ಖಾಲಿಯಿರದ ಹಾಳೆಗಳು

ಹೈವೇ 7

———

ಹೀಗೊಂದು ರಾತ್ರೆ. ಸಾಕಮ್ಮನ ನಡುಮನೆಯ ಗೂಡುಗಳನ್ನು ತಡಕಾಡುತ್ತಿದ್ದವನು, ಒಂದು ಗೂಡಿನಲ್ಲಿ ನೋಟ್ ಪುಸ್ತಕವೊಂದು ಇದ್ದದ್ದನ್ನು ನೋಡಿದೆ, ಬೆರಗುಗಣ್ಣುಗಳಿಂದ ಅದನ್ನು ಕೈಗೆತ್ತಿಕೊಂಡು ತಿರುವತೊಡಗಿದೆ. ಅಲ್ಲಲ್ಲಿ ತಾರೀಖು, ಹಣದ ವಿವರಗಳು ಇದ್ದವು. ಕೆಲವು ಹಾಳೆಗಳು ಖಾಲಿ ಇದ್ದವು. ನೋಟ್ ಪುಸ್ತಕದ ಹಾಳೆಗಳನ್ನು ಕತ್ತರಿಸಿ ಸಣ್ಣದಾದ ಒಂದು ಲೆಕ್ಕದ ಪುಸ್ತಕವನ್ನಾಗಿ ಅದನ್ನು ತಯಾರಿಸಿದ್ದರು.

hoovu1.jpg

ಭಾಗ: ಹದಿನೈದು

ವಿ.ಎಂ.ಮಂಜುನಾಥ್

ಸಾಕಮ್ಮ ನನ್ನ ಅಪ್ಪನಿಗೆ ತಂಗಿಯಾಗಬೇಕು. ಇವಳು ಸಣ್ಣವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡು ಹೆಂಗಸಾಗಿ ಹೋದವಳು. ಇಬ್ಬರು ಗಂಡು ಮತ್ತು ಒಂದು ಹೆಣ್ಣು ಸೇರಿ ಇವಳಿಗೆ ಮೂರು ಜನ ಮಕ್ಕಳು. ಗಂಡ ನಾರಾಯಣಪ್ಪ ತೀರಿಕೊಂಡ ಬಳಿಕ ಒಬ್ಬಳೇ ಪರದೇಸಿಯಂತೆ ಕೂಲಿನಾಲಿ ಮಾಡಿಕೊಂಡಿದ್ದಳು. ನನ್ನ ಅಪ್ಪ ಅಮ್ಮನ ಜೊತೆ ದೂರದೂರುಗಳಿಗೆ ರೆಕ್ಕೆ ಕಟ್ಟಲು ಹೋಗುತ್ತಿದ್ದಳು. ಇವಳು ಗಂಡನ ಊರಾದ ಪುಟ್ಟೇನಹಳ್ಳಿಯಲ್ಲಿ ಸಾಲಸೋಲ ಮಾಡಿ ಒಂದು ಜೊತೆ ಮೇಕೆಮರಿಗಳನ್ನು ಕೊಂಡುಕೊಂಡಿದ್ದಳು. ಅವುಗಳನ್ನು ಕೆಂಚೇನಹಳ್ಳಿ, ಹಾರೋಹಳ್ಳಿ, ಸಿಂಗನಾಯಕನಹಳ್ಳಿ, ನಾಗೇನಹಳ್ಳಿ ದಿನ್ನೆ ಕಡೆ ಮೇಯಿಸಲು ಹೋಗುತ್ತಿದ್ದ ಇವಳು ನೇಪಾಳದ ಗೂರ್ಕಾನನ್ನು ಪ್ರೇಮಿಸತೊಡಗಿದಳು. ಈ ಗೂರ್ಕಾ ಇಲ್ಲೇ ಪುಟ್ಟೇನಹಳ್ಳಿಯ ಫ್ಯಾಕ್ಟರಿಯೊಂದರಲ್ಲಿ ವಾಚ್ ಮನ್ ಆಗಿ ಕೆಲಸ ಮಾಡಿಕೊಂಡಿದ್ದ. ಗಟ್ಟಿಮುಟ್ಟಗಿನ ಆ ಮನುಷ್ಯ ಇವಳನ್ನು ಬಹಳ ಪ್ರೀತಿ ಮಾಡುತ್ತಿದ್ದ. ಒಂದು ದಿನ ಸಂಬಂಧಿಕರು, ನೆರೆಹೊರೆಯವರು, ಅತ್ತೆಮನೆಯವರನ್ನೆಲ್ಲ ಎದುರಿಸಿ ಗೂರ್ಕಾನನ್ನು ತನ್ನ ಮನೆಯಲ್ಲೇ ತಂದಿಟ್ಟುಕೊಂಡಳು. ಅಲ್ಲಿಂದ ಇವಳಿಗೆ ಎಲ್ಲರೂ “ಗೂರ್ಕನ ಹೆಂಡ್ರು” ಎಂದು ಕರೆಯತೊಡಗಿದರು. ಇವಳ ಮಗಳು ಮಾಲಾ ನನ್ನ ದೊಡ್ಡಪ್ಪನ ಮಗ ಮುನಿಕೃಷ್ಣನನ್ನು ಮದುವೆ ಮಾಡಿಕೊಂಡಿದ್ದವಳು ಅವನ ಕುಡುಕುತನ ಸಹಿಸದವಳಾಗಿ ಅವನನ್ನು ತ್ಯಜಿಸಿ, ತನ್ನ ತಾಯಿಯ ಎರಡನ ಗಂಡ ಗೂರ್ಕನ ಸಂಬಂಧದಲ್ಲೇ ಒಬ್ಬನನ್ನು ಕಟ್ಟಿಕೊಂಡಳು. ಇವಳಿಗೆ ಹುಟ್ಟಿದ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಗಂಡು ಹುಡುಗ ನೇಪಾಳಿಗರಂತೆ ಹುಟ್ಟಿ ಎಲ್ಲರನ್ನೂ ಬೆಚ್ಚಿಬೀಳಿಸಿದರು. ಗೂರ್ಕ ಕನ್ನಡದ ಜೊತೆಗೆ ಹಿಂದಿ ಸೇರಿಸಿ ಮಾತಾಡಲೆತ್ನಿಸಿದರೆ, ಸಾಕಮ್ಮ ಮಾತ್ರ ಅರೆಬರೆ ಹಿಂದಿಯಲ್ಲೇ ಮಾತನಾಡುತ್ತಿದ್ದಳು. ಗೂರ್ಕಾನನ್ನು ಕರೆದುಕೊಂಡು ಮೇಕೆ ಮೇಯಿಸಲು ದಿನ್ನೆಗೆ ಹೋಗುತ್ತಿದ್ದಳು. ಸ್ವಲ್ಪ ದಾರಿ ತಪ್ಪಿದಂತೆ ವರ್ತಿಸುತ್ತಿದ್ದ ಇವಳು, ಬರುಬರುತ್ತಾ ಗೂರ್ಕಾ ಒಬ್ಬನನ್ನೇ ಮೇಕೆ ಮೇಯಿಸಲು ದಿನ್ನೆಗೆ ಸಾಗುಹಾಕುತ್ತಿದ್ದಳು. ತಾನು ಮಾತ್ರ ವ್ಯವಹಾರಸ್ಥೆ ಎನ್ನುವಂತೆ ಎಲ್ಲೆಲ್ಲೋ ಓಡಾಡಿಕೊಂಡು ಬರುತ್ತಿದ್ದಳು. ಬಡ್ಡಿ ವ್ಯವಹಾರ ಮಾಡುತ್ತಿದ್ದಳು. ಕೆಂಚೇನಹಳ್ಳಿಯಲ್ಲಿ ಕೌನ್ಸಿಲರ್ ಆಗಿದ್ದ ನಮ್ಮ ದೊಡ್ಡಪ್ಪ ಗಾಡಿ ನಾರಾಯಣಪ್ಪನನ್ನು ಓಲೈಸಿ ಒಂದು ಸೈಟ್ ಮಾಡಿಕೊಂಡಳು.

ಗೂರ್ಕ ನಮ್ಮನ್ನು ವಿಚಿತ್ರವಾದ ಭಾಷೆಯಲ್ಲಿ ಮಾತನಾಡಿಸುತ್ತಿದ್ದ. ಕುಡಿದಾಗಲಂತೂ ನಮ್ಮನ್ನು ಅತಿಯಾಗಿ ಮುದ್ದಿಸುತ್ತಿದ್ದ. ನಾವು ಸಾಕಮ್ಮನ ಮನೆಗೆ ಬಂದಾಗಲೆಲ್ಲ ಗೂರ್ಕನೇ ಎಲ್ ಬಿಎಸ್ ನಗರದ ಸರುವೆ ತೋಪಿಗೆ ಹೋಗಿ ದನದ ಬಾಡು ತಂದು ಬೇಯಿಸಿ ಕೊಡುತ್ತಿದ್ದ. ಮೂಲೆಯಲ್ಲಿ ಕುಕ್ಕರುಗಾಲಿನಲ್ಲಿ ಕುಳಿತುಕೊಂಡು ಬೀಡಿ ಸೇದುತ್ತಾ ಕೆಮ್ಮುತ್ತಿದ್ದ ಈತ ಸಾಕಮ್ಮನಿಗೆ ಗುಲಾಮನಾಗಿದ್ದನೇ ಹೊರತು, ಎದೆಯುಬ್ಬಿಸಿಕೊಂಡು ಓಡಾಡುವ, ನ್ಯಾಯಪಂಚಾಯ್ತಿಯಲ್ಲಿ ಕುಳಿತು ಬುದ್ಧಿವಾದ ಹೇಳುವ ಸರೀಕ ಗಂಡನಂತೂ ಆಗಿರಲಿಲ್ಲ. ಎಲ್ಲರೂ ಸೇರಿರುವಾಗ ಅತಿಯಾದ ಹುಮ್ಮಸ್ಸು ಬಂದು ಈತ ಮಾತನಾಡಲು ಹೋದಾಗ ಗದರಿಬಿಡುತ್ತಿದ್ದಳು.

ನಮ್ಮೂರಿನಿಂದ ಐದಾರು ಮೈಲುಗಳಷ್ಟು ದೂರದಲ್ಲಿದ್ದ ಸಾಕಮ್ಮನ ಊರಿಗೆ ನಾವು ನಡೆದುಕೊಂಡೇ ಹೋಗುತ್ತಿದ್ದೆವು. ವ್ಹೀಲ್ ಎಂಡ್ ಯಾಕ್ಸಲ್, , ಎಸ್ಕಾರ್ಟ್ಸ್ ಮತ್ತು ಡೀಸೆಲ್ ಫ್ಯಾಕ್ಟರಿಗಳ್ಯಾವೂ ಇರದೆ ಹೋಗಿದ್ದಿದ್ದರೆ ಅವಳ ವಾಸದ ಗ್ರಾಮ ನಮ್ಮ ಕಣ್ಣಿಗೇ ಕಾಣುತ್ತಿತ್ತು. ಆಗ ಆ ಗ್ರಾಮಕ್ಕೆ ಬಸ್ಸುಗಳೂ ಇರಲಿಲ್ಲ. ಸಾಮಾನ್ಯವಾಗಿ ಅಪ್ಪ ನಮ್ಮನ್ನೆಲ್ಲ ತನ್ನ ತಂಗಿಯ ಊರಿಗೆ ಶನಿವಾರ ಸಂಜೆ ಕರೆದುಕೊಂಡು ಹೋಗುತ್ತಿದ್ದರು. ನನ್ನನ್ನು ಮಾತ್ರ ಅಪ್ಪ ತನ್ನ ಹೆಗಲ ಮೇಲೆ ಕೂರಿಸಿಕೊಂಡು ಕತೆ ಹೇಳುತ್ತಾ ನಡೆಯುತ್ತಿದ್ದರು. ಆಗ ಊರೆಲ್ಲ ಕಾಡೇ ಆದ್ದರಿಂದ ಮರಗಳ ನಡುವೆ ಹಾದು ಹೋಗುತ್ತಿದ್ದೆವು. ನಾವು ಅವಳ ಕಣ್ಣಿಗೇ ಕಾಣಿಸಿಕೊಂಡ ಕೂಡಲೇ ಯಾರ ಜೊತೆಗಾದರೂ ಕೆರೆಗೆ ಹೋಗಿ ಏಡಿಕಾಯಿ, ಮೀನುಗಳನ್ನು ಹಿಡಿದುಕೊಂಡು ಬರುತ್ತಿದ್ದಳು. ಅಪ್ಪನಿಗೆ ಏಡಿಕಾಯಿ ಎಂದರೆ ಪ್ರಾಣ. ಕೆಲವು ಸಲ ಅಪ್ಪ ಕೆರೆಗೆ ಹೋಗಿಬಿಡುತ್ತಿದ್ದರು. ಆಗ ನಾನೂ ಅವರ ಹಿಂದೆ ಹೋಗಿಬಿಡುತ್ತಿದ್ದೆ. ತೂಬು, ಕಾಲುವೆಗಳಲ್ಲಿ ನನ್ನನ್ನು ಈಜಿಸುತ್ತಿದ್ದರು. ಹುಣಸೇಮೀನು, ಮತ್ತಿ ಮೀನುಗಳು ಕಾಲುಗಳಿಗೆ ಢಿಕ್ಕಿ ಹೊಡೆಯುವುದೆಂದರೆ ನನಗೆ ಅಸಾಧ್ಯವಾದ ಕಚಗುಳಿ ಇಟ್ಟಂತಾಗುತ್ತಿತ್ತು. ಆಗ ಅಪ್ಪ ನನ್ನನ್ನು ಮೇಲಕ್ಕೆತ್ತಿಕೊಳ್ಳುತ್ತಿದ್ದರು.

ಹೀಗೆ ಸಾಕಮ್ಮನ ಮನೆಯಲ್ಲಿ ಸಂಜೆಯಾಯಿತೆಂದರೆ ಬಾಡು, ಹೆಂಡ, ನಿಂದನೆ, ಅಪನಿಂದನೆಗಳು ಒಂದು ಗೋಷ್ಟಿಯಂತೆ ನಡೆಯುತ್ತಿದ್ದವು. ಸಾಕಮ್ಮ ತನ್ನ ಮನೆಯೊಳಗೇ ಮೇಕೆಗಳನ್ನು ಕಟ್ಟಿಕೊಂಡಿರುತ್ತಿದ್ದಳು. ನಾವು ಮೂಲೆಯಲ್ಲಿ ಕುಳಿತುಕೊಂಡೋ ಕಂಬಳಿ ಹೊದ್ದುಕೊಂಡೋ ಮಲಗಿರುತ್ತಿದ್ದವರು, ಸುಮಾರು ಐವತ್ತು ಅರವತ್ತು ಮೇಕೆಗಳನ್ನು ಕೂಡಿಹಾಕಿರುತ್ತಿದ್ದ ಕೊಟ್ಟಿಗೆ ಮನೆಯ ಕಡೆ ದಿಟ್ಟಿಸುತ್ತಿದ್ದೆವು. ಅವುಗಳ ಗಂಜಲ, ಪಿಚಿಕೆ, ಅರಚಾಟ ನಮ್ಮನ್ನು ತಮ್ಮ ಕಡೆ ಆಕರ್ಷಿಸುವಂತೆ ಮಾಡುತ್ತಿದ್ದವು. ಸಾಕಮ್ಮ ಅಲ್ಲೇ ಆ ವಾಸನೆಯಲ್ಲೇ ಮಡಕೆ ಇಟ್ಟು ಬಾಡು ಬೇಯಿಸುತ್ತಿದ್ದಳು. ಆ ಮೇಕೆಗಳೆಲ್ಲವೂ ಒಳಮನೆಯಿಂದ ನಡುಮನೆಗೆ ಒಳ್ಳೆ ದಾರಿಹೋಕರಂತೆಯೋ ಕೆಳಜಾತಿಯವರಂತೆಯೋ ಇಣುಕಿ ನೋಡುತ್ತಿದ್ದವು.

ಹೀಗೊಂದು ರಾತ್ರೆ. ಸಾಕಮ್ಮನ ನಡುಮನೆಯ ಗೂಡುಗಳನ್ನು ತಡಕಾಡುತ್ತಿದ್ದವನು, ಒಂದು ಗೂಡಿನಲ್ಲಿ ನೋಟ್ ಪುಸ್ತಕವೊಂದು ಇದ್ದದ್ದನ್ನು ನೋಡಿದೆ, ಬೆರಗುಗಣ್ಣುಗಳಿಂದ ಅದನ್ನು ಕೈಗೆತ್ತಿಕೊಂಡು ತಿರುವತೊಡಗಿದೆ. ಅಲ್ಲಲ್ಲಿ ತಾರೀಖು, ಹಣದ ವಿವರಗಳು ಇದ್ದವು. ಕೆಲವು ಹಾಳೆಗಳು ಖಾಲಿ ಇದ್ದವು. ನೋಟ್ ಪುಸ್ತಕದ ಹಾಳೆಗಳನ್ನು ಕತ್ತರಿಸಿ ಸಣ್ಣದಾದ ಒಂದು ಲೆಕ್ಕದ ಪುಸ್ತಕವನ್ನಾಗಿ ಅದನ್ನು ತಯಾರಿಸಿದ್ದರು. ನಮಗೆ ಇಂಥ ಒಂದು ನೋಟ್ ಪುಸ್ತಕವೂ ಇರದ ಅಂಥ ಸ್ಥಿತಿಯಲ್ಲಿ ಆ ಸಣ್ಣ ಪುಸ್ತಕ ನನ್ನನ್ನು ಸೆಳೆಯತೊಡಗಿತು. ಅಲ್ಲಿಂದ ಪ್ರಾರಂಭವಾಯಿತು. ಅದನ್ನು ಹೇಗಾದರೂ ಮಾಡಿ ಕದಿಯಲೇಬೇಕಾದ ಒತ್ತಾಯ ನನ್ನಲ್ಲಿ ಹೆಚ್ಚಾಗತೊಡಗಿತು. ಪುಟ್ಟೇನಹಳ್ಳಿಗೆ ಬಂದಾಗಲೆಲ್ಲ ಆ ನೋಟ್ ಪುಸ್ತಕವನ್ನು ಎತ್ತಿಕೊಂಡು ಹೊಟ್ಟೆಯಲ್ಲಿಟ್ಟುಕೊಂಡು ತಿರುಗಾಡುವುದು, ರಾತ್ರೆ ಮಲಗುವಾಗ ಕಂಬಳಿ ಒಳಗಿಟ್ಟುಕೊಂಡು ಮಲಗುವುದು ನಡೆದೇ ಇತ್ತು. ಎಂದಿನಂತೆ ಆ ಭಾನುವಾರ ನಾವೆಲ್ಲರೂ ನಮ್ಮ ಮನೆಗೆ ಹಿಂದಿರುಗಬೇಕಿತ್ತು. ನಾನು ಮಾತ್ರ ಆ ನೋಟ್ ಪುಸ್ತಕವನ್ನು ನನ್ನ ಶರ್ಟ್ ನೊಳಗೆ ತುರುಕಿಕೊಂಡು ಎಲ್ಲರಿಗಿಂತಲೂ ಮುಂಚಿತವಾಗಿ ಊರು ಬಿಟ್ಟು, ವ್ಹೀಲ್ ಅಂಡ್ ಯಾಕ್ಸಲ್ ಫ್ಯಾಕ್ಟರಿ (ರೈಲ್ವೆ ಗಾಲಿ ಮತ್ತು ಅಚ್ಚು ಕಾರ್ಖಾನೆ) ಎದುರಿಗೆ ನಿಂತಿದ್ದೆ. ಅವರೆಲ್ಲರೂ ಇನ್ನೂ ಸಾಕಮ್ಮನ ಮನೆಯ ಮುಂದೆ ಹಿಂತಿರುಗುವ ಮುನ್ನ ಮರೆತ ಮಾತುಗಳನ್ನೋ, ಆಡಲಿರುವ ಮಾತುಗಳನ್ನೇನೋ ಆಡಿಕೊಳ್ಳುತ್ತಿದ್ದರು. ನನಗೆ ಒಂದು ಕಡೆ ಭಯ. ಸಾಕಮ್ಮ ಅಥವಾ ಗೂರ್ಕನೇನಾದರೂ ಆ ಗೂಡಿನಲ್ಲಿ ಲೆಕ್ಕದ ಪುಸ್ತಕಕ್ಕೆ ಕೈ ಹಾಕಿದರೆ ಸಿಗದೇ ಹೋದಾಗ, ನಾನು ಸಿಕ್ಕಿಕೊಳ್ಳುವ ಆತಂಕ ಕ್ಷಣಕ್ಷಣಕ್ಕೂ ಎದುರಾಗುತ್ತಲೇ ಇತ್ತು. ಅವರೆಲ್ಲರೂ ಇರುವೆ ಸಾಲಿನಂತೆ ಒಬ್ಬರ ಹಿಂದೊಬ್ಬರು ಬರತೊಡಗಿದರು. ನಾನು ಮಾತ್ರ ಬೇಗಬೇಗನೆ ನಡೆಯುತ್ತಿದ್ದೆ, ಹೊಟ್ಟೆಯೊಳಗಿಟ್ಟುಕೊಂಡಿದ್ದ ಪುಸ್ತಕವನ್ನು ಮುಟ್ಟಿ ನೋಡಿಕೊಳ್ಳುತ್ತಾ.

ಆ ರಾತ್ರೆ ನಾವು ಮನೆ ಸೇರಿದಾಗ ಗಂಟೆ ಎಂಟಾಗಿತ್ತು. ರಾತ್ರೆ ಮಲಗುವಾಗ ಸಾಕಮ್ಮನ ಮನೆಯಿಂದ ಕದ್ದು ತಂದಿದ್ದ ಲೆಕ್ಕದ ಪುಸ್ತಕವನ್ನು ತೆರೆದು ನೋಡಿದೆ. ಎಲ್ಲ ಪುಟಗಳು ಲೆಕ್ಕದಿಂದ ತುಂಬಿಹೋಗಿದ್ದವು. ಮೇಕೆ ಹಾಲನ್ನು ಯಾರ್ಯಾರ ಮನೆಗಳಿಗೆ ಹಾಕಿದ ದಿನಾಂಕವನ್ನು, ಹಣ ಸ್ವೀಕರಿಸಿದ್ದನ್ನು, ಮುಂಗಡ ಹಣ ಪಡೆದಿದ್ದನ್ನು, ಬಾಕಿಯನ್ನೆಲ್ಲ ಬರೆದಿದ್ದರು. ನಾನು ಆ ಪುಸ್ತಕವನ್ನು ನೋಡುವಾಗ ಸಾಕಷ್ಟು ಹಾಳೆಗಳು ಖಾಲಿಯಿದ್ದವು. ಅದರಿಂದ ನಾನು ಪಾಠಗಳನ್ನು, ಪ್ರಶ್ನೋತ್ತರಗಳನ್ನು ಬರೆದುಕೊಳ್ಳಬಹುದೆಂದು ಅಂದುಕೊಂಡಿದ್ದೆ. ಆದರೆ ಅದನ್ನು ನಾನು ಕದಿಯುವಷ್ಟೊತ್ತಿಗೆ ಹಾಳೆಗಳೆಲ್ಲವೂ ತುಂಬಿಹೋಗಿದ್ದವು; ಅದರೊಳಗೆ ಕಳೆಗುಂದಿದ ನನ್ನ ಮುಖವನ್ನೂ ಕೂಡ ನೋಡಲಾಗುತ್ತಿರಲಿಲ್ಲ.

‍ಲೇಖಕರು avadhi

April 21, 2008

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This