ಗಡಾಫಿಯ Girls !!

ಗಡಾಫಿಯ ಮಾಜಿ ಅಂಗರಕ್ಷಕಿಯೂ……….ಘಾಟ್‍ನ ಒಂದು ಸಣ್ಣ ಗಲಾಟೆಯೂ…………       – ಉದಯ್ ಇಟಗಿ ಬಿಸಿಲ ಹನಿ ಇದೀಗ ನೀವು ಲಿಬಿಯಾದ ಯಾವುದೇ ರಸ್ತೆಗಳಲ್ಲಿ ಸುಮ್ಮನೆ ಒಂದು ಸುತ್ತುಹಾಕಿ ಬಂದರೆ ಸಾಕು ನಿಮಗೆ ಅಲ್ಲಲ್ಲಿ ಬುಲೆಟ್‍ಗಳು ಬಿದ್ದಿರುವದು ಕಾಣಿಸುತ್ತದೆ. ಅವು ಯುದ್ಧದ ಸಮಯದಲ್ಲಿ ಬಿದ್ದ ಬುಲೆಟ್‍ಗಳಿರಬೇಕು ಎಂದು ನೀವು ಊಹಿಸಿದರೆ ನಿಮ್ಮ ಊಹೆ ತಪ್ಪಾಗುತ್ತದೆ.   ಮಳೆ ನಿಂತರೂ ಮರದ ಹನಿ ನಿಲ್ಲುವದಿಲ್ಲ ಎನ್ನುವಂತೆ ಯುದ್ಧ ನಿಂತರೂ ಇಲ್ಲಿ ಗುಂಡಿನ ಮೊರೆತ ಮಾತ್ರ ಇನ್ನೂ ನಿಂತೇ ಇಲ್ಲ. ಇಲ್ಲಿ ಆಗಾಗ ಗುಂಪು ಘರ್ಷಣೆಗಳೂ ಹಾಗೂ ಸಣ್ಣಪುಟ್ಟ ಗಲಭೆಗಳೂ ಇನ್ನೂ ಸಂಭವಿಸುತ್ತಲೇ ಇವೆ. ಅಂಥ ಸಂದರ್ಭಗಳಲ್ಲಿ ಈ ಗುಂಡಿನ ಮೊರೆತದ ಸದ್ದು ಕೇಳಿಸುವದು ಸರ್ವೇಸಾಮಾನ್ಯ. ಆದರೆ ಈ ಸದ್ದು ಬೆಂಗಾಜಿಯಲ್ಲಿ ಕಡಿಮೆಯಾಗಿದ್ದು ಇನ್ನೂ ಟ್ರಿಪೋಲಿ, ಮಿಸ್ರತಾ, ಸಿರ್ತ್, ಸೆಭಾಗಳಲ್ಲಿ ಆಗಾಗ ಕೇಳಿಬರುತ್ತಲೇ ಇದೆ. ಇದಕ್ಕೆ ನಾನಿರುವ ಸ್ಥಳ ಘಾಟ್ ಕೂಡ ಹೊರತಾಗಿಲ್ಲ.   ಯುದ್ಧದ ಸಮಯದಲ್ಲಿ ಗಡಾಫಿ, ಸೇನಾ ತರಬೇತಿ ಹೊಂದಿದ ಇಲ್ಲಿನ ಯುವಕರೆಲ್ಲರಿಗೂ ತನ್ನ ಪರವಾಗಿ ಹೋರಾಡಲು ಬುಲಾವ್ ಕಳಿಸಿದ. ಆ ಪ್ರಕಾರ ಈ ಭಾಗದ ಬಹಳಷ್ಟು ಜನ ಗಡಾಫಿ ಬೆಂಬಲಿಗರಾಗಿದ್ದರಿಂದ ಅವರೆಲ್ಲಾ ಯುದ್ಧದಲ್ಲಿ ಭಾಗವಹಿಸಿದರು. (ನಿಮಗೆ ಗೊತ್ತಿರಲಿ. ಗಡಾಫಿ, ಇಲ್ಲಿನ ಯುವಕರಿಗೆ ಸೇನಾ ತರಬೇತಿಯನ್ನು ಖಡ್ಡಾಯಗೊಳಿಸಿದ್ದ. ಅವರು ಕಾಲೇಜು ಓದುವಾಗ ಇಲ್ಲವೇ ಕಾಲೇಜು ಓದು ಮುಗಿದಾದ ಮೇಲೆ ಖಡ್ಡಾಯವಾಗಿ ಆರು ತಿಂಗಳ ಕಾಲ ಸೇನಾ ತರಬೇತಿಗೆ ಹಾಜರಾಗಲೇಬೇಕಿತ್ತು. ಇಲ್ಲವಾದಲ್ಲಿ ವಿದೇಶಗಳಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ನಿಗದಿಪಡಿಸಿದ ಸ್ಕಾಲರ್ಶಿಪ್‍ನ್ನು ಪಡೆಯಲು ಅರ್ಹರಾಗುತ್ತಿರಲಿಲ್ಲ.) ಸರಿ, ಯುದ್ಧ ಮುಗಿಯಿತು. ಗಡಾಫಿಯ ಹತ್ಯೆಯೂ ಆಯಿತು. ಆದರೆ ಯುದ್ಧದಲ್ಲಿ ಗಡಾಫಿ ಸೋತ ಮೇಲೆ ಆತನ ಪರವಾಗಿ ಹೋರಾಡಿದವರು ಬಂದೂಕಗಳನ್ನು ಹಿಂತಿರುಗಿಸುವದಾದರು ಯಾರಿಗೆ? ಹೀಗಾಗಿ ಅವನ್ನು ತಮ್ಮೊಟ್ಟಿಗೆ ಹೊತ್ತು ತಂದರು. ಇನ್ನು ಕೆಲವರಿಗೆ ಅದ್ಹೇಗೋ ಗನ್ನುಗಳು ಸಿಕ್ಕುಬಿಟ್ಟವು. ದುರಂತವೆಂದರೆ ಈಗಿನ ಸರಕಾರ ಈ ಗನ್ನುಗಳನ್ನು ಲೈಸನ್ಸ್ ಇಲ್ಲದೇ ಬಳಸಕೂಡದೆಂದು ಫರ್ಮಾನು ಹೊರಡಿಸಿದ್ದರೂ ಇಲ್ಲಿನವರು ಅವನ್ನು ಹಿಂತಿರುಗಿಸಲು ಹೋಗಿಲ್ಲ. ಅದಕ್ಕೆ ಒಂದು ಬಲವಾದ ಕಾರಣವೂ ಇದೆ. ಅದೇನೆಂದರೆ ಗಡಾಫಿ ಪರವಾಗಿ ಹೋರಾಡಿದ ಸೈನಿಕರಿಗೆ ತಾತ್ಕಾಲಿಕವಾಗಿ ಕೆಲವು ನಿಷೇಧಗಳನ್ನು ಹೇರಲಾಗಿದ್ದು ಅವರು ಮುಂದೆ ಹೇಗೋ ಏನೋ ಎಂದು ಭಯಭೀತರಾಗಿದ್ದಾರೆ. ಆದ ಕಾರಣ ಅವರು ಯಾವುದಕ್ಕೂ ತಮ್ಮ ಆತ್ಮರಕ್ಷಣೆಗೆ ಇರಲಿ ಅಂತಾ ತಮ್ಮೊಂದಿಗೆ ಆ ಗನ್ನುಗಳನ್ನು ಹಾಗೆ ಇಟ್ಟುಕೊಂಡಿದ್ದಾರೆ. ಹೀಗಾಗಿ ಇಲ್ಲಿ ಪ್ರತಿ ಮನೆಯಲ್ಲಿ ಏನಿಲ್ಲವೆಂದರೂ ಮೂರ್ನಾಲ್ಕು ಗನ್ನುಗಳಿವೆ. ಪರಿಣಾಮವಾಗಿ ಹೊತ್ತುಗೊತ್ತಿಲ್ಲದೇ ಇಲ್ಲಿ ಯಾವಾಗಂದರೆ ಅವಾಗ “ಫಡ್ ಫಡ್” ಎಂದು ಫೈರಿಂಗ್ ಸದ್ದು ಕೇಳಿಸುತ್ತದೆ. ನಾವು ಮೊದಲು ಯಾರೋ ಪಟಾಕಿ ಹೊಡೆಯುತ್ತಿರಬೇಕು ಎಂದುಕೊಳ್ಳುತ್ತಿದ್ದೆವು. ಆದರೆ ಆಮೇಲೆ ಗೊತ್ತಾಯಿತು ಅವರೆಲ್ಲಾ ಮೋಜಿಗಾಗಿಯೋ ಇಲ್ಲವೇ ಖುಶಿಗಾಗಿಯೋ ಆಗಾಗ ಆಕಾಶದತ್ತ ಗುಂಡು ಹಾರಿಸುತ್ತಿರುತ್ತಾರೆಂದು. ನಮಗೆ ಒಂದೊಂದು ಸಾರಿ ಈ ತೆರದ ಗುಂಡಿನ ಸದ್ದು ಕೇಳಿಸಿದಾಗ ನಿಜಕ್ಕೂ ಅಲ್ಲಿ ಗಲಾಟೆ ನಡೆಯುತ್ತಿದೆಯೋ? ಅಥವಾ ಇದು ಕೇವಲ ಮೋಜಿಗಾಗಿಯೋ ಎಂದು ಗೊತ್ತಾಗುವದೇ ಇಲ್ಲ. ಇಲ್ಲಿನ ಪೋಲಿಸರು ಸಹ ಏನೂ ಮಾಡದ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಮೊದಮೊದಲು ಈ ಫೈರಿಂಗ್ ಸದ್ದಿಗೆ ನಾವು ಬೆಚ್ಚಿಬೀಳುತ್ತಿದ್ದೆವು. ಆದರೀಗ ಅದು ಅಭ್ಯಾಸವಾಗಿಬಿಟ್ಟಿದೆ!   ಮೊನ್ನೆ ಅಂದರೆ ಈಗ್ಗೆ ಒಂದು ವಾರದ ಹಿಂದೆ ರಾತ್ರಿ ಹತ್ತು ಗಂಟೆಗೆ ಇಂಥದೇ ಗುಂಡಿನ ಸದ್ದು ನಮ್ಮ ಕಾಲೇಜು ಪಕ್ಕದಲ್ಲಿಯೇ ಕೇಳಿಸಿತು. ನಾವು ಇನ್ನೇನು ಊಟಮಾಡಿ ಮಲಗಲಿದ್ದೆವು. ಅಷ್ಟರಲ್ಲಿ ಈ ಸದ್ದು. ನಾವು ಮೊದಲು ಮಾಮೂಲಿನಂತೆ ಯಾರೋ ಮೋಜಿಗಾಗಿ ಗುಂಡು ಹಾರಿಸತ್ತಿರಬಹುದೆಂದುಕೊಂಡೆವು. ಆದರೆ ಅದರ ತೀವ್ರತೆ ಮತ್ತು ರಭಸತೆ ಹೆಚ್ಚುತ್ತಾ ಹೋದಂತೆ ನಮಗೆ ನಮ್ಮ ಕಾಲೇಜು ಕೌಂಪೊಂಡಿನಾಚೆ ಏನೋ ಆಗುತ್ತಿದೆ ಎಂದನಿಸಿತು. ಕಾಲೇಜು ಒಳಗಡೆ ನಮಗೆ ಸಾಕಷ್ಟು ರಕ್ಷಣೆಯಿದ್ದರೂ ಭಯಭೀತರಾಗಿ ನಾವು ನಮ್ಮ ಮನೆಯ ಬಾಗಿಲಗಳನ್ನು ಭದ್ರವಾಗಿ ಹಾಕಿಕೊಂಡು ಮಲಗಿದೆವು. ಗುಂಡಿನ ಸದ್ದು ಬೆಳಿಗ್ಗೆ ನಾಲ್ಕು ಗಂಟೆಯವರೆಗೆ ಕೇಳಿಸುತ್ತಲೇ ಹೋಯಿತು. ಮಾರನೇ ದಿವಸ ಗೊತ್ತಾದ ವಿಷಯವೇನೆಂದರೆ ಘಾಟ್‍ನಲ್ಲಿ ಗಡಾಫಿಯ ಮಾಜಿ ಅಂಗರಕ್ಷಕಿಯೊಬ್ಬಳಿದ್ದಾಳೆ. ಅವಳನ್ನು ಬಂಧಿಸಲು ಜನ ಬೆಂಗಾಜಿಯಿಂದ ಬಂದಿದ್ದರು. ಹೀಗಾಗಿ ಅವಳನ್ನು ಉಳಿಸಿಕೊಳ್ಳಲು ಇಲ್ಲಿನವರು ಅವರೊಟ್ಟಿಗೆ ಹೋರಾಟ ನಡೆಸಿ ಯಶಸ್ವಿಯಾದರೆಂದು. ಗಡಾಫಿ ಮಹಿಳಾಪರ ಧೋರಣೆಯನ್ನು ಹೊಂದಿದವನಾಗಿದ್ದು ಮಹಿಳೆಯರಿಗೆ ಎಷ್ಟು ಸ್ವಾತಂತ್ರ್ಯ ಕೊಟ್ಟಿದ್ದನೆಂದರೆ ತನ್ನ ಅಂಗರಕ್ಷಣೆಗೂ ಬರೀ ಮಹಿಳಾ ಸೈನಿಕರನ್ನೇ ನೇಮಿಸಿಕೊಂಡಿದ್ದ. ಇದಕ್ಕೆ ಕಾರಣ ಮಹಿಳೆಯರ ಕಾರ್ಯದಕ್ಷತೆ ಬಗ್ಗೆ ಅವನಿಗೆ ಅಷ್ಟೊಂದು ಭರವಸೆ ಇತ್ತು! ಮತ್ತು ಹೊರಜಗತ್ತಿಗೆ ಹೆಂಗಸರು ಗಂಡಸರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಎಂದು ತೋರಿಸುವ ಉದ್ದೇಶವಾಗಿತ್ತು. ಜೊತೆಗೆ ಹೆಂಗಸರಿಗೆ ಸೇನಾತರಬೇತಿ ನೀಡಿದರೆ ಅವರು ಆಪತ್ಕಾಲದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಬಲ್ಲರು ಎನ್ನುವದು ಅವನ ಅಭಿಪ್ರಾಯವಾಗಿತ್ತೆಂದು ಇಲ್ಲಿಯವರು ಹೇಳುತ್ತಾರೆ. ಅವರ ಸಂಖ್ಯೆ ಸುಮಾರು 300-400 ರಷ್ಟಿತ್ತು. ಆತನ ಅಂಗರಕ್ಷಕರಾಗಲು ಇಲ್ಲಿನ ಹುಡುಗಿಯರು ಅನೇಕ ಸುತ್ತುಗಳ ಪರೀಕ್ಷೆಗಳನ್ನು ಎದುರಿಸಬೇಕಾಗಿತ್ತು. ಆದರೆ ಕೊನೆಯ ಸುತ್ತಿನ ಆಯ್ಕೆಯನ್ನು ಇವನೇ ಮಾಡುತ್ತಿದ್ದ. ಆದರೆ ಅವರೆಲ್ಲಾ ಕನ್ಯೆಯರೇ ಆಗಿರಬೇಕೆಂದು ಬಯಸುತ್ತಿದ್ದ. ಕನ್ಯೆಯರೇ ಯಾಕೆ? ಎಂದರೆ ವಿಕ್ಷಿಪ್ತ ವ್ಯಕ್ತಿತ್ವದ ಗಡಾಫಿ ಅವರ ಮೀಸಲು ಮುರಿಯುವದರಲ್ಲಿ ಏನೋ ಒಂದು ವಿಲಕ್ಷಣ ತೃಪ್ತಿಯನ್ನು ಕಾಣುತ್ತಿದ್ದನಲ್ಲದೆ ಅವರನ್ನು ಲೈಂಗಿಕವಾಗಿ ಆಗಾಗ ಶೋಷಿಸುತ್ತಿದ್ದ ಎಂದು ಬಿ.ಬಿ.ಸಿ,, ಆಲ್ಜೇಜಿರಾ, ಇನ್ನೂ ಮುಂತಾದ ವಿದೇಶಿ ಟೀವಿ ಚಾನೆಲ್‍ಗಳು ಹೇಳಿವೆ. ಆದರೆ ಸ್ಥಳೀಯರ ಪ್ರಕಾರ ಈ ಮಾಧ್ಯಮಗಳು ಹೇಳುವದೆಲ್ಲಾ ಸುಳ್ಳು. ಗಡಾಫಿ ಕನ್ಯೆಯರನ್ನೇ ಯಾಕೆ ತನ್ನ ಅಂಗರಕ್ಷಕಿಯರನ್ನಾಗಿ ಇಟ್ಟುಕೊಳ್ಳುತ್ತಿದ್ದನೆಂದರೆ ಪ್ರಾಚೀನ ಕಾಲದಲ್ಲಿ ಒಂದು ನಂಬಿಕೆಯಿತ್ತು; ಕನ್ಯೆಯರಾದವರಿಗೆ ತಮ್ಮ ಕೆಲಸದಲ್ಲಿ ಹೆಚ್ಚು ಏಕಾಗ್ರತೆ ಹಾಗೂ ಗಮನವಿರುತ್ತದೆಂದು. ಇದನ್ನು ಗಡಾಫಿ ಕೂಡ ಬಲವಾಗಿ ಬಲವಾಗಿ ನಂಬಿದ್ದ. ಹೀಗಾಗಿ ಅವರನ್ನು ತನ್ನ ಅಂಗರಕ್ಷಕಿಯರನ್ನಾಗಿ ನೇಮಿಸಿಕೊಂಡಿದ್ದ. ಮಾತ್ರವಲ್ಲ ಆತ ಸದಾ ಹೆಣ್ಣುಮಕ್ಕಳನ್ನು ಗೌರವದಿಂದ ಕಾಣುತ್ತಿದ್ದು ಅವರ ಸಾಮಾಜಿಕ ಸ್ಥಾನಮಾನಗಳಿಗಾಗಿ ಆತ ಬಹಳಷ್ಟು ಶ್ರಮಿಸಿದ್ದಾನೆ ಎಂದು ಹೇಳುತ್ತಾರೆ. ಇದು ಸುಳ್ಳೋ? ನಿಜವೋ? ಎಂದು ತಿಳಿದುಕೊಳ್ಳಲು ನಾನು ಖುದ್ದಾಗಿ ಘಾಟ್‍ನಲ್ಲಿರುವ ಆತನ ಮಾಜಿ ಅಂಗರಕ್ಷಕಿಯನ್ನು ಭೇಟಿಯಾಗಲು ಅವರ ಮನೆಗೆ ಎರಡು ಮೂರು ಸಾರಿ ಹೋದೆ. ಆದರೆ ಆಕೆ ಬಾಗಿಲನ್ನು ತೆರೆಯದೇ ನಿರಾಶೆಗೊಳಿಸಿದಳು. ಅಂದಹಾಗೆ ಗಡಾಫಿಯ ಅಷ್ಟು ಜನ ಅಂಗರಕ್ಷಕಿಯರು ಏನಾದರು? ಕೆಲವರು ಬಂಧಿತರಾದರು, ಕೆಲವರು ನ್ಯಾಟೋ ದಾಳಿಯಲ್ಲಿ ಸತ್ತುಹೋದರು. ಇನ್ನು ಕೆಲವರು ಬೇರೆ ಬೇರೆ ದೇಶಗಳಲ್ಲಿ ತಲೆತಪ್ಪಿಸಿಕೊಂಡರು. ಯಾವಾಗ ಟ್ರಿಪೋಲಿ ಗಡಾಫಿಯ ಹಿಡಿತದಿಂದ ತಪ್ಪಿಹೋಯಿತೋ ಆಗ ತನ್ನ ಉಳಿದ ಅಷ್ಟು ಜನ ಅಂಗರಕ್ಷಕಿಯರಿಗೆ ಆತ “ಇನ್ನು ನನ್ನನ್ನು ಬಿಟ್ಟುಬಿಡಿ. ನೀವು ಎಲ್ಲಾದರೂ ಪಾರಾಗಿ” ಎಂದು ಹೇಳಿದನಂತೆ. ಆ ಪ್ರಕಾರ ಪಾರಾಗುವ ಸಂದರ್ಭದಲ್ಲಿ ಕೆಲವರು ಸಿಕ್ಕಿಬಿದ್ದರು. ಕೆಲವರು ಸತ್ತುಹೋದರು. ಇನ್ನು ಕೆಲವರು ಬೇರೆ ಬೆರೆ ದೇಶಗಳಿಗೆ ಓಡಿಹೋದರು. ಹಾಗೆ ಓಡಿಹೋದ ಅಂಗರಕ್ಷಕಿಯರಲ್ಲಿ ಘಾಟ್‍ನ ಈ ಹುಡುಗಿಯೂ ಸೇರಿಕೊಂಡಿದ್ದಾಳೆ. ಅವಳು ಇಷ್ಟು ದಿನ ಅಲ್ಜೀರಿಯಾದಲ್ಲಿ ಅಡಗಿಕೊಂಡಿದ್ದಳು. ಆದರೆ ಇಲ್ಲಿ ಈ ಗಲಾಟೆಯೆಲ್ಲಾ ಕಡಿಮೆಯಾದ ಮೇಲೆ ಅವಳು ತನ್ನ ಸ್ವಂತ ಊರು ಘಾಟ್‍ಗೆ ಮೊನ್ನೆಯಷ್ಟೇ ಮರಳಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯ ಪೋಲಿಷ್‍ನೊಬ್ಬ ಈಗಿನ ಸರಕಾರಕ್ಕೆ ಸುದ್ಧಿ ಮುಟ್ಟಿಸಿದ್ದಾನೆ. ಅವರು ಇವಳನ್ನು ಬಂಧಿಸಲು ಬೆಂಗಾಜಿ ಮತ್ತು ಜಿಂದಾನ್‍ನಿಂದ ಹೆಚ್ಚುವರಿ ಪೋಲೀಷ್‍ನವರನ್ನು ಕಳಿಸಿದ್ದಾರೆ. ಆದರೆ ಇಲ್ಲಿ ಇನ್ನೂ ಗಡಾಫಿಯ ಬೆಂಬಲಿಗರೇ ಇರುವದರಿಂದ ಅವರೆಲ್ಲಾ ಒಗ್ಗಟ್ಟಾಗಿ ಇಲ್ಲಿಂದ ಅವರನ್ನೆಲ್ಲಾ ಹೊಡೆದೋಡಿಸುವಲ್ಲಿ ಯಶಸ್ವಿಯಾದರು. ಆ ಮೂಲಕ ಆ ಹುಡುಗಿಯನ್ನು ಸಧ್ಯದ ಮಟ್ಟಿಗೆ ಬಚಾವ್ ಮಾಡಿದ್ದಾರೆ. ಹೀಗಾಗಿ ಮೊನ್ನೆ ಇಲ್ಲಿ ಈ ಗಲಾಟೆ, ರಾದ್ದಾಂತವೆಲ್ಲಾ ನಡೆದು ಸಾಕಷ್ಟು ಗುಂಡಿನ ಮೊರೆತ ಕೇಳಿಸಿತು. ಈಗಿನ ಹೊಸ ಹಂಗಾಮಿ ಸರಕಾರ ಗಡಾಫಿಗೆ ಮತ್ತು ಆತನ ಮಕ್ಕಳಿಗೆ ಏನಾದರು ಮಾಡಲಿ. ಆದರೆ ಅವನ ಅಂಗರಕ್ಷಕಿಯರನ್ನು ಮತ್ತು ಬೆಂಬಲಿಗರನ್ನು ಹಿಡಿದು ಜೈಲಿಗೆ ಅಟ್ಟುವದನ್ನು ನೋಡಿದರೆ ಇದು ಒಂದು ರೀತಿಯ ಸರ್ವಾಧಿಕಾರದ ಧೋರಣೆಯಾಗಿ ಕಾಣುತ್ತದೆ. ಹೊಸ ಸರಕಾರದ ಇಂಥ ಅರ್ಥಹೀನ ನಡವಳಿಕೆ ಬೇಗನೆ ಕೊನೆಯಾಗಲಿ ಮತ್ತು ಇನ್ನು ಮುಂದೆಯಾದರೂ ಇಡಿ ಲಿಬಿಯಾದ ತುಂಬಾ ಆಗಾಗ ಮೊರೆಯುವ ಗುಂಡಿನ ಸದ್ದು ನಿಂತು ಹೊಸ ಸರಕಾರವನ್ನು ಲಿಬಿಯಾದ ಜನತೆ ಒಪ್ಪಿಕೊಂಡು ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ಆಶಿಸುತ್ತೇನೆ.  ]]>

‍ಲೇಖಕರು G

April 9, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

2 ಪ್ರತಿಕ್ರಿಯೆಗಳು

 1. amaasa

  ಬಿಸಿಲ ಬೆಳದಿಂಗಳ ಆ ಲಿಬಿಯಾ ತಣ್ಣಗಿರಲಿ, ಒಳ್ಳೆ ಲೇಖನ ಮಾಡಿದ್ದೀರಿ ಧನ್ಯವಾದ…

  ಪ್ರತಿಕ್ರಿಯೆ
 2. Uday Itagi

  ಆತ್ಮೀಯರೇ,
  ಸಾಮಾನ್ಯವಾಗಿ ದಿನಕ್ಕೊಂದು ಸಾರಿಯಾದರೂ ನಾನು ‘ಅವಧಿ’ಗೆ ಭೇಟಿ ಕೊಟ್ಟೇಕೊಡುತ್ತೇನೆ. ಏಕೆಂದರೆ ಕೆಲಸದ ನಿಮಿತ್ಯ ಬೆಂಗಳೂರನ್ನು ಬಿಟ್ಟು ಸಾವಿರ ಸಾವಿರ ಮೈಲಿಗಳನ್ನು ದಾಟಿಕೊಂಡು ಬಂದು ಸಾಗರದಾಚೆಯಲ್ಲಿ ಕುಳಿತಿರುವ ನನ್ನಂಥವನಿಗೆ ‘ಅವಧಿ’ ಕನ್ನಡದ ಬಗೆಗಿನ ನನ್ನ ಹಪಹಪಿಕೆಯನ್ನು ಕೊಂಚಮಟ್ಟಿಗೆಯಾದರೂ ತಣಿಸುವದಲ್ಲದೆ ಕನ್ನಡ ಭಾಷಿಕರೊಂದಿಗೆ ಸತತ ಸಂಪರ್ಕದಲ್ಲಿರುವಂತೆ ಮಾಡುತ್ತದೆ. ಆ ಮೂಲಕ ಕನ್ನಡದ ನೆಲ ಜಲದೊಟ್ಟಿಗೆ ನನ್ನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಮಾತ್ರವಲ್ಲ ಬೆಂಗಳೂರು ಹಾಗೂ ಬೇರೆ ಬೇರೆ ಕಡೆ ನಡೆಯುವ ಸಾಹಿತ್ಯಿಕ ಹಾಗೂ ಸಾಂಸಕೃತಿಕ ಕಾರ್ಯಕ್ರಮಗಳ ಬಗ್ಗೆ ನನ್ನಂಥ ಎಷ್ಟೋ ಜನರನ್ನು ಅಪ್‍ಡೇಟ್ ಮಾಡುತ್ತದೆ. ಅದಕ್ಕಾಗಿ ಅವಧಿಗೆ ತುಂಬಾ ತುಂಬಾ ಥ್ಯಾಂಕ್ಸ್!!
  ‘ಅವಧಿ’ ಹಿರಿ ಕಿರಿಯ ಬರಹಗಾರ ಲೇಖನಗಳನ್ನು ಒಟ್ಟೊಟ್ಟಿಗೆ ಪ್ರಕಟಿಸುವದರಿಂದ ನನ್ನಂಥ ಕಿರಿಯ ಬರಹಗಾರನಲ್ಲಿ ಒಂದು ಹೆಮ್ಮೆ ಹಾಗೂ ಸಣ್ಣದೊಂದು ಅಹಂನ್ನು ಮೊಳೆಯುವಂತೆ ಮಾಡಿದೆ. ಏಕೆಂದರೆ ‘ಅವಧಿ’ ನನ್ನ ಎಷ್ಟೋ ಬ್ಲಾಗ್ ಬರಹಗಳನ್ನು ಹಾಗೂ ಅನುವಾದಗಳನ್ನು ಪ್ರಿತಿಯಿಂದ ಪ್ರಕಟಿಸಿದೆ. ಇವತ್ತು ಕೂಡ ಲಿಬಿಯಾದ ಬಗೆಗಿನ ನನ್ನ ಲೇಖನವನ್ನು ನೋಡಿ ಖುಶಿಯಾಯಿತು. ಅದಕ್ಕಾಗಿ ‘ಅವಧಿ’ ಬಳಗಕ್ಕೆ ನನ್ನ ಕೃತಜ್ಞತೆಗಳು.
  ಅವಧಿ ಇನ್ನಷ್ಟು ಬೆಳೆಯಲಿ……………
  ಪ್ರೀತಿಯಿಂದ
  ಉದಯ್ ಇಟಗಿ
  ಘಾಟ್, ಲಿಬಿಯಾ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: