ಗರ್ಭಪರೀಕ್ಷೆ ನಮ್ಮ ಸ್ವಯಂ ಪರೀಕ್ಷೆಯಾದದ್ದು…

ನಾನು ಪಶುವೈದ್ಯಕೀಯ ಪದವಿ ಓದಬೇಕಾದರೆ ಮೊದಲ ಸಲ ವಿವಿಧ ಪ್ರಾಣಿಗಳ ಗರ್ಭದ ಅವಧಿಯನ್ನು ಕೇಳಿ ಆಶ್ಚರ್ಯಪಟ್ಟಿದ್ದೆ.

ಮೊಲಗಳಲ್ಲಿ ಒಂದು ತಿಂಗಳು ಒಂದು ದಿನ, ನಾಯಿ, ಬೆಕ್ಕುಗಳಲ್ಲಿ ಎರಡು ತಿಂಗಳು ಎರಡು ದಿನ, ಹಂದಿಗಳಲ್ಲಿ ಮೂರು ತಿಂಗಳು ಮೂರು ವಾರ ಮೂರು ದಿನ, ಕುರಿ ಮೇಕೆಗಳಲ್ಲಿ ಐದು ತಿಂಗಳು ಐದು ದಿನ, ಹಸುಗಳಲ್ಲಿ ಒಂಭತ್ತು ತಿಂಗಳು ಒಂಭತ್ತು ದಿನ, ಎಮ್ಮೆಗಳಲ್ಲಿ ಹತ್ತು ತಿಂಗಳು ಹತ್ತು ದಿನ, ಕುದುರೆಗಳಲ್ಲಿ ಹನ್ನೊಂದು ತಿಂಗಳು ಹನ್ನೊಂದು ದಿನ, ಕತ್ತೆಗಳಲ್ಲಿ ಒಂದು ವರ್ಷ, ಆನೆಗಳಲ್ಲಿ ಇಪ್ಪತ್ತೆರಡು ತಿಂಗಳು, ಇಲಿಗಳಲ್ಲಿ ಇಪ್ಪತ್ತೆರಡು ದಿನ.

ಪ್ರಕೃತಿ ಎಷ್ಟು ಕಿಲಾಡಿ, ಎಷ್ಟು ತಮಾಷೆಯೆನ್ನಿಸಿ ಚಕ್ಕರ್‍ಗುಳ್ಳಿ ಕೊಟ್ಟಂತಾಗುತ್ತಿತ್ತು. ಪ್ರಿಯ ಓದುಗರಾದ ತಾವು ಈ ಗರ್ಭಾವಧಿಗಳನ್ನು ಕರಾರುವಾಕ್ಕು ಎಂದು ಭಾವಿಸಕೂಡದು. ಇದು ಸರಾಸರಿ ಅವಧಿಯಷ್ಟೆ. ಎರಡು ತಿಂಗಳು ಎರಡು ದಿನವಾಯ್ತು ಮರಿ ಹಾಕು ಎಂದು ನಾಯಿಗೆ ಕಿರುಕುಳ ಕೊಟ್ಟರೆ ಅದು ಕಡಿಯುವುದು ಖಂಡಿತ. ಪ್ರಕೃತಿಯ ಅಣು ಅಣುವಿನಲ್ಲೂ ನೈಸರ್ಗಿಕ ಗಡಿಯಾರವೊಂದು ನಿರಂತರವಾಗಿ ಟಿಕ್ ಟಿಕ್ ಎನ್ನುತ್ತಲೇ ಇರುತ್ತದೆ!

ಒಮ್ಮೊಮ್ಮೆ ‘ದಿನ ತುಂಬಿದರೂ ಕರು ಹಾಕಿಲ್ಲ’ ಎಂಬ ಅಹವಾಲಿನೊಂದಿಗೆ ರೈತರು ನಮ್ಮನ್ನು ಕಾಣುವುದಿದೆ. ರೈತರು ಹೋರಿ ಕೊಡಿಸಿದ ದಿನಾಂಕ ಅಥವಾ ಕೃತಕ ಗರ್ಭಧಾರಣೆ ಮಾಡಿಸಿರುವ ದಿನಾಂಕವನ್ನು ಹೆಚ್ಚು ಕಡಿಮೆ ಮಾಡಿಕೊಂಡಿರುತ್ತಾರೆ ಅಥವಾ ಕೆಲವೊಮ್ಮೆ ಹಸು/ಎಮ್ಮೆ ಮಾರುವವರು ಮೂರು ತಿಂಗಳಿಗೆ ಬದಲಾಗಿ ಆರು ತಿಂಗಳು ಗರ್ಭವಿದೆ ಎಂದು ಹೇಳಿ ಹೆಚ್ಚು ಹಣ ಪಡೆದು ಮೋಸ ಮಾಡಿರುತ್ತಾರೆ!

ಒಂದೊಂದು ಸಲ ಇನ್ನೂ ಬೀಜ ಒಡೆಯದ (ಕಸಿಮಾಡದ) (uncastrated) ಬೀಡಾಡಿ ಹೋರಿಗಳು ಸಮಯ ಸಾಧಿಸಿ ಹಸುಗಳ ಮೇಲೆ ಹಾರುವುದುಂಟು. ಅಂದರೆ ಕ್ರಾಸ್ ಮಾಡುವುದುಂಟು. ಸಾಮಾನ್ಯವಾಗಿ ಹೋರಿಗಳು ಬೆದೆಯಲ್ಲಿರುವ ಹಸುಗಳನ್ನು ಮಾತ್ರ ಹಿಂಬಾಲಿಸುತ್ತವೆ. ಬೆದೆಗೆ ಬಂದ ಹಸುಗಳು ಪ್ರಕೃತಿ ನಿಯಮದಂತೆ ಹೋರಿಗಳಿಗೆ ಸಹಕರಿಸುವುದುಂಟು. ಅಂಥ ಸಂದರ್ಭಗಳಲ್ಲಿ ಹಸು ಗರ್ಭವಾದರೆ ರೈತರಿಗೆ ಗೊತ್ತೇ ಇರುವುದಿಲ್ಲ.

ಇಂಥ ಒಂದು ಪ್ರಕರಣವನ್ನು ನಿಮಗೆ ಹೇಳುತ್ತೇನೆ. ಇದು ನನಗೆ ಧರ್ಮಸ್ಥಳದಲ್ಲಿದ್ದಾಗ ಎದುರಾಗಿತ್ತು. ಕಳಂಜ ಎಂಬ ಗ್ರಾಮದ ಬಳಿ ಕಾಡಿನ ಯಾವುದೋ ಮೂಲೆಯಲ್ಲಿ ಫೋನ್ ಕರೆ ಆಧರಿಸಿ ಮನೆ ಹುಡುಕುತ್ತ ಹುಡುಕುತ್ತ ಅರ್ಧ ದಿನ ಕಳೆದು ಹೋಯಿತು. ಸಿಗುವುದಿಲ್ಲ ಎಂದು ವಾಪಸ್ ಹೊರಟಾಗ ಅಕಸ್ಮಾತ್ ಎಂಬಂತೆ ಮನೆ ಸಿಕ್ಕಿತು. ಕಾಡಿನಲ್ಲಿ ಮೊಬೈಲ್ ಸಂಪರ್ಕ ಏರ್ಪಡದೆ ಪೀಕಲಾಟಕ್ಕಿಟ್ಟುಕೊಂಡು ಹೀಗಾಗಿತ್ತು. ನಾನು ಅವರ ಮನೆಗೆ ಹೋದದ್ದೇ ಬೇರೆ ಲೋಕದ ಅತಿಥಿಯಂತೆ ಉಪಚರಿಸತೊಡಗಿದರು. ಆರು ತಿಂಗಳಿಗೋ ವರ್ಷಕ್ಕೋ ಒಮ್ಮೆ ಹೀಗೆ ಯಾರಾದರೂ ಅತಿಥಿಗಳು ಬರಬಹುದಾದ ಮನೆಯಾಗಿತ್ತದು. ಬಹುಶಃ ಬಂದವರನ್ನೆಲ್ಲ (ಕಳ್ಳ ಕಾಕರನ್ನೂ ಸೇರಿಸಿಕೊಂಡು) ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದ ಮನೆಯಿರಬೇಕು! ಅಂಥಾ ಒಬ್ಬಂಟಿ ಮನೆ!

ಆ ಮನೆಯವರದ್ದು ಬಹಳ ಸರಳವಾದ ಪ್ರಕರಣವಾಗಿತ್ತು. “ನಮ್ಮ ಹಸುವೊಂದು ಕರು ಹಾಕಿ ಒಂದು ವರ್ಷವಾಗಿದೆ. ಹಸು ಜೋಡಿಗೆ (ಬೆದೆಗೆ) ಬಂದಿಲ್ಲ ಮತ್ತು ಗರ್ಭವೂ ಇಲ್ಲ. ಟೆಸ್ಟ್ ಮಾಡಿರಿ. ಜೋಡಿಗೆ ಬರುವಂತೆ ಮಾಡಿ. ಮಾತ್ರೆ, ಪುಡಿ, ಇಂಜೆಕ್ಷನ್ ಏನಾದರೂ ಹಾಕಿ. ಅಷ್ಟು ಮಾಡಿದರೆ ಉಪಕಾರವಾಗುತ್ತಿತ್ತು” ಎಂದು ಗೋಗರೆದರು. ‘ಆಗಲಿ’ ಎಂದು ಹಸುವಿನ ರೆಕ್ಟಮ್ಮಿನಲ್ಲಿ (Rectum) ಕೈ ಹಾಕಿ ಪರೀಕ್ಷಿಸಿದೆ. ಆ ಮನೆಯವರ ಅದೃಷ್ಟ ಎನ್ನಬೇಕೋ, ಪ್ರಕೃತಿಯ ತಮಾಷೆ ಎನ್ನಬೇಕೋ ಗೊತ್ತಿಲ್ಲ ! ಹಸು ಸುಮಾರು ಆರು ತಿಂಗಳ ಗರ್ಭ ಇತ್ತು. ಮನೆಯವರಿಗೆ ಹಾಗೆ ಹೇಳಿದೆ. ನಂಬಬೇಕೋ ಬೇಡವೋ ಗೊತ್ತಾಗದೆ ನಿಂತುಬಿಟ್ಟರು. ಕೊನೆಗೆ “ಇದು ದೇವರ ಆಟ ಸರ” ಎಂದರು. ಅವರು ದನಗಳನ್ನು ದಿನವೂ ಮೇಯಲು ಗುಡ್ಡೆಗೆ ಬಿಡುತ್ತಿದ್ದರಂತೆ. ಅಲ್ಲಿಯೇ ಯಾವುದೋ ಹೋರಿ ಪ್ರಕೃತಿ ನಿಯಮವನ್ನು ಪಾಲಿಸಿದೆ. ಪ್ರಾಣಿಗಳಲ್ಲಿ ಅತ್ಯಾಚಾರವಿಲ್ಲ. ಅಲ್ಲೇನಿದ್ದರೂ ಪ್ರಕೃತಿ ಧರ್ಮ ಪರಿಪಾಲನೆ ಅಷ್ಟೆ!

ಹಸುಗಳಲ್ಲಿ ‘ಮೂಕ ಬೆದೆ’ (silent heat) ಎಂಬುದೊಂದು ಇದೆ. ಹಸು ಹೀಟಿಗೆ ಬಂದಿರುವುದು ಜಾನುವಾರು ಮಾಲೀಕರಿಗೆ ಗೊತ್ತಾಗುವುದಿಲ್ಲ ಆದರೆ ಅಲ್ಲಿ ಸುಳಿದಾಡುವ ಹೋರಿಗಳಿಗೆ ಗೊತ್ತಾಗುತ್ತದೆ. ನಾನು ಪರೀಕ್ಷಿಸಿದ ಹಸುವಿನದು ಇದೇ ಪ್ರಕರಣವಾಗಿತ್ತು. ಇಂಥ ಪ್ರಕರಣಗಳು ಅಪರೂಪವೇನಲ್ಲ. ಆಗಾಗ ಎದುರಾಗುತ್ತಲೇ ಇರುತ್ತವೆ.

ಸಾಮಾನ್ಯವಾಗಿ ಹಸು/ಎಮ್ಮೆಗಳಲ್ಲಿ ಕೃತಕ ಗರ್ಭಧಾರಣೆಯ ನಂತರ ಮೂರು ತಿಂಗಳು ಆದ ಮೇಲೆ ಗರ್ಭ ತಪಾಸಣೆ ಮಾಡುತ್ತೇವೆ. ರೆಕ್ಟಮಿನಲ್ಲಿ ಕೈ ಹಾಕಿ ನೋಡಿದರೆ ಬೆಳೆಯುತ್ತಿರುವ ಭ್ರೂಣದಿಂದಾಗಿ ಗರ್ಭಚೀಲದ (uterus) ಎಂದಿನ ಗಾತ್ರ ಮತ್ತು ಆಕಾರ ಬದಲಾಗಿ ದೊಡ್ಡದಾಗಿರುತ್ತದೆ. ಅಭ್ಯಾಸದ ಮೇಲೆ ಸರಿಸುಮಾರು ಎಷ್ಟು ತಿಂಗಳ ಗರ್ಭ ಎಂಬುದನ್ನು ಸಹ ಅಂದಾಜಿಸಬಹುದು.

ಒಮ್ಮೊಮ್ಮೆ ಗರ್ಭ ತಪಾಸಣೆಯ ವೇಳೆ ಗರ್ಭವಿದೆಯೋ ಇಲ್ಲವೋ ಎಂಬುದು ಸರಿಯಾಗಿ ಗೊತ್ತಾಗುವುದಿಲ್ಲ. ಉದಾಹರಣೆಗೆ ವೀರ್ಯ ಕೊಟ್ಟು ಎರಡರಿಂದ ಎರಡೂವರೆ ತಿಂಗಳವರೆಗೆ ಗರ್ಭ ಪರೀಕ್ಷೆ ಮಾಡಿದರೆ ಅಥವಾ ಹೊಸತಾಗಿ ಕೊಂಡು ತಂದ ಹಸು ತೀರಾ ಎಳೆ ಗರ್ಭದಲ್ಲಿದ್ದರೆ ಆಗಲೂ ಗೊತ್ತಾಗುವುದಿಲ್ಲ. ಅನುಮಾನ ಬಂದ ಪಕ್ಷದಲ್ಲಿ ಗರ್ಭವಿದೆ ಅಥವಾ ಇಲ್ಲ ಎಂದು ಹೇಳಕೂಡದು. ಅದೇ ಹಸು/ಎಮ್ಮೆಯನ್ನು ಒಂದು ತಿಂಗಳ ನಂತರ ಮತ್ತೊಮ್ಮೆ ಪರೀಕ್ಷಿಸಿದರೆ ನಿಖರವಾಗಿ ಗೊತ್ತಾಗುತ್ತದೆ. ಸಾಮಾನ್ಯವಾಗಿ ಎರಡನೇ ಸಲ ಗರ್ಭ ತಪಾಸಣೆಯ ಫಲಿತಾಂಶ ತಪ್ಪಾಗುವುದಿಲ್ಲ.

ರೆಕ್ಟಮ್ ಪರೀಕ್ಷೆಯಲ್ಲಿ ಒಮ್ಮೊಮ್ಮೆ ಇನ್ನೂ ವಿಚಿತ್ರ ಸಂಗತಿಗಳು ಆಗುತ್ತವೆ. ಕೆಲವು ಹಸುಗಳು ನಾವು ಕೈ ಹಾಕಿದೊಡನೆ ರೆಕ್ಟಮ್ಮನ್ನು ಬಿಗಿ ಹಿಡಿದು ಬಿಡುತ್ತವೆ. ಗಾಬರಿಗೋ ಅಥವಾ ತಮ್ಮ ಗುಪ್ತಾಂಗಗಳ ರಕ್ಷಣೆಗೋ ಅಥವಾ ತಮ್ಮ ಖಾಸಗಿತನ ಉಲ್ಲಂಘನೆಯಾದುದಕ್ಕೋ ಹಾಗೆ ಮಾಡುತ್ತವೆ. ಆಗ ಆ ಹಸುಗಳನ್ನು ಬೇರೆ ಕಡೆ ಒಂದರ್ಧ ಗಂಟೆ ಕಟ್ಟಿ ಹಾಕಿ ಅದರ ತಂಟೆಗೆ ಹೋಗದಿದ್ದರೆ ತಮ್ಮಷ್ಟಕ್ಕೆ ತಾವು ಸಂತೈಸಿಕೊಂಡು ಶಾಂತಚಿತ್ತರಾಗುತ್ತವೆ. ಬಿಗಿ ಹಿಡಿದ ಮೈಯನ್ನು ಸಡಿಲಗೊಳಿಸಿಕೊಳ್ಳುತ್ತವೆ (relax ಆಗುತ್ತವೆ). ಆಗ ಕೈ ಹಾಕಿ ಸುಲಭವಾಗಿ ಗರ್ಭ ಪರೀಕ್ಷೆ ಮತ್ತು ಬೇಕಾದ ಇತರೆ ಪರೀಕ್ಷೆಗಳನ್ನು ಸಹ ಮಾಡಿಕೊಳ್ಳಬಹುದು.

ಆದರೆ ಮೊದಲು ಬಂದ ತಮ್ಮ ಹಸುವನ್ನು ಬೇರೆ ಕಡೆ ಕಟ್ಟಿ ಹಾಕಿಸಿ ಇತರೆಯವರ ಹಸುವನ್ನು ಪರೀಕ್ಷಿಸುವ ನಮ್ಮ ಮೇಲೆ ಹಸು ಮಾಲೀಕರು ಉರಿಗಣ್ಣಾಗುತ್ತಾರೆ! ನಾವು ಕೈ ಹಾಕಿ ತೀರಾ ಒರಟಾಗಿ ಗರ್ಭ ಪರೀಕ್ಷೆ ಮಾಡಿದರೆ ಅಥವಾ ಕೃತಕ ಗರ್ಭಧಾರಣೆ ಮಾಡಿದರೆ ರೆಕ್ಟಮ್ಮಿನ ಒಳ ಲೋಳೆಪೊರೆ (mucous membrane) ನಮ್ಮ ಉಗುರಿನಿಂದ ಗೀರಿದಂತಾಗಿ ರಕ್ತಸ್ರಾವವಾಗುವುದೂ ಉಂಟು. ಅದಕ್ಕೇ ಪಶುವೈದ್ಯರೆಲ್ಲ ಕೈ ಬೆರಳ ಉಗುರುಗಳನ್ನು ನುಣ್ಣಗೆ ಕತ್ತರಿಸಿಕೊಂಡಿರುತ್ತಾರೆ. ಉಗುರು ಸರಿಯಾಗಿ ಕತ್ತರಿಸಿಕೊಳ್ಳದ ಪಶುವೈದ್ಯ ಒಳ್ಳೆಯ ಪಶುವೈದ್ಯನಲ್ಲವೆಂದೇ ತಿಳಿಯಿರಿ.

ಗರ್ಭ ಪರೀಕ್ಷೆಗೆ ಇರುವ ಇನ್ನೊಂದು ಯಡವಟ್ಟು ಎಂದರೆ, ರೆಕ್ಟಮ್ ಸುತ್ತಲೂ ಇರುವ ದೇಹದ ಭಾಗಗಳು. ಉದಾಹರಣೆಗೆ ಮೂತ್ರ ಚೀಲ ಒಡ್ಡುವ ಸವಾಲು. ಅದು ನಿಖರವಾಗಿ ಗರ್ಭಚೀಲದ ಕೆಳಗಿರುತ್ತದೆ. ಗರ್ಭ ಪರೀಕ್ಷೆ ಮಾಡುವಾಗ ನಾವೇನಾದರೂ ಮೂತ್ರ ತುಂಬಿದ ಮೂತ್ರಚೀಲವನ್ನು ಗರ್ಭಚೀಲವೆಂದು ತಪ್ಪಾಗಿ ತಿಳಿದು ಗರ್ಭವಿದೆ ಎಂದು ತೀರ್ಮಾನ ಹೇಳಿ ಬಿಟ್ಟರೆ ಫಜೀತಿಗಿಟ್ಟುಕೊಳ್ಳುತ್ತದೆ. ಅಂತಹ ಹಸು/ಎಮ್ಮೆ ಗರ್ಭವಿರುವುದಿಲ್ಲ. ಆದರೆ ನಾವು ಗರ್ಭವಿದೆಯೆಂದು ರೈತರಿಗೆ ಹೇಳಿ ಕಳುಹಿಸಿರುತ್ತೇವೆ!

ಎಲ್ಲ ಪಶುವೈದ್ಯನೂ ತನ್ನ ಸೇವಾವಧಿಯಲ್ಲಿ ಒಂದಲ್ಲ ಒಂದು ಸಲ ಗರ್ಭಪರೀಕ್ಷೆಯಲ್ಲಿ ತಪ್ಪನ್ನು ಮಾಡಿಯೇ ಇರುತ್ತಾನೆ (ಇದಕ್ಕೆ ಅಪವಾದವೂ ಇರಬಹುದು!). ಗರ್ಭವಿಲ್ಲದ ಹಸು/ಎಮ್ಮೆಗಳು 18-21 ದಿನಕ್ಕೊಮ್ಮೆ ನಿಯಮಿತವಾಗಿ ಬೆದೆಗೆ ಬರುತ್ತವೆ. ಕೆಲವೊಮ್ಮೆ ಅವು ಬೆದೆಗೂ ಬರುವುದಿಲ್ಲ. ರೈತನಿಗೆ ತನ್ನ ರಾಸು ಗರ್ಭವಿರುವುದು ಗ್ಯಾರಂಟಿಯಾಗಿ ಅವಧಿ ಮುಗಿದರೂ ಸ್ವಲ್ಪ ದಿನ ಕಾದು ಸುಸ್ತಾಗುತ್ತಾನೆ. ಹಸು/ಎಮ್ಮೆ ಈಯುವುದೇ ಇಲ್ಲ. ಒಳಗೆ ಕರುವಿದ್ದರೆ ತಾನೆ?

ಒಮ್ಮೆ ಹೀಗಾಯಿತು: ನಾನು ಕೆಲಸ ಮಾಡುತ್ತಿದ್ದ ಒಂದು ಕಡೆ ಬೆಳಬೆಳಗ್ಗೆಯೇ ರೈತನೊಬ್ಬ ಆಸ್ಪತ್ರೆಯ ಬಳಿ ಬಂದು ಕೂಗಾಡತೊಡಗಿದ. ಏನಾಯ್ತೋ ಎಂದು ಎಲ್ಲರೂ ಹೊರಗೆ ದೌಡು. ಅವನು ತನ್ನ ಹಸುವನ್ನು ಒಂದು ಮರದ ಬುಡದಲ್ಲಿ ಕಟ್ಟಿ ಹಾಕಿ ಬಾಯಿ ಬಡಿದುಕೊಳ್ಳುತ್ತಾ, ಹಣೆ ಚಚ್ಚಿಕೊಳ್ಳುತ್ತಾ, ಬಗ್ಗಿ ಬೊಗಸೆಯಲ್ಲಿ ಮಣ್ಣು ತುಂಬಿಕೊಂಡು ದಶದಿಕ್ಕುಗಳಿಗೆ ತೂರುತ್ತಾ, ಶಾಪ ಹಾಕುತ್ತಾ, ಬೈಯ್ಯುತ್ತಾ ಆಸ್ಪತ್ರೆಯ ಬಾಗಿಲಿಗೆ ಬಂದ. ಎಂತಹ ಭೀಕರ ದುರಂತಕ್ಕೆ ಈಡಾಗಿದ್ದಾನೋ ಎಂದು ನಾವೆಲ್ಲರೂ ಥಂಡಾ ಹೊಡೆದು ಹೋದೆವು. ಕೂಡಲೇ ಆತನನ್ನು ಒಂದು ಕುರ್ಚಿ ಹಾಕಿ ಕೂರಿಸಿ, ಕುಡಿಯಲು ನೀರು ಕೊಟ್ಟು, ಮುಖ ಕೈ ಕಾಲು ತೊಳೆದುಕೊಳ್ಳಲು ಬಕೆಟ್‍ನಲ್ಲಿ ನೀರು ಕೊಟ್ಟು ಉಪಚರಿಸಿದೆವು.

ಸುಮಾರು ಮೂವತ್ತೈದು ವರ್ಷದ ಆತ ಪಕ್ಕದ ಹಳ್ಳಿಯವನಾಗಿದ್ದು, ಖಾಕಿ ನಿಕ್ಕರು ಮತ್ತು ದೊಗಳೆಯಾದ ಅರ್ಧ ತೋಳಿನ ಶರ್ಟು ಉಟ್ಟಿದ್ದ. ಶರ್ಟಿನ ತೋಳುಗಳು ಮೊಣಕೈಗಿನ್ನ ಉದ್ದವಿದ್ದವು. ಜೇಬು ಆರಾಮಾಗಿ ಒಂದು ನೂರು ರೂಪಾಯಿಯ ಹತ್ತು ಕಟ್ಟುಗಳನ್ನು ಅಂದರೆ ಒಂದು ಲಕ್ಷ ರೂಪಾಯಿಯನ್ನು ಇಡಬಹುದಾದಷ್ಟು ದೊಡ್ಡದಿತ್ತು. ಅದರಲ್ಲಿ ಆತ ಸದ್ಯಕ್ಕೆ ಒಂದು ಕೆಜಿ ತೂಗುವಷ್ಟು ಯಾವಾವುದೋ ಚೀಟಿಗಳನ್ನಿಟ್ಟುಕೊಂಡಿದ್ದ.

ಹಸುವಿನ ಗರ್ಭ ಪರೀಕ್ಷೆ ಮಾಡಿಸಿದ ದಿನಾಂಕ ಬರೆದಿಟ್ಟುಕೊಂಡಿದ್ದ ಚೀಟಿಗಾಗಿ ಹುಡುಕಾಡತೊಡಗಿದ. ಆದರೆ ಜೇಬಿನಿಂದ ಅಸಂಬದ್ಧ ಚೀಟಿಗಳು ಹೊರಬರತೊಡಗಿದವು. ಯಾರಾರಿಂದಲೋ ಈಸಕೊಂಡ ಕೈಗಡಗಳ ಚೀಟಿ, ಡಾಕ್ಟರುಗಳು ಬರೆದುಕೊಟ್ಟ ಔಷಧದ ಚೀಟಿ, ಆ ವರ್ಷದ ಸಣ್ಣದೊಂದು ಪಂಚಾಂಗ, ಕೆಇಬಿ ಬಿಲ್ಲು ರಸೀದಿಗಳು, ಕೆಎಸ್‍ಆರ್ ಟಿಸಿ ಬಸ್ ಟಿಕೆಟು ಮುಂತಾದವು ಪಿತಗುಟ್ಟುತ್ತಿದ್ದವು. ಆದರೆ ಅವನು ಹುಡುಕುತ್ತಿದ್ದ ಗರ್ಭಪರೀಕ್ಷೆಯ ಚೀಟಿ ಮಾತ್ರ ಆ ರಾಶಿಯಲ್ಲಿ ಸಿಗಲೇ ಇಲ್ಲ. ಜೇಬಿಗೆ ಜೇಬೇ ಖಾಲಿ ಮಾಡಿದರೂ ಅದರಲ್ಲಿ ಒಂದು ನಯಾಪೈಸೆ ಇರದೆ ಅವನ ಆರ್ಥಿಕ ಸ್ಥಿತಿಯನ್ನು ಸಹ ಬಟಾಬಯಲು ಮಾಡಿ ತೋರಿಸುತ್ತಿತ್ತು. ಅವನ ಹೆಸರು ಈಶ್ವರಪ್ಪ ಎಂಬುದಾಗಿತ್ತು.

ಅವನ ಅವತಾರ ಮತ್ತು ಆರ್ಭಟದ ಮಧ್ಯೆ ನಮಗೆ ಅರ್ಥವಾಗಿದ್ದಿಷ್ಟು: ಈಗ್ಗೆ ಸುಮಾರು ಆರು ತಿಂಗಳ ಹಿಂದೆ ಅವನು ದಲ್ಲಾಳಿಯೊಬ್ಬನಿಂದ ಹಸು ಖರೀದಿಸಿದ. ಆಗ ನಮ್ಮ ಆಸ್ಪತ್ರೆಯ ಸಿಬ್ಬಂದಿಯೊಬ್ಬರಿಂದ ಗರ್ಭ ಪರೀಕ್ಷೆ ಮಾಡಿಸಲಾಗಿ ಸುಮಾರು ನಾಲ್ಕೈದು ತಿಂಗಳು ಗರ್ಭವಿದೆಯೆಂದು ತಿಳಿಸಿದರು. ಹಾಗೆ ಹೇಳಿ ಆರು ತಿಂಗಳಾಯಿತು. ಅದರ ಪ್ರಕಾರ ಈಗ ಕರು ಹಾಕಿ ಒಂದೆರಡು ತಿಂಗಳಾದರೂ ಆಗಬೇಕಿತ್ತು. ಆದರೆ ಇದುವರೆಗೂ ಕರುವೂ ಇಲ್ಲ, ಕಸವೂ ಇಲ್ಲ. ದಲ್ಲಾಳಿಯಿಂದ ಲಂಚ ತಿಂದು ಆಸ್ಪತ್ರೆಯ ಸಿಬ್ಬಂದಿ ತನಗೆ ಮೋಸ ಮಾಡಿದ್ದಾರೆ. ಈಗ ಆರು ತಿಂಗಳಿಂದ ನಾನು ತಂದು ತಿನ್ನಿಸಿದ ಹಿಂಡಿಯೆಷ್ಟು? ಬೂಸಾಯೆಷ್ಟು? ಹಸು ಈದು ಎರಡು ತಿಂಗಳಿಂದ ಡೈರಿಗೆ ಹಾಲು ಹಾಕಿದ್ದರೆ ಎಷ್ಟು ಸಾವಿರ ಆದಾಯ ಬರುತ್ತಿತ್ತು? ನೀವೇ ಲೆಕ್ಕ ಹಾಕಿ ಸಾರ್! ಅದನ್ನು ಸಿಬ್ಬಂದಿಯೇ ಕೊಡಬೇಕು ಎಂದ!

ಈಶ್ವರಪ್ಪ ಆಪಾದಿಸುತ್ತಿದ್ದ ‘ಸಿಬ್ಬಂದಿ’ ನಮ್ಮ ಜೊತೆಯೇ ನಿಂತಿದ್ದ ಚಂದ್ರಪ್ಪನಾಗಿದ್ದ. ಅವನು ಇತ್ತೀಚೆಗೆ ಕೆಲಸಕ್ಕೆ ಸೇರಿದ್ದ ಅನನುಭವಿ ಹುಡುಗ. ದೂರದ ಊರಿನವ. ಒಬ್ಬಂಟಿಯಿದ್ದ. ಹೈಸ್ಕೂಲು ಹುಡುಗನಂತೆ ಗಿಡ್ಡಕ್ಕೆ ಇಷ್ಟೇ ಇಷ್ಟು ಇದ್ದ. ಎಲ್ಲವನ್ನೂ ಕುತೂಹಲದಿಂದ ನೋಡುತ್ತಿದ್ದ ಚಂದ್ರಪ್ಪ ಆಪಾದನೆಯ ಬೆರಳು ತನ್ನ ಕಡೆಗೇ ತಿರುಗಿದ್ದನ್ನು ನೋಡಿ ನಡುಗಿ ಹೋದ. ಅವನಿಂದ ಮಾತೇ ಹೊರಡದಂತಾಯಿತು.

“ಹಸು ಹಿಡಿದುಕೊಳ್ಳಪ್ಪ. ನಾನೊಮ್ಮೆ ಗರ್ಭಪರೀಕ್ಷೆ ಮಾಡುತ್ತೇನೆ” ಎಂದು ಹೇಳಿ ನಾನು ರೆಕ್ಟಮ್ಮಿಗೆ ಕೈ ಹಾಕಿ ಪರೀಕ್ಷಿಸಲಾಗಿ, ಮೋಪಾಗಿ ಮೈ ತುಂಬಿಕೊಂಡಿದ್ದ ಹಸು ರೈತ ಹಾಕಿದ್ದನ್ನೆಲ್ಲಾ ಚೆನ್ನಾಗಿ ಮೇಯ್ದು ಸುಖವಾಗಿತ್ತೇ ವಿನಃ ಗರ್ಭವಿರಲಿಲ್ಲ. ಅದರ ಮೈ ಮಿಂಚುತ್ತಿತ್ತು. ಈಶ್ವರಪ್ಪ ಕೂಗಿ ಹೇಳುತ್ತಿದ್ದಂತೆ ‘ಕಣ್ಣೆಸರು’ ಆಗುವಂತಿತ್ತು. ಹಾಲು ಹಿಂಡುವುದನ್ನು ಅವನು ನಿಲ್ಲಿಸಿರಲಿಲ್ಲ ಮತ್ತು ಹಾಲಿನ ಪ್ರಮಾಣ ಕಡಿಮೆ ಕೂಡ ಆಗಿರಲಿಲ್ಲ.

ಹಸು ಸಾಕಾಣಿಕೆಯಲ್ಲಿ ಸಾಮಾನ್ಯವಾಗಿ ಗರ್ಭವು ಏಳು ತಿಂಗಳು ತುಂಬಿದ ಮೇಲೆ ಹಾಲು ಕರೆಯುವುದನ್ನು ನಿಲ್ಲಿಸುತ್ತಾರೆ. ಹಾಗೆ ಮಾಡಿದರೆ ಗರ್ಭದಲ್ಲಿನ ಕರು ಚೆನ್ನಾಗಿ ಬೆಳೆಯುತ್ತದೆ. ಕೆಚ್ಚಲಿಗೆ ಎರಡು ತಿಂಗಳು ವಿಶ್ರಾಂತಿ ಸಿಗುತ್ತದೆ ಮತ್ತು ಮುಂದಿನ ಸೂಲಿನಲ್ಲಿ ಹಾಲು ಹೆಚ್ಚು ಕೊಡುತ್ತದೆ ಎಂಬುವ ಉದ್ದೇಶದಿಂದ ಹಾಗೆ ಮಾಡುತ್ತಾರೆ. ಆದರೆ ಹಸು ಗರ್ಭವಿದೆ ಎಂದು ತಿಳಿದುಕೊಂಡಿದ್ದ ಈಶ್ವರಪ್ಪ ಎಂಬ ಅತಿಯಾಸೆಯ ಮನುಷ್ಯ ಹಾಲು ಕರೆಯುವುದನ್ನು ಮಾತ್ರ ನಿಲ್ಲಿಸಿರಲಿಲ್ಲ.

ಹಸು ಗರ್ಭವಿಲ್ಲ ಎಂದು ಖಚಿತವಾದ ಮೇಲೆ ಚಂದ್ರಪ್ಪನ ಕಡೆಗೆ ತಿರುಗಿ “ನೀನು ಪರೀಕ್ಷಿಸಿ ಗರ್ಭ ಇದೆ ಎಂದು ಹೇಳಿದ್ದೆಯಾ?” ಎಂದು ಪ್ರಶ್ನಿಸಿದೆ.

ಚಂದ್ರಪ್ಪ ಕೂಡಲೇ ಎರಡನೆಯ ಯೋಚನೆ ಮಾಡದೆ “ಹೌದು ಸಾರ್. ಗರ್ಭ ಇದೆ ಎಂದು ಹೇಳಿದ್ದೆ” ಎಂದ.

ಆ ಹುಡುಗ ಎಷ್ಟು ಪ್ರಾಮಾಣಿಕ, ನೇರ ನಡೆ ನುಡಿಯವನು ಆಗಿದ್ದನೆಂದರೆ ಅವನನ್ನು ನಾನು ಕೇವಲ ಕಚೇರಿಯ ಸಿಬ್ಬಂದಿ ಎಂದು ಭಾವಿಸದೆ ಕುಟುಂಬದ ಸದಸ್ಯನಂತೆಯೇ ಕಾಣುತ್ತಿದ್ದೆ. ಪರಿಚಯದ ಒಂದು ಮನೆಯಲ್ಲಿ ಊಟ ತಿಂಡಿ ಮತ್ತು ಆಸ್ಪತ್ರೆಯಲ್ಲಿ ನಿದ್ರೆ, ಸ್ನಾನ, ಶೌಚಗಳ ಏರ್ಪಾಟು ಮಾಡಿಕೊಂಡಿದ್ದ. ಆಸ್ಪತ್ರೆಯಲ್ಲಿ ತನ್ನ ಕೆಲಸ ಮಾತ್ರವಲ್ಲದೆ ಬೇರೆಯವರ ಕೆಲಸಗಳನ್ನೆಲ್ಲ ಮಾಡುತ್ತಿದ್ದ. ಗ್ರೂಪ್ ‘ಡಿ’ ಯವರು ರಜೆ ಇದ್ದರೆ ಅವರ ಕೆಲಸವನ್ನೂ ಮಾಡಿ ಮುಗಿಸುತ್ತಿದ್ದ. ಊರಿನಲ್ಲಿದ್ದ ತಂದೆ ತಾಯಿ ಮತ್ತಿಬ್ಬರು ಅಕ್ಕಂದಿರ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದ ಅವನು ಪ್ರತಿ ತಿಂಗಳು ಮನೆಗೆ ವ್ರತದಂತೆ ದುಡ್ಡು ಕಳುಹಿಸುತ್ತಿದ್ದ.

ಅಪರೂಪಕ್ಕೆಂಬಂತೆ ಅಂದು ಆಸ್ಪತ್ರೆಗೆ ಒಂದೆರಡು ದನಗಳು ಮಾತ್ರ ಬಂದಿದ್ದವು. ಯಾರೂ ಇಲ್ಲದ್ದರಿಂದ ವಿರಾಮವಾಗಿ ಮಾತನಾಡುತ್ತಾ ಹೋದೆವು. ‘ಗರ್ಭ ಪರೀಕ್ಷೆ ಮಾಡಿದಾಗ ನಿನಗೆ ಅನುಮಾನ ಬರಲಿಲ್ಲವೇ?’ ಎಂದು ಚಂದ್ರಪ್ಪನನ್ನು ಕೇಳಿದೆ. ಅವನು ಉತ್ತರಿಸಲಿಲ್ಲ. ಹುಡುಗ ಗಿಡ್ಡನಿದ್ದು ಹಸು ದೊಡ್ಡ ಗಾತ್ರದ್ದಾಗಿತ್ತು. ಅವನು ಹಸು ಹಿಂದೆ ನಿಂತು ರೆಕ್ಟಮ್ಮಿನಲ್ಲಿ ಕೈ ಹಾಕಿದಾಗ ಹಸುವಿನ ಗರ್ಭಚೀಲ ಕೈಗೆಟುಕಿತೋ ಇಲ್ಲವೋ ಎನಿಸಿತು. ಸ್ವಲ್ಪ ಸಂಕೋಚ ಪ್ರವೃತ್ತಿಯವನಾದ ಚಂದ್ರಪ್ಪನಿಗೆ ಗರ್ಭ ಇದೆಯೋ ಇಲ್ಲವೋ ಎಂಬುದು ಗೊತ್ತಾಗಿಲ್ಲ. ಆದರೆ ಹಾಗೆ ತಿಳಿಸಲು ಧೈರ್ಯ ಸಾಲದೆ ಸಂಕೋಚದಿಂದ ‘ಗರ್ಭ ಇದೆ’ ಎಂದು ಹೇಳಿ ಆ ಸನ್ನಿವೇಶದಿಂದ ಪಾರಾಗಿರಬಹುದು ಎನಿಸಿತು. ‘ಈಶ್ವರಪ್ಪನಿಗೆ ವಿನಾಕಾರಣ ನಷ್ಟವಾಯಿತಲ್ಲ?’ ಎಂದೆ.

‘ಹೌದು ತಪ್ಪಾಯಿತು ಸಾರ್. ಇನ್ಮೇಲೆ ಹೀಗೆ ಮಾಡಲ್ಲ ಸಾರ್’ ಎಂದ.

ಆಗ ನಾನು ಈಶ್ವರಪ್ಪನ ಕಡೆ ತಿರುಗಿ ‘ಹುಡುಗ ಅನನುಭವಿ. ಆದರೆ ಹಸುವಿನಂತಹವನು. ತಪ್ಪು ಒಪ್ಪಿಕೊಂಡಿದ್ದಾನೆ. ಈಗ ಕೂಗಾಡಿ ಪ್ರಯೋಜನವಿಲ್ಲ. ಏನು ಮಾಡುವುದು ಹೇಳು’ ಎಂದೆ.

ಈಶ್ವರಪ್ಪ ‘ಹತ್ತು ಸಾವಿರ ಕೊಡ್ಲಿ’ ಎಂದ.

ನಾನು: ‘ಅಂಗೆಲ್ಲ ಹುಚ್ಚಾಬಟ್ಟೆ ಕೇಳಬಾರ್ದು. ಅಷ್ಟು ದುಡ್ಡಿಗೆ ಒಂದು ಸಾಧಾರಣ ಹಸುವೇ ಬರುತ್ತೆ. ಅದು ಬೇಕೆಂದೇ ಮಾಡಿದ ತಪ್ಪಲ್ಲ. ಅರಿಯದೇ ಆದ ತಪ್ಪಿಗೆ ದೇವರೂ ಕ್ಷಮಿಸುತ್ತಾನಂತೆ. ದೊಡ್ಡ ಮನಸ್ಸು ಮಾಡು. ಯಾವ ತಪ್ಪೂ ಮಾಡದವನು ಜಗತ್ತಿನಲ್ಲಿ ಎಲ್ಲಿದ್ದಾನೆ ತೋರಿಸು. ಮೊನ್ನೆ ಮೈಮೇಲಿನ ಉಣ್ಣೆ ಹೇನಿಗೆ ಔಷಧ ಹಾಕಲು ಹೋಗಿ ಒಂದು ಜೊತೆ ಎತ್ತುಗಳು ಹೊಸಳ್ಳಿಯಲ್ಲಿ ಸತ್ತೇ ಹೋಗಲಿಲ್ಲವೇ? ಹೋದ ವರ್ಷ ಹೊಲಕ್ಕೆ ಹಾಕಲು ಇಟ್ಟಿದ್ದ ಯೂರಿಯಾವನ್ನು ತಿಂದು ಎಮ್ಮೆಯೊಂದು ರಂಗನಹಳ್ಳೀಲಿ ಸಾಯಲಿಲ್ಲವೆ? ಹಗ್ಗ ಹರಿಯೋತನಕ ಜಗ್ಗಬಾರದು’ ಎಂದೆ.

ರೈತ ಮೃದುವಾದಂತೆಯೂ, ಸಡಿಲವಾದಂತೆಯೂ ಕಂಡ. ಆದರೂ ಪಟ್ಟು ಬಿಡಲಿಲ್ಲ. ‘ಐದು ಸಾವಿರನಾದ್ರೂ ಕೊಡ್ಲಿ’ ಎಂದ.

ನಾನು: ‘ಕೇಳು ಈಶ್ವರಪ್ಪ, ನಾನು ಏನ್ಮಾಡಿದ್ದೆ ಹೇಳ್ತೀನಿ. ಒಮ್ಮೆ ಅವಸರದ ಕೆಟ್ಟ ಕ್ಷಣದಲ್ಲಿ ತೀರಾ ಎಳೆಗಬ್ಬದ ಹಸುವಿಗೆ ಅಂದರೆ ನಲವತ್ತು ದಿನದ ಗರ್ಭದ ಹಸುವಿಗೆ ಗರ್ಭವಿಲ್ಲ ಎಂದು ಭಾವಿಸಿ ಹಾರ್ಮೋನ್ ಇಂಜೆಕ್ಷನ್ ಮಾಡಿದ್ದೆ. ಹಸು ಮಾಲೀಕ ನಲವತ್ತು ದಿನದ ಕೆಳಗೆ ಕೃತಕ ಗರ್ಭಧಾರಣೆ ಆಗಿದೆ ಎಂದರೂ ಉಡಾಫೆ ಮಾಡಿದ್ದೆ. ರೆಕ್ಟಮ್‍ನಲ್ಲಿ ಕೈ ಹಾಕಿ ಪರೀಕ್ಷಿಸಿ ಗರ್ಭವಿರಬಹುದು ಎನಿಸಿದರೂ ಮೂರ್ಖನಂತೆ ದುಡುಕಿ ಮಾಡಬಾರದ ಇಂಜೆಕ್ಷನ್ ಮಾಡಿದ್ದೆ. ಮರುದಿನವೇ ಅಬಾರ್ಷನ್ ಆಯಿತು. ಮಲ್ಲಿನ ಬಟ್ಟೆಯಂತಹ ಭ್ರೂಣವನ್ನು ಆ ಹಸುವಿನ ಮಾಲೀಕ ತಂದು ತೋರಿಸಿದಾಗ ನನ್ನ ಮೂರ್ಖತನದ ಪರಿಣಾಮ ಗೊತ್ತಾಯಿತು. ಆಗ ತಾನೇ ಮೂಡಿ ಮಿಡಿಯುತ್ತಿದ್ದ ಜೀವವೊಂದು ನನ್ನ ದಾರ್ಷ್ಟ್ಯಕ್ಕೆ ಬಲಿಯಾಗಿತ್ತು.’

‘ಅದು ಗಾತ್ರದಲ್ಲಿ ಸಣ್ಣ ಇಲಿಮರಿಯಷ್ಟಿತ್ತು. ಪ್ರಕೃತಿಯ ಕೂಸಾಗಿ ಏನೇನು ನಿರ್ದೇಶನಗಳನ್ನು ತನ್ನ ಜೈವಿಕ ಸೂತ್ರದಲ್ಲಿ ಹೊತ್ತು ತಂದಿತ್ತೋ ಏನೋ? ಪ್ರತ್ಯಕ್ಷವಾಗಿ ನೋಡದೆ, ಮೂಸದೆ, ಮುಟ್ಟದೆ, ಯಾವ್ಯಾವ ಕೊಂಡಿಗಳಿಗೆ ನಾನು ಕೊಡಲಿಯೇಟು ಹಾಕಿದ್ದೆನೋ? ಅಂತೂ ಒಂದು ಜೀವ ಹೋಯ್ತು. ನಾವು ಕೊಡುವ ಮೂರು ಸಾವಿರ, ಆರು ಸಾವಿರವಲ್ಲ ನಮಗೆ ಶಿಕ್ಷೆ, ನಾವು ಎಸಗಿದ ಕೇಡು ನಮ್ಮನ್ನು ಸಾವಿನವರೆಗೆ ಬೆನ್ನತ್ತಿ ಕಾಡುತ್ತದೆ. ಅದು ಶಿಕ್ಷೆ’ ಎಂದೆ.

ಹತ್ತು ನಿಮಿಷದ ದೀರ್ಘ ಸಮಯ ಯಾರೂ ಮಾತನಾಡಲಿಲ್ಲ. ಮೂರ್ನಾಲ್ಕು ಜನ ಸಿಬ್ಬಂದಿ ಮತ್ತು ಮೂರ್ನಾಲ್ಕು ಜನ ರೈತರು ತಾವೇ ಮಾಡಿದ ತಪ್ಪೋ ಎಂಬಂತೆ ಸ್ತಬ್ಧವಾಗಿ ನಿಂತಿದ್ದರು. ಈಶ್ವರಪ್ಪನಿಗೆ ‘ನಾಳೆ ಇದೇ ಹೊತ್ತಿಗೆ ಬಂದು ಎರಡು ಸಾವಿರ ನನ್ನತ್ತಿರ ಈಸಕೊಂಡು ಹೋಗು. ಚಂದ್ರಪ್ಪ ಸಂಬಳವಾದಾಗ ನನಗೆ ಕೊಡುತ್ತಾನೆ’ ಎಂದೆ.

ಮರುದಿನ ಈಶ್ವರಪ್ಪ ಬಂದು ದುಡ್ಡು ಈಸಕೊಂಡು ಹೋದ. ಚಂದ್ರಪ್ಪ ಅದೇ ತಿಂಗಳ ಸಂಬಳದಲ್ಲಿ ಮೊದಲ ಕಂತಾಗಿ ಐದು ನೂರು ರೂಪಾಯಿ ಕೊಟ್ಟ. ಅದಾದ ಮೇಲೆ ನಾನು ಮತ್ತೆ ದುಡ್ಡು ಈಸಿಕೊಳ್ಳಲಿಲ್ಲ. ಬೇಡವೆಂದೆ.

ಗರ್ಭಪರೀಕ್ಷೆ ಅನ್ನೋದು ನಮ್ಮ ಸ್ವಯಂ ಪರೀಕ್ಷೆಯಾಗಿ ಮಾರ್ಪಾಟಾದದ್ದು ಹೀಗೆ.

‍ಲೇಖಕರು Avadhi

January 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ |ಕಳೆದ ಸಂಚಿಕೆಯಿಂದ|...

3 ಪ್ರತಿಕ್ರಿಯೆಗಳು

 1. ವೆಂಕಟೇಶ ಮೂರ್ತಿ

  ಹಳ್ಳಿ ಹಾಗೂ ಜಾನವರು ಘಟನೆಗಳ ಚಿತ್ರಣ.

  ಪ್ರತಿಕ್ರಿಯೆ
 2. Sudhakara Battia

  Duty is not following rules and laws.
  Duty is a life long
  learning experience ❤️Kudos to this ardent story

  ಪ್ರತಿಕ್ರಿಯೆ
 3. SUDHA SHIVARAMA HEGDE

  ತಪ್ಪು ಪರೀಕ್ಷೆಗೆ ಹಣ ಬೇರೆ ಕಟ್ಟಬೇಕಾ?

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: