ಹೆಣ್ಣೇ ನೀ ಮಹಾ ದುರ್ಗೆ
ಸರೋಜಿನಿ ಪಡಸಲಗಿ
ಆಹಹಾ ! ಎಲೆ ಹೆಣ್ಣೆ ,ಏನೆನ್ನಲೇ ನಿನಗೆ
ಸುಮಬಾಲೆ ಅಲ್ಲವೇ ,ಕೋಮಲಾಂಗಿ ಅಲ್ಲವೇ
ಮಹಾಕಾಳಿಯೇ ನೀನೀಗ ಆದಿಶಕ್ತೀ ನೀ ಎನ್ನಲೇ
ತೋರಿಬಿಟ್ಟಿಯಲ್ಲೇ ನೀ ಏನೆಂಬುದನ್ನ
ಹೆಣ್ಣೊಂದು ಹುಟ್ಟಿದರೆ ತಂಗಾಳಿ ಸುಳಿದಂತೆ
ಮಲ್ಲಿಗೆಯ ಅರಳು ಮನೆತುಂಬ ತುಂಬಿದಂತೆ
ತಿಂಗಳನ ಬೆಳಕು ಅಲ್ಲೆಲ್ಲ ಸುರಿದಂತೆ
ಆದರೇನು ಮರೆತಿಹರು ಅದನ ತಾವರಿಯದಂತೆ
ಹೆಣ್ಣು ಬಹುರೂಪಿ ಬಾಳೊಂದು ಉಯ್ಯಾಲೆ
ಅಲ್ಲಿಇಲ್ಲಿಸುಳಿದು ಅತ್ತ ಇತ್ತ ಕುಣಿದು
ತುಂಬಿಹಳು ಮನತುಂಬ ಮನೆತುಂಬ ನಗುನಗುತ
ಅದ ಮರೆತ ಜಗಕೆ ನೀ ಅದನೀಗ ತಿಳಿಸುತಿಹೆಯಾ
ಅಹುದಹುದು ಬಲ್ಲೆ. ನೀನೀಗ ರುದ್ರ ರೂಪಿಣಿ
ಸರ್ವಶಕ್ತೆ ಮಹಾಕಾಳಿ ಮಹಾ ದುರ್ಗೆ ನೀನು
ಮೆಟ್ಟಿನಿಂದಿರುವೆ ಅಟ್ಟಹಾಸ ದುರ್ಹಾಸ ನೀನು
ಶಿವತಾಂಡವವ ಮೀರಿಸಿಹುದು ನಿನ್ನ ರುದ್ರ ನರ್ತನವು
ಪ್ರಕೃತಿ ಪುರುಷ ಒಂದಾದರೆ ಜಗ ನಿತ್ಯನೂತನವು
ಬಾಳಲ್ಲಿ ತಂಬೆಲರು ನಗುವುದು ಜಡ ಚೇತನವು
ಅದ ತಿಳಿಸೆ ಕಣ್ಣ ತೆರೆಸೆ ಈ ನಿನ್ನ ನರ್ತನವೇ
ಬಹುರೂಪಿ ನಾಟ್ಯರಾಣಿ ನಿಲ್ಲದಿರಲಿ ನಿನ್ನ ನಾಟ್ಯವಿನ್ನು
0 ಪ್ರತಿಕ್ರಿಯೆಗಳು