ಗಾಲ್ಫ್ ಸ್ಟಿಕ್ ತಯಾರಕ ಮತ್ತು ಗನ್ ಮೆಕ್ಯಾನಿಕ್

ಹೈವೇ 7

———-

ಅಷ್ಟಾದರೂ ಸೋಲೊಪ್ಪಿಕೊಳ್ಳದ ರಾಕ್ಷಸ ಜೀವ. ಚರ್ಚಿನಿಂದ ದೊಡ್ಡ ದೊಡ್ಡ ಮರದ ತುಂಡುಗಳನ್ನು ತಂದುಕೊಂಡು ಯಾರೂ ಸಹ ಅಲ್ಲಾಡಿಸಲಾಗದ ಪೆಟ್ಟಿಗೆ ಅಂಗಡಿಯನ್ನು ನಿರ್ಮಿಸಿಕೊಂಡು ಕಬ್ಬಿಣದ ವ್ಯಾಪಾರ, ಕಾರ್ಪೆಂಟರ್ ಕೆಲಸ, ಕುಲುಮೆ ವೃತ್ತಿಯಲ್ಲಿ ತೊಡಗಿಕೊಂಡ. ಹೆಂಡತಿ ಕ್ಯಾನ್ಸರ್ ನಿಂದ ತೀರಿಕೊಂಡಳು. ಕಡೆಗೆ ಹೈವೇಯಲ್ಲಿ ಉಳಿದುಕೊಂಡಿದ್ದು ಇವನೊಬ್ಬನ ಮನೆ ಮಾತ್ರ. ಅದನ್ನು ಅವನು ಮಸೀದಿಗೆ ಬರೆದು ಕೊಟ್ಟು, ಈಗ ಅಲ್ಲೇ ಎಲ್ಲೋ ಮೂಲೆಯಲ್ಲಿ ಒಂಟಿಯಾಗಿ ವಾಸ ಮಾಡುತ್ತಿದ್ದಾನೆ.

hoovu1.jpg

ಭಾಗ : ಐದು

ವಿ ಎಂ ಮಂಜುನಾಥ್

ಡಿ ಭದ್ರತಾ ಪಡೆಯಲ್ಲಿ ಗನ್ ಮೆಕ್ಯಾನಿಕ್ ಮತ್ತು ಗಾಲ್ಫ್ ಸ್ಟಿಕ್ ಗಳನ್ನು ತಯಾರಿಸುವ ಪರಿಣಿತನಾಗಿ ಕೆಲಸಕ್ಕೆ ಸೇರಿಕೊಂಡಿದ್ದ ಶೇಖ್ ಹುಸೇನ್, ವರ್ಷಕ್ಕೊಮ್ಮೆ ರಜೆಯ ಮೇಲೆ ಊರಿಗೆ ಬರುತ್ತಿದ್ದ. ಕೇವಲ ಎರಡು ಮನೆಗಳ ಅಂತರದಲ್ಲಿ ಇವನ ಉದ್ದನೆಯ ಹಂಚಿನಮನೆ ಇತ್ತು. ಈತನಿಗೆ ಗಂಡುಮಕ್ಕಳು ಇರಲಿಲ್ಲ. ಮುನ್ನಿ, ನಸ್ರೀನ್ ಮತ್ತು ಹಸೀನಾ ಎಂಬ ಮೂವರು ಸುಂದರ ಹೆಣ್ಣುಮಕ್ಕಳು ಮಾತ್ರ ಇದ್ದರು. ಇವರೆಲ್ಲರನ್ನೂ ಏರ್ ಫೋರ್ಸ್ ಶಾಲೆಗೆ ಸೇರಿಸಿದ್ದ. ಎಲ್ಲರೂ ಹಾಕಿ ಆಟಗಾರ್ತಿಯರಾಗಿದ್ದರು. ನಮ್ಮ ನಡುವೆ ಮೊದಲಿಗೆ ಡಯನೊರಾ ಟಿವಿ ಹೊಂದಿದ್ದ ಈತ, ನಮ್ಮನ್ನು ಟಿವಿ ನೋಡಲು ಬಿಡುತ್ತಿರಲಿಲ್ಲ. ಡ್ಯೂಟಿ ಮೇಲೆ ಕಾಶ್ಮೀರ್ ಗೆ ತೆರಳಿದಾಗ ಮಾತ್ರ ನಾವು ಅವನ ಮಕ್ಕಳ ಜೊತೆ ಆಟವಾಡುತ್ತಿದ್ದೆವು, ನಲಿಯುತ್ತಿದ್ದೆವು, ಟಿವಿ ನೋಡುತ್ತಿದ್ದೆವು. ಬಡ್ಡಿ ವ್ಯವಹಾರ, ಬಟ್ಟೆ ವ್ಯಾಪಾರ ನಡೆಸುತ್ತಿದ್ದ ಮತ್ತು ಬಿಡುವಿನ ವೇಳೆಯಲ್ಲಿ ಗಡಿಭದ್ರತಾ ಪಡೆಯ ಕ್ಯಾಂಪಿನಲ್ಲಿ ಸೈನಿಕರಿಗೆ ಬಟ್ಟೆ ಹೊಲಿದು ಕೊಡುತ್ತಿದ್ದ ಈತನ ಹೆಂಡತಿ ಮಹಾ ಪ್ರೀತಿಯವಳು. ನಮಗೆಲ್ಲ ಬಿಸಿಬಿಸಿ ಎಣ್ಣೆ ಚಪಾತಿ ನೀಡುತ್ತಿದ್ದಳು. ರಂಜಾನ್, ಬಕ್ರೀದ್ ಹಬ್ಬಗಳಲ್ಲಿ ಮನೆ ಬಾಗಿಲಿಗೆ ಬಂದು ಮಾಂಸ ಕೊಡುತ್ತಿದ್ದಳು.

ಇಂಥ ಹೆಣ್ಣಿನ ಗಂಡನಾದ ಹುಸೇನ್ ಕೆಟ್ಟ ಶಿಸ್ತಿನವನು. ಅಷ್ಟಾದರೂ ಕ್ರೈಸ್ತ ಸನ್ಯಾಸಿನಿಯರು ಮಾಡಬಹುದಾದ ಕೆಲಸವನ್ನು ತಾನೇ ಮಾಡುತ್ತಿದ್ದ. ಹೈವೇಯಲ್ಲಿ ಉತ್ತರ ಭಾರತದ ಮಾನಸಿಕ ರೋಗಿಗಳು, ಹುಚ್ಚರು ನಡೆದಾಡುತ್ತಿದ್ದರು. ಅಂಥವರನ್ನು ಹಿಡಿದು ನಿಲ್ಲಿಸಿಕೊಂಡು ತಲೆಗೂದಲು, ಗಡ್ಡ ಕತ್ತರಿಸಿ, ತನ್ನ ಕೈಯ್ಯಾರೆ ಸ್ನಾನ ಮಾಡಿಸಿ, ಅನ್ನವಿಡುತ್ತಿದ್ದ. ರಜೆ ಮೇಲೆ ಬಂದಾಗ ಸುಮ್ಮನೆ ಕುಳಿತುಕೊಳ್ಳುತ್ತಿರಲಿಲ್ಲ. ಮರದ ತುಂಡುಗಳಿಂದ ಸೊಗಸಾದ ವಿಮಾನ, ಹಡಗು, ಬುಗುರಿ, ರೈಫಲ್ ಕೆತ್ತಿ ಇಂಡಿಯನ್ ಏರ್ ಫೋರ್ಸಿನ ಪೈಲಟ್ ಗಳಿಗೆ ಮಾರುತ್ತಿದ್ದ. ಮಳೆ ಬೀಳುತ್ತಿದ್ದರೂ ಕೊಡೆ ಹಿಡಿದುಕೊಂಡು ಒಂಟಿ ಮಾವಿನಮರದ ಕೆಳಗೆ ಎಮ್ಮೆ ಕಾಯುತ್ತಿದ್ದ. ಕಕ್ಕಸುಕೋಣೆಯ ತೂಗುಗಂಬಿಗೆ ದನದ ಬಾಡನ್ನು ಒಣಹಾಕುತ್ತಿದ್ದ. ಅಕಸ್ಮಾತ್ ನಾವೇನಾದರೂ ಅವರ ಮನೆ ಮೇಲೆ ಹತ್ತಬೇಕಾದರೆ, ಆ ಒಣಮಾಂಸವನ್ನು ಮತ್ತು ಆ ಹೆಣ್ಣುಮಕ್ಕಳ ಬೂದುಬಣ್ಣದ ಚೆಡ್ಡಿಗಳನ್ನು ತುಳಿದುಕೊಂಡು ಮೇಲೆ ಹತ್ತುತ್ತಿದ್ದೆವು. ರೋಮನ್ ಕ್ಯಾಥೋಲಿಕ್ ಚರ್ಚ್ ನ ಕೇರಳದ ಪಾದ್ರಿಯನ್ನು ಓಲೈಸಿ, ತನ್ನವನಾಗಿ ಮಾಡಿಕೊಂಡಿದ್ದ ಈತ, ತನ್ನ ಹೆಣ್ಣುಮಕ್ಕಳಿಂದ ಮೀನು, ಮಾಂಸ, ನೃತ್ಯದಿಂದ ಪ್ರತಿ ಸಂಜೆ ರಂಜಿಸಿ, ನಶೆಯಿಂದ ಅವನನ್ನು ಮೂಲೆಯಲ್ಲಿ ಕೆಡವಿ, ಆ ಮೂಲಕ ಚರ್ಚಿನಿಂದ ಏನೆಲ್ಲ ಕಬಳಿಸಬಹುದೋ ಎಲ್ಲವನ್ನೂ ಮೂಟೆಗಟ್ಟಲೆ, ಬಾಕ್ಸ್ ಗಟ್ಟಲೆ ಹೊತ್ತು ತರುತ್ತಿದ್ದ. ಇವನ ಹದ್ದಿನಕಣ್ಣುಗಳಿಂದ ನಮಗೆ ಒಳ್ಳೊಳ್ಳೆಯ ಬಟ್ಟೆಬರೆಗಳು ಸಿಗದೇ ಹೋಗುತ್ತಿದ್ದವು. ಇವನ ದೊಡ್ಡ ಮಗಳು ಅಷ್ಟಾಗಿ ನಮ್ಮೊಟ್ಟಿಗೆ ಬೆರೆಯುತ್ತಿರಲಿಲ್ಲವಾದರೂ, ಉಳಿದ ಇಬ್ಬರು ನಮ್ಮನ್ನು ಪ್ರೀತಿಸುತ್ತಿದ್ದರು. ಅದರಲ್ಲಿ ನಸ್ರೀನ್ ಗೆ ನಾನು ಸ್ಕ್ರೀನ್, ಸ್ಟಾರ್ ಡಸ್ಟ್, ಫಿಲ್ಮ್ ಫೇರ್ ಪತ್ರಿಕೆಗಳನ್ನು ನಮ್ಮ ಮನೆಯಿಂದ ತಂದು ಕೊಡುತ್ತಿದ್ದೆ. ಕಡೇ ಮಗಳು ಹಸೀನಾ, ಗ್ಯಾರೇಜ್ ಮೆಕ್ಯಾನಿಕ್ ಒಬ್ಬನನ್ನು ಪ್ರೀತಿಸುತ್ತಿದ್ದಳು. ರಜೆಯ ದಿನಗಳಲ್ಲಿ ನಾನು ಆ ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದೆ. ಪೆಟ್ರೋಲ್ ಇಲ್ಲದ ಸುವೇಗಾ ಒಂದು ಆ ಗ್ಯಾರೇಜಿನಲ್ಲಿ ಇತ್ತು. ಆ ಮೆಕ್ಯಾನಿಕ್, ಹಸೀನಾಗೆ ಗುಲಾಬಿ ಹೂಗಳನ್ನು ಕೈಯಲ್ಲಿ ಕಳುಹಿಸಿ ಕೊಡುತ್ತಿದ್ದ. ತಗ್ಗಿನಲ್ಲಿ ಕಣ್ಣಿಗೇ ಕಾಣುವಂತಿದ್ದ ಅವಳ ಮನೆಗೆ ಸುವೇಗಾ ಹತ್ತಿಕೊಂಡು ಹೋಗಿ ಅವಳಿಗೆ ಗುಲಾಬಿ ಹೂ ಕೊಟ್ಟು, ಹಿಂತಿರುಗುವಾಗ ಉಬ್ಬಿನಲ್ಲಿ ತಳ್ಳಿಕೊಂಡು ಹೋಗುತ್ತಿದ್ದೆ. ಇಂಜಿನ್ ರಿಪೇರಿ ಮಾಡುತ್ತಿದ್ದ ಆ ಮಧ್ಯಾಹ್ನ ಸ್ಟ್ರಿಂಗ್ ನ್ನು ಸರಿಯಾಗಿ ಹಿಡಿದುಕೊಂಡಿಲ್ಲವೆಂದು ಅವನು ನನ್ನನ್ನು, “ಹೇ, ಹಜಾಮ್” ಎಂದು ಬೈದ. ಆಗಿನ್ನೂ ಐದನೇ ತರಗತಿ ಓದುತ್ತಿದ್ದ ನನಗೆ ಸಿಟ್ಟು ಬಂದಿತ್ತು. ಕೆಕ್ಕರಿಸಿಕೊಂಡು ಮನೆ ಕಡೆ ಹೊರಟವನು ಮತ್ತೆ ಗ್ಯಾರೇಜ್ ಕಡೆ ಹೋಗಲಿಲ್ಲ. ಇವರಿಬ್ಬರ ಪ್ರೇಮಸ್ಥಿತಿ ಶಿಖರ ಏರುತ್ತಿದ್ದಂತಹ ದಿನಗಳು. ಮೆಕ್ಯಾನಿಕ್ ಗ್ಯಾರೇಜ್ ಖಾಲಿ ಮಾಡಿಕೊಂಡು ಹಸೀನಾಗೆ ಗೊತ್ತಿಲ್ಲದಂತೆ ಊರು ಬಿಟ್ಟಿದ್ದ.

ನಿವೃತ್ತಿಯ ನಂತರ ಶೇಖ್ ಹುಸೇನ್ ಅವನುದ್ದದ ಗಡ್ಡವನ್ನು ಧರ್ಮೋಪದೇಶದಂತೆ ಪಾಲಿಸಿ ಬೆಳೆಸಿಕೊಂಡ ರಾತ್ರೆ ಅವನಿಗೆ ಲಕ್ವ ಬಡಿಯಿತು. ದೊಡ್ಡ ಮಗಳು ಮುನ್ನಿ ಆಂಧ್ರ ಪ್ರದೇಶದ ಪೊಲೀಸಿನವನನ್ನು ಮದುವೆಯಾಗಿ ಮೂರು ಮಕ್ಕಳ ತಾಯಿಯಾಗುತ್ತಿದ್ದಂತೆ, ಅವಳ ಗಂಡ ಹಲವು ವಂಚನೆಗಳಿಂದ ಕೆಲಸ ಕಳೆದುಕೊಂಡ ಬೆನ್ನಿಗೇ ಕ್ಷಯರೋಗದಿಂದ ತೀರಿಕೊಂಡ. ನಸ್ರೀನ್ ಬ್ಯಾಟರಿಶಾಪ್ ಮೆಕ್ಯಾನಿಕ್ ನನ್ನು ಮದುವೆಯಾದರೂ ಮಕ್ಕಳಾಗದೆ ಉಳಿದುಹೋದಳು. ಹಲವು ವಿಧದ ಪ್ರೇಮ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಡೇ ಮಗಳು ಹಸೀನಾ, ಇವರೆಲ್ಲರಿಗಿಂತ ಮುಂಚಿತವಾಗಿ ದೊಡ್ಡಬಳ್ಳಾಪುರದ ಸಂಬಂಧದಲ್ಲಿ ಮದುವೆ ಮಾಡಿಕೊಂಡರೆ, ಬೊಕ್ಕತಲೆಯ ಅವಳ ಗಂಡ ಅವಳ ಜೊತೆ ಮಲಗಿದನೋ ಇಲ್ಲವೋ ದುಬೈ ಸೇರಿಕೊಂಡ. ದುಂಡುಮಲ್ಲಿಗೆ  ಮೊಗದ ಅವಳ ಸೌಂದರ್ಯ ವ್ಯರ್ಥವಾಗುತ್ತಿರುವುದರ ಬಗ್ಗೆ ಇಲ್ಲಿನ ಎಲ್ಲ ಗಂಡಸರಿಗೆ ಅಪಾರ ನೋವಿದೆ. ಅಷ್ಟಾದರೂ ಸೋಲೊಪ್ಪಿಕೊಳ್ಳದ ರಾಕ್ಷಸ ಜೀವ. ಚರ್ಚಿನಿಂದ ದೊಡ್ಡ ದೊಡ್ಡ ಮರದ ತುಂಡುಗಳನ್ನು ತಂದುಕೊಂಡು ಯಾರೂ ಸಹ ಅಲ್ಲಾಡಿಸಲಾಗದ ಪೆಟ್ಟಿಗೆ ಅಂಗಡಿಯನ್ನು ನಿರ್ಮಿಸಿಕೊಂಡು ಕಬ್ಬಿಣದ ವ್ಯಾಪಾರ, ಕಾರ್ಪೆಂಟರ್ ಕೆಲಸ, ಕುಲುಮೆ ವೃತ್ತಿಯಲ್ಲಿ ತೊಡಗಿಕೊಂಡ. ಹೆಂಡತಿ ಕ್ಯಾನ್ಸರ್ ನಿಂದ ತೀರಿಕೊಂಡಳು. ಕಡೆಗೆ ಹೈವೇಯಲ್ಲಿ ಉಳಿದುಕೊಂಡಿದ್ದು ಇವನೊಬ್ಬನ ಮನೆ ಮಾತ್ರ. ಅದನ್ನು ಅವನು ಮಸೀದಿಗೆ ಬರೆದು ಕೊಟ್ಟು, ಈಗ ಅಲ್ಲೇ ಎಲ್ಲೋ ಮೂಲೆಯಲ್ಲಿ ಒಂಟಿಯಾಗಿ ವಾಸ ಮಾಡುತ್ತಿದ್ದಾನೆ.

‍ಲೇಖಕರು avadhi

January 26, 2008

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This