ಗಂಡಸಾಗಲು ಪರದಾಡಿದವನ ಮರೆಯಲಾಗುತ್ತಿಲ್ಲ!

 ಹಂಗಾಮದಿಂದ ಹೆಕ್ಕಿದ್ದು

ಗಾನಾ ಜೋಯ್ಸ್     

body.jpgದ್ದಕ್ಕಿದ್ದ ಹಾಗೇ ಒಂದಿನ ಅಮ್ಮ ಗಂಭೀರ ದನಿಯಲ್ಲಿ ಗದರಿದಳು. “ಇನ್ಮೇಲೆ ನೀನು ಅವನ ಜತೆ ಬೆಟ್ಟ, ಗುಡ್ಡ, ಕೆರೆ ಅಂತೆಲ್ಲಾ ಅಲೆಯೋದೇನೂ ಬೇಕಾಗಿಲ್ಲ” ಅಂತ. ನಾನೂ ಲೆಕ್ಕ ಹಾಕಿದೆ. ನೆರೆದು ಆಗಲೇ ಐದು ವರ್ಷ ಆಗಿಹೋಗಿತ್ತು. ಅಮ್ಮ ಅದ್ಯಾವ ಬೋಧಿವೃಕ್ಷದ ಕೆಳಗೆ ಕುಂತೆದ್ದು ಬಂದಿದ್ದಳೋ, ಇದ್ದಕ್ಕಿದ್ದ ಹಾಗೇ ಜ್ಞಾನೋದಯವಾಗಿತ್ತು. ನನ್ನ-ಅವನ ಮಧ್ಯದ ಸಲಿಗೆ ಅವಳಿಗೆ ಬೇರೇನೂ ಚಾಡಿ ಹೇಳಿದಂತಿತ್ತು.

ಕಳ್ಳ ಚಂದ್ರನಿಲ್ಲದ ಕದ್ದಿಂಗಳ ರಾತ್ರಿಗಳು, ಬಾನು ಕಾವಣ ಹೊಚ್ಚಿ ಹೂ-ಲತೆಗಳಿಗೆ ಮುತ್ತಿಕ್ಕುವ ಮುಂಜಾವಗಳು, ಮಳೆಗಾಲದ ದಭದಭ, ಯಕ್ಷಗಾನಗಳೆಲ್ಲವೂ ನಮಗೆ ಈವರೆಗೂ ಜತೆಯಾಗಿ ನಿಂತಿದ್ದವು. ಗುಟ್ಟು ಮುಚ್ಚಿಟ್ಟುಕೊಂಡಿದ್ದವು.

ಅಮ್ಮ, ಇಷ್ಟು ದಿನ ಸುಮ್ಮಗಿದ್ದವಳು ಹಿಂಗ್ಯಾಕೆ ಅಂದುಬಿಟ್ಲು? ಅದ್ಯಾಕೋ, ಅಮ್ಮ ಹಾಗಂದಾಗಿಂದ ಅಪ್ಪನ ಮೂತಿ ಸಣ್ಣಗಾಗಿತ್ತು. ಮೂರೊತ್ತೂ ತಂಬಾಕು ನುರಿಯಲು ಶುರು ಹಚ್ಚಿದ್ದ. ಇದ್ದೊಬ್ಬ ತಂಗಿಯ ಮಗ, ಗಂಡು ಹುಟ್ಟಿಲ್ಲದ ಮನೆಗೆ ಅಳಿಯನಾಗಿ ಬರಲಿ ಅನ್ನೋ ಆಸೆ ಹೊತ್ತಿದ್ದ ಅಪ್ಪ-ನನ್ನಾಸೆಗೂ ದನಿಯಾಗುವನೆಂದುಕೊಂಡೆ. ಉಹೂಂ. ಅಂವ ಅಮ್ಮನ ಬಾಯಿಗೆ ಹೆದರಿ ಕುಕ್ಕರಗಾಲಲ್ಲಿ ಕುಂತು ಎಲೆ-ಅಡಿಕೆ ಜಗೀತಾ ಇದ್ದುಬಿಟ್ಟ. ಅವನೆಂತಾ ಗಂಡಸೇ? ನಾನೇ ಖುದ್ದು ನನ್ನ ಹುಡುಗನಿಗೆ “ನಡಿ ಓಡಿ ಹೋಗುವಾ” ಅಂದರೆ, ಕಾಲೂ ಕದಲಿಸದೇ ನಿಂತುಬಿಟ್ಟ ಅವ. ಅವನೂ ಒಬ್ಬ ಗಂಡಸೇನೇ?

ಇಪ್ಪತ್ಮೂರು ವರ್ಷಗಳಿಂದಲೂ ಕೊಟ್ಟಿಗೆಗೆ ಕಲಗಚ್ಚಿಡುತ್ತಾ, ಮುರು ಬೇಯಿಸ್ತಾ, ಆಳು-ಕಾಳುಗಳಿಗೆ ಮಾಡಿ ಒಟ್ಟುತ್ತಾ, ಅಡಿಕೆ ಸುಲ್ತ ಅಂತೆಲ್ಲಾ ಸೆರಗು ಕಟ್ಟಿಕೊಂಡು ಓಡಾಡ್ತಾ ಪರದಾಡ್ತಿದ್ದ ಅಮ್ಮ, ಈ ಗಂಡಸರಲ್ಲದವರ ತೆಕ್ಕೆಯಲ್ಲಿ ನನ್ನ ಹಾಕಲು ಹಿಂಜರಿದಳೇನೋ. ಅದಕ್ಕೇ ಇರಬೇಕು, ಅವಳು “ಅಮೆರಿಕಾ ಇಂಜಿನಿಯರ್ರು” ಹುಡುಕಿದ್ದು!

ಇದೀಗ ಅಮೆರಿಕಾ. ಹೊಸ ಗಂಡು-ಗಂಡ! ಹೊಸ ಹಸಿರು. ಹೊಸ ಥರದ ಚಳಿ. ಹೊಸ ಗಾಳಿ. ಆದರೆ ಅದ್ಯಾವುದಕ್ಕೂ ಜೀವವಿಲ್ಲವೇ ಗೆಳತೀ. ಅದ್ಯಾವುದೂ ನನ್ನ ಮಲೆನಾಡಾಗಲು ಸಾಧ್ಯವಿಲ್ಲ. ಡಾಲರುಗಟ್ಟಲೆ ತಂದು ಸುರಿದು, ಪಿಜ್ಜಾ ತಿನ್ನಿಸುವ, ಶಾಪಿಂಗ್ ಮಾಡಿಸುವ ಇವ ಕೂಡಾ ನನ್ನವನೆನಿಸೋದೇ ಇಲ್ಲ.

ಶ್! ಹೇಳ್ತೀನಿ ಕೇಳು… ಗಂಡಸಾಗಲು ಪರದಾಡಿದ ಆ ನನ್ನ ಹುಡುಗನ ಮರೆಯಲಾಗುತ್ತಿಲ್ಲ!

‍ಲೇಖಕರು avadhi

July 4, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಚೇತನಾ ಎಂಬ ‘ಗಾನಾ ಜೋಯ್ಸ್

ಚೇತನಾ ಎಂಬ ‘ಗಾನಾ ಜೋಯ್ಸ್

' ಕನಸುಗಾರ ವೆಂಕಟ್ರಮಣ ಗೌಡರು 'ಹಂಗಾಮ' ಆರಂಭಿಸಿದಾಗ ಮೂಡಿ ಬಂದ ವಿಶಿಷ್ಟ ಲೇಖಕಿ ಗಾನಾ ಜೋಯ್ಸ್. ಈಗ ಈಕೆ ಚೇತನಾ ತೀರ್ಥಹಳ್ಳಿ. ಈಗಾಗಲೇ...

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಹಳೆಯ ನೆನಪು ಮತ್ತು ಒಂದು ಹೊಸ ಪುಸ್ತಕ ಈಗ ಅದೆಲ್ಲ ಮಜಾ ಅನಿಸತ್ತೆ. ನಾನು ಒಂದನೇ ಕ್ಲಾಸಿಂದ ಫಸ್ಟ್ ಬಿಎಸ್ಸಿ ವರೆಗೂ ಒಂದೇ ಒಂದು ನೋಟ್ಸೂ...

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

-ನಟರಾಜ್ ಹುಳಿಯಾರ್ 'ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡಿ'ನ ಸ್ಥಿತಿಯನ್ನು ನಿಷ್ಠುರ ಸ್ತ್ರೀವಾದಿ ದೃಷ್ಟಿಕೋನದಿಂದ ಗ್ರಹಿಸಿ ಚೇತನಾ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This