂದಿದ್ದಾಳೆ. ಏಕೆಂದರೆ, ದಂಗೆಗಳಲ್ಲಿ, ಯುದ್ಧಗಳಲ್ಲಿ, ಗಲಭೆಗಳಲ್ಲಿ ಸಾಕಷ್ಟು ಸಾವು ನೋವುಗಳನ್ನು ಅವಳು ಕಂಡಿದ್ದಾಳೆ. ಹಾಗಾಗಿಯೇ ಅವಳು ಎಂದಿಗೂ ಜೀವಪರ ನಿಲುವನ್ನೇ  ಹೊಂದಿದವಳಾಗಿರುತ್ತಾಳೆ.

ಧಾರ್ಮಿಕ ಸಹನಶೀಲತೆಯನ್ನು ತೋರಿದ ಅವರು ಕೊಡುಕೊಳೆಯ ಸಂಸ್ಕೃತಿಯನ್ನು ದಾಖಲಿಸಿದ್ದಾರೆ. ಹಿಂದುಗಳೇ ಇಲ್ಲದ ಊರಿನಲ್ಲಿ ಮುಸ್ಲೀಮರೇ ಗಣೇಶನ್ನು ಪೂಜಿಸುವುದು ಅಥವಾ ಮುಸ್ಲಿಮರೇ ಇಲ್ಲದ ಊರಿನಲ್ಲಿ ಹಿಂದುಗಳೇ ಉರುಸು ನಡೆಸುವ ಸಂಸ್ಕೃತಿಕ ನಡೆಗಳು ನಮ್ಮ ಸಮಾಜದಲ್ಲಿ ಮಾದರಿ ನಡೆಗಳಾಗಿವೆ. ಇಲ್ಲಿ ಎಲ್ಲರಿಗೂ ಸುಂದರ ಮಾನವೀಯ ಬದುಕು ಕಟ್ಟಿಕೊಳ್ಳಲು ಅವಕಾಶವಿದೆ.

ಸಮಾಜದಲ್ಲಿ ಶೇಕಡಾ 50 ರಷ್ಟಿರುವ ಮಹಿಳೆಯರು ಜೀವಪರವಾಗಿರುವುದರಿಂದಲೇ ಇಂದಿಗೂ ಜನ ನೆಮ್ಮದಿಯಿಂದ ಬದುಕುವಂತಾಗಿದೆ. ಶಾಂತಿಯನ್ನು ಕದಡುವ ಎಷ್ಟೇ ಪ್ರಯತ್ನಗಳಾದರೂ ಅವಳು ಮತ್ತೇ ಸೌಹಾರ್ದದ ಸೇತುವೆಯನ್ನು ಕಟ್ಟುತ್ತಾಳೆ. ಏಕೆಂದರೆ ಅವಳು ಎಲ್ಲ ಧರ್ಮಗಳಿಗಿಂತ ಮೊದಲು ತಾಯಿಯಾಗಿದ್ದಾಳೆ. ಧರ್ಮಾತೀತವಾಗಿ ಎಲ್ಲರನ್ನೂ ಪೋಷಿಸುವವಳೂ ಅವಳೇ ಆಗಿದ್ದಾಳೆ. ದಂಗೆಯ ಸಂದರ್ಭದಲ್ಲೂ, ಯುದ್ಧಗಳ ಸಂದರ್ಭದಲ್ಲೂ ಗಾಯಾಳುಗಳ ಸೇವೆಯನ್ನು ಮಹಿಳೆಯರು ಮಾಡಿದ್ದಾರೆ.

ಪೈಗಂಬರರ ಕಾಲದಲ್ಲಿಯೂ ನಡೆದ ಒಂದು ಯುದ್ಧದ ನಂತರ ಯುದ್ಧ ಭೂಮಿಯಲ್ಲಿ ಬಿದ್ದಿದ್ದ ಗಾಯಾಳುಗಳ ಸೇವೆಯನ್ನು ಪೈಗಂಬರರ ಪತ್ನಿಯರು ಮಾಡಿದ ಉದಾಹರಣೆಗಳಿವೆ. ಶರಣ, ಸೂಫೀ, ಸಂತರ ನಾಡಿನಲ್ಲಿ ಬೆಂಕಿ ಹಚ್ಚುವ ಕೈಗಳು ಕೇವಲ ಕೆಲವೇ ಆದರೆ, ಅದನ್ನು ನಂದಿಸುವ ಕೈಗಳು ಸಾವಿರಾರು ಇವೆ. ಜನಪದರು ಬಯಸುವ ನೆಮ್ಮದಿಯ ನೆಲೆಗಳನ್ನು ಅವಳೂ ಬಯಸುತ್ತಾಳೆ. ನನ್ನ ಅಮ್ಮ ಇಡೀ ಮೊಹಲ್ಲಾಕ್ಕೇ ಅಮ್ಮ ಆಗಿದ್ದಳು. ಕೇರಿಯಲ್ಲಿ ಯಾರಾದರೂ ಕಾಯಿಲೇ ಬಿದ್ದರೆ ತಕ್ಷಣ ಅವರ ಆರೈಕೆಗೆ ನಿಲ್ಲುತ್ತಿದ್ದಳು.

ಬಸ್ಸಮ್ಮಳಿಗೆ ಹೆರಿಗೆ ನೋವು ಆರಂಭವಾದರೆ, ಅವಳ ಹೆರಿಗೆ ಮಾಡಿಯೇ ಮನೆಗೆ ಬರುತ್ತಿದ್ದಳು. ಅವಳಿಗೆ ಆ ಧರ್ಮ ಈ ಧರ್ಮ ಎಂಬ ಭೇದವಿಲ್ಲ. ನಮ್ಮ ಹಬ್ಬದ ಸುರುಕುಂಬಾ ಅವರ ಮನೆಗೂ ಅವರ ಮನೆಯ ಒಬ್ಬಟ್ಟು ಹೋಳಿಗೆ ನಮ್ಮ ಮನೆಗೂ ರವಾನೆಯಾಗುತ್ತಿದ್ದವು. ಹೀಗೆ ನಡೆ ,ನುಡಿ,ಧರ್ಮ, ಜಾತಿ ಆಚಾರ, ವಿಚಾರ ಎನೇ ಆಗಿದ್ದರೂ ಸೌಹಾರ್ದದ ನಡೆ ಅವಳದಾಗಿರುತ್ತಿತ್ತು. ಹೀಗೆ ಸಮಾಜದಲ್ಲಿ ಕೊಡುಕೊಳ್ಳುವಿಕೆಯಿಂದ ಸಹಜ ಮಾನವರಾಗಿ ಬದುಕಿದವರು ನಮ್ಮ ಜನಪದರು.

ಚಿತ್ರಕೃಪೆ: ಗೂಗಲ್

ನೆಮ್ಮದಿಯಿಂದ ಬದುಕುತ್ತಿರುವ ಜನರ ಮಧ್ಯ ಕೋಮು ಭಾವನೆಗಳನ್ನು ಹುಟ್ಟು ಹಾಕಿ ಅದನ್ನು ತಮ್ಮ ಓಟುಗಳಾಗಿ ಪರಿವರ್ತಿಸಿಕೊಳ್ಳುತ್ತಿರುವ ರಾಜಕಾರಣದ ಹುನ್ನಾರಗಳನ್ನು ಜನ ಅರಿತಿದ್ದಾರೆ. ಹೆಣ್ಣು ಎಂದಿಗೂ ಶಾಂತಿ ಪ್ರೀಯಳು, ಸೌಹಾರ್ದ ಬದುಕನ್ನು ಕಲುಷಿತಗೊಳಿಸುತ್ತಿರುವ ಶಕ್ತಿಗಳು ಮುಚ್ಚು ಮರೆಯಾಗಿಯೇನೂ ಇಲ್ಲ. ಅಂತಹ ಶಾಂತಿ ವಿರೋಧಿ ಶಕ್ತಿಗಳನ್ನು ಅವಳು ಖಂಡಿಸುತ್ತಾಳೆ.

ಏಕೆಂದರೆ ಕೋಮು ದಂಗೆಗಳಲ್ಲಿ ತನ್ನ ಪ್ರೀತಿ ಪಾತ್ರರನ್ನೂ ಕಳೆದುಕೊಂಡು ಅತ್ಯಾಚಾರಕ್ಕೊಳಗಾಗುವವಳೂ ಅವಳೇ ಆಗಿರುವುದರಿಂದ  ಅವಳು ಗಲಭೆ, ದಂಗೆ , ಯುದ್ಧಗಳನ್ನು ಯಾವತ್ತೂ ಬಯಸದೇ ಲೋಕದ ಸೌಹಾರ್ದ ಸಂಸ್ಕೃತಿಗೆ ತನ್ನದೇ ಆದ ಕೊಡುಗೆ ನೀಡಿದ್ದಾಳೆ. ಭಾವೈಕ್ಯತೆಯ ನಡೆ ಇಂದಿನ ಅಗತ್ಯವಾಗಿದೆ. ಸೌಹಾರ್ದ ಸಂದೇಶವನ್ನು ಲೋಕಕ್ಕೆ ನೀಡಿ ಶಾಂತಿ ಕಾಪಾಡಬೇಕಿದೆ. ಶಾಂತಿಪ್ರೀಯ ಉದಾತ್ತ ಮಾತೆಯರು ಲೋಕವನ್ನು ಕಾಪಾಡಿದ್ದಾರೆ. ಸೌಹಾರ್ದ ಬದುಕನ್ನು ಕಟ್ಟಿದ್ದಾರೆ. ದೇಶವನ್ನು ಕೋಮು ದಳ್ಮ್ಳರಿಗೆ ತಳ್ಳುತ್ತಿರುವ ಕೋಮುವಾದಕ್ಕೆ ತಡೆಗೋಡೆಯಾಗಿ ನಿಂತು ಸೌಹಾರ್ದ ನೆಲೆಗಳನ್ನು ಸ್ಧಾಪಿಸಿದರು ನಮ್ಮ ತಾಯಂದಿರು. ದೆಹಲಿಯ ಕೋಮುಗಲಭೆಗಳಲ್ಲಿ ಮುಸ್ಲಿಂ ಮೊಹಲ್ಲಾದಿಂದ ಒಬ್ಬ ಹಿಂದೂ ಮಹಿಳೆಯನ್ನು ತನ್ನ ಪ್ರೀತಿಯ ಬುರ್ಖಾ ಅವಳಿಗೆ ತೊಡಿಸಿದ ಮುಸ್ಲಿಂ ಸೋದರಿಯು ಅಲ್ಲಿಂದ ಅವಳನ್ನು ಪಾರು ಮಾಡುತ್ತಾಳೆ . ಇಂತಹ ಸೌಹಾರ್ದದ ಜೀವಪರ ನಡೆ ಮಹಿಳೆಯದು.

ಮಾನವ ಜನ್ಮ ಬಹಳ ದೊಡ್ಡದು. ಅದನ್ನು ಕ್ಷುಲ್ಲಕ ಕಾರಣಗಳಿಗಾಗಿ ಕಳೆದುಕೊಳ್ಳಬೇಕಿಲ್ಲ ಸೌಹಾರ್ದದ ಬದುಕು ಕಟ್ಟುತ್ತಾ, ಶಾಂತಿಯನ್ನು ಕಾಪಾಡುವುದು ಅವಳ ಕರ್ತಕಾವ್ಯವಾಗಿದೆ.

‍ಲೇಖಕರು Avadhi

September 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅದು ಒಂದ ಮನೀ ಮನಷ್ಯಾ ಇದ್ದಂಗ..

ಅದು ಒಂದ ಮನೀ ಮನಷ್ಯಾ ಇದ್ದಂಗ..

ಮಾಲಾ ಮ ಅಕ್ಕಿಶೆಟ್ಟಿ ಅದ ಮನೀಗೀ ಬರೋದು ಯಾರಿಗೂ ಇಷ್ಟ ಇರಲಿಲ್ಲ. ಬ್ಯಾಡ ಬ್ಯಾಡ ಅಂದ್ರು ಅವ, ಈ ಸಣ್ಣ ಹುಡುಗ ಹೇಳ್ಯಾನ ಅಂದ ತಂದಿದ್ದ....

ನಾವು ಕಾಫಿ ಮಂದಿ..

ನಾವು ಕಾಫಿ ಮಂದಿ..

ಸುಮಾ ವೀಣಾ, ಹಾಸನ  “ಮಲೆನಾಡಿನ ಅಮೃತ”  ಅಂದರೆ ಕಾಫಿನೇ ಅಲ್ವೆ !   ಕೊರೆಯುವ ಮೈಚಳಿ  ಬಿಡಿಸಲು  ...

ರೇಮಂಡ್  ಕ್ವೀನಿಯೊ, ಕ್ರಿಸ್ ಕ್ಲಾರ್ಕ್

ರೇಮಂಡ್ ಕ್ವೀನಿಯೊ, ಕ್ರಿಸ್ ಕ್ಲಾರ್ಕ್

ಆರ್. ವಿಜಯರಾಘವನ್ ಆಲ್ಬರ್ಟ್ ಕಮೂ ತನ್ನ ಸ್ನೇಹಿತ ಮೈಕೆಲ್ ಗ್ಯಾಲಿಮಾರ್ಡ್ ಅವರೊಂದಿಗೆ ಇರುವ ಒಂದು ಛಾಯಾಚಿತ್ರವಿದೆ. ಅವರಿಬ್ಬರೂ ಕಾರು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This