ಕ್ಲಿಕ್ ಆಯ್ತು ಕವಿತೆ: ಹಿಂದಿರುಗಿ ನೋಡೊಮ್ಮೆ..

ಪ್ರತಿ-ಸಂಪ್ರತಿ..

%e0%b2%9c%e0%b2%af%e0%b2%b6%e0%b3%8d%e0%b2%b0%e0%b3%80-%e0%b2%a6%e0%b3%87%e0%b2%b6%e0%b2%aa%e0%b2%be%e0%b2%82%e0%b2%a1%e0%b3%86

ಜಯಶ್ರೀ ದೇಶಪಾಂಡೆ

ಹೊದ್ದ ಧೂಳುಡುಗೆ ಕೊಡವಿ
ತುಕ್ಕು ಗಿಕ್ಕಿನ ಗೊಡವೆಯಿಲ್ಲದೆ
ಎದ್ದು ಬಂದ ಪಳೆಯುಳಿಕೆಗೆ
ಇನ್ನೂ ಉಸಿರಿಲ್ಲ ಅನ್ನಬೇಡ.
ನಿನ್ನ ಗತಸ್ಮೃತಿ ಮೆಲುಕುಗಳ  ಶತಮಾನದಿಂದೆತ್ತಿ ಕಣ್ಣಿದುರು  ಚಾಚಿಬಿಡಬಲ್ಲೆ…
ನನ್ನೆದೆಯೊಳಗೆ ಹಿಡಿದಿಟ್ಟ ಲಕ್ಷಕ್ಷಣಕೋಶದಲ್ಲಿವೆ ನಿನ್ನ ಮಸ್ತಷ್ಕಭಿತ್ತಿಯ
ಪ್ರತಿಬಿಂಬಗಳ ಸಾಲು ಸಾಲು..

ಗಭ೯ಚೀಲವೊಡೆದು ಹೊರಬಿದ್ದ ಶಿಶು ಅತ್ತ ಗಳಿಗೆಯ ಹಿನ್ನೆಲೆಯಲಿ ಮರೆತ ಪ್ರಸವವೇದನೆಯ ಪರಾಕಾಷ್ಠೆ!
ಮತ್ತೆ ಬೊಚ್ಚುಬಾಯಿ ತೆರೆದ ಎದೆಮೇಲಿನ ಕೂಸು,
ಮೊಲೆತೊಟ್ಟಿನ ಮಾಗ೯ವಾಗಿ ಒಡಲಮೂಲದವರೆಗೆ  ಚಾಚಿ ಹರಡಿದ ಅಂತ:ಕರಣಸೆಲೆಗೆ ಪ್ರತಿಫಲಿಸಿದ ನಿನ್ನ ಮುಗುಳ್ನಗೆ ನಿನ್ನೊಳಡಗಿರುವ ನೆನಪಿನಷ್ಟೇ ಸಿಹಿ ನನಗೂ…

ನೇವರಿಸಿ ನೆತ್ತಿ ಮೃದುಮುದ್ದೆಯ, ಹೂಪಕಳೆಯಂತೆತ್ತಿ ಹನಿಮುತ್ತನೊತ್ತುತ್ತ ಪತಿ ನಿನ್ನೆಡೆಗೆ ಬೀರಿದ ನೋಟ…
ನಿನ್ನ ಪ್ರತಿನೋಟಗಭ೯ದೊಳಗಿರುವ
ಆ ಸಿಹಿಸ್ಮೃತಿಗಳ ಛಾಯೆ ನನ್ನಲ್ಲಿರದೆ
ಇನ್ನೆಲ್ಲಿದೆ ಹೇಳು? ನಿಮ್ಮ ಮಧುರಕ್ಷಣಗಳ ಪ್ರತ್ಯಕ್ಷ ಸಾಕ್ಷಿ ನಾನಲ್ಲದೆ ಇನ್ನಾರು?

ಅಪ್ಪನ ತೋಳಲ್ಲಿ, ಅಮ್ಮನ ಮಡಿಲಲ್ಲಿ ಕೊನೆಗಜ್ಜ ಪಿಜ್ಜನ ತೊಡೆಮೇಲೆ ಕೂತು ಕೇಳಿದ ಮುಗ್ಧ ಪ್ರಶ್ನಾವಳಿ…
ಹಿಂಡಿ ಹೂಕೆನ್ನೆ ಮತ್ತೆ ಮುತ್ತಿಕ್ಕಿ ಕಿವಿಗೆ ಪಿಸುಗುಟ್ಟಿ ನಿನಗುತ್ತರಿಸಿದ ಕುಚೇಷ್ಟೆ ಪದ ಅರಳಿಸಿದ ನಿನ್ನ ಕಣ್ಣುಗಳ ಆ ಹೊಳಪೆಲ್ಲಿ ಬಂದಿ ಗೊತ್ತೇ?
ಇಗೋ ಇಲ್ಲಿ ನನ್ನಲ್ಲಿ!

ಎದೆಗವುಚಿ ಹೊತ್ತಿಗೆ ನಡೆದು ಭಿರಿಭಿರಿ,
ಕಥನಗಳ ಒಡಲುಹೊಕ್ಕು ಹೊರಬಂದು ಪ್ರಶ್ನಾಪ್ರಶ್ನೆಗಳ ಲೋಕಭೇದಿಸಿ ಮಥಿಸಿ,ಮನ್ನಿಸಿ, ಮದಿ೯ಸಿ ಕಡೆದು, ಹೊರಬರುವ ತಥ್ಯಗಳ ಮಿದುಳ ಕೋಶದೊಳಿಟ್ಟು ಕೊನೆಗೊಮ್ಮೆ ಹೊರಚೆಲ್ಲಿ ಹಗುರಾಗಿ ಕೈಚಾಚಿ
ಹಿಗ್ಗಿ ನಕ್ಕ ನಿನ್ನ ಗಳಿಗೆಗಳು
ಇಲ್ಲಿ ನನ್ನಲ್ಲಿ….
ಬೇಕೇನು ಮತ್ತೆ?

ನೆರಳು ಬೆಳಕಿನ ಕಣ್ಣಾಮುಚ್ಚಾಲೆಯೆ  ನಂಟು, ನನಗಿಲ್ಲ ಕವಚದಡಿಯ ಪದರಗಳ ಅರಿವು.
ಆದರೂ…
ಸತ್ಯದಶ೯ನ ಕ್ಷಣಗಳ
ಘೋರ ನಿನ್ನ ಮುದುಡಿಸಿದಷ್ಟೇ ನನ್ನ ನಡುಗಿಸಿತೆನ್ನಲಾರೆ…
ಏಕೆಂದರೆ ನಾ ಬರಿಯ ಕಾಲಚಕ್ರಯಂತ್ರ ಹಚ್ಚಿಕೊಂಡಿರುವ
ಅಂಗೈ ಕನ್ನಡಿ!

ಇರುವುದನ ಇರುವಂತೆ ಹೇಳುವ
ಅನಿವಾರ್ಯಜನಿತ ಕಣ್ಣು!
ನಿನ್ನ ಬದುಕಿನ ಹಾಳೆಗಳ ತುಂಬ ಮೂಡಿರುವ ಹೆಜ್ಜೆಗಳ ಬಿಂಬ ನಾನಷ್ಟೇ.
ಹಿಂದಿರುಗಿ ನೋಡೊಮ್ಮೆ
ಎಲ್ಲ ಕಂಡು ಕರಗಿಸಿಕೊಳ್ಳುತ್ತ ಮುದುಡಿರುವೆ ನಾ!

‍ಲೇಖಕರು admin

October 23, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This