ಕ್ಯಾಮೆರಾ ಹಿಡಿದು ಹಕ್ಕಿಗಳ ಹಿಂದೆ..

ಎಂ ಆರ್ ಭಗವತಿ

ಕೋಳಿ ಮೊಟ್ಟೆಯನ್ನೊಡೆದು, ಮೇಲಿನ ಚಿಪ್ಪನ್ನು ಸ್ವಲ್ಪ ತೆಗೆದು, ಒಳಗೆ ಹತ್ತಿಯನಿಟ್ಟು, ಪಿಳಿಪಿಳಿ ಕಣ್ಣನು ಬರೆದು, ಕೆಂಪು ಕೊಕ್ಕನ್ನು ಮೂಡಿಸಿ, ಹಕ್ಕಿಗಾಗಿ ಕನಸಿದ ದಿನವೊಂದಿತ್ತು. ಈಗ ನಿಂತು ನೋಡಿಕೊಳ್ಳುವಾಗ ಮನಸ್ಸು ಬಾಲ್ಯಕಾಲಕ್ಕೆ ಓಡಿಹೋಗಿ ನಿಲ್ಲುತ್ತದೆ. ಹೀಗೆ ಮೂವತ್ತೈದು ವರ್ಷಗಳ ಹಿಂದೆ ಹೈಸ್ಕೂಲಿನಲ್ಲಿ ಇದ್ದಾಗ ಕಾಂಪಾಕ್ಟ್ ಕೊಡಾಕ್ ಕೆಮರಾದಲ್ಲಿ ’ಬಿಸಿಲಕೋಲು’ ಸೆರೆಹಿಡಿದಾಗ ಇದೂ ಒಂದು ಪೋಟೋ ತೆಗೆಯುವ ವಿಷಯವಾ ಎಂಬುದು ಹತ್ತಿರದವರಿಗೆ ತಮಾಷೆಯ ವಿಷಯವಾಗಿತ್ತು. ಆದರೆ, ನನಗೆ ಅದು ಹೊಸ ವಿಷಯವಾಗಿತ್ತು.

ಈಗ ನೆನೆಸಿಕೊಂಡರೆ, ನಾನು ಆಗಲೇ ಅದನ್ನು ಕಲ್ಪಿಸಿದ್ದೆನಲ್ಲಾ ಎಂದು ಖುಷಿಯಾಗುತ್ತದೆ. ಅಂದು ತೆಗೆದ ಪೋಟೋ ಈಗ ನನ್ನ ಬಳಿ ಇಲ್ಲ. ಬಹುಶಃ ಅದನ್ನು ಹರಿದು ಹಾಕಿದ್ದೆ ಅನ್ನಿಸುತ್ತೆ. ಅವತ್ತೇ ತೆಗೆದ ಮುದ್ದಾದ ಕತ್ತೆಯ ಮರಿಯ ಪೋಟೋ ಮಾತ್ರ ಇನ್ನೂ ಇದೆ. ಮನೆಯ ಹಿಂದಿನ ಬೇಲಿಯ ಮೇಲೆ ಹಸಿರು ಹಾವೊಂದು ಹಕ್ಕಿಯ ಕತ್ತನ್ನು ಹಿಡಿದಿತ್ತು. ಅಷ್ಟು ಹತ್ತಿರದಲ್ಲಿ ಸಿಕ್ಕ ಹಕ್ಕಿಮರಿಯನ್ನು ಹಿಡಿಯಲು ಹೋಗಿದ್ದೆ. ಅಕ್ಕ ಎಚ್ಚರಿಸಿದಾಗಲೇ ಅದು ಹಾವೆಂದು ಗೊತ್ತಾಗಿದ್ದು.

ಅದನ್ನು ಈಗ ನೆನೆಸಿಕೊಂಡಾಗ, ಈಗ ಬಹುತೇಕ ಛಾಯಾಗ್ರಾಹಕರು ಫೇಸ್ಬುಕ್ಕಿನಲ್ಲಿ ಪೋಸ್ಟ್ ಮಾಡುವ ಹಸಿರು ಹಾವು ಅದು. ಆಗ ನನಗೆ ಅದರ ಪೋಟೋ ತೆಗೆಯಬಹುದೆಂದು ಗೊತ್ತಿತ್ತೇ? ಪಕ್ಷಿ-ಪ್ರಾಣಿಗಳು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿ, ಎಲ್ಲೋ ಮೂಲೆಯಲ್ಲಿ ಛಾಯಾಗ್ರಹಣದ ಎಳೆ ಅಡಗಿತ್ತೇ ಎಂದು ಈಗ ಯೋಚಿಸುತ್ತಿರುತ್ತೇನೆ. 

ಫೋಟೋ ತೆಗೆಯುವ ಆಸಕ್ತಿ ಬಹುಶಃ ತಂದೆಯವರಿಂದಲೇ ನನಗೆ ಬಂದದ್ದು. ಆಗ ಅವರ ಬಳಿ ಹೊಸದಾಗಿ ಬಂದಿದ್ದ ಪೋಲೋರಾಯ್ಡ್ ಕೆಮರಾ ಇತ್ತು. ಅದನ್ನು ಅವರ ಗೆಳೆಯರೊಬ್ಬರು ಲಂಡನ್ನಿನಿಂದ ತಂದು ಕೊಟ್ಟಿದ್ದರು. ಅದರ ಬೆಲೆ ಸುಮಾರು ನಲವತ್ತೈದು ಸಾವಿರ ಇದ್ದ ನೆನಪು. ಅದರ ಜೊತೆ ಬ್ರೊಮೈಡ್  ಪೇಪರ್ ಇರುತ್ತಿತ್ತು. ಅದು ಸುಮಾರು ಅಂಗೈಯ ಅಗಲದಷ್ಟಿತ್ತು.

ಪೇಪರಿನ ಸುತ್ತ ರಾಸಾಯನಿಕ ಲೇಪನದ ದಪ್ಪನಾದ ಪ್ಲಾಸ್ಟಿಕ್ ಹಾಳೆ ಇರುತ್ತಿತ್ತು. ಅದನ್ನು ಕೆಮರಾದೊಳಗೆ ತೂರಿಸಿ ಕ್ಲಿಕ್ ಮಾಡಿದರೆ, ಪ್ರಿಂಟು ಹೊರಬರುತ್ತಿತ್ತು. ಅದನ್ನು ಹೊರಗೆ ತೆಗೆದು ಗಾಳಿಗೆ ಮತ್ತು ಬೆಳಕಿಗೆ ಹಿಡಿದು, ಮೃದುವಾಗಿ ಅಲ್ಲಾಡಿಸಿದಾಗ ಚಿತ್ರ ನಿಧಾನವಾಗಿ ಮೂಡುತ್ತಿತ್ತು. ಆ ಪೇಪರು ಒಂದೇ ಆಕಾರದಲ್ಲಿ ಇರುತ್ತಿತ್ತು. ಬೇಕಾದ ಆಕಾರಕ್ಕೆ ಹಿಗ್ಗಿಸುವ ಹಾಗಿರಲಿಲ್ಲ. ಬ್ರೊಮೈಡ್ ಪೇಪರೊಂದಕ್ಕೆ ಸುಮಾರು ನಲವತ್ತೈದು ರೂಪಾಯಿ ಆಗುತ್ತಿತ್ತು. ಆಗಿನ ದುಬಾರಿ ಬೆಲೆಯಲ್ಲಿ ಬೇಕಾದಂತೆ ಫೋಟೋ ತೆಗೆಯುವ ಹಾಗಿರಲಿಲ್ಲ.

ಚಿಕ್ಕಂದಿನಲ್ಲಿ ಅಮ್ಮನ ಊರು ಮಲೆನಾಡಿನ ಹಳ್ಳಿಯಲ್ಲಿ ಕಾಡುಪ್ರಾಣಿಗಳನ್ನು ಹತ್ತಿರದಲ್ಲೇ ನೋಡಿದ್ದೆ. ಮನೆಯ ಹತ್ತಿರವೇ  ಆನೆ ಬಂದಿತ್ತು ಎಂದು, ಹಟ್ಟಿಯಲ್ಲಿ ಕರುವೊಂದನ್ನು ಹುಲಿ ಎಗರಿಸಿತ್ತು ಎಂಬ ಸುದ್ದಿ ಬೆಳಗ್ಗೆ ಎದ್ದಾಗ ನಮ್ಮ  ಕಿವಿಗೆ ಬೀಳುತ್ತಿತ್ತು. ಮನೆಯ ಮುಂದಿನ ಗದ್ದೆಯಲ್ಲಿ ಆನೆಯ ಹೆಜ್ಜೆಯ ಆಳಕ್ಕಿಳಿದು ಆಟವಾಡುತ್ತಿದ್ದೆವು. ಕಣದ ಆಚೆ ಹೋದರೆ ಆನೆಗಳು ಓಡಾಡುವ ಸ್ಥಳವೆಂದು ನಮ್ಮನ್ನು ಅಲ್ಲಿ ಹೋಗಲು ಬಿಡುತ್ತಿರಲಿಲ್ಲ. ರಾತ್ರಿ ಪ್ರಯಾಣ ಮಾಡುವಾಗ ಹಿಂಡು ಕಾಡೆಮ್ಮೆಗಳು, ಆನೆಗಳು, ಚಿಂಕೆಗಳು ಕಾರಿಗೆ ಅಡ್ಡವಾಗುತ್ತಿದ್ದವು.

ಸ್ಕೂಲಿಗೆ ರಜವಿದ್ದಾಗ, ನಮ್ಮ ತಂದೆಗೆ ರಜೆ ಸಿಕ್ಕಾಗ ಒಂದಷ್ಟು ದಿನ ಮುಳ್ಳಯ್ಯನಗಿರಿ ಕಾಡಿನ ದಾರಿಯಲ್ಲಿ ಅಮ್ಮನ ಊರಿಗೆ ಪ್ರಯಾಣ. ಆಗ ವನ್ಯಜೀವಿಗಳ ಫೋಟೋ ತೆಗೆಯಬಹುದು ಎನ್ನುವ ಕಲ್ಪನೆಯೇ ನನಗಿರಲಿಲ್ಲ. ಆಗ ನನಗಿದ್ದದ್ದು ಕಾಡಿನ ಪ್ರಾಣಿಗಳ ಬಗ್ಗೆ ಭಯ ಮಾತ್ರ. ಕಾಡಿನ ಮಧ್ಯೆ ಕಾಲ್ನಡಿಗೆಯಲ್ಲಿ ಓಡಾಡುವಾಗ ಮನಸ್ಸಿನಲ್ಲಿ ಭಯವೇ ತುಂಬಿತ್ತು. ಪ್ರಕೃತಿಯನ್ನು ಸವಿಯುವ ಮನಸ್ಥಿತಿ ಇರಲಿಲ್ಲ. ಅಕ್ಕಪಕ್ಕ ಚರಪರ ಅಂದರೆ ಭಯವಾಗುತ್ತಿತ್ತು. ಎಲ್ಲಿ ಹುಲಿ, ಸಿಂಹ, ಆನೆಗಳು ಬಂದು ಬಿಡುವವೋ ಎಂದು. ಆಗ ತುಂಬಿಕೊಂಡ ಅಲ್ಪಸ್ವಲ್ಪ ಕಾಡಿನ ನೆನಪನ್ನು ಈಗ ನೆನೆಸಿಕೊಂಡಾಗ ಪ್ರಕೃತಿಯನ್ನು ಹತ್ತಿರದಿಂದ ಸವಿಯುವ, ಅರಿತುಕೊಳ್ಳುವ ಅವಕಾಶವನ್ನು ಮಕ್ಕಳಿಗೆ ಚಿಕ್ಕಂದಿನಿಂದಲೇ ಒದಗಿಸಬೇಕು ಎಂದು ಸದಾ ಅನ್ನಿಸುತ್ತದೆ.   

 ಮದುವೆಯಾದ ಮೇಲೆ ಆಗ ಪ್ರಸಿದ್ದಿಯಾಗಿದ್ದ ನಿಕಾನ್ ಎಫ್ 10 ಕೆಮರಾ ನನ್ನ ಕೈಲಿತ್ತು. ಆಗ ಅದರ ಮಹತ್ವ ನನಗೆ ಗೊತ್ತಿರಲಿಲ್ಲ. ಪೋಟೋ ತೆಗೆಯುವ ಆಸಕ್ತಿಯೂ ಅಷ್ಟಾಗಿ ಇರಲಿಲ್ಲ. ಆಗ ಅದು ಒಳ್ಳೆಯ ಕೆಮರಾ ಎಂದು ನನಗೆ ಗೊತ್ತಿರಲಿಲ್ಲ. ಅದು ಗೊತ್ತಾಗಿದ್ದು ಇತ್ತೀಚೆಗೆ! ನನ್ನ ಪೋಟೋಗ್ರಫಿ ಆಸಕ್ತಿ ಹಳ್ಳ ಹಿಡಿದಿತ್ತು! ಮಗನ ಚಿತ್ರ ತೆಗೆಯುವುದಷ್ಟೇ ಆಗಿತ್ತು. ಕ್ರಮೇಣ ಕೆನಾನ್, ಒಲಂಪಸ್, ಕೊಡಾಕ್, ನಿಕಾನ್ ಕಾಂಪಾಕ್ಟ್ ಕೆಮರಾಗಳು ಬಂದು ಹೋದವು. ಹೆಚ್ಚಿನವು ರೋಲ್ ಹಾಕುವಂಥವು.

ಹೀಗೆ ಹತ್ತು ವರ್ಷಗಳ ಹಿಂದೆ ಎಸ್.ಎಲ್.ಆರ್ ಕೆಮರಾ ಕೊಂಡಾಗ ಪಕ್ಷಿಗಳ ಛಾಯಾಗ್ರಹಣ ಮಾಡುತ್ತೇನೆ ಎಂದು ನಾನು ಅಂದುಕೊಂಡಿದ್ದೆನೇ? ಅದನ್ನು ಕೂಂಡದ್ದು ಮಾತ್ರ ಪ್ರಕೃತಿಯ ಕುರಿತ ಕುತೂಹಲದ ಭಾಗವಾಗಿ ಖಗೋಳದ ಅದ್ಬುತಗಳ ಪೋಟೋ ತೆಗೆಯುವ ಕನಸಿನಿಂದ. ಅದರ ಜೊತೆ ಆನ್ ಲೈನ್ ಡೀಲ್ ನಲ್ಲಿ ಒಂದು ಹೆಚ್ಚುವರಿ ಲೆನ್ಸ್ ಸಿಕ್ಕಿತ್ತು. ಒಂದು ಒಳ್ಳೆಯ ಕೆಮರಾಕ್ಕಾಗಿ ನಾನು ಸುಮಾರು ಮೂವತ್ತೈದು ವರ್ಷ ಕಾಯಬೇಕಾಯಿತು. ಹೊಸ ಕೆಮರಾ ಬರುವುದಕ್ಕಿಂತ ಮುಂಚೆ ಖಗೋಳ ಶಾಸ್ತ್ರದ ತಾತ್ಕಾಲಿಕ ಕೋರ್ಸ್ ಒಂದಕ್ಕೆ ಸೇರಿದ್ದೆ. ಅದರ ಅಂಗವಾಗಿ ನಮ್ಮನ್ನು ತಮಿಳುನಾಡಿನ ಕಾವಲೂರಿನಲ್ಲಿದ್ದ ವೈನುಬಾಪ್ಪು ಖಗೋಳ ವೀಕ್ಷಣಾಲಯಕ್ಕೆ ಕರೆದುಕೊಂಡು ಹೋಗಿದ್ದರು.

ಅದೊಂದು ವಿಶೇಷ ಅನುಭವ. ಸಾಕ್ಷಾತ್ ಸ್ವರ್ಗವೇ ಧರೆಗಿಳಿದ ಅನುಭವ. ಖಾಲಿ ಆಕಾಶವೇ ಇರಲಿಲ್ಲ. ಆಕಾಶದ ತುಂಬೆಲ್ಲಾ ನಕ್ಷತ್ರಗಳ ರಾಶಿ. ಅವತ್ತು ರಾತ್ರಿ ಆಕಾಶದ ಅದ್ಬುತಗಳನ್ನು ಸೆರೆ ಹಿಡಿಯಲು ನನ್ನ ಬಳಿಯಿದ್ದ ಒಲಂಪಸ್ ಕಾಂಪಾಕ್ಟ್ ಕೆಮರಾದಲ್ಲಿ ಆಕಾಶದ ಚಿತ್ರ ಚಿಕ್ಕದಾಗಿತ್ತು! ಅವುಗಳನ್ನೆಲ್ಲ ಕಣ್ಣ ಕೆಮರಾದಲ್ಲಿ ತುಂಬಿಕೊಂಡು ವಾಪಾಸ್ಸು ಬಂದಿದ್ದೆ. ಒಂದು ಎಸ್ ಎಲ್ ಆರ್ ಕೆಮರಾ ಬೇಕೇ ಬೇಕು ಅನ್ನಿಸಿತ್ತು.

ಟೆಲಿಸ್ಕೋಪಿಗೆ ಹೊಸ ಕೆಮರಾ ಸಿಕ್ಕಿಸಿ ಚಂದ್ರನ, ಗುರು ಗ್ರಹ-ಅದರ ನಾಲ್ಕು ಉಪಗ್ರಹಗಳ ಪೋಟೋ ತೆಗೆದಿದ್ದೆ. ನನ್ನಲ್ಲಿದ್ದ ಸಾಧಾರಣ ಮಟ್ಟದ ಕೆಮರಾದಲ್ಲಿ, ನಗರದ ಬೆಳಕಿನ ಮಾಲಿನ್ಯದಲ್ಲಿ ಆಕಾಶವನ್ನು ಅರ್ಥ ಮಾಡಿಕೊಳ್ಳುವುದು ದುಬಾರಿ ಹವ್ಯಾಸ ಎನ್ನುವುದು ಕ್ರಮೇಣ ನನ್ನ ಅರಿವಿಗೆ ಬಂತು. ಪೋಟೋಗ್ರಫಿಯೇ ಒಂದು ದುಬಾರಿ ಹವ್ಯಾಸ ಎನ್ನುವುದು ಇದನ್ನು ಬಲ್ಲವರಿಗೆ ಗೊತ್ತೇ ಇದೆ. 

ಟೆಲಿಸ್ಕೋಪಿಗೆ ಕೆಮರಾ ಹಿಡಿಯುತ್ತಿರಲಿಲ್ಲ. ಅದಕ್ಕೆ ಪೂರಕವಾಗಿ ಟಿ-ರಿಂಗ್, ಅಡಾಪ್ಟರ್ ಕೊಳ್ಳಬೇಕಾಯ್ತು. ಪ್ರತ್ಯೇಕ ಲೆನ್ಸ್ ಬೇಕಿತ್ತು. ಅದನ್ನೂ ಕೊಂಡೆ. ಪೋಟೋಗ್ರಫಿ ಮತ್ತು ಆಕಾಶವನ್ನು ಗಮನಿಸುವುದು  ಒಟ್ಟೊಟ್ಟಿಗೇ ನಡೆದಿತ್ತು. ಕೆಮರಾ ಹಿಡಿದು  ಟೆರೇಸಿನ ಮೇಲೇರಿ ಮಗನ ಜೊತೆಗೆ ಆಕಾಶವನ್ನು ಹುಡುಕಲು ಶುರು ಮಾಡಿದೆ. ಬೆಳಗಿನ ಜಾವ ಸುಮಾರು ಮೂರುವರೆ ನಾಲ್ಕರ ವರೆಗೂ ನಮ್ಮ ಹುಡುಕಾಟ ನಡೆದಿತ್ತು. ಯಾಕೆಂದರೆ, ರಾತ್ರಿಯ ಹೊತ್ತು ಬೆಳಕಿನ ಮಾಲಿನ್ಯ ಕಡಿಮೆಯಾಗುತ್ತಿತ್ತು, ಆಕಾಶ ಕಾಣುತ್ತಿತ್ತು. ಅದು ಮುಂದೆ ನನ್ನ ಪಕ್ಷಿ ಛಾಯಾಗ್ರಹಣಕ್ಕೆ ಬಹಳಷ್ಟು ರೀತಿಯಲ್ಲಿ ಸಹಾಯ ಮಾಡಿದೆ.

ಫೋಟೋ ತೆಗೆಯುವ ಆಸಕ್ತಿ ಇನ್ನಷ್ಟು ಹೆಚ್ಚಾಯಿತು. ಕಷ್ಟಪಟ್ಟು ಕೆಲಸ ಮಾಡುವ ಅಭ್ಯಾಸ ಬೆಳೆಯಿತು. ನಾವಿದ್ದ ಬಾಡಿಗೆಯ ಮನೆಯ ಮುಂದಿನ ಸಂಪಿಗೆಯ ಮರಕ್ಕೆ ಬರುತ್ತಿದ್ದ ಕೋಗಿಲೆ, ಕುಟ್ರು ಹಕ್ಕಿ, ಗಿಳಿ, ಕಾಗೆಗಳ ಪೋಟೋ ತೆಗೆಯುತ್ತಾ ಪಕ್ಷಿಗಳ ಬಗ್ಗೆ ಆಸಕ್ತಿ ಬೆಳೆಯುತ್ತಾ ಬಂತು.ಆಗ ನನ್ನಲ್ಲಿದ್ದ 1100ಆ, 55-250 ಲೆನ್ಸ್ ನಲ್ಲಿ ಹಕ್ಕಿಗಳ ಪೋಟೋ ತೆಗೆಯುತ್ತಿದ್ದೆ. ನನ್ನ ಕೆಮರಾ ಲೊಟಕ್ ಲೊಟಕ್ ಎಂದು ಚಿತ್ರ ತೆಗೆಯುವಷ್ಟರಲ್ಲಿ, ಚಿತ್ರಗಳು ಗೊಟಕ್ ಎನ್ನುತ್ತಿದ್ದವು! ಹಕ್ಕಿಗಳು ಓಡಿ ಹೋಗಿರುತ್ತಿದ್ದವು. ಇಲ್ಲಾ ಪೋಟೋ ಮಬ್ಬಾಗಿರುತ್ತಿತ್ತು. 

ಕೆಮರಾ ಭಾಷೆಯನ್ನು ಸ್ವಂತ ಆಸಕ್ತಿಯಿಂದ ಕಲಿಯುವುದು ಆಗ ಕಷ್ಟವೇ ಆಗಿತ್ತು. ಅಪರ್ಚರ್ (aperture) ಅನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಹಲವು ವರ್ಷಗಳೇ ಕಳೆದವು. ಸಂಕೋಚ,  ಹಿಂಜರಿಕೆಗಳಿಂದ ದೂರವೇ ಓಡಿದ್ದ ಪೋಟೋಗ್ರಫಿಯ ಕನಸು ಫೇಸ್ ಬುಕ್ಕಿನಿಂದ ಮತ್ತೆ ಚಿಗುರಿತು. ಪಕ್ಷಿ ಛಾಯಾಗ್ರಹಣ ಗುಂಪುಗಳಿಂದ ಬಹಳಷ್ಟು ತಿಳಿದುಕೊಂಡೆ. ಹಕ್ಕಿಗಳ ಹೆಸರು, ಅವುಗಳ ಕೂಗು, ಸ್ವಭಾವವನ್ನು ಗುರುತಿಸುವುದನ್ನು ಕಲಿತೆ. ನನ್ನ ಪರಿಚಯದ ಸಾಲುಗಳಲ್ಲಷ್ಟೇ ದಾಖಲಾಗಿದ್ದ ಛಾಯಾಗ್ರಹಣ ಹವ್ಯಾಸ ಈಗ ಅಧಿಕೃತವಾಗಿತ್ತು.

ಪ್ರಕೃತಿಯ ಕುರಿತ ನನ್ನೊಳಗಿನ ಕುತೂಹಲದಲ್ಲಿ ಒದಗುವ ಗಳಿಗೆಗಳನ್ನು ಹಿಡಿದಿಟ್ಟುಕೊಳ್ಳಲು ಅಕ್ಷರದ ಆಚೆಗೂ ಮತ್ತೇನೋ ಬೇಕು ಎಂದೆನ್ನಿಸಿದಾಗ ಮಾರುಹೋದದ್ದು ಮತ್ತು ಮೊರೆಹೋದದ್ದೇ ಕ್ಯಾಮರಾ ಎಂಬ ಮಾಯದ ಕಣ್ಣಿನ ಮೋಡಿಗೆ. ಆದರೆ ಈ ಮಾರುಹೋಗುವಿಕೆ ಮತ್ತು ಮೊರೆಹೋಗುವಿಕೆ ಉದ್ದೇಶಪೂರ್ವಕವಾಗಿರದೆ ಸಹಜ ಮೋಹದಿಂದಲೇ ಶುರುವಾಗಿತ್ತು, ಈಗಂತೂ ಕೆಮರಾ ನನ್ನ  ಅತ್ಯಂತ ಪ್ರೀತಿಯ ಮತ್ತು ವಿಧೇಯ ಒಡನಾಡಿ.

ಹಾಗೆ ನೋಡಿದರೆ ಛಾಯಾಗ್ರಹಣ ನನ್ನ ಬರವಣಿಗೆಗೆ ಪೂರಕವಾಗಿದೆ. ಹಕ್ಕಿಗಳ ಬಗ್ಗೆ ಲೇಖನ ಬರೆಯುತ್ತೇನೆ. ಅಂತರ್ಜಾಲ ತಾಣಗಳಲ್ಲಿ, ಪಕ್ಷಿ ಪರಿಚಯ, ಕೆಲವೊಂದು ಪತ್ರಿಕೆಗಳಲ್ಲಿ ಪಕ್ಷಿಗಳ ಕುರಿತು ಸಕಾಲಿಕ ಲೇಖನಗಳು ಬಂದಿವೆ. ಹಾಗೆ ನೋಡಿದರೆ,ಬರವಣಿಗೆಗಿಂತ ಛಾಯಾಗ್ರಹಣ ನನಗೆ ಹೆಚ್ಚು ಖುಷಿ ಕೊಟ್ಟಿದೆ. ಮಾನ್ಯತೆ ದೊರಕಿಸಿದೆ. ನನ್ನ ಕವಿತೆಗಳಲ್ಲಿ ಹಕ್ಕಿಗಳು ಸುಳಿದಾಡುತ್ತವೆ. ಫೇಸ್ಬುಕ್ ನ ಅನೇಕರು ಛಾಯಾಗ್ರಹಣ ಮಿತ್ರರಾಗಿದ್ದಾರೆ; ಹತ್ತಿರದವರಾಗಿದ್ದಾರೆ. ಅನೇಕರು ಅವರ ಮನೆಯ ಹತ್ತಿರ, ಮತ್ತೆಲ್ಲೋ ನೋಡಿದ ಪಕ್ಷಿಗಳ ಬಗ್ಗೆ ಹೆಸರು, ಮಾಹಿತಿ ಕೇಳುತ್ತಾರೆ. ಅವುಗಳ ಫೋಟೋ ಕಳಿಸುತ್ತಾರೆ. ಮೊಟ್ಟೆಗಳು ಸಿಕ್ಕಾಗ ಅವು ಯಾವ ಹಕ್ಕಿಯದೆಂದು ಕೇಳುತ್ತಾರೆ. ಅವುಗಳ ಸ್ಥಳೀಯ ಹೆಸರುಗಳ ಬಗ್ಗೆ ಮಾಹಿತಿ ಕೊಡುತ್ತಾರೆ. ಅವರೊಡನೆ ಮಾತಾಡುತ್ತಾ ಪಕ್ಷಿಗಳ ಬಗ್ಗೆ ಎಷ್ಟೋ ವಿಷಯಗಳನ್ನು ಕಲಿತ್ತಿದ್ದೇನೆ.

ಬಹಳಷ್ಟು ಜನ ಅವರಿರುವ ಜಾಗದಲ್ಲಿ ಎಷ್ಟೋ ಪಕ್ಷಿಗಳಿವೆಯೆಂದು ನೋಡಲು ಬನ್ನಿ ಎಂದು ಪ್ರೀತಿಯಿಂದ ಕರೆಯುತ್ತಾರೆ. ದೂರದೂರಿನ ಛಾಯಾಗ್ರಹಣದ ಗೆಳೆಯರೆಲ್ಲ ನಮ್ಮಲ್ಲಿ ಬನ್ನಿ ಎಂದು ಹಲವಾರು ಮಾಹಿತಿ ಕೊಡುತ್ತಾರೆ. ಬೇರೆ ರಾಜ್ಯದ ಪಕ್ಷಿ ಛಾಯಾಗ್ರಹಣದ ಗೆಳೆಯರು ಕರ್ನಾಟಕಕ್ಕೆ ಬಂದಾಗ, ಇಲ್ಲಿನ ಸ್ಥಳಗಳ ಬಗ್ಗೆ ಮಾಹಿತಿ ಕೇಳುತ್ತಾರೆ, ಅವರಲ್ಲಿಗೆ  ಕರೆಯುತ್ತಾರೆ. ಛಾಯಾಗ್ರಹಣಕ್ಕೆ ಹೋದ ಕಡೆ ಕೆಲವರು ನೀವು ಜರ್ನಲಿಸ್ಟಾ ಎಂದು ಬಹಳ ಸಲ ಕುತೂಹಲದಿಂದ ಕೇಳುತ್ತಿರುತ್ತಾರೆ! ನನ್ನ ಹವ್ಯಾಸದ ಬಗ್ಗೆ ಹೇಳಿದಾಗ ಅಲ್ಲಿನ ಹಕ್ಕಿಗಳ ಬಗ್ಗೆ ಹೇಳುತ್ತಾರೆ, ಪೋಟೋ ತೋರಿಸಲು ಕೇಳುತ್ತಾರೆ. ಇವು ಆಗಾಗ ನಡೆಯುತ್ತಿರುತ್ತವೆ. ಇಂಥ ಸಂವಾದಗಳಿಂದಲೇ  ಛಾಯಾಗ್ರಹಣ ಚೇತೋಹಾರಿಯೆನಿಸುತ್ತದೆ.

ಗೆಳತಿಯರು ಮನೆಗೆ ಕರೆದಾಗ ಅಲ್ಲಿ ಹಕ್ಕಿಗಳಿವೆಯೇ ಎಂದು ವಿಚಾರಿಸುತ್ತೇನೆ! ಅವರೂ ಕ್ರಮೇಣ ಈ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿಯೇ ಎಷ್ಟೊಂದು ಪಕ್ಷಿ-ಪ್ರಾಣಿಗಳಿವೆ ಎನ್ನುವುದು ಅರಿವಾಗಿದ್ದು ಕೆಮರಾ ನನ್ನ ಕೈಗೆ ಬಂದ ಮೇಲೆಯೇ. ಹಾವುಗಳ ಬಗ್ಗೆ ಅರಿವಾಗಿದ್ದು, ಭಯ ಕಮ್ಮಿಯಾಗಿದ್ದು ಆಗಲೇ. ಒಂದಷ್ಟು ದಿನ ಗುಂಪೊಂದನ್ನು ಕಟ್ಟಿಕೊಂಡು ಸರ್ಕಾರಿ ಶಾಲೆಯ ಮಕ್ಕಳಿಗೆ ಪಕ್ಷಿಗಳ ಬಗ್ಗೆ ಹೇಳಿಕೊಟ್ಟದ್ದಿದೆ. ಒಂದಷ್ಟು ಜನ ನಮಗೂ ಪಕ್ಷಿ ಪೋಟೋಗ್ರಫಿ ಹೇಳಿಕೊಡಿ ಎನ್ನುತ್ತಿರುತ್ತಾರೆ. ನಾನೇ ಕಲಿಯುವುದು ಬಹಳಷ್ಟಿರುವಾಗ, ಅವರಿಗೆ ಹೇಗೆ ಕಲಿಸಲಿ? ಪ್ರಾರಂಭದಲ್ಲೇ ದುಬಾರಿ ಕೆಮರಾ, ಲೆನ್ಸ್ ಖರೀದಿಸಿ ಕಲಿಯಲು ಶುರು ಮಾಡುವವರಿದ್ದಾರೆ. ಆಸಕ್ತಿಯಿಂದ ಕಲಿತವರೂ ಇದ್ದಾರೆ. ಎಳೆಯ ಶಿಷ್ಯರೂ ಸಿಕ್ಕಿದ್ದಾರೆ.     

 ಕೆಲವು ಬರಹಗಾರ ಗೆಳೆಯರು ಬರೆಯುವುದನ್ನೇ ಬಿಟ್ಟುಬಿಟ್ಟಿರಾ, ಕವಿತೆ ಬರೆಯುವುದನ್ನು ನಿಲ್ಲಿಸಿಬಿಟ್ಟಿರಾ ಎಂದು ಕೇಳುತ್ತಾರೆ! ಪ್ರಾರಂಭದಲ್ಲಿ ಉದಾಸೀನ ತೋರಿದವರು ಚೆನ್ನಾಗಿ ತೆಗೆಯುತ್ತೀರಿ ಎಂದು ಇದೀಗ ಮೆಚ್ಚುಗೆ ತೋರುತ್ತಾರೆ. ಮೆಟ್ರೋ ಪೋಟೋಗ್ರಫಿ- ಎಂದು ತಮಾಷೆ ಮಾಡುವ ಆತ್ಮೀಯರಿದ್ದಾರೆ! ಕೆಲವರು ಒಂದೆರಡು ಪೋಟೋಗಳನ್ನು ಪುಸ್ತಕದ ಮುಖಪುಟಕ್ಕೆ ಬಳಸಿಕೊಂಡಿದ್ದಾರೆ. ಹಿಂಬದಿಯ ಪುಟಕ್ಕೆ ನಾನು ತೆಗೆದ ಅವರ ಪೋಟೋವನ್ನು ಪ್ರೀತಿಯಿಂದ ಬಳಸಿಕೊಳ್ಳುತ್ತಾರೆ. ಸೋಲೋ ಛಾಯಾಚಿತ್ರ ಪ್ರದರ್ಶನ ಮಾಡಿ ಎಂದು ಆಗಾಗ ಒತ್ತಾಯಿಸುವ ಪ್ರೀತಿಪಾತ್ರರಿದ್ದಾರೆ.  ಹಕ್ಕಿಗಳ ಬಗ್ಗೆಯೇ ಒಂದು ಪುಸ್ತಕ ತನ್ನಿ ಎನ್ನುತ್ತಾರೆ. ಇಂಥ ಸಣ್ಣಪುಟ್ಟ ಸಂತಸಗಳು ಹಲವಾರಿವೆ.

ಛಾಯಾಗ್ರಹಣ ಬಹಳ ಆರೋಗ್ಯಕರವಾದ ಹವ್ಯಾಸ. ಈಗಿನ ಮಕ್ಕಳಿಗೆ ಕೆಮರಾ ಸುಲಭವಾಗಿ ಸಿಗುತ್ತಿದೆ.ತಂದೆ-ತಾಯಂದಿರು ಛಾಯಾಗ್ರಾಹಕರಾಗಿದ್ದರೆ ಮಕ್ಕಳಿಗೆ ಇನ್ನಷ್ಟು ಅನುಕೂಲವಾಗಿದೆ. ಛಾಯಾಗ್ರಹಣ ಇತ್ತೀಚೆಗೆ ಸಾಕಷ್ಟು ಪ್ರಚಾರ ಪಡೆದಿದ್ದರೂ, ಮಹಿಳೆಯರು ಫೋಟೋ ತೆಗೆಯುವಾಗ ಅವರನ್ನು ಇದ್ಯಾವುದೋ ವಿಶೇಷ ಪ್ರಾಣಿ ಅನ್ನುವ ರೀತಿಯಲ್ಲಿ ಆಶ್ಚರ್ಯದಿಂದ ನೋಡುವ ಜನರು ಇನ್ನೂ ಇದ್ದಾರೆ. ಅಲ್ಲಲ್ಲಿ ಹೆಣ್ಣುಮಕ್ಕಳು ನಿಧಾನವಾಗಿ ವನ್ಯಜೀವಿ ಛಾಯಾಗ್ರಹಣದತ್ತ ಆಕರ್ಷಿತರಾಗುತ್ತಿದ್ದಾರೆ.

ಯುವ ಹವ್ಯಾಸಿ ಛಾಯಾಗ್ರಾಹಕರು ಹೆಚ್ಚುತ್ತಿದ್ದಾರೆ. ಯುವಕರಾದರೆ ಕೆಮರಾ ಹಿಡಿದು ನಿರಾತಂಕವಾಗಿ ಬೀದಿಗಿಳಿಯಬಹುದು. ಅವರಿಗೆ ಮುಜುಗರದ ಸನ್ನಿವೇಶಗಳು ಕಡಿಮೆ. ಕೆಮರಾ ಕಣ್ಣಿಗೆ ಸಿಗುವ ಸಂತಸ ಹೆಣ್ಣಿಗೆ ಅಥವಾ ಗಂಡಿಗೆ ಬೇರೆಯದೇನಲ್ಲ. ಆದರೆ, ಅವರಿಗೆ ಎದುರಾಗುವ ಸವಾಲುಗಳು ಬೇರೆ ರೀತಿಯದಾಗಿರುತ್ತವೆ. ಅವು ವಿಶಿಷ್ಟ, ಅದ್ಬುತ, ಉಲ್ಲಾಸದಾಯಕ, ನಿರಾಸದಾಯಕ ಏನೆಲ್ಲ ಆಗಿರಬಹುದು. ಅದನ್ನು ವೈಯಕ್ತಿಕವಾಗಿ ಹೇಗೆ ನಿಭಾಯಿಸುತ್ತೇವೆ ಎನ್ನುವುದೇ ಒಂದು ಸವಾಲು.

ಪ್ರಕೃತಿ ನಮ್ಮ ಮುಂದೆ ಹೊಸ ಲೋಕವನ್ನೇ ತೆರೆದಿದೆ. ಅದನ್ನು ಕೆಮರಾ ಕಣ್ಣಿನಲ್ಲಿ ನೋಡಿದಾಗ ಎಷ್ಟೊಂದು ವಿಸ್ಮಯಗಳು ಕಂಡಿವೆ. ಸವಾಲುಗಳ ದಾರಿಯೇ ತೆರೆದಿದೆ. ಪಕ್ಷಿಗಳ ವೈವಿಧ್ಯಮಯ ಲೋಕ ನಮಗೆ ನಿಜಕ್ಕೂ ಪ್ರಕೃತಿಯ ವರದಾನ ಎಂಬುದು ಬರಿಯ ಒಣ ಮಾತಲ್ಲ. ಅವುಗಳಿಲ್ಲದ ನೀರಸ ಲೋಕವನ್ನು ನೆನೆಸಿಕೊಳ್ಳಲು ಆಗುತ್ತಿಲ್ಲ. ಪಕ್ಷಿಗಳನ್ನು ಸೆರೆಹಿಡಿಯಲು ಹೋದ ಪ್ರಾರಂಭದಲ್ಲಿ ಪುಸ್ತಕಗಳಲ್ಲಿ ವರ್ಣನೆಯಾಗುತ್ತಿದ್ದ ವಿದ್ಯಮಾನವನ್ನು ಕಣ್ಣಾರೆ ಕಂಡೆ. ಲಾಲ್ ಭಾಗಿನ ಕೆರೆಯ ಅಂಚಿನಲ್ಲಿ ಕಪ್ಪೆಯೊಂದನ್ನು ಹಿಡಿಯಲು ಹಾವೊಂದು ಹೊಂಚು ಹಾಕುತ್ತಿತ್ತು. ಅದನ್ನು ಹಿಡಿಯಲು ಹೋಗುವಾಗ ಎಲ್ಲಿತ್ತೋ ಗರುಡವೊಂದು ಬಂದು ಹಾವನ್ನು ಎಗರಿಸಿಕೊಂಡು ಹೋಗಿತ್ತು.

ಇವೆಲ್ಲ ಮಿಂಚಿನಂತೆ ನಡೆದಿತ್ತು. ಮತ್ತೊಂದು ದಿನ ಕೆರೆಯ ಏರಿಯ ಮೇಲೆ ಹೋಗುವಾಗ, ದೂರದಲ್ಲೆಲ್ಲೋ ’ಅಕ್ಕಾ ಅಕ್ಕಾ’ ಎಂದು ಕರೆದ ಹಾಗಾಯಿತು. ಯಾರೆಂದು ನೋಡಿದರೆ ಒಂದಷ್ಟು ಚಿಕ್ಕ ಹುಡುಗರು ಪೋಟೋ ತೆಗೆಯಲು ಕರೆಯುತ್ತಿದ್ದರು. ನೀರು ಹಾವೊಂದು ಮೀನನ್ನು ಹಿಡಿದಿತ್ತು. ಮೀನಿನ ಕತೆ ಮುಗಿಯಿತೆಂದು ನಾವು ನೋಡುತ್ತಿದ್ದೆವು. ಅದು ಹೇಗೋ ಹಾವು ಬಾಯಿ ಸಡಿಲಿಸಿದಾಗ ನೋಡನೋಡುತ್ತಿದ್ದಂತೆ ಮೀನು ಪುಳಕ್ಕನೆ ಮಾಯವಾಯಿತು. ಒಮ್ಮೆ ಹೀಗೆ ಇನ್ನೊಂದು ಕೆರೆಯ ಹಾದಿಯಲ್ಲಿ ಹಸಿರು ಕಳ್ಳಿಪೀರ ಹಕ್ಕಿಗಳ ಪೋಟೋ ತೆಗೆಯುವುದರಲ್ಲಿ ಮಗ್ನರಾಗಿದ್ದೆವು. ಇನ್ನೇನು ಫೋಟೋ ಕ್ಲಿಕ್ಕಿಸಬೇಕು ಎನ್ನುವಷ್ಟರಲ್ಲಿ ಗೂಳಿಯೊಂದರ ಗುಟುರು ಕೇಳಿ ಬೆಚ್ಚಿ ಬಿದ್ದೆವು. ನಮ್ಮ ಹಿಂದೆ, ನಾಲ್ಕೈದು ಅಡಿಯ ಅಂತರದಲ್ಲಿ ಗೂಳಿಯೊಂದು ಹೂಂಕರಿಸಿ ನಿಂತಿತ್ತು. ಸಧ್ಯ ಅದು ಏನೂ ಮಾಡಲಿಲ್ಲ.

ನಾವು ಆಗಾಗ ಹಕ್ಕಿಗಳನ್ನು ಹುಡುಕಿಕೊಂಡು ಬನ್ನೇರುಘಟ್ಟಕ್ಕೆ ಹೋಗಿ ಬರುತ್ತಿದ್ದೆವು. ನಾವು ಹೋಗುತ್ತಿದ್ದ ಜಾಗ ಜನವಿರಳವಾಗಿತ್ತು. ಆನೆಗಳು ಬಂದು ಹೋಗುತ್ತಿದ್ದ ಜಾಗ ಅದು. ನಮ್ಮಂಥ ಒಂದಿಬ್ಬರನ್ನು ಬಿಟ್ಟರೆ ಕೆಮರಾ ಹಿಡಿದವರು ತುಂಬಾ ಕಮ್ಮಿ. ಇತ್ತೀಚೆಗೆ ಅದೇ ಜಾಗದಲ್ಲಿ ಸಿಂಹವೊಂದು ಬಂದಿತ್ತು ಎಂಬ ಸುದ್ದಿಯನ್ನು ಆಗ ನನ್ನ ಜೊತೆ ಬಂದಿದ್ದ ಗೆಳತಿ ಇತ್ತೀಚೆಗೆ ಹೇಳಿದಳು! ಹಕ್ಕಿಯ ಧ್ಯಾನದಲ್ಲಿದ್ದ ನಮಗೆ ಅವೆಲ್ಲ ಅರಿವೇ ಇರಲಿಲ್ಲ.ಜ಼ೂಗೆ ಹೋಗುವ ಆಸಕ್ತಿ ನಮಗಿರಲಿಲ್ಲ.

ಒಂದೆರಡು ಬಾರಿ ಮಾತ್ರ ಹೋಗಿದ್ದೇವೆ, ಹಕ್ಕಿಗಳಿಗಾಗಿ. ಹೆಬ್ಬಾಳ ಕೆರೆಗೆ ಮೊದಲ ಬಾರಿಗೆ ಹೋಗಿದ್ದಾಗ, ನಿಷಿದ್ದ ಪ್ರದೇಶವೊಂದಕ್ಕೆ ಗೊತ್ತಿಲ್ಲದೆ ಹೋಗಿ ಬಂದಿದ್ದೆವು. ಇವೆಲ್ಲ ಪ್ರಾರಂಭದಲ್ಲಿ ಆದ ಒಂದೆರಡು ಸಣ್ಣಪುಟ್ಟ ಘಟನೆಗಳು. ಆಗ ಬೆಳಗಿನ ಜಾವ ನಾಲ್ಕಕ್ಕೆ ಎದ್ದು, ನಸುಕಿನ ಐದು ಗಂಟೆಗೆ ಬಸ್ಸಿನಲ್ಲಿ ಕೆಮರಾ ಬ್ಯಾಗು ನೇತು ಹಾಕಿಕೊಂಡು ಹೋಗುತ್ತಿದ್ದ ಬಡಪಾಯಿ ಪೋಟೋಗ್ರಾಫರ್ ನಾನಾಗಿದ್ದೆ! ಉಳಿದ ಪೋಟೋಗ್ರಫಿ ಗೆಳೆಯರೆಲ್ಲ ಆರಾಮಾಗಿ ಕಾರಿನಲ್ಲಿ ಓಡಾಡುತ್ತಿದ್ದರು. ನನ್ನ ಜೊತೆಗೆ ಕಾಲೆಳೆದುಕೊಂಡು ಬರುತ್ತಿದ್ದ ಗೆಳತಿಯೊಬ್ಬಳಿದ್ದಳು.

ಈಗಂತೂ ದುಡ್ದಿದ್ದರೆ ನಮಗೆ ಬೇಕಾದ ಅನುಕೂಲಕರ ಕೆಮರಾ, ಲೆನ್ಸುಗಳು ಸಿಗುತ್ತವೆ. ಅವುಗಳನ್ನು ಹೊತ್ತುಕೊಂಡು ತಿರುಗುವುದೇ ದೊಡ್ದ ಕಷ್ಟ. ಪಕ್ಷಿಗಳ ಛಾಯಾಗ್ರಹಣಕ್ಕೇ ಸೀಮಿತಗೊಳಿಸಿಕೊಂಡು ಹೇಳುವುದಾದರೆ, ರಕ್ಷಣೆಯ ದೃಷ್ಟಿಯಿಂದ ಒಬ್ಬೊಬ್ಬರೇ ಹೋಗುವ ಹಾಗಿಲ್ಲ. ಸಮಸ್ಯೆಗಳು ಪ್ರಾಣಿಗಳಿಂದ ಬರುವುದಿಲ್ಲ, ಮನುಷ್ಯ ಮಾತ್ರರಿಂದ ಅನ್ನುವುದು ಅನೇಕರ ಅಭಿಮತ. ನನಗೆ ಇದುವರೆಗೂ ಅಂಥ ಅನುಭವವಾಗಿಲ್ಲ. ಅದೃಷ್ಟವಶಾತ್ ಸದಾ ರಕ್ಷಣೆಗಿರುವ ಮಿತ್ರರಿದ್ದಾರೆ.

ಕೆಲವು ಕಡೆ ಗುಂಪಾಗಿ ಹೋಗಬೇಕು. ಭಾರದ ಕೆಮರಾ, ಲೆನ್ಸು, ಟ್ರೈಪಾಡುಗಳನ್ನು ಹೊತ್ತು ಎಷ್ಟು ಹುಡುಕಿದರೂ ಏನೂ ಸಿಗದಿರಬಹುದು. ಕೈಯಲ್ಲಿ ಹಿಡಿದು ರಟ್ಟೆ ನೋಯುವುದುಂಟು. ಒಮ್ಮೊಮ್ಮೆ ಭರ್ಜರಿ ಬೇಟೆ. ಕೆಲವೊಮ್ಮೆ ಅವುಗಳ ಚಿಲಿಪಿಲಿ ಮಾತ್ರ ಕೇಳುತ್ತಿರುತ್ತದೆ. ಹೊರಗೆ ಬರದೆ ಸತಾಯಿಸುತ್ತವೆ. ಹಕ್ಕಿಗಳ ಛಾಯಾಗ್ರಹಣಕ್ಕೆ ಹೋಗುವಾಗ ಮುಖ್ಯವಾಗಿ ಗಾಢವಲ್ಲದ ಬಟ್ಟೆಗಳನ್ನು ಧರಿಸಬೇಕು. ಪ್ರಕೃತಿಗೆ ಹೊಂದುವಂಥಹ ಬಣ್ಣಗಳಾದರೆ ಒಳ್ಳೆಯದು. (ಹಸಿರು, ಬೂದು) ಮಣಭಾರ ಅನ್ನಿಸುವ ಶೂಸುಗಳಿರಬೇಕು. ಒಮ್ಮೊಮ್ಮೆ ಮನೆಯಿಂದ ಹೊರಡುವಾಗ ನಾನೇ ಒಂದು ವಿಚಿತ್ರ-ವಿಶಿಷ್ಟ ಪ್ರಾಣಿಯೇನೋ ಎಂಬಂತೆ ಅನಿಸುವುದುಂಟು!!

ಬೆಳಗ್ಗೆ ಐದು ಗಂಟೆಗೆ ಏಳದವ ನೀನು ಪೋಟೋಗ್ರಾಫರನೇ ಅಲ್ಲ ಎಂಬ ಮಾತೊಂದಿದೆ. ಬೇಗ ಏಳುವುದಿರಲಿ, ರಾತ್ರಿ ಪೂರಾ ಜಾಗರಣೆ ಮಾಡಿದ ದಿನಗಳೇ ಹೆಚ್ಚು. ದಾಖಲೆಯಾಗದ ಇನ್ನಷ್ಟು ಅನುಭವಗಳು ಬತ್ತಳಿಕೆಯಲ್ಲಿ ಇದ್ದೇ ಇವೆ. ದಾರಿಯಲ್ಲಿ ಹೋಗುವಾಗ ಆಕಾಶ ಮಾರ್ಗದಲ್ಲೇ ನನ್ನ ಕಣ್ಣು ನೆಟ್ಟಿರುತ್ತದೆ-ಹಕ್ಕಿಗಳಿಗಾಗಿ! ನೋಡಿದ ದೃಶ್ಯಗಳನ್ನು ಕೆಮರಾದ ಚೌಕಟ್ಟು ಹಾಕುತ್ತಿರುತ್ತೇನೆ. ಕೆಮರಾಗೆ ಒಳ್ಳೆಯ ಫ್ರೇಮ್ ಸಿಗುವುದಾ ಎಂದು ನೋಡುತ್ತಿರುತ್ತೇನೆ.

ಪಕ್ಷಿ ಛಾಯಾಗ್ರಹಣದ ಜೊತೆ,ಜೊತೆಗೆ ಕ್ಯಾಂಡಿಡ್, ಸ್ವಭಾವ ಚಿತ್ರಣ (portrait), ಸ್ಟ್ರೀಟ್ ಫೋಟೋಗ್ರಫಿ, ಪ್ರಕೃತಿ ಚಿತ್ರಣ, ಕ್ರೀಡಾ ಛಾಯಾಗ್ರಹಣ- ಇವು ಇತರ ನೆಚ್ಚಿನ ವಿಷಯಗಳು. ಸ್ಟ್ರೀಟ್ ಪೋಟೋಗ್ರಫಿಗೆ ಹೋದಾಗ ಆಗುವ ಅನುಭವವೇ ಬೇರೆ. ಬೆಂಗಳೂರಿನಲ್ಲಿ ಪ್ರತಿವರ್ಷ ನಡೆಯುವ ಕಡ್ಲೆಕಾಯಿ ಪರಿಷೆಯಲ್ಲಿ, ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುವ ಚಿತ್ರಕಲಾಪ್ರದರ್ಶನದಲ್ಲಿ ಜನರ ಜೊತೆ ಬೆರೆಯುತ್ತಾ, ಅವರ ಚಲನವಲನವನ್ನು ಕ್ಲಿಕ್ಕಿಸುವುದು ಬೇರೆಯದೇ ಆದ ಅನುಭವ. ಅಲ್ಲಿ ತೆಗೆದ ಪೋಟೋವನ್ನು ಅವರಿಗೆ ತಲುಪಿಸಿದಾಗ ಅವರ ಸಂತೋಷವನ್ನು ನೋಡುವುದೇ ಒಂದು ಅನುಭವ.

ಸ್ವಭಾವ ಚಿತ್ರಣದಲ್ಲಿ ಜನರ ಮುಖಭಾವ, ಅವರ ಭಾವನೆಗಳನ್ನು ದೃಶ್ಯಕ್ಕಿಳಿಸುವುದು ಬಹಳ ಸಂತೋಷ ಕೊಡುತ್ತದೆ. ಬೆಂಗಳೂರಿನಲ್ಲಿ ಮತ್ತು ಮೈಸೂರಿನಲ್ಲಿ  ನಡೆದ ಛಾಯಾಚಿತ್ರ ಪ್ರದರ್ಶನದಲ್ಲಿ ಭಾಗವಹಿಸಿದ್ದೇನೆ. 2017ರಲ್ಲಿ ನಾವೊಂದಷ್ಟು ಗೆಳೆಯರು ಮೈಸೂರಿನಲ್ಲಿ ಪ್ರಕೃತಿ ಮತ್ತು ವನ್ಯಜೀವಿ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಿದ್ದೆವು. ಎರಡು ದಿನದ ಛಾಯಾಚಿತ್ರ ಪ್ರದರ್ಶನದಲ್ಲಿ ನಮಗೆ ಸಿಕ್ಕ ಪ್ರೀತಿ, ಪ್ರೋತ್ಸಾಹವನ್ನು ಮರೆಯಲು ಸಾಧ್ಯವಿಲ್ಲ.   

ಸಧ್ಯ ನನ್ನ ಕಾರ್ಯಕ್ಷೇತ್ರ ಬೆಂಗಳೂರು ಸುತ್ತಮುತ್ತಲ ಪ್ರದೇಶ. ನಮ್ಮ ಸುತ್ತಮುತ್ತಲೇ ಎಷ್ಟೊಂದು ಅವಕಾಶಗಳಿರುವಾಗ ನನಗೆ ನಿರಾಸೆ ಎನ್ನಿಸುತ್ತಿಲ್ಲ. ಅನುಕೂಲ ಒದಗಿದಾಗ ದೂರದ ಹಕ್ಕಿಗಳತ್ತ ಪಯಣ ಹೊರಡುವ ಕನಸಂತೂ ಇದೆ. ಮುಖ್ಯ ಆರೋಗ್ಯ ನೆಟ್ಟಗಿರಬೇಕು. ಈ ಎಲ್ಲಾ ಹವ್ಯಾಸಗಳಿಗೆ ಉತ್ತಮ ಆರೋಗ್ಯವಿರುವುದು ಎಷ್ಟು ಮುಖ್ಯ ಎನ್ನುವುದು ಅರಿವಿಗೆ ಬಂದಿದೆ.  

ಹಲವು ಬಾರಿ ನಾನು ನೆನಸಿದ ಚಿತ್ರಗಳು ದುತ್ತೆಂದು ಕಣ್ಣೆದುರು ನಿಂತಿವೆ. ಹಲವು ಬಾರಿ ಕೈಯಿಂದ ಜಾರಿ ಹೋಗಿವೆ. ಕೆಮರಾ ಕೈಯಲ್ಲಿ ಇಲ್ಲದಿದ್ದಾಗ ಅಮೂಲ್ಯ ದೃಶ್ಯಗಳು ಮರೆಯಾಗಿವೆ. ಮೈಯೆಲ್ಲಾ ಕಣ್ಣಾಗದಿದ್ದರೆ ಹಲವು ಅನುಭವಗಳು ದೃಶ್ಯವಾಗಿ ಉಳಿಯಲಾರವು.

ಕನಸಿನಲ್ಲಿ ಬಂದಿದ್ದ ಕೈರಾತ ಪಕ್ಷಿ (Blue-faced Malkhoa) ನಿಜದಲ್ಲೂ ಕಾಣಿಸಿವೆ. (ಮೊದಲ ಬಾರಿಗೆ ನೋಡಿದಾಗ) ರಾಜಸ್ಥಾನದ ಭರತಪುರದಲ್ಲಿ ಹೆಚ್ಚಾಗಿ ಕಾಣಸಿಗುವ, ಮೂರು ವರ್ಷಗಳಿಂದ ಕನಸುತ್ತಿದ್ದ ನೀಲಿಗೊರಳ(Blue throat) ಎಂಬ ವಲಸೆ ಪಕ್ಷಿ ಬೆಂಗಳೂರಿನಲ್ಲೇ ಸಿಕ್ಕಿತ್ತು. ಭರತಪುರ, ದಾಂಡೇಲಿ, ಉತ್ತರಖಾಂಡದಿಂದ ಹಿಡಿದು- ದಕ್ಷಿಣ ಆಫ್ರಿಕಾದ ಮಸಾಯ್ ಮರ, ಕೋಸ್ಟರೀಕಾಗಳಲ್ಲಿ ಸಿಗುವ ಕನಸಿನ ಹಕ್ಕಿಗಳ ಪಟ್ಟಿಯೇ ತುಂಬಾ ಉದ್ದವಿದೆ. ಕಟ್ಟಕಡೆಗೆ ಪೆಂಗ್ವಿನ್, ಹಮ್ಮಿಂಗ್ ಹಕ್ಕಿಗಳ ಮೇಲೆ ಕಣ್ಣು. ಕನಸಿನ ಕಣ್ಣಿಗೆ ಎಲ್ಲೆ ಎಲ್ಲಿದೆ ಹೇಳಿ. 

ಛಾಯಾಗ್ರಹಣದ ಹವ್ಯಾಸ ನನ್ನ ನಿದ್ದೆಯನ್ನು ಕದ್ದಿದೆ. ಪ್ರತಿಸಲ ಛಾಯಾಗ್ರಹಣ ಮುಗಿಸಿ ಮನೆಗೆ ಬಂದಾಗ ಉಸ್ಸಪ್ಪಾ ಎಂದು ಕಿರಿಕಿರಿಯ ಶೂ ಕಿತ್ತೆಸೆದು, ಮನೆವಾರ್ತೆಯ ಕಡೆ ಗಮನ ಕೊಡುವಾಗ, ಒಮ್ಮೊಮ್ಮೆ ಇವೆಲ್ಲಾ ಬೇಕಿತ್ತಾ ಎನಿಸುತ್ತಿರುತ್ತದೆ. ಅದೆಷ್ಟು ಮಣ್ಣು ಹೊರುತ್ತೇನೆ ನೋಡೇಬಿಡುವ ಎಂದು ಬಂಡು ಬಿದ್ದಿದ್ದೇನೆ! ಮುದ್ದು ಹಕ್ಕಿಗಳ ಸಹವಾಸ ನೆನಪಾದಾಗ ಅವುಗಳನ್ನು ಚಿತ್ರಿಸದೆ ಹೇಗಿರಲಿ?

‍ಲೇಖಕರು Avadhi

September 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅದು ಒಂದ ಮನೀ ಮನಷ್ಯಾ ಇದ್ದಂಗ..

ಅದು ಒಂದ ಮನೀ ಮನಷ್ಯಾ ಇದ್ದಂಗ..

ಮಾಲಾ ಮ ಅಕ್ಕಿಶೆಟ್ಟಿ ಅದ ಮನೀಗೀ ಬರೋದು ಯಾರಿಗೂ ಇಷ್ಟ ಇರಲಿಲ್ಲ. ಬ್ಯಾಡ ಬ್ಯಾಡ ಅಂದ್ರು ಅವ, ಈ ಸಣ್ಣ ಹುಡುಗ ಹೇಳ್ಯಾನ ಅಂದ ತಂದಿದ್ದ....

ನಾವು ಕಾಫಿ ಮಂದಿ..

ನಾವು ಕಾಫಿ ಮಂದಿ..

ಸುಮಾ ವೀಣಾ, ಹಾಸನ  “ಮಲೆನಾಡಿನ ಅಮೃತ”  ಅಂದರೆ ಕಾಫಿನೇ ಅಲ್ವೆ !   ಕೊರೆಯುವ ಮೈಚಳಿ  ಬಿಡಿಸಲು  ...

ರೇಮಂಡ್ ಕ್ವೀನಿಯೊ, ಕ್ರಿಸ್ ಕ್ಲಾರ್ಕ್

ರೇಮಂಡ್ ಕ್ವೀನಿಯೊ, ಕ್ರಿಸ್ ಕ್ಲಾರ್ಕ್

ಆರ್. ವಿಜಯರಾಘವನ್ ಆಲ್ಬರ್ಟ್ ಕಮೂ ತನ್ನ ಸ್ನೇಹಿತ ಮೈಕೆಲ್ ಗ್ಯಾಲಿಮಾರ್ಡ್ ಅವರೊಂದಿಗೆ ಇರುವ ಒಂದು ಛಾಯಾಚಿತ್ರವಿದೆ. ಅವರಿಬ್ಬರೂ ಕಾರು...

4 ಪ್ರತಿಕ್ರಿಯೆಗಳು

 1. ಶಿವಶಂಕರ ಬಣಗಾರ್

  ಭಗವತಿ ಮೇಡಂ ಅವರ ಬರಹ ತುಂಬಾ ಚೆನ್ನಾಗಿ ಬಂದಿದೆ

  ಪ್ರತಿಕ್ರಿಯೆ
 2. ಎಂ. ಆರ್ ಭಗವತಿ

  ಧನ್ಯವಾದಗಳು ಶ್ರೀ ಶಿವಶಂಕರ ಬಣಗಾರ್ !

  ಪ್ರತಿಕ್ರಿಯೆ
 3. ಮೂರ್ತಿ

  ನಮಸ್ತೆ ಮೇಡಂ, ಲೇಖನ ಸೊಗಸಾಗಿದೆ. ನಿಮ್ಮ ಕವಿತೆಗಳಂತೆ ನೀವು ತೆಗೆದ ಛಾಯಾಚಿತ್ರಗಳೂ ಕೂಡ ಸದಾ ಜೀವಂತಿಕೆಯಿಂದ ಕೂಡಿರುತ್ತವೆ.
  ಬರಹ + ಛಾಯಾಗ್ರಾಹಣದ ಹವ್ಯಾಸದ ಜೋಡಿ ಬಲು ಮೋಹಕ, ನಿಮ್ಮ ಇನ್ನಷ್ಟು ಛಾಯಾಗ್ರಾಹಣದ ಅನುಭವಗಳನ್ನು ಬರೀತಾ ಇರಿ.

  ಪ್ರತಿಕ್ರಿಯೆ
 4. Mallikarjuna Hosapalya

  ಲೇಖನ ತುಂಬಾ ಚೆನ್ನಾಗಿದೆ. ನಿಕಾನ್ ಎಫ್ 10 ನಾನು ಕೊಂಡ ಮೊದಲ ಕ್ಯಾಮರಾ, ಯಾಶಿಕಾ ಅಂತ ಒಂದು ಧಡಿಯ ಕ್ಯಾಮರಾ ಇತ್ತು, ನನ್ನ ಸಹೋದ್ಯೋಗಿ ಬಳಸುತ್ತಿದ್ದರು. ಕ್ಲಿಕ್ ಮಾಡಿದರೆ ‘ಕಛಾಕ್’ ಅಂತ ಸದ್ದು ಮಾಡೋದು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: