ಗಾಂಧೀಜಿಯವರಿಗೆ ಬಾಲಕನೊಬ್ಬನ ಕಾಗದ

ಗಾಂಧೀಜಿಯವರಿಗೆ ಬಾಲಕನೊಬ್ಬನ ಕಾಗದ ಹಿಂದೀ ಮೂಲ : ಖ್ವಾಝಾ ಅಹಮದ್ ಅಬ್ಬಾಸ್ ಕನ್ನಡಾನುವಾದ : ಸಿ. ವಿ ಶೇಷಾದ್ರಿ ಹೊಳವನಹಳ್ಳಿ ಬಾಪೂ..ತಾವು ಜನ್ನತ್ ಸೇರಿ ಅಲ್ಲಾನ ಜೊತೆ ಇರುವಿರೆಂದು ನಮ್ಮಮ್ಮ ಹೇಳುತ್ತಾಳೆ. ಗೋಪಾಲನ ತಾಯಿ ಕೂಡ ಹೇಳುತ್ತಾಳೆ ತಾವು ಆ ದೇವರಿಗೆ ಪ್ರೀತಿ ಪಾತ್ರರಾಗಿರುವಿರೆಂದು. ಯಾರ ಮಾತು ಸತ್ಯವೋ ಯಾರಿಗೆ ಗೊತ್ತು? ಅದಕ್ಕಾಗಿಯೇ ನಾನು ಈ ಕಾಗದದಲ್ಲಿ ವಿಳಾಸವನ್ನು ಸ್ವರ್ಗ ಅಥವಾ ಜನ್ನತ್ ಎಂದು ಬರೆದಿದ್ದೇನೆ. ಅವೆರಡೂ ಒಂದೇ ಜಾಗದ ಹೆಸರಿರಬೇಕು. ಕಾಶಿಯನ್ನು ಬನಾರಸ್ ಹಾಗೂ ಪ್ರಯಾಗವನ್ನು ಇಲಾಹಾಬಾದ್ ಎನ್ನುವುದಿಲ್ಲವೇ? ಹಾಗೆ. ತಾವು ಎಲ್ಲಿದ್ದರೂ ಈ ಕಾಗದ ತಲುಪಲಿ. ಈ ಕಾಗದವನ್ನು ನಿಜವಾಗಲೂ ನಾನು ಬರೆಯುತ್ತಿಲ್ಲ ನನ್ನಿಂದ ಬರೆಸಲಾಗುತ್ತಿದೆ. ಬರೆಸುತ್ತಿರುವವರು ಯಾರುಯಾರೆಂದರೆ- ನನ್ನ ಚಿಕ್ಕ ತಮ್ಮ ಬುಂದು ( ಇವನ ಪೂತರ್ಿ ಹೆಸರು ಬಂದೆ ಅಲೀ ) ಅಲ್ಲದೆ ನನ್ನಕ್ಕ ಜೈನಬ್ ಮತ್ತು ತಂಗಿ ಸಕೀನಾ. ಗೋಪಾಲ , ಅವನ ತಂಗಿ ಸೀತಾ ಹಾಗೂ ಹಾಂ ಮರೆತೇ ಬಿಟ್ಟಿದ್ದೆ ಮೋಹನ . ಮೋಹನ ಕೂಡ ನಾನು ನಿಮಗೆ ಪತ್ರ ಬರೆಯಬೇಕೆಂದು ಬಯಸಿದ್ದಾನೆ. ಇದನ್ನೇನೂ ಅವನು ನನಗೆ ಹೇಳಿಲ್ಲ ಆದರೆ ಅವನ ಕಣ್ಣುಗಳು ಹೇಳಿದವು. ಅವನು ಬಾಯಿಂದ ಹೇಳಲಾರ. ಏನು ಹೇಳಬೇಕಾದರೂ ಅವನು ಕಣ್ಣುಗಳಿಂದಲೇ ಹೇಳುತ್ತಾನೆ. ಅವನ ಕಣ್ಣುಗಳು ತುಂಬಾ ಮಾತಾಡುತ್ತವೆ. ಅವುಗಳ ಬಣ್ಣನೆ ನಾನು ನಂತರ ಮಾಡುತ್ತೇನೆ. ಈಗ ಇಷ್ಟು ಮಾತ್ರ ಹೇಳುತ್ತೇನೆ ಅದೆಂದರೆ ಮೋಹನನ ಕಣ್ಣುಗಳು ಕಾಗದ ಬರೆ ಬರೆ ಎಂದು ಸಾರಿ ಸಾರಿ ಹೇಳುತ್ತಿವೆ. ಆದ್ದರಿಂದ ಬರೆಯುತ್ತಿದ್ದೇನೆ. ದೊಡ್ಡಮನಸ್ಸು ಮಾಡಿ ನನ್ನನ್ನು ಮನ್ನಿಸುವಿರಿ ತಾನೇ ? ತಾವು ತುಂಬಾ ದೊಡ್ಡವರು. ಈ ಮಕ್ಕಳು ನನಗೇಕೆ ಕಾಗದ ಬರೆಸುತ್ತಿದ್ದಾರೆ ಎಂದು ತಾವು ಯೋಚಿಸುತ್ತಿರಬಹುದು. ನಿಮಗೆ ಮಕ್ಕಳೆಂದರೆ ಬಹಳ ಇಷ್ಟವೆಂದು ನಾವು ಕೇಳಿದ್ದೇವೆ. ಭಾವಚಿತ್ರಗಳಲ್ಲಿ ನಾನು ನೋಡಿದ್ದೇನೆ. ಅದರಲ್ಲಿ ತಾವು ಸಣ್ಣ ಸಣ್ಣ ಮಕ್ಕಳ ಜೊತೆ ನಗುತ್ತಾ ಆಟ ಆಡುತ್ತಿದ್ದೀರ. ತಾವು ಒಮ್ಮೆ ಸಮುದ್ರದ ಕಿನಾರೆಯಲ್ಲಿ ಮಕ್ಕಳೊಡನೆ ಅಡುತ್ತಿದ್ದುದನ್ನು ಗೋಪಾಲ ನೋಡಿದ್ದನಂತೆ. ಅವನು ಇದನ್ನು ಆಗಾಗ ಹೇಳುತ್ತಿರುತ್ತಾನೆ. ತಮ್ಮ ಭಾವ ಚಿತ್ರವನ್ನು ನೋಡಿದ ಕೂಡಲೇ , ಯಾವಾಗಲೂ ದುಃಖ ಮತ್ತು ಭಯದಿಂದ ತುಂಬಿದ ಮೋಹನನ ಕಣ್ಣುಗಳು ಸಂತೋಷದಿಂದ ಹೊಳೆಯುತ್ತವೆ. ಇವರು ಮಕ್ಕಳ ಬಾಪೂ . ಏಕೆ ಹೆದರಬೇಕು ಎಂದು ಅವನ ಕಣ್ಣುಗಳು ನುಡಿಯುತ್ತಿರುತ್ತವೆ. ತಾವು ತಪ್ಪು ತಿಳಿಯುವುದಿಲ್ಲ ಎಂದರೆ ಒಂದು ಮಾತು ಹೇಳುತ್ತೇನೆ, ಒಂದು ಭಾವ ಚಿತ್ರದಲ್ಲಿ ತಾವು ನಗುತ್ತಿದ್ದೀರಲ್ಲ ಅದು ನನಗೆ ತುಂಬಾ ಇಷ್ಟ ಏಕೆಂದರೆ ಅದರಲ್ಲಿ ತಾವು ಇನ್ನೂ ಹಲ್ಲು ಬಂದಿಲ್ಲದ , ಮಗುವಿನಂತೇ ಅಂದರೆ ನಮ್ಮ ಗೋಪಾಲನ ಒಂದು ವರ್ಷದ ಕೊನೆ ತಮ್ಮ ಇದ್ದಾನಲ್ಲ, ತಮ್ಮಂತೆ ಮೇಕೆ ಹಾಲು ಕುಡಿಯುತ್ತಾನಲ್ಲ ಅವನಂತೆ . ಇದ್ದೀರ. ಆದ್ದರಿಂದ ನಾವೆಲ್ಲ ತಾವೇನೂ ತಪ್ಪು ತಿಳಿಯುವುದಿಲ್ಲವೆಂದು ತಿಳಿದು ಈ ಕಾಗದ ಬರೆಯುತ್ತಿದ್ದೇವೆ. ನನ್ನ ಹೆಸರು ಅನ್ವರ್. ಎಲ್ಲರೂ ನನ್ನನ್ನು ಅನ್ನು ಎನ್ನುತ್ತಾರೆ. ಪಂಜಾಬಿನ ಕರ್ನಾಲ್ ಜಿಲ್ಲೆಯ ಪಾನೀಪತ್ನಲ್ಲಿ ನಮ್ಮ ಮನೆಯಿದೆ. ನಮ್ಮ ತಂದೆ ಅಲೀಯವರು ದಿಲ್ಲಿಯ ಸರಾಕಾರೀ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದರು. ನನಗೀಗ ಆರೂವರೆ ವರ್ಷ. ನಮ್ಮಮ್ಮನ ಹೆಸರು ಫಾತೀಮಾ. ಎಲ್ಲರೂ ಅವಳನ್ನು ಫತೋ ಎನ್ನುವರು., ನಮ್ಮಜ್ಜಿ ಒಬ್ಬಳಿದ್ದಾಳೆ . ಎಲ್ಲ ನಿಮ್ಮಂತೆ . ಬಾಯಲ್ಲಿ ಒಂದೂ ಹಲ್ಲಿಲ್ಲ. ಅಡಕೆಲೆಯನ್ನು ಕುಟ್ಟಣಿಯಲ್ಲಿ ಕುಟ್ಟಿಕೊಂಡು ತಿನ್ನುತ್ತಾಳೆ. ಈ ಎಲ್ಲ ನಮ್ಮವರು ಪಾಣೀಪತ್ ನಲ್ಲಿ ವಾಸಿಸುತ್ತಿದ್ದರು. ತಂದೆಯವರು ಮಾತ್ರ ದಿಲ್ಲಿಯ ಬಾಬರ್ ರೋಡಿನಲ್ಲಿರುವ ಕ್ವಾರ್ಟರ್ನಲ್ಲಿದ್ದರು. ನಮ್ಮ ತಂದೆ ತಮ್ಮನ್ನು ಸರಿಯಾಗಿ ತಿಳಿದುಕೊಂಡಿಲ್ಲ. ತಾವು ಮುಸಲಮಾನರ ಶತೃ ಎಂದು ಹೇಳುತ್ತಿರುತ್ತಾರೆ. ಅಮ್ಮನೂ ಹಾಗೇ ಹೇಳುತ್ತಾಳೆ. ಹೀಗಾಗಿ ನನ್ನ ಮನದಲ್ಲೂ ಅದೇ ಭಾವನೆ ಇತ್ತು. ಆದರೆ ನಮ್ಮಜ್ಜಿ ಹೇಳಿದಳು ಗಾಂಧೀಜಿ ದೇವರಂಥ ಮನುಷ್ಯ ಎಂದು. ಅವಳು ನಿಮ್ಮನ್ನು ಬಹಳ ಹಿಂದೆ ನೋಡಿದ್ದಳಂತೆ. ಒಂದು ಸಾರಿ ನೀವು ಪಾಣಿಪತ್ನ ಖಿಲಾಫತ್ ಕಮಿಟಿಗೆ ಯಾವುದೋ ಕೆಲಸಕ್ಕೆ ಬಂದಿದ್ದಿರಂತೆ ಮತ್ತು ಹೆಂಗಸರ ಮೆರವಣಿಗೆಯಲ್ಲೂ ಭಾಗವಹಿಸಿದ್ದಿರಂತೆ. ಆಗಿನಿಂದ ಆಕೆ ಖಾದಿಯನ್ನೇ ಧರಿಸತೊಡಗಿದ್ದಾಳೆ. ತಮ್ಮನ್ನು ಅವಳು ತುಂಬಾ ಮೆಚ್ಚುತ್ತಾಳೆ. ನಮ್ಮ ತಂದೆಯವರು ಅಜ್ಜಿಯನ್ನು ಅವಳಿಗೇನು ಗೊತ್ತು ದೊಡ್ಡ ದೊಡ್ಡ ವಿಚಾರ ಎಂದು ಬೈಯುತ್ತಿರುತ್ತಾರೆ. ಅವರು ಅಲೀಗಢ ಕಾಲೇಜಿನಲ್ಲಿ ಓದಿಕೊಂಡವರು. ಪ್ರತಿನಿತ್ಯ ದಿನ ಪತ್ರಿಕೆ ಓದುತ್ತಾರೆ. ಆದ್ದರಿಂದ ನಾವು ಅವರ ಮಾತನ್ನು ಬಹಳ ನಂಬುತ್ತಿದ್ದೆವು. ತಮ್ಮನ್ನು ಅವರು ಕೆಟ್ಟದಾಗಿ ಕಾಣುತ್ತಿದ್ದರು. ಲಂಗೋಟಿ ಹಾಗೂ ಬರಿಮೈಯವನೆಂದು ಆಡಿಕೊಳ್ಳುತ್ತಿದ್ದರು . ನಮಗೂ ಅಷ್ಟೆ ನಗು ಬರುತ್ತಿತ್ತು. ನಮ್ಮ ತಾತನ ಸಾವಿನ ನಂತರ ಅವರ ಆಸ್ತಿಯೆಲ್ಲಾ ನಮ್ಮಪ್ಪ ಹಾಗೂ ದೊಡ್ಡಪ್ಪ ಹಂಚಿಕೊಂಡರಂತೆ. ಬಾರತ ತುಂಡಾಗುತ್ತದೆಂದು ನಮಗೆ ತಿಳಿಯಿತು. ನಮ್ಮ ಗಲ್ಲಿಯಲ್ಲಿ ಪಾಕೀಸ್ತಾನ ಜಿಂದಾಬಾದ್ ಎಂದು ಘೋಷಣೆ ಹಾಕುತ್ತ ಓಡಾಡುತ್ತಿದ್ದೆವು. ಒಂದು ದಿನ ನಾನು ಅಪ್ಪನನ್ನು ಪಾಕೀಸ್ತಾನವೆಂದರೇನೆಂದು ಕೇಳಿದೆ . ಅದು ಮುಸಲ್ಮಾನರ ಸ್ವಂತ ರಾಜ್ಯವೆಂದು ಹಾಗೂ ಅಲ್ಲಿ ನಾವೇ ರಾಜರೆಂದು ಹೇಳಿದರು. ಇದರಿಂದ ನಾವು ಬಹಳ ಸಂತಸಗೊಂಡೆವು. ಏಕೆಂದರೆ ತಂದೆಯವರು ತರಿಸುತ್ತಿದ್ದ ಬಣ್ಣದ ಪತ್ರಿಕೆಯೊಂದರಲ್ಲಿ ನಾನು ಚೆನ್ನಾಗಿ ಅಲಂಕಾರ ಮಾಡಿಕೊಂಡ ರಾಜನೊಬ್ಬನ ಚಿತ್ರವನ್ನು ನೋಡಿದ್ದೆ. ಅವನ ಕಿರೀಟ ಬಂಗಾರದ್ದಾಗಿತ್ತು. ಕೊರಳಲ್ಲಿ ಮುತ್ತಿನ ಸರ ಧರಿಸಿದ್ದ. ಇದನ್ನೆಲ್ಲ ನೋಡಿದ್ದ ನನಗೆ ನಾವು ಮುಸಲ್ಮಾನರೆಲ್ಲ ಬಂಗಾರದ ಕಿರೀಟ ಮತ್ತು ಮುತ್ತಿನ ಹಾರ ಧರಿಸಬಹುದೆಂದುಕೊಂಡೆ. ಪಾನಿಪತ್ನಲ್ಲಿ ಮುಸಲ್ಮಾನರು ತುಂಬಾ ಇದ್ದಾರೆ. ಹಿಂದೂಗಳು ಕಡಿಮೆ. ಆದ್ದರಿಂದ ನಾವು ಹಿಂದುಗಳೆದುರು ಹೆಮ್ಮೆಯಿದ ಬೀಗಿ ನಡೆಯುತ್ತಿದ್ದೆವು. ಶೆಟ್ಟರ ಹುಡುಗರೆದುರು ಜೋರಾಗಿ ಪಾಕೀಸ್ತಾನ ಜಿಂದಾಬಾದ್ ಎಂದು ಘೋಷಣೆ ಹಾಕುತ್ತ ಓಡಾಡುತ್ತಿದ್ದೆವು ಮತ್ತು ಕಾಂಗ್ರೆಸ್ಸಿನ ಅಥವಾ ತಮ್ಮ ಅಂದರೆ ಗಾಂಧಿಯವರ ಹೆಸರು ಹೇಳುವವರನ್ನು ಹೊಡೆಯುತ್ತಿದ್ದೆವು. ಆದರೆ ಪಾಕೀಸ್ತಾನದ ರಚನೆಯಾದ ಮೇಲೆ ಪಾನಿಪತ್ ಪಾಕೀಸ್ತಾನಕ್ಕೆ ಸೇರುವುದಿಲ್ಲವೆಂದು ಹಾಗೂ ನಾವು ರಾಜರಾಗುವುದಿಲ್ಲವೆಂದು ನಮಗೆ ಗೊತ್ತಾಯಿತು . ಇಡೀ ದೇಶದ ತುಂಬ ಹೊಡೆದಾಟಗ ಳಾದವೆಂದು ಕೇಳಿದೆವು. ದಿಲ್ಲಿಯಿಂದ ಪಾನೀಪತ್ಗೆ ಬಂದ ನಮ್ಮ ತಂದೆಯವರು ಹೇಳಿದರು ಹಿಂದುಗಳು ಮುಸಲ್ಮಾನರನ್ನು ಹೊಡೆಯುತ್ತಿದ್ದಾರೆ ಎಂದು. ಹೀಗಾಗಿ ನಾನು ಹಿಂದುಗಳ ಮೇಲೆ ಮತ್ತಷ್ಟು ದ್ವೇಷ ಕಾರತೊಡಗಿದೆ. ಮುಸಲ್ಮಾನರು ಜಾಸ್ತಿ ಇರುವ ಹಾಗೂ ಹಿಂದೂಗಳು ಕಡಿಮೆ ಇರುವ ಕಡೆ ಹಿಂದೂಗಳು ಮುಸಲ್ಮಾನರಿಗೆ ಹೇಗೆ ಹೊಡೆಯುತ್ತಾರೆ ಎಂದು ನನಗೆ ತಿಳಿಯಲೇ ಇಲ್ಲ. ಮುಸಲ್ಮಾನರಾದ ನಾವು ಬಾದಶಹರ ಸಂತಾನ ಮತ್ತು ಹೊಡೆದಾಟಗಳಲ್ಲಿ ಯಾವಾಗಲೂ ಮುಂದಿರುತ್ತೇವೆ. ಪಂಜಾಬ್ ಹಾಗೂ ಸೋಬಾ ಸರಹದ್ದಿನಲ್ಲಿ ಬರೀ ಮುಸಲ್ಮಾನರೇ ತುಂಬಿದ್ದಾರೆ ಅಲ್ಲಿ ನಾವು ಹಿಂದುಗಳಿಗೆ ಚೆನ್ನಾಗಿ ಹೊಡೆಯಬಹುದಿತ್ತು. ಬಹುಶಃ ಹೊಡೆದಿರಬಹದೇನೋ..ಆದರೆ ನಾನು ಬಾಲಕ. ಅರ್ಥಮಾಡಿಕೊಳ್ಳುವುದರಲ್ಲಿ ನಾನೇ ತಪ್ಪು ಮಾಡಿದೆನೋ ಏನೋ..ಆದರೆ ನಮ್ಮ ತಂದೆ ವಿದ್ಯಾವಂತರಲ್ಲವೇ..? ಆದ್ದರಿಂದ ನಾನು ಸುಮ್ಮನಾದೆ. ಆದರೆ ಈ ವಿಚಾರ ನನ್ನ ಮನಸ್ಸನ್ನು ಇನ್ನೂ ಚುಚ್ಚುತ್ತಿದೆ. ಆ ಕಡೆ ದಿಲ್ಲಿಯಲ್ಲಿ ಹೊಡೆದಾಟ ಬಡಿದಾಟ ಶುರುವಾದವು. ಪಾಣೀಪತ್ನ ಮುಸಲ್ಮಾನರು ಪಾಕೀಸ್ತಾನಕ್ಕೆ ಓಡಿ ಹೋಗಲು ತಯಾರಿ ಮಾಡಿಕೊಳ್ಳತೊಡಗಿದರು.ಆದರೆ ನಮ್ಮ ತಂದೆಯವರು ಇದಕ್ಕೆ ತಯಾರಿರಲಿಲ್ಲ. ಅವರು ಸ್ವಲ್ಪ ಕಂಜೂಸು. ಮನೆ ಮಠ , ಆಸ್ತಿ ಪಾಸ್ತಿ, ಹೊಲ, ತೋಟ ತುಡಿಕೆ ಬಿಟ್ಟುಹೋಗಲು ಬಯಸಲಿಲ್ಲ. ನಿಧಾನಕ್ಕೆ ಒಂದೊಂದೇ ಒಳ್ಳೆ ಬೆಲೆಗೆ ಮಾರಿ ಆಮೇಲೆ ಇಲ್ಲಿಂದ ಓಡಿಹೋಗೋಣ ಎಂದು ಹೇಳುತ್ತಿದ್ದರು. ಆದರೆ ಅಷ್ಟರಲ್ಲಿ ಪಂಜಾಬಿನಿಂದ ಅನೇಕ ಹಿಂದೂಗಳು , ಸಿಖ್ಖರು ಓಡಿ ಬಂದರು. ಸಾವಿರಾರು , ಲಕ್ಷಾಂತರ ಹಿಂದೂಗಳಿಗೆ , ಸಿಖ್ಖರಿಗೆ ವಾಸಿಸಲು ಮನೆಗಳು ಬೇಕಾಗಿದ್ದವು. ಇವರೆಲ್ಲರ ಮನೆ ಮಠಗಳನ್ನು ಪಶ್ಚಿಮೀ ಮುಸಲ್ಮಾನರು ಲೂಟಿ ಮಾಡಿದ್ದರು. ಇವರ ಮಕ್ಕಳು ಮರಿಗಳಿಗೆ ಚಚ್ಚಿದ್ದರು. ಈಗ ಇವರೆಲ್ಲ ಮುಸಲ್ಮಾನರನ್ನು ಕಂಡರೆ ದ್ವೇಷಿಸುತ್ತಿದ್ದರು. ಕೆಂಡ ಕಾರುತ್ತಿದ್ದರು. ಆದ್ದರಿಂದ ಪಾಣೀಪತ್ನಲ್ಲಿ ಮುಸಲ್ಮಾನರು ವಾಸಿಸಿವುದು ಕಷ್ಟಕರವಾಯಿತು. ಕೆಲವರು ಪೋಲೀಸರ ಕೈಯಿಂದ ಕೂಡ ಸಾಯತೊಡಗಿದರು. ಪಾಕೀಸ್ತಾನದಿಂದ ಲಾರಿಗಳು , ಮೋಟಾರುಗಳು ಬರುತ್ತವೆಂದು ನಾವು ದಿನವೂ ಕಾದೆವು. ಆದರೆ ಅವು ಬರಲಿಲ್ಲ. ಅಪಾಯ ಜಾಸ್ತಿಯಾದಂತೆಲ್ಲ ನಮ್ಮಮ್ಮ ದಿಲ್ಲಿಯಲ್ಲಿದ್ದ ತಂದೆಗೆ ಕಾಗದ ಬರೆದರು. ಅವರು ಅಲ್ಲಿಂದ ಸೈನಿಕ ಲಾರಿ ತಂದರು. ಅದರಲ್ಲಿ ಸಾಮಾನು ಸರಂಜಾಮು ತುಂಬಿಕೊಂಡು ದಿಲ್ಲಿಗೆ ಬಂದೆವು. ಈಗ ನಾನು ತಮಗೆ ನನ್ನ ಬಂದೂಕಿನ ಬಗ್ಗೆ ಹೇಳ ಬಯಸುತ್ತೇನೆ. ಅದು ನೋಡಲು ತುಂಬಾ ಸುಂದರವಾಗಿದೆ. ಹೊಳೆಯುವ ನಳಿಗೆ, ಮರದ ಹಿಡಿ ತುಂಬಾ ಸುಂದರವಾಗಿದೆ. ಅದರ ಕುದುರೆ ಚೆನ್ನಾಗಿ ಸದ್ದು ಮಾಡುತ್ತದೆ. ನನ್ನ ಏಳನೇ ಹುಟ್ಟು ಹಬ್ಬಕ್ಕೆ ತಂದೆಯವರು ಉಡುಗೊರೆಯಾಗಿ ನೀಡಿದ್ದರು. ಅವರು ಅಂದು ಏನು ಹೇಳಿದ್ದರು ಗೊತ್ತೆ ? ಈಗಿನಿಂದಲೇ ಬಂದೂಕಿನ ಬಯಕೆ ಇಟ್ಟಕೊ. ದೊಡ್ಡವನಾದ ಮೇಲೆ ಒಳ್ಳೆ ಸಿಪಾಯಿಯಾಗುವೆ. ಕಾಫಿರರ ವಿರುದ್ಧ ಜೆಹಾದ್ ಮಾಡಬಹುದು. ಅಸಲಿಗೆ ಇದು ಆಟದ ಬಂದೂಕು. ಇದನ್ನು ಭುಜದ ಮೇಲಿಟ್ಟುಕೊಂಡು ಇಡೀ ಗಲ್ಲಿ ತುಂಬಾ ಹುಡುಗರಿಗೆ ಪೆರೇಡ್ ಮಾಡಿಸುತ್ತಿದ್ದೆ. ಇದು ನಮ್ಮ ಪಾಕೀಸ್ತಾನೀ ಸೈನ್ಯವಾಗಿತ್ತು. ಹಾಂ ನಾವು ಪಾನೀಪತ್ ಬಿಡುವಾಗ ಎಷ್ಟೊಂದು ಸಾಮಾನುಗಳನ್ನು ಅಲ್ಲೇ ಬಿಟ್ಟು ಬಿಟ್ಟೆವು. ತಂದೆಯವರ ಪುಸ್ತಕಗಳು, ಅಮ್ಮನ ಪಾತ್ರೆಗಳು, ಬಟ್ಟೆಗಳು, ಪೆಟ್ಟಿಗೆಗಳು, ಅಟ್ಟ, ಹೊದ್ದಿಕೆಗಳು, ಅಲ್ಲೇ ಬಿಟ್ಟು ಬಿಟ್ಟೆವು. ಕೇವಲ ಒಂದೆರಡು ಉಡುವ ಬಟ್ಟೆಗಳನ್ನಷ್ಟೇ ಒಯ್ದೆವು. ಆದರೆ ನಾನು ಈ ಬಂದೂಕನ್ನು ಸುಮ್ಮನೆ ಇರಲಿ ಎಂದು ಜೊತೆಗಿಟ್ಟುಕೊಂಡೆ. ಎಕೆಂದರೆ ನಮ್ಮನ್ನು ಪಾನೀಪತ್ ನಿಂದ ಹೊರಗಟ್ಟಿದ ಕಾಫಿರರ ವಿರುದ್ಧ ಇದರಿಂದಲೇ ನಾನು ಸೇಡು ತೀರಿಸಿಕೊಳ್ಳಬೇಕಿತ್ತು. ದಿಲ್ಲಿಯಲ್ಲಿ ನಾವು ಹತ್ತು ಹನ್ನೆರಡು ದಿನ ಒಂದು ಕೋಣೆಯಲ್ಲಿ ಬಂದಿಯಾಗಿದ್ದೆವು. ಏಕೆಂದರೆ ಅಲ್ಲಿ ಮುಸಲ್ಮಾನರನ್ನು ಹೊಡೆಯಲಾಗುತ್ತಿತ್ತು. ಮತ್ತು ನಮ್ಮ ಮುಖಗಳೆಲ್ಲ ಕಳೆಗುಂದಿದ್ದವು. ಮತ್ತೆ ತಾವು ಕಲ್ಕತ್ತೆಯಿಂದ ವಾಪಸ್ಸು ಬಂದಿರುವಿರೆಂದು ಹಾಗೂ ಮುಸಲ್ಮಾನರನ್ನು ಕಾಪಾಡುವ ಪ್ರಯತ್ನ ಮಾಡುತ್ತಿರುವಿರೆಂದು ನಮಗೆ ಗೊತ್ತಾಯಿತು. ಮೊದಲು ನಮ್ಮ ತಂದೆಯವರು ಇದೂ ಕೂಡ ಗಾಂಧಿಯ ಪಿತೂರಿಯಾಗಿದೆ ಎನ್ನುತ್ತಿದ್ದರು. ಆದರೆ ನಂತರ ತಾವು ಖಂಡಿತವಾಗಿಯೂ ಮುಸಲ್ಮಾನರನ್ನು ಬಚಾವು ಮಾಡುತ್ತಿರುವಿರೆಂದು ನಂಬಿಕೆ ಬಂದಿತು. ದಿಲ್ಲಿಯಲ್ಲಿ ಸ್ವಲ್ಪ ಶಾಂತಿ ನೆಲೆಸಿತು. ರೈಲಿನಲ್ಲಿ ಮುಸಲ್ಮಾನರನ್ನು ಹೊಡೆಯುತ್ತಿದ್ದಾರೆಂದು ಭರತಪುರದ ದಾರಿಯಲ್ಲಿ ಕೇಳಿದೆ. ಆದ ಕಾರಣ ತಂದೆಯವರಿಗೆ ಮುಂಬಯಿಗೆ ವಗರ್ಾವಣೆಯಾಯಿತು. ನಾವೆಲ್ಲ ಹಡಗಿನ ಮೂಲಕ ಇಲ್ಲಿಗೆ ಬಂದೆವು. ತಾವು ಯಾವತ್ತೂ ಹಡಗಿನಲ್ಲಿ ಕುಳಿತೇ ಇಲ್ಲವೆಂದು ಕೇಳಿದ್ದೇನೆ. ವಾಹ್ ಬಾಪೂ ಹೆದರುತ್ತೀರೆಂದು ಅನ್ನಿಸುತ್ತೆ. ಹಡಗಿನ ಯಾನ ..ಅದೊಂದು ಅದ್ಭುತ ಅನುಭವ. ನಾನಂತೂ ಒಂಚೂರೂ ಹೆದರಲಿಲ್ಲ. ದಾರಿ ಪೂತರ್ಿ ಕಿಟಕಿ ಬಳಿಯೇ ಕುಳಿತಿದ್ದೆ. ನಮ್ಮಜ್ಜಿಯೂ ಹೆದರಲಿಲ್ಲ ಆಕೆ ಕೂಡ ಕಿಟಕಿ ಪಕ್ಕವೇ ಕುಳಿತುಕೊಂಡು ಕುಟ್ಟಣಿಯಲ್ಲಿ ಅಡಕೆಲೆ ಕುಟ್ಟುತ್ತಲೇ ಇದ್ದಳು. ಅವಳೂ ನಿಮ್ಮಂತೆ ಬೊಚ್ಚುಬಾಯವಳು. ಅವಳ ಬಗ್ಗೆ ಆಗಲೇ ಬರೆದಿದ್ದೇನೆ. ಮುಂಬಯಿಯಲ್ಲಿ ವಾಸಿಸಲು ನಮಗೆ ಎರಡು ಕೋಣೆಗಳು ದೊರೆತವು. ಸುತ್ತಲೂ ಹಿಂದೂಗಳೇ ತುಂಬಿರುವ ಶಿವಾಜೀ ಪಾಕರ್ಿನ ಪ್ರದೇಶದಲ್ಲಿ . ಯಾರಾದರೂ ಹೊಡೆದರೆ ! ಎಂದು ನಾವು ಮೊದಲೇ ಹೆದರಿದ್ದೆವು. ಆದರೆ ನಮ್ಮಜ್ಜಿ ಸ್ವಲ್ಪವೂ ಹೆದರಲಿಲ್ಲ. ಅವಳಂತೂ ಬುರಖಾ ಧರಿಸಿ ಸಮುದ್ರದ ದೂರದ ದಡದವರೆಗೂ ಹೋಗಿ ಬರುತ್ತಿದ್ದಳು. ಮತ್ತು ಹೇಳುತ್ತಿದ್ದಳು – ಹಿಂದೂ ಮತ್ತು ಸಿಖ್ಖರೂ ಈಶ್ವರನ ಮಕ್ಕಳೇ. ನನ್ನಂತಹ ಅಜ್ಜಿಯನ್ನು ಯಾರು ತಾನೇ ಹೊಡೆಯುವರು ? ಸಮುದ್ರವು ನಮ್ಮ ಮನೆ ಪಕ್ಕವೇ ಇದೆ. ನಾನು ಸಮುದ್ರದ ಬಗ್ಗೆ ಶಾಲೆಯಲ್ಲಿ ಓದಿದ್ದೆ. ಆದರೆ ನೋಡಿರಲಿಲ್ಲ. ಅದಂತೂ ಎಷ್ಟು ದೊಡ್ಡದಾಗಿದೆಯೋ..! ಪಾನೀಪತ್ನ ಕಾಲುವೆ, ದಿಲ್ಲಿಯ ಯಮುನಾ ನದಿ, ಮತ್ತು ಹತ್ತಾರು ಕೊಳಗಳು ಅಲ್ಲದೆ ಹತ್ತಾರು ಕೆರೆಗಳು ಇವುಗಳೆಲ್ಲ ಸೇರಿದರೂ ಅವುಗಳಿಗಿಂತ ದೊಡ್ಡದು. ಎಲ್ಲಿ ನೋಡಿದರೂ ನೀರೇ ನೀರು. ಪಾನೀ ಹೀ ಪಾನೀ. ಪಾನೀಪತ್ ಎಂಬುದು ಹೀಗೇ ತಾನೇ ಕರೆಸಿಕೊಳ್ಳುವುದು. ಅಸಲಿಗೆ ನಿಜವಾದ ಪಾನೀಪತ್ ಇದೇ ತಾನೇ. ನಮ್ಮ ಮನೆ ಪಕ್ಕದಲ್ಲೇ ಹಿಂದೂಗಳು ವಾಸವಿದ್ದರು. ಗೋಪಾಲನ ತಂದೆ ತಾಯಿ. ಗೋಪಾಲನ ಚಿಕ್ಕಪ್ಪ ತುಂಬಾ ಕಟ್ಟರ್ ಹಿಂದೂ ಮತ್ತು ಸಂಘದವರ ಜೊತೆ ಪೆರೇಡ್ ಮಾಡುತ್ತಿದ್ದರು. ತಮ್ಮ ಮನೆಯ ಮಕ್ಕಳಿಗೆ , ಮುಸಲ್ಮಾನರು ಕೆಟ್ಟವರೆಂದೂ ಅವರನ್ನು ಹೊಡೆಯಬೇಕೆಂದು ಹೇಳಿಕೊಡುತ್ತಿದ್ದರು. ಆದ್ದರಿಂದ ಗೋಪಾಲ ತನ್ನ ಮನೆಯಲ್ಲಿ ಒಂದು ಹಿಂದೂ ಸೈನ್ಯವನ್ನು ಕಟ್ಟಿದ್ದ. ಅಲ್ಲದೆ ಕಡ್ಡಿಗಳ ಕತ್ತಿ, ಮರದ ಪಿಸ್ತೂಲು, ಮತ್ತು ಬಿದಿರಿನ ಬಿಲ್ಲು ಬಾಣಗಳನ್ನು ಹಿಡಿದು ನಿತ್ಯವೂ ಪೆರೇಡ್ ಮಾಡುತ್ತಿದ್ದರು. ಹಿಂದೂಗಳ ರಾಜ್ಯ ಸ್ಥಾಪಿಸುವೆವು. ಮುಸಲ್ಮಾನರನ್ನು ಹೊಡೆದೋಡಿಸುವೆವು. ಎಂಬ ಘೋಷಣೆಗಳಲ್ಲದೆ ನಡು ನಡುವೆ ಹರ ಹರ ಮಹಾದೇವ ಎಂದು ಜೋರಾಗಿ ಕೂಗುತ್ತಿದ್ದರು. ಅವರಿದನ್ನು ಮರಾಠೀ ಮಾತಿನಲ್ಲಿ ಕೂಗುತ್ತಿದ್ದರು. ಅವರಿಗೆದುರಾಗಿ ನಾನು ನನ್ನ ಪಾಕೀಸ್ತಾನೀ ಸೈನ್ಯವನ್ನು ತಯಾರು ಮಾಡಿದೆ. ಗೋಪಾಲನ ಸೈನ್ಯದಲ್ಲಿ ಹತ್ತು ಹನ್ನೆರಡು ಹುಡುಗರಿದ್ದರು . ನಮ್ಮಲ್ಲಿ ನಾಲ್ಕೈದು ಹುಡುಗರಿದ್ದರು. ಆದರೂ ನಾವು ಹೆದರುತ್ತಿರಲಿಲ್ಲ. ನಮ್ಮ ತಂದೆಯವರು ಹೇಳುತ್ತಿದ್ದುದೇನೆಂದರೆ ಒಬ್ಬ ಮುಸಲ್ಮಾನ ನಾಲ್ಕೈದು ಹಿಂದೂಗಳಿಗೆ ಸಮ ಎಂದು . ನಮ್ಮ ಬಳಿ ಬಂದೂಕು ಇತ್ತು. ಅವರ ಬಳಿ ಕೇವಲ ಬಿದಿರಿನ ಬಿಲ್ಲು ಬಾಣಗಳು. ಆದ್ದರಿಂದ ನಾವು ಆರಾಮಾಗಿ ಎದುರಿಸಬಹುದಾಗಿತ್ತು. ಅವರು ಹರಹರ ಮಹಾದೇವ ಎಂದರೆ ಸಾಕು ನಾವು ಅಲ್ಲಾ ಹೋ ಆಕ್ಬರ್ ಎಂದು ಕೂಗುತ್ತಿದ್ದೆವು. ಅವರೇನಾದರೂ ಹಿಂದೂ ರಾಜ್ಯ ಸ್ಥಾಪಿಸುವೆವು ಎಂದರೆ ನಾವು ,ನಗುತ್ತ ಪಡೆದೆವು ಪಾಕೀಸ್ತಾನ.ಹೋರಾಡಿ ಕಸಿಯುವೆವು ಹಿಂದೂಸ್ತಾನ .ಎಂದು ಜೋರಾಗಿ ಕೂಗುತ್ತಿದ್ದೆವು. ಸುತ್ತಲೂ ಹಿಂದೂಗಳೇ ವಾಸಿಸುತ್ತಿದ್ದಾರೆ ಆದ್ದರಿಂದ ಹೀಗೆಲ್ಲ ಹೇಳಬೇಡ ಎಂದು ನಮ್ಮತಂದೆ ಹಾಗೂ ನಮ್ಮಜ್ಜಿ ಇಬ್ಬರೂ ಹೇಳಿ ಬೈದರು. ನಾನು ಮತ್ತು ನನ್ನ ಸಂಗಡಿಗರು ಈ ಉಪದೇಶ ಎಲ್ಲಿ ಕೇಳಿದೆವು ! ಒಂದು ದಿನ ಘೋಷಣೆ ಕೂಗುತ್ತ ಕೂಗುತ್ತ ಗೋಪಾಲ ಹಾಗೂ ಅವನ ದಂಡು ನಮ್ಮ ಮನೆ ಮೇಲೆ ಆಕ್ರಮಣ ಮಾಡಿತು. ಬುಂದೂ ಗೆ ಏಟಾಯಿತು. ನಾನು ಬಂದೂಕಿನಿಂದ ಅವರನ್ನೆಲ್ಲ ಹೊಡೆದೋಡಿಸಿದೆ. ಈಗ ಹಿಂದು ಮತ್ತು ಮುಸಲ್ಮಾನೀ ಸೈನಿಕರ ನಡುವೆ ಭೀಕರ ಸಮರ ಜರುಗತೊಡಗಿತು. ನಾನು ಮೋಹನನನ್ನು ಮೊದಲ ಬಾರಿ ನೋಡಿದೆ. ಮೊದಲೇ ಎಲ್ಲೋ ಈ ರೀತಿಯ ಯುದ್ಧ ನೋಡಿರುವವನಂತೆ ಅವನು ಎವೆಬಡಿಯದ ಕಣ್ಣುಗಳಿಂದ ನೋಡುತ್ತಿದ್ದ. ಅವನು ಕಿರುಚಿಕೊಳ್ಳಲಿಲ್ಲ. ಅವನ ಕಣ್ಣುಗಳಿಂದ ಕಣ್ಣೀರು ಧಾರೆಯಾಗಿ ಹರಿಯುತ್ತಿತ್ತು. ಗೋಪಾಲನ ಸೈನ್ಯವನ್ನು ಓಡಿಸಿ ನಾನು ಮೋಹನನ ಬಳಿ ಹೋಗಿ ವಿಚಾರಿಸಿದೆ. ಅವನು ಜುಬ್ಬ , ಪೈಜಾಮ ತೊಟ್ಟಿದ್ದ. ಈ ವೇಷದಿಂದ ನಾನು ಅವನನ್ನು ಮುಸಲ್ಮಾನನೆಂದೇ ತಿಳಿದೆ. ಎರಡು ಮನೆಗಳ ಸಂದಿಯಲಿ ಕೂತು ಒಂದೇ ಸಮ ಅಳುತ್ತಿದ್ದ. ಏನಪ್ಪಾ ತಮ್ಮ ನೀನು ಮುಸಲ್ಮಾನನೋ ಹಿಂದುವೋ ಎಂದು ಕೇಳಿದೆ. ಯಾವ ಉತ್ತರವನ್ನೂ ಅವನು ಕೊಡಲಿಲ್ಲ. ನೀರ್ಗಣ್ಣುಗಳಿಂದ ಒಂದೇ ಸಮ ನೋಡುತ್ತಲೇ ಇದ್ದನು. ಅವನ ಕಣ್ಣುಗಳನ್ನು ನೋಡಿದರೆ ಮೈ ನಡುಗುತ್ತಿತ್ತು. ಮೂಗನೋ ಅಥವಾ ಹುಚ್ಚನೋ ಇರಬಹುದೆಂದು ಬಗೆದೆ. ಅಷ್ಟರಲ್ಲಿ ಗೋಪಾಲ ಓಡಿ ಬಂದು ಹೇಳಿದ. ಈ ಬಡಪಾಯಿಗೇಕೆ ಹೊಡೆಯುವೆ ? ಪಂಜಾಬಿನಿಂದ ಬಂದಿದ್ದಾನೆ. ಅವನ ತಂದೆ ತಾಯಿಗಳನ್ನು ಅಲ್ಲಿ ಸಾಯಿಸಲಾಯಿತು. ಇಲ್ಲಿ ನೆಂಟರ ಮನೆಯಲ್ಲಿದ್ದಾನೆ. ಇದನ್ನು ಕೇಳಿದ ಕೂಡಲೇ ನನಗೆ ನೋವಾಯಿತು. ಬಂದೂಕಿನ ಆಟ ಮನಸ್ಸು ಬಯಸಲಿಲ್ಲ. ರಾತ್ರಿಯೆಲ್ಲಾ ಕನಸಿನಲ್ಲಿ ಮೋಹನನ ಭಯದಿಂದ ಎವೆಬಡಿಯದ ಕಣ್ಣುಗಳೇ ಕಾಣಿಸುತ್ತಿದ್ದವು. ಹೆದರಿಕೆಯಿಂದ ನಿದ್ದೆಯಲ್ಲಿ ಅಳತೊಡಗಿದೆ. ಆ ದಿನದಿಂದ ಮೋಹನ ಆಗಾಗ ಬಂದು ಈ ಗೋಡೆಗೊರಗಿ ಕೂಡುತ್ತಿದ್ದ. ನಮ್ಮ ಆಟಗಳನ್ನು ಅವೇ ರೆಪ್ಪೆಬಡಿಯದ ನೇತ್ರಗಳಿಂದ ನೋಡುತ್ತಿದ್ದ. ಅವನು ನಮ್ಮ ಜೊತೆಯೂ ಆಡುತ್ತಿರಲಿಲ್ಲ. ಗೋಪಾಲನ ಜೊತೆಯೂ ಆಡುತ್ತಿರಲಿಲ್ಲ. ಒಬ್ಬಂಟಿಯಾಗಿ ತಾನೊಬ್ಬನೇ ಬೇರೆಯಾಗಿ ಕೂತಿರುತ್ತಿದ್ದ. ಅವನ ಕಣ್ಣುಗಳು ಅದೇನನ್ನು ನೋಡಿದ್ದವೋ ಅವನನ್ನು ತೆಪ್ಪಗೆ ಕೂಡುವಂತೆ ಮಾಡಿದ್ದವು. ರೇಡಿಯೋದಲ್ಲಿ ಪರಸ್ಪರ ಹೊಡೆದಾಟ ನಿಲ್ಲುವವರೆಗೂ ಏನೂತಿನ್ನುವುದಿಲ್ಲವೆಂದು ತಾವು ಉಪವಾಸ ಸತ್ಯಾಗ್ರಹ ಮಾಡುತ್ತಿದೀರೆಂದು ಪ್ರಸಾರವಾಯಿತು. ಇದನ್ನು ಕೇಳಿ ನಮ್ಮಜ್ಜಿ ಅತ್ತೇ ಬಿಟ್ಟರು. ಅವರೂ ಕೂಡ ಎರಡೂ ಹೊತ್ತಿನ ಊಟ ಬಿಟ್ಟರು. ನಮ್ಮ ತಂದೆ ಕೂಡ ಹಿಂದೂಗಳಲ್ಲಿ ಒಳ್ಳೆಯವರೆಂದರೆ ಗಾಂಧೀಜಿಯವರು ಮಾತ್ರ ಎಂದು ಹೇಳುತ್ತಿದ್ದರು. ನಮ್ಮಜ್ಜಿಯಂತೆ ನಾನೂ ಕೂಡ ಹಾಲೂ ಕುಡಿಯಲಿಲ್ಲ ಮತ್ತು ಮಧ್ಯಾಹ್ನ ಊಟನೂ ಮಾಡಲಿಲ್ಲ. ಸಂಜೆ ಆಗುತ್ತ ಆಗುತ್ತ ತಡೆಯಲಾಗಲಿಲ್ಲ , ತುಂಬಾ ಕಷ್ಟವಾಯಿತು. ಆಟದಲ್ಲೂ ಮನಸ್ಸಿಲ್ಲ ಪಾಠದಲ್ಲೂ ಮನಸ್ಸಿಲ್ಲ ಆ ರೀತಿ ಆಯಿತು. ಕಣ್ಣ ಮುಂದೆ ರೊಟ್ಟಿ, ಪಲಾವು ಮತ್ತು ಅಕ್ಕಿಪಾಯಸ ಇವೇ ಕಾಣುತ್ತಿದ್ದವು. ತಾವು ಊಟ ತಿಂಡಿ ಇಲ್ಲದೆ ಅದು ಹೇಗಿರುವಿರಿ ಎಂದು ನನಗಂತೂ ಅಚ್ಚರಿಯಾಯಿತು. ತಮ್ಮ ಉಪವಾಸ ಮುಷ್ಕರ ನಿಲ್ಲಲೇ ಇಲ್ಲ. ಇದನ್ನು ನೋಡಿ ಇಡೀ ದೇಶದ ಎಲ್ಲಾ ಹಿಂದು – ಮುಸಲ್ಮಾನರೂ ಇನ್ನು ಕಚ್ಚಾಡುವುದಿಲ್ಲವೆಂದು ತಪ್ಪೊಪ್ಪಿಕೊಂಡರು. ನಾವೂ ಕೂಡ ಹೀಗೆಯೇ ತೀಮರ್ಾನಿಸಿದೆವು. ನಮ್ಮ ಪಾಕೀಸ್ತಾನೀ ಮತು ಹಿಂದೂಸ್ತಾನೀ ಸೈನ್ಯದ ಆಟ ಬಂದ್ ಮಾಡಿದೆವು. ಒಂದು ದಿನ ಅದೇ ಗೋಡೆಯ ಬಳಿ ಮೋಹನ ಕೂತಿದ್ದ . ಈ ಕಡೆಯಿಂದ ನಾನೂ ಅವನ ಬಳಿ ಹೋದೆ ಅಷ್ಟರಲ್ಲಿ ಆ ಕಡೆಯಿಂದ ಗೋಪಾಲನೂ ಬಂದ. ಗೋಪಾಲ ಕೇಳಿದ – ಅನ್ನೂ ನಾನು ಕೇಳಿದೆ – ಹಾಂ ಗೋಪಾಲ್ ಏನು ಸಮಾಚಾರ? ಅವನು ನುಡಿದ – ಬಾಪೂಜಿಯವರು… .. ಅಷ್ಟೇ ..ಇಷ್ಟು ಹೇಳಿ ಅವನು ಅಳಲು ಶುರುಮಾಡಿದ. ಅವತ್ತಿನ ದಿನ ಪತ್ರಿಕೆಯಲ್ಲಿ ತಾವು ತುಂಬಾ ಸುಸ್ತಾಗಿರುವಿರೆಂದೂ , ಮಾತಾಡಲೂ ಕೂಡ ಆಗುತ್ತಿಲ್ಲವೆಂದೂ ಆರೋಗ್ಯ ಹಾಳಾಗಿದೆಯೆಂದೂ ಮುದ್ರಿಸಲಾಗಿತ್ತು. ನಾನೂ ಆಳುತ್ತ ಕೂತುಬಿಟ್ಟೆ. ಗೋಪಾಲನಿಗೆ ಆಶ್ಚರ್ಯವಾಯ್ತು. ನೀನೂ ಕೂಡ ಅಳುತ್ತಿರುವೆಯಾ? ಎಂದು ಕೇಳಿದ. ಹೌದು ಅವರು ಮುಸಲ್ಮಾನರಿಗೋಸ್ಕರವಾಗಿಯೇ ಇಷ್ಟೆಲ್ಲ ಮಾಡುತ್ತಿರುವುದೆಂದೆ. ಗೋಪಾಲ ಹೇಳಿದ – ಇಂದಿನಿಂದ ಹಿಂದೂ ಮುಸಲ್ಮಾನರ ಜಗಳ ಬಂದ್.,, ,, ನಾನು ಹೇಳಿದೆ – ಹಾಂ ಖಂಡಿತವಾಗಿ ನಿಲ್ಲಿಸಿಬಿಡೋಣ. ಈಗ ಎಲ್ಲರೂ ತಪ್ಪು ಒಪ್ಪಿಕೊಳ್ಳುತ್ತಿದ್ದಾರೆ. ನಾವೂ ಕೂಡ ತಪ್ಪು ಒಪ್ಪಿಕೊಳ್ಳೋಣ. ನಾವಿಬ್ಬರೂ ಆಗಲೇ.. ಆ ಕ್ಷಣವೇ .. ನಮ್ಮೆಲ್ಲ ಬಂದೂಕುಗಳು , ಬಿಲ್ಲು-ಬಾಣ , ಕತ್ತಿಗಳನ್ನೆಲ್ಲ ಸಮುದ್ರದಲ್ಲಿ ಎಸೆದುಬಿಡೋಣವೆಂದು ತೀಮರ್ಾನಿಸಿದೆವು. ನನಗೆ ಗೊತ್ತಿಲ್ಲದೇ ನನ್ನ ಕಣ್ಣುಗಳು ಮೋಹನನನ್ನು ನೋಡಿದವು. ಅದೇನು ಜಾದು ನಡೆದಿತ್ತೋ ತಿಳಿಯಲಿಲ್ಲ. ಹಿಂದೆಂದೂ ಕಂಡಿರದ ಸಂತಸ ಅವನ ಕಣ್ಣುಗಳಲ್ಲಿ ಕುಣಿಯುತ್ತಿತ್ತು. ಅಷ್ಟರಲ್ಲಿ ನಮ್ಮ ತಂದೆಯವರೂ , ಅದೇನು ಜಾದು ನಡೆಯಿತೋ ತಿಳಿಯಲಿಲ್ಲ ದಿಲ್ಲಿಯಲ್ಲೂ ಎರಡೂ ಪಂಗಡದವರು ಗಾಂಧೀಜಿಯವರೆದುರು ಇನ್ನು ಲಡಾಯಿ ಮಾಡುವುದಿಲ್ಲವೆಂದು ತಪ್ಪೊಪ್ಪಿಕೊಂಡಿದ್ದಾರೆಂದೂ ಮತ್ತು ಗಾಂಧೀಜಿಯವರು ಉಪವಾಸ ಸತ್ಯಾಗ್ರಹ ಬಿಟ್ಟಿರುವರೆಂದೂ ಅಲ್ಲದೆ ಗಾಂಧೀಜಿಯವರು ಖ್ವಾಜಾ ಕುತುಬುದ್ದೀನ್ ಗೋರಿಯಬಳಿ ನಡೆಯುವ ಉರುಸ್ ದರ್ಶನಕ್ಕೆ ತೆರಳಿದರೆಂದೂ ನುಡಿದರು. ನಾವೇನೋ ಬಂದೂಕು ಹಾಗೂ ಬಿಲ್ಲು ಬಾಣ ಎಸೆದುಬಿಡೋಣವೆಂದು ನಿರ್ಧರಿಸಿದೆವು ಆದರೆ ಫಳ ಫಳ ಹೊಳೆಯುವ ನನ್ನ ಬಂದೂಕನ್ನು ನೋಡಿದಾಗ ಎಸೆಯುವ ಮನಸ್ಸಾಗಲಿಲ್ಲ. ಒಂದು ವೇಳೆ ಗೋಪಾಲ ಹಾಗೂ ಅವನ ಗೆಳೆಯರು ಬಿಲ್ಲು ಬಾಣ ಎಸೆಯಲಿಲ್ಲವೆಂದರೆ ? ಯಾರಿಗೆ ಗೊತ್ತು ಅವರು ಎಸೆಯುವರೋ ಇಲ್ಲವೋ ಎಂದು ? ಮತ್ತೆ ನಾನೇಕೆ ನನ್ನ ಬಂದೂಕು ಹಾಗೇ ಇಟ್ಟುಕೊಳ್ಳಬಾರದು ? ನಾನು ಎಷ್ಟೊಂದು ಚಿಕ್ಕವನು. ಸುಮ್ಮನೆ ಕೆಲಸ ಬಿದ್ದಾಗ ಇರಲಿ ಎಂದು ಇಟ್ಟುಕೊಂಡಿದ್ದೆ ಅಷ್ಟೆ. ಅನ್ನೂ ಒಂದುವೇಳೆ ತನ್ನ ಬಂದೂಕು ಒಡೆದುಹಾಕಲಿಲ್ಲವೆಂದರೆ ನಾನು ನನ್ನ ಬಿಲ್ಲು ಬಾಣಗಳನ್ನು ಏಕೆ ಮುರಿದುಹಾಕಲಿ ? ಎಂದು ಗೋಪಾಲ ಕೂಡ ಯೋಚಿಸಿದನು. ತಮ್ಮ ಉಪವಾಸ ಮುಗಿಯಿತು. ನಾವು ನೆಮ್ಮದಿಯ ನಿಟ್ಟುಸಿರು ಬಿಟ್ಟೆವು. ಅದೇನೋ ಹೇಳಲಾಗದು ಅಮ್ಮ ಅಥವಾ ಅಪ್ಪನಿಗೆ ಕಾಯಿಲೆ ಬಂದರೆ ಹೆದರುತ್ತಿದ್ದೆನಲ್ಲ ಅದೇ ರೀತಿ ನಿಮ್ಮ ಅನಾರೋಗ್ಯ ಹಾಗೂ ನಿಮ್ಮ ನಿತ್ರಾಣದ ಸುದ್ದಿ ಕೇಳಿ ನಡುಗುತ್ತಿದ್ದೆ. ಇದೇ ರೀತಿ ಗೋಪಾಲನಿಗೂ ಅನ್ನಿಸುತ್ತಿತ್ತು. ಅಷ್ಟೇ ಅಲ್ಲ ಇಡೀ ನಮ್ಮ ಮೊಹಲ್ಲಾದವರೆಲ್ಲರಿಗೂ ಅನ್ನಿಸುತ್ತಿತ್ತು. ಅವರೂ ಕೂಡ ಯಾವಾಗಲೂ ಬಾಪೂ ಬಾಪೂ ಎನ್ನುತ್ತಿರುತ್ತಾರೆ. ನಿಮ್ಮ ಮೇಲೆ ಬಾಂಬು ಎಸೆಯಲಾಗಿದೆ ಎಂದು ಕೇಳಿದಾಗ ನಾವೆಲ್ಲ ತುಂಬಾ ಭಯಭೀತಗೊಂಡೆವು. ಅಬ್ಬಾ ..ಸಧ್ಯ. .ದೇವರ ದಯ..ತಾವು ಬಚಾವಾದಿರಂತೆ. ಅದೂ ಕೂದಲೆಳೆಯಲ್ಲಿ. ಬಾಂಬೆಸೆದವನು ಸಿಕ್ಕಿಬಿದ್ದನಂತೆ. ನಾನು ಗೋಪಾಲನ ಹತ್ತಿರ ಹೇಳಿದೆ. – ಗೋಪಾಲ ಇದು ಖಂಡಿತ ಒಳ್ಳೆಯದಲ್ಲ. ಕೆಟ್ಟ ಜನ ಗಾಂಧೀಜಿಯವರನ್ನು ಸಾಯಿಸ ಬಯಸುತ್ತಾರೆ. ಅದಕ್ಕೆ ಗೋಪಾಲ ನುಡಿದ – ನಾವೆಲ್ಲ ಸೇರಿ ಗಾಂಧೀಜಿಯವರ ರಕ್ಷಣೆ ಮಾಡೋಣ. ನಾನು – ಹೇಗೆ..? ಅವನು ಹೇಳಿದ – ನಾವು ದಿಲ್ಲಿಗೆ ಹೋಗಿ ಗಾಂಧೀಜಿಯವರ ಮನೆ ಬಳಿ ಕಾವಲು ಕಾಯೋಣ. ನಾನು ನುಡಿದೆ – ಬಂದೂಕಿಲ್ಲ, ಖಡ್ಗವಿಲ್ಲ ಹೇಗೆ ಕಾವಲು ಕಾಯುವೆ? ಕೂಡಲೇ ಅವನು ನುಡಿದ ಪಿಸ್ತೂಲು ಮತ್ತು ಬಿಲ್ಲು ಬಾಣಗಳಿವೆಯಲ್ಲ. ಮರೆತು ಮಾತಾಡುತ್ತಿರುವವನಂತೆ ಅವನು ಸುಮ್ಮನಾಗಿಬಿಟ್ಟ. ನಾನೂ ಕೂಡ ಹಾಗೇ ಯೋಚಿಸಿದೆ . ಹೇಳಿಬಿಟ್ಟೆ ಪಿಸ್ತೂಲಿನ ಹೊಡೆತ ಕೇವಲ ಒಂಡೆರಡು ಗಜವಷ್ಟೆ. ಆದ್ದರಿಂದ ನಾನು ಬಂದೂಕು ತೆಗೆದುಕೊಂಡು ಕಾವಲು ಕಾಯುತ್ತೇನೆ. ಅವನು ನನ್ನನ್ನು ಸಿಟ್ಟಿನಿಂದ ದಿಟ್ಟಿಸಿ ನೋಡುತ್ತ ಹೇಳತೊಡಗಿದ ನಿನ್ನ ಹತ್ತಿರ ಬಂದೂಕು ಹೇಗೆ ಬಂದಿತು.? ನಾನೂ ಹಾಗೇ ಉತ್ತರಿಸಿದೆ ನಿನಗೆ ಪಿಸ್ತೂಲು ಮತ್ತು ಬಿಲ್ಲು ಬಾಣಗಳು ಎಲ್ಲಿಂದ ಬಂದವೋ ಅಲ್ಲಿಂದಲೇ. ಅವನು ಸಿಟ್ಟಾದ ಮತ್ತು ಹೇಳಿದ ಮುಸಲ್ಮಾನರಾದ ನಿಮ್ಮ ಮೇಲೆ ವಿಶ್ವಾಸವಿಡಲು ಸಾಧ್ಯವೇ ಇಲ್ಲ. ಬಂದೂಕು ಎಸೆದುಬಿಡುತ್ತೇನೆ ಎಂದು ಪ್ರಮಾಣ ಮಾಡಿದ್ದೆ.! ನಾನೂ ಸಹ ಸುಮ್ಮನಿರುವವನೇ ಅಲ್ಲ . ನನಗೂ ಕೋಪ ಬಂತು. ಕೋಪದಲ್ಲೇ ಹೇಳಿದೆ. ನಿಮ್ಮಂತ ಹಿಂದುಗಳ ಮೇಲೆ ಅದು ಹೇಗೆ ವಿಶ್ವಾಸವಿಡಬಹುದು? ನೀನೂ ಹೇಳಿರಲಿಲ್ಲವಾ ಪಿಸ್ತೂಲು ಮತ್ತು ಬಿಲ್ಲು ಬಾಣಗಳನ್ನು ಮುರಿದುಹಾಕುತ್ತೇನೆ ಎಂದು.? ಹೋಗು ನಿನ್ನ ಜೊತೆ ನಾನು ಎಂದೂ ಆಟ ಆಡುವುದಿಲ್ಲ. ಅವನು ಹೇಳಿದ. ನಿನ್ನ ಜೊತೆ ಆಟ ಆಡೋದಕ್ಕೆ ಇಲ್ಲಿ ಯಾರು ಕಾದುಕೊಂಡು ಕೂತಿದ್ದಾರೆ ? ಇಷ್ಟು ಹೇಳಿ ನಾನು ಸೀದಾ ಮನೆಗೆ ಹೋದೆ . ಬಂದೂಕನ್ನು ಈಚೆ ತಗೆದು ಒರೆಸಿದೆ. ಅದರ ಕುದುರೆಗಳಿಗೆ ಎಣ್ಣೆ ಸವರಿದೆ. ಹಿಂದು ಸೇನೆ ಯಾವಾಗ ಬರುತ್ತೋ ಏನೋ . ಎದುರಿಸಲು ಸಜ್ಜಾದೆ. ಆ ಕಡೆ ಗೋಪಾಲ ಮತ್ತು ಅವನ ತಮ್ಮ ಬಿದಿರಿನ ಬಾಣದ ತುದಿಯನ್ನು ಚೂಪಾಗಿ ಎರೆದುಕೊಂಡರು. ನಾನು ಮೋಹನನ್ನು ನೋಡಿದೆ ಅವನ ಕಣ್ಣುಗಳಲ್ಲಿ ಮೊದಲಿನ ಅದೇ ದುಃಖವಿತ್ತು ಮತ್ತು ನೋವಿತ್ತು. ಅನೇಕ ದಿನಗಳು ಕಳೆದು ಹೋದವು. ಸಂಜೆ ನಾವು ಸಮುದ್ರದ ದಡದ ಜಾತ್ರೆ ನೋಡುತ್ತಿದ್ದೆವು. ಅಷ್ಟರಲ್ಲಿ ಕಛೇರಿಯಿಂದ ನಮ್ಮ ತಂದೆಯವರು ಓಡುತ್ತೋಡುತ್ತ ಬಂದು ಹೇಳಿದರು. ಗಾಂಧೀಜಿ ಯವರು ಇನ್ನಿಲ್ಲ. ಯಾರೋ ಹುಚ್ಚ ಅವರಿಗೆ ಗುಂಡು ಹೊಡೆದುಬಿಟ್ಟ. ಮೊದಲಿಗೆ ಯಾರಿಗೂ ನಂಬಿಕೆ ಬರಲಿಲ್ಲ. ಅಂಥ ಗಾಂಧಿಯವರು ಹೇಗೆ ಸಾಯಬಲ್ಲರು ?! ಅವರ ರಕ್ಷಣೆಯನ್ನು ಯಾರೂ ಸರಿಯಾಗಿ ಮಾಡಿಲ್ಲ, ಅದಕ್ಕೆ ಹೀಗಾಗಿರಬಹುದು. ಪಿಸ್ತೂಲು ಹಿಡಿದಿದ್ದವನು ಅಲ್ಲಿವರೆಗೆ ಹೇಗೆ ಹೋದ ? ರಾತ್ರಿ ಯಾರೂ ಊಟ ಮಾಡಲಿಲ್ಲ. ಸುಮ್ಮನೆ ರೇಡಿಯೋ ಮುಂದೆ ಕೂತು ವಾತರ್ೆ ಕೇಳುತ್ತಿದ್ದೆವು. ನಾನಂತೂ ತುಂಬಾ ಹೊತ್ತಿನ ತನಕ ಅಳುತ್ತಿದ್ದೆ. ನಮ್ಮಮ್ಮ, ಅಜ್ಜಿ ಅಳುತ್ತಲೇ ಇದ್ದರು. ತಂದೆಯವರ ಕಣ್ಣುಗಳಲ್ಲಿ ನೀರು ನಿಂತಿತ್ತು. ಆ ರಾತ್ರಿ ನಾನು ನಿದ್ದೆ ಮಾಡಲೇ ಇಲ್ಲ. ಬರೀ ಹೆದರಿಕೆಯ ಕನಸುಗಳು. ಯಾರೋ ನಿಮ್ಮನ್ನು ಹೊಡೆಯಲು ಬರುತ್ತಿದ್ದಾನೆ . ನಾನು ಜೋರಾಗಿ ಕೂಗಿದೆ ..ಗಾಂಧೀಜಿಯವರನ್ನು ಕಾಪಾಡಿ. ಕಾಪಾಡಿ. ಅವರ ಪ್ರಾಣ ಅಪಾಯದಲ್ಲಿದೆ. ಆದರೆ ಯಾರೂ ಕೇಳುತ್ತಲೇ ಇಲ್ಲ. ಎಲ್ಲಕ್ಕಿಂತ ಭಯಂಕರವಾದ ಕನಸು ನೋಡಿದೆ. ಒಬ್ಬ ನಿಮ್ಮತ್ತಲೇ ಬಂದೂಕು ಹಿಡಿದು ಬರುತ್ತಿದ್ದಾನೆ. ನಿಮಗೆ ಗುಂಡು ಹೊಡೆಯುತ್ತಿದ್ದಾನೆ. ಅವನ ಕೈಯಲ್ಲಿದ್ದ ಬಂದೂಕು ಬೇರೆ ಯಾವುದೂ ಅಲ್ಲ ..ಅದು ನನ್ನದೇ ಆಗಿದೆ. ಅದರ ಗುಂಡು ನಿಮಗೆ ತಗುಲುತ್ತಿದೆ. ಅದಕ್ಕೋಸ್ಕರವಾಗಿಯೇ ತಾವು ನನ್ನ ಮೇಲೆ ಸಿಟ್ಟ್ಟುಗೊಂಡು ಹೊರಟು ಹೋದಿರಿ ಅಲ್ಲವೇ..? ಮಾರನೇ ದಿನ ಮುಷ್ಕರವಿತ್ತು. ಸ್ಕೂಲು ಬಂದಾಗಿತ್ತು. ಆದರೆ ಆಡಲು ಮನಸ್ಸೇ ಇರಲಿಲ್ಲ. ಅಂಗಳದ ಗೋಡೆ ಪಕ್ಕ ಹೋಗಿ ನೋಡಿದೆ. ಮೋಹನನು ಅದಕ್ಕೊರಗಿ ಕೂತುಕೊಂಡು ಬಿಕ್ಕಳಿಸುತ್ತಾ ಅಳುತ್ತಿದ್ದ. ಅವನನ್ನು ನೋಡಿ ನನ್ನ ಅಳು ಮತ್ತೂ ಜಾಸ್ತಿಯಾಯಿತು. ಆಗ ಗೋಪಾಲ ಬಂದ ಅವನೂ ಆಳುತ್ತಿದ್ದ. ಗೋಪಾಲ ಮಾತಾಡಿದ – ಬಾಪೂಜಿ ಹೊರಟು ಹೋದರು. ನಾನು ಹೇಳಿದೆ – ಹೌದು ಕಣೋ ನಮ್ಮಮ್ಮನೂ , ನಮ್ಮಜ್ಜಿಯೂ ಹೇಳಿದರು ಅವರು ದೇವರಿಗೆ ಇಷ್ಟವಾದರಂತೆ. ಗೋಪಾಲ ಮರುನುಡಿದ – ಅನ್ನೂ ನಾನು ಕನಸಿನಲ್ಲಿ ನೋಡಿದೆ. . . . ನನ್ನ ಎದೆ ಢವಗುಟ್ಟಿತು. ನಾನು ಕೂಡಲೇ ನುಡಿದೆ – ನೀನು ಕನಸಿನಲ್ಲಿ ಏನು ನೋಡಿದೆಯೆಂದರೆ ..ನನ್ನ ಬಂದೂಕಿನಿಂದ… .. ಗೋಪಾಲ ನಡುವೆಯೇ ಮಾತು ಕತ್ತರಿಸಿದ – ಇಲ್ಲ,..ನಾನು ನೋಡಿದ್ದು ಏನೆಂದರೆ ನನ್ನ ಪಿಸ್ತೂಲಿನಿಂದ ಯಾರೂ ಒಬ್ಬ ಬಂದು ಬಾಪೂರವರನ್ನು ಹೊಡೆಯುತ್ತಿದ್ದ. ನಾನು ಅವನಿಗೆ ನನ್ನ ಕನಸಿನ ಬಗ್ಗೆ ಹೇಳಿದೆ. ಗೋಪಾಲ ಮಾತಾಡಿದ- ಅದಕ್ಕೋಸ್ಕರವಾಗಿಯೇ ಬಾಪೂರವರು ನಮ್ಮ್ನ ಮೇಲೆ ಸಿಟ್ಟ್ಟುಗೊಂಡು ಹೊರಟು ಹೋದರು ನಂತರ ನಾವಿಬ್ಬರೂ ಅಳಲು ಶುರುಮಾಡಿದೆವು. ಮೋಹನನಂತೂ ಮತ್ತಷ್ಟು ಜೋರಾಗಿ ಅಳತೊಡಗಿದ. ಅವನನ್ನು ನೋಡಿ ನಮಗೆ ಅಚ್ಚರಿಯಾಯಿತು. ಏಕೆಂದರೆ ಅತ್ತೂ ಅತ್ತೂ ಅವನಿಗೆ ಮಾತು ಬರತೊಡಗಿತು. ಅವನೀಗ ಮಾತಾಡ ಬಲ್ಲವನಾದ. ಹದಿಮೂರು ಫೆಬ್ರವರಿ ನಿನ್ನೆ ಎಷ್ಟೊಂದು ನದಿಗಳಲ್ಲಿ , ಸಮುದ್ರಗಳಲ್ಲಿ ನಿಮ್ಮ ಚಿತಾಭಸ್ಮವನ್ನು ಹಾಕಲಾಯಿತು. ಇಲ್ಲಿನ ನದಿ ದಡದಲ್ಲಿ ನಾವೂ ಕೂಡ ನೋಡಿದೆವು. ಲಕ್ಷಾಂತರ ಜನ ಸೇರಿದ್ದರು. ಎಷ್ಟು ದೊಡ್ಡ ಮೆರವಣಿಗೆ ಅದು. ಅದರಲ್ಲಿ ಬೇಕಾದಷ್ಟು ಮುಸಲ್ಮಾನರೂ ಸಹ ಇದ್ದರು. ತಾವು ಸ್ವರ್ಗ ಸೇರಿ ಇಂದಿಗೆ ಹದಿಮೂರು ದಿನಗಳಾದವು. ಈ ದಿನಗಳಲ್ಲಿ ನಮ್ಮ ಸಕರ್ಾರ ಅನೇಕ ಜನಗಳನ್ನು ಬಂಧಿಸಿದೆ. ಹಿಂದೂಸ್ತಾನ ಮತ್ತು ಪಾಕೀಸ್ತಾನ ಎರಡೂ ಕಡೆ ಜನ ಇನ್ನು ಮುಂದೆ ಹೊಡೆದಾಡುವುದಿಲ್ಲವೆಂದು ಪಶ್ಚಾತ್ತಾಪ ಪಡುತ್ತ ಪ್ರತಿಜ್ಞೆ ಮಾಡುತ್ತಿದ್ದಾರೆ. ತಾವು ಅವರೆಲ್ಲರನ್ನು ಮನ್ನಿಸಿರಿ ಮತ್ತು ಬೇಗ ವಾಪಸ್ಸು ಬಂದುಬಿಡಿ. ಹಾಂ.. ಇಂದು ಸಂಜೆ ನಾವೆಲ್ಲರೂ ಸಮುದ್ರದ ದಡಕ್ಕೆ ಹೋಗಿದ್ದೆವು. ನಾನು ನನ್ನ ಬಂದೂಕನ್ನು ಒಡೆದುಹಾಕಿ ಸಮುದ್ರಕ್ಕೆ ಎಸೆದುಬಿಟ್ಟೆ. ಗೋಪಾಲನ ಪಿಸ್ತೂಲು, ಬಿಲ್ಲು ಬಾಣಗಳೆಲ್ಲ ಮುರಿದುಹೋಗಿದ್ದವು . ಅವೂ ಅಲ್ಲೇ ತೇಲುತ್ತಿದ್ದವು. ನಾನು , ಗೋಪಾಲ , ಬುಂದೂ, ಜೈನಬ್ , ಸಕೀನಾ , ಮತ್ತು ಸೀತಾ ಎಲ್ಲರೂ ತಪ್ಪೊಪ್ಪಿಕೊಂಡು ಪಶ್ಚಾತ್ತಾಪ ಪಟ್ಟಿದ್ದೇವೆ. ಇನ್ನೆಂದೂ ಪರಸ್ಪರ ಹೊಡೆದಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದೇವೆ. ತಾವು ನಮ್ಮನ್ನು ದಯವಿಟ್ಟು ಕ್ಷಮಿಸಿಬಿಡಿ. ಬಾಪೂ.. . . .ಬೇಗ ಬಂದುಬಿಡಿ. ಬಂದು ಬಿಡುತ್ತೀರಿ ತಾನೆ..?    ]]>

‍ಲೇಖಕರು G

July 11, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಾಲ್ಕು ಸಲ ಕೇಳಿದ ಒಂದು ಕಥೆ

ನಾಲ್ಕು ಸಲ ಕೇಳಿದ ಒಂದು ಕಥೆ

ಯಶಸ್ವಿನಿ ನನ್ನಜ್ಜಿ ನನಗೊಂದು ಕಥೆ ಹೇಳಿದ್ದಳು. ಆ ಕಥೆಯನ್ನ ಅವಳು ನನಗೆ ಒಟ್ಟು ನಾಲ್ಕು ಬಾರಿ ಹೇಳಿದ್ದಳು. ಅದ್ಹೇಗೆ ಅಷ್ಟು ನಿಖರವಾಗಿ...

ನಾಲ್ಕು ಸಲ ಕೇಳಿದ ಒಂದು ಕಥೆ

ಯಶಸ್ವಿನಿ ಬರೆದ ‘ಕೋಳಿಕಥೆ ‘

ಯಶಸ್ವಿನಿ ಕೆಂಪು ಜುಟ್ಟಿಗೆ ಅಚ್ಚ ಬಿಳಿಯ ಮೈಬಣ್ಣ, ಒಂದು ಧೂಳಿನ ಕಣವೂ ಕಾಣ ಸಿಗದ ಬಿಳಿಯ ಗರಿಗಳು, ಗೇರು ಬೀಜ ಬಣ್ಣದ ಕೊಕ್ಕು, -ಗತ್ತಲ್ಲಿ...

ಬಾಲಕೇಳಿ ವ್ಯಸನಿಗಳು

ಬಾಲಕೇಳಿ ವ್ಯಸನಿಗಳು

ಎ ಜೆ ಕ್ರೋನಿನ್ ರವರ ‘ಟು ಜೆಂಟಲ್ ಮನ್ ಆಫ್ ವೆರೋನಾ’ ಕಥೆಯ ಅನುವಾದ ಕನ್ನಡಕ್ಕೆ: ರಾಜು ಎಂ ಎಸ್ ಆಲ್ಫ್ಸ್ ಪರ್ವತ ಸಾಲಿನ ಪಾದದಗುಂಟ...

5 ಪ್ರತಿಕ್ರಿಯೆಗಳು

 1. D.RAVI VARMA

  ನಾನು , ಗೋಪಾಲ , ಬುಂದೂ, ಜೈನಬ್ , ಸಕೀನಾ , ಮತ್ತು ಸೀತಾ ಎಲ್ಲರೂ ತಪ್ಪೊಪ್ಪಿಕೊಂಡು ಪಶ್ಚಾತ್ತಾಪ ಪಟ್ಟಿದ್ದೇವೆ. ಇನ್ನೆಂದೂ ಪರಸ್ಪರ ಹೊಡೆದಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದೇವೆ. ತಾವು ನಮ್ಮನ್ನು ದಯವಿಟ್ಟು ಕ್ಷಮಿಸಿಬಿಡಿ. ಬಾಪೂ.. . . .ಬೇಗ ಬಂದುಬಿಡಿ.
  ಬಂದು ಬಿಡುತ್ತೀರಿ ತಾನೆ..?
  heart touching …..

  ಪ್ರತಿಕ್ರಿಯೆ
 2. -ರವಿ ಮುರ್ನಾಡು.,ಕ್ಯಾಮರೂನ್

  ಅತ್ತ್ಯುತ್ತಮ ಅನುವಾದ.ಬೇರೇನೂ ಹೇಳಲಾರೆ. ಏಕೆಂದರೆ,ನಾವು ಮನುಷ್ಯರು ಅಂತ ಬಲವಂತವಾಗಿ ಹಣೆಪಟ್ಟಿ ಕಟ್ಟಿಕೊ೦ಡವರಲ್ಲ. ಮಾಡುವುದಕ್ಕೆ ಮೊದಲು ಪಶ್ಚಾತಾಪ ಪಡುವುದಕ್ಕಿ೦ತ ,ಮಾಡಿದ ಮೇಲೆ ಪಶ್ಚಾತಾಪ ಪಡುವುದೇ ಹೆಚ್ಚು. ಕಥೆಯ ಹೂರಣ ತನ್ನಿಂತಾನೆ ತೆರೆದುಕೊಳ್ಳುವ೦ತಹದ್ದು . ಮನುಷ್ಯನ ಹೊಟ್ಟೆಯೊಳಗಿರುವ ಹಸಿವಿಗೆ ನೂರಾರು ಮುಖಗಳು. ಕೆಲವೊಮ್ಮೆ ಹಸಿವು ಇಂಗಿಸಿಕೊಳ್ಳಲಾಗದೆ ಎದೆಯನ್ನು ಸುಡುತ್ತಿರುತ್ತದೆ.ಸತ್ತ ಮೇಲೂ ಅಷ್ಟೇ ಚಿತೆಯಲ್ಲೂ ಬೇಯುತ್ತಿರುತ್ತಾನೆ.ಅದರ ಹಲವು ಮುಖಗಳು ಬಣ್ಣ ಕಟ್ಟಿಕೊಳ್ಳುತ್ತವೆ.

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ jayanthiCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: